ಶಿಕ್ಷಣದಲ್ಲೂ ಭಕ್ಷೀಸು ಹೊಡೆಯುವ ‘ನ್ಯಾಕ್’ (NAAC)

ಉದಾರೀಕರಣದ ಬಲುದೊಡ್ಡ ಕೊಡುಗೆಗಳಲ್ಲಿ ಇದೂ ಒಂದು. ‘ಮೇಲುಸಂಪಾದನೆ’ ಇಲ್ಲದ ಕಾರಣಕ್ಕಾಗಿ ಒಂದಾನೊಂದು ಕಾಲದಲ್ಲಿ ಯಾರಿಗೂ ಬೇಡವಾಗಿದ್ದ ಶಿಕ್ಷಣ ಇಲಾಖೆಯ ಸರಕಾರಿ ಉದ್ಯೋಗಗಳು ಭಾರೀ ಲಾಭದಾಯಕವಾದದ್ದು ಉದಾರೀಕರಣದ ಬಳಿಕವೇ. ಸಾರ್ವಜನಿಕ ಬದುಕು ಈಗ ನೈತಿಕವಾಗಿ ಎಷ್ಟು ಕಳಪೆ ಮಟ್ಟಕ್ಕೆ ತಲುಪಿದೆ ಎಂಬುದಕ್ಕೆ ಕೂಡ, ಶಿಕ್ಷಣ ಇಲಾಖೆಯಲ್ಲಿ ಇಂದು ತಾಂಡವ ಆಡುತ್ತಿರುವ ಭ್ರಷ್ಟಾಚಾರವೇ ಸಾಕ್ಷಿ.
ಫೆಬ್ರವರಿ ಮೊದಲ ವಾರದಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಡ್ಡೇಶ್ವರಂನಲ್ಲಿರುವ ಕೊನೆರು ಲಕ್ಷ್ಮಯ್ಯ ಎಜುಕೇಷನ್ ಫೌಂಡೇಷನ್ (KLEF) ಅಲ್ಲಲ್ಲಿ ಚದುರಿದಂತೆ ಸುದ್ದಿಯಲ್ಲಿತ್ತು. ವಿಷಯ ಏನಪ್ಪಾ ಅಂದರೆ, ಆ ಶಿಕ್ಷಣ ಸಂಸ್ಥೆಯ ಪರಿಶೀಲನೆಗೆ ಹೋದ National Assessment and Accreditation Council (NAAC) ಸಮಿತಿಯ ಸದಸ್ಯರು, ಆ ಖಾಸಗಿ ವಿವಿಗೆ A++ ಗ್ರೇಡ್ ನೀಡಲು ಕೇಳಿದ ಲಂಚ ಬರೋಬ್ಬರಿ 1.80 ಕೋಟಿ ರೂ.! ಅದರಲ್ಲಿ ಚೌಕಾಸಿ ನಡೆದು, ಕಡೆಗೆ 28 ಲಕ್ಷ ರೂ. ಲಂಚಕ್ಕೆಂದು ಹಸ್ತಾಂತರ ಆಗಿದೆಯಂತೆ. ಈ ಪ್ರಕರಣ ಸಿಬಿಐ ಗಮನಕ್ಕೆ ಬಂದು, ಈಗ 14 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ; ಆಪಾದಿತರನ್ನು ಬಂಧಿಸಲಾಗಿದೆ. ಬಂಧಿತ ಓಂಂಅ ತಪಾಸಣಾ ಸಮಿತಿಯ ಸದಸ್ಯರಲ್ಲಿ ಇಬ್ಬರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು, ಇಬ್ಬರು ಉಪಕುಲಪತಿಗಳು, ಇಬ್ಬರು ಡೀನ್‌ಗಳು ಮತ್ತು ಮೂವರು ವಿವಿ ಪ್ರೊಫೆಸರ್‌ಗಳು ಸೇರಿದ್ದಾರೆ.
ಈ ಸಂಘಟಿತ ಭ್ರಷ್ಟಾಚಾರದ ಸುದ್ದಿ, ಸರಕಾರಿ ವ್ಯವಸ್ಥೆಯನ್ನು ಹೊರತುಪಡಿಸಿ ಬೇರೆ ಯಾರಿಗೂ ಅಚ್ಚರಿ ತಂದಿಲ್ಲ. NAAC ಪೀರ್ ರಿವ್ಯೆ ಎಂದು ಬರುವ ಶಿಕ್ಷಣವೇತ್ತ ‘ಸಾಹೇಬರುಗಳಿಗೆ’ ಮೋಜು, ಮೇಜವಾನಿ ಏರ್ಪಾಡುಗಳು ದೇಶದ ಯಾವುದೇ NAAC ಅಕ್ರೆಡಿಟೇಷನ್ ಹೊಂದಿರುವ ಶಿಕ್ಷಣ ಸಂಸ್ಥೆಗೆ ಹೊಸದಲ್ಲ. ಈ ತಪಾಸಣಾ ತಂಡದಂತಹ ಆಯಕಟ್ಟಿನ ಜಾಗಗಳಿಗೆ ನೇಮಕಾತಿಯಲ್ಲಿ ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ಪಾತ್ರ, ಅದಕ್ಕಿರಬಹುದಾದ ರಾಜಕೀಯ ಮಗ್ಗುಲುಗಳ ಕುರಿತೆಲ್ಲ ಚರ್ಚೆ ಆರಂಭಗೊಂಡಿದೆ. ಇಷ್ಟೆಲ್ಲ ಆದರೂ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈ ಮಟ್ಟದ ಭ್ರಷ್ಟಾಚಾರ ಇದೆ ಎಂಬುದು ಯಾರಿಗೂ ಅಚ್ಚರಿ ತಂದಿಲ್ಲ! ಇದು ನಮ್ಮ ಇಂದಿನ ಸಾರ್ವಜನಿಕ ಬದುಕಿನ ಸ್ಥಿತಿ.
ಈ ಬೆಳವಣಿಗೆಗಳಿಂದ ಮುಜುಗರಕ್ಕೆ ಒಳಗಾಗಿರುವ NAAC, ಏಕಾಏಕಿ ತನ್ನ ಪೀರ್ ರಿವ್ಯೆವರ್‌ಗಳಲ್ಲಿ ಅಂದಾಜು ಐದನೇ ಒಂದು ಭಾಗವನ್ನು, ಅಂದರೆ ಸುಮಾರು 900 ಮಂದಿಯನ್ನು ಆ ಜವಾಬ್ದಾರಿಯಿಂದ ಮುಕ್ತಗೊಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಈ ವಾರದ ಆದಿಯಲ್ಲಿ (ಫೆ. 25) ವರದಿ ಮಾಡಿದೆ. ಇವರೆಲ್ಲರೂ ದೇಶದ ಪ್ರತಿಷ್ಠಿತ ವಿವಿಗಳ ಅನುಭವಿ ಪ್ರೊಫೆಸರ್‌ಗಳು, ಆಡಳಿತಗಾರರು ಮತ್ತು ತಜ್ಞರು ಎಂಬ ಸಂಗತಿಯು ನಮ್ಮ ದೇಶಕ್ಕೆ ಭ್ರಷ್ಟಾಚಾರದ ರೋಗ ಹೇಗೆ ಗುಣಗೊಳ್ಳಲು ಎಡೆಯಿಲ್ಲದಂತೆ, ಆಳವಾಗಿ ಅಮರಿಕೊಂಡಿದೆ ಎಂಬ ವಾಸ್ತವಕ್ಕೆ ಹಿಡಿದ ಕನ್ನಡಿ.
1986ರ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ, ಕುಸಿಯುತ್ತಿರುವ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಸುಧಾರಿಸಲು NAAC ಸ್ಥಾಪನೆಗೊಂಡದ್ದು 1994ರಲ್ಲಿ. ಇದು ಯುಜಿಸಿಯ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆ. ಶಿಕ್ಷಣ ವ್ಯವಸ್ಥೆ ಖಾಸಗೀಕರಣಗೊಳ್ಳುತ್ತಾ ಸಾಗಿದಂತೆಲ್ಲ ಈ NAAC ಗ್ರೇಡಿಂಗ್ ಪಡೆಯುವ ಪ್ರಕ್ರಿಯೆ ವೇಗಗೊಳ್ಳತೊಡಗಿತು. 2023ರ ಹೊತ್ತಿಗೆ ದೇಶದಲ್ಲಿ 820 ವಿವಿಗಳು ಮತ್ತು 15,501 ಕಾಲೇಜುಗಳು NAAC ಅಕ್ರೆಡಿಟೇಷನ್ ಗಳಿಸಿಕೊಂಡಿವೆ. ಆದರೆ ದೇಶದ ಶೇ. 50 ವಿವಿಗಳು ಮತ್ತು ಶೇ. 75 ಕಾಲೇಜುಗಳು ಇನ್ನೂ NAAC ವ್ಯಾಪ್ತಿಗೆ ಬರುವುದು ಬಾಕಿ ಇದೆ ಎನ್ನುತ್ತಿವೆ, ಅಂಕಿಅಂಶಗಳು! ಕೇವಲ ದಾಖಲೆಗಳನ್ನು ಆಧರಿಸಿ ನಡೆಯುವ ಈ ಗುಣಮಟ್ಟ ನಿರ್ಧಾರ ಪ್ರಕ್ರಿಯೆ ಈಗ ಯಾವ ಮಟ್ಟಿಗೆ ವಾಣಿಜ್ಯೀಕರಣಗೊಂಡಿದೆ ಎಂದರೆ, 2021ರ ಮಾರ್ಚ್ 5ರಂದು ಸ್ವತಃ NAAC ಒಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿ, ‘‘ಕೆಲವು ಖಾಸಗಿ ಕಂಪೆನಿಗಳು ಮತ್ತು ವ್ಯಕ್ತಿಗಳು, ತಾವು ಶಿಕ್ಷಣ ಸಂಸ್ಥೆಗಳಿಗೆ ಉತ್ತಮ NAAC ಗ್ರೇಡಿಂಗ್ ಪಡೆಯಲು ವೃತ್ತಿಪರ ಸಹಾಯ ಒದಗಿಸುವ ವ್ಯವಹಾರ ನಡೆಸುತ್ತೇವೆ ಎಂದು ಹೇಳಿಕೊಂಡು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳನ್ನು (HEIs) ಸಂಪರ್ಕಿಸುತ್ತಿದ್ದಾರೆ. ಈ ವ್ಯವಸ್ಥೆಯನ್ನು NAAC ಬೆಂಬಲಿಸುವುದಿಲ್ಲ ಮತ್ತು ಸಮರ್ಥಿಸುವುದಿಲ್ಲ’’ ಎಂದು ಹೇಳಿಕೆ ನೀಡಬೇಕಾದ ಸನ್ನಿವೇಶ ಬಂದಿತ್ತು.
ಈಗ ಭ್ರಷ್ಟಾಚಾರ ಪ್ರಕರಣಗಳು ಬಯಲಾಗಿರುವ ಹಿನ್ನೆಲೆಯಲ್ಲಿ, NAAC ಕಾರ್ಯನಿರ್ವಾಹಕ ಸಮಿತಿಯ ಅಧ್ಯಕ್ಷ ಪ್ರೊ. ಅನಿಲ್ ಸಹಸ್ರಬುದ್ಧೆ ಅವರು, ಬಾಕಿ ಉಳಿದುಕೊಂಡಿರುವ ಪೀರ್ ರಿವ್ಯೆವರ್‌ಗಳಿಗೆ ಪತ್ರ ಬರೆದು, ‘‘ನೀವು ನಿರ್ವಹಿಸುತ್ತಿರುವುದು ರಾಷ್ಟ್ರೀಯ ಮಹತ್ವದ ಜವಾಬ್ದಾರಿ’’ ಎಂದು ನೆನಪಿಸಿದ್ದಾರೆ. ಇಡಿಯ ಅಕ್ರೆಡಿಟೇಷನ್ ವ್ಯವಸ್ಥೆಯನ್ನು ಆನ್‌ಲೈನ್ ಮೂಲಕ ನಿರ್ವಹಿಸಬೇಕೆಂಬ ಡಾ. ಕೆ. ರಾಧಾಕೃಷ್ಣನ್ ಸಮಿತಿ ವರದಿಯ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತಿರುವ ಸೂಚನೆಯನ್ನು NAAC ವ್ಯವಸ್ಥೆ ನೀಡಿದೆ. 2022ರ ನವೆಂಬರ್‌ನಲ್ಲಿ ರೂಪುಗೊಂಡ ಈ ಓವರ್‌ರೀಚಿಂಗ್ ಸಮಿತಿಯ ಅಧ್ಯಕ್ಷರು ಇಸ್ರೋದ ಮಾಜಿ ಮುಖ್ಯಸ್ಥರಾದ ಡಾ. ಕೆ. ರಾಧಾಕೃಷ್ಣನ್. ಸಮಿತಿಯ ಉದ್ದೇಶ, NAAC ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ, 2037ರ ಹೊತ್ತಿಗೆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (HEIs) ಕಲಿಕೆಗೆ ನೋಂದಣಿಗೊಳ್ಳುವ ವಿದ್ಯಾರ್ಥಿಗಳ ಪ್ರಮಾಣವನ್ನು (Gross Enrolment Ratio-GER) ಶೇ. 50ಕ್ಕೆ ಏರಿಸುವುದಾಗಿತ್ತು. ಸಮಿತಿಯು 2024ರ ಜನವರಿ 16ರಂದು ತನ್ನ ಅಂತಿಮ ವರದಿಯನ್ನು ಭಾರತ ಸರಕಾರದ ಶಿಕ್ಷಣ ಸಚಿವರಿಗೆ ನೀಡಿದ್ದು, ಅವರದನ್ನು ಅಂಗೀಕರಿಸಿದ್ದಾರೆ. ಮಾನವ ಹಸ್ತಕ್ಷೇಪ ತೀರಾ ಕಡಿಮೆ ಇರುವಂತಹ ತಂತ್ರಜ್ಞಾನ ಆಧರಿತ ವ್ಯವಸ್ಥೆ ಜಾರಿಗೆ ತರುವುದು, ಹಾಲೀ ಗ್ರೇಡಿಂಗ್ ವ್ಯವಸ್ಥೆಯ ಬದಲು ಮೆಚ್ಯುರಿಟಿ ಆಧರಿತ ಗ್ರೇಡಿಂಗ್ ವ್ಯವಸ್ಥೆಯ ಮೂಲಕ ರಾಷ್ಟ್ರೀಯ ಮಹತ್ವದ ಶಿಕ್ಷಣ ಸಂಸ್ಥೆಗಳು ಮತ್ತು ಜಾಗತಿಕ ಮಹತ್ವದ ಶಿಕ್ಷಣ ಸಂಸ್ಥೆಗಳನ್ನು ಗುರುತಿಸುವುದು, One size fits all ವ್ಯವಸ್ಥೆಯ ಬದಲು ಗ್ರಾಮೀಣ ಶಿಕ್ಷಣ ಸಂಸ್ಥೆಗಳನ್ನೂ ಒಳಗೊಳ್ಳುವಂತೆ ವ್ಯವಸ್ಥೆಯನ್ನು ರೂಪಿಸುವುದು ಹಾಗೂ ಡೇಟಾ ನಿರ್ವಹಣೆಗೆ One Nation One Platform ವ್ಯವಸ್ಥೆಗಳನ್ನು ಈ ಸಮಿತಿ ಶಿಫಾರಸು ಮಾಡಿತ್ತು. ಇವನ್ನೆಲ್ಲ 2024ರಲ್ಲಿ ಹಂತಹಂತವಾಗಿ ಜಾರಿಗೆ ತರಲು ಭಾರತ ಸರಕಾರದ ಶಿಕ್ಷಣ ಇಲಾಖೆ ಯೋಜಿಸಿತ್ತು.
ಈ ಉದ್ದೇಶಿತ ಸುಧಾರಣೆಗಳು ಇನ್ನೇನು ಅನುಷ್ಠಾನದ ಹಂತದಲ್ಲಿವೆ ಎನ್ನುವಾಗಲೇ ಈ ಭ್ರಷ್ಟಾಚಾರದ ಹಗರಣ ಬಯಲಾಗಿರುವುದರಿಂದ, ಲೋಪದ ಜವಾಬ್ದಾರಿ ಹೊರಬೇಕಾಗಿದ್ದವರೆಲ್ಲ ಬೀಸುವ ಕತ್ತಿಯಿಂದ ತಪ್ಪಿಸಿಕೊಂಡಿದ್ದಾರೆ. ಹೊಸ ವ್ಯವಸ್ಥೆ ಈ ಲೋಪಗಳನ್ನೆಲ್ಲ ಸರಿಪಡಿಸಲಿದೆ ಎಂಬುದು ಅವರ ನಂಬಿಕೆ. ಕೇವಲ ದಾಖಲೆಗಳನ್ನು ಆಧರಿಸಿದ ಆಡಿಟ್ ಪ್ರಕ್ರಿಯೆಗಳು ಎಷ್ಟು ಪೊಳ್ಳಾಗಿರಬಲ್ಲವು ಎಂಬುದನ್ನು ಭಾರತದ ಮಟ್ಟಿಗೆ, ‘ಗುಣಮಟ್ಟ’ ನಿರ್ಧಾರದ ವ್ಯವಸ್ಥೆಗಳು ಎಲ್ಲ ರಂಗಗಳಲ್ಲೂ ಈಗಾಗಲೇ ತೋರಿಸಿಕೊಟ್ಟಿವೆ. ‘ಇನ್ ಲೆಟರ್’ ಎಲ್ಲವೂ ಸರಿ ಇದ್ದಂತೆ ತೋರಿದರೂ, ‘ಇನ್ ಸ್ಪಿರಿಟ್’ ಹಾಗಿರಬೇಕಾಗಿಲ್ಲ ಎಂಬುದು ವಾಸ್ತವ. ಈ ವಾಸ್ತವಕ್ಕೆ ಶಿಕ್ಷಣ ರಂಗವೂ ಹೊರತಲ್ಲ. ಹೊಸ ವ್ಯವಸ್ಥೆ ಚಾಪೆಯಡಿ ನುಸುಳಿದರೆ, ಅಲ್ಲಿ ಕಾಸು ಗೋರುವ ಹಾದಿ ಕಂಡುಂಡವರು ರಂಗೋಲಿಯಡಿ ನುಸುಳಿರುತ್ತಾರೆ.
ಹಾಲೀ ಭ್ರಷ್ಟಾಚಾರ ಪ್ರಕರಣದಲ್ಲಿ, ಕರ್ನಾಟಕದ ಇಬ್ಬರು ‘ತಜ್ಞ’ ವ್ಯಕ್ತಿಗಳ ಹೆಸರು ಬಹಿರಂಗಗೊಂಡಿದೆ. ಒಬ್ಬರು ದಾವಣಗೆರೆ ವಿವಿಯ ಪ್ರೊ. ಗಾಯತ್ರಿ ದೇವರಾಜ್ ಮತ್ತು ಇನ್ನೊಬ್ಬರು ಬೆಂಗಳೂರು ವಿವಿಯ ಕಂಪ್ಯೂಟರ್ ಸಯನ್ಸ್ ವಿಭಾಗದ ಎಂ. ಹನುಮಂತಪ್ಪ. ಈ ಬಗ್ಗೆ ಮಾಧ್ಯಮವೊಂದು ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವರನ್ನು ಪ್ರಶ್ನಿಸಿದಾಗ, ಸಚಿವರು ಸಿಬಿಐ ಕಡೆಯಿಂದ ಈ ಬಗ್ಗೆ ಸಾಕ್ಷ್ಯಾಧಾರಗಳು ದೊರೆತರೆ, ಆಪಾದಿತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರಂತೆ. ಅಂಗೈ ಹುಣ್ಣಿಗೆ ಹೀಗೆ ಸಾಕ್ಷ್ಯಗಳನ್ನು ಕೇಳುವುದು ಸರಕಾರದ ಉದ್ದೇಶಗಳ ಬಗ್ಗೆಯೇ ಪ್ರಶ್ನೆಗಳನ್ನು ಮೂಡಿಸುತ್ತದೆ. ಉನ್ನತ ಶಿಕ್ಷಣ ಇಲಾಖೆಯಂತಹ ದೇಶದ ಭವಿಷ್ಯವನ್ನು ರೂಪಿಸುವ ಹೊಣೆ ಹೊತ್ತಿರುವ ಸಂಸ್ಥೆಯೊಂದು ಸ್ವಯಂಸ್ಫೂರ್ತಿಯಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಆಮೂಲಾಗ್ರ ಪರಿಶೀಲನೆ ನಡೆಸಬೇಕಿತ್ತು. ಎಲ್ಲವೂ ರಾಜಕೀಯ ಕಾಟಾಚಾರವಾಗತೊಡಗಿದರೆ, ಅದು ಆತಂಕ ತರಬೇಕಾದ ಭಯಾನಕ ಸ್ಥಿತಿ.