ಔಷಧಿ ಸಿಗುತ್ತಿಲ್ಲ ಎಂದರೆ ಅದು ದುಷ್ಪ್ರೇರಣೆ ಆಗುವುದು ಹೇಗೆ?!
ಕೋವಿಡ್ ಜಗನ್ಮಾರಿ ಸಾಮಾಜಿಕವಾಗಿ ಬೀರಿರುವ ದೀರ್ಘಕಾಲಿಕ ಅಡ್ಡಪರಿಣಾಮಗಳಲ್ಲಿ ಕ್ಷಯ ರೋಗದ ಹತೋಟಿ ತಪ್ಪಿರುವುದು ಕೂಡ ಒಂದು. ಅದರ ಪರಿಣಾಮಗಳು ಈಗ ಕಾಣಿಸತೊಡಗಿವೆ. ಜೊತೆಗೆ ಆಡಳಿತಾತ್ಮಕ ನಿರ್ಲಕ್ಷ್ಯದ ಕಾರಣದಿಂದಾಗಿ ಕ್ಷಯದ ಔಷಧಿಗಳು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ಎಂಬ ದೂರು ಎದ್ದಿದೆ. ಆ ದೂರನ್ನು ಸಹಾನುಭೂತಿಯಿಂದ ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವ ಬದಲು, ಆ ಅಪವಾದ ಸುಳ್ಳು. ಅದು ತಪ್ಪು ಹಾದಿಗೆ ಎಳೆಯುವಂತಹದು ಮತ್ತು ದುಷ್ಪ್ರೇರಣೆಯಿಂದ ಹುಟ್ಟಿದ್ದು ಎಂದು ಸ್ವತಃ ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಇಲಾಖೆ ಆಪಾದಿಸಿದೆ.
ಜಗತ್ತಿನ ಒಟ್ಟು ಕ್ಷಯ ರೋಗಿಗಳಲ್ಲಿ ನಾಲ್ಕನೇ ಒಂದು ಭಾಗ ಭಾರತದಲ್ಲೇ ಇದ್ದಾರೆ. 2022ನೇ ವರ್ಷದ ಅಂತ್ಯಕ್ಕೆ ಭಾರತದಲ್ಲಿ 24.2 ಲಕ್ಷ ಕ್ಷಯ ರೋಗಿಗಳನ್ನು ಗುರುತಿಸಲಾಗಿದೆ. ಇದು 2021ಕ್ಕೆ ಹೋಲಿಸಿದರೆ ಶೇ. 13 ಹೆಚ್ಚಳ ಎಂದು ಸ್ವತಃ ಸರಕಾರದ ದಾಖಲೆಗಳು ಹೇಳುತ್ತವೆ. ಅಂದರೆ, ಪ್ರತೀ ಒಂದು ಲಕ್ಷ ಜನಸಂಖ್ಯೆಗೆ ಅಂದಾಜು 172 ಕ್ಷಯ ಪ್ರಕರಣಗಳು. ಆರು ತಿಂಗಳಿನಿಂದ ಎರಡು ವರ್ಷಗಳ ತನಕದ ಸುದೀರ್ಘ ಚಿಕಿತ್ಸೆ ಬೇಡುವ ಈ ಒಂದು ಕಾಲದ ಮಾರಕ ರೋಗಕ್ಕೆ ಈಗ ಇರುವ ಹೊಸ ಸವಾಲು ಎಂದರೆ, ಈ ಸುದೀರ್ಘ ಚಿಕಿತ್ಸೆಯನ್ನು ಅರ್ಧದಲ್ಲಿ ಕೈಬಿಡುವ ಮತ್ತಿತರ ಹಲವು ಕಾರಣಗಳಿಂದಾಗಿ ಸಾಮಾನ್ಯ ಔಷಧಿಗಳಿಗೆ ಬಗ್ಗದ ಕ್ಷಯರೋಗ (ಡಿಆರ್‌ಟಿಬಿ)ದ ಪ್ರಮಾಣ ಏರುತ್ತಿರುವುದು.
ಕೋವಿಡ್ ಕಾಲದಲ್ಲಿ ಲಾಕ್‌ಡೌನ್ ನಿರ್ಬಂಧ ಹಾಗೂ ಆ ಬಳಿಕ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಯ ಕಡೆಗೆ ಹೆಚ್ಚಿನ ಗಮನ ಹರಿದ ಕಾರಣದಿಂದಾಗಿ, ಸರಕಾರಿ ದಾಖಲೆಗಳಲ್ಲಿ ಕ್ಷಯ ರೋಗಿಗಳ ಪ್ರಮಾಣ ಗಮನಾರ್ಹವಾಗಿ ಕಡಿಮೆ ದಾಖಲಾಗಿತ್ತು. ಆದರೆ ಈಗ ಈ ಪ್ರಮಾಣ ಅಸಹಜವಾಗಿ ಏರಿಕೆ ಕಾಣಿಸಿಕೊಳ್ಳತೊಡಗಿದೆ. ಜಗತ್ತು 2030ರ ಒಳಗೆ ಕ್ಷಯ ರೋಗದಿಂದ ಮುಕ್ತವಾಗಬೇಕೆಂದು ಬಯಸಿದ್ದರೆ, ಭಾರತವು 2025ರ ಒಳಗೇ ಕ್ಷಯ ಮುಕ್ತ ಆಗಬೇಕೆಂದು ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಪ್ರಧಾನ ಮಂತ್ರಿಗಳು ವಾರಣಾಸಿಯಲ್ಲಿ ಕರೆಕೊಟ್ಟಿದ್ದರು.
ಕ್ಷಯ ಮುಕ್ತವಾಗಲು ಈಗಾಗಲೇ ಇರುವ ರೋಗಿಗಳಲ್ಲಿ ಕ್ಷಯ ರೋಗ ಗುಣವಾಗಬೇಕು ತಾನೆ? ಅದಕ್ಕೆ ಔಷಧಿಗಳು ಸಕಾಲಿಕವಾಗಿ ಸಿಗಬೇಕು. ದುರದೃಷ್ಟವಶಾತ್ ಹಾಗೆ ಆಗುತ್ತಿಲ್ಲ. ಈ ಬಗ್ಗೆ ಇತ್ತೀಚೆಗೆ Survivors Against TB (SATB) ಎಂಬ ಸ್ವಯಂಸೇವಾ ಸಂಸ್ಥೆಯು ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಮನ್‌ಸುಖ್ ಮಾಂಡವೀಯ ಅವರಿಗೆ ಪತ್ರ ಬರೆದಿತ್ತು. ಆ ಪತ್ರದಲ್ಲಿ, ಕ್ಷಯಕ್ಕೆ ಅಗತ್ಯ ಔಷಧಿಗಳಾಗಿರುವ ಲಿನೆಜೋಲಿಡ್, ಕ್ಲೋಫಾಜಿಮೈನ್, ಸೈಕ್ಲೊಸೆರೈನ್ ಇತ್ಯಾದಿಗಳು ಸರಕಾರಿ ಆಸ್ಪತ್ರೆಗಳಲ್ಲಾಗಲೀ, ಖಾಸಗಿ ಔಷಧಿ ಅಂಗಡಿಗಳಲ್ಲಾಗಲೀ ಅಗತ್ಯಕ್ಕೆ ತಕ್ಕಂತೆ ಸಿಗುತ್ತಿಲ್ಲ ಎಂದು ದೂರಲಾಗಿತ್ತು. ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಸಮಸ್ಯೆ ಇದೆ ಎಂದು ಈ ವರ್ಷ ಆಗಸ್ಟ್ ಕೊನೆಯ ವಾರದಲ್ಲಿ ಬರೆಯಲಾಗಿದ್ದ ಈ ಪತ್ರದಲ್ಲಿ ವಿವರಿಸಲಾಗಿತ್ತು.
ಕರ್ನಾಟಕದಲ್ಲಿ ಕೂಡ ಇಂತಹದೇ ಸ್ಥಿತಿ ಇದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿತ್ತು. ರಾಜ್ಯದಲ್ಲಿ 1,870 ಮಂದಿ ಡಿಆರ್‌ಟಿಬಿ ರೋಗಿಗಳಿದ್ದು, ಅವರಿಗೆ ಸರಕಾರದ DOTS ಮತ್ತು DOTS ಪ್ಲಸ್ ಚಿಕಿತ್ಸಾ ಕೇಂದ್ರಗಳಲ್ಲಿ ಸೈಕ್ಲೊಸೆರೈನ್ ಮತ್ತು ಲಿನೆಜೋಲಿಡ್ ಔಷಧಿಗಳ ಕೊರತೆ ಇದೆ ಎಂದು ವರದಿ ಆಗಿತ್ತಲ್ಲದೆ, ಹಿಂದೆ ಕೇಂದ್ರ ಸರಕಾರದ ಕೇಂದ್ರೀಯ ಟಿಬಿ ವಿಭಾಗದಿಂದಲೇ ಈ ಔಷಧಿಗಳು ಸರಬರಾಜಾಗುತ್ತಿದ್ದವು. ಆದರೆ ಕೇಂದ್ರ ಸರಕಾರ ವರ್ಷದ ಹಿಂದೆ ಅದನ್ನು ನಿಲ್ಲಿಸಿದ್ದರಿಂದ ಈಗ ಜಿಲ್ಲಾಮಟ್ಟದಲ್ಲೇ ಕೆಲವು ಔಷಧಿಗಳನ್ನು ಖರೀದಿಸಬೇಕಾಗುತ್ತಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿತ್ತು. ಕರ್ನಾಟಕದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ (14,325) ಮತ್ತು ಬೆಳಗಾವಿ (4,050) ಕಲಬುರ್ಗಿ (3,900), ರಾಯಚೂರು (3,900)ಗಳಲ್ಲಿ ಸಾಮಾನ್ಯ ಕ್ಷಯ ರೋಗಿಗಳಿದ್ದು, ಔಷಧಿಗಳು ಪೂರ್ಣ ಪ್ರಮಾಣದಲ್ಲಿ ಲಭ್ಯವಿಲ್ಲ. ಆರು ತಿಂಗಳಿಗೆ ಅಲ್ಲದಿದ್ದರೂ, ಎರಡು ತಿಂಗಳ ಸ್ಟಾಕ್ ಆದರೂ ಒದಗಿಸುವಂತೆ ಕೇಂದ್ರ ಸರಕಾರವನ್ನು ಕೋರಿರುವುದಾಗಿ ರಾಜ್ಯದ ಕ್ಷಯ ನಿಯಂತ್ರಣ ಅಧಿಕಾರಿಗಳು ಹೇಳಿರುವುದು ಪತ್ರಿಕೆಗಳಲ್ಲಿ ವರದಿಯಾಗಿತ್ತು.
ಆದರೆ ಕೇಂದ್ರ ಸರಕಾರವು ಮೊನ್ನೆ ಅಕ್ಟೋಬರ್ 1ರಂದು ಒಂದು ಪ್ರಕಟಣೆಯ ಮೂಲಕ (PIB Release ID- 1962655) ಈ ಕ್ಷಯರೋಗ ಔಷಧಿ ಕೊರತೆಯ ಸುದ್ದಿಗಳು ಸಾರಾಸಗಟು ಸುಳ್ಳು, ತಪ್ಪು ಹಾದಿಗೆ ಎಳೆಯುವಂತಹದು ಮತ್ತು ದುಷ್ಪ್ರೇರಣೆಯವು ಎಂದು ಟೀಕಿಸಿದೆ. ಅದು ತನ್ನ ಪ್ರಕಟಣೆಯಲ್ಲಿ ಸದ್ಯ ಲಭ್ಯವಿರುವ ಔಷಧಿಗಳ ಪ್ರಮಾಣ ಮತ್ತು ತಾನು ಹೊಸದಾಗಿ ಖರೀದಿಸಲು ಮಾಡಿರುವ ಏರ್ಪಾಡುಗಳ ಬಗ್ಗೆ ವಿವರಿಸಿದೆ. ಆ ಪ್ರಕಟಣೆಯಲ್ಲಿಯೇ ಸರಕಾರವು ಕ್ಷಯ ರೋಗದ ಔಷಧಿಗಳ ಖರೀದಿ, ಸಂಗ್ರಹ, ದಾಸ್ತಾನು ನಿರ್ವಹಣೆ ಮತ್ತು ಸಕಾಲಿಕ ವಿತರಣೆಯು ರಾಷ್ಟ್ರೀಯ ಕ್ಷಯ ನಿವಾರಣಾ ಕಾರ್ಯಕ್ರಮ (ಎನ್‌ಟಿಇಪಿ) ಅಡಿಯಲ್ಲಿ ಕೇಂದ್ರ ಸರಕಾರದ ನಿಗಾದಲ್ಲೇ ನಡೆಯುತ್ತಿದೆ ಎಂದು ಹೇಳುತ್ತಲೇ, ಅಪರೂಪಕ್ಕೆ ಕೆಲವೊಮ್ಮೆ ಸಣ್ಣ ಅವಧಿಗೆ ಎನ್‌ಎಚ್‌ಎಮ್ ನಿಧಿ ಬಳಸಿ ರಾಜ್ಯಗಳಲ್ಲೇ ಔಷಧಿಗಳನ್ನು ಖರೀದಿಸಲು ಸೂಚಿಸುವುದಿದೆ ಎಂದು ಒಪ್ಪಿಕೊಂಡಿದೆ.
ಈಗ ಕ್ಷಯ ಔಷಧಿಗಳು ದಾಸ್ತಾನಿದ್ದರೂ ದೇಶದ ಎಲ್ಲೆಡೆ ಕ್ಷಯ ರೋಗಿಗಳಿಗೆ ಸಕಾಲದಲ್ಲಿ ಲಭ್ಯವಾಗದಿರುವುದಕ್ಕೆ ಯೋಜನೆಯ ‘ಲಾಜಿಸ್ಟಿಕ್ಸ್’ ಲೋಪಗಳು ಕಾರಣ ಆಗಿರಬಹುದು. ಇದನ್ನು ಒಪ್ಪಿಕೊಂಡು ತಪ್ಪು ತಿದ್ದಕೊಳ್ಳುವ ಬದಲು, ಔಷಧಿಗಳು ಲಭ್ಯವಿಲ್ಲ ಎಂಬ ಅಳಲು ವ್ಯಕ್ತಪಡಿಸಿದ ಕ್ಷಯ ರೋಗಿಗಳನ್ನೇ ದೂರಲು ಹೊರಡುವುದು ಅನಪೇಕ್ಷಿತವಾಗಿತ್ತು. ಏಕೆಂದರೆ 24 ಲಕ್ಷ ರೋಗಿಗಳಿಗೆ ದೀರ್ಘಕಾಲಿಕ ಚಿಕಿತ್ಸೆಗೆ ಅಗತ್ಯ ಇರುವಷ್ಟು ಔಷಧಿ ಮತ್ತು ಆರು ತಿಂಗಳ ಹೆಚ್ಚುವರಿ ದಾಸ್ತಾನು ಸರಕಾರದಲ್ಲಿ ತಕ್ಷಣಕ್ಕೆ ಲಭ್ಯವಿಲ್ಲ ಎಂಬುದು ಸರಕಾರ ನೀಡಿರುವ ಅಂಕಿಅಂಶಗಳಿಂದಲೇ ಮೇಲ್ನೋಟಕ್ಕೆ ಸಾಬೀತಾಗುತ್ತದೆ.