‘ಲ್ಯಾಟರಲ್ ಎಂಟ್ರಿ’ಯ ಲೇಟೆಂಟ್ ಪರಿಣಾಮಗಳು
ಭಾರತ ಸರಕಾರವನ್ನು ನಡೆಸುತ್ತಿರುವ ರಾಜಕೀಯಸ್ಥರು ತಮಗೆ ಬೇಕಾದವರನ್ನು ‘ಲ್ಯಾಟರಲ್ ಎಂಟ್ರಿ’ ವಿಧಾನದ ಮೂಲಕ ಸರಕಾರದ ಆಯಕಟ್ಟಿನ ಜಾಗಗಳಲ್ಲಿ ಪ್ರತಿಷ್ಠಾಪಿಸುವ ಪ್ರಯತ್ನಗಳಿಗೆ ಹಿನ್ನಡೆ ಆಗಿದೆ. ಆ ಕುರಿತ ಜಾಹೀರಾತನ್ನು ಯುಪಿಎಸ್‌ಸಿ ಹಿಂದೆಗೆದುಕೊಂಡಿದೆ. ಆದರೆ, ನರೇಂದ್ರ ಮೋದಿಯವರ ಸರಕಾರದ 1.0 ಮತ್ತು 2.0 ಆವೃತ್ತಿಗಳಲ್ಲಿ ಈಗಾಗಲೇ ಆಗಿರುವ ನೇಮಕಗಳು ಎಂತೆಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ ಎಂಬುದನ್ನು ಗಮನಿಸಿದರೆ, ಈ ಹಿಂಬಾಗಿಲ ಪ್ರವೇಶದ ದುರ್ಬಳಕೆಯ ಸ್ವರೂಪ ಅರ್ಥವಾದೀತು. ಹಾಗೆಂದಾಕ್ಷಣ ಲ್ಯಾಟರಲ್ ಎಂಟ್ರಿಯೇ ತಪ್ಪು ಎಂದಲ್ಲ. ಹಿಂದೆ ಡಾ. ಮನಮೋಹನ್ ಸಿಂಗ್, ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ರಘುರಾಂ ರಾಜನ್ ಅವರಂತಹ ಅರ್ಥಶಾಸ್ತ್ರಜ್ಞರು ಭಾರತ ಸರಕಾರದ ಭಾಗವಾದದ್ದು, ಈ ವಿಧಾನದ ಮೂಲಕವೇ.
‘ಲ್ಯಾಟರಲ್ ಎಂಟ್ರಿ’ಯ ದುರ್ಬಳಕೆ ಹೇಗೆ ಸಂಭವಿಸಬಹುದೆಂಬುದಕ್ಕೆ ಒಂದು ತಾಜಾ ಉದಾಹರಣೆ ಇದೇ ಆಗಸ್ಟ್ 27ರಂದು ಸುಪ್ರೀಂ ಕೋರ್ಟಿನ ಗಮನಕ್ಕೆ ಬಂದಿದ್ದು, ಅದು ಸರಕಾರದ ವಿರುದ್ಧ ಚಾಟಿ ಬೀಸಿದೆ. ಈ ಪ್ರಕರಣದಲ್ಲಿ ಆಗಿದ್ದೇನು ಎಂಬುದನ್ನು ವಿವರಿಸುವುದು ಈ ಬರಹದ ಉದ್ದೇಶ.
ಮೊದಲಿಗೆ ಸ್ವಲ್ಪ ಚರಿತ್ರೆ
1995ರಲ್ಲಿ ಸ್ಥಾಪನೆಗೊಂಡ ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೊಪತಿ ಇಲಾಖೆಯನ್ನು 2003ರಲ್ಲಿ ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ, ಹೋಮಿಯೊಪತಿ (ಆಯುಷ್) ಇಲಾಖೆ ಎಂದು ಮರು ನಾಮಕರಣ ಮಾಡಲಾಗಿತ್ತು. 2014ರಲ್ಲಿ ಮೋದಿಯವರ ಸರಕಾರ 1.0, ಈ ಇಲಾಖೆಯನ್ನು ಪ್ರತ್ಯೇಕ ಸಚಿವಾಲಯ ವಾಗಿ ರೂಪಿಸಿತ್ತು. 2021ರ ಎಪ್ರಿಲ್ 13ರಂದು ಇದನ್ನು ಆಯುಷ್ ಸಚಿವಾಲಯ ಎಂದು ಮತ್ತೆ ಮರುನಾಮಕರಣ ಮಾಡಲಾಯಿತು.
ಈ ಆಯುಷ್ ಸಚಿವಾಲಯಕ್ಕೆ ಕಾರ‌್ಯದರ್ಶಿಯಾಗಿ 2017ರ ಜುಲೈ ತಿಂಗಳಿನಿಂದ ಕಾರ್ಯಾಚರಿಸುತ್ತಿರುವ ವೈದ್ಯ ರಾಜೇಶ್ ಕೊಟೇಚಾ ಎಂಬವರು ಹೆಚ್ಚಿನಂಶ ಹಿಂಬಾಗಿಲ ಪ್ರವೇಶದ ಮೂಲಕ ಈ ಸರಕಾರದಲ್ಲಿ ಆಗಿರುವ ಮೊದಲ ನೇಮಕ.
ಸಂಘಪರಿವಾರದ ‘ವಿಜ್ಞಾನ ಭಾರತಿ’ಯ ಭಾಗ ಆಗಿರುವ, ವಿಶ್ವ ಆಯುರ್ವೇದ ಪೌಂಡೇಶನ್‌ನ ಟ್ರಸ್ಟಿ ಆಗಿರುವ ವೈದ್ಯ ರಾಜೇಶ್ ಕೊಟೇಚಾ, ಮೂಲತಃ ಜೈಪುರದಲ್ಲಿ ಆಯುರ್ವೇದ ಚಿಕಿತ್ಸಾಲಯವೊಂದನ್ನು ನಡೆಸುತ್ತಿದ್ದ ವೈದ್ಯರು. 2015ರಲ್ಲಿ ಅವರಿಗೆ ಹಾಲಿ ಸರಕಾರವೇ ಪದ್ಮಶ್ರೀ ಪುರಸ್ಕಾರವನ್ನು ನೀಡಿತ್ತು! ಈಗವರು 7 ವರ್ಷಗಳಿಂದ ಆಯುಷ್ ಇಲಾಖೆ ಕಾರ್ಯದರ್ಶಿ.
ಇದೇ ಆಯುಷ್ ಇಲಾಖೆ ಕೋವಿಡ್ ಕಾಲದಲ್ಲಿ ಸಾಕಷ್ಟು ಗೊಂದಲಗಳನ್ನು ಹುಟ್ಟುಹಾಕಿದ್ದು; ಕಡೆಗೆ ಸ್ಪಷ್ಟೀಕರಣಗಳನ್ನು ನೀಡಿದ್ದು ಈಗ ಚರಿತ್ರೆ. ಆ ಕೋವಿಡ್ ಕಾಲದ ಗೊಂದಲದಲ್ಲಿ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ್ ಲಿಮಿಟೆಡ್ ಪಾತ್ರವೂ ಇತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಸುಪ್ರೀಂಕೋರ್ಟ್‌ನ ಚಾಟಿ
ಪತಂಜಲಿ ಸಂಸ್ಥೆ ಮತ್ತು ಬಾಬಾ ರಾಮ್‌ದೇವ್ ಅವರ ವಿರುದ್ಧ 2022ರಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ)ವು ಅಲೋಪತಿ ಚಿಕಿತ್ಸಾ ಪದ್ಧತಿಯ ವಿರುದ್ಧ ಅಪಪ್ರಚಾರ ಮಾಡಿದ್ದಕ್ಕಾಗಿ ದೂರೊಂದನ್ನು ದಾಖಲಿಸಿತ್ತು. ಈ ಪ್ರಕರಣ ಇನ್ನೂ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಯ ಹಂತದಲ್ಲಿದೆ.
ಈ ಪ್ರಕರಣದ ಸದ್ಯದ ಸ್ಥಿತಿ ಏನೆಂದರೆ, ಪತಂಜಲಿ ಸಂಸ್ಥೆಗೆ ಅಪಪ್ರಚಾರಗಳಿಗಾಗಿ ಪತ್ರಿಕೆಗಳಲ್ಲಿ ಜಾಹೀರಾತು ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ನೂರು ‘ನಕ್ರಾ’ಗಳ ಬಳಿಕ ಈ ಆದೇಶ ಪಾಲನೆ ಆಗಿತ್ತು. ಆದರೆ, ಈ ನಡುವೆ ಐಎಂಎ ಅಧ್ಯಕ್ಷ ಅಶೋಕನ್ ಆರ್. ವಿ. ಅವರು ಪಿಟಿಐಗೆ ನೀಡಿದ್ದ ಸಂದರ್ಶನವೊಂದರಲ್ಲಿ, ಸುಪ್ರೀಂಕೋರ್ಟಿನ ಆಬ್ಸರ್‌ವೇಶನ್ ಒಂದನ್ನು ‘ದುರದೃಷ್ಟಕರ’ ಮತ್ತು ವೈದ್ಯರನ್ನು ‘ಡೀಮೊರಲೈಸ್’ ಮಾಡುವಂತಹದು ಎಂದಿದ್ದರು. ಇದರ ಎಳೆ ಹಿಡಿದುಕೊಂಡು, ಪತಂಜಲಿಯ ಮುಖ್ಯಸ್ಥ ಬಾಲಕೃಷ್ಣ ಅವರು, ಈ ವರ್ಷ ಎಪ್ರಿಲ್‌ನಲ್ಲಿ ಅಶೋಕನ್ ವಿರುದ್ಧ ನ್ಯಾಯಾಂಗ ನಿಂದನೆಯ ಆರೋಪವನ್ನು ಇದೇ ಪ್ರಕರಣದ ಭಾಗವಾಗಿ, ಸುಪ್ರೀಂಕೋರ್ಟಿನಲ್ಲಿ ಮಾಡಿದ್ದರು. ಅದಕ್ಕೆ ಐಎಂಎ ಅಧ್ಯಕ್ಷರು, ಪತ್ರಿಕಾ ಜಾಹೀರಾತುಗಳ ಮೂಲಕ ಬಹಿರಂಗವಾಗಿ ನ್ಯಾಯಾಂಗದ ಕ್ಷಮೆ ಕೇಳಬೇಕು ಎಂದು ಸುಪ್ರೀಂಕೋರ್ಟು ವಿಧಿಸಿತ್ತು. ಈ ಹಂತದ ವಿಚಾರಣೆಯ ವೇಳೆ, ಸುಪ್ರೀಂಕೋರ್ಟ್ ಮೊನ್ನೆ ಮಂಗಳವಾರ ಆಯುಷ್ ಇಲಾಖೆಗೆ ಚಾಟಿ ಬೀಸಿದೆ.
ಆದದ್ದೇನು?
ಭಾರತದಲ್ಲಿ ಔಷಧಿಗಳ ನಿಯಂತ್ರಣ ಕಾಯ್ದೆ-ಡ್ರಗ್ಸ್ ಆ್ಯಕ್ಟ್ 1940 ಸ್ವಾತಂತ್ರ್ಯಪೂರ್ವದ್ದು. ಅದಕ್ಕೆ 1962ರಲ್ಲಿ ಕಾಸ್ಮೆಟಿಕ್ಸ್ ಸೇರಿಕೊಂಡು ಅದು ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಕಾಯ್ದೆ- 1940 ಆಗಿದೆ. ಈ ಕಾಯ್ದೆಯ ಅಡಿಯಲ್ಲಿ, ಔಷಧಿಗಳ ಗುಣಮಟ್ಟ ನಿಯಂತ್ರಣಕ್ಕಾಗಿ ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ರೂಲ್-1945 ಅನ್ನು ರೂಪಿಸಲಾಗಿತ್ತು.
ಆಯುರ್ವೇದ, ಯುನಾನಿ ಮತ್ತು ಸಿದ್ಧ ವೈದ್ಯಪದ್ಧತಿಗಳನ್ನು ಅನುಸರಿಸುವ ಔಷಧಿ ಕಂಪೆನಿಗಳ ಮೂಲಕ ನಡೆಯುವ ಎಗ್ಗಿಲ್ಲದ ಪ್ರಚಾರಗಳನ್ನು ನಿಯಂತ್ರಿಸಲು, ಸಂಸತ್ತಿನ ಆರೋಗ್ಯಸ್ಥಾಯೀ ಸಮಿತಿಯ ಶಿಫಾರಸಿನ ಮೇರೆಗೆ 2018ರಲ್ಲಿ ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ನಿಯಮಗಳಿಗೆ, ನಿಯಮ-170 ಸೇರ್ಪಡೆ ಆಗಿತ್ತು. ಈ ನಿಯಮದ ಅನುಸಾರ, ಯಾವುದೇ ಆಯುರ್ವೇದ, ಯುನಾನಿ ಮತ್ತು ಸಿದ್ಧ ಇತ್ಯಾದಿ ಭಾರತೀಯ ಔಷಧಿ ಪದ್ಧತಿಯನ್ನು ಅನುಸರಿಸುವ ಔಷಧಿ ತಯಾರಕ ಕಂಪೆನಿಗಳು ರಾಜ್ಯಮಟ್ಟದಲ್ಲಿ ಸರಕಾರಿ ಲೈಸನ್ಸಿಂಗ್ ಪ್ರಾಧಿಕಾರದ ಒಪ್ಪಿಗೆ ಇಲ್ಲದೆ, ಯಾವುದೇ ರೀತಿಯ ಜಾಹೀರಾತುಗಳನ್ನು ಪ್ರಕಟಿಸುವಂತಿಲ್ಲ.
ಈ ರೀತಿಯ ಅಪಪ್ರಚಾರಗಳನ್ನು ತಡೆಯಲು ಆಯುಷ್ ಇಲಾಖೆ ಹಾಗೂ ಭಾರತೀಯ ಜಾಹೀರಾತು ಸ್ಟ್ಯಾಂಡರ್ಡ್‌ಗಳ ಮಂಡಳಿ (ಎಎಸ್‌ಸಿಐ) ನಡುವೆ ಒಪ್ಪಂದ ಇದೆ, ಮಾತ್ರವಲ್ಲದೆ, ತಪ್ಪು ಹಾದಿಗೆಳೆಯುವ ಜಾಹೀರಾತುಗಳ ವಿರುದ್ಧ ಸರಕಾರಕ್ಕೆ ದೂರು ಸಲ್ಲಿಸಲು ಉಂಒಂ ಎಂಬ ಪೊರ್ಟಲ್ ಕೂಡ ಇದೆ. ಇಲ್ಲಿ ಕಾಣಿಸಿಕೊಂಡ ದೂರುಗಳನ್ನು ರಾಜ್ಯಮಟ್ಟದಲ್ಲಿ ಔಷಧಿ ನಿಯಂತ್ರಕರು ಪರಿಶೀಲಿಸಿ ತಕ್ಕ ಕ್ರಮ ಕೈಕೊಳ್ಳುವುದಕ್ಕೆ ಅವಕಾಶ ಇದೆ.
ಈ ದೂರು ವ್ಯವಸ್ಥೆಗಳ ಮೂಲಕ, 2024ರ ಜುಲೈ ಹೊತ್ತಿಗೆ, 38,539 ತಪ್ಪು ಹಾದಿಗೆಳೆಯುವ ಜಾಹೀರಾತುಗಳ ವಿರುದ್ಧ ಆಯುಷ್ ಔಷಧಿ ಗುಣ ಮತ್ತು ಏವಂ ಉತ್ಪಾದನ್ ಸಂವರ್ಧನ ಯೋಜನಾ (AOGUSY) ಅಡಿಯಲ್ಲಿ ಕ್ರಮಗಳನ್ನು ಸರಕಾರ ಕೈಗೊಂಡಿದೆ (PIB release ID: 2043756).
ಈ ವ್ಯವಸ್ಥೆ ಒಂದು ಮಟ್ಟಕ್ಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಾಗಲೇ, ಹೆಚ್ಚಿನಂಶ ಬಾಬಾ ರಾಮ್‌ದೇವ್ ಅವರಿಗೆ ಮತ್ತು ಅಂತಹ ಇತರರಿಗೆ ಆಗಿರುವ ಮುಜುಗರವನ್ನು ತಪ್ಪಿಸಲು, ಅಧಿಕಾರಶಾಹಿಯ ಕಡೆಯಿಂದ ಕ್ರಮ ಆರಂಭಗೊಳ್ಳುತ್ತದೆ. ಇಲ್ಲಿ ಹೆಚ್ಚಿನಂಶ ಆಯಕಟ್ಟಿನ ಜಾಗದ ‘ಲ್ಯಾಟರಲ್ ಎಂಟ್ರಿ’ ಕೆಲಸ ಮಾಡಿರಬಹುದು ಅನ್ನಿಸುತ್ತದೆ.
ಆಗಸ್ಟ್ 29, 2023ರಂದು ಆಯುಷ್ ಇಲಾಖೆಯ ಅಧೀನಕಾರ್ಯದರ್ಶಿ ಮದನ್‌ಲಾಲ್ ಮೀನಾ ಅವರು ಒಂದು ಸರ್ಕ್ಯುಲರ್ ಹೊರಡಿಸಿ, ಆಯುರ್ವೇದ, ಸಿದ್ಧ, ಯುನಾನಿ ಡ್ರಗ್ಸ್ ತಾಂತ್ರಿಕ ಸಲಹಾ ಮಂಡಳಿ (ASUDTAB)ಯು 25 ಮೇ, 2023ರಂದು ನಡೆದ ತನ್ನ ಸಭೆಯಲ್ಲಿ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ನಿಯಮ-1945ಕ್ಕೆ, 2018ರಲ್ಲಿ ಸೇರ್ಪಡೆ ಆಗಿದ್ದ ನಿಯಮ-170ನ್ನು ರದ್ದುಗೊಳಿಸಲು ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ, ಆ ನಿಟ್ಟಿನಲ್ಲಿ ಅಧಿಕೃತ ಆದೇಶ ಹೊರಡಲು ವಿಳಂಬ ಇರುವುದರಿಂದ ರಾಜ್ಯಗಳು ನಿಯಮ-170ರ ಅನ್ವಯ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು (ಅರ್ಥಾತ್ ಹದತಪ್ಪಿ ಪ್ರಕಟಗೊಳ್ಳುವ ಆಯುರ್ವೇದ, ಸಿದ್ಧ, ಯುನಾನಿ ಔಷಧಿಗಳ ಜಾಹೀರಾತುಗಳನ್ನು ನಿಯಂತ್ರಿಸಬಾರದು!) ಎಂದು ರಾಜ್ಯ ಪ್ರಾಧಿಕಾರಗಳಿಗೆ ಸೂಚಿಸುತ್ತದೆ. ಇಷ್ಟು ಮಾತ್ರವಲ್ಲದೆ, 2024ರ ಜುಲೈ ಒಂದರಂದೇ ಗಜೆಟ್ ಪ್ರಕಟಣೆ ಹೊರಡಿಸಿ ಆ ನಿಯಮವನ್ನು ಕಿತ್ತುಹಾಕುತ್ತದೆ.
ಮಂಗಳವಾರ (ಆಗಸ್ಟ್ 27) ಈ ವಿಚಾರವನ್ನು ಗಮನಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠವು (ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಸಂದೀಪ್ ಮೆಹ್ತಾ) “How can you take this decision of omitting this rule in the teeth of the Court’s order?” ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರನ್ನು ಪ್ರಶ್ನಿಸಿದ್ದಲ್ಲದೆ, ಮುಂದಿನ ಆದೇಶದ ತನಕ ನಿಯಮ-170ನ್ನು ರದ್ದುಪಡಿಸುವ ಸರಕಾರಿ ಆದೇಶಕ್ಕೆ ತಡೆಯಾಜ್ಞೆ ನೀಡಿದೆ; ಆಯುಷ್ ಸಚಿವಾಲಯವು ತನ್ನ ಆದೇಶವನ್ನು ಉಲ್ಲಂಘಿಸಿದ್ದಕ್ಕೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಹೀಗೆ, ಗೋಲ್ ಪೋಸ್ಟ್ ಬದಲಿಸಿ, ಗೋಲ್ ತಪ್ಪಿಸಲು ಹೋದ ಅಧಿಕಾರಶಾಹಿ ಕಿತಾಪತಿಗಳನ್ನು ರೆಫ್ರಿಗಳು ಈಗ ತಡೆಹಿಡಿದಿದ್ದಾರೆ!