ಮಾಹಿತಿ ಹಕ್ಕು ಕಾಯ್ದೆಗೆ ‘ದಯಾಮರಣದ’ ಭಾಗ್ಯ
ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಹಿತಿ ಹಕ್ಕು ಆಯೋಗಕ್ಕೆ ಸಕಾಲದಲ್ಲಿ ಕಮಿಷನರ್‌ಗಳನ್ನು ನೇಮಿಸಿಕೊಳ್ಳದೇ ಹೋದರೆ, ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯು ‘‘ನಿರ್ಜೀವ ಶಬ್ದಗಳ ಕಂತೆ’’ ಆಗಿ ಉಳಿಯಲಿದೆ ಎಂದು ಮೊನ್ನೆ ಸೋಮವಾರ (ಅ. 30) ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. ಯಾವುದೇ ಸಹಜ ಸಂದರ್ಭಗಳಲ್ಲಿ ದೊಡ್ಡ ಸುದ್ದಿ ಆಗಬಹುದಾಗಿದ್ದ ಈ ಬೆಳವಣಿಗೆಯು ‘ಡಿಯರ್ ಮೀಡಿಯಾ’ಗಳ ಉದ್ದೇಶಪೂರ್ವಕ ನಿರ್ಲಕ್ಷ್ಯದ ಕಾರಣದಿಂದಾಗಿ ಸುದ್ದಿ ಆಗಲೇ ಇಲ್ಲ.
ಕೇಂದ್ರದ ಮುಖ್ಯ ಮಾಹಿತಿ ಕಮಿಷನರ್ (ಸಿಐಸಿ) ಮತ್ತು ಹಲವು ರಾಜ್ಯಗಳ ರಾಜ್ಯ ಮಾಹಿತಿ ಕಮಿಷನರ್ (ಎಸ್‌ಐಸಿ) ಹುದ್ದೆಗಳು ದೀರ್ಘಕಾಲದಿಂದ ಖಾಲಿಬಿದ್ದಿರುವ ಹಿನ್ನೆಲೆಯಲ್ಲಿ, ಮಾಹಿತಿ ಹಕ್ಕು ಹೋರಾಟಗಾರ್ತಿ ಹಾಗೂ ವಕೀಲರಾದ ಅಂಜಲಿ ಭಾರದ್ವಾಜ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವ ವೇಳೆ, ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಮೂವರು ಸದಸ್ಯರ ವಿಭಾಗ ಪೀಠವು ಈ ರೀತಿ ಅಭಿಪ್ರಾಯಪಟ್ಟಿತ್ತು. ಅಲ್ಲದೆ, ತಕ್ಷಣ ಆ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಗಳನ್ನು ಆರಂಭಿಸುವಂತೆ ಪೀಠವು ಸರಕಾರಗಳಿಗೆ ನಿರ್ದೇಶಿಸಿ, ಮೂರು ವಾರಗಳ ಬಳಿಕ ಈ ವಿಚಾರಣೆಯನ್ನು ಮತ್ತೆ ಕೈಗೆತ್ತಿಕೊಳ್ಳುವುದಾಗಿ ಹೇಳಿತ್ತು.
ಮೊನ್ನೆ ಅಕ್ಟೋಬರ್ 12ಕ್ಕೆ ಮಾಹಿತಿ ಹಕ್ಕು ಕಾಯ್ದೆಗೆ 18 ವರ್ಷ ತುಂಬಿತು. 2005ರಲ್ಲಿ ಜಾರಿಗೆ ಬಂದ ಈ ಕಾಯ್ದೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಾಗರಿಕರ ಕೈಗೆ ನಿಜಾರ್ಥದಲ್ಲಿ ಶಕ್ತಿ ತುಂಬಿದ ಮಹತ್ವದ ಕಾಯ್ದೆ. ರಾಜಸ್ಥಾನದ ದೇವದುಂಗ್ರಿ ಎಂಬ ಹಳ್ಳಿಯಲ್ಲಿ ಅರುಣಾ ರಾಯ್ (ನಿವೃತ್ತ ಐಎಎಸ್ ಅಧಿಕಾರಿ), ನಿಖಿಲ್ ದವೆ ಮತ್ತಿತರ ಚಳವಳಿಗಾರರ ಮೂಲಕ 1987ರಲ್ಲಿ ಮೊಳಕೆಯೊಡೆದ ಈ ಕನಸು, ಕಾಯ್ದೆಯಾಗಿ ಅನುಷ್ಠಾನಕ್ಕೆ ಬರಲು 2005ರ ತನಕ ಕಾಯಬೇಕಾಯಿತು. ಮಾಹಿತಿ ಹಕ್ಕು, ಸಂವಿಧಾನದ 19(1)(ಎ) ವಿಧಿಯನ್ವಯ ಮೂಲಭೂತವಾದ ಹಕ್ಕು ಎಂದು ನ್ಯಾಯಾಂಗವು ಹಲವು ಬಾರಿ ಹೇಳಿದ್ದರೂ, ಈ ಮಗ್ಗುಲ ಮುಳ್ಳನ್ನು ಸರಕಾರಗಳು ದೂರವೇ ಇರಿಸಿಕೊಂಡು ದಿನ ಕಳೆದಿದ್ದವು. ಕೊನೆಗೆ, ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ, ಯುಪಿಎ-1 ಸರಕಾರ ಇದನ್ನು ಜಾರಿಗೆ ತಂದಿತ್ತು.
ಶಿಸ್ತುಬದ್ಧವಾಗಿ ಬಳಕೆ ಆದಾಗ, ಶಾಸಕಾಂಗ ಮತ್ತು ಕಾರ್ಯಾಂಗಗಳೆರಡರ ಸ್ವೇಚ್ಛಾಚಾರಕ್ಕೂ ಕಡಿವಾಣ ಹಾಕಬಲ್ಲ ಮತ್ತು ಆ ಮೂಲಕ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಮತೋಲನಕ್ಕೆ ಕಾರಣ ಆಗಬಹುದಾಗಿದ್ದ ಈ ಆರ್‌ಟಿಐ ಕಾಯ್ದೆಯ ಹಲ್ಲು ಕೀಳುವ ಕೆಲಸಗಳು ಈಗ ಆರಂಭಗೊಂಡಿವೆ. ಸಂಸತ್ತನ್ನು ಬದಿಗೆ ಸರಿಸಿ, ಕಾರ್ಯಾಂಗದ ‘ರೂಲುಗಳ’ ಮೂಲಕವೇ ಆಡಳಿತ ನಡೆಸುವ ಹೊಸ ಹಾದಿಯನ್ನು ಹುಡುಕಿಕೊಂಡಿರುವ ಹಾಲೀ ಕೇಂದ್ರ ಸರಕಾರಕ್ಕೆ ಆರ್‌ಟಿಐ ಕಾಯ್ದೆ ಹಲವು ಬಾರಿ ಮುಜುಗರಗಳನ್ನು ಉಂಟುಮಾಡಿದ್ದಿದೆ (ಕೋವಿಡ್ ಕಾಲದ ಪಿಎಂ ಕೇರ್ಸ್ ನಿಧಿಯನ್ನು ನೆನಪು ಮಾಡಿಕೊಳ್ಳಿ). ಆ ಅನುಭವಗಳ ಹಿನ್ನೆಲೆಯಲ್ಲಿ, ಈ ವರ್ಷ ಜುಲೈನಲ್ಲಿ, ಯಾವುದೇ ಸಂಸದೀಯ ಸಮಾಲೋಚನೆಗಳಿಲ್ಲದೆ ಆರ್‌ಟಿಐ ಕಾಯ್ದೆಗೆ ತುರ್ತು ತಿದ್ದುಪಡಿಯೊಂದನ್ನು ಮಾಡಿ, ಚುನಾವಣಾ ಕಮಿಷನರ್ ಹುದ್ದೆಗೆ ಸಮನಾಗಿದ್ದ ಸಿಐಸಿ ಹುದ್ದೆಯ ಅಧಿಕಾರಾವಧಿಯನ್ನು ನಿರ್ಧರಿಸುವ ಹಕ್ಕನ್ನು ಕೇಂದ್ರ ಸರಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಇದಲ್ಲದೆ ಮೊನ್ನೆ ಜಾರಿಗೆ ಬಂದಿರುವ ಡಿಜಿಟಲ್ ಪರ್ಸನಲ್ ಡೇಟಾ ಸಂರಕ್ಷಣಾ ಕಾಯ್ದೆ, 2023ರ ಸೆಕ್ಷನ್ 44(3)ರ ಮೂಲಕ ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1) ನ್ನು ಬಹುತೇಕ ಅಪ್ರಸ್ತುತಗೊಳಿಸಿದೆ. ಇವೆಲ್ಲ ಬೆಳವಣಿಗೆಗಳೂ ಸ್ಥೂಲವಾಗಿ, ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವಂತಹವೇ ಆಗಿವೆ ಎಂದು ಪರಿಣತರು ಅಭಿಪ್ರಾಯಪಡುತ್ತಾರೆ.
ಕೇಂದ್ರದಲ್ಲಿ, ಇದೇ ಅಕ್ಟೋಬರ್ 3ರಿಂದ ಮುಖ್ಯ ಮಾಹಿತಿ ಕಮಿಷನರ್ ಹುದ್ದೆ ಖಾಲಿ ಇದ್ದು, ಒಟ್ಟು ಇರುವ 7 ಮಾಹಿತಿ ಕಮಿಷನರ್ ಹುದ್ದೆಗಳಲ್ಲಿ ಈಗ ನಾಲ್ವರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಹಾಗೂ ಈ ವಾರದ ಕೊನೆಗೆ (ನವೆಂಬರ್ 6) ಅವರೆಲ್ಲರೂ ನಿವೃತ್ತರಾಗಲಿದ್ದಾರಂತೆ. ಹಾಗಾಗಿ ಬರುವ ವಾರದಿಂದ ಕೇಂದ್ರದಲ್ಲಿ ಮಾಹಿತಿ ಕಮಿಷನರ್‌ಗಳೇ ಇಲ್ಲದಾಗಲಿದ್ದಾರೆ. ಇದೊಂದೇ ಪ್ರಕರಣ ಆಗಿದ್ದರೆ ಏನೋ ತಾಂತ್ರಿಕ ಅಚಾತುರ್ಯ ಆಗಿರಬಹುದೆಂದುಬಿಡಬಹುದು. ಹಾಗಲ್ಲ. ವಾಸ್ತವ ಗಂಭೀರವಿದೆ. ಮಣಿಪುರ, ಛತ್ತೀಸ್‌ಗಡ, ಮಹಾರಾಷ್ಟ್ರ, ಬಿಹಾರ, ಪಂಜಾಬ್, ಜಾರ್ಖಂಡ್, ತೆಲಂಗಾಣ, ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳಲ್ಲೂ ರಾಜ್ಯ ಮಾಹಿತಿ ಕಮಿಷನರ್ (ಎಸ್‌ಐಸಿ) ಹುದ್ದೆಗಳು ಖಾಲಿ ಇವೆ.
ಹೀಗೆ ಹುದ್ದೆಗಳು ಖಾಲಿ ಇರುವುದರಿಂದಾಗಿ ಮತ್ತು ವಿಳಂಬ ನೀತಿಯಿಂದಾಗಿ ದೇಶದಾದ್ಯಂತ ಮಾಹಿತಿ ಹಕ್ಕು ಮೇಲ್ಮನವಿ ಅರ್ಜಿಗಳ ವಿಲೇವಾರಿ ಸಕಾಲದಲ್ಲಿ ಆಗುತ್ತಿಲ್ಲ. ಜೂನ್ 30, 2023ರ ಹೊತ್ತಿಗೆ, ದೇಶದ ಒಟ್ಟು 29 ಮಾಹಿತಿ ಆಯೋಗಗಳಲ್ಲಿ 3.2 ಲಕ್ಷಕ್ಕೂ ಮಿಕ್ಕಿ ಮೇಲ್ಮನವಿಗಳು ಹಾಗೂ ದೂರುಗಳು ವಿಲೇವಾರಿಗೆ ಬಾಕಿ ಇವೆ. ಮಾಹಿತಿ ಹಕ್ಕು ಕಾಯ್ದೆಯ ಅಡಿ ಮಾಹಿತಿಗಳು ಕ್ಷುಲ್ಲಕ ಕಾರಣಗಳಿಗೆ ನಿರಾಕೃತವಾದಾಗ, ನಾಗರಿಕರ ಹಕ್ಕನ್ನು ಕಾಪಾಡಬೇಕಾದ ಈ ಮಾಹಿತಿ ಕಮಿಷನರ್ ಹುದ್ದೆಗಳಿಗೆ, ಆ ಪ್ರಕರಣಗಳ ವಿಚಾರಣೆ ನಡೆಸಿ, ಸಕಾರಣವಿಲ್ಲದೆ ಮಾಹಿತಿಯನ್ನು ನಿರಾಕರಿಸಿದ ಕೆಳಮಟ್ಟದ ಅಧಿಕಾರಿಗಳಿಗೆ 25,000ರೂ. ತನಕದ ದಂಡ ವಿಧಿಸುವ ಅಧಿಕಾರ ಇದೆ. ಮಾಹಿತಿ ನಿರಾಕರಿಸಿದ ಪ್ರಕರಣಗಳಲ್ಲಿ ಮೇಲ್ಮನವಿ ಹೋದಾಗ, ಅದನ್ನು ವಿಚಾರಣೆ ನಡೆಸುವ ಕಮಿಷನರ್‌ಗಳೇ ಇಲ್ಲದಿದ್ದರೆ, ಈಗ ಕಾರ್ಯಾಂಗದ ಅಧಿಕಾರಿಗಳು ಆಡಿದ್ದೇ ಆಟ. ಸಂಸತ್ತನ್ನು ಬದಿಗೆ ಸರಿಸಿ ಕಾರ್ಯಾಂಗದ ಮೂಲಕವೇ ತನ್ನೆಲ್ಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಹಾಲೀ ಸರಕಾರದ ಕಾರ್ಯತಂತ್ರಕ್ಕೆ, ಈ ಮಾಹಿತಿ ಕಮಿಷನರ್‌ಗಳ ಗೈರುಹಾಜರಿ ಪೂರಕವಾಗಿ ವರ್ತಿಸುವಂತೆ ಕಾಣಿಸುತ್ತಿದೆ. ಹಾಗಾಗಿಯೇ ಲಕ್ಷಾಂತರ ಮೇಲ್ಮನವಿಗಳು ನನೆಗುದಿಗೆ ಬಿದ್ದಿವೆ. ‘ಸತರ್ಕ್ ನಾಗರಿಕ್ ಸಂಘಟನ್’ ಎಂಬ ಸ್ವಯಂಸೇವಾ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಿಂದಾಗಿ ಈ ಎಲ್ಲ ಮಾಹಿತಿಗಳು ಬಹಿರಂಗಗೊಂಡಿವೆ.
ವಿಳಂಬಿತ ನ್ಯಾಯವೂ ನ್ಯಾಯದ ನಿರಾಕರಣೆಯೇ ಎನ್ನುತ್ತದೆ ನ್ಯಾಯಶಾಸ್ತ್ರ. ಪರಿಣಾಮಕಾರಿಯಾದ ಕಾನೂನೊಂದರ ಸುಗಮ ಅನುಷ್ಠಾನಕ್ಕೆ ಹಿಂಬಾಗಿಲ ಅಡ್ಡಿಗಳನ್ನು ಒಡ್ಡುವ ಮೂಲಕ, ಆ ಕಾನೂನನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿರುವಂತಿದೆ. ಹಂತಹಂತವಾಗಿ ಮಾಹಿತಿ ಹಕ್ಕು ಕಾಯ್ದೆಗೆ ‘ದಯಾಮರಣ’ ನೀಡುವ ಉದ್ದೇಶ ಪ್ರಭುತ್ವಕ್ಕೆ ಇದ್ದಂತಿದೆ. ಹಿಂದೊಮ್ಮೆ ‘ಲೋಕಪಾಲ’ ಇಲ್ಲವೆಂದು ಸುಪಾರಿ ಹೋರಾಟಗಾರರ ಮೂಲಕ ದೇಶದಾದ್ಯಂತ ಗದ್ದಲ ಎಬ್ಬಿಸಿ, ಆ ಅಲೆಯ ಬೆನ್ನೇರಿ ಅಧಿಕಾರಕ್ಕೆ ಬಂದ ಸರಕಾರವೊಂದು, ಈಗ ಅಷ್ಟೇ ಪರಿಣಾಮಕಾರಿಯಾದ ನಾಗರಿಕ ಅಸ್ತ್ರವೊಂದರ ಕತ್ತು ಹಿಚುಕುತ್ತಿರುವುದು ದೇಶದ ಹಾಲೀ ಪರಿಸ್ಥಿತಿಗೆ ಹಿಡಿದಿರುವ ಕೈಗನ್ನಡಿ.