ಸಿದ್ದರಾಮಯ್ಯನವರ ಮೊದಲ ಕ್ವಾರ್ಟರ್
ಮೇಲು ನೋಟಕ್ಕೆ ಕರ್ನಾಟಕ ಸರಕಾರ ಗ್ಯಾರಂಟಿ ಗದ್ದಲದಲ್ಲಿ ಮುಳುಗಿಬಿಟ್ಟಿದೆ, ಇನ್ನೇನು ಆರ್ಥಿಕವಾಗಿ ಮುಳುಗಿಯೇ ಹೋದೀತು ಎಂಬ ಮಟ್ಟಕ್ಕೆ ಮಾಧ್ಯಮಗಳಲ್ಲಿ ಪ್ರಚಾರಸತ್ರ ನಡೆದಿದೆ. ಕೆಲವೇ ತಿಂಗಳುಗಳಲ್ಲಿ ಈ ಗ್ಯಾರಂಟಿಗಳೆಲ್ಲ ಕೈಸಾಲದೆ ಸ್ಥಗಿತಗೊಂಡರೂ ಅಚ್ಚರಿ ಇಲ್ಲ ಎಂದು ಪುಕಾರು ಎಬ್ಬಿಸಿದವರೂ ಇದ್ದಾರೆ. ಆದರೆ, ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣಸಿಗುತ್ತದೆ. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಮೊದಲ ನಾಲ್ಕು ತಿಂಗಳುಗಳ ಆರ್ಥಿಕ ನಿರ್ವಹಣೆಯನ್ನು ಪರಿಶೀಲಿಸುವ ಪ್ರಯತ್ನ ಇದು.
ಸಿದ್ದರಾಮಯ್ಯ ಅವರ ಸರಕಾರ ಅಧಿಕಾರಕ್ಕೆ ಬಂದದ್ದು ಮೇ20ರಂದು. ಅವರ ಬಜೆಟ್ ಮಂಡನೆ ಆದದ್ದು ಜುಲೈ 7ರಂದು. 3,27,747 ಕೋಟಿ ರೂ. ಗಾತ್ರದ ಬಜೆಟ್ ಅದು. ಅದರಲ್ಲಿ ಗ್ಯಾರಂಟಿಗಳ ನಿಗದಿತ ಪಾಲು 35,410 ಕೋಟಿ ರೂ. ಸರಕಾರದ ಹೊರಗಿನ ಅಂದಾಜುಗಳೂ ಹೇಳುತ್ತಿರುವುದು, ಈ ಗ್ಯಾರಂಟಿಗಳಿಗೆ ವರ್ಷಕ್ಕೆ 52-60 ಸಾವಿರ ಕೋಟಿ ರೂ.ಗಳು ಸಾಕು ಎಂದು. ವಾಸ್ತವ ಹೀಗಿರುವಾಗ ಒಂದೆಡೆ ಗ್ಯಾರಂಟಿ ಕಾರಣಕ್ಕೆ ಎಲ್ಲವೂ ಇನ್ನೇನು ಮಳುಗಿಯೇ ಹೋಗಲಿದೆ ಎಂಬ ಅಬ್ಬರದ ಪ್ರಚಾರ ಮತ್ತು ಇನ್ನೊಂದೆಡೆ ಸರಕಾರದ ಪಾವತಿಗಳು, ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆಗಳು ವಿಳಂಬವಾಗುತ್ತಿರುವ ದೂರುಗಳು ಕೇಳಿಬರುತ್ತಿವೆ. ಇದಕ್ಕೆಲ್ಲ ‘‘ಗ್ಯಾರಂಟಿಯೇ ಕಾರಣ’’ ಎಂಬ ಜಪವನ್ನು ಬ್ಯುರಾಕ್ರಸಿ ಮತ್ತು ಜನಪ್ರತಿನಿಧಿಗಳು ಮಾಡುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಮೊದಲ ಕ್ವಾರ್ಟರ್‌ನ ಆರ್ಥಿಕ ನಿರ್ವಹಣೆ ಹೇಗಿದೆ ಎಂದು ನೋಡಿದರೆ, ಅಲ್ಲಿ ಅಂತಹ ಆತಂಕಗಳೇನೂ ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ. ಸರಕಾರ ಅತಿ ಎಚ್ಚರಕ್ಕೆ ಹೊರಟು, ಬಂಡವಾಳ ಹೂಡಿಕೆಗಳಲ್ಲಿ ಗಮನಾರ್ಹ ತಗ್ಗಿಸಿಕೊಳ್ಳುವಿಕೆ (ಶೇ.48) ಮತ್ತು ತೆರಿಗೆ ಸಂಗ್ರಹದಲ್ಲಿ ಬಿಗಿ ತೋರಿಸುವ ಮೂಲಕ ‘ಗ್ಯಾರಂಟಿಗೆ ಗ್ಯಾರಂಟಿ’ ನಿಂತಂತಿದೆ.
ಗ್ಯಾರಂಟಿಗಳಿಗೆ ಮೊದಲ 4 ತಿಂಗಳಲ್ಲಿ ಖರ್ಚಾಗಿರುವುದು 6,392 ಕೋಟಿ ರೂ. ಇದರಲ್ಲಿ ಭಾಗ್ಯಜ್ಯೋತಿ ಮತ್ತು ಅನ್ನಭಾಗ್ಯದಂತಹ ಹಿಂದೆಯೇ ಇದ್ದ ಸಬ್ಸಿಡಿಗಳು ಓವರ್‌ಲ್ಯಾಪ್ ಆಗಿರುವುದರಿಂದ ಈ ಹೊಸ ಹೊರೆ ಏನೂ ತೀರಾ ದೊಡ್ಡದೆನ್ನಿಸುತ್ತಿಲ್ಲ. ಜೊತೆಗೆ ನೆಲಮಟ್ಟದಲ್ಲಿ ಗ್ಯಾರಂಟಿಗಳ ಫಲಾನುಭವಿಗಳು ಸಂತುಷ್ಟರಾಗಿರುವುದು ಸ್ಪಷ್ಟವಾಗಿ ಗೋಚರಕ್ಕೆ ಬರುತ್ತಿದೆ. ಒಟ್ಟಿನಲ್ಲಿ ನೋಡಿದರೆ ಸರಕಾರದ ಒಳಗೆ ಮತ್ತು ಆರ್ಥಿಕ ಇಲಾಖೆಯ ಒಳಗಿನ ತಳಮಳಗಳಿಗಿಂತ ಮಾಧ್ಯಮಗಳ ಅಬ್ಬರದ ಅಪಪ್ರಚಾರ ಮತ್ತು ಆ ಅಲೆಯ ಬೆನ್ನೇರಿ ಲೋಕಸಭಾ ಚುನಾವಣೆಯತ್ತ ಸಾಗುವ ಪ್ರತಿಪಕ್ಷಗಳ ಉತ್ಸಾಹ ಎದ್ದು ಕಾಣಿಸುತ್ತಿದೆ. ಹಾಗಾಗಿ ಇಂತಹ ಅಸಂಗತ ಕೊಲ್ಲಾಟರಲ್ ಡ್ಯಾಮೇಜ್‌ಗಳನ್ನು ಸರಕಾರ ಆರಂಭದಲ್ಲೇ ನಿಭಾಯಿಸಿಕೊಳ್ಳದಿದ್ದರೆ, ಇದೇ ಮುಂದೆ ಸರಕಾರಕ್ಕೆ ಮುಳುವಾಗುವ ಸಾಧ್ಯತೆಗಳು ಹೆಚ್ಚು.
ಹೊಸ ಸರಕಾರ ಅಧಿಕಾರ ಸ್ವೀಕರಿಸಿದಾಗ ಅದರ ಒಟ್ಟು ಜಮೆಗಳು ಮೇ ಅಂತ್ಯಕ್ಕೆ 32,099.42 ಕೋಟಿ ರೂ. ಆಗಿದ್ದವು. ಅಲ್ಲಿಂದೀಚೆಗೆ ನಾಲ್ಕು ತಿಂಗಳಲ್ಲಿ ಒಟ್ಟು 86,300.55 ಕೋಟಿ ರೂ.ಗಳ ಆದಾಯವನ್ನು ಸರಕಾರ ಸಂಗ್ರಹಿಸಿದೆ; ಒಟ್ಟು 85,790.67 ಕೋಟಿ ರೂ.ಗಳ ವೆಚ್ಚವನ್ನು ತೋರಿಸಿದೆ. ಮೇ ಅಂತ್ಯಕ್ಕಾಗಲೇ ರಾಜಸ್ವ ಕೊರತೆ 6,325.40 ಕೋಟಿ ರೂ. ಇದ್ದದ್ದು ಈಗ ಮತ್ತೆ ರೂ. 4,000 ಕೋಟಿಗಳಷ್ಟು ಏರಿ 10,295.67 ಕೋಟಿಗಳಷ್ಟಾಗಿದೆ. (ವಿವರಗಳಿಗೆ ಕೋಷ್ಠಕ 1 ನೋಡಿ). ಬಜೆಟ್‌ನಲ್ಲಿ ಆದಾಯ ಕೊರತೆಯನ್ನು ಜಿಎಸ್‌ಡಿಪಿಯ ಶೇ.0.5ಕ್ಕೆ ಮಿತಗೊಳಿಸಿಕೊಳ್ಳಲು ತೀರ್ಮಾನಿಸಲಾಗಿತ್ತು, ಅದು ಆಗಸ್ಟ್ ಅಂತ್ಯಕ್ಕೆ ಶೇ. 0.74ರಷ್ಟಿದೆ.
ಸರಕಾರದ ಆದಾಯದಲ್ಲಿ ಮುದ್ರಾಂಕ ಮತ್ತು ನೋಂದಣಿ ಬಾಬ್ತು ಹೊರತುಪಡಿಸಿ (ಸಕಾರಣವಾಗಿಯೇ) ಬೇರೆಲ್ಲ ವಿಷಯಗಳಲ್ಲಿ ಗುರಿ ಮೀರಿ ಸಾಧನೆ ಕಾಣಿಸುತ್ತಿದೆ. ಕೇಂದ್ರ ಸರಕಾರದ ಸಹಾಯಾನುದಾನ ನಿರೀಕ್ಷೆಗಿಂತ ಕಡಿಮೆ ಬಂದಿದೆ. ಕೇಂದ್ರ ಸರಕಾರದ ಕಡೆಯಿಂದ ಕೇಂದ್ರೀಯ ತೆರಿಗೆಗಳಲ್ಲಿ ರಾಜ್ಯದ ಪಾಲೆಂದು 37,252 ಕೋಟಿ ರೂ. ಮತ್ತು ಸಹಾಯಾನುದಾನವೆಂದು 15,355 ಕೋಟಿ ರೂ. ಬರುವುದಿದೆ. ಅದರಲ್ಲಿ ಆಗಸ್ಟ್ ಅಂತ್ಯಕ್ಕೆ ಬಂದಿರುವುದು ಕೇಂದ್ರೀಯ ತೆರಿಗೆಗಳಲ್ಲಿ ರಾಜ್ಯದ ಪಾಲೆಂದು 13,949.10 ಕೋಟಿ ರೂ. ಮತ್ತು ಸಹಾಯಾನುದಾನವೆಂದು 3,108.90 ಕೋಟಿ ರೂ. ಮಾತ್ರ ರಾಜ್ಯದ ಬೊಕ್ಕಸ ತಲುಪಿದೆ. (ಜಮೆ ವಿವರಗಳಿಗೆ ಕೋಷ್ಠಕ 2 ನೋಡಿ).
ಸರಕಾರದ ಆದಾಯ ಮತ್ತು ವೆಚ್ಚಗಳನ್ನು ನಾಲ್ಕು ಕ್ವಾರ್ಟರ್‌ಗಳಿಗೆ ಹಂಚಿ ನೋಡಿದರೆ, ಕನಿಷ್ಠ ಲೆಕ್ಕಪತ್ರಗಳ ಮಟ್ಟಿಗಾದರೂ ಸರಕಾರ ಬಹುತೇಕ ಬಜೆಟ್ ಶಿಸ್ತಿನ ಚೌಕಟ್ಟಿನ ಒಳಗೇ ವ್ಯವಹರಿಸುತ್ತಿರುವಂತಿದೆ. ಆದರೆ, ಹಿಂದಿನಿಂದಲೂ ಸರಕಾರಗಳು ಬಜೆಟ್ ಪರಿಧಿ ದಾಟಿ ವರರೂಪದಲ್ಲಿ ಅನುಗ್ರಹಿಸಿರುವ ಜಲ ಸಂಪನ್ಮೂಲ, ಕಿರು ನೀರಾವರಿ ಮತ್ತು ಪಿಡಬ್ಲ್ಯುಡಿ ಕಾಮಗಾರಿಗಳು 1.12 ಲಕ್ಷ ಕೋಟಿ ರೂ. ಗಳ ಗಾತ್ರದ್ದು ಅರೆಬರೆ ಆಗಿ ಬಾಕಿ ಇವೆ ಎಂಬ ಪತ್ರಿಕಾ ವರದಿಗಳಿವೆ. ಇಂತಹ ಅಶಿಸ್ತನ್ನು ಕುರಿತು ಹಾಲಿ ಸರಕಾರ ಆರಂಭದಲ್ಲೇ ಶ್ವೇತಪತ್ರ ಹೊರಡಿಸಿ, ಅವಕ್ಕೊಂದು ಗತಿಕಾಣಿಸುವ ಹಾದಿ ಹುಡುಕಿಕೊಂಡರೆ ಮುಂದೆ ಎಲ್ಲವೂ ಸುಗಮವಾಗಿ ಉಳಿದೀತು.