ಸಮುದ್ರಕ್ಕೆ ಹುಳಿ ಹಿಂಡಿದರೆ ಅದು ‘ನೀಲಿ ಕ್ರಾಂತಿ’ಯೇ?
ಇತ್ತೀಚೆಗಿನ ವರ್ಷಗಳಲ್ಲಿ, ಮೀನುಗಾರ ಸಮುದಾಯಗಳಲ್ಲಿ ಆತಂಕ ತಲೆದೋರಿದೆ. ಒಂದೆಡೆ ಮೀನುಕ್ಷಾಮದ ಚಿಂತೆಯಾದರೆ, ಇನ್ನೊಂದೆಡೆ ಭಾರತದ ಪಶ್ಚಿಮ ಕರಾವಳಿಯಲ್ಲಿ ಆಗಾಗ ಅಂತರ್ ರಾಜ್ಯ ಮೀನುಗಾರರ ನಡುವೆ ಬಿಗುವಿನ ವಾತಾವರಣ ಕಾಣಿಸಿಕೊಳ್ಳುತ್ತಿದೆ (ಗೋವಾ-ಕರ್ನಾಟಕ; ಕರ್ನಾಟಕ-ಕೇರಳ; ಗುಜರಾತ್-ಮಹಾರಾಷ್ಟ್ರ... ಹೀಗೆ). ಈ ಎಲ್ಲ ಬೆಳವಣಿಗೆಗಳ ‘ಬಿಗ್ ಪಿಕ್ಚರ್’ ಏನೆಂದು ಆಳಕ್ಕಿಳಿದು ನೋಡಿದರೆ, ಇದು ಸಾಂಪ್ರದಾಯಿಕ ಮೀನುಗಾರರನ್ನು ಮೀನುಗಾರಿಕೆಯಿಂದ ಹೊರಕಳುಹಿಸಿ, ರಫ್ತು ಆಧರಿತ ಕಾರ್ಪೊರೇಟ್ ಮೀನುಗಾರಿಕೆಗೆ ಹಾದಿ ತೆರೆಯುವ ಉದ್ದೇಶಪೂರ್ವಕ ಪ್ರಯತ್ನದಂತೆ ಕಾಣಿಸುತ್ತಿದೆ.
ಕಳೆದ ವಾರ ಗೋವಾದಲ್ಲಿ ಉಡುಪಿಯ ಮಲ್ಪೆ ಬಂದರಿನಿಂದ ಹೊರಟ ಎರಡು ಟ್ರಾಲ್ ಬೋಟುಗಳನ್ನು ಅಲ್ಲಿನ ಸರಕಾರ ಅಕ್ರಮ ಮೀನುಗಾರಿಕೆಗಾಗಿ ವಶಪಡಿಸಿಕೊಂಡಿದೆ; ಅದಕ್ಕಿಂತ ಕೆಲವೇ ದಿನಗಳ ಮೊದಲು ಉಡುಪಿಯ ಮೀನುಗಾರರು ಉಡುಪಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಅಂತರ್‌ರಾಜ್ಯ ಆಳ ಸಮುದ್ರ ಮೀನುಗಾರಿಕೆಯ ಹೆಸರಲ್ಲಿ ಅತಿಕ್ರಮಣಗಳು ನಡೆಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ವರದಿಯಾಗಿತ್ತು. ಇದಲ್ಲದೆ ಫೆಬ್ರವರಿಯಲ್ಲಿ, ತಮಿಳುನಾಡು ಮೀನುಗಾರರು ಮಂಗಳೂರಿನ ಮೀನುಗಾರರ ಮೇಲೆ ಆಕ್ರಮಣ ನಡೆಸಿದ್ದು ಸುದ್ದಿಯಾಗಿತ್ತು. ದೇಶದ ಪಶ್ಚಿಮ ಕಡಲ ತಡಿಯ ಪ್ರತಿಯೊಂದು ರಾಜ್ಯವೂ ಮತ್ಸ್ಯಕ್ಷಾಮದ ಹಿನ್ನೆಲೆಯಲ್ಲಿ, ತನ್ನ ಮೀನುಗಾರರ ಹಿತಾಸಕ್ತಿ ರಕ್ಷಣೆಗೆ ಮುಂದಾಗುತ್ತಿರುವುದು, ಈ ಅಂತರ್‌ರಾಜ್ಯ ಗದ್ದಲಗಳಿಗೆ ಕಾರಣ ಆಗುತ್ತಿದೆ. ಇದೇಕೆ ಹೀಗೆ? ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಪರಿಶೀಲಿಸಿದರೆ, ಕಾಣಿಸುವ ಚಿತ್ರ ಸ್ವಲ್ಪ ಆತಂಕಕಾರಿಯಾಗಿದೆ.
ಭಾರತ ಒಟ್ಟು 8,129 ಕಿ.ಮೀ. ಕಡಲ ತಡಿಯನ್ನೂ, 20 ಲಕ್ಷ ಚದರ ಕಿ.ಮೀ.ನಷ್ಟು ಎಕ್ಸ್ ಕ್ಲೂಸಿವ್ ಇಕನಾಮಿಕ್ ರೆನ್ (ಇಇಝಡ್) ಅನ್ನೂ ಹೊಂದಿದೆ. ದೇಶದ ಸುಮಾರು 38 ಲಕ್ಷ ಮಂದಿ ಸಮುದ್ರ ಮೀನುಗಾರಿಕೆಯನ್ನು ನಂಬಿ ಬದುಕು ಸಾಗಿಸುತ್ತಿದ್ದಾರೆ. 80ರ ದಶಕದ ತನಕ ಮೀನುಗಾರಿಕೆ ಬಹುತೇಕ ಆರೋಗ್ಯಕರವಾಗಿತ್ತು. ಹೆಚ್ಚೆಂದರೆ ಸಮುದ್ರದ 50 ಮೀ. ಆಳದಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಡೆಸಲಾಗುತ್ತಿತ್ತು. ಆದರೆ 1999ರಿಂದೀಚೆಗೆ ಆಳ ಸಮುದ್ರದ ಮೀನುಗಾರಿಕೆಯ ಹೆಸರಲ್ಲಿ ಸಮುದ್ರದಲ್ಲಿ 400 ಮೀ. ಆಳದ ತನಕವೂ ಬುಲ್‌ಟ್ರಾಲ್‌ಗಳ ಮೂಲಕ ಮೀನು ಹಿಡಿಯುವುದು ಮಾತ್ರವಲ್ಲದೆ, ಮೀನುಗಳನ್ನು ಆಕರ್ಷಿಸಲು ಎಲ್‌ಇಡಿ ಬೆಳಕು ಬಳಸಿ ಅಕ್ರಮ ಮೀನುಗಾರಿಕೆ ನಡೆಸುವುದೂ ಚಾಲ್ತಿಯಲ್ಲಿದೆ.
2014ರ ಡಿಸೆಂಬರ್‌ನಲ್ಲಿ ಪ್ರಧಾನಮಂತ್ರಿಗಳು ‘ನೀಲಕ್ರಾಂತಿ’ಗೆ ಕರೆ ನೀಡಿದ ಬಳಿಕ ಹಲವಾರು ಬೆಳವಣಿಗೆಗಳಾಗಿದ್ದು, 2020 ಮೇ ತಿಂಗಳಿನಲ್ಲಿ ಪ್ರಕಟಿಸಲಾಗಿರುವ ಪ್ರಧಾನಮಂತ್ರಿ ಮತ್ಸ್ಯ ಸಂಪದಾ ಯೋಜನೆ (ಪಿಎಂಎಂಎಸ್‌ವೈ) ಅಡಿಯಲ್ಲಿ, 2024-25ರ ಹೊತ್ತಿಗೆ ದೇಶದಲ್ಲಿ ಮೀನು ಉತ್ಪಾದನೆಯನ್ನು 220 ಲಕ್ಷ ಮೆಟ್ರಿಕ್ ಟನ್‌ಗೆ ಏರಿಸುವ, ಮೀನುಗಾರಿಕಾ ರಫ್ತನ್ನು ಒಂದು ಲಕ್ಷ ಕೋಟಿಗೂ, ಮೀನುಗಾರಿಕಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು 55 ಲಕ್ಷಕ್ಕೂ ಏರಿಸುವ ಗುರಿ ಹೊಂದಲಾಗಿತ್ತು. ಅದಕ್ಕಾಗಿ ಭಾರತ ಸರಕಾರ 20,050 ಕೋಟಿ ರೂ.ಗಳನ್ನು ವ್ಯಯಿಸಲಿದೆ ಎಂದು ಪ್ರಕಟಿಸಲಾಗಿತ್ತು. ಭಾರತ 2018-19ರಲ್ಲಿ 46,589 ಕೋಟಿ ರೂ.ಗಳ ರಫ್ತು ಸಾಧಿಸುವ ಮೂಲಕ ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದ್ದು, 2025ರ ಹೊತ್ತಿಗೆ ಮೊದಲ ಸ್ಥಾನಕ್ಕೇರಬೇಕೆಂಬುದು ಸರಕಾರದ ಬಯಕೆಯಾಗಿತ್ತು. (PIB Release ID: 1626941)
ಈಗ ಭಾರತ ಸರಕಾರದ ಮೀನುಗಾರಿಕೆ ಇಲಾಖೆಯ 2023-24ನೇ ಸಾಲಿನ ವಾರ್ಷಿಕ ವರದಿಯ ಅನ್ವಯ, 2022-23ನೇ ಸಾಲಿಗೆ 175 ಲಕ್ಷ ಮೆಟ್ರಿಕ್ ಟನ್ ಮೀನು ಉತ್ಪಾದನೆ ಆಗಿದೆ (ಒಳನಾಡು ಮೀನುಗಾರಿಕೆಯೂ ಸೇರಿದಂತೆ) ಮತ್ತು ಮೀನುಗಾರಿಕಾ ರಫ್ತು 63,970 ಕೋಟಿ ರೂ.ಗಳಿಗೆ ತಲುಪಿದೆ. ಇದು ಮೀನುಗಾರಿಕೆಯ ಗಾತ್ರವನ್ನು ಹೋಲಿಸಿ ನೋಡಿದರೆ ವಾರ್ಷಿಕ ಶೇ. 26.73 ಬೆಳವಣಿಗೆಯ ದರವಂತೆ.
ಸರಕಾರ ನಿಗದಿಪಡಿಸಿರುವ ಸಾಧನೆಯ ಗುರಿ ಇನ್ನೂ ತಲುಪಿಲ್ಲ. ಆದರೆ, ಇಷ್ಟರೊಳಗೇ ಸಮುದ್ರಕ್ಕೆ ಸುಸ್ತು ಬಡಿದಿದೆ. ಯಾರೋ ಏರ್ ಕಂಡೀಷನ್ಡ್ ಕೋಣೆಯಲ್ಲಿ ಕುಳಿತು, ಕಾಗದಗಳ ಮೇಲಿನ ಅಂಕಿಸಂಖ್ಯೆಗಳನ್ನಾಧರಿಸಿ ಸಮುದ್ರದಲ್ಲಿ ಉತ್ಪಾದನೆಯ ಲೆಕ್ಕ ಕೊಟ್ಟದ್ದನ್ನು ನಂಬಿ, ಮೀನು ಉದ್ಯಮ ಕೆಟ್ಟಿದೆ. ದೇಶದಾದ್ಯಂತ 30,486 ಟ್ರಾಲ್ ಬೋಟುಗಳನ್ನು (2022ರ ಲೆಕ್ಕ) ಸಜ್ಜುಗೊಳಿಸಿಕೊಂಡು ಆಳಸಮುದ್ರಕ್ಕೆ ಇಳಿದವರು, ದೇಶದ ಒಟ್ಟು ಸಮುದ್ರ ಉತ್ಪಾದನೆಯ ಶೇ. 50ಕ್ಕಿಂತಲೂ ಹೆಚ್ಚು ತಾವೇ ಬಾಚಿ ತಂದಿದ್ದರು. ಪರ್ಸೀನ್ ಬೋಟುಗಳ ಒಟ್ಟು ಉತ್ಪಾದನೆ ಶೇ. 22. ಟ್ರಾಲ್ ಬೋಟುಗಳು ಮತ್ತು ಸಾಂಪ್ರದಾಯಿಕ ಮೀನುಗಾರಿಕೆಗಳ ನಡುವೆ ತಾಂತ್ರಿಕ ಸಾಮರ್ಥ್ಯದಲ್ಲಿನ ತಾರತಮ್ಯದ ಕಾರಣಕ್ಕಾಗಿ, ಉತ್ಪಾದನೆಯಲ್ಲಿ ಸಿಂಹಪಾಲು ಟ್ರಾಲ್ ಬೋಟುಗಳದೇ. ಈ ಹಿನ್ನೆಲೆಯಲ್ಲಿ ತಮಗೆ ಅನ್ಯಾಯ ಆಗುತ್ತಿದೆಯೆಂದು ಸಾಂಪ್ರದಾಯಿಕ ಮೀನುಗಾರರು ಅಲವತ್ತುಕೊಂಡಾಗ, ಸರಕಾರವು ಸಮುದ್ರ ತೀರದಿಂದ ಐದು ನಾಟಿಕಲ್ ಮೈಲುಗಳ ವ್ಯಾಪ್ತಿಯೊಳಗೆ ಬುಲ್ ಟ್ರಾಲಿಂಗ್ ಮೀನುಗಾರಿಕೆ ಇಲ್ಲ ಎಂದು ವಿಧಿಸಿತ್ತು; 2017ರ ನವೆಂಬರ್‌ನಲ್ಲಿ ಎಲ್‌ಇಡಿ ಲೈಟ್ ಬಳಸಿ ಆಳಸಮುದ್ರ ಮೀನುಗಾರಿಕೆಯನ್ನೂ ನಿಷೇಧಿಸಲಾಗಿತ್ತು; 2019ರಲ್ಲಿ ಹಿಡಿಯಬೇಕಾದ ಮೀನಿನ ಕಾನೂನುಬದ್ಧ ಕನಿಷ್ಠ ಗಾತ್ರವನ್ನೂ (ಕರ್ನಾಟಕದಲ್ಲಿ) ನಿಗದಿಪಡಿಸಲಾಗಿತ್ತು. ಇಷ್ಟೆಲ್ಲ ಮುನ್ನೆಚ್ಚರಿಕೆ ಕ್ರಮಗಳು ಕಾಗದದ ಮೇಲೆ ಇದ್ದರೂ, ಇವು ಯಾವುವೂ ಕಟ್ಟುನಿಟ್ಟಾಗಿ ಆಚರಣೆಗೆ ಬರಲಿಲ್ಲ. ಹಾಗಾಗಿ, ಇಂದು ಎದುರಾಗಿರುವ ಮೀನು ಕ್ಷಾಮವನ್ನು ತಡೆಯುವುದು ಸಾಧ್ಯವಾಗಿಲ್ಲ. ಇದು ಸಮಸ್ಯೆಯ ಒಂದು ಮುಖವಾದರೆ, ಇನ್ನೊಂದು ಮುಖ ಇನ್ನೂ ಗಂಭೀರ.
ಭಾರತದ ಒಳಗೆ, ಪರಿಸರ ಸಹ್ಯ ಪದ್ಧತಿಗಳನ್ನು ಬಳಸಿ ಮೀನುಗಾರಿಕೆ ನಡೆಸುವ ಮತ್ತು ಸ್ಥಳೀಯ ಮಾರುಕಟ್ಟೆಗೆ ಮೀನು ಸರಬರಾಜು ಮಾಡುವ ಸಾಂಪ್ರದಾಯಿಕ ಮೀನುಗಾರರನ್ನು ಮೀನುಗಾರಿಕೆಯಿಂದ ಬದಿಗೆ ಸರಿಸದೆ, ರಫ್ತು ಮಾರುಕಟ್ಟೆಯಲ್ಲಿ ಲಾಭ ತೋರಿಸುವುದು ಸಾಧ್ಯವಿಲ್ಲ ಎಂಬುದು ಖಚಿತವಿರುವ ಮೀನುಗಾರಿಕಾ ನೀತಿ ನಿರೂಪಕರು, ಅದಕ್ಕೆ ಅನುಕೂಲವಾಗುವಂತೆ ದೊಡ್ಡ ಗಾತ್ರದ ಕಾರ್ಪೊರೇಟ್ ಮೀನುಗಾರಿಕೆಗೆ, ಎಫ್‌ಎಫ್‌ಪಿಒ (ಮೀನುಗಾರಿಕಾ ರೈತ ಉತ್ಪಾದಕ ಸಂಸ್ಥೆ)ಗಳಿಗೆ ಪ್ರೋತ್ಸಾಹ ನೀಡತೊಡಗಿದ್ದಾರೆ. ಸಾಂವಿಧಾನಿಕವಾಗಿ ರಾಜ್ಯ-ಕೇಂದ್ರ ಪಟ್ಟಿಗಳೆರಡರಲ್ಲೂ ಬರುವ ‘ಮೀನುಗಾರಿಕೆ’ಯಲ್ಲಿ, ರಾಜ್ಯಗಳ ವ್ಯಾಪ್ತಿಯಲ್ಲಿ ಬರುವ ಒಳನಾಡು ಮೀನುಗಾರಿಕೆಯನ್ನು ಸಣ್ಣ-ಸಾಂಪ್ರದಾಯಿಕ ಮೀನುಗಾರರಿಗೆ ವಹಿಸಿಕೊಟ್ಟು, ಕಡಲ ಮೀನುಗಾರಿಕೆಯನ್ನು ಕಾರ್ಪೋರೇಟ್ ಶಕ್ತಿಗಳ ಮಡಿಲಿಗೆ ಹಾಕುವ ಪ್ರಯತ್ನಗಳ ಭಾಗ ಇದೆಂದು ಕಾಣಿಸುತ್ತಿದೆ.
ಇಂಚಿಂಚಾಗಿ ಸಾಂಪ್ರದಾಯಿಕ ಮೀನುಗಾರರನ್ನು ಕಡಲ ಮೀನುಗಾರಿಕೆಯಿಂದ ಮುಕ್ತಗೊಳಿಸಿ, ಒಂದೋ ಕಾರ್ಪೊರೇಟ್ ಮೀನುಗಾರಿಕೆ ಸಂಸ್ಥೆಗಳಲ್ಲಿ ಸಿಬ್ಬಂದಿಗಳಾಗುವಂತೆ ಅಥವಾ ಒಳನಾಡು ಮೀನುಗಾರಿಕೆಯಲ್ಲಿ ತೊಡಗುವಂತೆ ಪರೋಕ್ಷವಾಗಿ ಒತ್ತಡ ಹೇರುವ ಹುನ್ನಾರದ ಭಾಗವಾಗಿಯೇ, ರಾಜ್ಯಗಳ ನಡುವೆ ಸಂಘರ್ಷದ ಸನ್ನಿವೇಶವನ್ನು ಮುಂದೊಡ್ಡಲಾಗುತ್ತಿರುವಂತೆ ಕಾಣಿಸುತ್ತಿದೆ. ಇಲ್ಲದೇ ಹೋದರೆ, ದೇಶದೊಳಗೆ ಇಇಝಡ್‌ವ್ಯಾಪ್ತಿಯಲ್ಲಿ ಕಾನೂನುಬದ್ಧವಾಗಿ ಯಾವುದೇ ನೋಂದಾಯಿತ, ಪರವಾನಿಗೆ ಇರುವ, ಸಂಪೂರ್ಣ ಭಾರತೀಯ ಮೀನುಗಾರ ತಂಡವನ್ನು ಹೊಂದಿರುವ ಮೀನುಗಾರಿಕಾ ದೋಣಿಗಳು ಮುಕ್ತವಾಗಿ ಮೀನುಗಾರಿಕೆ ನಡೆಸಬಹುದೆಂಬ ಭಾರತ ಸರಕಾರದ ಆದೇಶದ (2017 ಆಗಸ್ಟ್ 03ರ ಆದೇಶ) ಹೊರತಾಗಿಯೂ, ಹೊರರಾಜ್ಯಗಳ ದೋಣಿಗಳು ಕಾಣಿಸಿಕೊಂಡಾಗ ಆಸುಪಾಸಿನ ರಾಜ್ಯಗಳ ನಡುವೆ ಸಂಘರ್ಷದ ಸ್ಥಿತಿ ನಿರ್ಮಾಣ ಆಗುತ್ತಿರುವುದಕ್ಕೆ ಮತ್ತು ಭಾರತ ಸರಕಾರ ಇದನ್ನೆಲ್ಲ ಕಂಡೂ ಕಾಣದಂತೆ ವರ್ತಿಸುತ್ತಿರುವುದಕ್ಕೆ ಕಾರಣಗಳೇನು? ಮೀನುಗಾರರ ಈ ದಾಯಾದಿ ಕಲಹದ ಬಿಸಿ ತಗಲುತ್ತಿರುವುದು ನೇರವಾಗಿ ಬೋಟಿನ ಸಿಬ್ಬಂದಿಗಳಾಗಿರುವ ಸಣ್ಣ ಮೀನುಗಾರರಿಗೆ. ಭಾರತದಲ್ಲಿ ಕೃಷಿ ರಂಗದಲ್ಲಿ ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವಂತಹದೇ ಮಾದರಿಯ (ಕೃಷಿಯಲ್ಲಿ ‘ಸ್ಕೇಲ್’ ಅರ್ಥಾತ್, ಲಾಭದಾಯಕ ಗಾತ್ರವನ್ನು ಸಾಧಿಸುವುದು) ಬದಲಾವಣೆಗಳು ಮೀನುಗಾರಿಕಾ ರಂಗದಲ್ಲೂ ನಡೆಯುತ್ತಿರುವ ಸ್ಪಷ್ಟ ಚಿಹ್ನೆಗಳು ಇವು. ಸಾಗರಮಾಲಾದಂತಹ ಬೃಹತ್ ಯೋಜನೆಗಳು ‘ಆನಿ’ ಕಂಪೆನಿಗಳಿಗೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಮೂಲಸೌಕರ್ಯಗಳನ್ನು ಸಿದ್ಧಪಡಿಸಿಕೊಡುತ್ತಿರುವ ಹೊತ್ತಿಗೇ, ವಿವಿಧ ನೀತ್ಯಾತ್ಮಕ ಗೋಡೆಗಳ ಮೂಲಕ ಸಾಂಪ್ರದಾಯಿಕ ಮೀನುಗಾರರನ್ನು ಇಂಚಿಂಚಾಗಿ ಸಮುದ್ರದ ಸಂಪರ್ಕದಿಂದ ಕಳಚಲಾಗುತ್ತಿದೆ. ಈಗ ಕಾಣಿಸಿಕೊಂಡಿರುವ ಮೀನುಕ್ಷಾಮ ಇಂತಹದೇ ಒಂದು ಪಿತೂರಿಯ ಭಾಗವಾಗಿದ್ದರೂ ಅಚ್ಚರಿ ಇಲ್ಲ. ಹೀಗೆ ಹಂತಹಂತವಾಗಿ ಕಾರ್ಪೊರೇಟ್ ಮೀನುಗಾರರು-ಸಾಂಪ್ರದಾಯಿಕ ಮೀನುಗಾರರ ನಡುವೆ ಸಂಘರ್ಷ ತಂದಿಕ್ಕಿ, ಅದರ ಲಾಭವನ್ನು ‘ಆನಿ’ಗಳಿಗೆ ತಟ್ಟೆಯಲ್ಲಿರಿಸಿ ಹಸ್ತಾಂತರಿಸುವ ಪ್ರಯತ್ನಗಳ ರೂಪದಲ್ಲಿಯೇ ಈ ಎಲ್ಲ ಬೆಳವಣಿಗೆಗಳನ್ನು ಮೀನುಗಾರರು ಸೂಕ್ಷ್ಮವಾಗಿ ಗಮನಿಸಬೇಕಿದೆ.