ಯಾರ್ಯಾರದ್ದೋ ಚಟಕ್ಕೆ ನಮ್ಮಲ್ಲಿ ಡೇಟಾ ಸೆಂಟರ್ ?!
ಕೋವಿಡ್ ಕಾಲದಿಂದ ಈಚೆಗೆ ಭಾರತದಲ್ಲಿ ಹೊಸದೊಂದು ವ್ಯವಹಾರ ಧುತ್ತೆಂದು ಬೆಳೆಯ ಹತ್ತಿದೆ. ಭಾರತ ಸರಕಾರದ ಪೂರ್ಣ ಕೃಪಾಕಟಾಕ್ಷದ ಅಡಿಯಲ್ಲಿ, ಮುಂದಿನ ಮೂರು ವರ್ಷಗಳಲ್ಲಿ ಅಂದಾಜು ಹತ್ತು ಲಕ್ಷ ಕೋಟಿ ರೂ.ಗಳ ವೆಚ್ಚದಲ್ಲಿ ‘ಡೇಟಾ ಸೆಂಟರ್’ಗಳು (ಡಿಸಿ) ಸ್ಥಾಪನೆಗೊಳ್ಳಲಿವೆ. ಅಗಾಧ ನೆಲ ಮತ್ತು ವಾಣಿಜ್ಯ ಬಳಕೆಗೆ ಹೋಲಿಸಿದರೆ 50 ಪಟ್ಟು ಹೆಚ್ಚು ವಿದ್ಯುತ್ ಬಳಕೆ ಅಗತ್ಯವಿರುವ ಈ ಡೇಟಾಸೆಂಟರ್ಗಳ ಪರಿಸರ ಸಂಬಂಧಿ ಅಪಾಯಗಳ ಕುರಿತು ಎಚ್ಚೆತ್ತುಕೊಂಡಿರುವ ಮುಂದುವರಿದ ರಾಷ್ಟ್ರಗಳು ಅದನ್ನೀಗ ‘ಅಭಿವೃದ್ಧಿ ಶೀಲ’ ದೇಶಗಳ ಅಭಿವೃದ್ಧಿ ಹಪಾಹಪಿ ತಣಿಸಲು ಬಳಸಿಕೊಳ್ಳುತ್ತಿರುವಂತೆ ಕಾಣಿಸುತ್ತಿದೆ. ಸೂಕ್ತ ಎಚ್ಚರಿಕೆ ಮತ್ತು ಸ್ಪಷ್ಟ ಹಾದಿಯ ಅರಿವಿಲ್ಲದೆ ಭಾರತ ಈ ಆಟಕ್ಕೆ ಜಿಗಿದರೆ, ಅದರಿಂದ ಲಾಭಕ್ಕಿಂತ ಕಡೆಗೆ ನಷ್ಟವೇ ಹೆಚ್ಚು.
ಮೊದಲಿಗೆ ಡೇಟಾ ಸೆಂಟರ್ಗಳೆಂದರೆ ಏನೆಂದು ಸ್ಥೂಲವಾಗಿ ತಿಳಿದುಕೊಳ್ಳೋಣ. ನಾವೀಗ ಡೇಟಾ ಯುಗದಲ್ಲಿದ್ದೇವೆ. ಡೇಟಾ ಎರಡನೇ ಚಿನ್ನ ಎಂದು ಸಾಬೀತಾಗಿದೆ. ಇಂಟರ್ನೆಟ್ ಆಫ್ ಥಿಂಗ್ಸ್, ಬಿಗ್ ಡೇಟಾ, ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಒಟಿಟಿ ಪ್ಲಾಟ್ಫಾರಂಗಳು ದೈನಂದಿನ ಸಂಗತಿಗಳಾಗಿ, 5ಜಿ ತಂತ್ರಜ್ಞಾನದ ಬೆನ್ನೇರಿ ನಮ್ಮ ಪ್ರತಿಯೊಬ್ಬರ (ಭಾರತದಲ್ಲೀಗ 88 ಕೋಟಿ ಮಂದಿ ಇಂಟರ್ನೆಟ್ ಬಳಕೆದಾರರು!) ಅಂಗೈಗೆ ಬಂದಿಳಿಯುತ್ತಿರುವಾಗ ಉತ್ಪಾದನೆ ಆಗುವ ಡೇಟಾಗಳನ್ನು ಸಂಗ್ರಹಿಸಿಡುವುದಕ್ಕೆ ಜಾಗ ಬೇಕಲ್ಲ -ಆ ಜಾಗಗಳೇ ಡೇಟಾ ಸೆಂಟರ್ಗಳು. ಅಮೆರಿಕಕ್ಕೆ ಹೋಲಿಸಿದರೆ, ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಒಟ್ಟು ಸಂಖ್ಯೆ ಎರಡು ಪಟ್ಟು ಹೆಚ್ಚು. ಆದರೆ, ಅಮೆರಿಕದಲ್ಲಿ 2023ರ ಅಂತ್ಯಕ್ಕೆ 5,375 ಡೇಟಾ ಸೆಂಟರ್ಗಳಿದ್ದರೆ, ಭಾರತದಲ್ಲಿರುವುದು ಕೇವಲ 150ರ ಆಸುಪಾಸು. ಜಗತ್ತಿನಲ್ಲಿ ಒಟ್ಟು ಸುಮಾರು 7,000 ಡೇಟಾ ಸೆಂಟರ್ಗಳಿವೆ.
ಐಟಿ ಕಂಪೆನಿಗಳ ಸ್ವಂತ ಬಳಕೆಗೆ ಇರುವ ‘ಎಂಟ್ಪ್ರೈಸ್ ಡಿಸಿ’, ಬೃಹತ್ ಕಂಪೆನಿಗಳ (ಉದಾ ಅಮೆಝಾನ್, ಮೆಟಾ, ಗೂಗಲ್) ‘ಹೈಪರ್ ಸ್ಕೇಲ್ ಡಿಸಿ’, ನಗರಗಳಲ್ಲಿ ಬಳಕೆಗೆ ಬೇಕಾಗುವ ‘ಎಡ್ಜ್ ಡಿಸಿ’ ಹಾಗೂ ಬೇರೆ ವ್ಯವಹಾರಗಳಿಗೆ ಬಾಡಿಗೆ ಜಾಗ ಒದಗಿಸಬಲ್ಲ ‘ಕೊಲೊಕೇಷನ್ ಡಿಸಿ’ ಎಂಬ ನಾಲ್ಕು ವಿಧದ ಡೇಟಾ ಸೆಂಟರ್ಗಳಿವೆ. ಇದೊಂದು ಬೃಹತ್ ಉದ್ಯಮವಾಗಿ ಬೆಳೆಯುತ್ತಿದ್ದು, ಭಾರತ ಸರಕಾರ ತನ್ನ 2022-23ನೇ ಸಾಲಿನ ಬಜೆಟ್ನಲ್ಲಿ ಡೇಟಾ ಸೆಂಟರ್ ಗಳನ್ನು ಮೂಲಸೌಕರ್ಯ ಕ್ಷೇತ್ರದ ವ್ಯಾಪ್ತಿಗೆ ತಂದಿದೆ. ಈ ಕ್ಷೇತ್ರದಲ್ಲಿ ಭಾರತವು ವಿದೇಶೀ ಹೂಡಿಕೆಗಳ ಆಕರ್ಷಣೆಗೆ 12,000 ಕೋಟಿ ರೂ.ಗಳನ್ನು ಕಾಯ್ದಿರಿಸುವ ಸುದ್ದಿಗಳಿವೆ. ಈ ಕ್ಷೇತ್ರಕ್ಕೆ ಬರುವ ಉದ್ಯಮಿಗಳಿಗೆ ಸುಲಭ ಕ್ಲಿಯರೆನ್ಸ್, ಕಟ್ಟಡ ನಿಯಮಗಳಲ್ಲಿ ಸಡಿಲು ಮೊದಲಾದ ಕೊಡುಗೆಗಳನ್ನೂ ಸರಕಾರ ಪ್ರಕಟಿಸಿದೆ.
ಭಾರತದಲ್ಲಿ 2019ರ ಹೊತ್ತಿಗೆ ಆರಂಭಗೊಂಡ ಡೇಟಾಸೆಂಟರ್ ವ್ಯವಹಾರ, ಈಗ ದೇಶದ ಏಳು ಮಹಾನಗರಗಳಲ್ಲಿ 110 ಲಕ್ಷ ಚದರಡಿ ಗಾತ್ರದ ಜಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 819 ಮೆಗಾವಾಟ್ ಸಾಮರ್ಥ್ಯ ಹೊಂದಿದೆ. ಪ್ರತೀ ಮೆಗಾವಾಟ್ ಸಾಮರ್ಥ್ಯಕ್ಕೆ ಸುಮಾರು 620 ಕೋಟಿ ರೂ. ವೆಚ್ಚ ಬರುವ ಉದ್ಯಮ ಇದು.
ಇದರಲ್ಲೂ ನಿಮ್ಮದೇನು ಕ್ಯಾತೆ ಎಂದು ಕೇಳುತ್ತೀರಾ?
ಈ ಡೇಟಾ ಸೆಂಟರ್ಗಳು ದೊಡ್ಡ ಪ್ರಮಾಣದಲ್ಲಿ ರಿಯಲ್ ಎಸ್ಟೇಟ್ ನೆಲವನ್ನು ಆವರಿಸುವುದು ಮಾತ್ರವಲ್ಲದೆ, ಪರಿಸರಕ್ಕೆ ಅಪಾರ ಪ್ರಮಾಣದಲ್ಲಿ ಶಾಖವನ್ನು ಬಿಡುಗಡೆ ಮಾಡುತ್ತವೆ; ಆ ಜಾಗವನ್ನು ತಣ್ಣಗಿರಿಸಲು ಕೆಲವು ಡಿಸಿಗಳು ಅಪಾರ ಪ್ರಮಾಣದ ನೀರನ್ನೂ ಬಳಸುತ್ತವೆ. ಅಮೆರಿಕದಲ್ಲಿ ಜನ ವಸತಿ ಕಡಿಮೆ ಇರುವ ಕಡೆ ಈ ಡಿಸಿಗಳು ಕಾರ್ಯಾಚರಿಸುತ್ತಿವೆ. ಜನವಸತಿ ಇರುವಲ್ಲಿ, ಅವುಗಳಿಂದ ಹೊರಹೊಮ್ಮುವ ಬಿಸಿ ಮತ್ತು ಅಲ್ಲಿನ ಫ್ಯಾನ್ಗಳ ಶಬ್ದ ಮಾಲಿನ್ಯಕ್ಕೆ ಜನ ಈಗಲೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಡೇಟಾ ಸೆಂಟರ್ಗಳು ಬಳಸುವ ವಿದ್ಯುತ್ (ಒಂದು ಡಿಸಿಯ ಸಾಮರ್ಥ್ಯವನ್ನು ಮೆಗಾವಾಟ್ಗಳಲ್ಲಿ ವಿವರಿಸುತ್ತಾರೆ. ಅದು ಆ ಡಿಸಿ ಬಳಸುವ ವಿದ್ಯುತ್ನ ಪ್ರಮಾಣವೂ ಹೌದು) ಕೆಲವು ಸಣ್ಣ ರಾಷ್ಟ್ರಗಳಲ್ಲಿ ಎಷ್ಟು ಅಸಮತೋಲನಕ್ಕೆ ಕಾರಣ ಆಗಿವೆ ಎಂದರೆ, ಐರ್ಲ್ಯಾಂಡ್ನಲ್ಲಿ ಉತ್ಪಾದನೆ ಆಗುವ ವಿದ್ಯುತ್ತಿನ ಶೇ. 70 ಈಗ ಡಿಸಿಗಳ ಪಾಲು! ಅಲ್ಲಿ 2028ರ ತನಕ ಹೊಸ ಡಿಸಿಗಳನ್ನು ಸ್ಥಾಪಿಸದಿರಲು ನಿರ್ಧರಿಸಲಾಗಿದೆ. ಸಿಂಗಾಪುರ ಕೂಡ 2019-2022ರ ನಡುವೆ ಹೊಸ ಡಿಸಿಗಳಿಗೆ ನಿಷೇಧ ಹೇರಿತ್ತು. 2023-2030ರ ನಡುವೆ ಡಿಸಿಗಳ ವಿದ್ಯುತ್ ಬಳಕೆ ಮೂರು ಪಟ್ಟು ಹೆಚ್ಚಲಿರುವುದರಿಂದ, ಈ ಅಸಮತೋಲನ ನೀಗಿಕೊಳ್ಳಲು ಜಗತ್ತಿನ ಬೇರೆಬೇರೆ ಕಡೆಗಳಲ್ಲಿ ಡಿಸಿಗಳನ್ನು ತೆರೆಯಬಹುದೆಂದು ಯುರೋಪಿನ ಪರಿಣತರು ಸೂಚಿಸತೊಡಗಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಕೋವಿಡೋತ್ತರವಾಗಿ ಏಶ್ಯದಲ್ಲಿ ಡಿಸಿ ಸ್ಥಾಪನೆಗಳು ಗತಿ ಪಡೆದುಕೊಳ್ಳತೊಡಗಿವೆ.
ಭಾರತಕ್ಕೆ 2020ರಿಂದೀಚೆಗೆ 60,000 ಕೋಟಿ ರೂ.ಗಳ ವಿದೇಶೀ ಹೂಡಿಕೆಯು ಡಿಸಿಗಳಿಗೆಂದು ಬಂದಿದ್ದು, ಈಗ ಆ ರಂಗಕ್ಕೆ ಆಗಿರುವ ಒಟ್ಟು ಹೂಡಿಕೆಯಲ್ಲಿ ಶೇ. 90 ಅವರದೇ. ಆ ಕಂಪೆನಿಗಳಿಗೆ, ತಮ್ಮ ಅಗತ್ಯಕ್ಕೆ ತಕ್ಕಂತಹ (built to suit) ಡಿಸಿಗಳನ್ನು ಸ್ಥಾಪಿಸಿಕೊಳ್ಳಲು ಸರಕಾರ ಒಪ್ಪಿಗೆ ನೀಡಿದೆ. ಅಮೆಝಾನ್, ಗೂಗಲ್, ಮೆಟಾದಂತಹ ಬೃಹತ್ ಕಾರ್ಪೊರೇಷನ್ಗಳು ಇದಕ್ಕೆ ಆಸಕ್ತಿ ತೋರಿಸಿವೆ. ಭಾರತದಲ್ಲಿ ಸದ್ಯ ಇರುವ ಡಿಸಿಗಳಲ್ಲಿ ಅರ್ಧಕ್ಕರ್ಧ ಮುಂಬೈ ಮಹಾನಗರದ ಒಳಗೇ ಇದೆಯಂತೆ! ಅಮೆಝಾನ್ ಮತ್ತು ಮೆಟಾಗಳು ಜಗತ್ತಿನಾದ್ಯಂತ ಡಿಸಿಗಳಿಗೆಂದು ಮುಂದಿನ 10 ವರ್ಷಗಳಲ್ಲಿ ಕ್ರಮವಾಗಿ ಎಂಟು ಲಕ್ಷ ಕೋಟಿ ರೂ. ಮತ್ತು 3.5 ಲಕ್ಷ ಕೋಟಿ ರೂ. ಹೂಡಿಕೆ ತೆಗೆದಿರಿಸಿವೆಯಂತೆ.
ವಿದ್ಯುತ್ ಮತ್ತು ನೀರಿನ ಕೊರತೆ ಇರುವ, ವಿದ್ಯುತ್ತಿಗಾಗಿ ಇನ್ನೂ ಉಷ್ಣ ವಿದ್ಯುತ್ ಸ್ಥಾವರಗಳನ್ನೇ ಮುಕ್ಕಾಲು ಪಾಲು ಅವಲಂಬಿಸಿರುವ ಭಾರತದಲ್ಲಿ ದೀರ್ಘಕಾಲಿಕವಾಗಿ ಯೋಜಿಸಿಕೊಳ್ಳದೆ, ಯಾರದೋ ಚಟಕ್ಕೆ ಡೇಟಾ ಸೆಂಟರ್ಗಳನ್ನು ಹುಚ್ಚಾಪಟ್ಟೆ ತೆರೆಯಲು ಬಿಟ್ಟರೆ, ಅದರ ಬಿಸಿ ನಮಗೇ ತಟ್ಟಲಿದೆ. ಅಗಾಧ ಡೇಟಾ ಅಗತ್ಯವಿರುವ ಎಐ ತಂತ್ರಜ್ಞಾನದಂತಹ ‘ನವ’ ತಂತ್ರಜ್ಞಾನಗಳಲ್ಲಿ ಶೇ. 88 ನಿರುಪಯುಕ್ತ ಡೇಟಾಗಳೇ ಇರುವುದು. ಯಾವುದೋ ವೆಬ್ಸೈಟ್, ಆ್ಯಪ್, ಕುಕೀಗಳು ಬಳಕೆದಾರರ ಹೆಜ್ಜೆ ಗುರುತುಗಳನ್ನು ಸಂಗ್ರಹಿಸಿಟ್ಟುಕೊಂಡು ಟ್ರ್ಯಾಕ್ ಮಾಡಿದ ಡೇಟಾಗಳವು. ಇನ್ನೂ ತೀವ್ರ ಬೆಳವಣಿಗೆಯ ಹಂತದಲ್ಲಿರುವ ಈ ಎಐ, ಸದ್ಯಕ್ಕೆ ಒಟ್ಟು ಡೇಟಾದ ಐದನೇ ಒಂದು ಭಾಗವನ್ನು ತಾನೇ ಆವರಿಸಿಕೊಂಡುಬಿಟ್ಟಿದೆಯಂತೆ. ಮತ್ತಷ್ಟು ಅಂಕಿ ಅಂಶ ಬೇಕೆಂದರೆ, ಜಿಪಿಟಿ-3ಯಂತಹ ಒಂದು ಎಐ ಮಾಡೆಲ್ 552 ಟನ್ ಕಾರ್ಬನ್ ಡಯಾಕ್ಸೈಡಿಗೆ ಸಮನಾದ ಮಾಲಿನ್ಯವನ್ನು ಪರಿಸರಕ್ಕೆ ಬಿಡುಗಡೆ ಮಾಡಬಹುದು. ಮುಂದಿನ ವರ್ಷಗಳಲ್ಲಿ ಹೊಸದಾಗಿ ಬರುವ ವಿದ್ಯುತ್ ಬೇಡಿಕೆಗಳಲ್ಲಿ ಐದರಲ್ಲಿ ಒಂದು ಪಾಲು ಡಿಸಿಗಳದೇ ಇರುತ್ತದೆ.
ಭಾರತದಲ್ಲಿ ‘ಆನಿ’ಗಳು ಈಗಾಗಲೇ ಈ ನಿಟ್ಟಿನಲ್ಲಿ ಸಕ್ರಿಯವಾಗಿದ್ದು, ಅದಾನಿ ಬಳಗವು ಸ್ವೀಡನ್ನ EdgeConnex ಸಹಯೋಗದಲ್ಲಿ ಮುಂದಿನ ಐದು ವರ್ಷಗಳಲ್ಲಿ 40,000 ಕೋಟಿ ರೂ.ಗಳನ್ನು ಡಿಸಿ ಯೋಜನೆಗಳಿಗೆ ಮೀಸಲಿಟ್ಟಿರುವುದಾಗಿ ಪ್ರಕಟಿಸಿದ್ದರೆ, ಅಂಬಾನಿ ಬಳಗ 2025ರೊಳಗೆ 40,000 ಕೋಟಿ ರೂ.ಗಳನ್ನು ಡಿಸಿ ಯೋಜನೆಗಳಿಗೆ ವಿನಿಯೋಗಿಸುವುದಾಗಿ ಹೇಳಿದೆ. ಭಾರತಿ ಏರ್ಟೆಲ್ ಕೂಡ ಇದೇ ಹಾದಿಯಲ್ಲಿದೆ. ಗೂಗಲ್, ಸಿಫಿ, ಯೊಟ್ಟಾ ಮೊದಲಾದ ಕಂಪೆನಿಗಳೂ ಈ ಕ್ಷೇತ್ರಕ್ಕೆ ಮುಂದಿನ ಐದು ವರ್ಷಗಳಿಗೆಂದು ಗಮನಾರ್ಹ ಹೂಡಿಕೆಯನ್ನು ಪ್ರಕಟಿಸಿವೆ. ಹೂಡಿಕೆಗಳೇನೋ ಬರುತ್ತಿವೆ, ಆದರೆ ಇವು ದೇಶದ ವಿದ್ಯುತ್-ನೀರು-ಪರಿಸರ ಸನ್ನಿವೇಶದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದರ ಪಾರದರ್ಶಕ ಚಿತ್ರಣ ನೀಡದೆ, ವಿದ್ಯುತ್ ರಂಗವನ್ನು ಖಾಸಗೀಕರಿಸುವತ್ತ ಹೆಜ್ಜೆಗಳನ್ನಿಡುವುದು, ಸಾರ್ವಜನಿಕ ಬಳಕೆಯ ವಿದ್ಯುತ್ ಉತ್ಪಾದಕ/ವಿತರಕರಿಗೇ ಅದರ ಸ್ವಂತ ಬಳಕೆಗೆ ಅವಕಾಶ ಮಾಡಿಕೊಡುವುದು... ಇವೆಲ್ಲ ದೂರಗಾಮಿಯಾಗಿ ಯಾಕೋ ಸ್ವಲ್ಪ ಅಪಾಯಕಾರಿ ಅನ್ನಿಸುತ್ತಿದೆ.