‘ರಿಪೀಲ್’ ಎಂಬುದು ಈಗ ಸಂಸದೀಯ ‘ಸಗಟು’ ವ್ಯವಹಾರ
‘‘Corruptissima re publica plurimae leges’’ (ಕಾನೂನುಗಳ ಸಂಖ್ಯೆ ಹೆಚ್ಚಿದ್ದಷ್ಟೂ ಪ್ರಭುತ್ವ ಹೆಚ್ಚು ಭ್ರಷ್ಟವಾಗಿರುತ್ತದೆ.) ಎಂಬುದು ರೋಮನ್ ಚರಿತ್ರಕಾರ ಟಾಸಿಟಸ್‌ನ ಪ್ರಸಿದ್ಧ ಮಾತು. ಭಾರತದಲ್ಲಿ 1834ರಿಂದಲೂ ಚಾಲ್ತಿಯಲ್ಲಿರುವ ಹಲವು ಕಾನೂನುಗಳು ತೀರಾ ಇತ್ತೀಚೆಗಿನ ತನಕವೂ ಜಾರಿಯಲ್ಲಿದ್ದವು. 90ರ ದಶಕದ ಆರಂಭದಲ್ಲಿ ಉದಾರೀಕರಣದ ಯುಗ ಆರಂಭ ಆದ ಬಳಿಕ, ಇವೆಲ್ಲ ಅಪ್ರಸ್ತುತ ಎನ್ನಿಸತೊಡಗಿದ ಕೂಡಲೇ ಅವನ್ನೆಲ್ಲ ಕಿತ್ತೆಸೆಯುವ ಚಟುವಟಿಕೆ ವೇಗ ಪಡೆದುಕೊಳ್ಳತೊಡಗಿತು. ಮೊನ್ನೆ ಸಂಸತ್ ಅಧಿವೇಶನದಲ್ಲಿ ‘ಜನವಿಶ್ವಾಸ ಕಾಯ್ದೆ, 2023’ ಅಂಗೀಕಾರಗೊಳ್ಳುವುದರೊಂದಿಗೆ ಸುಮಾರು 26 ಕಾಯ್ದೆಗಳನ್ನು ರಿಪೀಲ್ ಮಾಡುವ (ರದ್ದುಪಡಿಸುವ) ಮತ್ತು 16 ಕಾಯ್ದೆಗಳಲ್ಲಿ ಶಿಕ್ಷಾರ್ಹ ಅಪರಾಧಗಳೆಂದು ಹೇಳಲಾಗಿರುವವುಗಳನ್ನು ಜೈಲು ಶಿಕ್ಷೆಯಿಂದ ಮುಕ್ತಗೊಳಿಸಿ ಕೇವಲ ‘ಪೆನಾಲ್ಟಿ’ ವಿಧಿಸುವ ಶಿಕ್ಷೆಗಳಾಗಿ ಪರಿವರ್ತಿಸಲಾಗಿದೆ.
ಈ ಅಪ್ರಸ್ತುತ ಕಾನೂನುಗಳನ್ನು ತೆಗೆದುಹಾಕುವ ಕುರಿತು ಗಂಭೀರವಾದ ಚಿಂತನೆ ಆರಂಭಗೊಂಡದ್ದು ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ. ಅದಕ್ಕಿಂತ ಮೊದಲು ಸಮಸ್ಯೆ ಎದುರಾದಾಗ ಮಾತ್ರ ಅದನ್ನು ನಿವಾರಿಸಿಕೊಳ್ಳಲಾಗುತ್ತಿತ್ತು. ಈ ‘ರಿಪೀಲ್’ ಕಾರ್ಯ ವೇಗ ಪಡೆದುಕೊಂಡದ್ದು 2014ರಿಂದ ಈಚೆಗೆ. ನರೇಂದ್ರ ಮೋದಿಯವರು 2014ರಲ್ಲಿ ತಮ್ಮ ಸರಕಾರ ಎಲ್ಲ ಅಪ್ರಸ್ತುತ ಕಾನೂನುಗಳನ್ನು ಕಿತ್ತುಹಾಕಲಿದೆ. ನಾವು ರಚಿಸುವ ಪ್ರತೀ ಹೊಸ ಕಾನೂನಿಗೆ 10 ಹಳೆ ಕಾನೂನುಗಳು ರದ್ದುಗೊಳ್ಳಲಿವೆ ಎಂದು ಘೋಷಿಸಿದ್ದರು. ಅದು ಹಾಗೆಯೇ ನಡೆಯಿತು ಕೂಡ. ಈ ವೇಗಕ್ಕೆ ಸಣ್ಣದೊಂದು ಹೋಲಿಕೆ ನೀಡಬೇಕೆಂದರೆ, 1947ರಿಂದ 2014ರ ನಡುವೆ ದೇಶದಲ್ಲಿ 1,301 ಅಪ್ರಸ್ತುತ ಕಾಯ್ದೆಗಳನ್ನು ರದ್ದು ಮಾಡಲಾಗಿದ್ದರೆ, ಆ ಬಳಿಕದ ಕೇವಲ ಮೂರು ವರ್ಷಗಳಲ್ಲಿ ಅಂದಾಜು 1,500 ಕಾಯ್ದೆಗಳನ್ನು ರದ್ದುಪಡಿಸಲಾಗಿದೆ!
ವಾಜಪೇಯಿ ಅವರು ಅಪ್ರಸ್ತುತ ಕಾಯ್ದೆಗಳ ಪರಿಶೀಲನೆಗಾಗಿ 1998ರಲ್ಲಿ ಸಮಿತಿಯೊಂದನ್ನು ರೂಪಿಸಿದ್ದರು. ಆ ಸಮಿತಿ 1,382 ಅಪ್ರಸ್ತುತ ಕಾನೂನುಗಳನ್ನು ಪತ್ತೆ ಹಚ್ಚಿತ್ತು. ಆದರೆ 2014ರ ತನಕ ಅವುಗಳಲ್ಲಿ ಕೇವಲ 415 ಮಾತ್ರ ರದ್ದಾಗಿದ್ದವು. ಈ ವರದಿಗಳನ್ನು ಮತ್ತೊಮ್ಮೆ ಪರಿಶೀಲಿಸಲು, 2014 ಆಗಸ್ಟ್ ತಿಂಗಳಿನಲ್ಲಿ ಪ್ರಧಾನಮಂತ್ರಿಗಳ ಕಾರ್ಯದರ್ಶಿ ಆರ್. ರಾಮಾನುಜಂ ಮತ್ತು ಮಾಜಿ ಕಾನೂನು ಕಾರ್ಯದರ್ಶಿ ವಿ.ಕೆ. ಭಾಸೀನ್ ಅವರ ನೇತೃತ್ವದ ಸಮಿತಿಯೊಂದನ್ನು ನೇಮಿಸಲಾಯಿತು. ಆ ಸಮಿತಿಯು 2014 ಅಕ್ಟೋಬರ್‌ನಲ್ಲಿ ತನ್ನ ವರದಿ ಸಲ್ಲಿಸಿ, ದೇಶದಲ್ಲಿ ಈಗ 2,781 ಕೇಂದ್ರ ಸರಕಾರಿ ಕಾಯ್ದೆಗಳಿದ್ದು, ಅವುಗಳಲ್ಲಿ 1,741 ಕಾಯ್ದೆಗಳನ್ನು ರದ್ದುಪಡಿಸಬಹುದು ಎಂದು ಶಿಫಾರಸು ಮಾಡಿತ್ತು. ಅವುಗಳಲ್ಲಿ 340 ಕಾಯ್ದೆಗಳು ರಾಜ್ಯಪಟ್ಟಿಗೆ ಸಂಬಂಧಿಸಿದ ಕೇಂದ್ರ ಕಾಯ್ದೆಗಳು. ಅವನ್ನು ರಾಜ್ಯಗಳೂ ರದ್ದುಪಡಿಸಬೇಕೆಂದು ಸಮಿತಿ ಹೇಳಿತ್ತು.
ಅದರಂತೆ 2014 ಮೇ ಮತ್ತು 2016 ಆಗಸ್ಟ್ ನಡುವೆ ನಾಲ್ಕು ಕಾಯ್ದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸುವ ಮೂಲಕ ದೇಶದಲ್ಲಿನ 1,175 ಕಾಯ್ದೆಗಳನ್ನು ಸಗಟಾಗಿ ರದ್ದುಪಡಿಸಲಾಗಿತ್ತು. ಆ ನಾಲ್ಕು ಕಾಯ್ದೆಗಳು ಯಾವುವೆಂದರೆ ರದ್ದತಿ ಮತ್ತು ತಿದ್ದುಪಡಿ ಕಾಯ್ದೆ, 2015 (ಇದರನ್ವಯ 35 ಕಾಯ್ದೆಗಳು); ರದ್ದತಿ ಮತ್ತು ತಿದ್ದುಪಡಿ (ಎರಡನೇ) ಕಾಯ್ದೆ, 2015 (ಇದರನ್ವಯ 90 ಕಾಯ್ದೆಗಳು); ಅಪ್ರಾಪ್ರಿಯೇಷನ್ಸ್ ಕಾಯ್ದೆ, 2016 (ಇದರನ್ವಯ 756 ಕಾಯ್ದೆಗಳು); ರದ್ದತಿ ಮತ್ತು ತಿದ್ದುಪಡಿ ಕಾಯ್ದೆ, 2016 (ಇದರನ್ವಯ 294 ಕಾಯ್ದೆಗಳು). ಆ ಬಳಿಕ ರದ್ದತಿ ಮತ್ತು ತಿದ್ದುಪಡಿ ಕಾಯ್ದೆ, 2017 (ಇದರನ್ವಯ 104 ಕಾಯ್ದೆಗಳು); ರದ್ದತಿ ಮತ್ತು ತಿದ್ದುಪಡಿ ಕಾಯ್ದೆ, 2019 (ಇದರನ್ವಯ 68 ಕಾಯ್ದೆಗಳು); ರದ್ದತಿ ಮತ್ತು ತಿದ್ದುಪಡಿ ಕಾಯ್ದೆ, 2022 (ಇದರನ್ವಯ 65 ಕಾಯ್ದೆಗಳು); ಮತ್ತು ಮೊನ್ನೆ ಜನವಿಶ್ವಾಸ ಕಾಯ್ದೆ, 2023 - ಹೀಗೆ, ಮತ್ತೆ 279 ಕಾಯ್ದೆಗಳು ರಿಪೀಲ್ ಆಗಿವೆ. ಅಂದರೆ ಒಟ್ಟು ಸುಮಾರು 1,454 ಕಾಯ್ದೆಗಳು ನರೇಂದ್ರ ಮೋದಿ ಅವರ ಸರಕಾರದ ಅವಧಿಯಲ್ಲಿ ಇಲ್ಲಿಯ ತನಕ ರದ್ದಾಗಿವೆ.
ಸಾಮಾನ್ಯವಾಗಿ ರದ್ದಾದ ಕಾಯ್ದೆಗಳು ಅಪ್ರಸ್ತುತ ಎಂಬ ಪರಿಣತರ ಶಿಫಾರಸುಗಳ ಮೇಲೆ ಆಗಿರುವಂತಹವು. ಇಂತಹ ಪ್ರತಿಯೊಂದು ಸಗಟು ರದ್ದತಿ ಕಾಯ್ದೆ ಬಂದಾಗಲೂ, ಆ ಪಟ್ಟಿಯಲ್ಲಿರುವ ಮೇಲ್ನೋಟಕ್ಕೇ ತೀರಾ ಅಪ್ರಸ್ತುತ ಅನ್ನಿಸುವ ಕಾಯ್ದೆಗಳನ್ನು ಎತ್ತಿ ತೋರಿಸಲಾಗುತ್ತದೆ. ಗಮನಿಸಬೇಕಾದ ಸಂಗತಿ ಎಂದರೆ, ಇದರ ಜೊತೆಗೆ ಹಲವು ಕಾಯ್ದೆಗಳನ್ನು ‘ಜೈಲು ಶಿಕ್ಷೆ’ ದಂಡನೆಯಿಂದ ಮುಕ್ತಗೊಳಿಸಲಾಗಿದೆ. ಈ ರೀತಿಯ ತಿದ್ದುಪಡಿಗಳು ಎಷ್ಟು ಚರ್ಚೆಯಾಗಿವೆ ಮತ್ತು ಇವು ಯಾರ ಹಿತಾಸಕ್ತಿಗಳ ಪರವಾಗಿದ್ದವು ಎಂಬುದು ಸಂಸತ್ತಿನಲ್ಲಾಗಲೀ ಅಥವಾ ಹೊರಗೆ ಸಾರ್ವಜನಿಕವಾಗಿಯಾಗಲೀ ಚರ್ಚೆ ಆದಂತಿಲ್ಲ. ಭಾರತದಲ್ಲಿ ಸಾಮಾನ್ಯವಾಗಿ ಮರ್ಯಾದಸ್ಥರು ಒಳಗೊಳ್ಳುವ ಹಲವು ಅಪರಾಧಗಳು, ಅದಕ್ಕೆ ‘ಜೈಲು ಶಿಕ್ಷೆ’ ಎಂಬ ಕಾರಣಕ್ಕೇ ಸಂಭವಿಸುವುದಿಲ್ಲ (ಹಲವೆಡೆ ಅನಗತ್ಯ ಜೈಲು ಶಿಕ್ಷೆ ಇದೆ ಎಂಬುದನ್ನೂ ಒಪ್ಪಿಕೊಂಡೇ ಈ ಮಾತು ಹೇಳುತ್ತಿರುವುದು)! ಈಗ ಮೊದಲ ಬಾರಿಗೆ ‘ರಿಪೀಲ್/ತಿದ್ದುಪಡಿ’ ಸಾರ್ವಜನಿಕವಾಗಿ ದೊಡ್ಡ ಪ್ರಮಾಣದಲ್ಲಿ ಚರ್ಚೆ ಆಗುತ್ತಿರುವುದು, ಮೊನ್ನೆ ಐಪಿಸಿ, ಸಿಆರ್‌ಪಿಸಿ ಮತ್ತು ಎವಿಡೆನ್ಸ್ ಕಾಯ್ದೆಗಳ ತಿದ್ದುಪಡಿ ಸುದ್ದಿ ಬಂದಾಗ. ಇದು ನಮ್ಮ ದೇಶದ ‘ಲಾ ಮೇಕರ್’ಗಳ ಪರಿಸ್ಥಿತಿ.
ಸ್ಯಾಂಪಲ್ಲಿಗೆ ಮೊನ್ನೆ ಜನವಿಶ್ವಾಸ ಕಾಯ್ದೆಯಡಿ ರದ್ದಾದ ಒಂದು ಕಾಯ್ದೆಯ ಉದಾಹರಣೆ ಕೊಟ್ಟು ಈ ಬರಹ ಮುಗಿಸುತ್ತೇನೆ. ಭಾರತ ಅರಣ್ಯ ಕಾಯ್ದೆ, 1927ನ್ನು ಜನವಿಶ್ವಾಸ ಕಾಯ್ದೆ, 2023ರ ಅಡಿ ಬೇರೆ ಕಾಯ್ದೆಗಳೊಂದಿಗೆ ‘ಸಗಟಾಗಿ’ ತಿದ್ದುಪಡಿ ಮಾಡಲಾಗಿದೆ. ಮೂಲ ಕಾಯ್ದೆಯಲ್ಲಿ ಅರಣ್ಯಕ್ಕೆ ಅಕ್ರಮ ಪ್ರವೇಶ, ಮರಕಡಿಯುವಾಗ ನಿರ್ಲಕ್ಷ್ಯದಿಂದ ಕಾಡಿಗೆ ಹಾನಿ, ನಿರ್ಲಕ್ಷ್ಯದಿಂದ ಕಾಡಿನಲ್ಲಿ ಬೆಂಕಿ ಉಳಿಸಿಬರುವುದು (ಕಾಡ್ಗಿಚ್ಚಿಗೆ ಕಾರಣವಾಗುವುದು) ಇತ್ಯಾದಿ ಅಪರಾಧಗಳಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು 500 ರೂ. ದಂಡ ವಿಧಿಸಲು ಅವಕಾಶ ಇತ್ತು. ಈಗ ತಿದ್ದಪಡಿ ಆದ ಬಳಿಕ, ಈ ಅಪರಾಧಕ್ಕೆ ಶಿಕ್ಷೆ ಕೇವಲ 500 ರೂ.ಗಳ ದಂಡ!
ಈ ತಿದ್ದುಪಡಿ ಆಗಿರುವ ಕಾಯ್ದೆಯನ್ನು ಹೊಸದಾಗಿ ಜಾರಿಗೆ ಬಂದಿರುವ ಬಹುಚರ್ಚಿತ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ, 2023ರ ಜೊತೆಗಿಟ್ಟು ನೋಡಿದಾಗ, ಇವೆಲ್ಲ ಅಂತಿಮವಾಗಿ ಯಾರ ಹಿತಾಸಕ್ತಿಗಳ ರಕ್ಷಣೆ ಎಂಬುದು ಸ್ಪಷ್ಟವಾಗುತ್ತಾ ಹೋಗುತ್ತದೆ. ಇವೆಲ್ಲ ಅಂತರ್ ಕಾನೂನು ಸಂಬಂಧಗಳ ಪರಿಶೀಲನೆಗೆ ಒಳಪಟ್ಟಿರುವಂತೆ ಅನ್ನಿಸುವುದಿಲ್ಲ.