ಮೇಲ್ಮನೆಗಳಿಗೆ ಹಿಡಿದಿರುವ ತುಕ್ಕು...
ಸಾಕ್ರೆಟೀಸ್ ಹೇಳಿರುವುದೆನ್ನಲಾದ - ‘‘ಪ್ರಬಲ ಮನಸ್ಸುಗಳು ಐಡಿಯಾಗಳನ್ನು ಚರ್ಚಿಸುತ್ತವೆ, ಸಾಮಾನ್ಯ ಮನಸ್ಸುಗಳು ಘಟನೆಗಳನ್ನು ಚರ್ಚಿಸುತ್ತವೆ ಮತ್ತು ದುರ್ಬಲ ಮನಸ್ಸುಗಳು ವ್ಯಕ್ತಿಗಳನ್ನು ಚರ್ಚಿಸುತ್ತವೆ’’ ಎಂಬ ಮಾತುಗಳು ನಮ್ಮ ಸಂಸದೀಯ ವ್ಯವಸ್ಥೆಗೆ ಈಗ ಬಹಳ ಚೆನ್ನಾಗಿ ಹೊಂದುತ್ತವೆ. ನಮ್ಮ ಪ್ರತಿನಿಧಿಗಳಾಗಿ ಸಂಸತ್ತಿನ ಒಳಗೆ, ವಿಧಾನ ಮಂಡಲದ ಒಳಗೆ ಸಾಂವಿಧಾನಿಕ ಚೌಕಟ್ಟಿನ ಒಳಗೆ ‘ಐಡಿಯಾಗಳನ್ನು’ ಚರ್ಚಿಸಿ-‘ಶಾಸನಗಳನ್ನು’ ಚರ್ಚಿಸಿ ಎಂದು ಆರಿಸಿ ಕಳುಹಿಸಿಕೊಟ್ಟರೆ, ಇವರೆಲ್ಲರೂ ಸಾರಾಸಗಟು ‘ವ್ಯಕ್ತಿಗಳನ್ನು’ ಚರ್ಚಿಸಲಾರಂಭಿಸಿದ್ದಾರೆ. ನಾವು ಎಂತಹ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸುತ್ತಿದ್ದೇವೆ ಎಂಬ ಸುಡುವಾಸ್ತವವನ್ನು ಅರ್ಥಮಾಡಿಕೊಳ್ಳುವಲ್ಲಿ ಈಗಾಗಲೇ ವಿಳಂಬವಾಗಿದೆ.
ಸಂಸತ್ತಿನ ರಾಜ್ಯಸಭೆಯಲ್ಲಿ ಸದನದ ಅಧ್ಯಕ್ಷಾಧಿಕಾರಿಗಳ ನಡವಳಿಕೆ ಹಾಗೂ ರಾಜ್ಯ ವಿಧಾನಪರಿಷತ್ತಿನಲ್ಲಿ ಬಳಕೆಯಾಗಿರುವ ಹೀನಭಾಷೆ ಮತ್ತದರಾಚೆಗಿನ ಬೆಳವಣಿಗೆಗಳು - ಎಲ್ಲವೂ ಸಂಸದೀಯ ವ್ಯವಸ್ಥೆಯಲ್ಲಿ ‘ಮೇಲ್ಮನೆ’ ಎಂದು ಕರೆಸಿಕೊಳ್ಳುವ ಜಾಗಗಳಲ್ಲೇ ಸಂಭವಿಸಿರುವುದು ಖಂಡಿತಾ ಸ್ವೀಕಾರಾರ್ಹ ಅಲ್ಲ.
ಸಂಸತ್ತಿನ ಸದನಗಳ ಕಲಾಪಗಳನ್ನು 1989ರಿಂದಲೇ ಪ್ರಸಾರ ಮಾಡಲಾಗುತ್ತಿದೆ, ಅವು ಹಂತಹಂತವಾಗಿ ಬೆಳೆದು ಈಗ ಸಂಸದ್ ಟಿವಿ ಚಾನೆಲ್ ಆಗಿ ಕುಳಿತಿದೆ. ನಾವು ಆರಿಸಿ ಕಳುಹಿಸಿದ ಸಂಸದರು, ಶಾಸಕರು ಸದನದಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ಮತದಾರರು ‘ನೋಡಬೇಕೆಂಬ’ ಉದ್ದೇಶದಿಂದ ಬಂದ ಈ ಲೈವ್ ಟೆಲಿಕಾಸ್ಟ್ ವ್ಯವಸ್ಥೆ, ಈಗ ತಮ್ಮ ಪರಾಕ್ರಮ ‘ತೋರಿಸಬೇಕೆಂಬ’ ಹಪಾಹಪಿ ಇರುವ ರಾಜಕಾರಣಿಗಳ ವಿಂಡೋ ವ್ಯವಸ್ಥೆ ಆಗಿಬಿಟ್ಟಿದೆ. ಅಲ್ಲಿ ಗ್ಯಾಲರಿಗೆಂದೇ ಆಡುವ ರಾಜಕಾರಣಿಗಳ ವಿಕಾರಗಳು, ಅದನ್ನು ನಿರ್ವಹಿಸುವವರ ಪಕ್ಷಪಾತ ಇತ್ಯಾದಿಗಳೆಲ್ಲ ಬೇರೆಯದೇ ಕಥೆ. ಇರಲಿ.
ತುಕ್ಕು ಹಿಡಿದ ಚೂರಿ
ಭಾರತದ ಉಪರಾಷ್ಟ್ರಪತಿಯೂ ಆಗಿರುವ ರಾಜ್ಯಸಭಾಧ್ಯಕ್ಷರ ಮೇಲೆ ಪಕ್ಷಪಾತದ ಆರೋಪ ಬಂದಾಗ, ಅವರು ಬೆದರುವಂತಹದೇನೂ ಇರಲ್ಲಿಲ್ಲ. ಸದನಗಳಲ್ಲಿ ಸಂಖ್ಯೆಗಳು ಅವರ ಪರವಾಗಿಯೇ ಇದ್ದವು; ಮೇಲಾಗಿ ನೋಟಿಸ್ 14 ದಿನಗಳ ಅವಧಿಯನ್ನು ಪೂರೈಸಿರಲಿಲ್ಲ. ಡಿಸೆಂಬರ್ 10ರಂದು ಸಲ್ಲಿಸಿದ್ದ ನೊಟೀಸನ್ನು ಡಿಸೆಂಬರ್ 19ರಂದು ಸದನದ ಉಪಾಧ್ಯಕ್ಷ ಹರಿವಂಶ್ ಅವರು ತಿರಸ್ಕರಿಸಿದ್ದರು. ತಾಂತ್ರಿಕವಾಗಿ ಲೋಪಗಳಿದ್ದ ಈ ನೋಟಿಸ್ ಪ್ರಾಥಮಿಕ ಹಂತದಲ್ಲೇ ಬಿದ್ದುಹೋಗಿದೆ. ಸದನದ ಒಳಗೆ ಅವಿಶ್ವಾಸದ ನಿರ್ಣಯ ಮಂಡನೆ, ಅದರ ಸ್ವೀಕಾರ, ಕೆಳಮನೆಯ ಒಪ್ಪಿಗೆ, ನಿರ್ಣಯದ ಮೇಲೆ ಚರ್ಚೆ, ಮತದಾನ - ಈ ಯಾವ ಹಂತಗಳೂ ಅಗತ್ಯವೇ ಬೀಳಲಿಲ್ಲ. ಆದರೆ, ಸದನದಿಂದ ಹೊರಗೆ, ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಉಪರಾಷ್ಟ್ರಪತಿಯವರು, ಮಂಗಳವಾರ ಮಹಿಳಾ ಪತ್ರಕರ್ತರ ಸಭೆಯೊಂದರಲ್ಲಿ ಆ ನೋಟಿಸಿನ ಬಗ್ಗೆ ಪ್ರಸ್ತಾವಿಸಿ(ವಿವರಗಳಿಗೆ PIB Release ID: 2087592) ಅದು ‘‘ತುಕ್ಕು ಹಿಡಿದ ಚೂರಿ’’ ಎಂದಿದ್ದಾರೆ. ಅವರು ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ‘‘ಬೈಪಾಸ್ ಸರ್ಜರಿ ಮಾಡಲು ತರಕಾರಿ ಕೊಚ್ಚುವ ಚೂರಿಯನ್ನು ಯಾವತ್ತೂ ಬಳಸಬಾರದು’’ ಎಂಬ ಹೇಳಿಕೆಯನ್ನು ನೆನಪಿಸಿಕೊಂಡು, ತನ್ನ ವಿರುದ್ಧ ಬಂದ ನೋಟಿಸ್ ತರಕಾರಿ ಕೊಚ್ಚುವಂತಹದೂ ಆಗಿರಲಿಲ್ಲ, ಅದು ತುಕ್ಕು ಹಿಡಿದ ಚೂರಿಯಾಗಿತ್ತು ಎಂದು ವ್ಯಂಗ್ಯವಾಡಿದ್ದಾರೆ. ಮಾತ್ರವಲ್ಲದೆ, ದೇಶದ ಹಿತಾಸಕ್ತಿಗಳಿಗೆ ಧಕ್ಕೆ ತರುವ ‘ಆರ್ಕೆಸ್ಟ್ರೇಟೆಡ್ ಪ್ರಯತ್ನಗಳು’ ನಡೆದಿವೆ ಎಂಬ ಪಿತೂರಿಬಾಜಿಯ ತರ್ಕವನ್ನು ಮುಂದಿಟ್ಟಿದ್ದಾರೆ. ಸಾಂವಿಧಾನಿಕ ಪೀಠಾಸೀನ ಅಧಿಕಾರಿಯೊಬ್ಬರ ಬಾಯಿಯಿಂದ ನಿರೀಕ್ಷಿತವಾಗಿದ್ದ ಮಾತುಗಳಲ್ಲ ಇವು.Any constitutional position has to be vindicated by commitment to sublimity, sterling qualities, constitutionalism. We are not in a position to settle scores ಎಂದು ಬೋಧಿಸುತ್ತಲೇ, ಅವರು ಸ್ಕೋರ್ ಸೆಟಲ್ ಮಾಡಿದ್ದಾರೆ! ಸದನದ ಒಳಗೂ ಅವರು ಮಾಡುತ್ತಾ ಬಂದದ್ದು ಇಂತಹದನ್ನೇ... ಪ್ರತಿಪಕ್ಷಗಳು ಕಳವಳ ವ್ಯಕ್ತಪಡಿಸಿದ್ದು ಈ ಬಗ್ಗೆಯೇ.
ವಿಧಾನ ಪರಿಷತ್ತಿನ ಬೀದಿ ಜಗಳ
ಕರ್ನಾಟಕದ ಮೇಲ್ಮನೆ ವಿಧಾನ ಪರಿಷತ್ತು ಕೂಡ ಕಳೆದವಾರ (ಡಿಸೆಂಬರ್ 20) ಕೆಸರೆರಚಾಟಕ್ಕೆ ಸಾಕ್ಷಿ ಆಯಿತು. ಮೌಲಿಕವಾದ ಚರ್ಚೆಗಳು ನಡೆಯಬೇಕಿದ್ದ ಹಿರಿಯರ ಸದನದಲ್ಲಿ ಜನಸಾಮಾನ್ಯರು ನಾಚಿ ತಲೆತಗ್ಗಿಸಬೇಕಾದಂತಹ ಘಟನೆ ನಡೆಯಿತು. ಈ ಗದ್ದಲ ನಡೆದದ್ದು ಸದನದ ಒಳಗೆ. ಆ ವೇಳೆಯಲ್ಲಿ ಕಲಾಪ ನಡೆಯುತ್ತಿರಲಿಲ್ಲ. ಹಾಗಾಗಿ, ಶಾಸಕರಿಗೆ ಇಮ್ಯೂನಿಟಿ ಇರಬೇಕೇ ಬೇಡವೇ ಎಂಬೆಲ್ಲ ಸೂಕ್ಷ್ಮಗಳ ಚರ್ಚೆ ಭರಪೂರ ನಡೆಯುತ್ತಿದೆ. ಗಮನಿಸಬೇಕಾದ ಸಂಗತಿ ಎಂದರೆ, ಇಂತಹದೊಂದು ಹೀನ ಘಟನೆ ನಡೆದಾಗ ಸದನದ ಸದಸ್ಯರು, ಸಚಿವ ಸಂಪುಟ ಅಥವಾ ಕಡೆಯ ಪಕ್ಷ ಮಾಧ್ಯಮಗಳು ಇದನ್ನು ಹೇಗೆ ಪರಿಗಣಿಸಬೇಕಿತ್ತು? ಯಾರು ಯಾರಿಗೆ ಏನೆಂದರು? ಹಾಗೆ ಅಂದದ್ದಕ್ಕೆ ಸಾಕ್ಷಿ ಇದೆಯೇ? ಎಂದೆಲ್ಲ ಚರ್ಚೆಗಳು ನಡೆದವೇ ಹೊರತು, ವಿಧಾನಮಂಡಲಕ್ಕೆ ನಾವು ಆರಿಸಿ ಕಳುಹಿಸಿರುವ ಜನಪ್ರತಿನಿಧಿಗಳ ಗುಣಮಟ್ಟ ಎಂತಹದೆಂಬ ಚರ್ಚೆಯಾಗಲೀ, ಜನಪ್ರತಿನಿಧಿಗಳ ಸಾರ್ವಜನಿಕ ಬದುಕಿನಲ್ಲಿನ ನೈತಿಕತೆಯ ಚರ್ಚೆಯಾಗಲೀ ನಡೆಯಲೇ ಇಲ್ಲ.
ಸ್ವತಃ ಸಭಾಪತಿಗಳೂ ಈ ಗದ್ದಲಕ್ಕೆ ಮಾಧ್ಯಮಗಳ ಮೂಲಕ ತಮ್ಮ ಕೊಡುಗೆ ನೀಡಿದ್ದಾರೆ. ಜನರ ನೆನಪಿನಿಂದ ಮರೆಯಾಗುತ್ತಲೇ, ಈ ಪ್ರಕರಣ ಕೋಲ್ಡ್ ಸ್ಟೋರೇಜಿಗೆ ಹೋಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ವಿಧಾನಪರಿಷತ್ ಒಂದರಲ್ಲೇ ಹೀಗೆ ಕೋಲ್ಡ್ ಸ್ಟೋರೇಜಿಗೆ ಹೋದ ಘಟನೆಗಳು ಎಷ್ಟಿರಬಹುದು? ಅದನ್ನು ತೆರೆದರೆ ಹೊರಬರಲಿರುವ ಅಸ್ಥಿಪಂಜರಗಳ ಪ್ರಮಾಣ ಎಷ್ಟು? ವಿಧಾನ ಮಂಡಲದ ಹಿರಿಯರ ಸದನದಲ್ಲಿ ಇಂತಹ ನಾಚಿಕೆಗೇಡಿನ ಕೃತ್ಯಗಳು ನಡೆದದ್ದು ಇದೇ ಮೊದಲಲ್ಲ. ಹೀಗೆ ನಡೆದು ಜನರ ಮನಸ್ಸಿನಿಂದ ಮರೆಯಾದ ತಕ್ಷಣ, ಎಲ್ಲ ಸಂಸದೀಯ ನೈತಿಕತೆಯ ಎಲ್ಲೆಗಳನ್ನೂ ಮೀರಿ ನನೆಗುದಿಗೆ ಹಾಕಲಾದ ಸಂಗತಿಯೊಂದನ್ನು ವಿಧಾನಪರಿಷತ್ತಿನ ಸಭಾಪತಿಯವರಿಗೆ ನೆನಪು ಮಾಡಿಕೊಡುತ್ತಿದ್ದೇನೆ.
ಮಾನ್ಯ ವಿಧಾನ ಪರಿಷತ್ ಸಭಾಪತಿಯವರೇ, ಸರಿಯಾಗಿ ನಾಲ್ಕು ವರ್ಷಗಳ ಹಿಂದೆ, ವಿಧಾನಪರಿಷತ್ತಿನಲ್ಲಿ (15-12-2020) ಕೋರಂ ಬೆಲ್ ಚಾಲನೆಯಲ್ಲಿರುವಾಗಲೇ ಅಂದಿನ ಉಪಸಭಾಪತಿಯವರು ಅನುಮತಿ ಇಲ್ಲದೆ ಸಭಾಪತಿ ಪೀಠದಲ್ಲಿ ಕುಳಿತದ್ದು, ಸಭಾಪತಿಯವರು ಸದನಕ್ಕೆ ಹಾಜರಾಗಲು ಬರುವ ಹಾದಿಯನ್ನು ಕಾನೂನು ಬಾಹಿರವಾಗಿ ಮುಚ್ಚಿದ್ದು ಮತ್ತು ಕಡೆಗೆ ಉಪಸಭಾಪತಿಯವರನ್ನು ಬಲವಂತವಾಗಿ ಪೀಠದಿಂದ ಎಳೆದಾಡಿದ್ದು. ಈ ಎಲ್ಲ ಕಾಣಬಾರದ ದೃಶ್ಯಗಳನ್ನು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ರಾಜ್ಯದ ಜನತೆ ಕಂಡಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಅಂದಿನ ಉಪಸಭಾಪತಿಯವರು (ಎಸ್.ಎಲ್. ಧರ್ಮೇಗೌಡ) ಅಕಾಲಿಕವಾಗಿ ಮೃತಪಟ್ಟ ಘಟನೆಯೂ ನಡೆದಿತ್ತು.
ಈ ಘಟನೆಯ ಬಗ್ಗೆ 04-01-2021ರಂದು ಅಂದಿನ ಸಭಾಪತಿಗಳು ಶಾಸಕ ಮರಿತಿಬ್ಬೇಗೌಡ ಅವರ ಅಧ್ಯಕ್ಷತೆಯಲ್ಲಿ ಸದನ ಸಮಿತಿಯೊಂದನ್ನು ರಚಿಸಿದ್ದರು. ಈ ಸಮಿತಿಯು 22-01-2021ರಂದು ತನ್ನ ಮಧ್ಯಂತರ ವರದಿಯನ್ನು ಸಭಾಪತಿಗಳಿಗೆ ಸಲ್ಲಿಸಿತ್ತು. ಅದೀಗ ಸದನದ ದಾಖಲೆಯೂ ಹೌದು. ಈ ಸದನ ಸಮಿತಿಯು ಹೊಸ ಸಭಾಪತಿಗಳ (ತಮ್ಮ) ಆಯ್ಕೆ ಆದ ಬಳಿಕ ಮತ್ತೆ ಸಭೆಸೇರಿತೇ? ವಿಚಾರಣೆ ಪೂರ್ಣಗೊಳಿಸಿತೇ? ಅಂತಿಮ ವರದಿ ಸಲ್ಲಿಸಿತೇ? ಈ ಘಟನೆಯಲ್ಲಿ ಸದನದ ಸದಸ್ಯರಾಗಿ ತಮ್ಮ ಪಾತ್ರ ಏನಿತ್ತು? ಕರ್ನಾಟಕ ವಿಧಾನಮಂಡಲಕ್ಕೆ ಕಪ್ಪುಚುಕ್ಕಿ ಆಗಿರುವ ಈ ಘಟನೆಯ ಕುರಿತು ಸಾಂವಿಧಾನಿಕ ಅಧಿಕಾರಿಯಾಗಿ ಸಂವಿಧಾನದ ಮಹತ್ತಿಕೆಯನ್ನು ಎತ್ತಿ ಹಿಡಿಯಬೇಕಾದ ಸಭಾಪತಿಗಳು ಏನೆಲ್ಲ ಶಿಸ್ತುಕ್ರಮಗಳನ್ನು ಕೈಗೊಂಡಿದ್ದಾರೆ? ಈ ಘಟನೆ ತಾರ್ಕಿಕ ಅಂತ್ಯಕ್ಕೆ ತಲುಪಲು ಇನ್ನು ಎಷ್ಟು ಸಮಯ ಬೇಕು?
ಇಂತಹ ಕ್ರಿಮಿನಲ್ ಘಟನೆಗಳು ಸಂಭವಿಸಿದಾಗ, ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವುದು, ಸದನದ ಮಟ್ಟಿಗೆ ಶಕ್ತ ಅಧಿಕಾರಿ ಆಗಿರುವ ಸಭಾಪತಿಯವರಿಗೆ ಸಾಧ್ಯವಾಗಿದ್ದರೆ, ಕಳೆದ ವಾರ ಸದನದಲ್ಲಿ ಅಂತಹದೇ ಹೀನ ಕೃತ್ಯವೊಂದನ್ನು ಮತ್ತೊಮ್ಮೆ ಕಾಣುವ ಸನ್ನಿವೇಶ ಎದುರಾಗುತ್ತಿತ್ತೇ?
ಆಯಕಟ್ಟಿನ ಜಾಗಗಳಲ್ಲಿ, ಸಾಂವಿಧಾನಿಕ ಅಧಿಕಾರಿಗಳ ಈ ರೀತಿಯ ಮೌನ ಸ್ವೀಕಾರಾರ್ಹ ಅಲ್ಲ. ಸಂವಿಧಾನದ ಚೌಕಟ್ಟಿನೊಳಗೆ ವ್ಯವಹರಿಸು ವಾಗ, ಈ ರೀತಿಯ ಸಡಿಲು ಸರಿಯೇ? ಇಂತಹ ಸಡಿಲಿನ ಪೂರ್ವೋದಾಹರಣೆಗಳು ಸಾಕಷ್ಟಿರುವಾಗ, ಕಳೆದ ವಾರದ ಘಟನೆಯಲ್ಲಿ ನ್ಯಾಯ ಸಿಗಬಹುದೆಂದು ಜನಸಾಮಾನ್ಯರು ಸಾಂವಿಧಾನಿಕ ಪೀಠಗಳ ಮೇಲೆ ಭರವಸೆ ಇರಿಸಿಕೊಳ್ಳುವುದಾದರೂ ಹೇಗೆ?!