ಭಾರತ-ಬ್ರಿಟನ್ ಮುಕ್ತ ವಾಣಿಜ್ಯ ಒಪ್ಪಂದ ಮತ್ತು ನಾರಾಯಣಮೂರ್ತಿಯವರ ಗೂಗ್ಲೀ!
Photo: PTI
ಬ್ರೆಕ್ಸಿಟ್ ಮೂಲಕ ಐರೋಪ್ಯ ಸಮುದಾಯದಿಂದ ಹೊರಬಂದಿರುವ ಬ್ರಿಟನ್ಗೆ ಜಗತ್ತಿನ ಜೊತೆ ತನ್ನ ವ್ಯಾಪಾರ ಸಂಬಂಧಗಳನ್ನು ಮರುವ್ಯಾಖ್ಯಾನಿಸಿಕೊಳ್ಳುವ ತುರ್ತು ಇದೆ. ಆ ಪ್ರಕ್ರಿಯೆಯಲ್ಲಿ, ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಇರುವ ತನ್ನ ಹಳೆಯ ಕಾಲನಿ ಭಾರತದ ಜೊತೆ ವ್ಯಾಪಾರ ಸಂಬಂಧ ಮರುವ್ಯಾಖ್ಯಾನಗೊಂಡರೆ, ದೊಡ್ಡದೊಂದು ಮಾರುಕಟ್ಟೆ ದೊರೆತಂತೆ ಎಂಬುದು ಬ್ರಿಟಿಷ್ ಸರಕಾರದ ಇರಾದೆ. ಈ ಪ್ರಕ್ರಿಯೆಯಲ್ಲಿ ಬ್ರಿಟನ್ ಇಲ್ಲಿಯ ತನಕ 71 ಒಪ್ಪಂದಗಳನ್ನು ಜಗತ್ತಿನಾದ್ಯಂತ ಮಾಡಿಕೊಂಡಿದೆಯಾದರೂ, ಅವರ ಆದ್ಯತೆಯ ಪಟ್ಟಿಯಲ್ಲಿದ್ದ ಭಾರತದ ಜೊತೆ ಮುಕ್ತ ವಾಣಿಜ್ಯ ಒಪ್ಪಂದ (ಎಫ್ಟಿಎ) ಅವರಿಗೆ ಇನ್ನೂ ಸಾಧ್ಯವಾಗಿಲ್ಲ.
ಭಾರತ-ಬ್ರಿಟನ್ ನಡುವೆ ಎಫ್ಟಿಎ ಮಾತುಕತೆಗಳ ಪ್ರಕ್ರಿಯೆ ಆರಂಭಗೊಂಡದ್ದು 2022ರ ಜನವರಿಯಲ್ಲಿ. ಉದ್ದೇಶ ಇದ್ದದ್ದು, ಆ ವರ್ಷ ದೀಪಾವಳಿಯ ಹೊತ್ತಿಗೆ (ಅಕ್ಟೋಬರ್) ಒಪ್ಪಂದ ಅಂತಿಮಗೊಳ್ಳಬೇಕೆಂದು. ಆದರೆ ಅದಾಗಿ ಈಗ ಮತ್ತೊಂದು ದೀಪಾವಳಿ ಕಳೆದ ಬಳಿಕವೂ, ಒಟ್ಟು 26 ಅಂಶಗಳ ಈ ಒಪ್ಪಂದದಲ್ಲಿ 21ರಲ್ಲಿ ಮಾತ್ರ ಸಹಮತ ಸಾಧ್ಯವಾಗಿದೆ; ಇನ್ನೂ ಐದು ಮಹತ್ವದ ವಿಚಾರಗಳಲ್ಲಿ ಸಹಮತದ ಸಮೀಪಕ್ಕೆ ಬರುವುದೂ ಸಾಧ್ಯವಾಗಿಲ್ಲ. ಬಾಕಿ ಇರುವ ಈ ವಿಚಾರಗಳು ಸೂಕ್ಷ್ಮ್ಮ ಸ್ವರೂಪದವಾಗಿರುವುದರಿಂದ ಡೆಡ್ಲೈನ್ಗಳ ಹಂಗಿಲ್ಲದೆ ಮಾತುಕತೆ ನಡೆಯುತ್ತಿದೆ ಎಂದು ಭಾರತ ಸರಕಾರದ ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್ ಅವರು ಬುಧವಾರ (ನ.15) ಹೇಳಿರುವುದು ವರದಿ ಆಗಿದೆ. 13ನೇ ಸುತ್ತಿನ ಮಾತುಕತೆಗಳ ವೇಳೆ ಈ ಅಭಿಪ್ರಾಯ ಹೊರಬಿದ್ದಿದೆ.
ಭಾರತ ಈಗಾಗಲೇ ಬ್ರಿಟನ್ಗೆ ಜವುಳಿ, ಪಾದರಕ್ಷೆ, ಕೃಷಿ-ಸಮುದ್ರ ಉತ್ಪನ್ನಗಳು, ಆಭರಣಗಳು, ಪೆಟ್ರೋಕೆಮಿಕಲ್ಸ್, ಸಾಂಬಾರ ಪದಾರ್ಥಗಳು, ಔಷಧಿ ಉತ್ಪನ್ನ ಇತ್ಯಾದಿಗಳನ್ನು ಹೆಚ್ಚಿನ ತೆರಿಗೆ ಹೊರೆ ಇಲ್ಲದೆ ರಫ್ತು ಮಾಡುತ್ತಿದೆ. ಆದರೆ ಬ್ರಿಟನ್ ಭಾರತಕ್ಕೆ ಮುಕ್ತವಾಗಿ ರಫ್ತು ಮಾಡಲು ಭಾರತದಲ್ಲಿ ಆಮದು ತೆರಿಗೆಯ ಅಡ್ಡಿ ಇರುವ ಹಿನ್ನೆಲೆಯಲ್ಲಿ, ಎಫ್ಟಿಎ ಮಾತುಕತೆಗಳು ಬೋರಿಸ್ ಜಾನ್ಸನ್ ಅವರ ಅವಧಿಯಲ್ಲಿ ಆರಂಭಗೊಂಡಿದ್ದವು. ಆ ಬಳಿಕ ಲಿಝ್ ಟ್ರುಸ್ ಕಾಲದಲ್ಲೂ ಒಪ್ಪಂದಕ್ಕೆ ತಲುಪ ಲಾಗಲಿಲ್ಲ. ಈಗ ಭಾರತೀಯ ಮೂಲದ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಈ ಮಾತುಕತೆಗಳನ್ನು ಮುಂದುವರಿಸಿದ್ದಾರೆ.
ಒಟ್ಟು ಎಫ್ಟಿಎ ಮಾತುಕತೆಗಳಲ್ಲಿ ಭಾರತದ ಕಡೆಯಿಂದ ಸ್ಥೂಲವಾಗಿ ಬೇಡಿಕೆ ಇರುವುದು, ಈಗಾಗಲೇ ಇರುವ ವ್ಯಾಪಾರ ಸಂಬಂಧಗಳಲ್ಲದೆ ಹೆಚ್ಚುವರಿಯಾಗಿ ಐಟಿ-ಹೆಲ್ತ್ಕೇರ್ ರಂಗಗಳ ಭಾರತೀಯ ಉದ್ಯೋಗಿಗಳಿಗೆ ಮತ್ತು ಬ್ರಿಟನ್ನಲ್ಲಿ ಕಲಿಯಬಯಸುವ ವಿದ್ಯಾರ್ಥಿಗಳಿಗೆ ಬ್ರಿಟನ್ ಇನ್ನೂ ಹೆಚ್ಚು ವೀಸಾಗಳನ್ನು ನೀಡಬೇಕೆಂಬ ಕುರಿತು. ಅದೇ ವೇಳೆಗೆ ಬ್ರಿಟನ್, ತನ್ನ ಆಟೊಮೊಬೈಲ್, ವೈದ್ಯಕೀಯ ಪರಿಕರಗಳು, ವಿಸ್ಕಿ, ಪಶು ಉತ್ಪನ್ನಗಳು, ಚಾಕಲೆಟ್ಗಳ ರಫ್ತಿಗೆ ಮಾತ್ರವಲ್ಲದೆ ಬ್ಯಾಂಕಿಂಗ್, ಶಿಕ್ಷಣ ಹಾಗೂ ವಿಮಾ ಕ್ಷೇತ್ರಗಳಲ್ಲಿ ಇಂಗ್ಲೆಂಡಿಗೆ ಮುಕ್ತ ವಾಣಿಜ್ಯ ಅವಕಾಶ ಕೊಡಬೇಕೆಂದು ಭಾರತವನ್ನು ಕೇಳುತ್ತಿದೆ.
ಬ್ರಿಟನ್ ಕಡೆಯಿಂದ ಭಾರತದಲ್ಲಿ ಹೂಡಿಕೆಗೆ ಪ್ರತ್ಯೇಕವಾದ ಒಪ್ಪಂದ (ಬಿಐಟಿ) ಮಾಡಿಕೊಳ್ಳುವ ಉದ್ದೇಶವನ್ನು ಭಾರತ ಹೊಂದಿದೆ. ಆದರೆ, ಎಫ್ಟಿಎಗೆ ಸಂಬಂಧಿಸಿ ಉತ್ಪನ್ನದ ಮೂಲದ ಕುರಿತ ನಿಯಮಗಳು (ಇದು ಬೇರೆ ದೇಶಗಳಲ್ಲಿ ಉತ್ಪಾದಿಸಿ ಭಾರತದಲ್ಲಿ ಡಂಪ್ ಮಾಡುವುದನ್ನು ತಡೆಯುವ ನೀತಿ), ಬೌದ್ಧಿಕ ಸೊತ್ತಿನ ಹಕ್ಕುಗಳು (ವಿಶೇಷವಾಗಿ ಔಷಧಿ ಉದ್ದಿಮೆ), ಬ್ರಿಟನ್ನ ವೃತ್ತಿಪರರಿಗೆ ಹಾಗೂ ಡೈರಿ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಪ್ರವೇಶಾವಕಾಶ ಕೊಡುವಂತಹ ಸೂಕ್ಷ್ಮ ಸಂಗತಿಗಳ ಬಗ್ಗೆ ಎರಡೂ ದೇಶಗಳಿಗೆ ಒಪ್ಪಂದದ ಸನಿಹಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಭಾರತ-ಬ್ರಿಟನ್ ಎರಡೂ ದೇಶಗಳು ತಮ್ಮ ತಮ್ಮ ಹಿತಾಸಕ್ತಿಗಳ ರಕ್ಷಣೆಗೆ ಒತ್ತು ಕೊಟ್ಟುಕೊಂಡೇ ಈ ಮಾತುಕತೆಯಲ್ಲಿ ಸಾವಧಾನದಿಂದ ಮುಂದುವರಿಯುತ್ತಿರುವುದು ಸ್ವಾಗತಾರ್ಹವೇ. ಆದರೆ ಹಾಲೀ ಬ್ರಿಟಿಷ್ ಪ್ರಧಾನಿಯವರ ಮಾವನ ಮನೆ ಭಾರತದಲ್ಲಿರುವುದು ಮತ್ತು ಅವರ ಪತ್ನಿಯ ಕುಟುಂಬ ಭಾರತದಲ್ಲಿ ದೊಡ್ಡ ಉದ್ಯಮ ಹಿತಾಸಕ್ತಿಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಕೆಲವು ಬೆಳವಣಿಗೆಗಳನ್ನು ಕುತೂಹಲದಿಂದ ಗಮನಿಸಬೇಕಿದೆ.
ಮೊನ್ನೆ (ನ.15) ಬೆಂಗಳೂರಿನಲ್ಲಿ ಇನ್ಫೋಸಿಸ್ ಪ್ರೈಜ್ - 2023 ಸಮಾರಂಭದಲ್ಲಿ ಮಾತನಾಡಿದ ಆ ಸಂಸ್ಥೆಯ ಸ್ಥಾಪಕ, ಎನ್.ಆರ್. ನಾರಾಯಣಮೂರ್ತಿಯವರು, ಹೊಸ ಶಿಕ್ಷಣ ನೀತಿ (ಎನ್ಇಪಿ) ಗೆ ವೇಗ ನೀಡಲು, ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ (ಎಸ್ಟಿಇಎಂ) ವಿಚಾರಗಳಲ್ಲಿ 10,000 ಶಿಕ್ಷಕರನ್ನು ಮುಂದುವರಿದ ದೇಶಗಳಿಂದ ಆಹ್ವಾನಿಸಿ, ಇಲ್ಲಿ ದೇಶದಾದ್ಯಂತ ಶಿಕ್ಷಕರ ವಿಶೇಷ ತರಬೇತಿಗೆ 2,500 ಕಾಲೇಜುಗಳನ್ನು ತೆರೆದು, ಆ ಕಾಲೇಜುಗಳಲ್ಲಿ ಭಾರತೀಯ ಶಿಕ್ಷಕರು ತರಬೇತಿ ಪಡೆದು ಸಿದ್ಧಗೊಳ್ಳುವಂತಾಗಬೇಕು; ಆ ವಿದೇಶಿ ಶಿಕ್ಷಕರಿಗೆ ಸೂಕ್ತ (ವಿದೇಶೀ ದರ್ಜೆಯ) ಸಂಬಳ ಕೊಡುವ ವ್ಯವಸ್ಥೆ ಆಗಬೇಕು. ಭಾರತ ಐದು ಟ್ರಿಲಿಯನ್ ಡಾಲರ್ ಇಕಾನಮಿ ಆಗುವ ಮನಸ್ಸು ಹೊಂದಿದ್ದರೆ, ಈ ನಿಟ್ಟಿನಲ್ಲಿ ಸರಕಾರ ವರ್ಷಕ್ಕೆ 100 ಕೋಟಿ ಡಾಲರ್ (ಅಂದಾಜು 8,000 ಕೋಟಿ ರೂ.) ವೆಚ್ಚ ಮಾಡಲು ಹಿಂಜರಿಯಬಾರದು ಎಂದು ಸೇರಿದವರಿಗೆಲ್ಲ ‘‘ಹೌದು ಹೌದೆಂದು ಅನ್ನಿಸುವಂತೆ’’ ಮಾತನಾಡಿದ್ದರು.
ಶ್ರೀ ಮೂರ್ತಿಯವರ ಈ ‘ತಲೆಯೊಳಗೆ ಚಿಂತನೆಯ ಹುಳು ಬಿಡುವ’ ಮಾತಿನ ಸಂಭಾವ್ಯ ಮೂಲ ಹುಡುಕಿಕೊಂಡು ಹೋದಾಗ ಸಿಕ್ಕಿದ್ದು, ಬ್ರಿಟಿಷ್ ಸರಕಾರದ ಇಂಟರ್ನ್ಯಾಷನಲ್ ಟ್ರೇಡ್ ಇಲಾಖೆ ಎಫ್ಟಿಎ ಕುರಿತು ರಚಿಸಿರುವ ಕಾರ್ಯತಂತ್ರ ದಾಖಲೆ! (UK-India Free Trade Agreement- The UK’s strategic Approach). 2030ರ ಹೊತ್ತಿಗೆ ಭಾರತದಲ್ಲಿ ಮಧ್ಯಮವರ್ಗದ ಗಾತ್ರ 6 ಕೋಟಿಗೆ ತಲುಪಲಿದೆ. ಇದು ಇಂಗ್ಲೆಂಡ್ನ ಒಟ್ಟು ಜನಸಂಖ್ಯೆಯ ಗಾತ್ರ. 2030ರ ಹೊತ್ತಿಗೆ ಭಾರತದ ಗ್ರಾಹಕ ಮಾರುಕಟ್ಟೆಯ ಶೇ. 75 ಭಾಗದ ಚಾಲಕಶಕ್ತಿ ಈ 6 ಕೋಟಿ ಜನರ ಕೈಯಲ್ಲಿ ಇರಲಿದೆ. ಅವರ ಆರೋಗ್ಯ, ಶಿಕ್ಷಣ ಮತ್ತು ಲಕ್ಸುರಿ ಉತ್ಪನ್ನಗಳ ಬೇಡಿಕೆ ಪೂರೈಸುವ ಉದ್ದೇಶದಿಂದ ಎಫ್ಟಿಎಯಲ್ಲಿ ಅದಕ್ಕೆ ಅವಕಾಶ ಕಲ್ಪಿಸಿಕೊಳ್ಳಬೇಕು ಎಂದು ಆ ದಾಖಲೆ ಹೇಳುತ್ತದೆ.
ಭಾರತ ಸರಕಾರ ಉನ್ನತ ಶಿಕ್ಷಣ ಕ್ಷೇತ್ರವನ್ನು ವಿದೇಶಿ ಹೂಡಿಕೆಗೆ ತೆರೆಯುತ್ತಿರುವುದು, ಬ್ಯಾಂಕಿಂಗ್, ವಿಮೆಯ ಜೊತೆ ಶಿಕ್ಷಣ ಕ್ಷೇತ್ರದಲ್ಲಿ ಮುಕ್ತ ವಾಣಿಜ್ಯಕ್ಕೆ ಬ್ರಿಟನ್ ಅವಕಾಶ ಕೋರಿರುವುದು ಮತ್ತು ಶ್ರೀ ಮೂರ್ತಿಯವರ ಹೇಳಿಕೆ ಈ ಮೂರು ಚುಕ್ಕಿಗಳನ್ನು ಜೋಡಿಸಿದಾಗ ಕಾಣಿಸುವ ರಂಗೋಲಿಯ ಚಿತ್ರ ಸ್ಪಷ್ಟ.
ಬ್ರಿಟನ್ನಲ್ಲಿ ಈ ರೀತಿಯ ಹಿತಾಸಕ್ತಿ ಸಂಘರ್ಷ (ಬ್ರಿಟಿಷ್ ಪ್ರಧಾನಿಯವರ ಪತ್ನಿ ಅಕ್ಷತಾ ಮೂರ್ತಿ ಅವರ ವ್ಯಾವಹಾರಿಕ ಸಂಬಂಧಗಳು) ಈಗಾಗಲೇ ಹಲವು ಬಾರಿ ವಿವಾದಗಳ ಹೊಗೆ ಎಬ್ಬಿಸಿದೆ. ಅಂತಹದೇ ಹಿತಾಸಕ್ತಿಯ ಪ್ರಶ್ನೆಗಳು ಭಾರತದಲ್ಲೂ ಏಳಲು ಇದು ಸಕಾಲ ಅನ್ನಿಸುತ್ತದೆ.