ಇವರ ಟ್ರಸ್ಟು ಮತ್ತು ಅವರ ಆ್ಯಂಟಿಟ್ರಸ್ಟು
ಇದಕ್ಕೆಲ್ಲ ‘ಗೂಗಲ್’ ಮಾಡಿದ್ದೇ ಕಾರಣ!
ಮೊನ್ನೆ ಅಕ್ಟೋಬರ್ 16ರಂದು ಭಾರತದ ಪ್ರಧಾನಮಂತ್ರಿಗಳು ಗೂಗಲ್ ಹಾಗೂ ಅದರ ಹೋಲ್ಡಿಂಗ್ ಕಂಪೆನಿ ಆಲ್ಫಾಬೆಟ್‌ನ ಸಿಇಒ, ಭಾರತೀಯ ಮೂಲದ ಸುಂದರ್ ಪಿಚೈ ಅವರ ಜೊತೆ ಆನ್‌ಲೈನ್ ಮಾತುಕತೆ ನಡೆಸಿದ್ದು ದೊಡ್ಡ ಸುದ್ದಿ ಆಗುವಂತೆ ಸರಕಾರ ಮತ್ತದರ ಪರ ಮಾಧ್ಯಮಗಳು ಎಚ್ಚರದಿಂದ ನೋಡಿಕೊಂಡವು. ಆ ಮಾತುಕತೆಯ ವೇಳೆ, ಭಾರತದಲ್ಲಿ ಇಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯಲ್ಲಿ ಗೂಗಲ್ ಪಾತ್ರವನ್ನು ಪ್ರಧಾನಿ ಶ್ಲಾಘಿಸಿದರೆ, ಭಾರತದಲ್ಲಿ ತಮ್ಮ ವ್ಯವಹಾರಗಳನ್ನು ಇನ್ನಷ್ಟು ವಿಸ್ತರಿಸುವ ಭರವಸೆಯನ್ನು ಸುಂದರ್ ನೀಡಿದರು. ಕೊನೆಯಲ್ಲಿ, ಈ ವರ್ಷ ಡಿಸೆಂಬರಿನಲ್ಲಿ, ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆ ಶೃಂಗಸಭೆಯಲ್ಲಿ (ಜಿಪಿಎಐ) ಭಾಗವಹಿಸುವಂತೆ ಸುಂದರ್ ಅವರನ್ನು ಮೋದಿ ವಿನಂತಿಸಿಕೊಂಡರು.
ಜಾಗತೀಕರಣಗೊಂಡ ಮಾರುಕಟ್ಟೆಯಲ್ಲಿ ಕಂಪೆನಿಗಳ ಮುಖ್ಯಸ್ಥರು ತಮ್ಮ ವ್ಯವಹಾರ ಹಿತಾಸಕ್ತಿಗಳ ರಕ್ಷಣೆಗಾಗಿ ದೇಶಗಳ ಮುಖ್ಯಸ್ಥರನ್ನು ಭೇಟಿ ಮಾಡುವುದು ತೀರಾ ಸಾಮಾನ್ಯ. ಇಂತಹ ಕೆಲವು ‘ಜಯಂಟ್’ ಕಂಪೆನಿಗಳು ಈಗ ಹಲವು ದೇಶಗಳ ಆರ್ಥಿಕತೆಯ ಗಾತ್ರವನ್ನೂ ಮೀರಿ ಬೆಳೆದಿರುವುದರಿಂದ, ಅವರ ಕಾರ್ಪೊರೇಟ್ ಹಿತಾಸಕ್ತಿಗಳು ಮತ್ತು ಬೇರೆ ದೇಶಗಳ ಜತೆ ಅವರ ಸಂಬಂಧಗಳು ಆಗಾಗ ಸುದ್ದಿ ಆಗುವುದಿದೆ.
ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಮೆಟಾ ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಝುಕರ್‌ಬರ್ಗ್ ಅವರೊಂದಿಗೆ ನಡೆಸಿದ್ದ ಭೇಟಿಗಳು ಮತ್ತು 2014 ಹಾಗೂ 2019ರ ಚುನಾವಣೆಗಳಲ್ಲಿ ಮೆಟಾ ಉತ್ಪನ್ನಗಳಾದ ‘ಫೇಸ್‌ಬುಕ್’ ಹಾಗೂ ‘ವಾಟ್ಸ್‌ಆ್ಯಪ್’ಗಳ ಪಾತ್ರ ಈಗಾಗಲೇ ಬಹುಚರ್ಚಿತ. ಈ ಬಾರಿ ಚುನಾವಣೆಗೆ ಇನ್ನು ಆರು ತಿಂಗಳಿದೆ ಎನ್ನುವಾಗ ಈ ಅಂತಹದೇ ಹೈಪ್ರೊಫೈಲ್ ಮಾತುಕತೆ ಕುತೂಹಲಕ್ಕೆ ಕಾರಣವಾಗಿರುವುದು ಅಸಹಜವೇನಲ್ಲ. ಮೇಲೆ ಹೇಳಿರುವ ಜಿಪಿಎಐ ಶೃಂಗಸಭೆ (ಇದು ನಡೆಯುತ್ತಿರುವುದು ಜಾಗತಿಕ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ-ಒಇಸಿಡಿಯ ಅಡಿಯಲ್ಲಿ) ಒಂದು ಸಾಮಾನ್ಯ ಸಮ್ಮೇಳನವಾಗಿದ್ದು, ಈ ಬಾರಿ ಅದರ ಅಧ್ಯಕ್ಷರು ಭಾರತದ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್. ಇಂತಹದೊಂದು ಯಾವತ್ತೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಲ್ಫಾಬೆಟ್ ಮುಖ್ಯಸ್ಥರಿಗೆ ಸ್ವತಃ ದೇಶದ ಪ್ರಧಾನಮಂತ್ರಿಗಳೇ ಆಹ್ವಾನ ನೀಡುವುದು ಸ್ವಲ್ಪ ಅಸಹಜವೇ. ಏಕೆಂದರೆ ಭಾರತ ಇನ್ನೂ ಒಇಸಿಡಿಯ ಅಧಿಕೃತ ಸದಸ್ಯ ದೇಶವೂ ಅಲ್ಲ!
ಏಕಸ್ವಾಮ್ಯದ ಸಾಮ್ರಾಜ್ಯ
ಗೂಗಲ್ ಮತ್ತದರ ಹೋಲ್ಡಿಂಗ್ ಸಂಸ್ಥೆ ಆಲ್ಫಾಬೆಟ್, ಮಾರುಕಟ್ಟೆಯಲ್ಲಿ ತಮ್ಮ ಏಕಸ್ವಾಮ್ಯ ಸಾಧಿಸಿಕೊಳ್ಳುವ ಹಠಕ್ಕೆ ಬಿದ್ದು ಈಗಾಗಲೇ ಹಲವಾರು ದೇಶಗಳಲ್ಲಿ ಕಾನೂನು ಸಮರ ಎದುರಿಸುತ್ತಿವೆ. ತನ್ನ ಸರ್ಚ್ ಎಂಜಿನ್ ‘ಗೂಗಲ್’ ಅನ್ನು ‘ನಾಮಪದ’ ಮಾತ್ರವಲ್ಲದೆ ‘ಕ್ರಿಯಾಪದ’ವಾಗಿಯೂ ಮಾಡಿಕೊಂಡ ಶಕ್ತಿಶಾಲಿ ಬ್ರ್ಯಾಂಡ್ ಗೂಗಲ್, ಸರ್ಚ್ ಎಂಜಿನ್ ಮಾರುಕಟ್ಟೆಯಲ್ಲಿ ಬೇರೆ ಸ್ಪರ್ಧಿಗಳಿಗೆ ಅವಕಾಶ ಕೊಡದಿರುವುದು, ಮೊಬೈಲ್ ಫೋನುಗಳಲ್ಲಿ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮೂಲಕ ಏಕಸ್ವಾಮ್ಯ ಹಾಗೂ ಅದರ ಮೂಲಕ ತಮ್ಮ ಕ್ರೋಮ್, ಯುಟ್ಯೂಬ್ ಮತ್ತಿತರ ಉತ್ಪನ್ನಗಳ ಒತ್ತಾಯಪೂರ್ವಕ ತುರುಕುವಿಕೆ, ಆನ್‌ಲೈನ್ ಜಾಹೀರಾತುಗಳಲ್ಲಿ ಏಕಸ್ವಾಮ್ಯ.. ಹೀಗೆ ಹಲವಾರು ಕಾರಣಗಳಿಂದಾಗಿ ಪ್ರತಿರೋಧ ಎದುರಿಸುತ್ತಿದೆ. ಯುರೋಪಿಯನ್ ಯೂನಿಯನ್ (ಇಯು) ಹಾಗೂ ಅಮೆರಿಕಗಳು ಗೂಗಲ್ ಮೇಲೆ ಆ್ಯಂಟಿಟ್ರಸ್ಟ್ ಕೇಸುಗಳನ್ನು ದಾಖಲಿಸಿದ್ದು, ಇಯು ಈಗಾಗಲೇ ಅವರಿಗೆ 240 ಕೋಟಿ ಯುರೋಗಳ ದಂಡ ವಿಧಿಸಿದೆ (2017). ಅಮೆರಿಕದಲ್ಲಿ ಕೂಡಾ ಗೂಗಲ್ ಸರ್ಚ್ ಎಂಜಿನ್ ಏಕಸ್ವಾಮ್ಯದ ವಿರುದ್ಧ ಆ್ಯಂಟಿಟ್ರಸ್ಟ್ ದಾವೆ ವಿಚಾರಣೆ ನಡೆಯುತ್ತಿದೆ.
ಅಮೆರಿಕದ ಆ್ಯಂಟಿಟ್ರಸ್ಟ್ ಕಾಯ್ದೆಯು ಯಾವುದೇ ಒಂದು ಕಂಪೆನಿಗೆ ಒಂದು ನಿರ್ದಿಷ್ಟ ಉತ್ಪನ್ನದ ಮಾರುಕಟ್ಟೆಯ ಮೇಲೆ ಏಕಸ್ವಾಮ್ಯ ಹೊಂದಲು ಅವಕಾಶ ಕೊಡುವುದಿಲ್ಲ. ಅಮೆರಿಕ, ಇಯು ಮಾತ್ರವಲ್ಲದೆ ಆ್ಯಪಲ್, ಮೈಕ್ರೊಸಾಫ್ಟ್‌ನಂತಹ ಕಂಪೆನಿಗಳೂ ಗೂಗಲ್ ಏಕಸ್ವಾಮ್ಯದ ವಿರುದ್ಧ ಕಾನೂನು ತಕರಾರು ಎತ್ತಿದ್ದಿದೆ.
ಭಾರತದಲ್ಲೂ ದಂಡ ವಿಧಿಸಿದ್ದರು
ಬೇರೆ ದೇಶಗಳು ಬಿಡಿ. ಸ್ವತಃ ಭಾರತದಲ್ಲೂ ಗೂಗಲ್‌ನ ಆನ್‌ಲೈನ್ ಜಾಹೀರಾತು ಮತ್ತು ಸರ್ಚ್ ಎಂಜಿನ್‌ಗಳ ಏಕಸ್ವಾಮ್ಯದ ಸ್ವರೂಪದ ಬಗ್ಗೆ ತನಿಖೆ ನಡೆದಿದೆ; ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಏಕಸ್ವಾಮ್ಯದ ಉಡಾಫೆ ತೋರಿಸಿದ್ದಕ್ಕಾಗಿ ಭಾರತದ ಕಾಂಪಿಟಿಷನ್ ಕಮಿಷನ್ (ಸಿಸಿಐ)ಯು ಗೂಗಲ್‌ಗೆ 1,338 ಕೋಟಿ ರೂ.ಗಳ ದಂಡ ವಿಧಿಸಿತ್ತು (2022) ಮತ್ತು ಈ ಬಗ್ಗೆ ಗೂಗಲ್ ಸಲ್ಲಿಸಿದ ಮೇಲ್ಮನವಿಯನ್ನು ಭಾರತದ ಕಂಪೆನಿ ವ್ಯವಹಾರ ಕಾನೂನುಗಳ ಮೇಲ್ಮನವಿ ಮಂಡಳಿಯು (ಎನ್‌ಸಿಎಲ್‌ಎಟಿ) ತಿರಸ್ಕರಿಸಿ, ಈ ದಂಡ ವಿಧಿಸಿದ್ದು ಸರಿ ಎಂದು ತೀರ್ಮಾನಿಸಿತ್ತು (2023 ಮಾರ್ಚ್).
ಹೇಗೆ
ನಿಭಾಯಿಸಬೇಕು?
ಈ ‘ಜಯಂಟ್’ ಬಹುರಾಷ್ಟ್ರೀಯ ಕಾರ್ಪೊರೇಷನ್‌ಗಳು ತಮಗೆ ವಿಧಿಸಲಾದ ದಂಡದ ಮೊತ್ತವನ್ನು ಸುಲಭವಾಗಿ ವಿಧಿಸಿದವರ ಮುಖಕ್ಕೆ ಎಸೆದು, ಮತ್ತದೇ ಹಪಾಹಪಿಯೊಂದಿಗೆ ಮಾರುಕಟ್ಟೆಯಲ್ಲಿ ಮುನ್ನುಗ್ಗುವ ‘ಉಡಾಫೆ’ ತೋರಿಸುವಾಗ, ಅವುಗಳ ಜೊತೆ ಸರಕಾರಗಳು ಎಚ್ಚರಿಕೆಯಿಂದ ವ್ಯವಹರಿಸಬೇಕಾದುದು ಅಪೇಕ್ಷಣೀಯ. ಚೀನಾದ ಉಡಾಫೆಯನ್ನು ಹಣಿಯಲು ಅಂತಹದೇ ಇನ್ನೊಂದು ಉಡಾಫೆಯನ್ನು ಒಳಬಿಟ್ಟುಕೊಂಡು, ಅದು ನಮ್ಮ ಮಟ್ಟಿಗೆ ಕಾವಲಿಯಿಂದ ಬೆಂಕಿಗೆ ಬಿದ್ದ ಸ್ಥಿತಿ ಆಗಬಾರದು.
ಈಗ ಸಾರ್ವತ್ರಿಕ ಚುನಾವಣೆಗಳಿಗೆ ಆರು ತಿಂಗಳಿರುವಾಗ ಗುಜರಾತಿನ ಗಾಂಧಿನಗರದ GIFT ಸಿಟಿ (ಗುಜರಾತ್ ಇಂಟರ್‌ನ್ಯಾಷನಲ್ ಫಿನ್‌ಟೆಕ್ ಸಿಟಿ)ಯಲ್ಲಿ ಗೂಗಲ್‌ನ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆಗಳ ಕೇಂದ್ರವನ್ನು ಸ್ಥಾಪಿಸುವಂತೆ ರತ್ನಗಂಬಳಿ ಹಾಸಲಾಗುತ್ತಿದೆ. ಈಗಾಗಲೇ ತನ್ನ GPay ಮೂಲಕ ಯುಪಿಐ ಪಾವತಿ ಸೇವಾದಾತ ಸಂಸ್ಥೆ ಆಗಿ, ಆ ಮಾರುಕಟ್ಟೆಯಲ್ಲಿ ಅಂದಾಜು ಶೇ. 35 ಭಾಗವನ್ನು ಆವರಿಸಿಕೊಂಡಿರುವ ಗೂಗಲ್, ಭಾರತದಲ್ಲಿ ತನ್ನ GPayಗೆ 56 ಲಕ್ಷ ಬಳಕೆದಾರರನ್ನು ಹೊಂದಿದೆ.
ಇಂತಹ ಆಯಕಟ್ಟಿನ ಜಾಗಗಳಲ್ಲಿ ಏಕಸ್ವಾಮ್ಯವನ್ನು ‘ವ್ಯಸನ’ ಮಾಡಿಕೊಂಡಿರುವ ಹಿನ್ನೆಲೆ ಇರುವ ಸಂಸ್ಥೆಗಳಿಗೆ ಪ್ರೋತ್ಸಾಹ ಸಹಿತ ಅವಕಾಶ ತೆರೆಯುವುದು ಜಾಣತನ ಅಲ್ಲ. ಚುನಾವಣೆಗಳ ಆಸುಪಾಸಿನಲ್ಲಿ ಕ್ರಿಪ್ಟೋ ಕರೆನ್ಸಿಗಳು, ಬೇನಾಮಿ ಡಿಜಿಟಲ್ ಪಾವತಿಗಳು ಕಳ್ಳವ್ಯವಹಾರದ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಇಂತಹ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಗಮನಿಸುವುದು ಪ್ರಜಾತಂತ್ರದ ಆರೋಗ್ಯದ ದೃಷ್ಟಿಯಿಂದ ಅಗತ್ಯವಿದೆ. ಕನಿಷ್ಠಪಕ್ಷ ಇಂತಹ ಆಧುನಿಕ ಆರ್ಥಿಕ ಟೂಲ್‌ಗಳಿಗೆ ಸಂಬಂಧಿಸಿ ಕಟ್ಟುನಿಟ್ಟಾದ ಡಿಜಿಟಲ್ ಕಾನೂನಿನ ಚೌಕಟ್ಟನ್ನಾದರೂ ದೇಶ ಹೊಂದುವ ಕೆಲಸ ತುರ್ತಾಗಿ ಆಗಬೇಕಿದೆ. ಅದಿಲ್ಲದಿದ್ದರೆ ಮೊದಲು ನೀರಿಗೆ ಬಿದ್ದು, ಆ ಬಳಿಕ ಈಜು ಕಲಿಯಬೇಕಾದ ದುರ್ದೆಸೆ ನಮ್ಮದಾಗಲಿದೆ.