ಒಂದು ದೇಶ; ಒಂದು ಚುನಾವಣೆ | ಸುತ್ತುಬಳಸಿ ಇದು ಸಾಗುವುದು ಸಂವಿಧಾನದತ್ತಲೇ
‘ಒಂದು ದೇಶ; ಒಂದು ಚುನಾವಣೆ’ ಎಂಬ ಕಲ್ಪನೆ ಮೇಲುನೋಟಕ್ಕೆ ರಮ್ಯವಾಗಿ ಕಾಣಿಸುತ್ತದೆ. ಇದೇನೂ ಹೊಸ ಕಲ್ಪನೆ ಅಲ್ಲ. ಸಂವಿಧಾನದಲ್ಲಿ ಮೂಗು ತೂರಿಸದೆ ಈ ಕಲ್ಪನೆಯನ್ನು ಕಾರ್ಯರೂಪಕ್ಕೆ ತರುವುದು ಸಾಧ್ಯವೇ? ಒಂದು ವೇಳೆ ಸಂವಿಧಾನದಲ್ಲಿ ಮೂಗು ತೂರಿಸುವ ಉದ್ದೇಶವಿದ್ದರೆ ಅದರ ಸ್ವರೂಪ ಹೇಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇದು.
ಇದೇ ಸೆಪ್ಟಂಬರ್ 2ರಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ರಚಿಸಲಾಗಿರುವ ಉನ್ನತ ಮಟ್ಟದ ಸಮಿತಿಯ ಕಾರ್ಯವ್ಯಾಪ್ತಿಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂವಿಧಾನ, ಜನಪ್ರಾತಿನಿಧ್ಯ ಕಾಯ್ದೆ 1950, 1951 ಹಾಗೂ ಅವುಗಳ ಅಡಿಯಲ್ಲಿ ಬರುವ ನಿಯಮಗಳ ಪರಿಶೀಲನೆ ಮತ್ತು ರಾಜ್ಯಸರಕಾರಗಳು ತಮ್ಮಲ್ಲಿ ಮಾಡಿಕೊಳ್ಳಬೇಕಾದ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಆಗಬೇಕಾಗಿರುವ ಬದಲಾವಣೆಗಳ ಪರಿಶೀಲನೆ ಮತ್ತು ಅವಕ್ಕೆಲ್ಲವಕ್ಕೂ ತಿದ್ದುಪಡಿ ಶಿಫಾರಸುಗಳನ್ನು ಮಾಡುವುದನ್ನು ಸೇರಿಸಲಾಗಿದೆ. (https://egazette.gov.in/WriteReadData/2023/248519.pdf )
ಇದು ನಮ್ಮ ಸಂವಿಧಾನ ಮೂಲ ಚೌಕಟ್ಟಿನಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣ ಆಗಬಹುದು. ಆ ಹಿನ್ನೆಲೆಯಲ್ಲಿ ಏನೇನು ಸಾಧ್ಯತೆಗಳಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಇದೆ. ಸಂವಿಧಾನದ ಯಾವೆಲ್ಲ ಭಾಗಗಳು ಈ ಬದಲಾವಣೆಯಿಂದ ಪ್ರಭಾವಿತಗೊಳ್ಳಬಹುದು ಎಂಬುದನ್ನು ಒಮ್ಮೆ ಪರಿಶೀಲಿಸೋಣ.
1. ಸಂವಿಧಾನದ 83ನೇ ವಿಧಿಯಲ್ಲಿ ಸಂಸತ್ತಿನ ಸದನಗಳ ಕಾರ್ಯಾವಧಿಯ ಬಗ್ಗೆ ಹೇಳಲಾಗಿದ್ದು, ವಿಧಿ 83(2)ರಲ್ಲಿ, ಅವಧಿ ಪೂರ್ವ ಲೋಕಸಭೆ ವಿಸರ್ಜನೆಯ ಸಂದರ್ಭ ಬರದಿದ್ದಲ್ಲಿ ಲೋಕಸಭಾ ಸದಸ್ಯರ ಅವಧಿ 5 ವರ್ಷಗಳು ಎಂದು ಹೇಳಲಾಗಿದೆ. ಜೊತೆಗೆ, ತುರ್ತುಪರಿಸ್ಥಿತಿಯ ಅವಧಿಯಲ್ಲಿ ಕಾನೂನಿನ ಮೂಲಕ, ಸದನದ ಸದಸ್ಯರ ಅವಧಿಯನ್ನು ಒಂದು ವರ್ಷಕ್ಕೆ ಮೀರದಂತೆ ವಿಸ್ತರಿಸಬಹುದು ಎಂದೂ ಹೇಳಲಾಗಿದೆ. ಮಾತ್ರವಲ್ಲದೆ, ಲೋಕಸಭೆಯ ಅವಧಿಯನ್ನು ಯಾವುದೇ ಕಾರಣಕ್ಕೂ ಹೆಚ್ಚುವರಿ ಅವಧಿಯ ಬಳಿಕ ಆರು ತಿಂಗಳಿಗಿಂತ ಹೆಚ್ಚು ಕಾಲಕ್ಕೆ ಮುಂದುವರಿಸುವಂತಿಲ್ಲ ಎಂದು ವಿಧಿಸಲಾಗಿದೆ. ರಾಜ್ಯಗಳಿಗೆ ಸಂವಿಧಾನದ 172(1) ವಿಧಿಯ ಅನ್ವಯ ಇದೇ ರೀತಿಯ ಅಧಿಕಾರವನ್ನು ನೀಡಲಾಗಿದೆ.
2. ಸಂವಿಧಾನದ 85(2)(ಬಿ) ವಿಧಿಯ ಅನ್ವಯ ರಾಷ್ಟ್ರಪತಿಗಳಿಗೆ ಸಂಸತ್ತನ್ನು ವಿಸರ್ಜಿಸುವ ಅಧಿಕಾರ ಇದೆ. (ರಾಜ್ಯಗಳಲ್ಲಿ ರಾಜ್ಯಪಾಲರಿಗೆ ಸಂವಿಧಾನದ 174(2)(ಬಿ) ವಿಧಿಯನ್ವಯ ವಿಧಾನಸಭೆಯನ್ನು ವಿಸರ್ಜಿಸುವ ಶಿಫಾರಸು ಮಾಡುವ ಅಧಿಕಾರ ಇದೆ.)
3. ಸಂವಿಧಾನದ 356ನೇ ವಿಧಿಯನ್ವಯ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಇರುವಾಗ, ಆ ವಿಧಾನಸಭೆಯನ್ನು ಅವಧಿ ಪೂರ್ವ ವಿಸರ್ಜಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಆದರೆ, ಪಕ್ಷಾಂತರ ನಿಷೇಧ ಕಾಯ್ದೆ-1985 ಮತ್ತು ಆ ಬಳಿಕ ಎಸ್.ಆರ್. ಬೊಮ್ಮಾಯಿ ವರ್ಸಸ್ ಭಾರತ ಸರಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಹೀಗೆ ರಾಷ್ಟ್ರಪತಿ ಆಡಳಿತ ಹೇರುವುದಕ್ಕೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಅವುಗಳಲ್ಲಿ ಮುಖ್ಯವಾದವು ಯಾವುವೆಂದರೆ ರಾಜ್ಯ ವಿಧಾನಸಭೆಯ ವಿಸರ್ಜನೆಗೆ ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಬೇಕಿರುತ್ತದೆ ಹಾಗೂ ರಾಷ್ಟ್ರಪತಿಗಳ ಆಳ್ವಿಕೆ ಘೋಷಣೆಯು ನ್ಯಾಯಾಂಗದ ಪರಿಶೀಲನೆಗೆ ಒಳಪಡಬಹುದಾಗಿದೆ. ಸುಪ್ರೀಂಕೋರ್ಟ್ ತನಗೆ ವಿಚಾರಣೆಯ ವೇಳೆ ಹೇರಲಾಗಿರುವ ರಾಷ್ಟ್ರಪತಿ ಆಳ್ವಿಕೆ ಅನ್ಯಾಯದ್ದೆಂದು ಕಂಡಾಗ, ಅದನ್ನು ರದ್ದುಪಡಿಸಿ ವಿಧಾನಸಭೆಯನ್ನು ಮರುಸ್ಥಾಪಿಸುವ ಅಧಿಕಾರ ಹೊಂದಿದೆ.
3. ಸಂವಿಧಾನದ 75(3)ನೇವಿಧಿಯು ಸಚಿವ ಸಂಪುಟವು ಸದನಕ್ಕೆ ಸಂಗ್ರಾಹ್ಯವಾಗಿ ಉತ್ತರದಾಯಿ ಎನ್ನುತ್ತದೆ. ರಾಜ್ಯ ಸರಕಾರಗಳಿಗೂ ಸಂವಿಧಾನದ 164(2)ನೇ ವಿಧಿ ಇಂತಹದೇ ಅಧಿಕಾರ ನೀಡಿದೆ. ಈ ವಿಧಿಗಳ ಅನ್ವಯ ಸದನದ ವಿಶ್ವಾಸ ಹೊಂದಿರದ ಸರಕಾರ ಅವಿಶ್ವಾಸ ಮತದ ಮೂಲಕ ಉರುಳಬಹುದು. ಇದು ಯಾವಾಗ ಸಂಭವಿಸಬಹುದೆಂಬುದನ್ನು ಕಾನೂನು ಊಹಿಸುವುದು ಕಷ್ಟ.
ಉನ್ನತ ಮಟ್ಟದ ಸಮಿತಿಯ ವಿಶ್ಲೇಷಣೆಗೆ ಒಳಪಡಬೇಕಾಗಿರುವ ಸಂವಿಧಾನದ ಬೇರೆ ಅಂಶಗಳು ಮತ್ತು ಜನಪ್ರಾತಿನಿಧ್ಯ ಕಾಯ್ದೆ ಇತ್ಯಾದಿಗಳನ್ನೆಲ್ಲ ಬದಿಗಿಟ್ಟು ನೋಡಿದರೂ, ಮೇಲೆ ಹೇಳಲಾಗಿರುವ ಮೂರು ಸಾಂವಿಧಾನಿಕ ವಿಧಿಗಳಲ್ಲಿ ಬದಲಾವಣೆ ಮಾಡದೆ ‘ಒಂದು ದೇಶ; ಒಂದು ಚನಾವಣೆ’ ಅಸಾಧ್ಯ.
ಏನೇನು ಅಪಾಯಗಳು?
ಐವತ್ತು ವರ್ಷಗಳ ಹಿಂದಿನ ಕೇಶವಾನಂದ ಭಾರತಿ ವರ್ಸಸ್ ಸ್ಟೇಟ್ ಆಫ್ ಕೇರಳ ಪ್ರಕರಣದಲ್ಲಿ, 24 ಎಪ್ರಿಲ್, 1973ರಂದು ತೀರ್ಪು ನೀಡಿದ ಸುಪ್ರೀಂಕೋರ್ಟು, ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ತರುವ ಹಕ್ಕು ಸಂಸತ್ತಿಗೆ ಇಲ್ಲ ಎಂದು ಖಚಿತವಾಗಿ ಹೇಳಿರುವುದನ್ನು ಗಮನದಲ್ಲಿ ಇಟ್ಟಕೊಂಡು ಹಾಲಿ ಸರಕಾರದ ‘ಒಂದು ದೇಶ; ಒಂದು ಚುನಾವಣೆ’ ಪ್ರಯತ್ನಗಳನ್ನು ಒಮ್ಮೆ ನೋಡಿದಲ್ಲಿ, ಅದರಿಂದ ಏನೆಲ್ಲ ಅಪಾಯದಲ್ಲಿವೆ ಎಂಬುದು ಸ್ಪಷ್ಟವಾಗತೊಡಗುತ್ತದೆ.
ಐದು ವರ್ಷಕ್ಕೆ ಒಂದೇ ಚುನಾವಣೆ ವ್ಯವಸ್ಥೆ ಜಾರಿಗೆ ಬಂದು ಉಳಿಯಬೇಕಾದರೆ, ಕೆಲವು ರಾಜ್ಯಸರಕಾರಗಳು ಅವಧಿಪೂರ್ವ ವಿಸರ್ಜನೆಯಾಗಬೇಕಾದೀತು ಮತ್ತು ಇನ್ನು ಕೆಲವು ಅವಧಿ ದಾಟಿ ಮುಂದುವರಿಯಬೇಕಾದೀತು. ಒಂದು ವೇಳೆ ಆ ಹಾದಿ ಬಿಟ್ಟು ಎರಡು ಮೂರು ಹಂತಗಳಲ್ಲಿ ಇದನ್ನು ಸಾಧಿಸಲಾಯಿತು ಎಂದಿಟ್ಟುಕೊಂಡರೂ (ಈ ಬಗ್ಗೆ ಹಿಂದೊಮ್ಮೆ ನೀತಿ ಆಯೋಗ ತಂತ್ರಗಾರಿಕೆಯ ಮಾದರಿಯೊಂದನ್ನು ಸಿದ್ಧಪಡಿಸಿತ್ತು), ಒಮ್ಮೆ ಚುನಾವಣೆ ಆದ ಬಳಿಕ ಆ ಸರಕಾರ ಯಾವಾಗ ಮತ್ತೆ ರಾಷ್ಟ್ರಪತಿ ಆಳ್ವಿಕೆಗೆ ತುತ್ತಾಗಬಹುದು? ಯಾವಾಗ ಅವಿಶ್ವಾಸ ಮತದ ಕಾರಣಕ್ಕೆ ಸರಕಾರ ಉರುಳಬಹುದು? ಎಂಬುದನ್ನು ಪೂರ್ವಾನುಮಾನ ಮಾಡುವುದು ಸಾಧ್ಯವಿಲ್ಲ. ಹೀಗಿರುವಾಗ, ‘ಒಂದು ದೇಶ; ಒಂದು ಚುನಾವಣೆ’ ಎಂದರೆ, ಅದರ ಗುಟ್ಟಾದ ಅರ್ಥ, ಸಂವಿಧಾನದ 75(3) ನೇ ವಿಧಿಗೆ ತಿದ್ದುಪಡಿ ಮಾಡುವ ಮೂಲಕ ಅವಿಶ್ವಾಸ ಮತದ ಪರಿಕಲ್ಪನೆಯನ್ನು ಬದಲಾಯಿಸುವುದೇ ಆಗಿದೆ. ಇದು ಸಂಸತ್ತಿನ, ರಾಜ್ಯ ವಿಧಾನಸಭೆಗಳ ಚುನಾಯಿತ ಜನಪ್ರತಿನಿಧಿಗಳ ಅಧಿಕಾರದ ಮೇಲಿನ ಸವಾರಿ ಅಲ್ಲದೇ ಮತ್ತೇನು?
ಇನ್ನೊಂದು ಸಾಧ್ಯತೆ: ಲೋಕಸಭೆ ಮತ್ತು ವಿಧಾನಸಭೆಗಳ ಕಾರ್ಯಾವಧಿಯನ್ನು 5 ವರ್ಷ ಮತ್ತು ಹೆಚ್ಚುವರಿ ಒಂದೂವರೆ ವರ್ಷದ ಆಚೆಗೂ ಹಿಗ್ಗಿಸುವ ಅಥವಾ ಕುಗ್ಗಿಸುವ ಅಧಿಕಾರವನ್ನು ಸಂಸತ್ತು/ರಾಷ್ಟ್ರಪತಿ ಹೊಂದುವುದು. ಇದು ಕೂಡ ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾದುದು.
ಸರಕಾರವು ‘ಒಂದು ದೇಶ; ಒಂದು ಚುನಾವಣೆ’ಯ ತನ್ನ ಆಶಯವನ್ನು ಮೊದಲು ಮಂಡಿಸಿ, ಆ ಬಳಿಕ ಉನ್ನತಮಟ್ಟದ ಸಮಿತಿ ರಚಿಸಿರುವುದರಿಂದ, ಆ ಸಮಿತಿಗೆ ಮುಕ್ತ ಚಿಂತನೆಯ ಅವಕಾಶ ಇಲ್ಲದಾಗಿದೆ. ಸಾಂವಿಧಾನಿಕ ಸಂರಚನೆಯಲ್ಲಿ ಮೇಲೆ ವಿವರಿಸಲಾಗಿರುವ ಕನಿಷ್ಠ ಎರಡು ಹಸ್ತಕ್ಷೇಪಗಳನ್ನು ಮಾಡದೆ ‘ಒಂದುದೇಶ; ಒಂದು ಚನಾವಣೆ’ ಜಾರಿ ಅಸಾಧ್ಯ. ಇದು ಸರಕಾರದಲ್ಲಿರುವ ಕಾನೂನು ಪರಿಣತರಿಗೆ ಗೊತ್ತಿಲ್ಲದ್ದೇನಲ್ಲ. ಹಾಗಾಗಿ, ಈ ಪರಿಕಲ್ಪನೆಯ ಉದ್ದೇಶವೇ ಸಂವಿಧಾನದ ಸಂರಚನೆಯಲ್ಲಿ ತಮಗೆ ಬೇಕಾದಂತೆ ಬದಲಾವಣೆಗಳನ್ನು ಮಾಡಿಕೊಳ್ಳುವತ್ತ ಒಂದು ಹೆಜ್ಜೆ ಮುಂದಿಡುವುದು ಅನ್ನಿಸುತ್ತದೆ.