ಬೆವರಿನಂಗಡಿಯಲ್ಲಿ ಫೋನು ತುಂಬಾ ಅಗ್ಗ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತುರ್ತುಸ್ಥಿತಿಯ ಅಂತರ್ ರಾಷ್ಟ್ರೀಯ ಆರ್ಥಿಕ ಅಧಿಕಾರ ಕಾಯ್ದೆ-1977 (ಐಇಇಪಿಎ) ಬಳಸಿಕೊಂಡು, ತನ್ನ ದೇಶಕ್ಕೆ ಆಮದು ಸುಂಕವನ್ನು ಶೇ. 10ಕ್ಕೆ ಏರಿಸಿರುವುದಲ್ಲದೇ ತನಗೆ ಅಧಿಕ ಆಮದು ಸುಂಕ ವಿಧಿಸುತ್ತಿರುವ ಹಲವು (ಭಾರತವೂ ಸೇರಿದಂತೆ) ದೇಶಗಳಿಗೆ ಎದುರು ಸುಂಕವನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ. ಜಗತ್ತಿನ ಎರಡನೇ ಅತಿದೊಡ್ಡ ಸರಕು ರಫ್ತುದಾರ ಮತ್ತು ಅತಿದೊಡ್ಡ ಸೇವಾ ರಫ್ತುದಾರ ದೇಶವಾಗಿರುವ ಅಮೆರಿಕದ ಈ ಆದೇಶವು ಇದೇ ಎಪ್ರಿಲ್ 5ರಿಂದ ಜಾರಿಗೆ ಬಂದಿದ್ದು, ಜಗತ್ತಿನಾದ್ಯಂತ ಆರ್ಥಿಕ ತಳಮಳಗಳಿಗೆ ಕಾರಣವಾಗಿದೆ.
ವಿಶ್ವ ವಾಣಿಜ್ಯ ಸಂಘಟನೆಯ (WTO) ಅಡಿಯಲ್ಲಿ ಆದ GATT (ಜನರಲ್ ಅಗ್ರಿಮೆಂಟ್ ಆನ್ ಟ್ರೇಡ್ ಆಂಡ್ ತಾರಿಫ್ಸ್) ಒಪ್ಪಂದವು ಜಾಗತೀಕರಣ/ಉದಾರೀಕರಣಗಳ ಮೂಲಬೇರು. ೧೯೯೪ರಿಂದೀಚೆಗೆ, GATT ಜಾಗದಲ್ಲಿ ಹೊಸ ನಿಯಮಗಳನ್ನು WTO ಜಾರಿಗೆ ತಂದಿದ್ದು, ದೇಶಗಳ ನಡುವೆ ವಾಣಿಜ್ಯ ತಕರಾರುಗಳಿಗೆ ಪರಿಹಾರ ವ್ಯವಸ್ಥೆಯೊಂದನ್ನು ರೂಪಿಸಿತ್ತು. GATT ಆರಂಭದ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯನ್ನು ತಲುಪುವ ಅವಕಾಶಗಳನ್ನು ಭರಪೂರ ಬಳಸಿಕೊಂಡ ಅಮೆರಿಕಕ್ಕೆ, ಈಗೀಗ ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಸ್ಪರ್ಧೆ ಎದುರಾದಂತೆಲ್ಲ, ಅಸಹನೆ ಮೊಳೆಯುತ್ತಾ ಬಂದಿದೆ. ಮೇಕ್ ಅಮೆರಿಕ ಗ್ರೇಟ್ ಅಗೇನ್ (MAGA) ಎಂದು ಘೋಷಿಸಿಕೊಂಡು ಅಧಿಕಾರಕ್ಕೆ ಬಂದಿರುವ ಟ್ರಂಪ್ ಮತ್ತವರ ಕ್ರೋನಿಗಳು ಈಗ ಅಮೆರಿಕದ ಅಸಹನೆಯ ಕಟ್ಟೆಯನ್ನು ಕಡಿದು ಹರಿಯಬಿಟ್ಟಿದ್ದಾರೆ. ಅದರ ಫಲವೇ ಈ ಸುಂಕದ ಪ್ರವಾಹ.
ಸೋಮವಾರ, ಫೈನಾನ್ಷಿಯಲ್ ಟೈಮ್ಸ್ನಲ್ಲಿ ಲೇಖನವೊಂದನ್ನು ಬರೆದಿರುವ ಪೀಟರ್ ನವಾರೊ (ಇವರು ಟ್ರಂಪ್ ಆಡಳಿತಕ್ಕೆ ವಾಣಿಜ್ಯ ಮತ್ತು ಉತ್ಪಾದನಾ ಕ್ಷೇತ್ರಗಳ ಹಿರಿಯ ಸಲಹೆಗಾರರು), ಈ ಎದುರುಸುಂಕದ ವಿಚಾರದಲ್ಲಿ ಅಮೆರಿಕದ ದೃಷ್ಟಿಕೋನವನ್ನು ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ. ‘‘WTOದ MFN (ಮೋಸ್ಟ್ ಫೇವರ್ಡ್ ನೇಷನ್) ನಿಯಮದ ಫಲವಾಗಿ, ಅಂತಹ ದೇಶಗಳಿಗೆ ಅತ್ಯಂತ ಕನಿಷ್ಠ ಸುಂಕವನ್ನು ವಿಧಿಸಬೇಕಾಗುತ್ತಿತ್ತು. ಆದರೆ ಆ ದೇಶಗಳು ಅಮೆರಿಕಕ್ಕೆ ಮನಬಂದಂತೆ ಸುಂಕ ವಿಧಿಸಲು ಅವಕಾಶ ಇತ್ತು. GATT ಕಾರಣದಿಂದಾಗಿ ಅಮೆರಿಕದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ೬೮ ಲಕ್ಷ ಉದ್ಯೋಗಗಳು ನಷ್ಟವಾಗಿವೆ. ಹಲವು ದೇಶಗಳು ಆಮದು ಸುಂಕ ಮಾತ್ರವಲ್ಲದೆ ಬೇರೆ ಪರೋಕ್ಷ ತಂತ್ರಗಳನ್ನೂ ಬಳಸಿ ಅಮೆರಿಕದ ರಫ್ತಿನ ಕತ್ತು ಹಿಚುಕುತ್ತಿವೆ. ಅವರ ರಫ್ತು ಅಮೆರಿಕ ತಲುಪುತ್ತಿದೆ, ಆದರೆ ಅಮೆರಿಕದ ರಫ್ತಿಗೆ ಅವರು ತಡೆಗೋಡೆ ನಿರ್ಮಿಸಿದ್ದಾರೆ. ಕರೆನ್ಸಿ ವಿನಿಮಯ ದರದಲ್ಲಿ ಚಾಲಾಕಿತನ, ಮೌಲ್ಯವರ್ಧಿತ ತೆರಿಗೆಗಳಲ್ಲಿ ತಿರುಚುವಿಕೆ, ಡಂಪಿಂಗ್, ರಫ್ತು ಪ್ರೋತ್ಸಾಹಕ್ಕೆ ಸರಕಾರಿ ಸಬ್ಸಿಡಿ, ಸ್ವತಃ ಸರಕಾರವೇ ಉತ್ಪಾದನೆಯಲ್ಲಿ ತೊಡಗುವುದು, ಬೌದ್ಧಿಕ ಆಸ್ತಿಗಳ ಕಳ್ಳತನ, ಉತ್ಪಾದನೆಯ ಗುಣಮಟ್ಟದಲ್ಲಿ ತಾರತಮ್ಯ, ಕೋಟಾಗಳು, ನಿಷೇಧಗಳು, ಅಪಾರದರ್ಶಕ ಲೈಸನ್ಸಿಂಗ್ ವ್ಯವಸ್ಥೆ, ಹೊರೆಯೆನ್ನಿಸುವಷ್ಟು ಕಸ್ಟಮ್ ಪ್ರಕ್ರಿಯೆಗಳು, ಉತ್ಪಾದನೆಗಳ ಡೇಟಾ ಕಡ್ಡಾಯ ಲೋಕಲೈಸೇಷನ್ ಮತ್ತು ಅಮೆರಿಕದ ಬೃಹತ್ ಟೆಕ್ ಕಂಪೆನಿಗಳ ಮೇಲೆ ಕಾನೂನು ಸಮರಗಳು ಅಮೆರಿಕದ ರಫ್ತಿಗೆ ಅಡಚಣೆ ಆಗುತ್ತಿವೆ. ಇದೆಲ್ಲದಕ್ಕಿಂತ ಮೇಲಾಗಿ, ಏಶ್ಯ, ಆಫ್ರಿಕಾ, ಲ್ಯಾಟಿನ್ ಅಮೆರಿಕಗಳಲ್ಲಿ ‘ಬೆವರಿನಂಗಡಿಗಳಲ್ಲಿ (ಸ್ವೆಟ್ ಶಾಪ್)’ ಲಭ್ಯ ಇರುವ ಕಡಿಮೆ ಸಂಬಳದ ಕೆಲಸಗಾರರು, ಪರಿಸರ ಕಾಳಜಿ ಇಲ್ಲದೇ ಕಡಿಮೆ ಖರ್ಚಿನಲ್ಲಿ ಉತ್ಪಾದಿಸಿ ಮಾರುಕಟ್ಟೆಗೆ ತಲುಪಿಸುತ್ತಿದ್ದಾರೆ. ಇದಕ್ಕೆಲ್ಲ ತಕರಾರು ತೆಗೆಯಲು, GATT ತಕರಾರು ಪರಿಹಾರ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇದರ ದೊಡ್ಡ ಹೊಡೆತ ಬಿದ್ದಿರುವುದು ಅಮೆರಿಕಕ್ಕೆ.’’
ಪೀಟರ್ ನವಾರೊ ಅವರ ಈ ದೂರುಗಳಲ್ಲಿ ಹೆಚ್ಚಿನವು ಭಾರತಕ್ಕೂ ಅನ್ವಯ ಆಗುತ್ತವೆ. ಹಾಗಾಗಿ ನಮಗೂ ಎದುರುಸುಂಕ ಬಿದ್ದಿದೆ. ಭಾರತವು ಅಮೆರಿಕದ ಎದುರುಸುಂಕಗಳಿಗೆ ಪ್ರತಿಕ್ರಿಯಿಸುತ್ತಿರುವ ಬಗೆಯನ್ನು ಗಮನಿಸಿದಾಗ, ಅದು ಸಮಸ್ಯೆಯನ್ನು ಸಮಗ್ರವಾಗಿ ನೋಡುವ ಬದಲು, ‘ಸಂಕ ಮುರಿದಲ್ಲೇ ಸ್ನಾನಕ್ಕೆ’ ಸಿದ್ಧತೆಯಂತೆ ಕಾಣಿಸುತ್ತಿದೆ. ಭಾರತಕ್ಕಿನ್ನೂ ಅಮೆರಿಕದ ಅಸಹನೆಯ ಬೇರುಗಳು ಅರ್ಥವಾಗಿಲ್ಲ ಮತ್ತು ಈ ಎಲ್ಲ ಬೆಳವಣಿಗೆಗಳು ದೀರ್ಘಕಾಲಿಕ ನೆಲೆಯಲ್ಲಿ ಭಾರತದ ಆರ್ಥಿಕ ಹಿತಾಸಕ್ತಿಗಳಿಗೆ ಇನ್ನಷ್ಟು ಹಾನಿ ಮಾಡಲಿವೆ. ಹೊರನೋಟಕ್ಕೆ ಅಮೆರಿಕದ್ದು ಉಡಾಫೆ ಎಂದು ಬಿಂಬಿಸಲಾಗುತ್ತಿದೆಯಾದರೂ, ಅವರ ಆರ್ಥಿಕತೆಯ ಬಗ್ಗೆ ಅವರಿಗಿರುವ ಗಂಭೀರ ಆತಂಕಗಳು ಅವರಿಂದ ಈ ರೀತಿ ಮಾಡಿಸುತ್ತಿವೆ ಎಂಬುದು ಸ್ಪಷ್ಟ.
ಭಾರತದ ‘ಕ್ಷಿಪ್ರಪ್ರಸಾದ’ ನಿಲುವು
ಚೀನಾ, ಯುರೋಪಿನ ದೇಶಗಳು ಅಮೆರಿಕದ ಎದುರುಸುಂಕಕ್ಕೆ ಪ್ರತಿಕ್ರಿಯೆಯಾಗಿ ‘ಪ್ರತೀಕಾರ ಸುಂಕ’ ವಿಧಿಸುವ ಕುರಿತು ಚರ್ಚಿಸುತ್ತಿವೆ. ಭಾರತ ಅವರ ಜೊತೆ ಸೇರುವ ಮನಸ್ಸು ಮಾಡಿಲ್ಲ. ಭಾರತ ಸರಕಾರ ಮತ್ತು ಇಲ್ಲಿನ ಮಾಧ್ಯಮಗಳು ಟ್ರಂಪ್ ವಿಧಿಸಿರುವ ಎದುರು ಸುಂಕ ಭಾರತದ ಮಟ್ಟಿಗೆ ಹಾನಿಕಾರಕ ಅಲ್ಲ, ಅದರಿಂದ ಅಂತಿಮವಾಗಿ ನಮಗೆ ಲಾಭವೇ ಜಾಸ್ತಿ ಎಂಬ ನರೇಟಿವ್ ಹರಿಬಿಡುತ್ತಿವೆ.
ಈ ನರೇಟಿವ್ನ ಹಿಂದಿರುವುದು, ಮೊಬೈಲ್ ಫೋನ್ (ಅದರಲ್ಲೂ ಆ್ಯಪಲ್ನದು) ಉತ್ಪಾದನೆಯಲ್ಲಿ ತನಗೆ ಸಿಕ್ಕಿರುವ ಹಿಡಿತ ಹಾಗೂ ಇಲೆಕ್ಟ್ರಾನಿಕ್ ಬಿಡಿಭಾಗಗಳ ಉತ್ಪಾದನೆಗೆ ದೊಡ್ಡ ಮಟ್ಟಿನ ಪ್ರೋತ್ಸಾಹ ನೀಡುವ ಸರಕಾರದ ತೀರ್ಮಾನ. ಉತ್ಪಾದನೆ ಆಧರಿತ ಇನ್ಸೆಂಟಿವ್ (ಪಿಎಲ್ಐ) ಕೊಡುತ್ತೇವೆಂಬ ಭರವಸೆ ನೀಡಿ, ಚೀನಾ ಮತ್ತಿತರ ದೇಶಗಳಿಂದ ಆಮದು ಮಾಡಿಕೊಂಡ ಮೊಬೈಲ್ ಬಿಡಿಭಾಗಗಳ ಜೋಡಣೆ ಮಾಡಿ, ಫೋನ್ ರಫ್ತು ಮಾಡುವ ‘ಸ್ಕ್ರೂ ಡ್ರೈವರ್ ತಂತ್ರಜ್ಞಾನ’ ಕಳೆದ ಒಂದೆರಡು ವರ್ಷಗಳಲ್ಲಿ ಭಾರತವನ್ನು ‘ಉದ್ಯೋಗ ಸೃಷ್ಟಿ’ಯ ಬೀಸುವ ಕತ್ತಿಯಿಂದ ಗಂಭೀರ ಹಾನಿ ಆಗದಂತೆ ಪಾರು ಮಾಡಿದೆ; ಮೊಣಕೈಗೆ ಬೆಲ್ಲ ಅಂಟಿಸಿದೆ. ಇದರ ಫಲವಾಗಿ 2020ರಲ್ಲಿ ಕೇವಲ 27,225 ಕೋಟಿ ರೂ. ಇದ್ದ ಭಾರತದ ಮೊಬೈಲ್ ಫೋನ್ ರಫ್ತು, 2021-2024ರ ನಡುವೆ ಒಟ್ಟು 12.50 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ಆ ಅವಧಿಯಲ್ಲಿ ಭಾರತ ಸರಕಾರ ಮೊಬೈಲ್ ಫೋನ್ ಉತ್ಪಾದನೆಗೆಂದು 5,800 ಕೋಟಿ ರೂ.ಗಳ ಸಬ್ಸಿಡಿ ನೀಡಿದೆ; ರಫ್ತಿನಿಂದಾಗಿ ಸರಕಾರದ ಬೊಕ್ಕಸಕ್ಕೆ 1.10 ಲಕ್ಷ ಕೋಟಿ ರೂ. ತೆರಿಗೆ ಆದಾಯ ಬಂದಿದೆ. ಈ ಹಿನ್ನೆಲೆಯಲ್ಲಿ ಇನ್ನೂ 2026ರ ತನಕ ಮೊಬೈಲ್ಗಳ ಉತ್ಪಾದನೆಗೆ ಪಿಎಲ್ಐ ವಿಸ್ತರಿಸಲಾಗಿದೆ ಮಾತ್ರವಲ್ಲದೇ 2028ರ ತನಕ ಇಲೆಕ್ಟ್ರಾನಿಕ್ ಬಿಡಿಭಾಗಗಳ ಉತ್ಪಾದನೆಗೆಂದು 22,919 ಕೋಟಿ ರೂ.ಗಳ ಪಿಎಲ್ಐ ಸಬ್ಸಿಡಿ ತೆಗೆದಿರಿಸಿದೆ.
ಸ್ವೆಟ್ಶಾಪ್ಗಳ ಲೆಕ್ಕಾಚಾರ ಹೇಗಿದೆ ಎಂಬುದಕ್ಕೆ ಒಂದು ಉದಾಹರಣೆ: ಆ್ಯಪಲ್ನ ಐಫೋನ್ 16 ಪ್ರೊ ಫೋನಿಗೆ ಮಾರುಕಟ್ಟೆ ದರ ಸುಮಾರು 1100 ಡಾಲರ್. ಅದರ ಹಾರ್ಡ್ವೇರ್ ವೆಚ್ಚ ಸುಮಾರು 550 ಡಾಲರ್. ಅಸೆಂಬ್ಲಿ ವೆಚ್ಚ ಸುಮಾರು 300 ಡಾಲರ್. ಒಂದುವೇಳೆ, ಬೆವರಿನಂಗಡಿಗಳಲ್ಲಿ ಉತ್ಪಾದಿಸುವ ಬದಲು, ಅಮೆರಿಕದಲ್ಲೇ ಈ ಐಫೋನ್ 16 ಉತ್ಪಾದನೆ ಆದರೆ, ಅಲ್ಲಿನ ಲೇಬರ್ ವೆಚ್ಚಕ್ಕೆ ಅದನ್ನು 3,500 ಡಾಲರ್ಗಿಂತ ಕಡಿಮೆ ದರಕ್ಕೆ ಮಾರುವುದು ಕಷ್ಟ. ಹಾಗಾಗಿ, ನಮಗೆ ಅಸೆಂಬ್ಲಿ ವ್ಯವಹಾರ ಲಾಭದಾಯಕ.
ಹೀಗೆ, ತಕ್ಷಣದ ಲಾಭದ ಹಿಂದೆ ಹೋಗುವುದರಿಂದ, ದೇಶದ ಯುವಜನರ ಕೌಶಲವೃದ್ಧಿಗೆ ಏನೂ ಸಹಾಯ ಆಗುವುದಿಲ್ಲ. ಭಾರತವು ಸೇವಾ ವಲಯದಲ್ಲಿ ‘ಬಾಡಿ ಶಾಪಿಂಗ್’ ಹೆಸರಿನಲ್ಲಿ ಮಾಡಿದ್ದನ್ನು, ಈಗ ಉತ್ಪಾದನಾ ವಲಯದಲ್ಲಿ ‘ಸ್ವೆಟ್ ಶಾಪ್’ ಹೆಸರಲ್ಲಿ ಮಾಡಹೊರಡುವುದು ಬುದ್ಧಿವಂತಿಕೆ ಅಲ್ಲ. ಜಾಗತಿಕ ಸನ್ನಿವೇಶ ಬದಲಾದರೆ, ಮಾರುಕಟ್ಟೆ ಕೂಡ ಬದಲಾಗಲಿದೆ. ಜನರನ್ನು ನಡುನೀರಿನಲ್ಲಿ ಕೈಬಿಡುವ ಸನ್ನಿವೇಶ ಬರಲಿದೆ. ಈ ರಿಸ್ಕ್ ತೆಗೆದುಕೊಳ್ಳುವ ಬದಲು ಭಾರತ ಸರಕಾರವು ಉತ್ಪಾದನಾ ರಂಗದಲ್ಲಿ ಒಂದು ಸಮಗ್ರವಾದ ದೂರಗಾಮಿ ಯೋಜನೆ ಹಾಕಿಕೊಂಡು ಹೊರಡುವುದು, ಉತ್ಪಾದನೆಯ ಗುಣಮಟ್ಟಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯ.
ಆದರೆ, ಇಂತಹ ಅವಕಾಶಗಳನ್ನು ಕೈಚೆಲ್ಲುವುದರಲ್ಲಿ ಭಾರತ ಸರಕಾರ ಬಹಳ ನಿಸ್ಸೀಮ. ಕೋವಿಡ್ ಕಾಲದಲ್ಲಿ ಚೀನಾವನ್ನು ಜಗತ್ತೇ ದೂರ ಸರಿಸಿಟ್ಟಿದ್ದಾಗ, ಔಷಧಿ ಕಚ್ಚಾವಸ್ತುಗಳ (Active Pharmaceutical Ingredients) ಉತ್ಪಾದನೆಯಲ್ಲಿ ಮತ್ತು ರಫ್ತಿನಲ್ಲಿ ಹಿಡಿತ ಸಾಧಿಸುವ ಅವಕಾಶ ಭಾರತಕ್ಕಿತ್ತು. ಇದನ್ನು ಭಾರತದ ರಿಸರ್ವ್ ಬ್ಯಾಂಕು ತನ್ನ ವರದಿಯೊಂದರಲ್ಲಿ ಗುರುತಿಸಿತ್ತು. ಆದರೆ ಭಾರತದ ಔಷಧಿ ಉದ್ಯಮವು ಅಂತಿಮ ಉತ್ಪನ್ನಗಳತ್ತ ಗಮನ ಹರಿಸಿದ್ದರಿಂದಾಗಿ ಚೀನಾ ಈಗ ಎಪಿಐ ಮಾರುಕಟ್ಟೆಯಲ್ಲಿ ಶೇ. ೮೫ ಪಾಲು ಹೊಂದಿದೆ. ಜಗತ್ತಿನಲ್ಲಿ ಉತ್ಪಾದನೆ ಆಗುತ್ತಿರುವ ಔಷಧಿಗಳಲ್ಲಿ ಶೇ. 10 ಭಾಗ ಭಾರತದಲ್ಲೇ ಉತ್ಪಾದನೆ ಆಗುತ್ತಿದ್ದರೂ, ಮಾರುಕಟ್ಟೆಯಲ್ಲಿ ಭಾರತದ ಔಷಧಿ ಮಾರಾಟದ ಪಾಲು ತೀರಾ ಸಣ್ಣದು. (ಈ ಬಗ್ಗೆ ಇದೇ ಲೇಖಕರ ‘ಕರಿಡಬ್ಬಿ’ ವಿವರವಾಗಿ ಚರ್ಚಿಸಿದೆ.) ಹೀಗೆ, ಪ್ರತಿಯೊಂದು ಉತ್ಪಾದನಾ ರಂಗದಲ್ಲಿ ಜಾಗತಿಕ ಸನ್ನಿವೇಶವನ್ನು ವಿವರವಾಗಿ ಪರಿಗಣಿಸಿ, ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವುದು ಸಾಧ್ಯವಾದರೆ, ಇನ್ನು ಹತ್ತು ವರ್ಷಗಳಲ್ಲಿ, ಭಾರತ ಕೂಡ ದೊಡ್ಡ ಆರ್ಥಿಕತೆ ಆಗಿ ನೆಲೆ ನಿಲ್ಲುವುದು ಸಾಧ್ಯ. ಇಲ್ಲದಿದ್ದರೆ ಕೇವಲ ಬೆವರಿನಂಗಡಿ ಆಗಿ, ಯಾರದ್ದೋ ಲಾಭಕ್ಕೆ ನಮ್ಮ ‘ಚೀಪ್ ಲೇಬರ್’ ಒದಗಿಸುವ ದೇಶವಾಗಿ ನಾವು ಹಿಂದುಳಿಯಲಿದ್ದೇವೆ. ಈಗ ಎಐ ತಂತ್ರಜ್ಞಾನ ಬಂದ ಬಳಿಕ, ಈ ರೀತಿಯ ‘ಕೌಶಲ ರಹಿತ/ಅರೆಕುಶಲ’ ಕಾರ್ಮಿಕರೆಲ್ಲ ತಮ್ಮ ವೃತ್ತಿಜೀವನದ ನಡುಮಧ್ಯದಲ್ಲಿ ನಿರದ್ಯೋಗಿಗಳಾಗುತ್ತಿರುವ ವಿದ್ಯಮಾನ ಕಣ್ಣೆದುರೇ ನಡೆಯುತ್ತಿದೆ. ಗೊತ್ತಿದ್ದೂ ಗೊತ್ತಿದ್ದೂ ನಮ್ಮ ಯುವಜನರನ್ನು ಈ ದುರಂತದೆಡೆಗೆ ತಳ್ಳುವುದು ತೀರಾ ಅನೈತಿಕ.