‘‘ಹೊಸಮುಖ್ ಭಾಯಿ’’ ರಾಜಕೀಯ!
ಆಡಳಿತದಲ್ಲಿರುವ ರಾಜಕೀಯ ಪಕ್ಷಗಳು ತಮ್ಮ ವೈಫಲ್ಯ ಮತ್ತು ಅದರ ಫಲವಾಗಿ ಮತದಾರರಲ್ಲಿ ಮೂಡುವ ‘‘ಆಡಳಿತ ವಿರೋಧಿ’’ ಅಲೆಗಳನ್ನು (Anti incumbency) ಹತ್ತಿಕ್ಕಲು ಕಡೆಗೂ ಒಂದು ಪರಿಣಾಮಕಾರಿ ವಿಧಾನವನ್ನು ಕಂಡುಕೊಂಡಂತಿದೆ. ಅದೇನೆಂದರೆ, ಒಂದು ಕ್ಷೇತ್ರದ ಜನಪ್ರತಿನಿಧಿಯಾಗಿ ಒಂದಿಡೀ ಅವಧಿಯನ್ನು ಮುಗಿಸಿರುವ ವ್ಯಕ್ತಿಯನ್ನು ಕೊನೆಯ ಕ್ಷಣದಲ್ಲಿ ಬದಲಿಸಿ, ಹೊಚ್ಚ ಹೊಸ ಮುಖವೊಂದನ್ನು ಮತದಾರರ ಮುಂದೊಡ್ಡಿ, ಅವರ ಸಿಟ್ಟನ್ನು ತಣಿಸಲು ಮತ್ತು ಅವರ ಮುಂಗೈಗೆ ಮತ್ತೊಂದು ಅವಧಿಗೆ ಬೆಲ್ಲ ಸವರಲು ಪ್ರಯತ್ನಿಸುವುದು!
ನೆಲದ ಕಾನೂನು, ದೇಶದ ಯಾವನೇ ಪ್ರಜೆಗೆ ನಿರ್ದಿಷ್ಟ ಅರ್ಹತೆಗಳಿದ್ದರೆ ಚುನಾವಣೆಗಳಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುತ್ತದೆ. ಈ ಅವಕಾಶವನ್ನು ಕಾಯಾ, ವಾಚಾ, ಮನಸಾ ಬಳಸುವ ಬದಲು, ಏನಾದರೊಂದು ಕಥನ ಕಟ್ಟುವ ಮೂಲಕ ಚಾಪೆಯಡಿ, ರಂಗೋಲಿಯಡಿ ತೂರಿಯಾದರೂ ಚುನಾವಣೆ ಗೆಲ್ಲುವ ‘‘ಟೂಲ್’’ ಆಗಿ ಬಳಸಿಕೊಳ್ಳುವುದು ಈಗೀಗ ಬಹಳ ಸಲೀಸಾಗಿ ನಡೆಯುತ್ತಿದೆ. ದೇಶದ ಸಾರ್ವಜನಿಕ ಬದುಕಿನ ನೈತಿಕ ಅಧಃಪತನದ ಆಳವನ್ನು ಅಳೆಯಲು ಈಗ ಇದೂ ಒಂದು ಮಾನದಂಡ.
2000ನೇ ಇಸವಿಯ ತನಕ ಎಲ್ಲೋ ಅಪರೂಪಕ್ಕೆ ಬಳಕೆ ಆಗುತ್ತಿದ್ದ ಈ ‘‘ಹೊಸಮುಖ್ ಭಾಯಿ’’ ತಂತ್ರ ಪರಿಣಾಮಕಾರಿ ಟೂಲ್ ಆಗಬಹುದು ಎಂದು ಖಚಿತವಾದದ್ದು 2002ರ ಗುಜರಾತ್ ಚುನಾವಣೆಗಳ ವೇಳೆ. ಅಂದು ಬಿಜೆಪಿ ಪೂರ್ಣಾವಧಿ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿಯವರು ಹಠಾತ್ತಾಗಿ ಆ ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆಯಾದರು. ಅಲ್ಲಿಂದ 2014ರ ತನಕದ ಅವಧಿ ಭಾರತೀಯ ಜನತಾ ಪಕ್ಷಕ್ಕೆ ದೇಶದಲ್ಲಿ ಒಂದು ಪ್ರಬಲ ಆಡಳಿತಾರೂಢ ಪಕ್ಷವಾಗಿ ರೂಪುಗೊಳ್ಳುವ ಅವಧಿಯಾಗಿತ್ತು. ಆ ಅವಧಿಯಲ್ಲೇ ಬಿಜೆಪಿ ಗೆಲ್ಲಬಲ್ಲ ಅಭ್ಯರ್ಥಿಗಳನ್ನು ಗುರುತಿಸುವ ತನ್ನ ಪ್ರಕ್ರಿಯೆ ಆರಂಭಿಸಿದ್ದು. ಹೀಗೆ ಆರಂಭಗೊಂಡ ‘‘ಹೊಸಮುಖ’’ಗಳನ್ನು ಸ್ಪರ್ಧೆಗೆ ಒಡ್ಡುವ ಪ್ರಯತ್ನಗಳು ಯಶಸ್ವಿಯಾಗುತ್ತವೆ ಎಂಬುದು ಖಚಿತಗೊಳ್ಳುತ್ತಲೇ, ಅದೀಗ ಒಂದು ‘‘ಗೆಲ್ಲುವ ತಂತ್ರ’’ವಾಗಿ ರೂಪುಗೊಂಡಿದೆ. ಬಿಜೆಪಿ ಮಾತ್ರವಲ್ಲದೆ ಬೇರೆ ರಾಜಕೀಯ ಪಕ್ಷಗಳೂ ಈ ತಂತ್ರವನ್ನೀಗ ಯಥೇಚ್ಛ ಬಳಸುತ್ತಿವೆ.
ಈ ತಂತ್ರ ರೂಪುಗೊಂಡ ಹಾದಿಯನ್ನು ಅಂಕಿ-ಅಂಶಗಳ ಮೂಲಕವೂ ಸಮರ್ಥಿಸಿಕೊಳ್ಳಬಹುದು.
1999ರ ಸಾರ್ವತ್ರಿಕ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಶೇ. 83.1 ಅಭ್ಯರ್ಥಿಗಳು ಹಾಲಿ ಸಂಸದರೇ ಆಗಿದ್ದರು. ಅಂದರೆ ಆಗ ಹೊಸ ಮುಖಗಳ ಪ್ರಮಾಣ, ಕೇವಲ ಶೇ. 16.9 ಮಾತ್ರ. (ಇದು ಕಾರ್ಗಿಲ್ ಯುದ್ಧದ ಬಳಿಕ ಕೆಲವೇ ತಿಂಗಳುಗಳಲ್ಲಿ ನಡೆದ ಮತ್ತು ವಾಜಪೇಯಿ ಅವರು ಮೊದಲ ಬಾರಿಗೆ ಪ್ರಧಾನಿಯಾಗಿ ಪೂರ್ಣಾವಧಿ ಪೂರೈಸಲು ಅವಕಾಶ ಮಾಡಿಕೊಟ್ಟ ಚುನಾವಣೆ.)
2004ರ ಸಾರ್ವತ್ರಿಕ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಶೇ. 79 ಅಭ್ಯರ್ಥಿಗಳು ಹಾಲೀ ಸಂಸದರೇ ಆಗಿದ್ದರು. ಅಂದರೆ ಆಗ ಹೊಸ ಮುಖಗಳ ಪ್ರಮಾಣ ಕೇವಲ ಶೇ. 21 ಮಾತ್ರ. ಇದರಲ್ಲಿ ಬಿಜೆಪಿಯ ಪಾಲು ಶೇ. 19.3. (ಇದು ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಘೋಷಣೆಯೊಂದಿಗೆ ಸ್ಪರ್ಧಿಸಿದ ಬಿಜೆಪಿಯು ಅಚ್ಚರಿಯೆಂಬಂತೆ ಚುನಾವಣೆ ಸೋತು, ಯುಪಿಎ ಸರಕಾರ ಆಡಳಿತಕ್ಕೆ ಬರಲು ಕಾರಣವಾದ ಚುನಾವಣೆ.)
2009ರ ಸಾರ್ವತ್ರಿಕ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಹಾಲಿ ಸಂಸದರ ಸ್ಪರ್ಧೆಯ ಪ್ರಮಾಣ ಶೇ. 66.3ಕ್ಕೆ ಇಳಿಯಿತು. ಅಂದರೆ ಹೊಸ ಮುಖಗಳ ಪ್ರಮಾಣ, ಶೇ. 33.7ಕ್ಕೆ ಏರಿಕೆ ಆಯಿತು. ಇದರಲ್ಲಿ ಬಿಜೆಪಿಯ ಹೊಸ ಮುಖಗಳ ಪ್ರಮಾಣ ಶೇ. 41.2ರಷ್ಟಿತ್ತು. (ಇದು, ಯುಪಿಎ ಸರಕಾರ ಎರಡನೇ ಅವಧಿಗೆ ಆಯ್ಕೆ ಆದ ಚುನಾವಣೆ.)
2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿ ಅಭ್ಯರ್ಥಿ ಎಂದು ಮುಂಚೂಣಿಗೆ ಬಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ, ಎಲ್ಲ ರಾಜಕೀಯ ಪಕ್ಷಗಳ ಶೇ. 72 ಅಭ್ಯರ್ಥಿಗಳು ಹಾಲಿ ಸಂಸದರಾಗಿದ್ದರು. ಅಂದರೆ ಹೊಸ ಮುಖಗಳ ಪ್ರಮಾಣ ಶೇ. 28. ಇವರಲ್ಲಿ ಬಿಜೆಪಿಯ ಹೊಸಮುಖಗಳ ಪಾಲು ಶೇ. 29.1.
ನರೇಂದ್ರ ಮೋದಿಯವರ ಎರಡನೇ ಅವಧಿಗೆ, ಅಂದರೆ 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಎರಡು ಪ್ರಮುಖ ರಾಜಕೀಯ ಪಕ್ಷಗಳೂ ಮುಖ ಬದಲಾವಣೆಯ ತಂತ್ರವನ್ನು ನೆಚ್ಚಿಕೊಂಡಂತೆ ಕಾಣಿಸುತ್ತದೆ. ಆ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ಸ್ಪರ್ಧಿಸಿದ ಹಳೆಯ ಮುಖಗಳು ಒಟ್ಟು ಕೇವಲ ಶೇ. 59.3 ಮಾತ್ರ. ಅಂದರೆ ಶೇ. 40.7 ಹೊಸಮುಖಗಳೇ. ಇದರಲ್ಲಿ ಬಿಜೆಪಿಯ ಹೊಸಮುಖಗಳ ಪಾಲು ಶೇ. 43.3.
ಈ ಬಾರಿ 2024ಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ. ಆಡಳಿತ ಪಕ್ಷವಾಗಿರುವ ಬಿಜೆಪಿ ತನ್ನ ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ಮತ್ತೆ ಹೊಸಮುಖಗಳತ್ತ ಗಮನ ಹರಿಸಿರುವುದು ಕರ್ನಾಟಕದಲ್ಲೇ ನಿಚ್ಚಳವಾಗಿ ಕಾಣಿಸುತ್ತಿದೆ. ಪೂರ್ಣ ಚಿತ್ರ ಸಿಗಲು ಇನ್ನೂ ಕೆಲವು ವಾರಗಳು ಬೇಕಾಗಬಹುದು.
ಇದು ಏನು ಹೇಳುತ್ತದೆ?
ಈ ಲೆಕ್ಕಾಚಾರಗಳನ್ನು ಒಟ್ಟಾಗಿ ನೋಡಿದಾಗ, ಅವು ಏನನ್ನು ಬಿಂಬಿಸುತ್ತವೆ ಎಂದರೆ, 2009ರಿಂದ ಈಚೆಗೆ ‘ಅಧಿಕಾರ ವಿರೋಧಿ ಅಲೆ’ಯ ಬಿಸಿಯನ್ನು ತಪ್ಪಿಸಿಕೊಳ್ಳುವುದಕ್ಕೆ ಹೊಸಮುಖಗಳ ಆಯ್ಕೆ ಒಂದು ಪರಿಣಾಮಕಾರಿ ‘‘ಟೂಲ್’’ ಎಂಬುದೀಗ ಎಲ್ಲ ರಾಜಕೀಯ ಪಕ್ಷಗಳಿಗೂ ಮನಗತ.
ಹೊಸಮುಖ್ ಭಾಯಿ ತಂತ್ರ, ನಮ್ಮ ಬದಲಾಗುತ್ತಿರುವ ಪ್ರಜಾತಾಂತ್ರಿಕ ವ್ಯವಸ್ಥೆಯ ಹಲವು ಮಗ್ಗುಲುಗಳತ್ತ ಕೂಡ ಬೊಟ್ಟು ಮಾಡುತ್ತದೆ. ಪ್ರಜೆಗಳೇ, ಪ್ರಜೆಗಳಿಂದ, ಪ್ರಜೆಗಳಿಗಾಗಿ ಆಯ್ಕೆ ಮಾಡಿಕೊಳ್ಳಬೇಕಾದ ಸರಕಾರಗಳ ಜಾಗದಲ್ಲಿ ಈಗ, ರಾಜಕೀಯ ಪಕ್ಷಗಳ ಹೈಕಮಾಂಡ್‌ಗಳು, ಗರ್ಭಗುಡಿಗಳು ಎಲ್ಲೋ ಕುಳಿತು ತಮ್ಮ ಲೆಕ್ಕಾಚಾರಗಳಿಗೆ ಸರಿಹೊಂದುವಂತೆ ಆಯ್ಕೆ ಮಾಡಿದ ಅಭ್ಯರ್ಥಿಗಳನ್ನು ಮತದಾರರ ಮೇಲೆ ಹೇರುವ ತಂತ್ರಗಾರಿಕೆಯಲ್ಲಿ ಹಂತಹಂತವಾಗಿ ಯಶಸ್ಸು ಕಾಣುತ್ತಿವೆ; ಈ ಟ್ರಯಲ್ ಆ್ಯಂಡ್ ಎರರ್ ಪ್ರಯೋಗಗಳಿಗೆ ಆ ಜನಪ್ರತಿನಿಧಿಗಳು ಪ್ರತಿನಿಧಿಸುವ ಕ್ಷೇತ್ರದ ಹಿತಾಸಕ್ತಿಗಳು ಮತ್ತು ಮತದಾರರ ಹಿತಾಸಕ್ತಿಗಳು ಬಲಿಪಶು ಆಗುತ್ತಿವೆ. ಇಲ್ಲೀಗ ಜನನಾಯಕರು ನೆಲದಲ್ಲಿ ಮೂಡುವುದಿಲ್ಲ. ಮೇಲಿನಿಂದ ಹೇರಲಾದ ಜನಪ್ರತಿನಿಧಿಗಳು ನಿರೀಕ್ಷೆಯಂತೆ ಕೆಲಸ ಮಾಡದಿದ್ದಾಗ, ಅವರನ್ನು ತಿರಸ್ಕರಿಸುವ ಮತದಾರರ ಹಕ್ಕನ್ನು ಕೂಡ ಈ ತಂತ್ರದ ಮೂಲಕ ನಿರಾಕರಿಸಲಾಗುತ್ತಿದೆ.
ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾದ ಬೆಳವಣಿಗೆ. ಇಂದು ನಂಬರ್‌ಗಳನ್ನು ನೆಚ್ಚಿಕೊಂಡ ಸಂಸದೀಯ ವ್ಯವಸ್ಥೆಯಲ್ಲಿ, ಜನಪ್ರತಿನಿಧಿಗಳಿಗೆ ಸಂಸತ್ತಿನ ಒಳಗೆ ತಮ್ಮ ಕ್ಷೇತ್ರದ ಹಿತಾಸಕ್ತಿಗಳನ್ನು ರಕ್ಷಿಸುವ ಅವಕಾಶ ಸಿಗುತ್ತಿಲ್ಲ ಎಂಬುದು ಒಂದುಕಡೆಯಾದರೆ, ಇನ್ನೊಂದು ಕಡೆ, ಸಂಸತ್ತಿನ ಹೊರಗೂ ತಮ್ಮ ಕ್ಷೇತ್ರದ ಹಿತಾಸಕ್ತಿಗಳಿಗೆ ಉತ್ತರದಾಯಿ ಆಗಿ ಉಳಿಯಲು ಸಾಧ್ಯವಾಗುತ್ತಿಲ್ಲ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ. ಸಂಸದೀಯ ವ್ಯವಸ್ಥೆಯಲ್ಲಿ ‘‘ಜನತಾ ಜನಾರ್ದನ’’ ಎಂಬ ಮಾತು ಹಳಸಿ ಹೋಗಿ, ಈಗೀಗ ಕೇಳಿಸುವುದೇ ಕಡಿಮೆ ಆಗಿರುವುದಕ್ಕೂ, ವ್ಯಕ್ತಿ ಕೇಂದ್ರಿತ ನಾಯಕತ್ವಗಳು ಬಲಗೊಳ್ಳುತ್ತಿರುವುದಕ್ಕೂ ಸಂಬಂಧಗಳನ್ನು ಸಕಾಲದಲ್ಲಿ ಗುರುತಿಸಿಕೊಳ್ಳದೆ ಹೋದರೆ, ಪರಿಸ್ಥಿತಿ ಇನ್ನಷ್ಟು ಕೆಡಲಿದೆ. ಸ್ವಾತಂತ್ರ್ಯಸಿಗುವ ಆಸುಪಾಸಿನಲ್ಲಿ, ದೇಶದಾದ್ಯಂತ ಅರಸೊತ್ತಿಗೆಗಳು ಅಲ್ಲಲ್ಲಿ, ಪ್ರಜಾಪ್ರಭುತ್ವದೆಡೆಗೆ ಸಾಗುವ ಹೆಸರಿನಲ್ಲಿ, ಪ್ರಜಾ ಪ್ರತಿನಿಧಿ ಸಭೆಗಳಿಗೆ ‘‘ತಮ್ಮ ಆಯ್ಕೆಯ’’ ಮಹನೀಯರನ್ನು ಕರೆಸಿಕೊಳ್ಳುತ್ತಿದ್ದ ವ್ಯವಸ್ಥೆಗೂ, ಹಾಲಿ ಹೊಸಮುಖ್ ಭಾಯಿ ವ್ಯವಸ್ಥೆಗೂ ದೊಡ್ಡ ವ್ಯತ್ಯಾಸ ಕಾಣಿಸುತ್ತಿಲ್ಲ. ಅಂದರೆ ನಮ್ಮದೀಗ ಹಿಮ್ಮುಖ ಚಲನೆ.
ಉಡುಪಿ-ಚಿಕ್ಕಮಗಳೂರಿನಲ್ಲಿ
ಹೊಸಮುಖ ಪ್ರಯೋಗ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಆದಂತಿದೆ. 1998ರಲ್ಲಿ ಹೊಸಮುಖ ಐ.ಎಂ. ಜಯರಾಮ ಶೆಟ್ಟಿ ಅವರು ಆ ಹಿಂದಿನ ಐದು ಅವಧಿಗಳಿಗೆ ಸಂಸದರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಅವರ ಎದುರು ಚುನಾಯಿತರಾಗುವುದರೊಂದಿಗೆ ಈ ಸರಣಿ ಆರಂಭಗೊಂಡಿತು. ನಡುವಿನಲ್ಲಿ 1999 ಮತ್ತು 2012ರಲ್ಲಿ ಕ್ರಮವಾಗಿ ವಿನಯ ಕುಮಾರ್ ಸೊರಕೆ ಹಾಗೂ ಜಯಪ್ರಕಾಶ್ ಹೆಗ್ಡೆ ಅವರು ಅಲ್ಪಾವಧಿಗೆ ಕಾಂಗ್ರೆಸ್‌ನಿಂದ ಚುನಾಯಿತರಾದದ್ದು ಬಿಟ್ಟರೆ, ಇಂದಿನ ತನಕವೂ ಈ ಕ್ಷೇತ್ರ ಬಿಜೆಪಿಯ ಭದ್ರ ಕೋಟೆ. 2004ರಲ್ಲಿ, ಇಲ್ಲಿ ಮನೋರಮಾ ಮಧ್ವರಾಜ್ ಸಂಸದೆಯಾಗಿ ಚುನಾಯಿತರಾದರು. 2009ರಲ್ಲಿ ಸದಾನಂದ ಗೌಡರು, ಬಳಿಕ 2014ರಲ್ಲಿ ಶೋಭಾ ಕರಂದ್ಲಾಜೆ ಇಲ್ಲಿ ಚುನಾಯಿತರಾದರು. ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನಗಳಿತ್ತಾದರೂ 2019ರಲ್ಲಿ ಮತ್ತೆ ಶೋಭಾ ಅವರೇ ಆಯ್ಕೆ ಆದರು. ಈ ಬಾರಿ ಅವರ ವಿರುದ್ಧ ಗೋ ಬ್ಯಾಕ್ ಘೋಷಣೆಗಳು ಮೊಳಗಿದ ಹಿನ್ನೆಲೆಯಲ್ಲಿ, ಅವರನ್ನು ಬೆಂಗಳೂರು ಉತ್ತರಕ್ಕೆ ಸ್ಥಳಾಂತರಿಸಿ, ಇಲ್ಲಿ ಬಿಜೆಪಿಯಿಂದ ಹೊಸಮುಖ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅವಕಾಶ ನೀಡಲಾಗಿದೆ.