ಪಿಎಂ ಸೂರ್ಯಘರ್: ಉಚಿತ ವಿದ್ಯುತ್ ಎತ್ತಲಿರುವ ಸಾಂವಿಧಾನಿಕ ಪ್ರಶ್ನೆಗಳು
ಒಕ್ಕೂಟ ವ್ಯವಸ್ಥೆಯ ಸ್ವರೂಪದ ಕುರಿತ ಚರ್ಚೆಗಳು ಈಗೀಗ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿವೆ. ಕೇಂದ್ರ ಸರಕಾರವು ನಮ್ಮ ಸಂವಿಧಾನದ ಆಶಯಗಳನ್ನು ಮೀರಿ, ರಾಜ್ಯಗಳ ಅಧಿಕಾರ ವ್ಯಾಪ್ತಿಯ ಬೇಲಿಯೊಳಗೆ ಇಂಚಿಂಚಾಗಿ ತನ್ನನ್ನು ಸ್ಥಾಪಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನಗಳ ದೂರಗಾಮಿ ಪರಿಣಾಮಗಳನ್ನು ಈಗಲೇ ಗುರುತಿಸಿಕೊಳ್ಳಬೇಕಾದ ತುರ್ತು ಇದೆ. ಸಂವಿಧಾನದ ಏಳನೇ ಶೆಡ್ಯೂಲಿನಲ್ಲಿ, ವಿದ್ಯುತ್ ಜಂಟಿಪಟ್ಟಿಯ ಸಂಗತಿ. ಸ್ಥೂಲವಾಗಿ ಹೇಳಬೇಕೆಂದರೆ, ವಿದ್ಯುತ್ ನೀತಿ ನಿರೂಪಣೆ ಮತ್ತು ಮೇಲ್ವಿಚಾರಣೆ ಕೇಂದ್ರದ ಜವಾಬ್ದಾರಿ. ಆದರೆ, ಪ್ರಜೆಗಳ ಮನೆಗೆ ವಿದ್ಯುತ್ ತಲುಪಿಸುವ ಹೊಣೆ ರಾಜ್ಯದ್ದು. ಪರಸ್ಪರ ಹೊಂದಾಣಿಕೆಯೊಂದಿಗೆ ನಡೆಯಬೇಕಾದ ಈ ಚಟುವಟಿಕೆಗಳೀಗ ಹೊಸ ‘ಪಿಎಂ ಸೂರ್ಯಘರ್’ ಯೋಜನೆಯ ಮೂಲಕ ಸಂಘರ್ಷಕ್ಕೆ ಹಾದಿಯಾಗುವ ಸಾಧ್ಯತೆಗಳು ಕಾಣಿಸುತ್ತಿವೆ. ಈಗಾಗಲೇ ಉಚಿತ ವಿದ್ಯುತ್ಗಾಗಿ ‘ಗೃಹಜ್ಯೋತಿ’ ಗ್ಯಾರಂಟಿ ಯೋಜನೆಯನ್ನು ಪ್ರಕಟಿಸಿರುವ ಕರ್ನಾಟಕದಲ್ಲಂತೂ ಈ ಸಾಧ್ಯತೆಗಳು ಇನ್ನಷ್ಟು ನಿಚ್ಚಳವಾಗಿವೆ.
ಕೇಂದ್ರ ಸರಕಾರವು ಪರ್ಯಾಯ ಇಂಧನ ಮೂಲಗಳನ್ನು ಹುಡುಕಿಕೊಳ್ಳುವ ತನ್ನ ಪ್ರಯತ್ನದ ಭಾಗವಾಗಿ, 2026ಕ್ಕೆ ಮುನ್ನ ದೇಶದಲ್ಲಿ 40GW ವಿದ್ಯುತ್ ಮನೆಯ ಮಾಡಿನ ಸೋಲಾರ್ ಪ್ಯಾನಲ್ಗಳ (ಆರ್ಟಿಎಸ್) ಮೂಲಕ ಬರಬೇಕೆಂಬ ಉದ್ದೇಶ ಹೊಂದಿತ್ತು. ಆದರೆ ಡಿಸೆಂಬರ್ 2023ರ ಹೊತ್ತಿಗೆ ಈ ಯೋಜನೆಯಡಿ ಸಾಧ್ಯವಾಗಿರುವುದು ಕೇವಲ 11.08GW. ಈ ಹಿನ್ನೆಲೆಯಲ್ಲಿ ಯೋಜನೆಯ ಎರಡನೇ ಹಂತವನ್ನು ಕೇಂದ್ರ ಸರಕಾರ ರೂಪಿಸಿದ್ದು, ಜನಸಾಮಾನ್ಯರನ್ನು ಸೋಲಾರ್ ಬಳಕೆ ಮಾಡುವಂತೆ ಪ್ರೋತ್ಸಾಹಿಸಲು ಸಬ್ಸಿಡಿ ನೀಡುವುದಕ್ಕಾಗಿ 75,000 ಕೋಟಿ ರೂ.ಗಳನ್ನು 2204-25ನೇ ಸಾಲಿನಲ್ಲಿ ಪ್ರಕಟಿಸಲಾಗಿದೆ. ಅದರ ಅನ್ವಯ ಬಜೆಟ್ನಲ್ಲಿ ಘೋಷಣೆ ಆಗಿದ್ದ ‘ಪಿಎಂ ಸೂರ್ಯೋದಯ’ ಯೋಜನೆಯನ್ನು ‘ಪಿಎಂ ಸೂರ್ಯಘರ್’ ಯೋಜನೆ ಎಂದು ಹೆಸರು ಬದಲಿಸಿ ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ, ತಮ್ಮ ಮನೆಯ ಮಾಡಿನ ಮೇಲೆ ಸೌರ ವಿದ್ಯುತ್ ಉತ್ಪಾದನಾ ಪ್ಯಾನಲ್ ಸ್ಥಾಪಿಸುವ ಒಂದು ಕೋಟಿ ಕುಟುಂಬಗಳಿಗೆ ಗರಿಷ್ಠ 10 KW ತನಕ, ಮೊದಲ 3 KWಗೆ ಶೇ. 40, ಆ ಬಳಿಕದ ಸಾಮರ್ಥ್ಯಕ್ಕೆ ಶೇ. 20 ಸಬ್ಸಿಡಿಯನ್ನು ಕೇಂದ್ರ ಸರಕಾರ ನೀಡುತ್ತದೆ. ಈ ಯೋಜನೆಯ ಅನುಷ್ಠಾನವನ್ನು ರಾಜ್ಯಗಳ ಉಸ್ತುವಾರಿಯಲ್ಲಿರುವ ಡಿಸ್ಕಾಂಗಳಿಗೆ ವಹಿಸಲಾಗಿದೆ.
ರಾಜ್ಯಗಳ ಮೂಲಕ ಅನುಷ್ಠಾನಗೊಳ್ಳಬೇಕಾದ ಈ ಯೋಜನೆ ಸುಗಮವಾಗಿ ಜಾರಿಗೆ ಬರುವುದು ಸಾಧ್ಯ ಇದೆಯೇ ಎಂಬುದನ್ನು ಕರ್ನಾಟಕದ ಉದಾಹರಣೆಯ ಮೂಲಕವೇ ನೋಡೋಣ.
ಕರ್ನಾಟಕದಲ್ಲಿ ಏನು ಕಥೆ?
ರಾಜ್ಯದ ಒಟ್ಟು ವಿದ್ಯುತ್ ಬಳಕೆಯಲ್ಲಿ ಡೊಮೆಸ್ಟಿಕ್ ವಿದ್ಯುತ್ತಿನ ಪಾಲು ಶೇ. 22 ಮಾತ್ರ. ರಾಜ್ಯದ ಒಟ್ಟು ಬಳಕೆದಾರರ ಸಂಖ್ಯೆ ಅಂದಾಜು 1.72 ಕೋಟಿ. ಹಿಂದಿನ ಕುಟೀರ ಜ್ಯೋತಿ, ಭಾಗ್ಯಜ್ಯೋತಿ ಇತ್ಯಾದಿ ಯೋಜನೆಗಳ ಬಳಕೆದಾರರು 39.26 ಲಕ್ಷ. ಕರ್ನಾಟಕದಲ್ಲಿ ಇರುವ ಸಂಪರ್ಕಗಳಲ್ಲಿ, ಒಟ್ಟು ಅಂದಾಜು 1.46 ಕೋಟಿ ಸಂಪರ್ಕಗಳು ಬಳಸುತ್ತಿರುವುದು ತಿಂಗಳಿಗೆ 75 ಯೂನಿಟ್?ಗಳಿಗಿಂತಲೂ ಕಡಿಮೆ ವಿದ್ಯುತ್; ಅದರಲ್ಲಿ 70ಲಕ್ಷ ಸಂಪರ್ಕಗಳು ಬಳಸುವುದು ತಿಂಗಳಿಗೆ 48 ಯೂನಿಟ್ಗಳಿಗಿಂತಲೂ ಕಡಿಮೆ. ಇದಿಷ್ಟು ಡೇಟಾಗಳನ್ನಿಟ್ಟುಕೊಂಡು ಈಗ ಕೇಂದ್ರ ಸರಕಾರದ 300 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ವಿವರವಾಗಿ ನೋಡೋಣ.
► ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಬಂದ ಬಳಿಕ, ಈಗಾಗಲೇ 1.2 ಕೋಟಿ ಗ್ರಾಹಕರು ರಾಜ್ಯ ಸರಕಾರದ ಗೃಹಜ್ಯೋತಿ ಗ್ಯಾರಂಟಿಯಡಿ ಪ್ರತೀ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಇದರಲ್ಲಿ ಹಳೆಯ ಕುಟೀರ ಜ್ಯೋತಿ-ಭಾಗ್ಯಜ್ಯೋತಿ ಫಲಾನುಭವಿಗಳೆಲ್ಲ ಸೇರಿದ್ದಾರೆ. ಈ ಫಲಾನುಭವಿಗಳನ್ನು ಪಿಎಂ ಸೂರ್ಯಘರ್ ಯೋಜನೆಗೆ ಅಳವಡಿಸುವುದು ಹೇಗೆ?
► ಸೋಲಾರ್ ರೂಫ್ಟಾಪ್ ಯೋಜನೆಯ ಮೊದಲ ಹಂತ ರಾಜ್ಯದಲ್ಲಿ ಎಷ್ಟು ದುರ್ಬಲ ಆಗಿತ್ತೆಂದರೆ, 2002ರಿಂದ 2023ರ ನಡುವೆ ಬಂದಿರುವುದು ಕೇವಲ 1,392 ಅರ್ಜಿಗಳು, ಅವರಲ್ಲಿ 586 ಮಂದಿ ಯೋಜನೆ ಅನುಷ್ಠಾನ ಮಾಡಿಕೊಂಡಿದ್ದಾರೆ. ಉತ್ಪಾದನೆ ಆಗುತ್ತಿರುವುದು ಕೇವಲ 2.7MW ವಿದ್ಯುತ್!
► ಈಗ ಸೂರ್ಯಘರ್ ಯೋಜನೆಗೆ ಸೇರ್ಪಡೆ ಆಗಲು, ಫಲಾನುಭವಿಯು ಒಂದು ಪಕ್ಕಾ ಮನೆ ಹೊಂದಿದ್ದು, ಅದರ ಮಾಡಿನ/ತಾರಸಿಯ ಮೇಲೆ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಬೇಕು. ದುಬಾರಿಯಾದ ಸೌರ ಪ್ಯಾನಲ್ ಅಳವಡಿಕೆಯ ವೇಳೆ ಸರಕಾರದಿಂದ ಶೇ. 60 ತನಕ ಸಬ್ಸಿಡಿ ಸಿಗುತ್ತದಾದರೂ, ಉಳಿದ ಶೇ. 40. ಹಣವನ್ನು ವ್ಯಕ್ತಿ ಸಾಲರೂಪದಲ್ಲೇ ಹೊಂದಿಸಬೇಕಾಗುತ್ತದೆ (CAPEX ಮಾದರಿ). ಸಾಲವನ್ನು ಡಿಸ್ಕಾಂಗಳಲ್ಲಿ ನೋಂದಣಿ ಆಗಿರುವ, ಯೋಜನೆ ಅನುಷ್ಠಾನ ಮಾಡುವ ಏಜನ್ಸಿಗಳೇ ವ್ಯವಸ್ಥೆ ಮಾಡಿದರೂ(RESCO ಮಾದರಿ), ಅದರ ಕಂತುಗಳ ಪಾವತಿಗೆ, ಹೆಚ್ಚಿನಂಶ ಫಲಾನುಭವಿಯ ವಿದ್ಯುತ್ ಉತ್ಪಾದನೆಯ ವೆಚ್ಚ ಬಳಕೆ ಆಗಲಿದೆ. ಇಷ್ಟೆಲ್ಲ ಜಟಿಲ ಸಂಗತಿಗಳಿಗೆ ಈಗಾಗಲೇ ಉಚಿತ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ಸಿದ್ಧರಾದಾರೇ?
► ಈಗಾಗಲೇ ಸೌರ ವಿದ್ಯುತ್ ಪ್ಯಾನಲ್ಗಳನ್ನು ಅಳವಡಿಸಿಕೊಂಡು, ಸರಕಾರಕ್ಕೆ ವಿದ್ಯುತ್ ಮಾರುತ್ತಿರುವವರ ಕಥೆ ಏನೆಂಬುದನ್ನು ಈ ಯೋಜನೆ ವಿವರಿಸಿದಂತಿಲ್ಲ. ಅವರ ಮಾರಾಟ ಒಪ್ಪಂದಗಳಲ್ಲಿ ವೈವಿಧ್ಯತೆ ಇದೆ. ಜೊತೆಗೆ, ಈ ಹೊಸ ಯೋಜನೆ ಎಂಪ್ಯಾನಲ್ ಆಗಿರುವ ಏಜನ್ಸಿಗಳಿಂದ ಸೋಲಾರ್ ಪ್ಯಾನಲ್ ಹಾಕಿಸಿಕೊಂಡವರಿಗೆ ಮಾತ್ರ ಅನ್ವಯ ಅನ್ನಲಾಗುತ್ತಿದೆ. ಹಳಬರೆಲ್ಲ ಈ ಯೋಜನೆಯಲ್ಲಿ ಪಾಲ್ಗೊಳ್ಳಬಯಸಿದರೆ ಏನಾಗಲಿವೆ ಎಂಬುದು ಸ್ಪಷ್ಟವಿಲ್ಲ.
► ವಿದ್ಯುತ್ (ಗ್ರಾಹಕ ಹಕ್ಕುಗಳು) ನಿಯಮ, 2000 ದ ಅನ್ವಯ, 10 KWಗಿಂತ ಕೆಳಗಿನ ಉತ್ಪಾದಕರಿಗೆ ಗ್ರಿಡ್ಡಿಗೆ ವಿದ್ಯುತ್ ಮಾರುವಾಗ ನೆಟ್ ಮೀಟರಿಂಗ್ (ಅಂದರೆ ತಮ್ಮ ಉತ್ಪಾದಿತ ವಿದ್ಯುತ್ನಲ್ಲಿ ತಮ್ಮ ಸ್ವಂತದ ಬಳಕೆಯನ್ನು ಕಳೆದು ಉಳಿದದ್ದಕ್ಕೆ ಪಾವತಿ) ಮತ್ತು ಅದಕ್ಕಿಂತ ಮೇಲಿನವರಿಗೆ ಗ್ರಾಸ್ ಮೀಟರಿಂಗ್ (ಅಂದರೆ, ಉತ್ಪಾದಿತ ವಿದ್ಯುತ್ತಿಗೆ ಬಿಲ್ ಪ್ರತ್ಯೇಕ ಪಡೆಯುವುದು ಮತ್ತು ಸ್ವಂತ ಬಳಕೆಯ ವಿದ್ಯುತ್ತಿನ ಬಿಲ್ ಬೇರೆ ಕಟ್ಟುವುದು) ಅನ್ವಯವಾಗುತ್ತದೆ. ಇಲ್ಲಿ ಸೌರ ಪ್ಯಾನಲ್ಗೆ ಸಾಲ ಪಡೆದಿರುವ ವ್ಯಕ್ತಿಗೆ ಅದು ಹೇಗೆ ಅನ್ವಯ ಆಗಲಿದೆ ಎಂಬುದು ಇನ್ನೂ ಸ್ಪಷ್ಟವಿಲ್ಲ.
► ಇಷ್ಟೆಲ್ಲ ಮಾಡಿ ಕೂಡ, ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಮನೆಯಲ್ಲಿ ವಿದ್ಯುತ್ ಸಂಗ್ರಹಿಸಿಡಲು ಬ್ಯಾಟರಿಗಳ ವ್ಯವಸ್ಥೆ ಇರುವುದಿಲ್ಲ. ಅವರು ವಿದ್ಯುತ್ತಿಗೆ ಡಿಸ್ಕಾಂಗಳನ್ನೇ ಅವಲಂಬಿಸಿರಬೇಕಾಗುತ್ತದೆ.
► ಸಾಮಾನ್ಯವಾಗಿ ಒಂದು KW ಸೋಲಾರ್ ಪ್ಯಾನಲ್ ಸ್ಥಾವರ ಸ್ಥಾಪಿಸಲು ಮಾರುಕಟ್ಟೆ ದರದಲ್ಲಿ 40,000&90,000ರೂ. ಗಳ ವೆಚ್ಚ ಬರುತ್ತದಂತೆ. ಸರಕಾರ ಒದಗಿಸುವ ಸಬ್ಸಿಡಿ ಹೆಚ್ಚೆಂದರೆ ಒಂದೆರಡು KWಗೆ ಸಾಕಾದೀತು. ಅದಕ್ಕಿಂತ ಹೆಚ್ಚಾಗಿ, ಈ ಪ್ಯಾನಲ್ಗಳ ಜೀವಿತಾವಧಿ ೨೫ ವರ್ಷ. (ಹೆಚ್ಚಿನ ವಿವರಗಳಿಗೆ ಸರಕಾರದ FAQ ಇಲ್ಲಿ ಓದಿ: https://pmsuryaghar.gov.in/pdf/faq_national_portal2024021301.pdf )
ಯಾಕೆ ಈ ಹಸ್ತಕ್ಷೇಪ?
ಮೇಲಿನ ಎಲ್ಲ ವಿವರಗಳನ್ನು ಗಮನಿಸಿದಾಗ, ಒಂದು ಸಂಗತಿ ಸ್ಪಷ್ಟ. ಅದೇನೆಂದರೆ ಕರ್ನಾಟಕದಲ್ಲಿ ಈಗಾಗಲೇ ಇರುವ ಗ್ಯಾರಂಟಿ ಸ್ಕೀಮಿನ ಎದುರು ಈ ಸ್ಕೀಮು ಯಶಸ್ಸು ಕಾಣುವ ಸಾಧ್ಯತೆ ಬಹುತೇಕ ಇಲ್ಲ. ಅದು ಒತ್ತಟ್ಟಿಗಿರಲಿ, ರಾಜ್ಯಗಳು ತಮ್ಮ ಪರಿಧಿಯ ಒಳಗೆ, ತಮ್ಮ ಸ್ಥಳೀಯ ಅವಶ್ಯಕತೆಗಳಿಗೆ ತಕ್ಕಂತೆ ರೂಪಿಸಬೇಕಾಗಿದ್ದ ಯೋಜನೆ ಇದಾಗಿತ್ತು. ಸಬ್ಸಿಡಿ ಆಗಿ ಒದಗಿಸಬೇಕಾಗಿದ್ದ ರೂ. 75,000 ಕೋಟಿಯನ್ನು ರಾಜ್ಯಗಳಿಗೆ ಹಂಚಬಹುದಾಗಿತ್ತು. ಅದರ ಬದಲು, ‘‘ಒಂದು ದೇಶ; ಒಂದೇ ನೀತಿ’’ ಮಾಡುವ ಹಠಕ್ಕೆ ಬಿದ್ದು, ಹೀಗೆ ಸಂವಿಧಾನದ ಆಶಯದಲ್ಲೇ ಹಸ್ತಕ್ಷೇಪ ಮಾಡಿದಾಗ ಅದರ ದೂರಗಾಮಿ ಪರಿಣಾಮಗಳೇನು?
ಅಥವಾ ಇದು ಅನುಷ್ಠಾನ ಯೋಗ್ಯ ಅಲ್ಲ ಎಂದು ಗೊತ್ತಿದ್ದೇ ಪ್ರಕಟಿಸಿರುವ ಚುನಾವಣಾ ‘ಗ್ಯಾರಂಟಿ’ ಜುಮ್ಲಾವೇ? ಯಾಕೆಂದರೆ, ಈ ಯೋಜನೆಯ ಒಂದನೇ ಹಂತದಲ್ಲಿ ಅನುಷ್ಠಾನದ ಹೊಣೆ ಹೊತ್ತಿದ್ದ ಅಧಿಕಾರಿಗಳಿಗೆ ಯೋಜನೆಯ ಸಾಧಕ-ಬಾಧಕಗಳೆಲ್ಲ ಪರಿಚಯ ಇರಬೇಕಲ್ಲ! ಅವುಗಳನ್ನು ಪರಿಗಣನೆಗೆ ತೆಗೆದುಕೊಂಡು, ಸಂವಿಧಾನದ ಆಶಯಕ್ಕೆ ತಕ್ಕಂತೆ ಯೋಜನೆಯನ್ನು ರೂಪಿಸಬಹುದಿತ್ತಲ್ಲ?!!