ಇವಿಎಂ ಮತ್ತದರ ‘ಲೇಟೆಂಟ್’ ಪರಿಣಾಮಗಳು
ಈಚುನಾವಣೆಯಲ್ಲಿ INDI ಅಲಯನ್ಸ್‌ಗೆ ಒಂದಿಷ್ಟು ಗಮನಾರ್ಹ ಸಂಖ್ಯೆಯ ಸೀಟುಗಳು ಬಂದದ್ದೇ ತಡ - ಚುನಾವಣಾ ಆಯೋಗ ಮತ್ತು ಸರಕಾರದ ಸಮರ್ಥಕರ ಕಡೆಯಿಂದ, ಇನ್ನು ಮುಂದಾದರೂ ಇಲೆಕ್ಟ್ರಾನಿಕ್ ಮತದಾನ ಯಂತ್ರ(ಇವಿಎಂ)ದ ಮೇಲೆ ದೂರು ಹಾಕುವುದನ್ನು ಬಿಡಿ ಎಂಬ ‘ಹಕ್ಕೊತ್ತಾಯ’ ಶುರು ಆಗಿದೆ!
ಇದು ಹೇಗಾಗಿದೆ ಎಂದರೆ, ಇವಿಎಂಗಳ ಬಗ್ಗೆ ತಗಾದೆ ಎತ್ತುತ್ತಿರುವವರು ಬಿಜೆಪಿ ನೇತೃತ್ವದ ಸರಕಾರವನ್ನು ದೂರುತ್ತಿದ್ದಾರೆಯೇ ಹೊರತು ಮೂಲ ಸಮಸ್ಯೆಗಳ ಕುರಿತು ಅಲ್ಲ - ಎಂದು ಅವರೆಲ್ಲ ತೀರ್ಮಾನಿಸಿಕೊಂಡಂತಿದೆ. ‘‘ಪ್ರತಿಪಕ್ಷಗಳು ಗೆದ್ದ ಕಡೆಯಲ್ಲೆಲ್ಲ ಇವಿಎಂ ಸರಿ ಇರುತ್ತದೆ; ಬಿಜೆಪಿ ಗೆದ್ದಾಗ ಮಾತ್ರ ಇವಿಎಂ ಸರಿ ಇಲ್ಲ ಎಂದು ದೂರು ಬರುತ್ತದೆ’’ ಎಂದು ಬಿಂಬಿಸುವ ಈ ರೀತಿಯ ಪ್ರಯತ್ನಗಳು, ಇವಿಎಂ ವ್ಯವಸ್ಥೆಯಲ್ಲಿ ವಿಶ್ವಾಸ ಮೂಡಿಸುವುದರ ಬದಲು, ಇನ್ನಷ್ಟು ಸಂದೇಹಗಳನ್ನು ಬಿತ್ತುತ್ತಿವೆ.
ಇವಿಎಂಗಳು ತಾಂತ್ರಿಕವಾಗಿ ನಿಷ್ಪಕ್ಷಪಾತಿ ಎಂಬುದನ್ನು ಕಟ್ಟಕಡೆಯ ಮತದಾರರಿಗೂ ಅರ್ಥ ಆಗುವಂತೆ ತಿಳಿಹೇಳಬೇಕಾಗಿರುವುದು ಚುನಾವಣಾ ಆಯೋಗ. ಈ ಪ್ರಯತ್ನ ವಿಫಲವಾಗಿದ್ದರೆ, ಅದಕ್ಕೆ ಆಯೋಗವೇ ಹೊಣೆ ಹೊರಬೇಕು. ಈ ರೀತಿಯ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸಲು ವಿಫಲರಾದ ವರು, ಆ ಆಯಕಟ್ಟಿನ ಜಾಗಗಳಲ್ಲಿ ಇರಲು ಅರ್ಹರಲ್ಲ ಎಂದೇ ಪರಿಗಣಿಸಬೇಕಾಗುತ್ತದೆ.
ಇವಿಎಂ-ವಿವಿಪಾಟ್ ವ್ಯವಸ್ಥೆಯನ್ನು ಬಳಸಿಕೊಂಡು ನಡೆಯುವ ಚುನಾವಣೆಗಳ ಕುರಿತು ಇರುವ ತಾಂತ್ರಿಕ ತಗಾದೆಗಳನ್ನು ಸದ್ಯಕ್ಕೆ ಬದಿಗಿಟ್ಟು, ಅದು ಸಾಂವಿಧಾನಿಕ ವ್ಯವಸ್ಥೆಗೆ ತಂದಿತ್ತಿರುವ ಹೊಸದೊಂದು ಅಪಾಯದತ್ತ ಗಮನ ಸೆಳೆಯುವುದು ಈ ಬರಹದ ಉದ್ದೇಶ.
ಈಗ ಗುಪ್ತ ಮತದಾನ ಎಲ್ಲುಳಿದಿದೆ?
ಜನಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 94, ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಗುಪ್ತ ಮತದಾನದ ಬಗ್ಗೆ ಹೇಳುತ್ತದೆ. ‘‘Secrecy of voting not to be infringed’’ ಎಂಬುದು ಈ ನೆಲದ ಕಾನೂನು. ಇದನ್ನು ಸುಪ್ರೀಂ ಕೋರ್ಟ್ ಕೂಡ ಖಚಿತಪಡಿಸಿದೆ. ‘‘It is an important postulate of constitutional democracy’’ ಎಂದು ಅದು ತನ್ನ ಒಂದು ತೀರ್ಪಿನಲ್ಲಿ ಹೇಳಿದೆ. (ಉತ್ತರ ಪ್ರದೇಶದ ಒಂದು ಜಿಲ್ಲಾ ಪಂಚಾಯತ್‌ನಲ್ಲಿ ಅವಿಶ್ವಾಸ ಗೊತ್ತುವಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪನ್ನು ಬದಿಗೆ ಸರಿಸಿ, 2022ರ ಜೂನ್ 21ರಂದು ಸುಪ್ರೀಂ ಕೋರ್ಟು ನೀಡಿದ ತೀರ್ಪು ಇದು.)
ಆದರೆ ಈಗ, ಇವಿಎಂ ವ್ಯವಸ್ಥೆಯು ಟೆಕ್ನಾಲಜಿ ಬಳಕೆಯಲ್ಲಿ ಸುಧಾರಿಸುತ್ತಾ ಬಂದಂತೆಲ್ಲ, ಗುಪ್ತ ಮತದಾನವು ನಾಪತ್ತೆಯಾಗಿದೆ. ಚುನಾವಣೆಗಳನ್ನು ಮುಕ್ತ ವಾತಾವರಣದಲ್ಲಿ ನಡೆಸಬೇಕಾದ ಸಾಂವಿಧಾನಿಕ ಹೊಣೆ ಹೊತ್ತಿರುವ ಚುನಾವಣಾ ಆಯೋಗದ ಕಣ್ಗಾವಲಿನ ಅಡಿಯಲ್ಲೇ ಆ ಕಾನೂನು ಉಲ್ಲಂಘನೆ ಆಗುತ್ತಿದೆ.
2004ರಲ್ಲಿ ಇವಿಎಂಗಳನ್ನು ಚುನಾವಣೆಗಳಿಗೆ ವ್ಯಾಪಕವಾಗಿ ಬಳಕೆ ಮಾಡಲು ಆರಂಭಿಸುವುದಕ್ಕೆ ಮೊದಲು, ಮತಪತ್ರಗಳನ್ನು ಬಳಸಿ (ಬ್ಯಾಲಟ್ ಪೇಪರ್) ಚುನಾವಣೆ ನಡೆಯುತ್ತಿದ್ದಾಗ, ಮತ ಎಣಿಕೆಯ ವೇಳೆ, ಒಂದು ಕ್ಷೇತ್ರದ ಎಲ್ಲ ಮತಪತ್ರಗಳನ್ನು ಮಿಶ್ರಣ ಮಾಡಿ ಮತ ಎಣಿಕೆ ಮಾಡಿಸಲಾಗುತ್ತಿತ್ತು. ಆಗ ಯಾರಿಗೂ, ಯಾವ ವಾರ್ಡಿನಲ್ಲಿ ಯಾವ ಮತದಾರರು ಯಾವ ಅಭ್ಯರ್ಥಿಗೆ ಮತ ಹಾಕಿದರೆಂಬುದನ್ನು ನಿಖರವಾಗಿ ಪತ್ತೆ ಹಚ್ಚುವುದು ಕಷ್ಟವಿತ್ತು. ಅಷ್ಟರ ಮಟ್ಟಿಗೆ ಗುಪ್ತ ಮತದಾನದ ಕಲ್ಪನೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿತ್ತು. ಇದರಿಂದಾಗಿ ರಾಜಕೀಯಸ್ಥರು, ತಮಗೆ ಮತ ನೀಡಿಲ್ಲ ಎಂಬ ಕಾರಣಕ್ಕೆ ಬಡಪಾಯಿ ಮತದಾರರ ಮೇಲೆ ದಬ್ಬಾಳಿಕೆ ನಡೆಸಲು ಸಾಧ್ಯ ಆಗುತ್ತಿರಲಿಲ್ಲ. ಆದರೆ ಈಗ, ಇವಿಎಂ-ವಿವಿಪಾಟ್ ಯಂತ್ರಗಳ ಬಳಕೆಯ ಕಾರಣದಿಂದಾಗಿ ಎಲ್ಲವೂ ‘ಪಾರದರ್ಶಕ’ ಆಗಿಬಿಟ್ಟಿವೆ. 2021ರಲ್ಲಿ ಚುನಾವಣಾ (ತಿದ್ದುಪಡಿ) ಕಾಯ್ದೆ 2021 ತಂದು, ಮತದಾರ ಪಟ್ಟಿಗೆ ಆಧಾರ್ ಲಿಂಕ್ ಕೂಡ ಮಾಡಲಾಗಿದೆ.
ನಾಮ ಮಾತ್ರಕ್ಕೆ ಚುನಾವಣೆಗಳನ್ನು ಇನ್ನೂ Conduct of Election Rules 1961 ಅನ್ವಯವೇ ನಡೆಸಲಾಗುತ್ತಿದೆ. ಅದರ ಸೆಕ್ಷನ್ 59ಎ ಅನ್ವಯ ಮತಪತ್ರಗಳನ್ನು ಮಿಶ್ರಣ ಮಾಡಿ ಮತ ಎಣಿಕೆ ಮಾಡಬೇಕು. ಆದರೆ, ಇವಿಎಂಗಳ ಮೂಲಕ ಹಾಗೆ ಮಾಡುವುದು ಸಾಧ್ಯವಿಲ್ಲದ ಸ್ಥಿತಿ ಬಂದಿದೆ. (ಇದಕ್ಕೆ ಇವಿಎಂಗಳ ಮೇಲೆ ನಂಬಿಕೆ ಇಲ್ಲದಿರುವುದರ ಪಾತ್ರವೂ ದೊಡ್ಡದಿದೆ!) ಹಾಗಾಗಿ, ಮತದಾರರ ವಿವರಗಳು ಫಾರ್ಮ್ 20ರ ಮೂಲಕ ರಾಜಕೀಯ ಪಕ್ಷಗಳಿಗೆ ಬಹಿರಂಗವಾಗಿ ಲಭ್ಯವಾಗುತ್ತಿವೆ; ವಾಟ್ಸ್‌ಆ್ಯಪ್ ವಿವಿ ಮೂಲಕ ಹರಿದಾಡುತ್ತಿವೆ! ಈ ಫಾರ್ಮ್ 20ರಲ್ಲಿ, ಪ್ರತೀ ಮತಗಟ್ಟೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೆ ಬಿದ್ದಿರುವ ಮತಗಳ ಖಚಿತ ಲೆಕ್ಕಾಚಾರ ಲಭ್ಯ.
ಮತ ಎಣಿಕೆ ಕೇಂದ್ರದಲ್ಲಿ, ಎಣಿಕೆಗೆ ಮುನ್ನ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 128ನ್ನು ಸ್ತೋತ್ರದಂತೆ ಪಠಿಸಿ, ‘‘ಮತ ಎಣಿಕೆ ಪ್ರಕ್ರಿಯೆಯ ಗೌಪ್ಯತೆ ಕಾಪಾಡಬೇಕು’’ ಎಂದು ಎಚ್ಚರಿಸುವ ಸಂಪ್ರದಾಯ ಅನುಸರಿಸುವುದನ್ನು ಹೊರತುಪಡಿಸಿದರೆ, ಬೇರಾವ ರೀತಿಯಲ್ಲೂ ಈಗ ಚುನಾವಣೆಗಳು ಕಿಂಚಿತ್ತೂ ‘ಗುಪ್ತ ಮತದಾನ’ ಆಗಿ ಉಳಿದಿಲ್ಲ.
ಖಾಸಗಿತನದ ಇನ್ನೊಂದು ಮಗ್ಗುಲು
ಚುನಾವಣಾ ಆಯೋಗದ ಕಡೆಯಿಂದ ತೆರೆದಿರುವ ಮೇಲೆ ವಿವರಿಸಿದ ಕಳ್ಳಗಿಂಡಿ ಒಂದೆಡೆಯಾದರೆ, ಇನ್ನೊಂದೆಡೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಸೇರಿದಂತೆ ಹಲವು ಪರಿಕರಗಳನ್ನು ಬಳಸಿಕೊಂಡು, ಈ ಕಳ್ಳಗಿಂಡಿಯ ಭರಪೂರ ಉಪಯೋಗ ಪಡೆದುಕೊಳ್ಳುತ್ತಿರುವ ರಾಜಕೀಯ ಪಕ್ಷಗಳು, ಪವಿತ್ರವಾದ ಚುನಾವಣಾ ಪ್ರಕ್ರಿಯೆಯನ್ನು ತಮ್ಮ ಅಂಗೈ ಬುಗುರಿ ಮಾಡಿಕೊಂಡಿವೆ.
ಈಗ 10 ವರ್ಷಗಳಿಂದ ಭಾರತ ಸರಕಾರವನ್ನು ನಡೆಸುತ್ತಿರುವ ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷಕ್ಕೆ, ತನ್ನ ಬೂತ್ ಮಟ್ಟಕ್ಕಿಂತಲೂ ಕೆಳಗೆ ‘ಪನ್ನಾ ಪ್ರಮುಖ್’ ಕಾರ್ಯಕರ್ತರಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಅವರ ಬಳಿ ಮತದಾರ ಪಟ್ಟಿಯ ಪುಟವಾರು ವಿವರಗಳಿರುತ್ತವೆ. ಚುನಾವಣಾ ಪ್ರಚಾರದ ವೇಳೆಯಲ್ಲೇ ಹಳೆಯ ಮಾಹಿತಿಗಳನ್ನಾಧರಿಸಿದ ಡೇಟಾ, ಆ ಬಳಿಕ ಮತದಾನಕ್ಕೆ ಬಂದವರ ಬೂತ್ ಏಜೆಂಟ್ ವಿವರ, ಚುನಾವಣಾಧಿಕಾರಿಗಳು ಕೊಡುವ ಫಾರ್ಮ್ 20 -ಇವನ್ನೆಲ್ಲ ಆಧರಿಸಿ, ಅವರು ಬಹಳ ಸುಲಭವಾಗಿ ಪ್ರತೀ ಬೂತಿನ ಯಾವಯಾವ ಮತದಾರರು ಯಾರಿಗೆ ಮತ ಹಾಕಿದ್ದಾರೆಂಬುದನ್ನು ನಿಖರವಾಗಿ ಗುರುತಿಸು ವುದು ಈಗ ಲಭ್ಯ ಇರುವ ತಂತ್ರಜ್ಞಾನಗಳಿಂದ ಸಾಧ್ಯವಿದೆ. ರಾಜಕೀಯ ಪಕ್ಷಗಳ ಬಳಿ ಇರುವ ಈ ಡೇಟಾ ಸಾಂವಿಧಾನಿಕವಾಗಿಯೂ, ಶಾಸನಾತ್ಮಕವಾಗಿಯೂ ಸೂಕ್ಷ್ಮ ಸ್ವರೂಪದ ಡೇಟಾ ಎಂದು ಪರಿಗಣಿತ ಆಗಬೇಕಿತ್ತು.
ಆದರೆ, ಭಾರತದಲ್ಲಿ 2023ರ ಸೆಪ್ಟಂಬರ್ 1ರಿಂದ ಕಾಯ್ದೆ ಆಗಿ ಜಾರಿಯಲ್ಲಿರುವ ಡಿಜಿಟಲ್ ಡೇಟಾ ಸಂರಕ್ಷಣಾ ಕಾಯ್ದೆ 2023, ತಾನು ಬರುವಾಗಲೇ, ದೇಶದ ಬಲುದೊಡ್ಡ ಡೇಟಾ ಫಿಡೂಷರಿಗಳಾದ ಸರಕಾರಗಳು ಮತ್ತು ರಾಜಕೀಯ ಪಕ್ಷಗಳನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಿಸಿಕೊಂಡಿದೆ! ಒಂದು ವೇಳೆ, ಈ ಕಾಯ್ದೆಯ ಅಡಿಯಲ್ಲಿ ರಾಜಕೀಯ ಪಕ್ಷಗಳು ಬಂದಿದ್ದರೆ, ಅವರಿಗೆ ಮತದಾರರ ಸೂಕ್ಷ್ಮ ಡೇಟಾ ಬಳಸುವಲ್ಲಿ ಕಡಿವಾಣ ಹಾಕುವುದು, ಉತ್ತರದಾಯಿತ್ವ ತರುವುದು ಸಾಧ್ಯವಿತ್ತು. ಈಗ ಹಾಗಿಲ್ಲದಿರುವುದರಿಂದ, ಭಾರತ ಸರಕಾರದ ಚುನಾವಣಾ ಡೇಟಾಗಳಿಗೆ ಸ್ಪಷ್ಟ ನಿಯಂತ್ರಣ ಇಲ್ಲದಾಗಿದೆ. ತಂತ್ರಜ್ಞಾನ ಬಳಸಿ ರಾಜಕೀಯ ಪಕ್ಷಗಳು ತಮ್ಮ ಮತದಾರರನ್ನು ನಿಖರವಾಗಿ ಗುರುತಿಸಲು ಅವಕಾಶ ಆಗುತ್ತಿದೆ.
ಪವಿತ್ರವಾದ ಚುನಾವಣಾ ಪ್ರಕ್ರಿಯೆಗೆ ಇವಿಎಂ ಕಡೆಯಿಂದ ಆಗುತ್ತಿರುವ ಅಪಚಾರ ಇದು. ಎಲ್ಲರನ್ನು ಒಳಗೊಳ್ಳಬಲ್ಲ ದೇಶವಾಗಿ ಮುಂದೆ ಸಾಗುವುದಕ್ಕೆ ಇವಿಎಂ ಹೀಗೆ ತೊಡಕಾಗಬಲ್ಲುದು ಎಂದಾ ದರೆ, ಅದು ಬೇಕೇ ಎಂಬ ಬಗ್ಗೆ ಮರುಚಿಂತನೆ ಅಗತ್ಯವಿದೆ. ಇವಿಎಂನ ತಾಂತ್ರಿಕ ಅಂಶಗಳನ್ನು ಮತದಾರರಿಗೆ ಅರ್ಥ ಮಾಡಿಸಲು ಶ್ರಮ ಹಾಕುವ ಬದಲು ಚುನಾವಣಾ ಆಯೋಗ, ತಾನೂ ರಾಜಕಾರಣಿಗಳಂತೆ ವರ್ತಿಸುತ್ತಾ, ಇವಿಎಂ ಬಗ್ಗೆ ಸಂಶಯ ತಳೆದವರಿಗೆಲ್ಲ ‘‘ಸಾಕ್ಷ್ಯ ತನ್ನಿ’’ ಎಂದು ಕೇಳುವುದು ಒಳ್ಳೆಯ ಮೇಲ್ಪಂಕ್ತಿ ಅಲ್ಲ. ನಿಜಕ್ಕೆಂದರೆ, ಅವರು ಸುಪ್ರೀಂ ಕೋರ್ಟ್ ನಿರಾಕರಿಸಿದ ಹೊರತಾಗಿಯೂ, ಸ್ವಯಂಸ್ಫೂರ್ತಿಯಿಂದ ಈ ಬಾರಿಯ ಎಲ್ಲ ವಿವಿಪಾಟ್ ಮತಗಳನ್ನು ಇವಿಎಂ ಫಲಿತಾಂಶಗಳ ಜೊತೆ ತಾಳೆ ಮಾಡಿ ನೋಡುವ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸಕ್ಕೆ ಕೈ ಹಾಕಬೇಕಿತ್ತು. ವಿರೋಧ ಪಕ್ಷಕ್ಕೆ ಜಾಸ್ತಿ ಮತ ಬಂತು ಎಂಬುದು ಇವಿಎಂ ಪಾರದರ್ಶಕ, ಪ್ರಾಮಾಣಿಕ ಆಗಿರುವುದಕ್ಕೆ ಸಾಕ್ಷಿ ಆಗದು.