ಉದ್ಯೋಗಂ.. ‘ಆನಿಗಳಿಗೆ’ ವ್ಯಾಪಾರ ಲಕ್ಷಣಂ
ದೇಶದ ನಿರುದ್ಯೋಗ ಸಮಸ್ಯೆಯು ಭಾರತ ಸರಕಾರವನ್ನು ಕಾರ್ಪೊರೇಟ್‌ಗಳ ಮುಂದೆ ಮೊಣಕಾಲೂರಿ, ನಿರುದ್ಯೋಗಿ ಯುವಸಮುದಾಯಕ್ಕೆ ಉದ್ಯೋಗ ಕೊಡಿ ಎಂದು ಬೇಡುವ ಹಂತಕ್ಕೆ ತಲುಪಿಸಿರುವಂತಿದೆ. ಸರಕಾರ ಈಗ ನಿರುದ್ಯೋಗ ನಿವಾರಣೆಗೆಂದು ತಂದಿರುವ ಹೊಸ ಯೋಜನೆಗಳು, ಕಾರ್ಪೋರೇಟ್‌ಗಳಿಗೆ ‘ಲಾಭದಾಯಕ ವ್ಯಾಪಾರ’ ಅನ್ನಿಸಿಕೊಳ್ಳುವ ಹೊಸದೊಂದು ಮಜಲನ್ನು ತಲುಪಿವೆ. ಹಿಂದೆ, ತನ್ನ ಎರಡನೇ ಅವಧಿಯಲ್ಲಿ, ನಿರುದ್ಯೋಗಕ್ಕೆ ‘ಪಕೋಡಾ ಮಾರುವುದು ಪರಿಹಾರ’ ಎಂಬ ಸಲಹೆ ನೀಡಿದ್ದ ಸರಕಾರ, ಈಗ ತನ್ನ ಮೂರನೇ ಅವಧಿಯ ಆರಂಭದಲ್ಲೇ ಎಚ್ಚೆತ್ತುಕೊಂಡಿರುವುದು ಸ್ವಾಗತಾರ್ಹ. ಆದರೆ, ಈ ರೀತಿ ಸರಕಾರದ ಒತ್ತಾಯಕ್ಕೆ ಕಟ್ಟುಬಿದ್ದು ಉದ್ಯೋಗ ಕೊಡುವುದೇ ಕಾರ್ಪೊರೇಟ್‌ಗಳಿಗೆ ‘ಬಿಟ್ಟಿ ಕಾಸಿನ ಹಾದಿ’ ತೆರೆಯಲಿದೆಯೇ ಎಂಬ ಸಂಶಯಗಳು ತಲೆ ಎತ್ತುತ್ತಿವೆ.
ಭಾರತ ಸರಕಾರದ ಅಂಕಿ-ಸಂಖ್ಯೆಗಳ ಇಲಾಖೆಯು (ಎನ್‌ಎಸ್‌ಒ) ಈ ವಾರದ ಆದಿಯಲ್ಲಿ ಬಿಡುಗಡೆ ಮಾಡಿದ್ದ ವಾರ್ಷಿಕ ನಿಯತಕಾಲಿಕ ಕಾರ್ಮಿಕ ಬಲದ ಸಮೀಕ್ಷೆ (ಪಿಎಲ್‌ಫ್‌ಎಸ್) ವರದಿಯ ಪ್ರಕಾರ: ಜುಲೈ 2023-ಜೂನ್2024ರ ನಡುವಿನ ಅವಧಿಯಲ್ಲಿ ಗ್ರಾಮೀಣ ನಿರುದ್ಯೋಗದ ದರವು ಶೇ. 2.4ರಿಂದ ಶೇ. 2.5ಕ್ಕೆೆ ಏರಿಕೆ ಕಂಡಿದೆ; ಮಹಿಳಾ ನಿರುದ್ಯೋಗದ ದರವು ಶೇ. 2.9ರಿಂದ ಶೇ. 3.2ಕ್ಕೆ ಏರಿಕೆ ಕಂಡಿದೆ; ಒಟ್ಟು ನಿರುದ್ಯೋಗದ ದರವು ಸತತ ಐದು ವರ್ಷಗಳಲ್ಲಿ ಇಳಿಕೆ ಕಂಡ ಬಳಿಕ ಈ ಬಾರಿ ವರದಿ ಅವಧಿಯಲ್ಲಿ ಶೇ. 3.2ಕ್ಕೆ ಸ್ಥಿರಗೊಂಡಿದೆ; ಅರ್ಥಾತ್ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸನ್ನಿವೇಶ ಉತ್ಸಾಹದಾಯಕವಾಗಿಲ್ಲ.
ಸೆಂಟರ್ ಫಾರ್ ಇಕನಾಮಿಕ್ ಡೇಟಾ ಆ್ಯಂಡ್ ಅನಾಲಿಸಿಸ್ (ಸಿಇಡಿಎ) 2017-18 ಮತ್ತು 2022-23ರ ಅವಧಿಯಲ್ಲಿ ಯುವಕರ ಉದ್ಯೋಗದ ಕುರಿತು ನಡೆಸಿದ ಸಮೀಕ್ಷೆಯಲ್ಲಿ, ಭಾರತದ 15-59 ಪ್ರಾಯವರ್ಗದಲ್ಲಿ ಬರುವ ಎಳೆಯರಲ್ಲಿ ಕೇವಲ ಶೇ. 42.1 ಯುವಕರು ಮಾತ್ರ ಕಾರ್ಮಿಕಬಲದ ಭಾಗವಾಗಿದ್ದರು, ಅವರಲ್ಲಿ ಶೇ. 61.6 ಪುರುಷರು ಮತ್ತು ಕೇವಲ ಶೇ. 19.7 ಮಹಿಳೆಯರಾಗಿದ್ದರು. ಇನ್ನು ಶೇ. 13.2 ಜನ ನಿರುದ್ಯೋಗಿಗಳಾಗಿದ್ದರು ಎಂದು ವಿವರ ನೀಡಿದೆ. ಅಂದರೆ ಕಾರ್ಮಿಕ ಬಲದಲ್ಲಿ ಎಳೆಯರ ಪಾಲ್ಗೊಳ್ಳುವಿಕೆಯ ದರವು (ಎಲ್‌ಎಫ್‌ಪಿಆರ್) ಅರ್ಧಕ್ಕಿಂತ ಕಡಿಮೆ ಇತ್ತು. ಇವರಲ್ಲೂ ಬಹುತೇಕ ಮಂದಿ ನಗರಗಳಲ್ಲಿ ಸೇವಾಕ್ಷೇತ್ರಗಳಲ್ಲಿ (ಗಿಗ್ ಕೆಲಸಗಳಂತಹವು) ಮತ್ತು ಗ್ರಾಮೀಣ ಭಾಗಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರು.
ದೇಶದ ಡೆಮೊಗ್ರಾಫಿಕ್ ಡಿವೈಡೆಂಡ್ ಕುರಿತು, ಲಾಭದಾಯಕವಲ್ಲದ ಸಣ್ಣ ಗಾತ್ರದ ಗ್ರಾಮೀಣ ಕೃಷಿಭೂಮಿಗಳಿಂದ ಎಳೆಯರನ್ನು ಪರ್ಯಾಯ ಉದ್ಯೋಗಗಳತ್ತ ಆಕರ್ಷಿಸಿ, ಕೃಷಿ ಆದಾಯವನ್ನು ದುಪ್ಪಟ್ಟುಗೊಳಿಸಿಕೊಳ್ಳಬೇಕೆಂಬ ಕುರಿತು, ಎಳೆಯರಲ್ಲಿ ಉದ್ಯೋಗಾವಕಾಶಗಳನ್ನು ಗಳಿಸಿಕೊಳ್ಳಬಲ್ಲ ಕೌಶಲ ಕಡಿಮೆ ಇದೆ ಎಂಬ ಕುರಿತು ಕಳೆದ ಹತ್ತು ವರ್ಷಗಳಿಂದಲೂ ಒಣ ಮಾತುಗಳು ಕೇಳಿಸುತ್ತಲೇ ಇವೆ. ಅದ್ಯಾವುದಕ್ಕೂ ಆಳವಾಗಿ ತಲೆ ಕೆಡಿಸಿಕೊಂಡಿರದ ಸರಕಾರ, ಈಗ ಮೂರನೇ ಅವಧಿಗೆ ಚುನಾವಣೆಗಳಲ್ಲಿ ಹೊಡೆತ ಬಿದ್ದ ಬೆನ್ನಿಗೇ ಎಚ್ಚೆತ್ತುಕೊಂಡಿದೆ. ಕೈಯಿಂದ ಖರ್ಚು ಮಾಡಿಯಾದರೂ ಉದ್ಯೋಗ ಸೃಷ್ಟಿ ಮಾಡದಿದ್ದರೆ ಉಳಿಗಾಲ ಇಲ್ಲ ಎಂದು ಅವರಿಗೀಗ ಅರಿವಾಗಿದೆ, ಆ ನಿಟ್ಟಿನಲ್ಲಿ ಈಗ ಸರಕಾರ ಇಡುತ್ತಿರುವ ಹೆಜ್ಜೆಗಳು ಕಾರ್ಪೊರೇಟ್ ಆನಿಗಳಿಗೆ ‘ಹಾಲನ್ನ’ ಅನ್ನಿಸತೊಡಗಿದೆ.
ಜುಲೈ 23ರಂದು ಭಾರತದ ಹಣಕಾಸು ಸಚಿವರು ಮಂಡಿಸಿದ 2024-25ನೇ ಸಾಲಿನ ಬಜೆಟ್‌ನಲ್ಲಿ, ನಿರುದ್ಯೋಗ ನಿವಾರಣೆಗಾಗಿ ಮತ್ತು ಯುವಜನರಲ್ಲಿ ಕೌಶಲಗಳ ಅಭಿವೃದ್ಧಿಗಾಗಿ ಐದು ಯೋಜನೆಗಳನ್ನು ಪ್ರಕಟಿಸಿದ್ದರು. ಅದಕ್ಕಾಗಿ ಐದು ವರ್ಷಗಳಲ್ಲಿ 1.48 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡುತ್ತಿರುವುದಾಗಿ ತಿಳಿಸಿದ್ದರು.
ಆ ಐದು ಯೋಜನೆಗಳು ಹೀಗಿವೆ:
1. ಎಲ್ಲ ಔಪಚಾರಿಕ ಉದ್ಯೋಗ ಕ್ಷೇತ್ರಗಳಲ್ಲಿ ಮೊದಲಬಾರಿಗೆ ಉದ್ಯೋಗ ಗಳಿಸಿಕೊಂಡವರಿಗೆ 15,000 ರೂ.ಗಳ ಮೇಲ್ಮಿತಿಯ ತನಕ ಒಂದು ತಿಂಗಳ ಸಂಬಳವನ್ನು ಉಚಿತವಾಗಿ ಮೂರು ಕಂತುಗಳಲ್ಲಿ ಒದಗಿಸುವುದು. (ನಿರೀಕ್ಷಿತ ಲಾಭಾರ್ಥಿಗಳು 2.10 ಕೋಟಿ ಎಳೆಯರು)
2. ಔಪಚಾರಿಕ ಉದ್ಯೋಗ ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ಉದ್ಯೋಗ ಪಡೆದವರಿಗೆ ಮತ್ತು ಅವರ ಉದ್ಯೋಗದಾತರಿಗೆ ಪ್ರಾವಿಡೆಂಟ್ ಫಂಡ್ (ಇಪಿಎಫ್‌ಒ) ಕೊಡುಗೆಗಳಲ್ಲಿ ಮೊದಲ ನಾಲ್ಕು ವರ್ಷಗಳಿಗೆ ರಿಯಾಯಿತಿ. (ನಿರೀಕ್ಷಿತ ಲಾಭಾರ್ಥಿಗಳು 30ಲಕ್ಷ ಎಳೆಯರು)
3. ಉದ್ಯೋಗದಾತರು ಮಾಡಿಕೊಳ್ಳುವ ಎಲ್ಲ ನೇಮಕಾತಿಗಳಿಗೆ, ಮಾಸಿಕ 3,000 ರೂ.ಗಳ ತನಕ, ಮೊದಲ ಎರಡು ವರ್ಷಗಳಿಗೆ ಉದ್ಯೋಗದಾತರ ಇಪಿಎಫ್‌ಒ ಕೊಡುಗೆಗಳನ್ನು ಸರಕಾರವೇ ಭರಿಸಲಿದೆ. (ನಿರೀಕ್ಷಿತ ಲಾಭಾರ್ಥಿಗಳು 50 ಲಕ್ಷ)
4. ಮುಂದಿನ 5 ವರ್ಷಗಳಲ್ಲಿ 1,000 ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ 20 ಲಕ್ಷ ಎಳೆಯರಿಗೆ ಕೌಶಲಗಳನ್ನು ಕಲಿಸಿಕೊಡಲಾಗುವುದು. (ನಿರೀಕ್ಷಿತ ಲಾಭಾರ್ಥಿಗಳು 20 ಲಕ್ಷ)
5. ಐದು ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ 500 ಉನ್ನತ ಕಂಪೆನಿಗಳ ಮೂಲಕ 12 ತಿಂಗಳ ಇಂಟರ್ನ್‌ಷಿಪ್ ಅವಕಾಶಗಳನ್ನು ಒದಗಿಸಲಾಗುವುದು ಮತ್ತು ಅದಕ್ಕಾಗಿ ಸಿಎಸ್‌ಆರ್ ನಿಧಿಯ ಮೂಲಕ ಮಾಸಿಕ 5,000ರೂ. ಮತ್ತು ಒಮ್ಮೆಗೆ 6,000ರೂ.ಗಳ ಸಹಾಯ ಒದಗಿಸಲಾಗುವುದು.
ಈ ಐದೂ ಯೋಜನೆಗಳಲ್ಲಿ ಒಂದು ಸಮಾನ ಅಂಶ ಎಂದರೆ, ಈ ಎಲ್ಲ ಸಬ್ಸಿಡಿಗಳ ನೇರ ಆರ್ಥಿಕ ಲಾಭ ಇರುವುದು ಕಾರ್ಪೊರೇಟ್ ಸಂಸ್ಥೆಗಳಿಗೆ. ಇದಲ್ಲದೆ ಮೂಲ ಸೌಕರ್ಯಗಳಿಗೆ ಕ್ಯಾಪೆಕ್ಸ್ ಹೂಡಿಕೆ, ಉತ್ಪಾದನೆ ಆಧರಿತ ಪ್ರೋತ್ಸಾಹಧನ (ಪಿಎಲ್‌ಐ) ಮತ್ತು ಮೇಲೆ ಹೇಳಿದ ಉದ್ಯೋಗ ಆಧರಿತ ಪ್ರೋತ್ಸಾಹಧನ (ಇಎಲ್‌ಐ)ಗಳ ಕಾರಣದಿಂದಾಗಿ ಕೂಡ ಕಾರ್ಪೊರೇಟ್‌ಗಳು ಅಯಿತ ಸಹಾಯ ಪಡೆಯಲಿದ್ದಾರೆ. ಈ ಯೋಜನೆಗಳ ಫಲವಾಗಿ, ಪ್ರಾವಿಡೆಂಟ್ ಫಂಡ್ ಸದಸ್ಯರ ಸಂಖ್ಯೆಯಲ್ಲಿ ಏರಿಕೆ ಆಗಿದ್ದು, ಜುಲೈ ತಿಂಗಳಿನಲ್ಲಿ 19.94 ಲಕ್ಷ ಹೊಸ ಸದಸ್ಯರು ಸೇರ್ಪಡೆ ಆಗಿದ್ದಾರೆ, ಇದು ಹೊಸ ದಾಖಲೆ ಎಂದು ಭಾರತ ಸರಕಾರದ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಮೊನ್ನೆ ಸೋಮವಾರ ಹೇಳಿದ್ದರು. ಉಚಿತವಾಗಿ ಸಬ್ಸಿಡಿ ಲಾಭ ಸಿಗುವ ತನಕ ಉದ್ಯೋಗಗಳನ್ನು ಒದಗಿಸಲು ಯಾವುದೇ ಕಾರ್ಪೊರೇಟ್ ಉದ್ಯೋಗದಾತರು ಹಿಂಜರಿಯಲಾರರು. ಕಾರ್ಮಿಕ ಇಲಾಖೆ, ಕಾರ್ಪೊರೇಟ್ ವ್ಯವಹಾರಗಳ ಇಲಾಖೆಗಳು ಈ ಯೋಜನೆಗಳನ್ನು ಅಂತಿಮಗೊಳಿಸುವ ಕೆಲಸವನ್ನು ಭರದಿಂದ ನಡೆಸಿದ್ದು, ಶೀಘ್ರವೇ ಅವಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆಯಲಾಗುವುದು ಎಂದು ಮಾಂಡವೀಯ ಹೇಳಿದ್ದರು.
ಸರಕಾರವೇ ಬಿಡುಗಡೆ ಮಾಡಿರುವ 2024ರ ಆರ್ಥಿಕ ಸಮೀಕ್ಷೆಗಳ ಪ್ರಕಾರ, 2030ರ ತನಕ ಸರಕಾರವು ತನ್ನ ಹಿಗ್ಗುತ್ತಿರುವ ಉದ್ಯೋಗಾಕಾಂಕ್ಷಿಗಳ ಗಾತ್ರವನ್ನು ಸಂಭಾಳಿಸುವುದಕ್ಕಾಗಿ, ಪ್ರತೀ ವರ್ಷ 78.5 ಲಕ್ಷ ಉದ್ಯೋಗಗಳನ್ನು ಕೃಷಿಯೇತರ ಕ್ಷೇತ್ರಗಳಲ್ಲಿ ಒದಗಿಸುವುದು ಅನಿವಾರ್ಯ. ಇದು, ಈಗ ಒದಗಿಬರುತ್ತಿರುವ ಉದ್ಯೋಗಾವಕಾಶಗಳಿಗೆ ಹೋಲಿಸಿದರೆ, ಅಗಾಧವಾದ ಗಾತ್ರ.
ಸರಕಾರ ಈ ಸಮಸ್ಯೆಯ ಕುರಿತು ಇಲ್ಲಿಯ ತನಕವೂ ಬಾಯಿ ಬಡಾಯಿಗಿಂತ ಹೆಚ್ಚು ಮುಂದೆ ಹೋಗಿಲ್ಲ ಎಂಬುದಕ್ಕೆ ಸಾಕ್ಷಿ, 2014ರಲ್ಲಿ ಸ್ಥಾಪನೆಗೊಂಡ ಭಾರತ ಸರಕಾರದ ಕೌಶಲ್ಯಾಭಿವೃದ್ಧಿ ಇಲಾಖೆ (ಎಂಎಸ್‌ಡಿಇ). ಅದು ಲಕ್ಷಾಂತರ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದರೂ, ಇಲ್ಲಿಯ ತನಕ ‘ಎಂಪ್ಲಾಯೆಬಲ್’ ಎಳೆಯರನ್ನು ಸಾಕಷ್ಟು ಸಂಖ್ಯೆಯಲ್ಲಿ ಸಿದ್ಧಪಡಿಸಿಕೊಳ್ಳಲು ಸಾಧ್ಯ ಆಗಿಲ್ಲ. ಆಗಿರುವ ಖರ್ಚಿಗೆ ಉತ್ತರದಾಯಿತ್ವವೂ ಇಲ್ಲ. PMKVY, PMKK, NSDC, NCVET, JSS, NIESBUD, IIE, DGT ಹೀಗೆ ಸಾಲು ಸಾಲು ಸಂಸ್ಥೆಗಳು-ಯೋಜನೆಗಳು ಕಳೆದ ಹತ್ತು ವರ್ಷಗಳಲ್ಲಿ ಎಳೆಯರ ಕೌಶಲ್ಯಾಭಿವೃದ್ಧಿ ಕೆಲಸಗಳಲ್ಲಿ ನಿರತವಾಗಿವೆ. ರಾಜ್ಯ ಸರಕಾರಗಳೂ ಈ ನಿಟ್ಟಿನಲ್ಲಿ ಪ್ರತ್ಯೇಕ ಯೋಜನೆಗಳನ್ನು ಹೊಂದಿವೆ. ಆದರೂ ಈಗ ಕೊಟ್ಟಕೊನೆಗೆ, ನೇರ ಕಾರ್ಪೊರೇಟ್‌ಗಳಿಗೇ ಸಬ್ಸಿಡಿ ನೀಡಿ, ತಮಗೆ ಅಗತ್ಯವಿರುವ ಕೌಶಲಗಳನ್ನು ತಮ್ಮಲ್ಲಿನ ಉದ್ಯೋಗಾಕಾಂಕ್ಷಿಗಳಿಗೆ ತಾವೇ ನೀಡಿಕೊಳ್ಳಿ ಎಂದು ಅಲವತ್ತುಕೊಳ್ಳಲಾಗಿದೆ.