ಇಂಧನ: ಅಕ್ಕಿಯ ಮೇಲೆ ಆಸೆ; ನೆಂಟರ ಮೇಲೆ ಪ್ರೀತಿ
ಉದಾರೀಕರಣದ 35 ವರ್ಷಗಳ ಬಳಿಕ, ಹೆಚ್ಚಿನಂಶ ಮೊದಲ ಬಾರಿಗೆ ಭಾರತ ಸರಕಾರ ಒಂದು ನಿರ್ಣಾಯಕ ದ್ವಂದ್ವವನ್ನು ಎದುರಿಸುತ್ತಿದೆ. ಇಡೀ ಜಗತ್ತು ಇಂಧನಗಳ ಆಯ್ಕೆಗೆ ಸಂಬಂಧಿಸಿದಂತೆ ಮೂರು ರಸ್ತೆ ಸೇರುವಲ್ಲಿಗೆ ತಲುಪಿದ್ದು, ಅಲ್ಲಿಂದ ಮುಂದೆ ಸರಿಯಾದ ಹಾದಿ ಯಾವುದೆಂಬ ಬಗ್ಗೆ ಎಲ್ಲರಲ್ಲೂ ಗೊಂದಲಗಳಿವೆ. ಭಾರತದಲ್ಲಿ ಈ ಗೊಂದಲಕ್ಕೆ ಹೊಸದೊಂದು ಮಗ್ಗುಲಿದೆ. ಉದಾರೀಕರಣದ ಹೆಸರಲ್ಲಿ ತನ್ನ ಕ್ರೋನಿ ಬಂಡವಾಳಪತಿಗಳಿಗೆ ಅನುಕೂಲ ಮಾಡಿಕೊಡುವ ಖಾಸಗೀಕರಣದ ತಪ್ಪು ಹಾದಿಯಲ್ಲಿರುವ ಭಾರತ ಸರಕಾರವು ಈ ಹಂತದಲ್ಲಿ ಅಗತ್ಯವಾಗಿದ್ದ ಮಾಹಿತಿಯುತ, ತಾರ್ಕಿಕವಾದ ಮತ್ತು ದೀರ್ಘಕಾಲಿಕ ನೆಲೆಯಲ್ಲಿ ದೇಶಕ್ಕೆ ಒಳಿತು ಮಾಡಬಲ್ಲ ನಿಲುವು ತಳೆಯುವ ಬದಲು, ತನ್ನ ಕ್ರೋನಿಗಳಿಗೆ ಏನು ಬೇಕಿದೆಯೋ ಅದೇ ತನ್ನ ಆಯ್ಕೆ ಎಂಬ ನಿಲುವು ತಳೆದಿರುವಂತೆ ಕಾಣಿಸುತ್ತದೆ.
20 ವರ್ಷಗಳ ಹಿಂದೆ ಒಂದು ನರೇಟಿವ್ ಚಾಲ್ತಿಯಲ್ಲಿತ್ತು. ಅದೇನೆಂದರೆ, ಇನ್ನು 30 ವರ್ಷಗಳಲ್ಲಿ ಪಳೆಯುಳಿಕೆ ಇಂಧನಗಳು (fossil fuels) ಸಂಪೂರ್ಣವಾಗಿ ಖಾಲಿಯಾಗಲಿದ್ದು, ಪರ್ಯಾಯ ಇಂಧನ ಮೂಲಗಳು, ಅದರಲ್ಲೂ ನವೀಕರಿಸಿಕೊಳ್ಳಬಲ್ಲ ಇಂಧನ ಮೂಲಗಳನ್ನು ಹುಡುಕಿಕೊಳ್ಳದೆ ಬೇರೆ ಹಾದಿ ಇಲ್ಲ ಎಂಬ ನರೇಟಿವ್ ಅದು. ಆ ಕಾರಣಕ್ಕಾಗಿಯೇ ಭಾರತದಲ್ಲಿ ಸೌರ ವಿದ್ಯುತ್, ಗಾಳಿ ವಿದ್ಯುತ್ ಇತ್ಯಾದಿಗಳೆಲ್ಲ ಸಣ್ಣಕೆ ಚಿಗಿತುಕೊಂಡದ್ದು. ಆದರೆ ಈ ನರೇಟಿವ್ ಇತ್ತೀಚೆಗೆ ತಣ್ಣಗೆ ತನ್ನ ಹಾದಿ ಬದಲಾಯಿಸಿಕೊಂಡಿದೆ. ಅದೀಗ ಜಾಗತಿಕ ತಾಪಮಾನ ಮತ್ತು ಅದರ ಏರಿಕೆಯನ್ನು ತಡೆಯಲು ಗ್ರೀನ್‌ಹೌಸ್ ಅನಿಲಗಳ ನಿಯಂತ್ರಣದ ಚರ್ಚೆಯಾಗಿ ಬದಲಾಗಿರುವುದನ್ನು ನೀವು ಗಮನಿಸಿರಬಹುದು.
2021ರ ನವೆಂಬರ್‌ನಲ್ಲಿ ಭಾರತವು COP26 ಜಾಗತಿಕ ನಿರ್ಣಯದ ಅಡಿಯಲ್ಲಿ, 2070ರ ಹೊತ್ತಿಗೆ ತಾನು ‘ನೆಟ್ ಝೀರೋ’ ಸಾಧಿಸಿಕೊಳ್ಳುವುದಾಗಿ ಪ್ರಕಟಿಸಿದೆ. ಪ್ರಧಾನಮಂತ್ರಿ ನರೇಂದ್ರಮೋದಿಯವರ ಅಂದಿನ ‘ಪಂಚಾಮೃತ’ ಪ್ರಕಟಣೆಯ ಪಂಚ ಅಂಶಗಳು ಈ ಕೆಳಗಿನಂತಿವೆ:
1. 2030ರ ಹೊತ್ತಿಗೆ ದೇಶದಲ್ಲಿ ಪಳೆಯುಳಿಕೆ ಮೂಲದ್ದಲ್ಲದ ಇಂಧನ ಸಾಮರ್ಥ್ಯವನ್ನು 500ಉWಗೆ ಹೆಚ್ಚಿಸಿಕೊಳ್ಳುವುದು.
2. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ (ಉದ್ದಿಮೆಗಳು-ಕೈಗಾರಿಕೆಗಳು) ಇಂಗಾಲದ ಬಳಕೆಯ ಸಾಂದ್ರತೆಯನ್ನು 2005ರಲ್ಲಿ ಇದ್ದುದಕ್ಕೆ ಹೋಲಿಸಿ ನೋಡಿ, 2030ರ ಹೊತ್ತಿಗೆ ಅದರ ಶೇ.45ಗೆ ಇಳಿಸಿಕೊಳ್ಳುವುದು.
3. 2030ರ ಹೊತ್ತಿಗೆ ದೇಶದ ವಿದ್ಯುತ್ ಬೇಡಿಕೆಯ ಶೇ. 50 ಭಾಗ ನವೀಕರಿಸಬಲ್ಲ ಇಂಧನಮೂಲಗಳಿಂದ ಉತ್ಪಾದನೆ ಆಗಬೇಕು.
4. 2030ರ ಹೊತ್ತಿಗೆ ದೇಶ, ಈಗ ಯೋಜಿತವಾಗಿರುವ ಇಂಗಾಲ ಹೊರಸೂಸುವಿಕೆಯಲ್ಲಿ 100 ಕೋಟಿ ಟನ್‌ಗಳಷ್ಟು ತಗ್ಗಿಸಿಕೊಳ್ಳಬೇಕು.
5. 2070ರ ಹೊತ್ತಿಗೆ ನೆಟ್ ಝೀರೊ ಸಾಧಿಸಿಕೊಳ್ಳುವುದು (ಅಂದರೆ, ಜಾಗತಿಕ ತಾಪಮಾನ ಹೆಚ್ಚಿಸುವ ಗ್ರೀನ್‌ಹೌಸ್ ಅನಿಲಗಳ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸಿಕೊಳ್ಳುವುದು.)
ಈ ಐದು ಗುರಿಗಳನ್ನು 2070ರ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಸಾಧಿಸಿಕೊಳ್ಳುವುದಕ್ಕಾಗಿ ವಿದ್ಯುತ್ತಿಗೆ ಪರ್ಯಾಯ ಮೂಲಗಳು, ಸಾರಿಗೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮತ್ತು ಪರ್ಯಾಯ ಇಂಧನ ಮೂಲಗಳು, ಕೈಗಾರಿಕೆಗಳಲ್ಲಿ- ಯಂತ್ರಗಳಲ್ಲಿ- ನಗರೀಕರಣದ ವೇಳೆ ಪರಿಸರ ಸಹ್ಯ ತಂತ್ರಜ್ಞಾನಗಳನ್ನು ಬಳಕೆ ಮಾಡುವುದು ಅನಿವಾರ್ಯ. ಇಂತಹ ಭೂಮಗಾತ್ರದ ಬದಲಾವಣೆಗಳನ್ನು ತರುವುದಕ್ಕೆ ಯಾವುದೇ ಸರಕಾರಕ್ಕಾದರೂ ರಾಜಕೀಯ ಇಚ್ಛಾಶಕ್ತಿ ಮತ್ತು ಬದ್ಧತೆಗಳಿರುವುದು ಬಹಳ ಮುಖ್ಯವಾಗುತ್ತದೆ. ಸರಕಾರವೊಂದು ಇಂತಹದೊಂದು ದಿಟ್ಟ ನೀತಿಯುತವಾದ ನಿರ್ಧಾರ ತಳೆದಾಗ, ಅದು ಲಾಭದ್ದಿರಲೀ-ನಷ್ಟದ್ದಿರಲೀ, ದೇಶದ ಉದ್ಯಮಪತಿಗಳು ಅದನ್ನು ಅನುಸರಿಸದೇ ಅನ್ಯ ಮಾರ್ಗವಿರುವುದಿಲ್ಲ. ಆದರೆ ಇಂದಿನ ಸರಕಾರ, ತನಗೆ ‘‘ವ್ಯವಹಾರಗಳಲ್ಲಿ ತೊಡಗಿಕೊಳ್ಳುವ ಯಾವುದೇ ಇರಾದೆ ಇಲ್ಲ’’ ಎಂದು ಘೋಷಿಸಿಕೊಂಡಿದೆ. ಹಾಗಾಗಿ ಈಗ ಉದಾರೀಕೃತ ಭಾರತದಲ್ಲಿ ಉದ್ಯಮಪತಿಗಳೇ ‘ಹವಾಮಾನ ಬದಲಾವಣೆ’ಯ ಪರಿಣಾಮಗಳನ್ನು ನಿಯಂತ್ರಿಸುವ ಹೊಣೆ ಹೊರಬೇಕಾಗಿದೆ. ಲಾಭವೇ ಸರ್ವೋಚ್ಚವಾಗಿರುವ ಉದ್ಯಮಗಳಿಗೆ ಈ ಬದಲಾವಣೆಗಳು ನಷ್ಟದ ಬಾಬ್ತು. ಹಾಗಾಗಿ ಅವರೆಲ್ಲ ತಮಗೆಲ್ಲಿ ಲಾಭವೋ ಅಲ್ಲಿ ಮಾತ್ರ ಆಸಕ್ತಿ ತೋರಿಸುತ್ತಿದ್ದಾರೆ.
2070ರ ಅಂತಿಮ ಗಡು ಪಾಲಿಸುವುದಕ್ಕಾಗಿ ಸರಕಾರವು ಈಗ ಉದ್ಯಮಪತಿಗಳಿಗೆ ವಯಬಿಲಿಟಿ ಗ್ಯಾಪ್ ಫಂಡಿಂಗ್ (ವಿಜಿಎಫ್) ಅರ್ಥಾತ್ ಸರಕಾರದ ಕಡೆಯಿಂದ ನಷ್ಟ ಭರ್ತಿ ಮಾಡಿಕೊಡುವ ಭರವಸೆ, ಉತ್ಪಾದನೆ ಆಧರಿತ ಪ್ರೋತ್ಸಾಹಧನ (ಪಿಎಲ್‌ಐ) ಮತ್ತು ಸಬ್ಸಿಡಿಗಳ ಮೂಲಕ ಅವರ ಮನವೊಲಿಸಲು ಪ್ರಯತ್ನಿಸುತ್ತಿದೆ. ಒಂದೆಡೆ ಗಡುವಿನೊಳಗೆ ನೆಟ್ ಝೀರೊ ಸಾಧಿಸುವ ಪ್ರಯತ್ನ -ಇನ್ನೊಂದೆಡೆ ತಮ್ಮ ಕ್ರೋನಿಗಳ ಹಿತಾಸಕ್ತಿಗೆ ಧಕ್ಕೆ ಆಗದಂತೆ ಕಾಪಾಡಿಕೊಳ್ಳುವುದು ಸರಕಾರಕ್ಕೆ ಅಕ್ಕಿಯ ಮೇಲೆ ಆಸೆ; ನೆಂಟರ ಮೇಲೆ ಪ್ರೀತಿ ಎಂಬಂತಾಗಿದೆ. ಸರಕಾರದ ಈ ದ್ವಂದ್ವಗಳ ಒಂದೆರಡು ಉದಾಹರಣೆಗಳನ್ನಷ್ಟೇ ಇಲ್ಲಿ ಕೊಡುತ್ತಿದ್ದೇನೆ.
ಮೊದಲನೆಯದಾಗಿ, ಭಾರತವು ಸದ್ಯ 2031-32ನೇ ಸಾಲಿಗೆ ಮುನ್ನ ತನ್ನ ವಿದ್ಯುತ್ ಉತ್ಪಾದನೆಯಲ್ಲಿ ಶೇ. 50ನ್ನು ನವೀಕರಿಸಬಹುದಾದ ಇಂಧನಮೂಲಗಳಿಂದ ಪಡೆಯಬೇಕು ಎಂದಾದರೆ, ಪ್ರತೀವರ್ಷ 40GW ಸಾಮರ್ಥ್ಯದ ಹೊಸ ವಿದ್ಯುತ್ ಸ್ಥಾವರಗಳ ಸ್ಥಾಪನೆ ಆಗಬೇಕಿದೆ. 2023 ಅಕ್ಟೋಬರ್ ಹೊತ್ತಿಗೆ ಭಾರತದಲ್ಲಿದ್ದ ನವೀಕರಿಸಬಲ್ಲ ಮೂಲಗಳ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 130GW. ಎಪ್ರಿಲ್ 2022-ಮಾರ್ಚ್ 2023ರ ನಡುವೆ ದೇಶದಲ್ಲಿ ಸ್ಥಾಪನೆ ಆಗಿರುವುದು ಕೇವಲ 15GW ಸಾಮರ್ಥ್ಯ. ಇದು ಒಂದು ಮಗ್ಗುಲಾದರೆ, ಇನ್ನೊಂದೆಡೆ, ಭಾರತವು ತಾನು ಭಾಷಣಗಳಲ್ಲಿ ಪ್ರತಿಪಾದಿಸಿದಂತೆ ಕಲ್ಲಿದ್ದಲು ಆಧರಿತ ಉಷ್ಣವಿದ್ಯುತ್ ಸ್ಥಾವರಗಳಲ್ಲಿ ಹಂತಹಂತವಾಗಿ ಉತ್ಪಾದನೆ ತಗ್ಗಿಸುವ ಬದಲು, ಹೊಸ ಉಷ್ಣವಿದ್ಯುತ್ ಸ್ಥಾವರಗಳಿಗೆ ಪ್ರೋತ್ಸಾಹ ನೀಡುತ್ತಿದೆ! ಮುಂದಿನ ಒಂದೆರಡು ವರ್ಷಗಳಲ್ಲಿ, ಖಾಸಗಿ ಸಹಭಾಗಿತ್ವದಲ್ಲಿ 7.28 ಲಕ್ಷ ಕೋಟಿ ರೂ. ವೆಚ್ಚದಲ್ಲಿ, 91GW ಸಾಮರ್ಥ್ಯದ ಹೊಸ ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುವುದು ಎಂದು ವಿದ್ಯುತ್ ಸಚಿವಾಲಯ ಇತ್ತೀಚೆಗೆ ಹೇಳಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ!
ಎರಡನೆಯದಾಗಿ, ಭಾರತ ತನ್ನ ಸಾರಿಗೆ ವ್ಯವಸ್ಥೆಯನ್ನು ವಿದ್ಯುತ್ ಚಾಲಿತ ಅಥವಾ ಹೈಡ್ರೋಜನ್ ಚಾಲಿತ ವ್ಯವಸ್ಥೆಗೆ ಬದಲಾಯಿಸಿಕೊಳ್ಳಬೇಕಿದೆ. ಈ ಕುರಿತ ತೀರ್ಮಾನಗಳು ಎಷ್ಟು ಗೊಂದಲಮಯವಾಗಿವೆ ಎಂದರೆ, ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಅಗತ್ಯ ಇರುವ ಈ ವಲಯದಲ್ಲಿ ಹೂಡಿಕೆದಾರರಿಗೆ ವಿಶ್ವಾಸ ಮೂಡಿಸಬಲ್ಲ ನೀತ್ಯಾತ್ಮಕ ಚೌಕಟ್ಟನ್ನು ರೂಪಿಸಿಕೊಳ್ಳುವುದು ಕೂಡ ಈ ವರೆಗೆ ಸಾಧ್ಯವಾಗಿಲ್ಲ. ಮೊದಲು FAME-1 (2015-2019), FAME-2 (2019ರಿಂದ) ಅಡಿಯಲ್ಲಿ ವಿದ್ಯುತ್ ಮತ್ತು ಹೈಬ್ರಿಡ್ ವಾಹನಗಳ ಉತ್ಪಾದನೆಗೆ ಪ್ರೋತ್ಸಾಹ ಕೊಡಲಾಯಿತಾದರೂ, ಇಂದಿಗೂ ವಿದ್ಯುತ್ ವಾಹನಗಳು ಗ್ರಾಹಕರ ಪೂರ್ಣ ವಿಶ್ವಾಸ ಗಳಿಸಿಕೊಂಡಿಲ್ಲ. ದೇಶದಾದ್ಯಂತ ವಿದ್ಯುತ್ ಚಾರ್ಜಿಂಗ್ ಸ್ಟೇಶನ್ ಜಾಲ, ಬ್ಯಾಟರಿಗಳ ಸಾಮರ್ಥ್ಯವರ್ಧನೆ-ಬ್ಯಾಟರಿ ಸ್ವಾಪಿಂಗ್ ನೀತಿ ಇನ್ನೂ ಸ್ಪಷ್ಟ ಆಗಿಲ್ಲ. ಈ ನಡುವೆ FAME ಸೌಲಭ್ಯಗಳನ್ನು ಇವಿ ಕಂಪೆನಿಗಳು ದುರುಪಯೋಗ ಪಡಿಸಿಕೊಂಡಿವೆ ಎಂಬ ದೂರುಗಳು ಧಾರಾಳ ಕೇಳಿಸುತ್ತಿವೆ. ಇವೆಲ್ಲದರ ನಡುವೆ, 2024-25ರ ಬಜೆಟ್‌ನಲ್ಲಿ FAME-3 ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಇದೆಲ್ಲ ಅಸ್ತವ್ಯಸ್ತವಾಗಿರುವಂತೆಯೇ ಸರಕಾರಕ್ಕೆ ಹಠಾತ್ತಾಗಿ ಹೈಡ್ರೋಜನ್ ಇಂಧನದ ಮೇಲೆ ಪ್ರೀತಿ ಉಕ್ಕೇರಿದ್ದು, 2023 ಜನವರಿಯಲ್ಲಿ 19,744 ಕೋಟಿ ರೂ.ಗಳ ಗಾತ್ರದ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅನ್ನು ಪ್ರಕಟಿಸಿದೆ. ಅದರ ಬೆನ್ನಲ್ಲೇ ಅದಾನಿ ಬಳಗ ಮುಂದಿನ 10 ವರ್ಷಗಳಲ್ಲಿ 4,000 ಕೋಟಿ ಡಾಲರ್ ಮತ್ತು ಅಂಬಾನಿ ಬಳಗ 2,000 ಕೋಟಿ ಡಾಲರ್‌ಗಳನ್ನು ಈ ರಂಗದಲ್ಲಿ ಹೂಡಿಕೆ ಮಾಡುವುದಾಗಿ ಪ್ರಕಟಿಸಿವೆ.
ಸದ್ಯದ ಸ್ಥಿತಿಯಲ್ಲಿ, ನಾವು ಇಲೆಕ್ಟ್ರಿಕ್ ವಾಹನಗಳ ಹಾದಿಯಲ್ಲಿದ್ದೇವೆಯೋ, ಹೈಡ್ರೋಜನ್ ಚಾಲಿತ ವಾಹನಗಳ ಹಾದಿಯಲ್ಲಿದ್ದೇವೆಯೋ ಅಥವಾ ಹೈಡ್ರೋಜನ್ ಕೂಡ ವಿದ್ಯುತ್ ಉತ್ಪಾದನೆಗೆ ಬಳಕೆ ಆಗಲಿದೆಯೋ, ವಾಹನ ಉತ್ಪಾದಕರಿಗೆ ಮುಂದೇನು ಎಂಬ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಾಗಿದೆಯೇ ಎಲ್ಲವೂ ಗೊಂದಲವೇ. ಕ್ರೋನಿಗಳೂ ತಮ್ಮ ಲಾಭ ಮಾತ್ರ ನೋಡುತ್ತಿದ್ದಾರೆಯೇ ಹೊರತು ದೇಶದ ಭವಿಷ್ಯದ ಕಲ್ಪನೆ ಅವರಿಗೆ ಇದ್ದಂತಿಲ್ಲ.