ಈ ಬಾರಿಯ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ ವಿಕೆಟ್ ಇಲ್ಲದ ಕ್ರಿಕೆಟ್ ಆಟ!
ಹಣಕಾಸು ಸಚಿವರು ಗುರುವಾರ ಸಂಸತ್ತಿನಲ್ಲಿ ಲೇಖಾನುದಾನವನ್ನು ಮಂಡಿಸಿದರು. ಶುಕ್ರವಾರದಿಂದ ಅದರ ಚರ್ಚೆ ಸದನದಲ್ಲಿ ಆರಂಭಗೊಂಡಿದೆ. ಬಜೆಟ್ ಎಂದರೆ, ಸಂವಿಧಾನದ ಸೆಕ್ಷನ್ 112ರ ಅಡಿಯಲ್ಲಿ ಸರಕಾರದ ವಾರ್ಷಿಕ ಅಂದಾಜು ಜಮೆ ಮತ್ತು ವೆಚ್ಚಗಳ ವಿವರಣೆಯನ್ನು ಮಂಡಿಸುವುದು ಮತ್ತು ಸೆಕ್ಷನ್ 113, 114ರ ಅಡಿಯಲ್ಲಿ ಅದನ್ನು ಚರ್ಚಿಸಿ ಅದಕ್ಕೆ ಸಂಸತ್ತಿನ ಅನುಮತಿ ಪಡೆಯುವುದು. ಒಂದು ವೇಳೆ ಯಾವುದಾದರೂ ಕಾರಣಕ್ಕೆ (ಉದಾ: ಚುನಾವಣೆ ಸಮೀಪದಲ್ಲಿರುವುದು) ಸೆಕ್ಷನ್ 113, 114ರ ಅಡಿಯಲ್ಲಿ ಪ್ರಕ್ರಿಯೆಗಳು ನಡೆಯುವುದು ಸಾಧ್ಯವಾಗದಿದ್ದಾಗ/ಸರಿಯಲ್ಲ ಎಂದಿದ್ದಾಗ ಸೆಕ್ಷನ್ 116ರ ಅಡಿಯಲ್ಲಿ, ಹಣಕಾಸು ವರ್ಷದ ಯಾವುದೇ ಭಾಗಕ್ಕೆ ಅಂದಾಜು ಮಾಡಲಾದ ವೆಚ್ಚಕ್ಕೆ ಸಂಬಂಧಿಸಿ ಸದನದ ಒಪ್ಪಿಗೆ ಪಡೆಯುವುದನ್ನು ಲೇಖಾನುದಾನ ಎಂದು ಕರೆಯಲಾಗುತ್ತದೆ.
ಸಾಂಪ್ರದಾಯಿಕವಾಗಿ ಬಜೆಟ್ ಮಂಡಿಸುವ ಮುನ್ನ, ಹಿಂದಿನ ವರ್ಷದಲ್ಲಿ ದೇಶದ ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆಯನ್ನು ಹಣಕಾಸು ಇಲಾಖೆಯ ಪರಿಣತರು ಸಿದ್ಧಪಡಿಸಿ, ಅದನ್ನು ಹಣಕಾಸು ಸಚಿವರ ಮೂಲಕ ಸದನದಲ್ಲಿ ಮಂಡಿಸುವುದು ಪದ್ಧತಿ. 1950-51ನೇ ಸಾಲಿನಿಂದ ಜಾರಿಯಲ್ಲಿರುವ ಈ ಸಮೀಕ್ಷೆ ಬಜೆಟ್‌ನ ಭಾಗವೇ ಆಗಿತ್ತು. ಆದರೆ 1964ರಿಂದ ಈಚೆಗೆ ಅದನ್ನು ಬಜೆಟ್‌ಗೆ ಒಂದು ದಿನ ಮುಂಚಿತವಾಗಿ ಮಂಡಿಸಲಾಗುತ್ತದೆ. ಸಂವಿಧಾನದಲ್ಲಿ ಎಲ್ಲೂ ಈ ಸಮೀಕ್ಷೆಯನ್ನು ಮಂಡಿಸಬೇಕೆಂದು ಹೇಳಿಲ್ಲ. ಆದರೆ, ಬಜೆಟ್ ಮೇಲಣ ಚರ್ಚೆಗಳಿಗೆ ಒಂದು ಸಮರ್ಥ ಹಿನ್ನೆಲೆಯನ್ನು ಒದಗಿಸುವ ಕಾರಣಕ್ಕಾಗಿ ಈ ಆರ್ಥಿಕ ಸಮೀಕ್ಷೆಗೆ ಮಹತ್ವ ಇದೆ. ಎರಡು ಭಾಗಗಳಲ್ಲಿ ಇರುವ ಈ ಸಮೀಕ್ಷೆಯು ದೇಶದ ಎಲ್ಲ ಆರ್ಥಿಕ-ನೀತ್ಯಾತ್ಮಕ ಆಗುಹೋಗುಗಳನ್ನು ಅಂಕಿಸಂಖ್ಯೆಗಳ ಸಹಿತವಾಗಿ ಚರ್ಚಿಸುವುದರಿಂದ ಸರಕಾರದ ಯೋಚನೆಗಳ ಒಂದು ಸ್ಥೂಲ ನೋಟ ಸಂಸತ್ತಿಗೆ ಮತ್ತು ಸಾರ್ವಜನಿಕರಿಗೆ ಲಭ್ಯವಾಗುತ್ತದೆ.
ಈ ಹಿಂದೆ ಈ ಆರ್ಥಿಕ ಸಮೀಕ್ಷೆಗಳನ್ನು ಲೇಖಾನುದಾನಗಳ ವೇಳೆ ಮಂಡಿಸಲಾಗಿತ್ತೇ ಎಂಬುದು ಸ್ಪಷ್ಟವಿಲ್ಲ. ಆದರೆ, ಮೊನ್ನೆ ಜನವರಿ 29ರಂದು ಹಾಲಿ ಕೇಂದ್ರ ಸರಕಾರ ಹೊಸದೊಂದು ಹಾದಿ ತುಳಿಯಿತು. ಹಣಕಾಸು ಸಚಿವರು ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸುವ ಬದಲು, ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು, ನೇರವಾಗಿ ಪತ್ರಿಕಾಗೋಷ್ಠಿಯಲ್ಲಿ ಈ ಸಮೀಕ್ಷೆಯ ಕಿರುರೂಪವೊಂದನ್ನು The Indian Economy: A review ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಿದರು. ಕಿರುಪುಸ್ತಕದ ಮುನ್ನುಡಿಯಲ್ಲಿಯೇ ಅವರು, ಇದು ಹಣಕಾಸು ಇಲಾಖೆಯ ಸಾಂಪ್ರದಾಯಿಕ ಆರ್ಥಿಕ ಸಮೀಕ್ಷೆ ಅಲ್ಲ. ಅದು ಚುನಾವಣೆಗಳ ಬಳಿಕ, ಪೂರ್ಣ ಬಜೆಟ್ ಮಂಡನೆಗೆ ಮುನ್ನ ಸದನದಲ್ಲಿ ಬಿಡುಗಡೆಗೊಳ್ಳಲಿದೆ. ಈ ಪುಸ್ತಕವು ಕಳೆದ ಹತ್ತು ವರ್ಷಗಳ ಆರ್ಥಿಕ ಸ್ಥಿತಿಯ ಸ್ಥೂಲ ನೋಟ ಮತ್ತು ಮುಂಬರುವ ದಿನಗಳ ಮುನ್ನೋಟ ಎಂದು ಹೇಳಿಕೊಂಡಿದ್ದಾರೆ.
ಇದನ್ನು ಸಮರ್ಥಿಸಿಕೊಂಡಿರುವ ಮಾಧ್ಯಮಗಳು, ಸರಕಾರವು ಚುನಾವಣೆಗೆ ಮುನ್ನ ಆರ್ಥಿಕ ಸಮೀಕ್ಷೆಯನ್ನು ಬಿಡುಗಡೆ ಮಾಡಿದರೆ, ಅದು ಸರಕಾರದ ಪರವಾಗಿ ಚುನಾವಣೆಗಳ ಮೇಲೆ ಪರಿಣಾಮ ಬೀರಬಹುದು, ಹಾಗಾಗಿ ನೈತಿಕವೆನ್ನಿಸದು ಎಂದು ವರದಿ ಮಾಡಿದ್ದನ್ನು ಗಮನಿಸಿದ ಬಳಿಕ, ಈ ಬೆಳವಣಿಗೆಗಳ ಬಗ್ಗೆ ಸಹಜವಾಗಿಯೇ ಅಂತಹದೇನಿದೆಯಪ್ಪಾ ಎಂಬ ಕುತೂಹಲ ಮೂಡಿತು. ಆ ನೈತಿಕತೆಯ ಮಾತನ್ನು ಆರ್ಥಿಕ ಸಲಹೆಗಾರರೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದರೇ ಗೊತ್ತಿಲ್ಲ.
ಈ ಬಾರಿ ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ ಚುನಾವಣೆ ಮುಗಿದ ಬಳಿಕ ತಮ್ಮದೇ ಪಕ್ಷದ ಸರಕಾರ ಮತ್ತೆ ಆರಿಸಿಬಂದು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ ಎಂದು ಹೇಳಿದ್ದರು. ಹಾಗೆಂದು ಅವರು ಆ ಸಣ್ಣ (ಎಪ್ರಿಲ್‌ನಿಂದ ಜುಲೈ 2024ರ ತನಕ) ಅವಧಿಗೆ ಲೇಖಾನುದಾನ ಮಂಡಿಸಲಿಲ್ಲ. ಅವರ ಲೇಖಾನುದಾನವು ಮುಂದಿನ ಇಡಿಯ ಹಣಕಾಸು ವರ್ಷಕ್ಕೇ ಮಂಡಿತವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ.
ಇನ್ನು ಮೂರು ತಿಂಗಳುಗಳೊಳಗೆ ಚುನಾವಣೆಗಳು ಇರುವುದರಿಂದಾಗಿ, ಆರ್ಥಿಕ ಸಮೀಕ್ಷೆ ಸದನದಲ್ಲಿ ಮಂಡಿತವಾದರೆ, ಸರಕಾರದ ವಿವಿಧ ರಂಗಗಳಲ್ಲಿನ ಸಾಧನೆಗಳ ಬಗ್ಗೆ ಅಂಕಿ-ಅಂಶಗಳು ಬಹಿರಂಗವಾಗಿ ಲಭ್ಯವಾಗುತ್ತವೆ, ಅವು ಪ್ರತಿಪಕ್ಷಗಳಿಗೆ ಸರಕಾರದ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಮಂಡಿಸುವುದಕ್ಕೆ ಬಲವಾದ ಹತ್ಯಾರುಗಳನ್ನು ಒದಗಿಸುತ್ತವೆ. ಬಜೆಟ್ ಮೇಲಿನ ಚರ್ಚೆಯಲ್ಲಿಯೂ ಸರಕಾರದ ನೀತ್ಯಾತ್ಮಕ ನಿಲುವುಗಳನ್ನು ಪ್ರಶ್ನಿಸುವುದಕ್ಕೆ ಪ್ರತಿಪಕ್ಷಗಳಿಗೆ ಅಧಿಕೃತ ಆಧಾರಗಳು ಸಿಗುತ್ತವೆ. ಅಪಾರದರ್ಶಕವಾಗಿ ಕಾರ್ಯಾಚರಿಸುವ ಮತ್ತು ಸದನದಲ್ಲಿ ಚರ್ಚೆಗಳಿಗೆ ಹಿಂಜರಿಯುವ ಹಾಲಿ ಸರಕಾರದ ವಿಚಾರದಲ್ಲಂತೂ ಇದು ಪ್ರತಿಪಕ್ಷಗಳಿಗೆ ಸಹಾಯಕವಾದೀತೆಂಬುದು ಇನ್ನಷ್ಟು ಸತ್ಯ. ಹಾಲಿ ಸರಕಾರದ ಅಪಾರದರ್ಶಕ ವ್ಯವಹಾರಗಳಿಗೆ ಸಣ್ಣ ಉದಾಹರಣೆ ಬೇಕೆಂದಿದ್ದರೆ, 2021ರ ಜನಗಣತಿ ಕಾರಣಾಂತರಗಳಿಂದ ನಡೆಯದಿರುವುದರಿಂದ, ಬೇರೆಲ್ಲ ವಿಚಾರಗಳಲ್ಲಿ ಡಿಜಿಟಲ್ ಆಗಿದ್ದರೂ ಭಾರತ, ಇನ್ನೂ ತನ್ನ ಅಂಕಿಅಂಶಗಳಿಗೆ ಅವಲಂಬಿಸಿರುವುದು 2011ರ ಜನಗಣತಿಯನ್ನು!
ನಿಜಕ್ಕೆಂದರೆ, ಬಜೆಟ್ ಮಂಡಿಸುವುದಕ್ಕೂ ಮತ್ತು ಹಿಂದಿನ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಸ್ಥಿತಿಗತಿಗಳ ಚಿತ್ರಣ ನೀಡುವುದಕ್ಕೂ ಯಾವುದೇ ಸಂಬಂಧ ಇಲ್ಲ. ಹಾಗಾಗಿ, ಸರಕಾರ ಲೇಖಾನುದಾನದ ಹೆಸರಲ್ಲಿ ಇಡೀ ವರ್ಷದ ಆಯ-ವ್ಯಯ ಅಂದಾಜನ್ನೇ ಮಂಡಿಸಿರುವುದರಿಂದ, ಹಿಂದಿನ ವರ್ಷದ ಆರ್ಥಿಕ ಸಮೀಕ್ಷೆಯನ್ನೂ ಸದನದಲ್ಲಿ ಮಂಡಿಸಿದ್ದರೆ, ಅದು ನೈತಿಕವಾದ, ಪಾರದರ್ಶಕವಾದ ಕ್ರಮ ಆಗುತ್ತಿತ್ತು. ಹಾಗೆ ಆಗಿಲ್ಲ. ಇದನ್ನು ಪ್ರಶ್ನಿಸಬೇಕಾಗಿದ್ದ ಮಾಧ್ಯಮಗಳು ಅದರ ಬದಲು, ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿವೆ! ಒಂದು ವೇಳೆ, ಸರಕಾರದ ಪ್ರಚಾರಕ್ಕೆ ಅದು ಸರಕಾಗುತ್ತದೆ ಎಂಬ ನೈತಿಕ ಪ್ರಶ್ನೆ ಎದುರಾದದ್ದೇ ಹೌದಾಗಿದ್ದರೆ, ಆರ್ಥಿಕ ಸಲಹೆಗಾರರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ, ಹತ್ತುವರ್ಷಗಳ ಸರಕಾರದ ಸಾಧನೆಗಳನ್ನು ಮಾತ್ರ ಬಿಂಬಿಸುವ ಕಿರು ಸಮೀಕ್ಷೆ ಪುಸ್ತಕ ಪ್ರಚಾರದ ಸರಕಲ್ಲವೇ? ಅದು ನೈತಿಕ ಅನ್ನಿಸುತ್ತದೆಯೇ? ಎಂಬ ಪ್ರಶ್ನೆಗಳು ಮಾಧ್ಯಮಗಳಿಗೆ ಎದ್ದಂತಿಲ್ಲ.
ಸದ್ರಿ ಸಮೀಕ್ಷೆಯಲ್ಲಿ ಸರಕಾರ ಕಳೆದ ಹತ್ತು ವರ್ಷಗಳಲ್ಲಿ ಕೈಗೊಂಡ ಬ್ಯಾಂಕ್ ಸಬಲೀಕರಣ, ರೆರಾ ಕಾಯ್ದೆ, ಜಿಎಸ್‌ಟಿ, ಖಾಸಗಿ ಪಾಲುದಾರಿಕೆ, ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಎಂಎಸ್‌ಎಂಇ ಸುಧಾರಣೆಗಳು, ಮೂಲಸೌಕರ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಖಾಸಗಿ ಹೂಡಿಕೆ, ಡಿಜಿಟಲ್ ಇಂಡಿಯಾ ಮೊದಲಾದ ಸುಧಾರಣಾ ಕ್ರಮಗಳನ್ನು ವಿವರಿಸಲಾಗಿದೆ. ಭಾರತ ಜಾಗತೀಕರಣ ಗೊಂಡಿರುವುದರಿಂದ ಜಾಗತಿಕ ಅಪಾಯಗಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆ, ಇಂಧನ ಭದ್ರತೆ-ಆರ್ಥಿಕ ಬೆಳವಣಿಗೆಗಳ ನಡುವೆ ಸಂತುಲನ ಕಾಯ್ದುಕೊಳ್ಳುವುದು, AI ಅಪಾಯಗಳು, ಕಾರ್ಮಿಕರಲ್ಲಿ ಕೌಶಲಗಳ ಕೊರತೆ ಭಾರತದ ಆರ್ಥಿಕತೆಗೆ ತಕ್ಷಣ ಎದುರು ಇರುವ ಸವಾಲುಗಳು ಎಂದು ನಾಗೇಶ್ವರನ್ ಗುರುತಿಸಿದ್ದಾರೆ. 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ದೇಶ ಆಗಿರಲಿದೆ ಎಂದು ಅವರು ಷರಾ ಬರೆದಿದ್ದಾರೆ.
ಸರಕಾರದಿಂದ ಹೊರಗೆ ದುರ್ಲಭವಾಗಿರುವ, ಅಧಿಕೃತ ಮೂಲಗಳಿಂದಲೇ ‘ಚೆರಿ ಪಿಕ್’ ಮಾಡಲಾಗಿರುವ ಈ ಸಮೀಕ್ಷೆ ಬೇರಾರಿಗೆ ಅಲ್ಲದಿದ್ದರೂ ಹಾಲಿ ಆಡಳಿತ ಪಕ್ಷಕ್ಕೆ ಸರಕಾರಿ ಬೊಕ್ಕಸದ ಖರ್ಚಿನಲ್ಲಿ ದೊರೆತ ಸುಸಜ್ಜಿತ ಪ್ರಚಾರ ಸಾಮಗ್ರಿಯ ರೂಪದಲ್ಲಿ ಲಾಭ ಮಾಡಿಕೊಡಲಿದೆ. ವಿಕೆಟ್ ಇಲ್ಲದ ಪಿಚ್‌ನಲ್ಲಿ ನಿಂತು ಬ್ಯಾಟಿಂಗ್ ಮಾಡುವುದೆಂದರೆ ಔಟ್ ಆಗುವ ಭಯವೇ ಇರುವುದಿಲ್ಲವಲ್ಲ!