ಅರಸನ ಅದೃಶ್ಯ ಉಡುಪು ಮತ್ತು ಬಡತನ ನಿವಾರಣೆಯ ಸಮೀಕ್ಷೆ!
ಭಾರತದಲ್ಲಿ ಬಡತನದ ಪ್ರಮಾಣ 2013-14ರಲ್ಲಿ ಶೇ. 29.2 ಇದ್ದುದು, ಈಗ 2022-23ರ ಹೊತ್ತಿಗೆ ಶೇ. 11.3ಕ್ಕೆ ಇಳಿದಿದೆ. ಹಾಗಾಗಿ ಬಡತನ ನಿರ್ಮೂಲನದಲ್ಲಿ ಅಭೂತಪೂರ್ವ ಸಾಧನೆ ಆಗಿದೆ ಎಂದು ನೀತಿ ಆಯೋಗದ ಅಧಿಕಾರಿಗಳು ಮೊನ್ನೆ (ಜನವರಿ 15) ಪ್ರಕಟಿಸಿದ್ದಾರೆ. ಅದರ ಬೆನ್ನಿಗೇ ಟ್ವೀಟ್ ಮಾಡಿದ ಭಾರತದ ಪ್ರಧಾನಮಂತ್ರಿಗಳು, ‘‘ಈ ಫಲಿತಾಂಶ ಬಹಳ ಪ್ರೋತ್ಸಾಹದಾಯಕವಾಗಿದ್ದು, ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯನ್ನು ಸಾಧಿಸುವಲ್ಲಿ ಹಾಗೂ ಆರ್ಥಿಕತೆಯಲ್ಲಿ ಸಮಗ್ರ ಬದಲಾವಣೆಗಳನ್ನು ತರುವಲ್ಲಿ ನಮ್ಮ ಬದ್ಧತೆಯನ್ನು ಪ್ರತಿಫಲಿಸುತ್ತವೆ. ನಾವು ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮ ಕೆಲಸಗಳನ್ನು ಮುಂದುವರಿಸುತ್ತೇವೆ ಮತ್ತು ಪ್ರತಿಯೊಬ್ಬ ಭಾರತೀಯ ಕೂಡ ಸಮೃದ್ಧವಾದ ಭವಿಷ್ಯವನ್ನು ಹೊಂದಬೇಕೆಂಬುದು ನಮ್ಮ ಗುರಿಯಾಗಿದೆ.’’ ಎಂದು ಜಯಘೋಷ ಮಾಡಿದರು.
2004-05ರಲ್ಲಿ ಶೇ. 37 (40.70ಕೋಟಿ ಜನರು) ಇದ್ದ ಭಾರತದ ಬಡತನ ರೇಖೆಗಿಂತ ಕೆಳಗಿದ್ದವರ ಪ್ರಮಾಣವು, 2011-12ರ ಹೊತ್ತಿಗೆ ಶೇ. 22 (26.9 ಕೋಟಿ ಜನರು)ಗೆ ಇಳಿದಿದೆ ಎಂದು 2012ರ ಹೊತ್ತಿಗೆ, ಅಂದಿನ ಯೋಜನಾ ಆಯೋಗದ ಮುಖ್ಯಸ್ಥ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಪ್ರಕಟಿಸಿದಾಗ, ಈಗ ಆಳುವ ಪಕ್ಷವಾಗಿರುವ ಅಂದಿನ ವಿರೋಧಪಕ್ಷ ಬಿಜೆಪಿ ಮಾತ್ರವಲ್ಲದೆ ಕಮ್ಯುನಿಸ್ಟರು, ಹೆಚ್ಚೇಕೆ ಸ್ವತಃ ಅಂದಿನ ಆಡಳಿತ ಪಕ್ಷ ಕಾಂಗ್ರೆಸ್‌ನ ಕೆಲವು ನಾಯಕರು ಮೊಂಟೆಕ್ ವಿರುದ್ಧ ಒಟ್ಟಾಗಿ ಮುಗಿಬಿದ್ದಿದ್ದರು; ‘‘ಸರಕಾರ ಬಡವರನ್ನು ಅಪಹಾಸ್ಯ ಮಾಡುತ್ತಿದೆ’’ ಎಂದು ಆಪಾದಿಸಿದ್ದರು. ರಮೇಶ್ ತೆಂಡುಲ್ಕರ್ ನೇತೃತ್ವದ ಸಮಿತಿಯೊಂದು 2004-05ರಲ್ಲಿ ಬಡತನ ರೇಖೆಯ ವ್ಯಾಖ್ಯಾನವನ್ನು ತೀರ್ಮಾನಿಸಿತ್ತು. ಅದನ್ನು ಅನ್ವಯಿಸಿ, 2011ರ ಹೊತ್ತಿಗೆ ನಗರ ಪ್ರದೇಶಗಳಲ್ಲಿ ದಿನಕ್ಕೆ 32ರೂ. ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದಿನಕ್ಕೆ 28ರೂ.ಗಳಿಗಿಂತ ಕಡಿಮೆ ಆದಾಯ ಹೊಂದಿರುವವರು ಬಡತನ ರೇಖೆಗಿಂತ ಕೆಳಗಿರುವ ಕಡುಬಡವರು ಎಂದು ವ್ಯಾಖ್ಯಾನಿಸಲಾಗಿತ್ತು. ಇದನ್ನು ಐದು ಜನರ ಒಂದು ಕುಟುಂಬದ ತಿಂಗಳ ಆದಾಯವಾಗಿ ಪರಿಗಣಿಸಿದಾಗ, ನಗರಗಳಲ್ಲಿ ಮಾಸಿಕ 4,824ರೂ. ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಾಸಿಕ 3,905ರೂ.ಗಳಿಗಿಂತ ಕಡಿಮೆ ಆದಾಯ ಇರುವವರು ಬಡತನದ ರೇಖೆಗಿಂತ ಕೆಳಗಿರುವ ಕಡು ಬಡವರು ಎಂದು ಪತ್ತೆಯಾಗಿತ್ತು. ತನ್ನ ಈ ವಾಸ್ತವಿಕ ನಿಲುವಿಗಾಗಿ ಮೊಂಟೆಕ್ ಇಂದಿಗೂ ಹಲವರಿಗೆ ಅಪಥ್ಯ.
ಈ ಚರಿತ್ರೆಯನ್ನು ಈಗ ನಾನು ಯಾಕೆ ನೆನಪು ಮಾಡಿಕೊಂಡೆನೆಂದರೆ, ಹಾಲೀ ನರೇಂದ್ರ ಮೋದಿಯವರ ಸರಕಾರವು ಬಡತನ ನಿವಾರಣೆಯ ತನ್ನ ಗೋಲು ತಲುಪಲು ಎಂದಿನಂತೆ ಗೋಲುಪೋಸ್ಟನ್ನೇ ಬದಲಾಯಿಸಿದೆ, ಮಾತ್ರವಲ್ಲದೆ ಬಹಳ ಪ್ರಶ್ನಾರ್ಥಕವಾದ ಅಳತೆಗೋಲನ್ನು ಬಳಸಿ, ಬಡತನವನ್ನು ವ್ಯಾಖ್ಯಾನಿಸಿದೆ. ಬಡತನವನ್ನು ಹೋಗಲಾಡಿಸಿರುವ ತಮ್ಮ ಸರಕಾರದ ‘‘ಅಭೂತಪೂರ್ವ’’ ಸಾಧನೆಯ ಬಗ್ಗೆ ಪ್ರಕಟಿಸಿ, ಚುನಾವಣೆ ತಯಾರಿ ಆರಂಭಿಸಿದೆ. ಇದಕ್ಕೆ ಹೇಗೆ ಪ್ರತಿಕ್ರಿಯೆ ಬಂದೀತೆಂದು ಕಳೆದ ವಾರವಿಡೀ ಗಮನಿಸಿದರೆ, ತುತ್ತೂರಿ ಮಾಧ್ಯಮಗಳು ಈ ಸಾಧನೆಗೆ ಉಘೇ ಉಘೇ ಅನ್ನುತ್ತಿವೆ, ವಿರೋಧಪಕ್ಷಗಳು ಚಕಾರ ಎತ್ತುತ್ತಿಲ್ಲ; ಜನಸಾಮಾನ್ಯ ಮಾತನಾಡುವ ಸ್ಥಿತಿಯಲ್ಲೂ ಇಲ್ಲ.
ಬಡತನದ ಹೊಸ ವ್ಯಾಖ್ಯೆ
2021ರಲ್ಲಿ ನೀತಿ ಆಯೋಗವು ಬಡತನಕ್ಕೆ ಹೊಸ ವ್ಯಾಖ್ಯೆ ನೀಡಿದ್ದು, ಅದನ್ನು ಭಾರತದ ಬಹು ಆಯಾಮಗಳ ಬಡತನ ಸೂಚ್ಯಂಕ (Multi-dimensional Poverty Index- MPI) ಎಂದು ಕರೆದಿದೆ. 2015-16ರಲ್ಲಿ ನಡೆದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-4 (NFHS-4) ಆಧರಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿತ್ತು. ಈಗ 2021ರ NFHS-5 ಆಧರಿಸಿ ಈ ಸೂಚ್ಯಂಕ ಎತ್ತ ಸಾಗಿದೆ ಎಂಬುದನ್ನು ಗುರುತಿಸಿ, ಬಡತನದ ‘ನಿಖರ’ ಲೆಕ್ಕಾಚಾರ ಪ್ರಕಟಗೊಂಡಿದೆ. ಭಾರತದ ಸಂದರ್ಭದಲ್ಲಿ, ಈ ಲೆಕ್ಕಾಚಾರ ಎಷ್ಟು ಪೊಳ್ಳು ಮತ್ತು ಹಾಸ್ಯಾಸ್ಪದ ಎಂಬುದು ಅರ್ಥವಾಗಲು, ಈ ಸೂಚ್ಯಂಕದ ನಿರ್ಧಾರ ಹೇಗೆ ಎಂಬ ಬಗ್ಗೆ ಸ್ವಲ್ಪ ವಿವರವಾಗಿ ನೋಡಬೇಕು. (ಕೆಳಗಿನ ಕೋಷ್ಠಕ ನೋಡಿ)
ಇಂತಹದೊಂದು ವ್ಯಾಖ್ಯಾನ ಇರಿಸಿಕೊಂಡು ಭಾರತದಂತಹ ಒಂದು ವಿಸ್ತಾರವಾದ, ವೈವಿಧ್ಯಮಯ ಭೂಪ್ರದೇಶದಲ್ಲಿ ಬಡತನವನ್ನು ಎಷ್ಟು ಕರಾರುವಾಕ್ ಆಗಿ ನಿರ್ಧರಿಸಬಹುದು ಎಂಬುದನ್ನು ಯಾರೂ ಊಹಿಸಬಹುದು.
ಗಮನಿಸಬೇಕಾದ ಸಂಗತಿ ಎಂದರೆ, ಭಾರತದಲ್ಲಿ ಕೊನೆಯದಾಗಿ ಜನಗಣತಿ ನಡೆದದ್ದು 2011ರಲ್ಲಿ. ಆಗ ದೇಶದ ಜನಸಂಖ್ಯೆ ಅಂದಾಜು 120 ಕೋಟಿ. ಇಂದು ಭಾರತದ ಜನಸಂಖ್ಯೆ ಅಂದಾಜು 143 ಕೋಟಿ. ಈವತ್ತಿಗೂ ನಮ್ಮ ಅಧಿಕೃತ ಸರಕಾರಿ ಲೆಕ್ಕಾಚಾರಗಳೆಲ್ಲ 2011ರ ಜನಗಣತಿಯನ್ನು ಆಧರಿಸಿಯೇ ನಡೆದಿದೆ. ಇನ್ನೂ ಘೋರ ತಮಾಷೆ ಎಂದರೆ, ಸ್ವತಃ NFHS ಒಂದು ಸ್ಥೂಲ ಸಮೀಕ್ಷೆಯೇ ಹೊರತು ನಿಖರ ಜನಗಣತಿ ಅಲ್ಲ! ಈಗ ಸರಕಾರ ಪ್ರಕಟಿಸಿರುವ NFHS-5 ಸಮೀಕ್ಷೆಗೆ ದೇಶದ 707 ಜಿಲ್ಲೆಗಳಿಂದ 6.37 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಲಾಗಿತ್ತು. (ಆಧಾರ: PIB Release ID: 1823047). ಈ ಸಣ್ಣ ಸಮೀಕ್ಷೆಯನ್ನು ಆಧರಿಸಿ, ಇಷ್ಟು ದೊಡ್ಡ ಗಾತ್ರದ ದೇಶದ ಬಡತನವನ್ನು ಅಂದಾಜು ಮಾಡಿ, ಬಡತನ ನಿವಾರಣೆ ಆಗಿದೆ ಎಂದು ಸರಕಾರ, ಯೋಜನಾ ಆಯೋಗಗಳೇ ಅಧಿಕೃತವಾಗಿ ಹೇಳತೊಡಗಿದರೆ, ಅದಕ್ಕೆ ಏನೆನ್ನೋಣ?!!
ಬೇರೆಲ್ಲ ಬಿಡಿ. ಕಳೆದ 9 ವರ್ಷಗಳಲ್ಲಿ, ದೇಶ ಅನುಭವಿಸಿರುವ ಸಾಮಾಜಿಕ-ಆರ್ಥಿಕ ಆಘಾತಗಳು ಒಂದೆರಡಲ್ಲ. 2016ರ ನವೆಂಬರ್ 08ರಂದು ಪ್ರಕಟಿಸಲಾದ ನೋಟು ರದ್ದತಿ, 2020ರ ಕೋವಿಡ್ ಲಾಕ್‌ಡೌನ್ ನೀಡಿದ ಆರ್ಥಿಕ ಹೊಡೆತ ಇವೆರಡೇ ಘಟನೆಗಳು ದೇಶದಲ್ಲಿ ಬಡವರಿಗೆ ಮತ್ತು ಆಗಷ್ಟೇ ಮಧ್ಯಮ ವರ್ಗದ ತಳಕ್ಕೆ ಏರಿದ್ದ ಜನರಿಗೆ ನೀಡಿದ ಹೊಡೆತ ಎಷ್ಟು ಅಗಾಧ ಪ್ರಮಾಣದ್ದೆಂಬುದರ ವಿಶ್ಲೇಷಣೆ ಇನ್ನಷ್ಟೇ ನಡೆಯಬೇಕಿದೆ. ಈಗ ದೇಶದಾದ್ಯಂತ ಪ್ರತಿದಿನವೆಂಬಂತೆ ನಡೆದಿರುವ ಆತ್ಮಹತ್ಯೆಗಳು, ಹಠಾತ್ ಸಾವುಗಳು, ಆರ್ಥಿಕ ಸಂಕಷ್ಟಗಳು ಇವೆಲ್ಲವೂ ಕೂಡ ‘‘ಬಡತನ ನಿರ್ಮೂಲನ’’ದ ಬದಲು ‘‘ಬಡವರ ನಿರ್ಮೂಲನ’’ ಕಾರ್ಯಕ್ರಮಗಳಾಗಿಯೇ ಕಾಣಿಸತೊಡಗಿವೆ. ಬಡವರು ಶ್ರೀಮಂತರ ನಡುವೆ ಕಳೆದ ಹತ್ತೇ ವರ್ಷಗಳಲ್ಲಿ, ಸಂಪತ್ತಿನ ಹಂಚಿಕೆಯಲ್ಲಾಗಿರುವ ಅಸಮತೋಲನ ಕಣ್ಣಿಗೆ ರಾಚುವಷ್ಟಿದೆ. ವಾಸ್ತವ ಹೀಗಿರುತ್ತಾ, ಬಡತನ ನಿರ್ಮೂಲನ ಆಗುತ್ತಿದೆ; ಇನ್ನು ಶೇ.11 ಮಾತ್ರ ಬಾಕಿ ಇದೆ ಎಂದಾಗ ಅದಕ್ಕೆ ಮಾಧ್ಯಮಗಳು, ಸರಕಾರದ ಸಮರ್ಥಕರು ಉಘೇ ಉಘೇ ಎಂದರೆ, ಇದು ಅರಸನ ಅದೃಶ್ಯ ಉಡುಪಿನ ಕಥೆ ಎನ್ನದೇ ಬೇರೇನು ಹೇಳಲು ಸಾಧ್ಯ?!!