ಸುತ್ತೀ, ಬಳಸೀ ಕಡೆಗಿದು... ‘ಬೊಜ್ಜು’ ಇಳಿಸುವ ಸ್ಕೀಮು

ನಮ್ಮ ದೇಶದಲ್ಲಿ ಸಮಸ್ಯೆಗಳಿಗೇನು ಕೊರತೆ ಇದೆಯೆ? ಪ್ರತಿದಿನ ಸಾಯುವವರಿಗೆ ಅಳುವವರು ಯಾರು? ಆದರೆ ಅಪರೂಪಕ್ಕೆ ‘ಹೊಟ್ಟೆ ತುಂಬಿದವರು’ ತಮ್ಮ ಪಾಲಿಗೆ ಬಂದದ್ದನ್ನೇ ಮಹಾ ಸಮಸ್ಯೆ ಎಂದು ಬಿಂಬಿಸುವುದಿದೆ. ಅಂತಹದೊಂದು ಉಳ್ಳವರ ಅಳಿವು-ಉಳಿವಿನ ಪ್ರಶ್ನೆ, ಈಗ ರಾಷ್ಟ್ರೀಯ ಸಮಸ್ಯೆ ಆಗಿಬಿಟ್ಟಿದೆ.
ಫೆ. 23ರಂದು ತನ್ನ 119ನೇ ಮನ್‌ಕೀ ಬಾತ್‌ನಲ್ಲಿ ಭಾರತದ ಪ್ರಧಾನಮಂತ್ರಿಯವರು ‘ಬೊಜ್ಜು’ ಭಾರತದ ಆರೋಗ್ಯಕ್ಕೆ ದೊಡ್ಡ ಸಮಸ್ಯೆ ಎಂದು ಪ್ರಕಟಿಸಿದ್ದಲ್ಲದೇ ತನ್ನ x ಹ್ಯಾಂಡಲ್ ಮೂಲಕ, ಈ ನಿಟ್ಟಿನಲ್ಲಿ ಕಾರ್ಯಾಚರಿಸುವಂತೆ ನಟ ಮೋಹನ್‌ಲಾಲ್, ಗಾಯಕಿ ಶ್ರೇಯಾ ಘೋಷಾಲ್, ಕ್ರೀಡಾಪಟು ಮನು ಭಾಕರ್ ಸೇರಿದಂತೆ 10 ಜನರಿಗೆ ‘ಸವಾಲು’ ಹಾಕಿದ್ದಾರೆ.
ಪ್ರಧಾನ ಮಂತ್ರಿಯವರಿಗೆ ಏಕಾಏಕಿ ಬೊಜ್ಜಿನ ಮೇಲೆ ಕಾಳಜಿ ಹುಟ್ಟಲು ಕಾರಣ ಏನು ಎಂದು ಹುಡುಕಿಕೊಂಡು ಹೊರಟಾಗ, ಸಿಕ್ಕಂತಹ ಕೆಲವು ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ ಮಾಹಿತಿ ಚುಕ್ಕಿಗಳನ್ನೆಲ್ಲ ಜೋಡಿಸಿಕೊಂಡಾಗ ಯಾವ ರಂಗೋಲಿ ಕಾಣಿಸಿಕೊಳ್ಳುತ್ತದೆಂಬುದು ನಿಮ್ಮ ಕೌಶಲಕ್ಕೆ ಬಿಟ್ಟದ್ದು.
ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖ
ಕಳೆದ ತಿಂಗಳು ಭಾರತ ಸರಕಾರದ ಬಜೆಟ್‌ಗೆ ಮುನ್ನ, ದೇಶದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತನಾಗೇಶ್ವರನ್ ಅವರು ಮಂಡಿಸಿದ್ದ 2024ರ ಆರ್ಥಿಕ ಸಮೀಕ್ಷೆಯ ಅಧ್ಯಾಯ 11ರಲ್ಲಿ, ದೇಶದೊಳಗೆ ಬೊಜ್ಜಿನ ಅಪಾಯಗಳ ಬಗ್ಗೆ ವಿವರಿಸಿದ್ದರು! 2017ರಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಿದ್ಧಪಡಿಸಿದ್ದ ‘ಹೆಲ್ತ್ ಆಫ್ ದಿ ನೇಷನ್ಸ್ ಸ್ಟೇಟ್ಸ್’ ವರದಿಯನ್ನು ಉಲ್ಲೇಖಿಸಿ, ಸಾಂಕ್ರಾಮಿಕವಲ್ಲದ ರೋಗಗಳು (Non-Communicable Diseases-NCD) ದೇಶದಲ್ಲಿ ಹೆಚ್ಚುತ್ತಿವೆ. ಹೃದಯದ ರಕ್ತನಾಳ ಸಂಬಂಧಿ ರೋಗಗಳು, ಕ್ಯಾನ್ಸರ್, ದೀರ್ಘಕಾಲಿಕವಾದ ಶ್ವಾಸಕೋಶ ಸಂಬಂಧಿ ತೊಂದರೆಗಳು ಮತ್ತು ಮಧುಮೇಹ ಈ ಎನ್‌ಸಿಡಿಗಳಲ್ಲಿ ಪ್ರಮುಖವಾದವಾಗಿದ್ದು, ಇವಕ್ಕೆ ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆಗಳ ಕೊರತೆ, ತಂಬಾಕು ಮತ್ತು ಮದ್ಯವ್ಯಸನಗಳು ಮುಖ್ಯ ಕಾರಣ ಎಂದು ಹೇಳಿದ್ದರು. ಐಸಿಎಂಆರ್‌ನ ಈ ವರದಿಯನ್ನು ಆಧರಿಸಿ, ಸರಕಾರವು ಜನಸಂಖ್ಯೆ ಆಧರಿತ ರೋಗ ಸಾಧ್ಯತೆ ತಪಾಸಣೆ ಕಾರ್ಯಕ್ರಮವನ್ನು ಆರಂಭಿಸಿರುವ ಬಗ್ಗೆ ಕೂಡ ಆರ್ಥಿಕ ಸಮೀಕ್ಷೆ ಮಾಹಿತಿ ನೀಡಿತ್ತು.
ಜಾಗತಿಕ ಔಷಧಿ ಮಾರುಕಟ್ಟೆ
ಔಷಧಿ ಉದ್ಯಮ ಜಗತ್ತಿನ ಅತ್ಯಂತ ಪ್ರಬಲ ವ್ಯವಹಾರ ಲಾಬಿಗಳಲ್ಲಿ ಒಂದು. ಈ ಹಿಂದೆ ಮಧುಮೇಹ, ರಕ್ತದೊತ್ತಡದಂತಹ ದೇಹ ವ್ಯವಸ್ಥೆಯ ಅಸಮತೋಲನಗಳನ್ನು ‘ರೋಗ’ ಎಂದು ಬಿಂಬಿಸುವಲ್ಲಿ ಯಶಸ್ವಿ ಆಗಿರುವ ಫಾರ್ಮಾ ಲಾಬಿಗೆ, ಈಗ ‘ಬೊಜ್ಜು’ ಹೊಸ ಗಿರಾಕಿ ಆಗಿ ಸಿಕ್ಕಿದೆ. 2022ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನಲ್ಲಿ ಪ್ರತೀ ಎಂಟು ಮಂದಿಯಲ್ಲಿ ಒಬ್ಬರು ‘ಬೊಜ್ಜುರೋಗ’ ದಿಂದ ಪೀಡಿತರು. ಬೊಜ್ಜು ಇರುವವರಲ್ಲಿ ಶೇ. 44 ಮಂದಿಗೆ ಮಧುಮೇಹ, ಶೇ. 23 ಮಂದಿಗೆ ಹೃದಯದ ರಕ್ತನಾಳದ ತೊಂದರೆಗಳು, ಶೇ. 7-41 ಜನರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎಂದು ಪ್ರಕಟಿಸಿತ್ತು. ಕಳೆದ 3-4 ವರ್ಷಗಳಿಂದ ಅಮೆರಿಕ, ಯುರೋಪಿನ ಮಾರುಕಟ್ಟೆಗಳಲ್ಲಿ ಸೆಮಾಗ್ಲುಟೈಡ್ (Semaglutide: GLP-1 ರಿಸೆಪ್ಟರ್ ಅಗೊನಿಸ್ಟ್ ಔಷಧಿ - ಇದು ಇನ್ಸುಲಿನ್ ಸ್ರಾವ ಹೆಚ್ಚಿಸುವ ಹಾಗೂ ಹಸಿವೆ ತಗ್ಗಿಸುವ ದೇಹದ ಹಾರ್ಮೋನಿನಂತೆ ವರ್ತಿಸುತ್ತದೆ) ಮತ್ತು ಟ್ರೈಜೆಪ್ಟೈಡ್ (Trizeptide: ಇದು ಕೂಡ ಇನ್ಸುಲಿನ್ ಸ್ರಾವ ಹೆಚ್ಚಿಸುವ, ಹಸಿವೆ ತಗ್ಗಿಸುವ ಔಷಧಿ) ಚುಚ್ಚು ಮದ್ದುಗಳದೇ ಭರಾಟೆ. ಒಂದು ತಿಂಗಳಿಗೆ 1,000-1500 ಡಾಲರ್(ರೂ. 80,000- 1,20,000) ನಷ್ಟು ದುಬಾರಿ ಆಗಿರುವ, Ozempic, Wegovy, Zepbound, Mounjaro ಇತ್ಯಾದಿ ಬ್ರ್ಯಾಂಡಿನ ಈ ಔಷಧಿಗಳು ಔಷಧಿ ಕಂಪೆನಿಗಳಿಗೆ ಸುಗ್ಗಿ ತರುತ್ತಿವೆ. ದೇಹದ್ರವ್ಯ ಸೂಚ್ಯಂಕ (ಬಿಎಂಐ) ಆಧರಿಸಿ, ಯಾರು ಬೊಜ್ಜು (obesity) ಹೊಂದಿದ್ದಾರೆ? ಯಾರು ಅತಿತೂಕ ಹೊಂದಿದ್ದಾರೆ? ಎಂದು ನಿರ್ಧರಿಸುವುದೇ ಅವೈಜ್ಞಾನಿಕ ಎಂಬ ವಾದದ ಹೊರತಾಗಿಯೂ ಜನ ಬೊಜ್ಜು ಕರಗಿಸಿಕೊಳ್ಳಲು ಈ ಔಷಧಿಗಳ ಬೆನ್ನ ಹಿಂದೆ ಬಿದ್ದಂತಿದೆ.
ಭಾರತದಲ್ಲಿ ಏನು ಕಥೆ?
ಗಮನಿಸಬೇಕಾದ ಸಂಗತಿ ಎಂದರೆ, ಜಗತ್ತಿನ ‘ಬೊಜ್ಜು’ ಇಳಿಸುವ ಹೊಣೆ ಹೊತ್ತಿರುವ ಕೆಲವು ವಿದೇಶೀ ಫಾರ್ಮಾ ಕಂಪೆನಿಗಳು 2025-26ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಪ್ರವೇಶಿಸಲು ಸಿದ್ಧತೆ ನಡೆಸುತ್ತಿವೆ ಎಂಬ ಮಾಹಿತಿ ಇದೆ. ಭಾರತದಲ್ಲೂ ‘ಬೊಜ್ಜು’ ನಿವಾರಕ ಔಷಧಿಗಳು, ಆಯುರ್ವೇದ ಇತ್ಯಾದಿ ಪರ್ಯಾಯ ಚಿಕಿತ್ಸೆಗಳು ಈಗಾಗಲೇ ಮಾರುಕಟ್ಟೆಯಲ್ಲಿದ್ದು, ವಿದೇಶೀ ಔಷಧಿಗಳ ಪ್ರವೇಶ ತಯಾರಿಯ ಹಿನ್ನೆಲೆಯಲ್ಲಿ, ಬದಲಾದ ಸನ್ನಿವೇಶಕ್ಕೆ ತಮ್ಮ ಮಾರುಕಟ್ಟೆ ತಂತ್ರಗಳನ್ನು ಸಜ್ಜುಗೊಳಿಸಿಕೊಳ್ಳುತ್ತಿವೆ.
ಈ ಹೊಸ ಆಟಕ್ಕಾಗಿ ಪಿಚ್ ಹದಗೊಳಿಸುವ ಪ್ರಯತ್ನಗಳು ಭರಪೂರ ಆರಂಭಗೊಂಡಿದ್ದು, ಲಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟಗೊಂಡಿರುವ ಇತ್ತೀಚೆಗಿನ ಸಂಶೋಧನೆಯೊಂದು, 2021ರಲ್ಲಿ ಭಾರತದಲ್ಲಿ 18 ಕೋಟಿ ಮಂದಿ ಬೊಜ್ಜು ಹೊಂದಿದ್ದು, ಅವರ ಪ್ರಮಾಣವು 2050ರ ಹೊತ್ತಿಗೆ 45 ಕೋಟಿಗೆ ಏರಲಿದೆ ಎಂದು ಹೇಳಿದೆ. ಪ್ರಧಾನಮಂತ್ರಿಗಳ ಮನ್ ಕೀ ಬಾತ್ ಬಳಿಕ, ಮೊನ್ನೆ ಮಂಗಳವಾರ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಚಾಲಕ ಸಮಿತಿಯ ಸಭೆಯಲ್ಲಿ ಮಾತನಾಡುತ್ತಾ, ದೇಶದ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು, ಆರೋಗ್ಯ ಇಲಾಖೆಯು ಈ ಎನ್‌ಸಿಡಿಗಳ ಸ್ಕ್ರೀನಿಂಗಿಗೆ ವೇಗ ನೀಡುತ್ತಿದ್ದು, 2019-20ರಲ್ಲಿ 10.94ಕೋಟಿ ಸ್ಕ್ರೀನಿಂಗ್ ನಡೆದಿದ್ದರೆ, 2023-24ರಲ್ಲಿ 109.55ಕೋಟಿ ಸ್ಕ್ರೀನಿಂಗ್ ನಡೆಸಲಾಗಿದೆ ಎಂದಿದ್ದಾರೆ.
ಈಗ ಚುಕ್ಕೆ ಜೋಡಿಸುವ ಆಟ!
ದೇಶದಲ್ಲಿ ‘ಬೊಜ್ಜು’ ಇಳಿಸುವ ಚಟುವಟಿಕೆಗಳು ಏಕಾಏಕಿ ಅಸಹಜ ಎನ್ನಿಸುವಷ್ಟು ವೇಗ ಪಡೆದಿರುವುದು, ಕೆಲವು ಪ್ರಶ್ನೆಗಳನ್ನು ಎತ್ತುತ್ತಿದೆ. ಅವುಗಳಿಗೆ ಉತ್ತರ ಸಿಕ್ಕರೆ, ಈ ರಂಗೋಲಿ ತನ್ನಿಂತಾನೆ ಪೂರ್ಣಗೊಳ್ಳುತ್ತದೆ.
1. ಕೋವಿಡ್ ಬಳಿಕ ಹಠಾತ್ ಸಾವುಗಳು, ಹೃದಯಾಘಾತಗಳು ಗಮನಾರ್ಹವಾಗಿ ಹೆಚ್ಚುತ್ತಿದ್ದು, ಅದರ ಕುರಿತು ಮಾತನಾಡಿದಾಗಲೆಲ್ಲ ಸರಕಾರದ ಸಮರ್ಥಕರು ಇದಕ್ಕೆ ಜೀವನಶೈಲಿಯಲ್ಲಿ ಬದಲಾವಣೆ ಕಾರಣವೇ ಹೊರತು, ಕೋವಿಡ್/ಕೋವಿಡ್ ಲಸಿಕೆ ಖಂಡಿತಾ ಅಲ್ಲ ಎಂಬ ನಿಲುವು ತಳೆಯುತ್ತಾರೆ. ಎನ್‌ಸಿಡಿಗಳ ಹೆಚ್ಚಳಕ್ಕೆ ‘ಬೊಜ್ಜು ಕಾರಣ’ ಎಂಬ ವಾದಕ್ಕೆ ಬಲ ನೀಡಲು ಪ್ರಯತ್ನಗಳು ನಡೆಯುತ್ತಿವೆಯೆ? ಈ ನಿಟ್ಟಿನಲ್ಲಿ ಭಾರತ ಸರಕಾರ ಯಾಕೆ ವಸ್ತುಸ್ಥಿತಿಗಳ ತುರ್ತು ಸಂಶೋಧನೆಗಳಿಗೆ ಇಳಿದಿಲ್ಲ?
2. ಜನರ ಆರೋಗ್ಯವನ್ನು, ಜೀವನ ಶೈಲಿಯನ್ನು ಕೆಡಿಸುವುದಕ್ಕೆ ಕಾರಣ ಆಗಿದೆ ಎಂದು ತಾನೇ ಒಪ್ಪಿಕೊಂಡಿರುವ ಅತಿ ಸಂಸ್ಕರಿತ ಆಹಾರ (ಯುಪಿಎಫ್), ಧೂಮಪಾನ, ಮದ್ಯಪಾನಗಳನ್ನು ಜನರ ಕೈಗೆ ಸಿಗದಂತೆ ಮಾಡುವ ನೀತಿ-ಕಾನೂನು ಮಾಡಬೇಕಾದ ಹೊಣೆ ಇರುವ ಸರಕಾರ, ಅದರ ಬದಲು ಬೊಜ್ಜು ಇಳಿಸುವ ಔಷಧಿ ಮಾರುಕಟ್ಟೆಯನ್ನು ಪ್ರೋತ್ಸಾಹಿಸುವ ಮೂಲಕ, ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಆಟಕ್ಕೆ ಹೊರಟಿದೆಯೇ?
3. ಸರಕಾರ ಬಿಡುಗಡೆಗೊಳಿಸಿರುವ ಆರ್ಥಿಕ ಸಮೀಕ್ಷೆಯಲ್ಲಿ ಜನರ ಆರೋಗ್ಯ ಸುಧಾರಣೆಗಾಗಿ ರಾಷ್ಟ್ರೀಯ ಕಾರ್ಯಕ್ರಮವನ್ನು ರೂಪಿಸಿದ ಬಗ್ಗೆ ಹೇಳಿದೆ. ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ಅಡಿ ಬರುವವರನ್ನುABHA-ID ನೀಡಿ (ಈ ಬಗ್ಗೆ, 21 ಸೆಪ್ಟಂಬರ್ 2024ರ ಪಿಟ್ಕಾಯಣ ವಿವರವಾಗಿ ಹೇಳಿದೆ), ಅವರ ಡೇಟಾಗಳನ್ನು ಒಂದು ಪ್ಲಾಟ್‌ಫಾರಂ ಅಡಿಯಲ್ಲಿ ತರಲಾಗುತ್ತಿದೆ (ncd.nhp.gov.in). ಇಲ್ಲಿ ಈಗಾಗಲೇ 63 ಕೋಟಿ ಮಂದಿಯನ್ನು ಸರಕಾರ ನೋಂದಣಿ ಮಾಡಿಕೊಂಡಿದೆ. ಡೇಟಾ ಖಾಸಗಿತನ ಕಾಯ್ದೆಯ ವ್ಯಾಪ್ತಿಯಿಂದ ತನ್ನನ್ನು ಹೊರಗಿರಿಸಿಕೊಂಡಿರುವ ಸರಕಾರವು ನೇರವಾಗಿ ಈ ಸೂಕ್ಷ್ಮ ಡೇಟಾಗಳಿಗೆ ಪ್ರವೇಶ ಹೊಂದಿರುವಂತೆ ಕಾಣಿಸುತ್ತಿದೆ. ಯಾರು ‘ಬೊಜ್ಜು’ ಹೊಂದಿದ್ದಾರೆ ಎಂಬ ಕುರಿತಾದ ಡೇಟಾಗಳು ನ್ಯಾಷನಲ್ ಹೆಲ್ತ್ ಏಜೆನ್ಸಿ ಬಳಿ ಇರುವುದಾಗಿ ಭಾರತದ ಅರೋಗ್ಯ ಸಚಿವರು ಹೇಳಿರುವುದು ಪತ್ರಿಕೆಗಳಲ್ಲಿ ವರದಿ ಆಗಿದೆ. ಈ ಬೆಳವಣಿಗೆಯು ಅತ್ಯಂತ ಸೂಕ್ಷ್ಮ ಎಂದು ವರ್ಗೀಕರಣಗೊಂಡಿರುವ ‘ಆರೋಗ್ಯ ಡೇಟಾಗಳ’ ಸುರಕ್ಷೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದೆ. ದೇಶದೊಳಗೆ ಪ್ರಜೆಯೊಬ್ಬರು ಬೊಜ್ಜು ಹೊಂದಿದ್ದಾರೆಯೇ? ಎಂಬ ಮಾಹಿತಿಯು ಫಾರ್ಮಾ ಲಾಬಿಗಳ ಕೈಗೆ ಸಿಕ್ಕಿದಾಗ, ಆರೋಗ್ಯದ ಮಾರುಕಟ್ಟೆಯಲ್ಲಿ ಏನೇನು ಸಂಭವಿಸಬಹುದು ಎಂಬ ಕಲ್ಪನೆಯಾದರೂ ಸರಕಾರಕ್ಕೆ ಇದೆಯೆ? ಅಥವಾ ಅದೆಲ್ಲ ಗೊತ್ತಿದ್ದೇ ಈ ಬೆಳವಣಿಗೆಗಳು ನಡೆಯುತ್ತಿವೆಯೆ?!