‘ನಮ್ಮ ಜನ’ ಅಲ್ಲದಿದ್ದರೆ ನಿಧಾನವೇ ಪ್ರಧಾನವೇ?
Photo: PTI
‘‘ಕೊಲಿಜಿಯಂ ಶಿಫಾರಸು ಮಾಡಿರುವ ನ್ಯಾಯಾಂಗ ನೇಮಕಾತಿಗಳನ್ನು, ಆ ವ್ಯಕ್ತಿಗಳು ರಾಜಕೀಯವಾಗಿ ಸಕ್ರಿಯರೆಂಬ ಕಾರಣಕ್ಕೆ ನನೆಗುದಿಗೆ ಹಾಕಬಾರದು. ಹೀಗೆ ಶಿಫಾರಸುಗೊಂಡವರಲ್ಲಿ ಆಡಳಿತ ಪಕ್ಷದ ಪರ ನಿಲುವು ಇರುವವರೂ ಇರಬಹುದು ಅಥವಾ ಪ್ರತಿಪಕ್ಷಗಳ ಪರ ನಿಲುವು ಇರುವವರೂ ಇರಬಹುದು. ಎರಡೂ ಸಂದರ್ಭಗಳಲ್ಲಿ ಕೊಲಿಜಿಯಂ ಶಿಫಾರಸುಗಳು ಅನುಷ್ಠಾನವಾಗಬೇಕು. ಶಿಫಾರಸುಗೊಂಡವರ ರಾಜಕೀಯ ಸಂಪರ್ಕಗಳು ಅವರ ನ್ಯಾಯಾಂಗದ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಅಡ್ಡಿಯಾಗುವಷ್ಟು ಆಳವಾಗಿ ಇರದಿರುವುದನ್ನು ಖಚಿತಪಡಿಸಿಕೊಂಡರೆ ಆಯಿತು.’’ ಎಂದು ಮೊನ್ನೆ (ನವೆಂಬರ್ 7) ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಸಂಜಯ್ ಕಿಷನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠ ಹೇಳಿತ್ತು.
ನ್ಯಾಯಾಂಗ ವಿಧಿಸಿದ್ದ ಸಮಯದ ಗಡುವನ್ನೂ ದಾಟಿ, ಕೊಲಿಜಿಯಂ ಶಿಫಾರಸುಗಳನ್ನು ನನೆಗುದಿಗೆ ಹಾಕಿ ಕುಳಿತಿದ್ದ ಭಾರತ ಸರಕಾರದ ವಿರುದ್ಧ ಬೆಂಗಳೂರು ವಕೀಲರ ಸಂಘವು ದಾಖಲಿಸಿದ್ದ ನ್ಯಾಯಾಂಗನಿಂದನೆ ಅರ್ಜಿ (Contempt petition (civil) No. 867 oಜಿ 2021) ವಿಚಾರಣೆಯ ವೇಳೆ ನ್ಯಾಯಪೀಠ ಈ ರೀತಿ ಅಭಿಪ್ರಾಯಪಟ್ಟಿತ್ತು. ನವೆಂಬರ್ 20ಕ್ಕೆ ಮುಂದಿನ ವಿಚಾರಣೆಗೆ ಮುನ್ನ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಪೀಠ ಅಂದು ನಿರ್ದೇಶಿಸಿತ್ತು.
ಹೀಗೆ, ಸರಕಾರವು ಕೊಲಿಜಿಯಂ ಶಿಫಾರಸುಗಳಲ್ಲಿ, ತನಗೆ ಬೇಕಾದ ಹೆಸರುಗಳನ್ನು ಮಾತ್ರ ಆಯ್ದು ನೇಮಕಾತಿಗೆ ಆದ್ಯತೆ ತೋರಿ, ಉಳಿದ ಹೆಸರುಗಳನ್ನು ಅತ್ತ ನೇಮಕ ಮಾಡದೆ, ಇತ್ತ ಮರುಪರಿಶೀಲನೆಗೆ ಹಿಂದಕ್ಕೂ ಕಳುಹಿಸದೆ ನನೆಗುದಿಗೆ ಹಾಕಿದರೆ, ಅದರಿಂದ ಸೇವಾ ಹಿರಿತನದಲ್ಲಿ ಸಮಸ್ಯೆಗಳಾಗಲಿವೆ, ಎಳೆಯ ವಕೀಲರಿಗೆ ನ್ಯಾಯಾಂಗ ವೃತ್ತಿಯತ್ತ ಆಸಕ್ತಿ ಕಡಿಮೆ ಆಗಬಹುದು ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿತ್ತು.
ಈ ಹಿಂದೆ, ಕೊಲಿಜಿಯಂನಿಂದ ಶಿಫಾರಸುಗೊಂಡವರು ಸರಕಾರದ ನಿರ್ಲಕ್ಷ್ಯದ ನಡೆಯ ಕಾರಣಕ್ಕೆ ಕಡೆಗೆ ಬೇಸತ್ತು ತಮ್ಮ ಹೆಸರು ಹಿಂದೆಗೆದುಕೊಂಡ ಮತ್ತು ಮೃತಪಟ್ಟ ಕಾರಣಕ್ಕೆ ಕೊಲಿಜಿಯಂ ಶಿಫಾರಸು ನಿರರ್ಥಕಗೊಂಡ ಉದಾಹರಣೆಗಳೂ ಇವೆ.
ಇದೇ ವರ್ಷ ಫೆಬ್ರವರಿಯಲ್ಲಿ, ಮದ್ರಾಸು ಹೈಕೋರ್ಟ್ನಲ್ಲಿ ಎಲ್.ವಿ. ಗೌರಿ ಅವರನ್ನು ಹೆಚ್ಚುವರಿ ನ್ಯಾಯಮೂರ್ತಿ ಆಗಿ ನೇಮಕ ಮಾಡಿದಾಗ, ಆಕೆ ಬಿಜೆಪಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎಂಬ ಹಿನ್ನೆಲೆಯಲ್ಲಿ ಮತ್ತು ಆಕೆ ‘ದ್ವೇಷ ಭಾಷಣ’ ಮಾಡಿದ್ದರು ಎಂಬ ಟೀಕೆಗಳ ಹಿನ್ನೆಲೆಯಲ್ಲಿ ಅವರ ವಿರುದ್ಧ ಸಲ್ಲಿಸಲಾಗಿದ್ದ ಆಕ್ಷೇಪಗಳನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು. ಆದರೆ ಕಳೆದ ವರ್ಷ (2022) ಫೆಬ್ರವರಿಯಲ್ಲಿ, ಅದೇ ಹೈಕೋರ್ಟ್ಗೆ ಜಾನ್ ಸತ್ಯನ್ ಅವರ ನೇಮಕಾತಿಯ ಬಗ್ಗೆ ಕೊಲಿಜಿಯಂನ ಶಿಫಾರಸನ್ನು, ಅವರು ಪ್ರಧಾನಮಂತ್ರಿಗಳನ್ನು ಟೀಕಿಸಲಾಗಿದ್ದ ಲೇಖನವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರೆಂಬ ಕಾರಣಕ್ಕೆ ಕೇಂದ್ರ ಸರಕಾರ ಹಿಂದೆ ಕಳುಹಿಸಿತ್ತು. ಅವರ ಹೆಸರನ್ನು ಈ ವರ್ಷ ಮತ್ತೊಮ್ಮೆ ಕೊಲಿಜಿಯಂ ಆದ್ಯತೆಯ ಮೇರೆಗೆ ಶಿಫಾರಸು ಮಾಡಿದ್ದರೂ, ಅದನ್ನು ಕೇಂದ್ರ ಸರಕಾರ ಇನ್ನೂ ನನೆಗುದಿಯಲ್ಲೇ ಇರಿಸಿದೆ. ಈ ಬಗ್ಗೆ ಕೊಲಿಜಿಯಂ ತೀವ್ರ ಕಳವಳ ವ್ಯಕ್ತಪಡಿಸಿತ್ತು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊನ್ನಿನ ಅಭಿಪ್ರಾಯ ಮಹತ್ವದ್ದನ್ನಿಸುತ್ತದೆ.
ಏನಿದು ಕೊಲಿಜಿಯಂ?
ನ್ಯಾಯಾಂಗಕ್ಕೆ ಕೊಲಿಜಿಯಂ ಮೂಲಕ ನೇಮಕಾತಿ ವ್ಯವಸ್ಥೆಗೆ ಸಂಸತ್ತಿನ ಕಾನೂನಾಗಲೀ ಅಥವಾ ಸಾಂವಿಧಾನಿಕ ವಿಧಿಯಾಗಲೀ ಇಲ್ಲ. ಅದು ವಿಕಾಸಗೊಂಡಿರುವುದು 1981, 1993, 1998ರ ನ್ಯಾಯಾಂಗದ ತೀರ್ಮಾನಗಳ ಮೂಲಕವೇ. ಭಾರತದ ಮುಖ್ಯ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟಿನ ನಾಲ್ವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳ ಜೊತೆ (ಕೊಲಿಜಿಯಂ) ಚರ್ಚಿಸಿ ಹೊಸ ನೇಮಕಾತಿ ಶಿಫಾರಸುಗಳನ್ನು ಸರಕಾರಕ್ಕೆ ಕಳುಹಿಸುತ್ತಾರೆ. ಅದನ್ನು ಸರಕಾರ ಪರಿಶೀಲಿಸಿದ ಬಳಿಕ, ಸೂಕ್ತವಲ್ಲವೆಂದು ಕಂಡರೆ, ಸಕಾರಣವಾಗಿ ಕೊಲಿಜಿಯಂಗೆ ಮರುಪರಿಶೀಲಿಸಲು ಹಿಂದಿರುಗಿಸುತ್ತದೆ, ಇಲ್ಲವೇ ಪ್ರಧಾನಮಂತ್ರಿಗಳ ಶಿಫಾರಸಿನ ಮೇರೆಗೆ, ಆ ಶಿಫಾರಸುಗೊಂಡ ಹೆಸರನ್ನು ರಾಷ್ಟ್ರಪತಿಗಳು ನ್ಯಾಯಮೂರ್ತಿಗಳಾಗಿ ನೇಮಕ ಮಾಡುತ್ತಾರೆ.
ಹಠಸಾಧನೆ
ದೇಶದ ನ್ಯಾಯಾಂಗ ನೇಮಕಾತಿಗಳ ಕುರಿತಾಗಿ ಹಾಲಿ ಭಾರತ ಸರಕಾರ ಮತ್ತು ಭಾರತದ ಸುಪ್ರೀಂಕೋರ್ಟುಗಳ ನಡುವೆ ಭಿನ್ನಮತಗಳಿರುವುದು ಇದೇನೂ ಹೊಸದಲ್ಲ. ನರೇಂದ್ರ ಮೋದಿ ಅವರ ಸರಕಾರ ಬಂದ ಹೊಸದರಲ್ಲೇ (2014), ಕೊಲಿಜಿಯಂ ಜಾಗದಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಕಮಿಷನ್ (ಎನ್ಜೆಎಸಿ) ರಚಿಸುವ ಪ್ರಸ್ತಾಪ ಮುಂದಿಟ್ಟಿತ್ತು. ಅದರಲ್ಲಿ ಸುಪ್ರೀಂ ಕೋರ್ಟಿನ ಮೂವರು ನ್ಯಾಯಮೂರ್ತಿಗಳು, ಕೇಂದ್ರ ಕಾನೂನು ಸಚಿವರು, ಇಬ್ಬರು ನಾಗರಿಕ ವಲಯದ ಪರಿಣತರು ಇದ್ದು, ಅವರಲ್ಲಿ ಯಾರಾದರೂ ಇಬ್ಬರು ಒಂದು ನೇಮಕಾತಿ ಶಿಫಾರಸನ್ನು ತಿರಸ್ಕರಿಸಿದರೆ, ಆ ಶಿಫಾರಸು ಸ್ವೀಕಾರಾರ್ಹವಲ್ಲ ಎಂಬ ಪ್ರಸ್ತಾಪ ಇತ್ತು. ಆದರೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ಇದನ್ನು 2015ರಲ್ಲಿ ತಿರಸ್ಕರಿಸಿತ್ತು.
ಆ ಬಳಿಕ, ಕೊಲಿಜಿಯಂ ವ್ಯವಸ್ಥೆ ಪಾರದರ್ಶಕವಾಗಿಲ್ಲ ಎಂಬ ಟೀಕೆಗಳು ಸರಕಾರದ ಕಡೆಯಿಂದ ಸತತವಾಗಿ ಬರತೊಡಗಿದ್ದವು; ಕೊಲಿಜಿಯಂ ಮಾಡಿದ ಶಿಫಾರಸುಗಳನ್ನು ಸರಕಾರ ನನೆಗುದಿಗೆ ಹಾಕಿಡುವುದು - ನ್ಯಾಯಾಂಗ ಈ ಬಗ್ಗೆ ಕಳವಳ ವ್ಯಕ್ತಪಡಿಸುವುದು ಸತತವಾಗಿ ನಡೆಯುತ್ತಲೇ ಇದೆ. 1999ರಲ್ಲಿ ನ್ಯಾಯಾಂಗ-ಶಾಸಕಾಂಗಗಳ ನಡುವೆ ನ್ಯಾಯಾಂಗದ ನೇಮಕಾತಿಗಳಲ್ಲಿ ಸಮನ್ವಯಕ್ಕಾಗಿ ರೂಪಿಸಲಾಗಿದ್ದ ಮೆಮೊರಾಂಡಂ ಆಫ್ ಪ್ರೊಸೀಜರ್ಸ್ (ಎಂಒಪಿ)ಯನ್ನು 2017ರಲ್ಲಿ ಹಾಲಿ ಸರಕಾರ ಪುನರ್ರಚಿಸಿದ್ದರೂ, ಅದಕ್ಕೆ ನ್ಯಾಯಾಂಗದಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ.
ಈ ನ್ಯಾಯಾಂಗ-ಶಾಸಕಾಂಗ ತಿಕ್ಕಾಟ ಯಾವ ಮಟ್ಟಕ್ಕೆ ತಲುಪಿತೆಂದರೆ, ಕೇಂದ್ರ ಕಾನೂನು ಖಾತೆಯ ಸಚಿವರಾಗಿದ್ದ ಕಿರಣ್ ರಿಜಿಜು ಅವರು ಸತತವಾಗಿ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡತೊಡಗಿದಾಗ, ಈ ವರ್ಷ ಮೇ ತಿಂಗಳಿನಲ್ಲಿ ಅವರ ಕೈಯಲ್ಲಿದ್ದ ಕಾನೂನು ಖಾತೆಯನ್ನು, ಸರಕಾರ ನಿವೃತ್ತ ಐಎಎಸ್ ಅಧಿಕಾರಿ ಅರ್ಜುನ್ ರಾಂ ಮೇಘವಾಲ್ ಅವರಿಗೆ ಹಸ್ತಾಂತರಿಸಿತು. ಆದರೆ ಈಗಲೂ ಸಮಸ್ಯೆಗಳು ಬಗೆಹರಿದಂತೆ ಕಾಣಿಸುತ್ತಿಲ್ಲ.
2014ರಿಂದ 2023ರ ನಡುವೆ ತಮ್ಮ ಸರಕಾರ 54 ಮಂದಿ ನ್ಯಾಯಾಧೀಶರನ್ನು ಸುಪ್ರೀಂಕೋರ್ಟ್ಗೆ ಹೊಸದಾಗಿ ನೇಮಕ ಮಾಡಿದೆ ಎಂದು ಕಿರಣ್ ರಿಜಿಜು ಈ ವರ್ಷದ ಮಾರ್ಚ್ ತಿಂಗಳಲ್ಲಿ ರಾಜ್ಯಸಭೆಗೆ ತಿಳಿಸಿದ್ದರು. ಆದರೆ ನ್ಯಾಯಾಂಗದ ದಾಖಲೆಗಳ ಪ್ರಕಾರ, ಇನ್ನೂ ಹಲವು ನ್ಯಾಯಾಂಗದ ಹುದ್ದೆಗಳು ಖಾಲಿ ಇವೆ. 1-2-2023ರಂದು ಸುಪ್ರೀಂ ಕೋರ್ಟಿನ ಒಟ್ಟು 34 ನ್ಯಾಯಮೂರ್ತಿ ಹುದ್ದೆಗಳಲ್ಲಿ 27 ಮಾತ್ರ ಭರ್ತಿ ಆಗಿತ್ತು. ಅದು 1-8-2023ರ ಹೊತ್ತಿಗೆ ಈಗ, 32ಕ್ಕೆ ಏರಿದೆ. 1-11-2023ರ ಹೊತ್ತಿಗೆ ರಾಜ್ಯಗಳ ಹೈಕೋರ್ಟ್ಗಳಲ್ಲಿರುವ 1,114 ನ್ಯಾಯಮೂರ್ತಿ ಹುದ್ದೆಗಳಲ್ಲಿ, 782 ಮಾತ್ರ ಭರ್ತಿ ಇದ್ದು, 332 ಹುದ್ದೆಗಳು ಖಾಲಿ ಇವೆ. ಕರ್ನಾಟಕದಲ್ಲೇ 62 ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗಳಲ್ಲಿ 51 ಭರ್ತಿ ಇದ್ದು, 11 ಖಾಲಿ ಇವೆ. ದೇಶದಾದ್ಯಂತ ನ್ಯಾಯದಾನ ವ್ಯವಸ್ಥೆ ತನ್ನ ಕೆಲಸದ ಹೊರೆಯ ಕಾರಣದಿಂದಾಗಿ ನಿಧಾನಗೊಂಡಿದ್ದರೂ, ಸರಕಾರ ತನ್ನ ಹಠ ಸಡಿಲಿಸದಿರುವುದು ಈ ಎಲ್ಲ ಬೆಳವಣಿಗೆಗಳಿಗೆ ಕಾರಣವೆಂದರೆ ತಪ್ಪಾಗದು.