ಕರಾವಳಿ ಈ ಪರಿ ಮಾತು ಕಳೆದುಕೊಂಡರೆ ಹೇಗೆ ಸ್ವಾಮೀ?
ಸ್ಮಾರ್ಟ್ ಸಿಟಿ ಮಂಗಳೂರಿಗೆ ‘ವಾಟರ್ ಮೆಟ್ರೊ’ ಎಂಬ ಸುದ್ದಿಗೆ ಬೇರಾರೂ ಸ-ಕಾರ ತೆಗೆದಿಲ್ಲ. ಆದರೆ ಮಾಧ್ಯಮಗಳು ಮಾತ್ರ ವಾಟರ್ ಮೆಟ್ರೊದ ಸವಿವರ ಯೋಜನಾವರದಿ (ಡಿಪಿಆರ್) ತಯಾರಾಗಲಿದೆ ಎಂಬುದನ್ನು ಭಾರೀ ಸಂಭ್ರಮದೊಂದಿಗೆ ವರದಿ ಮಾಡಿವೆ. ಜನ ಯಾವತ್ತೂ ಬೇಕೆಂದು ಕೇಳದ ಇಂತಹ ಯೋಜನೆಗಳನ್ನು ತಮ್ಮ ಬೃಹತ್ ‘ರಂಗೋಲಿ ಯೋಜನೆ’ಗಳ ಚುಕ್ಕಿಗಳ ರೂಪದಲ್ಲಿ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರಗಳೆರಡೂ ಕರಾವಳಿಗೆ ಧಾರಾಳವಾಗಿ ಕರುಣಿಸುತ್ತಿವೆ. ಕಣ್ಣೆದುರೇ ಇದೆಲ್ಲ ನಡೆಯುತ್ತಿದ್ದರೂ ಯಾಕೆ ಹೀಗೆಂದು ಕೇಳುವಷ್ಟೂ ಬಾಯಿ ಇಲ್ಲದ, ಮಾತು ಕಳೆದುಕೊಂಡಿರುವ ಕರಾವಳಿಯದು ಈಗೀಗ ದಯನೀಯ ಸ್ಥಿತಿ.
ರಾಷ್ಟ್ರೀಯ ಜಲ ಹೆದ್ದಾರಿ 43 ಎಂದು ಘೋಷಿತವಾಗಿರುವ ಗುರುಪುರ (ಫಲ್ಗುಣಿ) ನದಿ (10 ಕಿ.ಮೀ.) ಹಾಗೂ ರಾಷ್ಟ್ರೀಯ ಜಲಹೆದ್ದಾರಿ 74 ಎಂದು ಘೋಷಿತವಾಗಿರುವ ನೇತ್ರಾವತಿ ನದಿ (79 ಕಿ.ಮೀ.)ಗಳನ್ನು ಬೆಸೆದು, ಅವುಗಳ ಹಿನ್ನೀರಿನ 30 ಕಿ.ಮೀ. ವ್ಯಾಪ್ತಿಯಲ್ಲಿ 17 ತಂಗುದಾಣಗಳನ್ನು ಒಳಗೊಂಡ (ಬಜಾಲ್‌ನಿಂದ ಮರವೂರು ತನಕದ) ಮಂಗಳೂರು ವಾಟರ್ ಮೆಟ್ರೊ ಯೋಜನೆಗೆ ಡಿಪಿಆರ್ ತಯಾರಿಸಲು ಕರ್ನಾಟಕ ಜಲಸಾರಿಗೆ ಮಂಡಳಿ ಸಿದ್ಧತೆ ನಡೆಸಿದೆ. ಈ ಯೋಜನೆಗೆ ಸಂಬಂಧಿಸಿ ಪೂರ್ವಭಾವೀ ಅಧ್ಯಯನ 2022ರಲ್ಲೇ ನಡೆದಿದೆ. ಜನಸಂಚಾರ ಮಾತ್ರವಲ್ಲದೇ ಜನನಿಬಿಡ ಪ್ರದೇಶಗಳಲ್ಲಿ ಸರಕು ಸಾಗಾಟದ ದಟ್ಟಣೆಯನ್ನು ರಸ್ತೆಯ ಬದಲು ಜಲಮಾರ್ಗಗಳಿಗೆ ಬದಲಿಸುವ ಕಾರಣಕ್ಕಾಗಿ ಈ ಯೋಜನೆ ಸಿದ್ಧಗೊಳ್ಳುತ್ತಿದೆ ಎಂಬುದು ಈ ಯೋಜನೆ ಕಾರ್ಯರೂಪಕ್ಕೆ ತರಲುದ್ದೇಶಿಸಿರುವವರ ವಾದ.
ಇದಕ್ಕೆ ಪೂರಕವಾಗಿ ಮಂಗಳೂರು ಹಳೆ ಬಂದರಿನ ಬೆಂಗ್ರೆಯಿಂದ ರಾಷ್ಟ್ರೀಯ ಹೆದ್ದಾರಿ 66ನ್ನು ಸಂಪರ್ಕಿಸಲು ನಾಲ್ಕು ಲೇನ್‌ಗಳ 9.8 ಕಿ.ಮೀ. ಉದ್ದದ ರಸ್ತೆ ಯೋಜನೆಯೊಂದು ತಯಾರಾಗುತ್ತಿದೆ. ಜೊತೆಗೆ, ಸರಕು ಸಾಗಣೆಗಾಗಿ 350 ಮೀಟರ್ ಉದ್ದದ ಕರಾವಳಿ ಸರಕು ಸಾಗಣೆ ಬರ್ತ್ ಕೂಡ ಸಾಗರಮಾಲಾ ಯೋಜನೆಯ ಭಾಗವಾಗಿ ತಯಾರಾಗುತ್ತಿದೆಯಂತೆ. ಮಂಗಳೂರು ಬಂದರಿನಲ್ಲಿ ಈಗಾಗಲೇ ಕೆಲವು ಖಾಸಗಿಯವರಿಗೆ ತಮ್ಮ ಸರಕು ಇಳಿಸಿಕೊಳ್ಳುವ ಬರ್ತ್‌ಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
ಈ ವಾಟರ್ ಮೆಟ್ರೊ ಜನಸಂಚಾರಕ್ಕೆ ಸಂಬಂಧಿಸಿದಂತೆ ಎಷ್ಟು ಉಪಯುಕ್ತ? ಈ ಹಾದಿಗಳಲ್ಲಿ ಈಗಾಗಲೇ ಇರುವ ಬಸ್ ಮತ್ತಿತರ ವಾಹನ-ರಸ್ತೆ ಸೌಕರ್ಯಗಳು ಎಷ್ಟು ಪರ್ಯಾಪ್ತ? ಈ ಹಾದಿಯಲ್ಲಿ ಸದ್ಯ ತಿರುಗಾಡುತ್ತಿರುವ ಸರಕುಗಳು ಯಾವುವು? ಒಂದು ವೇಳೆ ಈ ವಾಟರ್ ಮೆಟ್ರೊ ಯಶಸ್ವಿಯಾದರೆ, ಆಗ ರಸ್ತೆ ಸಾರಿಗೆಗೆ ಹೂಡಿಕೆ ಮಾಡಿರುವವರ ಸಣ್ಣಪುಟ್ಟ ಖಾಸಗಿ ಉದ್ಯಮಿಗಳ ಪಾಡೇನು? ಈ ಪ್ರಶ್ನೆಗಳು ಈ ಪ್ರದೇಶಗಳ ನಿವಾಸಿಗಳಲ್ಲಿ ಹುಟ್ಟಿಕೊಂಡರೆ ಚಿತ್ರಣ ತಿಳಿಯಾಗುತ್ತಾ ಹೋಗುತ್ತದೆ. ಇದು ಜನರಿಗೆ ಉಪಯುಕ್ತವಾದ ಯೋಜನೆಯೇ ಅಥವಾ ಬೇರೆ ಯಾರಿಗಾದರೂ ಈ ಯೋಜನೆಯಿಂದ ಲಾಭವಿದೆಯೆ? ಇಲ್ಲಿ ಜಲ ಮಾರ್ಗದ ರೋ-ರೋ ಸಾಗಣೆ ಅಳವಡಿಕೆಯಿಂದ ನಿಜಕ್ಕೂ ಲಾಭ ಯಾರಿಗೆ?
ಈ ಬೃಹತ್ ರಂಗೋಲಿಯ ಇನ್ನು ಕೆಲವು ಚುಕ್ಕಿಗಳನ್ನು ನಾನು ಇಲ್ಲಿ ಕೆಳಗೆ ತೋರಿಸುತ್ತಿದ್ದೇನೆ. ರಂಗೋಲಿ ಪೂರ್ಣಗೊಳಿಸಿಕೊಳ್ಳುವ ಜವಾಬ್ದಾರಿ ನಿಮ್ಮದು.
ರಂಗೋಲಿಯ ಚುಕ್ಕಿಗಳು
2024-25ರ ಬಜೆಟ್‌ನಲ್ಲಿ ಭಾರತ ಸರಕಾರವು 11.1ಲಕ್ಷ ಕೋಟಿ ರೂ.ಗಳನ್ನು ಮೂಲಸೌಕರ್ಯ ರಂಗಕ್ಕೆ ಬಂಡವಾಳ ಹೂಡಲು (ಕ್ಯಾಪೆಕ್ಸ್) ತೀರ್ಮಾನಿಸಿದ್ದು ಎಲ್ಲರಿಗೂ ಗೊತ್ತಿದೆ. ಈ ರಂಗದಲ್ಲಿ ಪಿಎಂ ಗತಿಶಕ್ತಿ ಯೋಜನೆಯಡಿ ವಿದ್ಯುತ್, ಖನಿಜಗಳು, ಸಿಮೆಂಟ್ ಕಾರಿಡಾರುಗಳಿಗೆ ಹಾಗೂ ಬಂದರುಗಳಿಗೆ ಕನೆಕ್ಟಿವಿಟಿ ಒದಗಿಸುವುದಕ್ಕೆ ಆದ್ಯತೆಯನ್ನು ಪ್ರಕಟಿಸಲಾಗಿತ್ತು. ಆ ಮಹಾಯೋಜನೆಯ ಅಡಿಯಲ್ಲಿಯೇ ಈ ಎಲ್ಲ ಬೆಳವಣಿಗೆಗಳು ಸಂಭವಿಸುತ್ತಿವೆ.
ಕರಾವಳಿಯ ಎರಡೂ ಜಿಲ್ಲೆಗಳಲ್ಲಿ ಒಟ್ಟು 23 ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿವೆ. ಹಾಲಿ ಜಲಮಾರ್ಗದ ಲಾಭವನ್ನು ONGC, MRPL, MCF, BASF, KIOCL, ಅಲ್ಟ್ರಾಟೆಕ್ ಸಿಮೆಂಟ್ (ಬಿರ್ಲಾ ಬಳಗ), ಹಿಂದೂಸ್ಥಾನ್ ಯೂನಿಲಿವರ್ ಸಂಸ್ಥೆಗಳು ಪಡೆಯಲಿವೆ ಎಂದು ಯೋಜನಾ ವಿಮರ್ಶೆಯ ದಾಖಲೆಗಳು ತೋರಿಸುತ್ತಿವೆ. ವಿಶೇಷವಾಗಿ, MRPLನಿಂದ ಅಪಾಯಕಾರಿ ಸರಕುಗಳಾದ LPG ಮತ್ತು POLಗಳು ರಸ್ತೆ ಹಾದಿ ಬಿಟ್ಟು ಜಲಹಾದಿಯಲ್ಲಿ ರೋ-ರೋ ವ್ಯವಸ್ಥೆ ಮೂಲಕ ಸಾಗಬೇಕೆಂಬುದು ಈ ಯೋಜನೆಯ ಮೂಲ ಉದ್ದೇಶ ಎಂದು ಹೇಳಲಾಗುತ್ತಿದೆ.
2022ರಲ್ಲಿ ರಾಜ್ಯ ಸರಕಾರವು ಬಂಡವಾಳ ಆಕರ್ಷಿಸಲು ಜಾಗತಿಕ ಹೂಡಿಕೆದಾರರ ಮೇಳ (GIM) ನಡೆಸಿದಾಗ, ಅಲ್ಲಿ ಅದಾನಿ ಬಳಗದ ಸಿಮೆಂಟ್ ಕಂಪೆನಿಯು 2.2 MTPA ಸಾಮರ್ಥ್ಯದ ಸಿಮೆಂಟ್ ಗ್ರೈಂಡಿಂಗ್ ಘಟಕವನ್ನು ನಂದಿಕೂರು ಬಳಿ ಇರುವ ತನ್ನ ಅದಾನಿ ಪವರ್ಸ್ ಲಿಮಿಟೆಡ್ (ಈ ಹಿಂದೆ ಯುಪಿಸಿಎಲ್) ಸಂಸ್ಥೆಯ ಮೂಲಕ ಸ್ಥಾಪಿಸುವುದಾಗಿ ಹೇಳಿತ್ತು. ಈಗಾಗಲೇ ದೇಶದ ಪ್ರಮುಖ ಸಿಮೆಂಟ್ ಉತ್ಪಾದಕ ಸಂಸ್ಥೆಗಳಾದ ಅಂಬುಜಾ ಸಿಮೆಂಟ್ಸ್‌ನಲ್ಲಿ ಶೇ. 70.33 ಮತ್ತು ಎಸಿಸಿ ಸಿಮೆಂಟ್ ಕಂಪೆನಿಯಲ್ಲಿ ಶೇ. 57 ಮಾಲಕತ್ವ ಹೊಂದಿರುವ ಅದಾನಿ ಸಿಮೆಂಟ್ಸ್ 2028ರ ಹೊತ್ತಿಗೆ 140 MTPA ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿದೆ. ಹಾಲಿ ಗುರುಪುರ-ನೇತ್ರಾವತಿ ಜಲಮಾರ್ಗದಿಂದ ಯುಪಿಸಿಎಲ್ ಸುಮಾರು 27ಕಿ.ಮೀ. ದೂರದಲ್ಲಿದೆಯಾದರೂ, ಅವರ ಜೆಟ್ಟಿಗಳು ಈ ಯೋಜನೆಯ ವ್ಯಾಪ್ತಿಯೊಳಗೇ ಬರಲಿವೆ. ಹಾಗಾಗಿ ಯೋಜನೆಯ ಲಾಭವನ್ನು ಅವರು ಹೇಗೆ ಪಡೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
2023 ಸೆಪ್ಟಂಬರಿನಲ್ಲಿ, ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಎ.ವಿ. ರಮಣ ಅವರು, ಈಗ 41.12ಎಂಟಿ ಸರಕು ನಿರ್ವಹಣೆ ಮಾಡುತ್ತಿರುವ ಬಂದರು, 2030ರ ಹೊತ್ತಿಗೆ 60ಎಂಟಿಯಷ್ಟು ಸರಕು ನಿರ್ವಹಿಸಲಿದೆ. ಪೆಟ್ರೋಲಿಯಂ ಉತ್ಪನಗಳು, ಖಾದ್ಯ ತೈಲ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಕಚ್ಚಾವಸ್ತುಗಳ (ಸಿಮೆಂಟು-ಕಬ್ಬಿಣ ಇತ್ಯಾದಿ ಎಂದು ಓದಿಕೊಳ್ಳಿ) ಬೇಡಿಕೆ ಹೆಚ್ಚಲಿರುವ ಹಿನ್ನೆಲೆಯಲ್ಲಿ ಈ ಅಂದಾಜು ಮಾಡಲಾಗಿದೆ ಎಂದು ಮಾಧ್ಯಮಗಳಿಗೆ ವಿವರಿಸಿದ್ದರು.
ಜನ ಕೇಳದ ಯೋಜನೆಗಳಿವು
ಕರ್ನಾಟಕದ ಕರಾವಳಿಯ ಸಾಂಪ್ರದಾಯಿಕ ಮೀನುಗಾರರನ್ನು ಹಂತಹಂತ ವಾಗಿ ತಳತಪ್ಪಿಸುವ ಈ ಎಲ್ಲ ಯೋಜನೆಗಳನ್ನು ಸಾರ್ವಜನಿಕ ರೇನೂ ನಮಗೆ ಕೊಡಿ ಎಂದು ಗೋಗರೆದಿಲ್ಲ, ಅಂಗಲಾಚಿಲ್ಲ. ಇವೆಲ್ಲವೂ ಸಾರ್ವಜನಿಕರ ತೆರಿಗೆ ದುಡ್ಡಿನಲ್ಲಿ ಬೃಹತ್ ಉದ್ಯಮಗಳ ಅನುಕೂಲಕ್ಕಾಗಿ ಬರುತ್ತಿರುವ ಯೋಜನೆಗಳು. ಮೇಲೆ ವಿವರಿಸಿರುವ ವಾಟರ್ ಮೆಟ್ರೊದಲ್ಲಿ ಸಾರ್ವಜನಿಕ ಸಂಚಾರವೇನೂ ಗಮನಾರ್ಹವಾಗಿರುವುದಿಲ್ಲ ಎಂಬುದನ್ನು ಯೋಜನೆಯ ಪೂರ್ವಭಾವಿ ಅಧ್ಯಯನಗಳೇ ಬೊಟ್ಟುಮಾಡುತ್ತಿವೆ. 2030ರ ಹೊತ್ತಿಗೆ ಅಂದಾಜು 8.08ಲಕ್ಷ ಎಂಟಿ ಸರಕು ಹಾಗೂ ಪ್ರತಿದಿನ 12,000ದಷ್ಟು ಸಾರ್ವಜನಿಕರು-ಪ್ರವಾಸಿಗರು ಈ ಜಲಹಾದಿಯನ್ನು ಬಳಸಲಿದ್ದಾರೆ ಎಂಬುದು ಅಧ್ಯಯನಗಳ ಅಂದಾಜು. ಈ ಯೋಜನೆಗಳಲ್ಲದೇ, ಹತ್ತಾರು ಜೆಟ್ಟಿಗಳು, ಬರ್ತ್‌ಗಳು, ಬಂದರು ಅಭಿವೃದ್ಧಿ, ರೈಲು-ರಸ್ತೆ ಅಭಿವೃದ್ಧಿ ಇತ್ಯಾದಿಗಳು ಪಿಎಂ ಗತಿಶಕ್ತಿ ಹಾಗೂ ಸಾಗರಮಾಲಾ ಯೋಜನೆಗಳ ಹೆಸರಿನಲ್ಲಿ ಕರಾವಳಿಯಲ್ಲಿ ಚಾಲ್ತಿಗೆ ಬರುತ್ತಿವೆ. ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳ ವಿನಿಯೋಗ ಆಗುತ್ತಿದೆ. ರಂಗೋಲಿಯ ಈ ಎಲ್ಲ ಚುಕ್ಕೆಗಳು ಕೊನೆಯಲ್ಲಿ ಯಾವ ಚಿತ್ರವಾಗಿ ಮೂಡಲಿವೆ ಎಂಬುದೂ ಈಗ ಸ್ಪಷ್ಟವಿಲ್ಲ.
ಇಂತಹ ಯೋಜನೆಗಳ ಪೂರ್ವಾಪರಗಳನ್ನು ಸಾರ್ವಜನಿಕವಾಗಿ ಚರ್ಚೆಗೆ ಒದಗಿಸದೆ, ‘ಇಗೋ ಬಂತು ನೋಡಿ’ ಎಂದು ಸಂಭ್ರಮಿಸುವ ಮುನ್ನ, ಮಂಗಳೂರು ಸ್ಮಾರ್ಟ್ ಸಿಟಿ ಇಷ್ಟು ವರ್ಷಗಳ ಕಾಮಗಾರಿಗಳ ಬಳಿಕ ಎಷ್ಟು ಸ್ಮಾರ್ಟ್ ಆಯಿತು ಎಂದು ಹಿಂದಿರುಗಿ ನೋಡಬೇಡವೇ?
ಕರಾವಳಿಯ ಸ್ವಂತಿಕೆಯನ್ನು ಬಿಂಬಿಸುತ್ತಾ ಬಂದಿರುವ ಬ್ಯಾಂಕುಗಳು, ಶಿಕ್ಷಣ, ಮತ್ಸ್ಯೋದ್ಯಮ, ಮಲ್ಲಿಗೆ, ಗೇರುಬೀಜ, ಹೆಂಚು ಇತ್ಯಾದಿ ಸ್ಥಳೀಯ ಕಿರು ಉದ್ಯಮಗಳು-ಸೇವಾವಲಯಗಳೆಲ್ಲವನ್ನೂ ಇಂಚಿಂಚಾಗಿ ಮುಗಿಸಿ, ಈಗ ತೈಲ, ವಿದ್ಯುತ್, ರಾಸಾಯನಿಕಗಳು ಎಂದು ಕರಾವಳಿಗೆ ವಿಷವುಣ್ಣಿಸುವ ಮತ್ತು ಇಲ್ಲಿನ ನೆಲ-ಜಲಗಳನ್ನು ‘ಆನಿಪಾಲು’ ಮಾಡುವ ಪ್ರಯತ್ನ ಹಾಡಹಗಲೇ ನಡೆದಿದೆ. ‘ಚಿಲ್ಲರೆ’ ರಾಜಕೀಯ ಹಿತಾಸಕ್ತಿಗಳ ಕಾರಣಕ್ಕೆ ಕರಾವಳಿಯ ‘ಸಗಟು’ ಬದುಕನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಕರಾವಳಿ ಮಾತು ಕಳೆದುಕೊಳ್ಳುತ್ತಿದೆ.
(ಚಿತ್ರ ಸೌಜನ್ಯ: IWAI ಕೋರಿಕೆಯ ಮೇರೆಗೆ ಖಾಸಗಿ ಸಂಸ್ಥೆಯೊಂದು ನಡೆಸಿದ ಪೂರ್ವಭಾವಿ ಅಧ್ಯಯನ ವರದಿ 2022)