‘ಕವಚ’ ಪ್ರಗತಿಯಲ್ಲಿದೆ ನಿರೀಕ್ಷಿಸಿ
ಮಾರುಕಟ್ಟೆಯಲ್ಲಿ ಪ್ರಚಾರ ಮಾಡುವ ಧಾವಂತಕ್ಕೂ, ತಳದಲ್ಲಿ ನಡೆಯುತ್ತಿರುವ ಕೆಲಸದ ವೇಗಕ್ಕೂ ತಾಳಿ-ತಂತಿ ಇಲ್ಲದಾಗ, ಇಂತಹ ಅಪಾರ್ಥಗಳು ಸಂಭವಿಸುತ್ತವೆ. ಜುಲೈ ಅಪರಾರ್ಧದ ಹದಿನೈದು ದಿನಗಳಲ್ಲಿ ಒಟ್ಟು ಏಳು ರೈಲು ಅವಘಡಗಳು ಸಂಭವಿಸಿವೆ; ಆರು ಜೀವಗಳು ನಷ್ಟವಾಗಿದ್ದು, ಅಪಾರ ಸೊತ್ತು ಹಾನಿ ಆಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷೆಯ ಕುರಿತು ಚರ್ಚೆಗಳು ಮುಂದಿನ ಪಂಕ್ತಿಗೆ ಬಂದಿವೆ.
1870ರಷ್ಟು ಹಿಂದೆ ಬ್ರಿಟಿಷರು ಭಾರತದಲ್ಲಿ ರೈಲ್ವೆ ವ್ಯವಸ್ಥೆ ಆರಂಭಿಸಿದ್ದರು. ಇಂದು ಸುಮಾರು 69,000 ಕಿ.ಮೀ. ಉದ್ದದ ರೈಲ್ವೆ ಲೈನ್ ಇರುವ ಭಾರತದಲ್ಲಿ, ಹಾಲಿ ಹಣಕಾಸು ವರ್ಷದಲ್ಲಿ (2023-24), 673 ಕೋಟಿ ಮಂದಿ ತಮ್ಮ ಪ್ರಯಾಣಗಳಿಗೆ ಹಾಗೂ ಸಾಗಣೆದಾರರು 158.8 ಕೋಟಿ ಟನ್ ಸರಕು ಸಾಗಾಟಕ್ಕೆ ರೈಲ್ವೆ ವ್ಯವಸ್ಥೆಯನ್ನು ಅವಲಂಬಿಸಿದ್ದಾರೆ. ರೈಲ್ವೆ ಇನ್ನೂ ಭಾರತದ ಜೀವನಾಡಿಯಾಗಿಯೇ ಉಳಿದಿದೆ.
ಸರಕಾರದ ಲೆಕ್ಕಾಚಾರಗಳ ಪ್ರಕಾರ, ಭಾರತದಲ್ಲಿ ರೈಲ್ವೆ ಸುರಕ್ಷತೆ ಸುಧಾರಿಸುತ್ತಲೇ ಬಂದಿದ್ದು, 2001ರ ಹೊತ್ತಿಗೆ ದೇಶದಲ್ಲಿ ವರ್ಷಕ್ಕೆ 473 ರೈಲು ಅವಘಡಗಳು ಸಂಭವಿಸುತ್ತಿದ್ದುದು, 2014ರ ಹೊತ್ತಿಗೆ 135ಕ್ಕೆ ಇಳಿದಿದೆ ಹಾಗೂ 2022-23ರ ಹೊತ್ತಿಗೆ, ಆ ಪ್ರಮಾಣ 48ಕ್ಕೆ ತಗ್ಗಿದೆ. (ಗ್ರಾಫ್ ನೋಡಿ). ಸರಕಾರ ರೈಲ್ವೆ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಈ ಸುಧಾರಣೆ ಸಂಭವಿಸಿದೆ ಎಂದು ಸರಕಾರ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದೆ.
ರೈಲ್ವೆ ಸುರಕ್ಷೆ ಕುರಿತ ಸಮೀಕ್ಷೆಗಳು, ಶೇ. 70 ರೈಲು ಅವಘಡಗಳಿಗೆ ರೈಲು ಹಳಿತಪ್ಪುವುದು ಕಾರಣವಾಗಿರುತ್ತದೆ; ಹೀಗೆ ಹಳಿ ತಪ್ಪುವುದಕ್ಕೆ ರೈಲು ಹಳಿಗಳ ತಪಾಸಣೆಯಲ್ಲಿನ ಲೋಪಗಳು ಕಾರಣ ಆಗಿರುತ್ತವೆ ಎಂದು ಹೇಳುತ್ತವೆ. ಈ ಹಿನ್ನೆಲೆಯಲ್ಲಿ, ಯುಪಿಎ ಸರಕಾರವು 2012ರಲ್ಲಿ, ದಿ ರೀಸರ್ಚ್ ಡಿಸೈನ್ಸ್ ಆ್ಯಂಡ್ ಸ್ಟಾಂಡರ್ಡ್ಸ್ ಆರ್ಗ ನೈಸೇಷನ್ (ಆರ್‌ಡಿಎಸ್‌ಒ) ಮೂಲಕ ರೈಲು ಢಿಕ್ಕಿ ತಡೆ ವ್ಯವಸ್ಥೆ (ಟಿಸಿಎಎಸ್) ಸಂಶೋಧನೆಯನ್ನು ಆರಂಭಿಸಿತ್ತು. 2020ರಲ್ಲಿ ಅದು ಪೂರ್ಣಗೊಂಡಾಗ, ನರೇಂದ್ರ ಮೋದಿ ಅವರ ಸರಕಾರವು ‘ಕವಚ್’ ಎಂಬ ಹೆಸರಿನಲ್ಲಿ ಅಬ್ಬರದ ಮಾರುಕಟ್ಟೆ ಪ್ರಚಾರದೊಂದಿಗೆ ಜಾರಿಗೊಳಿಸಿತ್ತು; ಇದು ಅಟೊಮ್ಯಾಟಿಕ್ ಟ್ರೇನ್ ಪ್ರೊಟೆಕ್ಷನ್ (ಎಟಿಪಿ) ಸಿಸ್ಟಮ್ ಎಂದು ಬೀಗಿತ್ತು.
ಈ ಅತಿ ಪ್ರಚಾರದ ಪ್ರಭಾವಲಯ ಎಷ್ಟಿದೆಯೆಂದರೆ, ಈಗ ಯಾವುದೇ ರೈಲು ಅವಘಡ ಸಂಭವಿಸಿದಾಗಲೂ, ಎಲ್ಲಿದೆ ‘ಕವಚ್’? ಎಂದು ರೈಲ್ವೆ ಸಚಿವರು, ಅಧಿಕಾರಿಗಳು ಟ್ರೋಲಿಗೀಡಾಗುತ್ತಿದ್ದಾರೆ. ಗುಟ್ಟು ಏನೆಂದರೆ, ದೇಶದಲ್ಲಿರುವ 69,000ಕಿ.ಮೀ. ರೈಲು ಹಾದಿಯಲ್ಲಿ ಈಗ ಕವಚ್ ಸುರಕ್ಷಾ ವ್ಯವಸ್ಥೆ ಜಾರಿಗೆ ಬಂದಿರುವುದು ಕೇವಲ 1,465 ಕಿ.ಮೀ. ಹಾದಿಗೆ ಮತ್ತು 144 ರೈಲುಗಳಿಗೆ ಮಾತ್ರ. ಈ ವ್ಯವಸ್ಥೆ ಪರಿಪೂರ್ಣಗೊಳ್ಳಲು, ಪ್ರತೀ ರೈಲು ನಿಲ್ದಾಣದಲ್ಲಿ ‘ಸ್ಟೇಷನ್ ಕವಚ್’ ವ್ಯವಸ್ಥೆ ಸ್ಥಾಪನೆ ಆಗಬೇಕು, ರೈಲು ಹಾದಿಗಳುದ್ದಕ್ಕೂ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ) ಟ್ಯಾಗ್‌ಗಳನ್ನು ಅಳವಡಿಸಬೇಕು, ಹಾದಿಯುದ್ದಕ್ಕೂ ಟೆಲಿಕಾಂ ಟವರ್‌ಗಳು ಲಭ್ಯವಾಗಬೇಕು ಮತ್ತು ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಬೇಕು, ಪ್ರತಿಯೊಂದು ರೈಲಿಗೆ ‘ಲೊಕೊ ಕವಚ್’’ ವ್ಯವಸ್ಥೆ ಅಳವಡಿಸಬೇಕು. ಸರಕಾರ ಇಲ್ಲಿಯ ತನಕ ಈ ವ್ಯವಸ್ಥೆಗಾಗಿ 1,216.77 ಕೋಟಿ ರೂ. ವೆಚ್ಚ ಮಾಡಿದ್ದು, 2024-25ನೇ ಸಾಲಿಗೆ 1,112.57 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದೆ.
ಸದ್ಯಕ್ಕೆ ದಿಲ್ಲಿ-ಮುಂಬೈ ಹಾಗೂ ದಿಲ್ಲಿ-ಹೌರಾ ರೈಲು ಹಳಿಗಳಿಗೆ (ಅಂದಾಜು 3,000 ಕಿ.ಮೀ.) ಇದನ್ನು ಅಳವಡಿಸುವ ಕೆಲಸ ಆಗುತ್ತಿದೆ. ಇದಲ್ಲದೆ ಇನ್ನೂ 6,000 ಕಿ.ಮೀ.ಗಳಿಗೆ ಡಿಪಿಆರ್ ಸಿದ್ಧಗೊಂಡಿದೆ. ಇನ್ನೂ ಇಷ್ಟೊಂದು ಶೈಶವದಲ್ಲಿರುವ ಸುರಕ್ಷಾ ವ್ಯವಸ್ಥೆಯನ್ನು ತಾನು ಈಗಾಗಲೇ ಅಳವಡಿಸಿಬಿಟ್ಟಿದ್ದೇನೆ ಎಂದು ಪ್ರಚಾರ ಗಿಟ್ಟಿಸಿಕೊಂಡರೆ, ಜನ ಆ್ಯಕ್ಸಿಡೆಂಟ್ ಸಂಭವಿಸಿದಾಗ ‘ಎಲ್ಲಿದೆ ಕವಚ್?’ ಎಂದು ಕೇಳದೇ ಬಿಟ್ಟಾರೆಯೆ?!
ಕವಚ್ ಮಾತ್ರವಲ್ಲ
ಕವಚ್ ಎಂಬುದು, ರೈಲ್ವೆ ಸುರಕ್ಷಾ ವ್ಯವಸ್ಥೆಯ ಒಂದು ಪುಟ್ಟ ಭಾಗವಾಗಿದ್ದು, ಅದಲ್ಲದೆ ಕೂಡ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2004-05ರಿಂದ 2013-14ರ ನಡುವೆ ರೈಲ್ವೆ ಸುರಕ್ಷತಾ ಕ್ರಮಗಳಿಗೆ 70,273 ಕೋಟಿ ರೂ. ವ್ಯಯಿಸಲಾಗಿತ್ತು. ಮೋದಿ ಸರಕಾರ ಬಂದ ಬಳಿಕ, 2017-18ರಲ್ಲಿ ರಾಷ್ಟ್ರೀಯ ರೈಲು ಸಂರಕ್ಷಣಾ ಕೋಶ (ಆರ್‌ಆರ್‌ಎಸ್‌ಕೆ) ಸ್ಥಾಪಿಸಲಾಗಿದ್ದು, ಅದರಲ್ಲಿ ಮೊದಲ ಐದು ವರ್ಷಗಳಿಗೆ (ಅಂದರೆ 2021-22ರ ತನಕ) 1.08 ಲಕ್ಷ ಕೋಟಿ ರೂ.ಗಳನ್ನು ವಿವಿಧ ಸುರಕ್ಷಾ ಕ್ರಮಗಳಿಗೆ ವ್ಯಯಿಸಲಾಗಿದೆ. ಇನ್ನು 2022-23ರಿಂದ 2026-27ರ ತನಕಕ್ಕೆಂದು 45,000 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ ಎಂದು ಸರಕಾರ ಇತ್ತೀಚೆಗೆ ಲೋಕಸಭೆಗೆ ತಿಳಿಸಿದೆ. (ಚುಕ್ಕೆ ಗುರುತಿಲ್ಲದ ಪ್ರಶ್ನೆ 376 ದಿನಾಂಕ: 24-07-2024).
ರೈಲು ಚಾಲಕರಿಗೆ ವಿಜಿಲೆನ್ಸ್ ಕಂಟ್ರೋಲ್ ಪರಿಕರ (ವಿಸಿಡಿ), ಮಂಜು ಕವಿದಾಗ ಬಳಸುವ ಜಿಪಿಎಸ್ ಆಧರಿತ ಸುರಕ್ಷಾ ವ್ಯವಸ್ಥೆ (ಎಫ್‌ಎಸ್‌ಡಿ), ಅತ್ಯಾಧುನಿಕ ತರಬೇತಿ ವ್ಯವಸ್ಥೆ, ಕೌನ್ಸಿಲಿಂಗ್ ವ್ಯವಸ್ಥೆಗಳನ್ನು ರೂಪಿಸಲಾಗಿದೆ. ಮಾತ್ರವಲ್ಲದೆ, ಈ ವರ್ಷದ ಜೂನ್ ಅಂತ್ಯದ ಹೊತ್ತಿಗೆ ಈ ಕೆಳಗಿನ ಕೆಲವು ಮಹತ್ವದ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರಕಾರ ಹೇಳಿದೆ.
* 6,589 ರೈಲು ನಿಲ್ದಾಣಗಳಲ್ಲಿ ಪಾಯಿಂಟ್ಸ್ ಮತ್ತು ಸಿಗ್ನಲ್‌ಗಳ ಕೇಂದ್ರೀಕೃತ ನಿರ್ವಹಣೆಗಾಗಿ ಇಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆ ಸ್ಥಾಪಿಸಲಾಗಿದೆ.
* 11,048 ಲೆವೆಲ್ ಕ್ರಾಸಿಂಗ್ ತಾಣಗಳಲ್ಲಿ ಅತ್ಯಾಧುನಿಕ ಇಂಟರ್‌ಲಾಕಿಂಗ್ ವ್ಯವಸ್ಥೆ ಸ್ಥಾಪಿಸಲಾಗಿದೆ.
* 6,609 ಸ್ಟೇಷನ್‌ಗಳಲ್ಲಿ ವಿದ್ಯುತ್ ಚಾಲಿತ ಟ್ರ್ಯಾಕ್ ಆಕ್ಯುಪೆನ್ಸಿ ಪರಿಶೀಲನಾ ವ್ಯವಸ್ಥೆ ಅಳವಡಿಸಲಾಗಿದೆ.
* ನಿಲ್ದಾಣಕ್ಕೆ ರೈಲುಗಳ ಆಗಮನ-ನಿರ್ಗಮನದ ವೇಳೆ ಮಾನವ ಹಸ್ತಕ್ಷೇಪ ಕನಿಷ್ಠಗೊಳಿಸಿಕೊಳ್ಳಲು ಬ್ಲಾಕ್ ಪ್ರೂವಿಂಗ್ ಆಕ್ಸೆಲ್ ಕೌಂಟರ್ (ಬಿಪಿಎಸಿ) ವ್ಯವಸ್ಥೆಯನ್ನು 6,079 ಸ್ಟೇಷನ್‌ಗಳಲ್ಲಿ ಅಳವಡಿಸಲಾಗಿದೆ.
* 9,572 ವಂದೇ ಭಾರತ್ ಕೋಚ್‌ಗಳಲ್ಲಿ ಸಿಸಿಟಿವಿ ವ್ಯವಸ್ಥೆ ಅಳವಡಿಸಲಾಗಿದೆ.
* ರೈಲ್ವೆ ಟ್ರ್ಯಾಕ್‌ಗಳಿಗೆ ಅತ್ಯಾಧುನಿಕ ಹಳಿ ಮತ್ತು ಸ್ಲೀಪರ್‌ಗಳನ್ನು ಅಳವಡಿಸಲಾಗುತ್ತಿದೆ.
ಇಂತಹ ಹಲವು ವ್ಯವಸ್ಥೆಗಳನ್ನು ರೈಲ್ವೆ ವ್ಯವಸ್ಥೆ ಆಧುನೀಕರಣಕ್ಕಾಗಿ ಬಳಸಲಾಗಿದೆ ಎಂದು ಸರಕಾರ ವಿವರಗಳನ್ನು ನೀಡಿದೆ.
ಹಾಗಾದರೆ ಲೋಪ ಎಲ್ಲಿದೆ?
ರೈಲ್ವೆಯಲ್ಲಿ 2022ರ ಅಂತ್ಯದ ಹೊತ್ತಿಗೆ ಸುಮಾರು 3.12 ಲಕ್ಷ ಸಿಬ್ಬಂದಿಯ ಕೊರತೆ ಇದೆ. ಇದರಿಂದಾಗಿ ತಳಮಟ್ಟದಲ್ಲಿ ಟ್ರ್ಯಾಕ್ ನಿಗಾ-ತಪಾಸಣೆಯಂತಹ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಒಂದೆಡೆಯಾದರೆ, ಇನ್ನೊಂದೆಡೆ ಚಾಲಕರ ಕೊರತೆಯಿಂದಾಗಿ ರೈಲು ಚಾಲಕರಿಗೆ ಕೆಲಸದ ಒತ್ತಡ ಅತಿಯಾಗಿದೆ. ಹಾಗಾಗಿ, ಶೇ. 42 ರೈಲು ಅವಘಡಗಳಿಗೆ ರೈಲು ಸಿಬ್ಬಂದಿಯ ಲೋಪ ಕಾರಣವಾಗಿರುತ್ತದೆ ಮತ್ತು ರೈಲು ಅಪಘಾತಗಳಲ್ಲಿ ಶೇ. 85 ಮಾನವ ಲೋಪಗಳಿಂದಲೇ ಸಂಭವಿಸಿರುತ್ತವೆ. ರೈಲುಗಳು ಮುಖಾಮುಖಿ ಢಿಕ್ಕಿಯಾಗುವುದು ಅಪರೂಪ (ಶೇ. 5). ಆದರೆ, ಹಾಗಾದಾಗ ಸಾವು-ನೋವಿನ ಪ್ರಮಾಣ ಮಾತ್ರ ಶೇ. 25ರಷ್ಟಿರುತ್ತದೆ ಎಂದು ರೈಲ್ವೆ ಸುರಕ್ಷಾ ವರದಿ(2012) ಹೇಳುತ್ತದೆ.
ತಂತ್ರಜ್ಞಾನದ ಮೇಲೆ ಅವಲಂಬನೆ ಹೆಚ್ಚಾದಾಗ, ಅದು ಮಾನವ ನಿರ್ಲಕ್ಷ್ಯಗಳಿಗೆ ಹಾದಿ ಮಾಡಿಕೊಡುವ ಸನ್ನಿವೇಶ ಎದುರಾಗಬಾರದು. ಈ ಹಿನ್ನೆಲೆಯಲ್ಲಿ, ದೇಶದ ಜೀವನಾಡಿ ಆಗಿರುವ ರೈಲ್ವೆಗೆ ಸುರಕ್ಷತಾ ವ್ಯವಸ್ಥೆಗಳ ಜೊತೆಜೊತೆಗೇ, ಸಾಕಷ್ಟು ಪ್ರಮಾಣದಲ್ಲಿ ಸಿಬ್ಬಂದಿಯನ್ನೂ ಒದಗಿಸುವ ಪ್ರಯತ್ನಗಳಿಗೆ ಸರಕಾರ ಮುಂದಾಗಬೇಕು.