ಕಳೆದುಕೊಂಡ ‘ಸೆಮಿಕಂಡಕ್ಟರ್’ ಅವಕಾಶಗಳು!
ಗಾಳಿ ಬಂದತ್ತ ತೂರಿಕೊಳ್ಳುವಾಗಲೂ ವಿಳಂಬ
ಕೃತಕ ಬುದ್ಧಿಮತ್ತೆ (ಎಐ) ಮತ್ತು ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ತಂತ್ರಜ್ಞಾನಗಳು ವೇಗ ಪಡೆದುಕೊಳ್ಳುತ್ತಿರುವಂತೆಯೇ ಜಗತ್ತು ಇಂಡಸ್ಟ್ರಿ ೫.೦ಗೆ ಸನ್ನದ್ಧ ವಾಗುತ್ತಿದೆ. ಸರಳವಾಗಿ ಹೇಳಬೇಕೆಂದರೆ, ಮನುಷ್ಯ ಮತ್ತು ಯಂತ್ರಗಳ ನಡುವೆ ಸಹಕಾರದ ಹೊಸ ಶಕೆ ಇದು. ಕೈಗಾರಿಕಾ ಉತ್ಪಾದಕತೆಯಲ್ಲಿ ಎಲ್ಲರಿಗೆ ಹೊಂದುವ ಪರಿಕರಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ಬದಲು, ಎಲ್ಲರಿಗೂ ಅವರವರ ಅವಶ್ಯಕತೆಗೆ ತಕ್ಕ ‘ಟೇಲರ್ ಮೇಡ್’ ಉತ್ಪನ್ನಗಳನ್ನು ಉತ್ಪಾದಿಸಬಲ್ಲ ವ್ಯವಸ್ಥೆಯೊಂದನ್ನು ತಂತ್ರಜ್ಞಾನ ಜಗತ್ತು ಎದುರುನೋಡುತ್ತಿದೆ. ಮೊಬೈಲ್ ಫೋನ್, ಕಂಪ್ಯೂಟರ್, ವೈದ್ಯಕೀಯ ಪರಿಕರಗಳು, ಮನೆಬಳಕೆಯ ಇಲೆಕ್ಟ್ರಾನಿಕ್ ವಸ್ತುಗಳಲ್ಲಿ ಈಗಾಗಲೇ ವ್ಯಾಪಕ ಬಳಕೆಯಲ್ಲಿರುವ ಸೆಮಿ ಕಂಡಕ್ಟರ್ ಚಿಪ್‌ಗಳ ಪಾತ್ರ ಈ ಇಂಡಸ್ಟ್ರಿ ೫.೦ ಮತ್ತು ೫ಜಿ ತಂತ್ರಜ್ಞಾನದ ಸನ್ನಿವೇಶದಲ್ಲಿ ಮಹತ್ವದ್ದು.
ಆರಂಭದಿಂದಲೂ ಸಾಫ್ಟ್‌ವೇರ್ ರಂಗದ ‘ಬಾಡಿ ಶಾಪಿಂಗ್’ಗಳಲ್ಲೇ ಸುಖವಾಗಿದ್ದ ಭಾರತಕ್ಕೆ ಈ ರೀತಿಯ ಹಾರ್ಡ್‌ವೇರ್ ‘ಉತ್ಪಾದನೆ’ಯ ಸಾಧ್ಯತೆಗಳತ್ತ ದೃಷ್ಟಿ ಹರಿಸಿದ್ದು ತೀರಾ ವಿಳಂಬವಾಗಿ. ಈ ನೀತ್ಯಾತ್ಮಕ ವಿಳಂಬದ ಕಾರಣಕ್ಕೆ ಏನೇನೆಲ್ಲ ನಡೆಯುತ್ತಿದೆ ಮತ್ತು ಈ ವಿಳಂಬವನ್ನೂ ದೊಡ್ಡದೊಂದು ಸಾಧನೆ ಎಂದು ಬಿಂಬಿಸುವ ‘ಮಾರ್ಕೆಟಿಂಗ್’ ಆಟವನ್ನೂ ಅರ್ಥಮಾಡಿಕೊಳ್ಳುವ ಪ್ರಯತ್ನ ಇದು.
ಗ್ಲೋಬಲ್ ವ್ಯಾಲ್ಯೂ ಚೈನ್ (ಜಿವಿಸಿ) ಎಂದರೆ: ಒಂದು ಉತ್ಪನ್ನದ ವಿನ್ಯಾಸ, ಉತ್ಪಾದನೆ, ಮಾರ್ಕೆಟಿಂಗ್, ವಿತರಣೆ, ಮಾರಾಟದಂತಹ ಹಲವು ಚಟುವಟಿಕೆಗಳು ಈಗ ಒಂದೆಡೆ ನಡೆಯುವುದಿಲ್ಲ. ಬದಲಾಗಿ ಜಾಗತಿಕ ಮಟ್ಟದಲ್ಲಿ ಹಲವು ದೇಶಗಳ ಹಲವು ಕೈಗಾರಿಕೆಗಳು ಅದರಲ್ಲಿ ಪಾಲ್ಗೊಂಡಿರುತ್ತವೆ. ಈ ಜಿವಿಸಿಯಲ್ಲಿ ಭಾರತದ ಪಾತ್ರ ತೀರಾ ತೀರಾ ಸಣ್ಣದು. ೯೦ರ ದಶಕದಲ್ಲಷ್ಟೇ ಉದಾರೀಕರಣಕ್ಕೆ ತೆರೆದುಕೊಂಡ ಭಾರತದ ಜಿವಿಸಿ ಪಾಲು ೧೯೯೦ರಲ್ಲಿ ಶೇ. ೦.೫ ಇತ್ತು. ಅದು ೨೦೧೮ರ ಹೊತ್ತಿಗೆ ಶೇ. ೧.೭ಕ್ಕೆ ಏರಿದ್ದರೆ, ಈಗ ೨೦೨೨ ಹೊತ್ತಿಗೆ ಶೇ. ೨.೧ಕ್ಕೆ ತಲುಪಿದೆ. ಮುಂದುವರಿದ ದೇಶಗಳ ಜಿವಿಸಿ ಪಾಲು ಶೇ. ೭೮ ಇದ್ದರೆ, ವಿಕಾಸಶೀಲ ದೇಶಗಳ ಪಾಲು ಶೇ. ೨೧. ಅಮೆರಿಕ, ಚೀನಾ, ಜಪಾನ್, ದ. ಕೊರಿಯಾ, ಮಲೇಶ್ಯ, ಸಿಂಗಾಪುರ ಹೀಗೆ ಬಹುತೇಕ ಎಲ್ಲ ದೇಶಗಳೂ ಜಿವಿಸಿಯಲ್ಲಿ ಭಾರತಕ್ಕಿಂತ ಬಹಳ ಮೇಲಿವೆ. (ಆಧಾರ: ಇಂಡಿಯಾ ಬ್ರೀಫಿಂಗ್)
ಭಾರತದ ಜಿವಿಸಿ ಪಾತ್ರ ಇನ್ನೂ ಕಚ್ಚಾ ವಸ್ತುಗಳು ಮತ್ತು ಮಧ್ಯಂತರ/ಬಿಡಿಭಾಗಗಳ ರಫ್ತಿಗೆ ಸೀಮಿತವಾಗಿದೆಯೇ ಹೊರತು ಆಮದಿತ ವಸ್ತುಗಳನ್ನು ಸಿದ್ಧ ಉತ್ಪನ್ನಗಳನ್ನಾಗಿಸಿ ರಫ್ತು ಮಾಡುವ ಸಾಮರ್ಥ್ಯ ನಮಗೆ ಒದಗಿಬಂದಿಲ್ಲ. ನಮ್ಮಲ್ಲಿ ಸಂಪನ್ಮೂಲಗಳು, ಬೃಹತ್ ಗ್ರಾಹಕ ಮಾರುಕಟ್ಟೆ, ಕಾರ್ಮಿಕ ಶಕ್ತಿ ಇದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳಬಲ್ಲ ನೀತ್ಯಾತ್ಮಕ ವ್ಯವಸ್ಥೆ ಇಲ್ಲ ಎಂಬುದು ಸಾಮಾನ್ಯ ದೂರು.
ಕೋವಿಡ್ ಕೊಟ್ಟ ವರ!
ಕೋವಿಡ್ ಕಾಲದಲ್ಲಿ ಜಗತ್ತಿನಾದ್ಯಂತ ಸರಬರಾಜು ಸರಪಣಿಗಳಲ್ಲಿ ಅಡಚಣೆಗಳು ಉಂಟಾಗುವುದರ ಜೊತೆಜೊತೆಗೆ, ಬೃಹತ್ ಉತ್ಪಾದಕ ಶಕ್ತಿಗಳಾಗಿರುವ ಅಮೆರಿಕ ಮತ್ತು ಚೀನಾಗಳ ನಡುವಿನ ಜಿಯೊಪೊಲಿಟಿಕಲ್ ಹಗ್ಗಜಗ್ಗಾಟದ ಕಾರಣಕ್ಕೆ, ಒಂದು ಮಹತ್ವದ ಬೆಳವಣಿಗೆ ನಡೆಯಿತು. ಉತ್ಪಾದನೆ ಮತ್ತು ಸರಬರಾಜು ಸಾಮರ್ಥ್ಯಗಳಲ್ಲಿ ಭೀಮನಾಗಿರುವ ಚೀನಾದ ಮೇಲೆ ಅವಲಂಬನೆ ನಂಬಲರ್ಹವಲ್ಲ ಎಂಬ ಕಾರಣಕ್ಕೆ ಬಹುರಾಷ್ಟ್ರೀಯ ಕಂಪೆನಿಗಳು ಮೊದಲ ಬಾರಿಗೆ ತಮ್ಮ ಉತ್ಪಾದನಾ ಸರಬರಾಜು ಸರಪಣಿಗೆ ‘ಚೀನಾ ಪ್ಲಸ್ ವನ್’ ಸೂತ್ರವನ್ನು ಅಳವಡಿಸಿಕೊಳ್ಳತೊಡಗಿದವು. ಏಶ್ಯದಲ್ಲಿ ಕಡಿಮೆ ಖರ್ಚಿನ ಲೇಬರ್ ಮತ್ತು ಸರಕಾರಗಳ ಕಡೆಯಿಂದ ಆಕರ್ಷಕ ಹೂಡಿಕೆ ಇನ್ಸೆಂಟಿವ್‌ಗಳಿರುವ ಭಾರತ, ವಿಯೆಟ್ನಾಂ, ಥಾಯ್ಲೆಂಡ್, ಮಲೇಶ್ಯ, ಇಂಡೋನೇಶ್ಯ ದೇಶಗಳೆಲ್ಲ ಈ ಪಟ್ಟಿಯಲ್ಲಿ ಜಾಗ ಪಡೆದವು.
ಜಗತ್ತಿನ ಸೆಮಿಕಂಡಕ್ಟರ್ ವಿನ್ಯಾಸ ಕ್ಷೇತ್ರದಲ್ಲಿ ಶೇ. ೨೦ರಷ್ಟು ಇಂಜಿನಿಯರ್‌ಗಳು ಭಾರತೀಯರು. ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ವಿಎಲ್‌ಎಸ್‌ಐ (ಅಂದರೆ ಪುಟ್ಟ ಚಿಪ್ ಒಂದರಲ್ಲಿ ಲಕ್ಷಾಂತರ ಟ್ರಾನ್ಸಿಸ್ಟರ್‌ಗಳನ್ನು ಅಳವಡಿಸುವ ಮೂಲಕ ಇಂಟೆಗ್ರೇಟೆಡ್ ಸರ್ಕ್ಯೂಟ್‌ಗಳನ್ನು ಉತ್ಪಾದಿಸುವ ತಂತ್ರ) ಡಿಸೈನ್ ಇಂಜಿನಿಯರ್‌ಗಳಾಗಿ ಜಗತ್ತಿನ ವಿವಿಧ ಸೆಮಿಕಂಡಕ್ಟರ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೂ ತೀರಾ ಇತ್ತೀಚಿನ ತನಕವೂ ಭಾರತ ಸೆಮಿಕಂಡಕ್ಟರ್ ರಂಗದತ್ತ ಗಂಭೀರವಾಗಿ ಗಮನ ಹಾಯಿಸಿರಲಿಲ್ಲ. ಈಗ ಚೀನಾ ಪ್ಲಸ್ ವನ್ ಸೂತ್ರದಡಿ ಭಾರತಕ್ಕೆ ಅವಕಾಶ ಇದೆ ಎಂದು ಅನ್ನಿಸತೊಡಗಿದಾಗಲೂ, ಭಾರತ ರಂಗಕ್ಕೆ ಧುಮುಕಲು ವಿಳಂಬ ಮಾಡಿತು. ೨೦೨೧ ಡಿಸೆಂಬರ್ ವೇಳೆಗೆ ಭಾರತ ಸರಕಾರ ತನ್ನ Semicon India ಯೋಜನೆಯನ್ನು ಪ್ರಕಟಸಿತು. ೭೬,೦೦೦ ಕೋಟಿ ರೂ.ಗಳ ಅಗಾಧ ಮೊತ್ತವನ್ನು ಪ್ರೋತ್ಸಾಹಧನ ರೂಪದಲ್ಲಿ ಕೊಡುವ ಯೋಜನೆ ಅದು. ೨೦೨೨ರ ಫೆಬ್ರವರಿ ಹೊತ್ತಿಗೆ ಭಾರತ ಜಾಗತಿಕವಾಗಿ ಆಸಕ್ತರ ಅರ್ಜಿಗಳನ್ನು ಕರೆದಾಗ, ಸುಮಾರು ೧.೫೪ ಲಕ್ಷ ಕೋಟಿ ರೂ. ಹೂಡಿಕೆ ಮಾಡುವ ೫ ಪ್ರಸ್ತಾವಗಳು ಬಂದಿದ್ದವಂತೆ (PIB Release ID: ೧೭೯೯೬೨೧).
ಇದರಲ್ಲಿ ಸದ್ದು ಮಾಡಿದ್ದು, ಭಾರತದ ವೇದಾಂತ ಮತ್ತು ತೈವಾನ್ ಮೂಲದ ಫಾಕ್ಸ್‌ಕಾನ್ ಒಟ್ಟಾಗಿ ೬೦:೪೦ ಪಾಲುದಾರಿಕೆಯಲ್ಲಿ ಆರಂಭಿಸಲುದ್ದೇಶಿಸಿದ್ದ ಯೋಜನೆ. ಮೂಲತಃ ಮಹಾರಾಷ್ಟ್ರದಲ್ಲಿ ಆರಂಭಿಸಲುದ್ದೇಶಿಸಲಾಗಿದ್ದ ಈ ೧.೫ ಲಕ್ಷ ಕೋಟಿ ರೂ. ಹೂಡಿಕೆ ಇರುವ ಯೋಜನೆಯನ್ನು ೨೦೨೨ರ ಆಗಸ್ಟ್ ಹೊತ್ತಿಗೆ, ಅಲ್ಲಿಂದ ಕಸಿದು ಗುಜರಾತಿನಲ್ಲಿ ಆರಂಭಿಸಲು ಭಾರತ ಸರಕಾರ ತೀರ್ಮಾನಿಸಿತು. ಅದಕ್ಕಾಗಿ ಒಂದು ಸಾವಿರ ಎಕರೆ ಜಾಗವನ್ನು ನೀಡಲು ನಿರ್ಧರಿಸಲಾಯಿತು. ಒಂದು ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ಗುಜರಾತಿನ ವಿಧಾನಸಭೆಯಲ್ಲಿ ಆಳುವ ಪಕ್ಷಕ್ಕೆ ೧೮೨ರಲ್ಲಿ ೧೫೬ ಸೀಟುಗಳನ್ನು ತಂದುಕೊಟ್ಟತು. ಆದರೆ ೨೦೨೩ರ ಜುಲೈ ಹೊತ್ತಿಗೆ ಈ ಯೋಜನೆ ಟುಸ್ ಎಂದಿತು. ಇದಕ್ಕೆ ಸಕಾಲದಲ್ಲಿ ಸರಕಾರದ ಸಬ್ಸಿಡಿ ಇನ್ಸೆಂಟಿವ್‌ಗಳು ಸಿಗದಿದ್ದುದು ಮೂಲ ಕಾರಣ ಎಂದು ‘ಫಿನಾನ್ಷಿಯಲ್ ಟೈಮ್ಸ್’ (ಆಗಸ್ಟ್ ೧೫, ೨೦೨೩) ವರದಿ ಮಾಡಿದೆ.
೨೦೨೩ರ ಫೆಬ್ರವರಿ ಹೊತ್ತಿಗೆ ಭಾರತದಲ್ಲಿ ಸೆಮಿಕಂಡಕ್ಟರ್ ರಂಗದ ಸ್ಥಿತಿ ಹೇಗಿತ್ತೆಂದರೆ, ರೈಲು ಹೋದ ಬಳಿಕ ರೈಲು ನಿಲ್ದಾಣಕ್ಕೆ ಬಂದಂತಾಗಿದೆ. ಟಿಎಸ್‌ಎಂಸಿ, ಸ್ಯಾಮ್‌ಸಂಗ್, ಇಂಟೆಲ್ ಮೊದಲಾದ ದೊಡ್ಡ ಸೆಮಿಕಂಡಕ್ಟರ್ ಉತ್ಪಾದಕರು ಏಶ್ಯದ ಬೇರೆ ದೇಶಗಳೊಂದಿಗೆ ರಂಗಕ್ಕೆ ಇಳಿದಾಗಿದೆ. ಹಾಗಾಗಿ ಭಾರತ ಈಗ ಸಹನೆಯಿಂದ ಕಾದು ಕುಳಿತು ದೀರ್ಘಕಾಲಿಕ ಪರ್ಯಾಯ ತಂತ್ರಗಳತ್ತ ನೋಡಬೇಕಾಗಿದೆ. ಜೊತೆಗೆ ಭಾರತ ಸರಕಾರದಿಂದ ಶೇ. ೫೦ರಷ್ಟು ಅಪ್‌ಫ್ರಂಟ್ ಸಬ್ಸಿಡಿ, ಜೊತೆಗೆ ರಾಜ್ಯ ಸರಕಾರಗಳಿಂದ ಶೇ. ೧೦-೨೫ ಹೆಚ್ಚುವರಿ ಸಬ್ಸಿಡಿ- ಹೀಗೆ ಮುಕ್ಕಾಲು ಭಾಗ ಸಬ್ಸಿಡಿ ಆಫರ್ ನೀಡಿಯೂ ಸೆಮಿಕಂಡಕ್ಟರ್ ರಂಗದ ಆರಂಭಿಕ ‘ರಶ್’ನಲ್ಲಿ ಭಾರತ ಗಮನಾರ್ಹ ಪಾತ್ರವಹಿಸಲು ಸಾಧ್ಯವಾಗಲಿಲ್ಲ! ಬರೀ ಬಾಯಿ ಬಡಾಯಿಗಳ ಬದಲು ಸೆಮಿಕಂಡಕ್ಟರ್ ರಂಗದಲ್ಲಿ ಸರಕಾರದ ಉದ್ದೇಶ ಏನಿತ್ತು ಮತ್ತು ಈಗ ಅದರ ಪ್ರಯತ್ನಗಳ ಒಟ್ಟು ಫಲಿತಾಂಶ ಏನು ಎಂಬುದನ್ನು ವಿಶ್ಲೇಷಿಸಿ, ಅಗತ್ಯವಿರುವ ಕೋರ್ಸ್ ಕರೆಕ್ಷನ್‌ಗಳನ್ನು ಮಾಡಿಕೊಳ್ಳುವುದಕ್ಕಿದು ಸಕಾಲ.