ಚುನಾವಣೆ ಗೆಲ್ಲಲು ‘ಸರಳ’ ತಂತ್ರಗಳು!
ಮತದಾನ ನಡೆಯುತ್ತಿರುವ ಜಾಗದ ಆಸುಪಾಸಿನಲ್ಲಿ ರಾಜಕೀಯ ಚಟುವಟಿಕೆಗಳು ನಿಷಿದ್ಧ. ಆದರೆ, ಆ ನಿಷೇಧಿತ ಸ್ಥಳದಲ್ಲಿ ‘ಆ್ಯಪ್’ಗಳ ಬಳಕೆಯ ಮೂಲಕ ಮತದಾರರನ್ನು ಟಾರ್ಗೆಟೆಡ್ ಆಗಿ ತಲುಪುವ, ಮೈಕ್ರೋಮ್ಯಾನೇಜ್ ಮಾಡುವ ತಂತ್ರಗಾರಿಕೆಯ ಬಳಕೆ ಇತ್ತೀಚೆಗಷ್ಟೇ ಮುಗಿದಿರುವ ವಿಧಾನಸಭಾ ಚುನಾವಣೆಗಳ ವೇಳೆ ನಡೆದಿರುವ ಬಗ್ಗೆ ಸುದ್ದಿಗಳು ಈಗ ಕೇಳಿಸತೊಡಗಿವೆ. ಈ ತಂತ್ರಜ್ಞಾನದ ಎದುರು, ನಮ್ಮ ಚುನಾವಣಾ ಆಯೋಗವನ್ನು ಕಂಡರೆ ಅಯ್ಯೋ ಪಾಪ ಅನ್ನಿಸುತ್ತದೆ. ರಾಜಕೀಯ ಪಕ್ಷಗಳಲ್ಲಿರುವ ಡಿಜಿಟಲ್ ಹತ್ಯಾರುಗಳು ಅಥವಾ ಆ ಹತ್ಯಾರುಗಳ ಸಾಧ್ಯತೆಯ ಕಲ್ಪನೆಗಳು ಚುನಾವಣಾ ಆಯೋಗದ ಬಳಿ ಇಲ್ಲ. ಅದಕ್ಕಿನ್ನೂ ಬುದ್ಧಿ ಬಡತನ.
ಈಗ ಸಾರ್ವತ್ರಿಕ ಚುನಾವಣೆಗೆ ಪ್ರಚಾರದ ಭರಾಟೆ ಆರಂಭಗೊಂಡಿದೆ. ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರವನ್ನು ಗಮನಿಸಿದವರಿಗೆ, ಈ ಬಾರಿ ಅಲ್ಲಿ (ಅಂದರೆ ಎಕ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಇತ್ಯಾದಿ) ವಾತಾವರಣ ಬಹಳ ‘ಚಪ್ಪೆ’ ಅನ್ನಿಸಿದ್ದರೆ, ನಿಮ್ಮ ಊಹೆ ಸರಿಯಾಗಿದೆ! ಈ ಬಾರಿ ಚುನಾವಣೆಯಲ್ಲಿ ‘ಮೈಕ್ರೋ ಮ್ಯಾನೇಜ್ಮೆಂಟ್’ ಮತ್ತು ‘ಟಾರ್ಗೆಟೆಡ್ ರೀಚ್’ ತಂತ್ರಗಳು ಕೆಲಸ ಮಾಡುತ್ತಿವೆ. ಈಗ ಲಭ್ಯವಿರುವ ಕೃತಕ ಬುದ್ಧಿಮತ್ತೆಯ (ಎಐ) ಆರಂಭಿಕ ಹಂತದ ಸವಲತ್ತುಗಳನ್ನು ಬಳಸಿಕೊಂಡು, ಪ್ರತಿಯೊಬ್ಬ ಮತದಾರರನ್ನು ಅವರಿಗೆಂದೇ ನಿರ್ದಿಷ್ಟವಾದ ಸಂದೇಶದೊಂದಿಗೆ ತಲುಪುವ ತಂತ್ರವನ್ನು ಬಳಸಲಾಗುತ್ತಿರುವುದರಿಂದ, ಸೋಷಿಯಲ್ ಮೀಡಿಯಾ ‘‘ಟ್ರೋಲ್‌ಗಳಿಗೆ’’ ಈ ಬಾರಿ ಕೆಲಸ ಕಡಿಮೆ ಆಗಿದೆ!
2014ರಲ್ಲಿ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾ ಬಳಕೆ, 2019ರಲ್ಲಿ ವಾಟ್ಸ್‌ಆ್ಯಪ್ ತಂತ್ರಜ್ಞಾನ ಬಳಕೆಯ ಮೂಲಕ ‘ಡಿಜಿಟಲ್’ ಚುನಾವಣಾ ಪ್ರಚಾರದಲ್ಲಿ ವಿರೋಧ ಪಕ್ಷಗಳನ್ನೆಲ್ಲ ಮೈಲು ಹಿಂದೆ ಉಳಿಸಿ ಮುಂಚೂಣಿಯಲ್ಲಿದ್ದ ಬಿಜೆಪಿ, ಈ ಬಾರಿ ಕೂಡ ಟಾರ್ಗೆಟೆಡ್ ರೀಚ್ ತಂತ್ರದ ಬಳಕೆಯ ಮೂಲಕ ಮುಂಚೂಣಿಯಲ್ಲೇ ಉಳಿದಿದೆ. ತನ್ನ ಈ ಪ್ರಯೋಗವನ್ನು ಬಿಜೆಪಿ ಇತ್ತೀಚೆಗೆ ಮುಗಿದ ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನ ವಿಧಾನಸಭಾ ಚುನಾವಣೆಗಳಲ್ಲಿ ಯಶಸ್ವಿಯಾಗಿ ಪೂರೈಸಿದಂತಿದೆ. ಸಹಜವಾಗಿಯೇ, ಚುನಾವಣೆಯಲ್ಲಿ ತಂತ್ರಜ್ಞಾನದ ಬಳಕೆಯ ಮಾತನಾಡುವಾಗ ಅದು ಬಹುತೇಕ ಬಿಜೆಪಿ ಪಕ್ಷದ ಸುತ್ತವೇ ಸುತ್ತಬೇಕಾಗುತ್ತದೆ.
2023ರ ಪೂರ್ವಾರ್ಧದ ಹೊತ್ತಿಗೆ ಬಿಜೆಪಿ ಆರಂಭಿಸಿರುವ ಸರಳ್ (ಸಂಘಟನ್ ರಿಪೋರ್ಟಿಂಗ್ ಆ್ಯಂಡ್ ಅನಾಲಿಸಿಸ್) ಆ್ಯಪ್ ಅನ್ನು ಅವರ ಸೋಷಿಯಲ್ ಮೀಡಿಯಾ ಮುಖ್ಯಸ್ಥರು ‘‘ಚುನಾವಣೆ ಗೆಲ್ಲುವ ಯಂತ್ರ’’ ಎಂದು ವರ್ಣಿಸಿದ್ದು ಮಾಧ್ಯಮಗಳಲ್ಲಿ ವರದಿ ಆಗಿತ್ತು. ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಮೂಲಕ, ಮತದಾರರನ್ನು ಮತ್ತು ಹಿತೈಷಿಗಳನ್ನು ನೋಂದಾಯಿಸಿಕೊಳ್ಳುವ ಈ ಆಪ್ಲಿಕೇಷನ್, ನೋಂದಾಯಿಸಿಕೊಂಡವರಿಗೆ ಪಕ್ಷದ ಕಾರ್ಯಕ್ರಮಗಳನ್ನು, ಪ್ರಚಾರ ಸಾಮಗ್ರಿಗಳನ್ನು ತಲುಪಿಸುತ್ತಿದೆ. ಬೂತ್ ಮಟ್ಟದ ಕಾರ್ಯಕರ್ತರು ನಿರ್ವಹಿಸುವ ಈ ನಿರ್ದಿಷ್ಟ ಆಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರಿನಲ್ಲಿ, ಈಗಾಗಲೇ 30 ಲಕ್ಷಕ್ಕೂ ಹೆಚ್ಚು ಪ್ರಮಾಣದಲ್ಲಿ ಡೌನ್‌ಲೋಡ್ ಆಗಿದೆ ಎಂದರೆ, ಅದರ ವ್ಯಾಪ್ತಿಯನ್ನು ಅಂದಾಜಿಸಿಕೊಳ್ಳಬಹುದು. 76 ಕೋಟಿ ಭಾರತೀಯರು (40 ಕೋಟಿ ಗ್ರಾಮೀಣರು ಮತ್ತು 36 ಕೋಟಿ ನಗರವಾಸಿಗಳು) ಈಗ ಇಂಟರ್ನೆಟ್ ಸಂಪರ್ಕ ಹೊಂದಿದ್ದು, ಅವರನ್ನು ಕೈಯೆಟುಕಿನಲ್ಲಿ ಸಂಪರ್ಕಿಸಬಲ್ಲ ಯಾವುದೇ ‘ಟೂಲ್’ ಗಳು ಸಶಕ್ತ ಎಂಬುದಕ್ಕೆ ಅನುಮಾನ ಬೇಡ.
ಒಂದು ಬೂತ್ ಎಂದರೆ 800-1,000 ಮತದಾರರಿರುವ ಪ್ರದೇಶ. ಈ ಬೂತ್ ಹಂತದಲ್ಲಿ, ಇಂತಹ ಆ್ಯಪ್‌ಗಳನ್ನು ಬಳಸಿ ಮತದಾರರ ಮೈಕ್ರೊಡೇಟಾ ಸಂಗ್ರಹಿಸಿದಾಗ ಸಿಗುವ ಚಿತ್ರಣ ಎಷ್ಟು ಸ್ಪಷ್ಟವಾಗಿರಬಲ್ಲುದೆಂದರೆ, ಅದು ಒಂದೇ ಏಟಿಗೆ ಆ ಬೂತ್‌ನ ಫಲಿತಾಂಶವನ್ನೂ, ಬೂತ್ ಮಟ್ಟದ ನಾಯಕರ ಸಾಮರ್ಥ್ಯವನ್ನೂ ನಿಖರವಾಗಿ ವಿಶ್ಲೇಷಿಸಬಲ್ಲುದು. ಈ ಕಾರಣಕ್ಕಾಗಿಯೇ ಈಗೀಗ ಬಿಜೆಪಿ ನಾಯಕರು ಹೆಚ್ಚಾಗಿ ಬೂತ್ ಮಟ್ಟದಲ್ಲಿ ಗೆದ್ದರೆ ಮಾತ್ರ ಚುನಾವಣಾ ಗೆಲುವು ಎಂಬರ್ಥ ಬರುವ ಮಾತುಗಳನ್ನಾಡುತ್ತಿರುತ್ತಾರೆ. ಹೀಗೆ ಸಂಗ್ರಹಿಸಲಾಗಿರುವ ಡೇಟಾಗಳು ಸರಿಯಾಗಿವೆಯೇ ಎಂದು ಅಡ್ಡ ಪರಿಶೀಲಿಸಲು, 2020ರಿಂದೀಚೆಗೆ ಕನಿಷ್ಠ ನಾಲ್ಕೈದು ಬಾರಿ ಡ್ರೈ ರನ್‌ಗಳು ನಡೆದಿವೆ. ಕೋವಿಡ್ ಕಾಲದ ತಟ್ಟೆ-ಜಾಗಟೆ ಬಡಿಯುವಿಕೆ, ದೀಪ ಹಚ್ಚುವಿಕೆ, ಹರ್‌ಘರ್ ತಿರಂಗಾ, ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಯ ಅಕ್ಷತೆ ವಿತರಣೆಯಂತಹ ಕಾರ್ಯಕ್ರಮಗಳನ್ನು ಅವುಗಳ ಘೋಷಿತ ವ್ಯಾಪ್ತಿಯ ಹೊರಗೆ ರಾಜಕೀಯ ದೃಷ್ಟಿಕೋನದಿಂದ ಗಮನಿಸಿದರೆ, ಅವು ಡೇಟಾ ವೆರಿಫಿಕೇಷನ್ ಕಾರ್ಯಕ್ರಮಗಳೇ ಆಗಿ ಕಾಣಿಸುತ್ತವೆ (ಹರ್ ಘರ್ ತಿರಂಗಾ ಕಾರ್ಯಕ್ರಮದ ಅಂತ್ಯದಲ್ಲಿ ಆ ವೆಬ್‌ಸೈಟ್‌ನಲ್ಲಿ 9.2ಕೋಟಿಗೂ ಮಿಕ್ಕಿ ಸೆಲ್ಫೀಗಳು ಅಪ್‌ಲೋಡ್ ಆಗಿದ್ದವು!). ಈ ಎಲ್ಲ ಚಟುವಟಿಕೆಗಳ ಮೂಲಕ ಆಡಳಿತದಲ್ಲಿರುವ ಒಂದು ರಾಜಕೀಯ ಪಕ್ಷಕ್ಕೆ ಬೂತ್ ಮಟ್ಟದಲ್ಲಿ ತನ್ನ ಪಕ್ಷದ ಕಟ್ಟಾ ಬೆಂಬಲಿಗರು ಯಾರು, ತನಗೆ ಯಾರು ಮತ ಹಾಕಲಾರರು ಮತ್ತು ಯಾರು ಗೋಡೆಯ ಮೇಲಿನ ದೀಪ ಎಂಬ ಡೇಟಾಗಳನ್ನು ಸಂಗ್ರಹಿಸಿ, ಖಚಿತಪಡಿಸಿಕೊಳ್ಳುವುದು ಸಾಧ್ಯ ಇದೆ.
ಈ ಡೇಟಾಗಳ ಆಧಾರದಲ್ಲಿ, ಈಗಾಗಲೇ ಪಕ್ಷದ ಪರವಾಗಿರುವವರಿಗೆ ಪೂರಕವಾದ ಪ್ರಚಾರ ಸಾಮಗ್ರಿಗಳನ್ನು ತಲುಪಿಸುವುದು ಸಾಧ್ಯವಾದರೆ, ಇನ್ನೂ ತಮ್ಮ ಪಕ್ಷದ ಮತದಾರರೆಂದು ಖಚಿತವಾಗಿರದವರಿಗೆ, ಅವರನ್ನು ತಮ್ಮೆಡೆಗೆ ಆಕರ್ಷಿಸಲು ಅಗತ್ಯವಿರುವ ಪ್ರಚಾರ ಸಾಮಗ್ರಿಗಳನ್ನು ತಲುಪಿಸುವುದು ಸಾಧ್ಯವಾಗುತ್ತದೆ. ಮೊದಲ ಬಾರಿಯ ಮತದಾರರು (ಅಂದಾಜು 1.8 ಕೋಟಿ ಮಂದಿ), ಸರಕಾರಿ ಯೋಜನೆಗಳ ಫಲಾನುಭವಿಗಳು (ಅಂದಾಜು 80 ಕೋಟಿ ಮಂದಿ), ಅಲ್ಪಸಂಖ್ಯಾತರು, ಮಹಿಳಾ ಮತದಾರರು ಹೀಗೆ ಪ್ರತಿಯೊಂದು ಆರ್ಥಿಕ/ಸಾಮಾಜಿಕ ವರ್ಗಕ್ಕೂ ಪ್ರತ್ಯೇಕವಾದ ಚುನಾವಣಾ ಪ್ರಚಾರ ಸಾಮಗ್ರಿಗಳು ತಲುಪಲು ಅವಕಾಶ ಆಗುತ್ತದೆ. ಕಡೆಗೆ ಮತದಾನದ ದಿನ ಮತದಾನ ಮಾಡದಿರುವವರನ್ನು ‘ರಿಯಲ್ ಟೈಮಿನಲ್ಲಿ’ ಗುರುತಿಸಿ, ಕರೆತಂದು ಮತದಾನ ಮಾಡಿಸುವುದಕ್ಕೂ ಬೂತ್ ಮಟ್ಟದ ನಾಯಕರಿಗೆ ಅಗತ್ಯವಿರುವ ಲಾಜಿಸ್ಟಿಕ್ಸ್‌ಗಳನ್ನು ಇಂತಹ ಟೂಲ್‌ಗಳು ಒದಗಿಸಬಲ್ಲವು. ಇಂತಹ ಅಪಾರ ಸಾಧ್ಯತೆಗಳಲ್ಲಿ ಬಿಜೆಪಿ ಏನೇನನ್ನೆಲ್ಲ ಬಳಸಿಕೊಂಡಿದೆ ಎಂಬುದು ಗೊತ್ತಾಗಲು ಹೆಚ್ಚಿನಂಶ ಈ ಚುನಾವಣೆ ಮುಗಿಯಬೇಕು!
ಈಗ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಲೈವ್ ಚುನಾವಣಾ ಭಾಷಣಗಳನ್ನು ರಿಯಲ್ ಟೈಮಿನಲ್ಲಿ ಭಾರತದ ಪ್ರಮುಖ 8-10 ಭಾಷೆಗಳಲ್ಲಿ ಅನುವಾದಿಸಿ, ಡಬ್ ಮಾಡಿ ಪ್ರಸಾರ ಮಾಡುವುದಾಗಿ ಬಿಜೆಪಿ ಈಗಾಗಲೇ ಪ್ರಕಟಿಸಿದೆ. ಜೊತೆಗೇ ಈ ಬಾರಿ ಬಿಜೆಪಿ ದೊಡ್ಡ ಗಾತ್ರದ ಚುನಾವಣಾ ಪ್ರಚಾರ ಸಭೆಗಳ ಬದಲು ‘ಕಾರ್ನರ್ ಮೀಟಿಂಗ್’ಗಳ ಮೂಲಕ ವ್ಯವಹರಿಸುವುದಾಗಿ ಹೇಳಿರುವುದೂ ಗಮನಾರ್ಹ. ಟಾರ್ಗೆಟೆಡ್ ಡೆಲಿವರಿಗಳಿಗೆ ಈ ಕಾರ್ನರ್ ಮೀಟಿಂಗ್‌ಗಳು ಬಹಳ ಉಪಯುಕ್ತ.
ಇನ್ನು ಪ್ರತಿಪಕ್ಷ ಕಾಂಗ್ರೆಸ್ ಕಡೆಯಿಂದ ‘ಭಾರತ್ ಜೋಡೊ’ ತರಹದ ಆಪ್ಲಿಕೇಷನ್‌ಗಳು ಕಾರ್ಯಾಚರಿಸುತ್ತಿವೆಯಾದರೂ, ಅವು ಟಾರ್ಗೆಟೆಡ್ ರೀಚ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಹೆಚ್ಚಿನ ವಿರೋಧ ಪಕ್ಷಗಳ ಸೋಷಿಯಲ್ ಮೀಡಿಯಾ ವಾರಿಯರ್‌ಗಳು ಸನ್ನದ್ಧರಾಗಿ ಕುಳಿತಿದ್ದಾರಾದರೂ, ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ಯುದ್ಧಕ್ಕೆ ಎದುರಾಳಿಗಳು ಕಾಣಿಸುತ್ತಿಲ್ಲ! ಅವರಿಗೆ ಈ ಬಾರಿ ಯುದ್ಧ ನಡೆಯುತ್ತಿರುವುದು ಎಲ್ಲೆಂಬ ಬಗ್ಗೆ ಇನ್ನೂ ಖಬರಿದ್ದಂತಿಲ್ಲ!
ಪಕ್ಷಗಳ ಡಿಜಿಟಲ್ ಬಲಾಬಲದ ಕುರಿತು ಒಂದು ಉದಾಹರಣೆಯನ್ನು ಕರ್ನಾಟಕದಲ್ಲೇ ಕೊಡಬೇಕೆಂದರೆ, ಇಲ್ಲಿ ನಡೆಯುತ್ತಿರುವ ಗ್ಯಾರಂಟಿ ಸಮಾವೇಶಗಳ ವೀಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಹುಡುಕಿದರೂ ಸಿಗುವುದು ಕಷ್ಟ. ಆದರೆ, ಅದೇ ವೇಳೆ, ಪ್ರಧಾನಮಂತ್ರಿಗಳ ಪ್ರತಿಯೊಂದು ಪ್ರಚಾರ ಭಾಷಣ, ಲೈವ್ ಆರಂಭಗೊಂಡ ಬೆನ್ನಲ್ಲೇ, ಅದರ ಲೈವ್ ಲಿಂಕ್‌ಗಳು ಕೈಯೆಟುಕಿನಲ್ಲಿ ಬೆನ್ನು ಬೆನ್ನಿಗೆ ಕಾಣಿಸಿಕೊಳ್ಳತೊಡಗುತ್ತವೆ!
ಹಾಗಾದರೆ, ಇದು ಡಿಜಿಟಲಿ ಏಕಪಕ್ಷೀಯ ಚುನಾವಣೆಯೇ? ಎಂಬ ಪ್ರಶ್ನೆ ಏಳುತ್ತದೆ. ಅದಕ್ಕೆ ಉತ್ತರ- ‘‘ಹಾಗೇನಿಲ್ಲ’’. ಕರ್ನಾಟಕದಲ್ಲೇ ಇದು ಸಾಬೀತಾಗಿದೆ. ಹಳೆಯ ಸಾಂಪ್ರದಾಯಿಕ ಸೋಷಿಯಲ್ ಮೀಡಿಯಾದಲ್ಲೇ ಎದ್ದ #PayCM ಅಲೆಯಲ್ಲಿ ಮತ್ತು ಗ್ಯಾರಂಟಿಗಳ ಮಹಾಪೂರದಲ್ಲಿ, ಆಳುವ ಬಿಜೆಪಿ ಸೋತು, ಆ ಜಾಗದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ತನ್ನ ಎಲ್ಲ ಪರಿಣಾಮಕಾರಿ ಹತ್ಯಾರುಗಳು ಇರುತ್ತಲೇ, ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋಲಬೇಕಾಯಿತು.
ಪಕ್ಷಗಳದು ಈ ತಲೆನೋವಾದರೆ, ಸಾರ್ವಜನಿಕರಿಗೆ ಚುನಾವಣೆಗಳು ಇಷ್ಟೊಂದು ಡಿಜಿಟಲ್ ಆದ ಬಳಿಕವೂ ಹಣ, ಹೆಂಡ, ತೋಳ್ಬಲಗಳು ಚುನಾವಣಾ ಕಣದಿಂದ ಇನ್ನೂ ಹಿಂದೆ ಸರಿದಿಲ್ಲ ಎಂಬ ನೋವು. ಚುನಾವಣಾ ಆಯೋಗದ ಡಿಜಿಟಲ್ ಹತ್ಯಾರು ಪರಿಣಾಮಕಾರಿ ಆದ ದಿನ, ರಾಜಕೀಯ ಪಕ್ಷಗಳಿಗೆ ಈ ಅಡ್ಡಹಾದಿ ಕಷ್ಟ ಆಗಬಹುದು.