ತಳಪಾಯವೇ ಇಲ್ಲದ ‘ಪ್ಲಾಟ್‌ಫಾರಂ’ ಇದು
ಮೊದಲು ನೀರಿಗೆ ಧುಮುಕುವುದು ಮತ್ತು ಆ ಬಳಿಕ, ಈಜು ಕಲಿಯುವುದು ಹೇಗೆಂದು ಯೋಚಿಸುವುದು ಹಾಲೀ ಭಾರತ ಸರಕಾರದ ಹಾಲ್‌ಮಾರ್ಕ್ ಆಗಿಬಿಟ್ಟಿದೆ. ಕೃತಕ ಬುದ್ಧಿಮತ್ತೆ (ಎಐ) ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಅದರ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆದಿದೆ. ಖಾಸಗಿತನದ ಬಗ್ಗೆ ಬಲವಾದ ಕಾನೂನುಗಳನ್ನು ಹೊಂದಿರುವ ಅಮೆರಿಕ, ಯುರೋಪುಗಳು ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ. ಆದರೆ ಭಾರತ ಏಕಾಏಕಿ ನೀರಿಗೆ ಧುಮುಕಿಬಿಟ್ಟಿದೆ.
ಕಳೆದ ವಾರ (ಜುಲೈ 3) ದಿಲ್ಲಿಯಲ್ಲಿ ಗ್ಲೋಬಲ್ ಇಂಡಿಯಾ ಎಐ ಸಮಿಟ್-2024ನಲ್ಲಿ ಮಾತನಾಡಿದ ಭಾರತದ ಮಾಹಿತಿ ತಂತ್ರಜ್ಞಾನ ಇಲಾಖೆಯ ನೂತನ ಸಚಿವ ಅಶ್ವಿನಿ ವೈಷ್ಣವ್ ಅವರು, ಸಾರ್ವಜನಿಕ ಎಐ ಪ್ಲಾಟ್‌ಫಾರ್ಮ್ ಒಂದನ್ನು ಸರಕಾರ ಸ್ಥಾಪಿಸಲಿದೆ ಎಂದು ಪ್ರಕಟಿಸಿದರು. ಈ ಮಹತ್ವದ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆಯಲಿಲ್ಲ. ಭಾರತ ಎದುರಿಸುತ್ತಿರುವ ಆರ್ಥಿಕ, ಸಾಮಾಜಿಕ ಸವಾಲುಗಳನ್ನು ನಿಭಾಯಿಸಲು ಎಐ ಬಳಕೆ ಮಾಡುವುದಕ್ಕಾಗಿ, ಈ ಪ್ಲಾಟ್‌ಫಾರಂ ಮೂಲಕ ಕಂಪ್ಯೂಟಿಂಗ್ ಪವರ್, ಉನ್ನತ ಗುಣಮಟ್ಟದ ಡೇಟಾಸೆಟ್‌ಗಳನ್ನು ಮತ್ತು ಎಲ್ಲರಿಗೆ ಸಮಾನವಾದ ತಂತ್ರಜ್ಞಾನ-ಲೀಗಲ್ ಚೌಕಟ್ಟನ್ನು ಒದಗಿಸಲಾಗುವುದು. ಸ್ಟಾರ್ಟಪ್‌ಗಳು, ಉದ್ಯಮಿಗಳು ಮತ್ತು ಸಂಶೋಧಕರಿಗೆ ಇದು ಅನುಕೂಲ ಮಾಡಿಕೊಡಲಿದೆ ಎಂಬುದು ಅವರ ಅಭಿಪ್ರಾಯವಾಗಿತ್ತು.
ಎಐ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂಬುದರಲ್ಲಿ ಸಂಶಯ ಇಲ್ಲ. ಆದರೆ, ದೇಶದ ಪ್ರಜೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ಈ ಅವಕಾಶಗಳನ್ನು ಬಳಸಿಕೊಳ್ಳಲು ದೇಶ ಎಷ್ಟು ಸನ್ನದ್ಧವಾಗಿದೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲು ಸಕಾಲ ಇದು. ಎಐ ಸಾಧ್ಯತೆಗಳು, ಅದರ ಅಪಾಯಗಳು ಮತ್ತು ಅದರ ಜವಾಬ್ದಾರಿಯುತ ಬಳಕೆಯ ಬಗ್ಗೆ ಎಚ್ಚೆತ್ತ ಜಿ7 ದೇಶಗಳು 2023ರ ಮೇ ತಿಂಗಳಿನಲ್ಲಿ, ಜಪಾನಿನ ಅಧ್ಯಕ್ಷತೆಯಲ್ಲಿ ಹಿರೋಷಿಮಾದಲ್ಲಿ ಸಭೆ ಸೇರಿ, ಈ ವಿಚಾರದಲ್ಲಿ ಜಗತ್ತಿನ ಎಲ್ಲ ದೇಶಗಳು ಕೈಜೋಡಿಸಿ, ಎಚ್ಚರದಿಂದ ವ್ಯವಹರಿಸಲು ‘ಹಿರೋಷಿಮಾ ಪ್ರಕ್ರಿಯೆ’ ಹೇಳಿಕೆ ಹೊರಡಿಸಿದ್ದವು. ಅದರ ಆಸುಪಾಸಿನಲ್ಲೇ, ಅಂದರೆ 2023ರ ಅಕ್ಟೋಬರ್‌ನಲ್ಲಿ ಅಮೆರಿಕ ಅಧ್ಯಕ್ಷರು ಈ ಕುರಿತು ಎಕ್ಸೆಕ್ಯುಟಿವ್ ಆದೇಶ ಹೊರಡಿಸಿದ್ದರು ಮತ್ತು ಯುರೋಪಿಯನ್ ಯೂನಿಯನ್, 2024ರ ಮೇ ತಿಂಗಳಿನಲ್ಲಿ EU AI Act ಜಾರಿಗೊಳಿಸಿತ್ತು. ಭಾರತವೂ ಹಿಂದುಳಿಯಲಿಲ್ಲ. 2023, ಡಿಸೆಂಬರ್ 12ರಂದು ದಿಲ್ಲಿಯಲ್ಲಿ ನಡೆದ ಗ್ಲೋಬಲ್ ಪಾರ್ಟ್‌ನರ್‌ಷಿಪ್ ಆನ್ ಎಐ (ಜಿಪಿಎಐ) ಸಮಾವೇಶದಲ್ಲಿ ಭಾರತದ ಪ್ರಧಾನಮಂತ್ರಿಗಳು ‘ಇಂಡಿಯಾ ಎಐ ಮಿಷನ್’ ಸ್ಥಾಪನೆಯನ್ನು ಪ್ರಕಟಿಸಿಯೇ ಬಿಟ್ಟರು. ಅಮೆರಿಕ-ಯುರೋಪು ಎಐಗೆ ಸಂಬಂಧಿಸಿದಂತೆ ಮೊದಲು ತಮ್ಮ ಕಾನೂನು ತಳಪಾಯಗಳನ್ನು ಬಲಪಡಿಸಿಕೊಂಡರೆ, ಭಾರತ ತಳಪಾಯ ಇಲ್ಲದೆ, ಮೊದಲಿಗೇ ಎಐ ಮಿಷನ್ ಸ್ಥಾಪಿಸಲು ಹೊರಟಿತು. ಹಿರೋಷಿಮಾ ಪ್ರಕ್ರಿಯೆ ಪ್ರಕಟಗೊಂಡು ಕೇವಲ ಮೂರು ತಿಂಗಳ ಬಳಿಕ ಭಾರತ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಕಾಯ್ದೆ- 2023 (ಡಿಪಿಡಿಪಿ ಆ್ಯಕ್ಟ್) ಅಂಗೀಕರಿಸಿದೆ. ಆದರೆ, ಅದರಲ್ಲಿ ಎಐ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ!
ಎಐ ಮತ್ತು ಮಷೀನ್ ಲರ್ನಿಂಗ್ (ಎಂಎಲ್) ಪ್ರಕ್ರಿಯೆಗಳಲ್ಲಿ ಮೂಲಧಾತುವೇ ಅಗಾಧ ಗಾತ್ರದ ಡೇಟಾ. ಆದರೆ, ಭಾರತದ ಡಿಪಿಡಿಪಿ ಕಾನೂನಿನ ಪೀಠಿಕೆಯಲ್ಲಿ ವ್ಯಕ್ತಿಗಳ ವೈಯಕ್ತಿಕ ಡೇಟಾ ಕಾನೂನುಬದ್ಧ ಉದ್ದೇಶಗಳಿಗೆ ಮಾತ್ರ ಬಳಕೆ ಆಗಬೇಕೆಂಬ ಆಶಯ ವ್ಯಕ್ತವಾಗಿರುವುದು ಬಿಟ್ಟರೆ, ಜವಾಬ್ದಾರಿಯುತ ಡೇಟಾ ನಿರ್ವಹಣೆಯ ಬಗ್ಗೆ ಹೆಚ್ಚೇನೂ ಹೇಳಿಲ್ಲ. ವೈಯಕ್ತಿಕ ಡೇಟಾಗಳ ಎಐ ಬಳಕೆಗೆ ‘ಒಪ್ಪಿಗೆ’ ಪಡೆಯುವ ಪ್ರಕ್ರಿಯೆ, ಸಾರ್ವಜನಿಕವಾಗಿ ಈಗಾಗಲೇ ಲಭ್ಯ ಇರುವ ಡೇಟಾಗಳ ‘ಮುಕ್ತ’ ಬಳಕೆಯಲ್ಲಿ ನಿಯಂತ್ರಣ, ಸರಕಾರದ ಕೈಯಲ್ಲಿರುವ ಡೇಟಾಗಳು ಡಿಪಿಡಿಪಿ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರುವುದರಿಂದ ಉಂಟಾಗಬಹುದಾದ ಪರಿಣಾಮಗಳು ಇವನ್ನೆಲ್ಲ ಕಾಯ್ದೆಯು ಎಐ ದೃಷ್ಟಿಕೋನದಿಂದ ಪರಿಗಣಿಸಿದಂತಿಲ್ಲ.
ಎಐ ಟೂಲ್‌ಗಳಿಗೆ (ಉದಾ: ಚಾಟ್ ಜಿಟಿಪಿ, ಮೆಟಾ ಎಐ) ನಾವು ಕೇಳುವ ಪ್ರಶ್ನೆಗಳ (ಪ್ರಾಂಪ್ಟ್ಸ್) ಖಾಸಗಿತನಕ್ಕೆ ಡಿಪಿಡಿಪಿ ಕಾಯ್ದೆಯಲ್ಲಿ ನಿಯಂತ್ರಣ ಇಲ್ಲ. ಈ ಪ್ರಶ್ನೆಗಳು ಡಿಪಿಡಿಪಿ ಕಾಯ್ದೆಯ 6(1) ವಿಧಿಯ ಸ್ಪಷ್ಟ ಉಲ್ಲಂಘನೆ ಎನ್ನುತ್ತಾರೆ. ಕಾನೂನು ಪರಿಣತರು. ಈ ಕಂಪೆನಿಗಳು, ತಮ್ಮ ಎಐ ಟೂಲ್ ನೀವು ಕೊಟ್ಟ ಮಾಹಿತಿಗಳನ್ನು ನೆನಪಿಟ್ಟುಕೊಳ್ಳುವುದಿಲ್ಲ ಎನ್ನುತ್ತಾವಾದರೂ, ತಾಂತ್ರಿಕವಾಗಿ ‘ಹೀಗೆ ನೆನಪು ಬಿಡುವುದು ಸದ್ಯಕ್ಕೆ ಅಸಾಧ್ಯ’ ಎಂಬುದು ಪರಿಣತರ ನಿಲುವು. ಮೇಲಾಗಿ, ಡಿಪಿಡಿಪಿ ಕಾಯ್ದೆಯ ಅನ್ವಯ ಡೇಟಾ ಒದಗಿಸಿದ ವ್ಯಕ್ತಿಗೆ, ತನ್ನ ಡೇಟಾಕ್ಕೆ ಪ್ರವೇಶದ ಹಕ್ಕು, ತಿದ್ದುಪಡಿಯ ಹಕ್ಕು, ತನ್ನ ದೂರುಗಳನ್ನು ದಾಖಲಿಸುವ ಹಕ್ಕುಗಳೆಲ್ಲ ಇವೆ. ಇವೆಲ್ಲ ಎಐ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಲಿವೆ ಎಂಬುದು ಸದ್ಯಕ್ಕೆ ಸ್ಪಷ್ಟವಿಲ್ಲ. ಮಾಹಿತಿ ಒದಗಿಸುವಾಗ ಈ ಎಐ ಟೂಲ್‌ಗಳು ತಳೆಯಬಹುದಾದ ಪಕ್ಷಪಾತದ ನಿಲುವುಗಳು, ತಪ್ಪು ಮಾಹಿತಿಗಳಿಗೂ ನಿಯಂತ್ರಣ ಇಲ್ಲ.
ಹೀಗೆಂದ ಮಾತ್ರಕ್ಕೆ ಭಾರತ ತಯಾರಿಯೇ ಮಾಡಿಲ್ಲ ಎಂದಲ್ಲ. ಭಾರತದ ತಯಾರಿಗಳು, ಭದ್ರ ತಳಪಾಯದ ಮೇಲೆ ಎಐ ಅವಕಾಶಗಳ ಸೌಧವನ್ನು ಕಟ್ಟುವ ಬದಲು, ಅದರ ಲಾಭದ ಫಲ ಉಣ್ಣಲು ಸಿದ್ಧರಿರುವ ಖಾಸಗಿ ವಾಣಿಜ್ಯೋದ್ಯಮಿಗಳ ಹೆಗಲೇರಲು ಹೊರಟಂತಿದೆ. ನಮ್ಮ ತಯಾರಿಗಳು ಅಡ್ ಹಾಕ್ ಸ್ವರೂಪದವಾಗಿದ್ದು, ಚೀನಾ-ಅಮೆರಿಕ ವಾಣಿಜ್ಯ ಸಂಘರ್ಷದ ಕ್ಷಿಪ್ರ ಲಾಭ ಪಡೆಯಲು ಮುಂದಾಗಿರುವಂತಿದೆ. ಹಾಗಾಗಿ ನೈತಿಕ, ಜವಾಬ್ದಾರಿಯುತ ಹೆಜ್ಜೆಗಳ ಬದಲು ಡೇಟಾ ಪ್ಲಾಟ್‌ಫಾರಂಗಳು, ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಎಐ ಆಪ್ಲಿಕೇಷನ್‌ಗಳತ್ತ ಗಮನ ಹರಿಸಲಾಗುತ್ತಿದೆ ಎಂಬುದು ಇಂಡಸ್ಟ್ರಿ ಪರಿಣತರ ವಿಶ್ಲೇಷಣೆ.
ಭಾರತದ ನೀತಿ ಆಯೋಗ 2018ರಲ್ಲೇ ‘ನ್ಯಾಷನಲ್ ಸ್ಟ್ರಾಟಜಿ ಫಾರ್ ಎಐ’ ಪ್ರಕಟಿಸಿತ್ತು, ಆ ಬಳಿಕ 2021ರ ಫೆಬ್ರವರಿಯಲ್ಲಿ ‘ಪ್ರಿನ್ಸಿಪಲ್ಸ್ ಆಫ್ ರೆಸ್ಪಾನ್ಸಿಬಲ್ ಎಐ’ ಹಾಗೂ ‘ಆಪರೇಷನಲೈಸಿಂಗ್ ಪ್ರಿನ್ಸಿಪಲ್ಸ್ ಆಫ್ ರೆಸ್ಪಾನ್ಸಿಬಲ್ ಎಐ’ ಪ್ರಕಟಿಸಿದೆ. ಆದರೆ, ಈ ಆಶಯಗಳು ಕಾನೂನಿನ ಚೌಕಟ್ಟನ್ನು ಪ್ರವೇಶಿಸಿಲ್ಲ. 2024ರ ಮಾರ್ಚ್ 7ರಂದು ಭಾರತ ಸರಕಾರದ ಸಚಿವ ಸಂಪುಟವು ಇಂಡಿಯಾ ಎಐ ಮಿಷನ್‌ಅನ್ನು ಅನುಮೋದಿಸಿದೆ. ಬ್ಯೂರೊ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಮತ್ತು ತಂತ್ರಜ್ಞಾನ ಸಚಿವಾಲಯಗಳು ಎಐ ಕುರಿತು ಉನ್ನತ ಮಟ್ಟದ ಸಮಿತಿಗಳನ್ನು ರಚಿಸಿವೆ. ಆದರೆ, ತಳಪಾಯ ಸರಿ ಇಲ್ಲದೆ ನಿರ್ಮಿಸಿದ ಸೌಧಗಳು ಯಾವತ್ತೂ ಅಪಾಯಕಾರಿ. ಭಾರತ ಎಐ ಕ್ಷೇತ್ರಕ್ಕೆ ಧುಮುಕುತ್ತಿದೆ ಎಂಬ ಪ್ರಚಾರವೇನೋ ಸರಿ. ಆದರೆ, ನಮ್ಮ ಸಾಮರ್ಥ್ಯ/ದೌರ್ಬಲ್ಯಗಳ ಬಗ್ಗೆಯೂ ನಮಗೆ ಅರಿವಿರಬೇಕು.
ಅಂತರ್‌ರಾಷ್ಟ್ರೀಯವಾಗಿ ಸ್ಪರ್ಧಿಸುವ ಸಾಮರ್ಥ್ಯ, ದೇಶದ ಒಳಗೆ ಸ್ಟಾರ್ಟಪ್‌ಗಳಿಗೆ ಅಗತ್ಯವಿರುವ ಮೂಲಸೌಕರ್ಯ ಎರಡೂ ಇಲ್ಲದೆ, ಕೇವಲ ಮೇಲುಪದರದ ಪ್ರಚಾರ ದೇಶವನ್ನು ಎಲ್ಲಿಗೂ ತಲುಪಿಸುವುದಿಲ್ಲ. ಸರಕಾರ ಕಂಪ್ಯೂಟಿಂಗ್ ಮೂಲಸೌಕರ್ಯಕ್ಕಾಗಿ ಜಪಾನ್ ಮಾದರಿಯಲ್ಲಿ ಸ್ಥಾಪಿಸಿರುವ AI Research Analytics and Knowledge Dissemination Platform (AIRAWAT) ಸಾಮರ್ಥ್ಯ 656ಉPUಗಳಾದರೆ, ಮೆಟಾ, ಮೈಕ್ರೊಸಾಫ್ಟ್ ನಂತಹ ಖಾಸಗಿ ಸಂಸ್ಥೆಗಳೂ 10,000GPUಗಿಂತ ಹೆಚ್ಚಿನ ಸಾಮರ್ಥ್ಯದ ಘಟಕಗಳನ್ನು ಹೊಂದಿವೆಯಂತೆ. ಈಗ ಭಾರತ ಸರಕಾರ ಖಾಸಗಿ ಸಹಭಾಗಿತ್ವದಲ್ಲಿ 25,೦೦೦GPU ಸಾಮರ್ಥ್ಯದ ಕ್ಲಸ್ಟರ್ ಸ್ಥಾಪಿಸುವ ಪ್ರಯತ್ನದಲ್ಲಿದೆ.
ಒಟ್ಟಿನಲ್ಲಿ, ವಿಷಯ ಇಷ್ಟೇ- ನಮ್ಮ ಸಾಮರ್ಥ್ಯ, ದೌರ್ಬಲ್ಯ ಅರಿತು, ‘ಙ2ಏ’ ಬಬಲ್ ಕಾಲದಲ್ಲಿ ಶ್ರಮದಿಂದಲೇ ಐಟಿ ಇಂಡಸ್ಟ್ರಿಯನ್ನು ಜಗತ್ತಿನ ಮುಂಚೂಣಿಗೆ ತಂದದ್ದನ್ನು ನೆನಪು ಮಾಡಿಕೊಳ್ಳಬೇಕು. ಕೈಕೆಸರಾದರೆ ಮಾತ್ರ ಬಾಯಿ ಮೊಸರಾದೀತು ಹೊರತು, ಬಾಯಿ ಬಡಾಯಿ ಉಪಯೋಗದ್ದಲ್ಲ. ತಳಪಾಯವಿಲ್ಲದೇ ಸೌಧಕಟ್ಟಿ ಅವಕಾಶಗಳಿಗಾಗಿ ತಡಕಾಡತೊಡಗಿದರೆ ಪ್ರಯೋಜನವಾಗದು. ಈಗಿನ ಸನ್ನಿವೇಶದಲ್ಲಿ ವಿಳಂಬವಾದರೆ ಅಥವಾ ದಿಕ್ಕು ತಪ್ಪಿದರೆ, ಮಾರುಕಟ್ಟೆ ನಮಗಾಗಿ ಕಾಯುವುದಿಲ್ಲ. ಈ ಕುರಿತು ಎಚ್ಚರ ಅಗತ್ಯ.