ಔಷಧಿ ರಂಗದಲ್ಲಿ ಬಾಲವೇ ನಾಯಿಯನ್ನು ಅಲ್ಲಾಡಿಸತೊಡಗಿರುವುದು!
ಉದಾರೀಕರಣದ ಹೆಸರಲ್ಲಿ 35 ವರ್ಷಗಳ ಬಳಿಕ, ಹಿಡಿದಿರುವ ತಪ್ಪು ಹಾದಿಯ ಒಂದೊಂದೇ ಫಲಿತಾಂಶಗಳು ಈಗ ಹೊರಬರತೊಡಗಿವೆ. ಶಿಕ್ಷಣ, ಆರೋಗ್ಯ, ಕೃಷಿ, ಆಹಾರ, ವಸತಿ, ಮೂಲಸೌಕರ್ಯ ಹೀಗೆ ಬದುಕಿನ ಪ್ರತಿದಿನದ ಮುಖ್ಯ ಅಂಗಗಳೇ ಈ ರೀತಿ ಹದತಪ್ಪಿ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸತೊಡಗಿದಾಗ, ಒಮ್ಮೆ ನಿಂತು, ಇಲ್ಲಿಯ ತನಕ ಹಾದುಬಂದ ಹಾದಿಯನ್ನು ಹಿಂದಿರುಗಿ ನೋಡುವುದು ಅನಿವಾರ್ಯ. ಅಂತಹ ಸ್ಥಿತಿಯನ್ನು ನಾವೀಗ ತಲುಪಿದ್ದೇವೆ. ಔಷಧಿ ರಂಗದಲ್ಲಿ ಹೇಗೆ ಉದ್ಯಮಗಳು ಸರಕಾರವನ್ನು ಅಲುಗಾಡಿಸತೊಡಗಿವೆ ಎಂಬುದಕ್ಕೆ ಒಂದು ಲೇಟೆಸ್ಟ್ ಉದಾಹರಣೆ ಇಲ್ಲಿದೆ.
ಆಗಿರುವುದು ಇಷ್ಟು
ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಇದೇ ಆಗಸ್ಟ್ 02ರಂದು ತಾನು ಹೊರಡಿಸಿದ್ದ ನೋಂದಾಯಿತ ವೈದ್ಯರ (ವೃತ್ತಿಪರ ವರ್ತನೆಗಳು) ನಿಯಮ, 2023ನ್ನು, ಆಗಸ್ಟ್ 23ರಂದು ಏಕಾಏಕಿ ಮುಂದಿನ ಸೂಚನೆಗಳ ತನಕ ತಡೆಹಿಡಿಯಿತು (No. R-12013/01/2022/Ethics) ಮತ್ತು ಹಳೆಯ ನಿಯಮಗಳೇ ಮುಂದುವರಿಯಲಿವೆ ಎಂದು ಹೇಳಿತು.
ಹೊಸ ನಿಯಮದಲ್ಲಿ ವಿಶೇಷ ಏನಿತ್ತೆಂದರೆ, ವೈದ್ಯರು ತಮ್ಮ ರೋಗಿಗಳಿಗೆ ವೈದ್ಯಚೀಟಿಗಳನ್ನು ಬರೆಯುವಾಗ ಹೊಸ ನಿಯಮಗಳನ್ವಯ ಕಡ್ಡಾಯವಾಗಿ ಜನರಿಕ್ ಔಷಧಿಗಳನ್ನೇ ಬರೆಯಬೇಕು ಎಂದು ವಿಧಿಸಲಾಗಿತ್ತು. ಈ ನಿಯಮಕ್ಕೆ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಭಾರತೀಯ ಔಷಧಿ ಉತ್ಪಾದಕರ ಒಕ್ಕೂಟ (ಐಪಿಎ) ಮತ್ತು ಕೇಂದ್ರೀಯ ಔಷಧಿ ಗುಣಮಟ್ಟ ಮತ್ತು ಔಷಧಿ ನಿಯಂತ್ರಣ ಸಂಸ್ಥೆ (CDSCO)ಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಭಾರತ ಸರಕಾರದ ಆರೋಗ್ಯ ಇಲಾಖೆ ಮಧ್ಯ ಹಸ್ತಕ್ಷೇಪ ಮಾಡಬೇಕಾಯಿತು. ಎನ್‌ಎಂಸಿ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು.
ಇದೇನೆಂದು ಜನಸಾಮಾನ್ಯರಿಗೆ ಅರ್ಥ ಆಗುವ ಭಾಷೆಯಲ್ಲಿ ಹೇಳಬೇಕೆಂದರೆ, ಉದಾಹರಣೆಗೆ, ಜ್ವರಕ್ಕೆ ಸಾಮಾನ್ಯವಾಗಿ ವೈದ್ಯರು ಶಿಫಾರಸು ಮಾಡುವ ಡೋಲೊ, ಕ್ರೋಸಿನ್, ಪನಡಾಲ್, ಮೆಟಾಸಿನ್, ಕ್ಯಾಲ್‌ಪಾಲ್, ಫೆಪಾನಿಲ್ ಇತ್ಯಾದಿ ಪ್ರಸಿದ್ಧ ಬ್ರ್ಯಾಂಡ್ ಹೆಸರುಗಳನ್ನು ವೈದ್ಯಚೀಟಿಯಲ್ಲಿ ಬರೆಯುವ ಬದಲಾಗಿ, ವೈದ್ಯರು ಹೊಸ ನಿಯಮದನ್ವಯ, ಕಡ್ಡಾಯವಾಗಿ ಅದರ ಜನರಿಕ್ ಹೆಸರು ‘ಪಾರಾಸೆಟಾಮಾಲ್’ ಎಂದು ಬರೆಯಬೇಕಾಗಿತ್ತು. ಔಷಧಿ ಅಂಗಡಿಯವರು ಈ ವೈದ್ಯಚೀಟಿ ನೋಡಿ, ರೋಗಿಗೆ ಯಾವ ಬ್ರ್ಯಾಂಡಿನ ಪಾರಾಸೆಟಾಮಾಲ್ ಕೊಡಬೇಕೆಂದು ತಾವು ನಿರ್ಧರಿಸಬೇಕಾಗುತ್ತಿತ್ತು.
ಸದ್ಯದ ವ್ಯವಸ್ಥೆಯಲ್ಲಿ ಎನ್‌ಎಂಸಿಯ ಈ ಹೊಸ ನಿಯಮ ತೀರಾ ಅವಾಸ್ತವಿಕ ಮತ್ತು ಕಾರ್ಯಸಾಧುವಲ್ಲ ಎಂಬ ನಿರ್ಧಾರವನ್ನು ಔಷಧಿ ಉದ್ದಿಮೆ, ವೈದ್ಯರು, ಔಷಧಿ ವ್ಯಾಪಾರಸ್ಥರು ತಳೆದದ್ದರಿಂದ ಎನ್‌ಎಂಸಿ ತನ್ನ ತೀರ್ಮಾನದಿಂದ ಹಿಂದೆ ಸರಿಯಬೇಕಾಯಿತು. ಮೇಲುನೋಟಕ್ಕೆ ಇದು ನಿಜ ಕೂಡ. ಉದಾರೀಕೃತ ಸನ್ನಿವೇಶದಲ್ಲಿ ನೀತಿ ನಿರೂಪಕರು ವ್ಯವಸ್ಥೆಯನ್ನು ರೂಪಿಸುವ ನಿಯಮಗಳಿಗೆ ಸಂಬಂಧಿಸಿ ತೀರಾ ಸಡಿಲಾಗಿ, ಮೇಲ್ಪದರದಲ್ಲಿ ವ್ಯವಹರಿಸಿದಾಗ, ಆ ವ್ಯವಸ್ಥೆ ಬಲಿಷ್ಠರ ಪರವಾಗಿ ವರ್ತಿಸತೊಡಗುತ್ತದೆ ಎಂಬುದಕ್ಕೆ ಈಗ ಸಿಗುತ್ತಿರುವ ನೂರಾರು ಉದಾಹರಣೆಗಳಿಗೆ ಇದು ಹೊಸ ಸೇರ್ಪಡೆ.
ಏನು ಕಾರಣ?
ಔಷಧಿ ರಂಗದಲ್ಲಿ 1970ರಿಂದ 2018ರ ನಡುವೆ ಸಂಭವಿಸಿದ ಹಲವು ನೀತ್ಯಾತ್ಮಕ ಬದಲಾವಣೆಗಳ ಕಾರಣದಿಂದಾಗಿ ಭಾರತದಲ್ಲಿ ಖಾಸಗಿ ಔಷಧಿ ಕಂಪೆನಿಗಳು ಚಿಗುರಿಕೊಂಡವು. ಅದರ ವಿವರಗಳಿಗೆ ಇಲ್ಲಿ ಹೋಗುವುದಿಲ್ಲ. ಆದರೆ, 1970ರ ಹೊತ್ತಿಗೆ ದೇಶದಲ್ಲಿ ಔಷಧಿ ವ್ಯಾಪಾರ ಅಂದಾಜು 2,500 ಕೋಟಿ ರೂ.ಗಳದ್ದಾಗಿದ್ದರೆ, ಇಂದು ಭಾರತವು ಜಗತ್ತಿನ 13ನೇ ಅತಿದೊಡ್ಡ ಔಷಧಿ ಉತ್ಪಾದಕ ದೇಶವಾಗಿದ್ದು, 4 ಲಕ್ಷ ಕೋಟಿ ರೂ.ಗಳ ವ್ಯವಹಾರ ನಡೆಸುತ್ತಿದೆ, ಅದು 2030ರ ಹೊತ್ತಿಗೆ 10.5 ಲಕ್ಷ ಕೋಟಿ ರೂ.ಗಳ ಬೃಹತ್ ಗಾತ್ರಕ್ಕೆ ಬೆಳೆಯಲಿದೆಯಂತೆ.
2008ರಲ್ಲಿ ಆರಂಭಗೊಂಡ ಸರಕಾರಿ ಜನ ಔಷಧಿ ಕೇಂದ್ರಗಳು, 2015ರಲ್ಲಿ ಫಾರ್ಮಾ ಕಂಪೆನಿಗಳ ಗುಣಮಟ್ಟ ನಿಯಂತ್ರಣಕ್ಕಾಗಿ ಔಷಧಿ ಮಾರಾಟಕ್ಕೆ ಸಮಾನ ಸಂಹಿತೆಯ (ಯುಸಿಪಿಎಂಪಿ) ಸಹಿತ ಮರುಲಾಂಚ್ ಆಗಿ, ಊರೂರುಗಳಲ್ಲಿ ಇಂದು ಜನರಿಕ್ ಔಷಧಿಗಳು ಲಭ್ಯವಿವೆ. ದೇಶದೆಲ್ಲೆಡೆ ಜನರಿಕ್ ಔಷಧಿ ಕ್ರಾಂತಿ ಸಂಭವಿಸಿದೆ ಎಂದು ಬಿಂಬಿಸಲಾಗುತ್ತಿದೆ. ಹಾಗಿರುವಾಗ, ಎನ್‌ಎಂಸಿಯ ಹೊಸ ನಿಯಮಕ್ಕೆ ಔಷಧಿ ಉದ್ದಿಮೆಗಳು ಈಗ ಏಕೆ ವಿರೋಧ ವ್ಯಕ್ತಪಡಿಸಿದವು? ಅವರ ವಿರೋಧಕ್ಕೆ ಸರಕಾರ ಮತ್ತು ಎನ್‌ಎಂಸಿ ಹೇಗೆ ಇಷ್ಟು ಸುಲಭವಾಗಿ ಬಗ್ಗಿದವು?
ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ ಭಾರತ ಸರಕಾರದ ಈ ಸುಧಾರಣಾ ಕ್ರಮಗಳು ಎಷ್ಟು ಮೇಲ್ಪದರದವಾಗಿದ್ದವು ಎಂಬುದು ಬಯಲಿಗೆ ಬರುತ್ತದೆ. ಭಾರತದಲ್ಲಿ ಔಷಧಿಗಳಿಗೆ ಬಯೊ ಈಕ್ವಿವಲೆನ್ಸ್ ತಪಾಸಣೆ ಕಡ್ಡಾಯವಾದದ್ದು ತೀರಾ ಇತ್ತೀಚೆಗೆ. ಅಂದರೆ, 2017ರಲ್ಲಿ. ಅದು ಪೂರ್ವಾನ್ವಯ ಆಗಿರದಿರುವುದರಿಂದ ಭಾರತದಲ್ಲಿ 2017ಕ್ಕಿಂತ ಹಿಂದಿನ ಜನರಿಕ್ ಔಷಧಿಗಳು ಬಯೋ ಈಕ್ವಿವಲೆನ್ಸ್ ತಪಾಸಣೆಗಳಿಗೆ ಒಳಗಾಗದಿರಬಹುದು. ಭಾರತದಲ್ಲಿ ಗುಣಮಟ್ಟ ತಪಾಸಣೆಗೆ ಒಳಗಾಗಿರುವ ಜನರಿಕ್ ಔಷಧಿಗಳ ಪ್ರಮಾಣ ಇನ್ನೂ ಶೇ. 1ನ್ನು ಮೀರಿಲ್ಲ ಎಂದು ಐಎಂಎಯು ದೇಶದ ಆರೋಗ್ಯ ಸಚಿವರಿಗೆ ಬರೆದಿರುವ ತನ್ನ ಆಕ್ಷೇಪ ಪತ್ರದಲ್ಲಿ ಹೇಳಿರುವುದಾಗಿ ಪತ್ರಿಕೆಗಳು ವರದಿ ಮಾಡಿವೆ. (ಅಂದಹಾಗೆ ಬಯೋ ಈಕ್ವಿವಲೆನ್ಸ್ ಎಂದರೆ, ಒಂದು ಔಷಧಿ ಅದನ್ನು ಸೇವಿಸಿದ ವ್ಯಕ್ತಿಯ ದೇಹದಲ್ಲಿ ಹೀರಿಕೆಯಾಗುವ ಮತ್ತು ಅರಗುವ ದರವು ಮೂಲ ಸಂಶೋಧಿತ ಔಷಧಿಯ ಹೀರಿಕೆ-ಅರಗುವಿಕೆಗಳ ಸ್ವರೂಪದಲ್ಲೇ ಇದೆಯೇ ಎಂದು ಪರಿಶೀಲಿಸುವ ಅಧ್ಯಯನ.)
ಈ ಹಿನ್ನೆಲೆಯಲ್ಲಿ ಸರಕಾರದ ನಿಯಮವನ್ನು ವಿರೋಧಿಸಿದವರು ತಮ್ಮ ವಾದವನ್ನು ಸರಕಾರದೆದುರು ಬಲವಾಗಿ ಮಂಡಿಸಿದ್ದಾರೆ. ಅವರ ವಾದಸರಣಿ ಹೀಗಿದೆ: ಔಷಧಿ ಮಾರಾಟಗಾರರು ಸಹಜವಾಗಿಯೇ ತಮಗೆ ಹೆಚ್ಚು ಲಾಭ ತಂದುಕೊಡುವ ಮತ್ತು ಕಡಿಮೆ ದರದ ಔಷಧಿಗಳನ್ನು ಮಾರಿದರೆ ದೊಡ್ಡ ಬ್ರ್ಯಾಂಡಿನ ಕಂಪೆನಿಗಳಿಗೆ ನಷ್ಟವಾಗುತ್ತದೆ. ಯಾಕೆಂದರೆ ಹೆಚ್ಚಿನ ದೊಡ್ಡ ಬ್ರ್ಯಾಂಡ್‌ಗಳು ಅಮೆರಿಕದ ಯುಎಸ್‌ಎಫ್‌ಡಿಎ ಮಾನದಂಡದ ಗುಣಮಟ್ಟ ಕಾಪಾಡುತ್ತವೆ. ಅದು ದುಬಾರಿ ಪ್ರಕ್ರಿಯೆ. ಸಣ್ಣ ಉತ್ಪಾದಕರು ಕೆಲವೊಮ್ಮೆ ಷೆಡ್ಯೂಲ್ ಎಂ ನಿಯಮಗಳನ್ನೂ (ಉತ್ಪಾದನಾ ಮಾನದಂಡಗಳು) ಪಾಲಿಸುವುದಿಲ್ಲ. ಅಂತಹ ಔಷಧಿಗಳನ್ನು ಸ್ವೀಕರಿಸಿದ ರೋಗಿಯಲ್ಲಿ ಎಲ್ಲ ಬ್ರ್ಯಾಂಡ್‌ಗಳೂ ಒಂದೇ ಪರಿಣಾಮ ಬೀರುವುದು ಖಚಿತವಿಲ್ಲ. ಇಂತಹ ಹೊಸ ನಿಯಮ ಜಾರಿಗೆ ಬಂದರೆ ಔಷಧಿ ಉದ್ದಿಮೆಗೆ ಸಮಸ್ಯೆ ಇಲ್ಲ. ಬದಲಾಗಿ, ವೈದ್ಯರ ಕರ್ತವ್ಯ ನಿರ್ವಹಣೆಗೆ ಅದು ಕಡಿವಾಣ ಹಾಕುತ್ತದೆ. ಔಷಧಿ ಸಮರ್ಪಕವಾಗಿ ಕೆಲಸ ಮಾಡದಿದ್ದಾಗಲೂ ದೂರು ವೈದ್ಯರ ಮೇಲೆ ಬೀಳುತ್ತದೆ. ಒಟ್ಟು ವ್ಯವಸ್ಥೆಯಲ್ಲಿ ವೈದ್ಯರು ಬಲಿಪಶುಗಳಾಗುತ್ತಾರೆ. ಜೊತೆಗೆ ಭಾರತದಲ್ಲಿ ಔಷಧಿ ನಿಯಂತ್ರಣ, ಫಾರ್ಮಕೋವಿಜಿಲೆನ್ಸ್, ಫಾರ್ಮಕೊಪಿಯಾ ವ್ಯವಸ್ಥೆಗಳೂ ಸಮರ್ಪಕವಾಗಿಲ್ಲ ಎಂದೆಲ್ಲ ಅವರುಗಳು ಸರಕಾರದೆದುರು ತಮ್ಮ ಅಹವಾಲುಗಳನ್ನು ಮುಂದಿಟ್ಟಿದ್ದಾರೆ.
ಈ ಮೂಲ ವ್ಯವಸ್ಥೆಗಳನ್ನು ಸರಿಪಡಿಸುವ ಹೊಣೆ ಹೊತ್ತಿರುವ ಸರಕಾರ, ತನ್ನ ಜವಾಬ್ದಾರಿಗಳನ್ನು ಸಕಾಲದಲ್ಲಿ, ಸಮರ್ಪಕವಾಗಿ ನಿರ್ವಹಿಸದಿರುವುದರಿಂದ, ಈಗ ಜಾರಿಗೊಳಿಸಿರುವ ಹೊಸ ನಿಯಮವನ್ನು ಹಿಂದೆಗೆದುಕೊಳ್ಳಬೇಕಾದ ಸ್ಥಿತಿಗೆ ತಲುಪಿದೆ. ಇದಲ್ಲವೇ ಬಾಲವೇ ನಾಯಿಯನ್ನು ಅಲ್ಲಾಡಿಸುವ ಸ್ಥಿತಿ?!