ರೈತ ಉತ್ಪಾದಕ ಸಂಸ್ಥೆಗಳ (FPO) ಶೇ. 75 ‘ಯಶಸ್ಸಿನ’ ಹಿಂದಿರುವ ಗೊಂದಲಗಳು
Photo: freepik
ಸರಕಾರದ ಯೋಜನೆಗಳು ಉದ್ದೇಶಿತ ಗೋಲ್ ತಲುಪದಿದ್ದಾಗ, ಆ ಗೋಲ್ಪೋಸ್ಟನ್ನೇ ಸ್ಥಳಾಂತರಿಸಿಬಿಡುವುದು ಈಗೀಗ ಎಷ್ಟು ವಾಡಿಕೆ ಆಗಿಬಿಟ್ಟಿದೆಯೆಂದರೆ, ದಿನನಿತ್ಯ ಬದಲಾಗುತ್ತಿರುವ ಅಂತಹ ನೂರಾರು ಗೋಲ್ಪೋಸ್ಟ್ಗಳನ್ನು ಎಣಿಸುತ್ತಾ ಕೂರುವುದೇ ವ್ಯರ್ಥ ಎಂಬ ಸನ್ನಿವೇಶ ಎದುರಿಗಿದೆ. ಇಂತಹವುಗಳನ್ನೆಲ್ಲ ಪ್ರಶ್ನಿಸಬೇಕಾದ ಪ್ರತಿಪಕ್ಷಗಳನ್ನು, ಸಂಸತ್ತಿನಲ್ಲಿ ಅಂಕಿ-ಸಂಖ್ಯೆಗಳ ಮಾಯಾ ಜಾಲದ ವನ್ ವೇ ಟ್ರಾಫಿಕ್ಕಿನಲ್ಲಿ ಮಾತು ಕಳಚಿ ಕೂರಿಸಲಾಗಿದೆ; ನಾಲ್ಕನೇ ಕಂಬವಾದ ಮಾಧ್ಯಮವು ತನ್ನ ಕಾರ್ಯ ಮರೆತ ಪತ್ರಕರ್ತರ ದಂಡಿನೊಂದಿಗೆ ಸ್ವತಃ ಸರಕಾರದ ಪ್ರಚಾರ ಇಲಾಖೆಗಳೂ ನಾಚಿಕೊಳ್ಳುವಂತೆ ‘ಸರ್ವ ಸಮರ್ಥನೆ’ಯಲ್ಲಿ ತೊಡಗಿಕೊಂಡಿವೆ.
ಮೊನ್ನೆ ಮುಗಿದಿರುವ ಸಂಸತ್ತಿನ ಅಧಿವೇಶನದ ವೇಳೆ, ಎರಡೂ ಸದನಗಳಲ್ಲಿ ರೈತ ಉತ್ಪಾದಕ ಸಂಸ್ಥೆಗಳ (FPO) ಬಗ್ಗೆ ಪ್ರತಿಪಕ್ಷಗಳ ಪ್ರಶ್ನೆಗಳು, ಅದನ್ನು ಸರಕಾರ ಉತ್ತರಿಸಿದ ರೀತಿ ಮತ್ತು ಮಾಧ್ಯಮಗಳು ಅದನ್ನು ವರದಿ ಮಾಡಿದ ಪರಿ ಬಹಳ ಕುತೂಹಲಕರವಾಗಿತ್ತು. ‘‘ಭಾರತ ಸರಕಾರವು ಈPಔಗಳ ಸ್ಥಾಪನೆಗೆ ಸಂಬಂಧಿಸಿದಂತೆ ಶೇ. 75 ಯಶಸ್ಸು ಸಾಧಿಸಿದೆ’’ ಎಂಬುದು ಕಳೆದ ವಾರದಲ್ಲಿ ಕಾಣಿಸಿಕೊಂಡ ಈ ಪತ್ರಿಕಾ ವರದಿಗಳ ಸಾರಾಂಶ. ಈ ಸುದ್ದಿಯನ್ನು ಸ್ವಲ್ಪ ವಿವರವಾಗಿ ಗಮನಿಸೋಣ.
2019-20ರ ಬಜೆಟ್ನಲ್ಲಿ ಭಾರತ ಸರಕಾರವು ಐದು ವರ್ಷಗಳಲ್ಲಿ, ಅಂದರೆ 2023-24ರ ಹೊತ್ತಿಗೆ ಹೊಸದಾಗಿ 10,000 ಈPಔಗಳನ್ನು ಸ್ಥಾಪಿಸುವುದಕ್ಕೆಂದು 6,865 ಕೋಟಿ ರೂ.ಗಳ ಬಜೆಟರಿ ಅನುದಾನವನ್ನು ತೆಗೆದಿರಿಸುತ್ತಿರುವುದಾಗಿ ಹಣಕಾಸು ಸಚಿವೆ ಹೇಳಿದ್ದರು. ಈPಔಗಳ ಯೋಜನೆಯ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದ ಸಚಿವರು, ‘‘ಭಾರತದ ಆರು ಲಕ್ಷ ಹಳ್ಳಿಗಳಲ್ಲಿ ಕನಿಷ್ಠ ಒಂದು ಲಕ್ಷ ಈPಔಗಳನ್ನು ಸ್ಥಾಪಿಸಲು ಅವಕಾಶ ಇದೆ’’ ಎಂದಿದ್ದರು ಎಂಬ ಬಗ್ಗೆ, ಮಾಧ್ಯಮಗಳಲ್ಲಿ ವರದಿಯಾಗಿತ್ತು. (ಈ ಬಗ್ಗೆ ವಿವರಗಳು ಇದೇ ಲೇಖಕರ ‘ದುಪ್ಪಟ್ಟು’ ಪುಸ್ತಕದಲ್ಲಿ ಲಭ್ಯ.) ಸರಕಾರ ಆ ಬಜೆಟ್ ಪ್ರಕಟಣೆ ಹೊರಡಿಸುವ ಹೊತ್ತಿಗಾಗಲೇ, ಅಂದರೆ 2019ಕ್ಕೆ ಮೊದಲೇ ಭಾರತದಲ್ಲಿ 7,374 ಈPಔಗಳು ನೋಂದಣಿ ಆಗಿದ್ದವು.
ಮೊನ್ನೆ 2023ರ ಡಿಸೆಂಬರ್ 05ರಂದು ಲೋಕಸಭೆಯಲ್ಲಿ (ಚುಕ್ಕೆರಹಿತ ಪ್ರಶ್ನೆ ಸಂಖ್ಯೆ 400ಕ್ಕೆ) ಉತ್ತರಿಸಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮತ್ತು ರಾಜ್ಯಸಭೆಯಲ್ಲಿ ಡಿಸೆಂಬರ್ 13ರಂದು (ಚುಕ್ಕೆ ಪ್ರಶ್ನೆ ಸಂಖ್ಯೆ 111ಕ್ಕೆ) ಉತ್ತರಿಸಿದ ಸಹಕಾರ ಸಚಿವ ಅಮಿತ್ ಶಾ ಅವರು, 31-10-2023ರ ಹೊತ್ತಿಗೆ ಭಾರತದಲ್ಲಿ 7597 FPOಗಳು ನೋಂದಣಿ ಆಗಿವೆ ಎಂದು ದಾಖಲೆಗಳನ್ನು ಒದಗಿಸಿದ್ದರು. ಸಂಸತ್ತಿಗೆ ನೀಡಲಾಗಿರುವ ಈ ಉತ್ತರಗಳನ್ನು ಎಚ್ಚರಿಕೆಯಿಂದ ಗಮನಿಸಿ.
ಈ ಉತ್ತರಗಳು, 2019ಕ್ಕೆ ಮೊದಲೇ ದೇಶದಲ್ಲಿ ಇದ್ದ ಈPಔಗಳನ್ನು ಒಳಗೊಂಡಿವೆಯೇ? ಅವುಗಳ ಸ್ಥಿತಿ ಏನು? ಎಂಬುದು ಸ್ಪಷ್ಟವಿಲ್ಲ. ಬೇರೆ ಮೂಲಗಳನ್ನು ಅರಸಿ ಹೊರಟಾಗ, ಭಾರತದಲ್ಲಿ ಇಂದು 16,000ಕ್ಕೂ ಮಿಕ್ಕಿ ನೋಂದಾಯಿತ FPOಗಳಿವೆ ಎಂದು ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯ ದಾಖಲೆಗಳನ್ನುಲ್ಲೇಖಿಸಿ ಹೇಳುತ್ತಿರುವುದು ಕಾಣಿಸಿತು (ಆಧಾರ: Neti, Annapurna and Richa Govil. 2022. Farmer Producer Companies: Report II, Inclusion, Capitalisation and Incubation. Azim Premji University, Bangalore). ಇವೆಲ್ಲವೂ FPO ಯೋಜನೆಯಡಿ ಬರುವುದಿಲ್ಲವೇ? ಬರುವುದಿದ್ದರೆ ಅವು ಯಾಕೆ ಸದನ ದಾಖಲೆಗಳಿಂದ ಹೊರಗಿವೆ? ಸದನದಲ್ಲಿ ಕೇಳಲಾದ ಪ್ರಶ್ನೆಗಳು ಸ್ಪಷ್ಟವಾಗಿ, ದೇಶದಲ್ಲಿರುವ FPOಗಳ ಒಟ್ಟು ಸಂಖ್ಯೆಯ ಮತ್ತು ರಾಜ್ಯವಾರು ವಿವರಗಳ ಬಗ್ಗೆ ಕೇಳಿದ್ದವು. (https://sansad.in/getFile/annex/262/AU1926.pdf?source=pqars).
ಇದಕ್ಕೆ ವ್ಯತಿರಿಕ್ತವಾಗಿ ಇನ್ನೊಂದು ಸಾಧ್ಯತೆಯನ್ನು ಪರಿಗಣಿಸಿದರೆ, 2019ರ ಹೊತ್ತಿಗಾಗಲೇ (ಅಂದರೆ ಬಜೆಟ್ ಪ್ರಕಟಣೆಯ ವೇಳೆಗೆ) ದೇಶದಲ್ಲಿ 7,374 ಈPಔಗಳು ನೋಂದಣಿ ಆಗಿದ್ದವು. ಆ ಬಳಿಕ ಈ ವರ್ಷದ ಅಂತ್ಯದ ಹೊತ್ತಿಗೆ ನೋಂದಣಿ ಆಗಿರುವ ಈPಔಗಳ ಸಂಖ್ಯೆ 7,597. ಅಂದರೆ, ಬಜೆಟ್ ಘೋಷಣೆಯ ಹೊರತಾಗಿಯೂ ಭಾರತದಲ್ಲಿ ಕಳೆದ ನಾಲ್ಕೂಮುಕ್ಕಾಲು ವರ್ಷಗಳಲ್ಲಿ ನೋಂದಣಿ ಆಗಿರುವ ಈPಔಗಳ ಸಂಖ್ಯೆ ಕೇವಲ 223. (ಅಥವಾ ಎರಡನ್ನೂ ಪ್ರತ್ಯೇಕವಾಗಿ ಪರಿಗಣಿಸಿದರೂ ಒಟ್ಟು 14,971). ಈ ಗೊಂದಲ ಯಾಕಿದೆ? ಇದು ಇಲಾಖೆಗಳ ನಡುವಿನ ಗೊಂದಲವೆ? ಆರಂಭಗೊಂಡ ಈPಔಗಳಲ್ಲಿ ಬೇರೆಬೇರೆ ಕಾರಣಗಳಿಗೆ ಮುಚ್ಚುಗಡೆ ಆದವು ಎಷ್ಟು? ಯಾವುದೇ ಮಾಹಿತಿ ಪಾರದರ್ಶಕವಿಲ್ಲ.
ವೈಫಲ್ಯ ಸಹಜ
ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆಯಲ್ಲಿ ಸರಕಾರ ಈ ಹಂತದಲ್ಲಿ ವಿಫಲಗೊಂಡಿದೆ ಎಂದಾದರೆ ಅದು ತೀರಾ ಸಹಜ ಸನ್ನಿವೇಶ. ಯಾಕೆಂದರೆ, ಅದನ್ನು ಆರಂಭಿಸಿದ್ದೇ, 2022ರ ಒಳಗೆ ರೈತರ ಉತ್ಪಾದನೆಯನ್ನು ‘ದುಪ್ಪಟ್ಟು’ ಮಾಡುವ ಭಾರತ ಸರಕಾರದ ಮಹಾಯೋಜನೆಯ ಒಂದು ಪುಟ್ಟ ಭಾಗವಾಗಿ. ಆದರೆ, ಈ ಮಹಾಯೋಜನೆಯ ಬಹುಮುಖ್ಯ ಭಾಗವಾಗಿದ್ದ ಮೂರು ಪ್ರಮುಖ ಕೃಷಿ ಕಾಯ್ದೆಗಳನ್ನು [[(1.) The Farmers Agreement on price assurance and Farm Services Act 2020, (2.) Farmers produce Trade and Commerce Act 2020 (3.) Essential Commodities Act 2020]ದೇಶದಾದ್ಯಂತ ತೀವ್ರ ಪ್ರತಿರೋಧದ ಬಳಿಕ, ಭಾರತ ಸರಕಾರವು 29 ನವೆಂಬರ್ 2021ರಂದು ಹಿಂದೆಗೆದುಕೊಂಡಿತ್ತು.
ಈ ಮೂರೂ ಕಾಯ್ದೆಗಳು ಚಾಲ್ತಿಯಲ್ಲಿದ್ದಿದ್ದರೆ ಮಾತ್ರ FPOಗಳ ಉದ್ದೇಶಿತ ಕಾರ್ಯಾಚರಣೆಗೆ ಸುಗಮ ಹಾದಿ ತೆಗೆದುಕೊಳ್ಳುತ್ತಿತ್ತು. ಆದರೆ ಇಂದು, ಈ ಕಾಯ್ದೆಗಳು ಇಲ್ಲದ ಸ್ಥಿತಿಯಲ್ಲಿ, FPOಗಳು ನಾಮ್ ಕೇ ವಾಸ್ತೆ ಕುಳಿತುಬಿಟ್ಟಿವೆ. ಸರಕಾರದ ಕಡೆಯಿಂದ ಮೂರು ವರ್ಷಗಳ ಅವಧಿಗೆ ಸಿಗುತ್ತಿರುವ 18 ಲಕ್ಷ ರೂ.ಗಳ ಅನುದಾನದ ಬಳಿಕ, ಮುಂದೇನು ಎಂಬ ಕಾಣ್ಕೆ ಸದ್ಯ ಕಾರ್ಯಾಚರಿಸುತ್ತಿರುವ ಬಹುತೇಕ ಈPಔಗಳಿಗೆ ಸ್ಪಷ್ಟ ಇದ್ದಂತಿಲ್ಲ. ಸರಕಾರದ ಬಳಿಯೂ ಖಚಿತ ಪರ್ಯಾಯ ಇದ್ದಂತಿಲ್ಲ.
ಕೃಷಿ ಕಾಯ್ದೆಗಳನ್ನು ಹಿಂದೆಗೆದು ಕೊಂಡ ಬಳಿಕ ಉಂಟಾದ ನಿರ್ವಾತವನ್ನು ಗಮನಿಸಿದ ಸರಕಾರ, FPOಗಳನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಸಹಕಾರ ಇಲಾಖೆಯ ತೆಕ್ಕೆಗೂ ಹಾಕಿತ್ತು. ಇದೇ 2023ರ ಮೇ ತಿಂಗಳಿನಲ್ಲಿ ಹೇಳಿಕೆಯೊಂದನ್ನು ಹೊರಡಿಸಿದ ಸಹಕಾರ ಇಲಾಖೆಯು ತನ್ನ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ (ಎನ್ಸಿಡಿಸಿ) ಮೂಲಕ 1,100 FPOಗಳನ್ನು ಸ್ಥಾಪಿಸಲು ಪ್ರಯತ್ನಗಳಾಗುತ್ತಿವೆ ಎಂದು ಹೇಳಿತ್ತು. ಇದಕ್ಕಾಗಿ ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳಲ್ಲಿ (ಪಿಎಸಿಎಸ್) ಸಕ್ರಿಯರಾಗಿರುವ 13 ಕೋಟಿ ರೈತರನ್ನು ಪ್ರೇರಿಸಲಾಗುವುದು ಎಂದು ಸಚಿವಾಲಯ ಹೇಳಿತ್ತು. ಈ ಪ್ರಯತ್ನಗಳ ಭಾಗವಾಗಿ ಇಲ್ಲಿಯ ತನಕ ಒಟ್ಟು 672 FPOಗಳು (2023 ಡಿಸೆಂಬರ್ ವೇಳೆಗೆ) ನೋಂದಣಿಗೊಂಡಿವೆ. ಹೀಗೆ, ಇದೀಗ ರೈತರ ಆದಾಯ ದುಪ್ಪಟ್ಟು ಯೋಜನೆಯು ‘ಸಹಕಾರ್ ಸೇ ಸಮೃದ್ಧಿ’ ಆಶಯವನ್ನು ಸಾಕಾರ ಗೊಳಿಸುವ ಯೋಜನೆಯಾಗಿ ರೂಪುಗೊಂಡಂತಿದೆ.