ಅಂತರ್ರಾಷ್ಟ್ರೀಯ ಸಂಬಂಧಗಳ ಕತ್ತಿಯಂಚಿನ ನಡಿಗೆ
Photo: freefik
ನಾಡಿದ್ದು ಸೋಮವಾರ (ಡಿಸೆಂಬರ್ 11) ಅಮೆರಿಕ ಗುಪ್ತಚರ ವಿಭಾಗದ (ಎಫ್ಬಿಐ) ನಿರ್ದೇಶಕ, ಕ್ರಿಸ್ಟೊಫರ್ ಎ. ರಾಯ್ ಅವರು ದಿಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿ ಅವರು ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಮುಖ್ಯಸ್ಥ ದಿನಕರ್ ಗುಪ್ತಾ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ವರದಿಯಾಗಿದೆ.
ಇದೇ ವೇಳೆ, ಸಿಖ್ಸ್ ಫಾರ್ ಜಸ್ಟಿಸ್ (ಎಸ್ಇಜೆ) ಸಂಘಟನೆಯ ಮುಖ್ಯಸ್ಥ ಮತ್ತು ಭಾರತದಲ್ಲಿ 2020ರಿಂದ ಘೋಷಿತ ಭಯೋತ್ಪಾದಕ ಆಗಿರುವ, ಗುರುಪತ್ವಂತ್ ಸಿಂಗ್ ಪನ್ನೂನ್ ಭಾರತದಲ್ಲಿ ಡಿಸೆಂಬರ್ 13ರೊಳಗೆ ಭಯೋತ್ಪಾದಕ ದಾಳಿ ನಡೆಸುವ ಬೆದರಿಕೆ ಒಡ್ಡಿರುವುದು ಕೂಡ ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಎರಡು ವರದಿಗಳ ಹಿನ್ನೆಲೆಯಲ್ಲಿ ಇರುವ ಸಂಗತಿಗಳನ್ನು ಸ್ವಲ್ಪ ವಿವರವಾಗಿ ನೋಡಿ, ಒಟ್ಟು ಚಿತ್ರಣವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಈ ಬರಹದ ಉದ್ದೇಶ.
ಇದೇ ಸೆಪ್ಟಂಬರ್ ತಿಂಗಳಿನಲ್ಲಿ, ಭಾರತದಲ್ಲಿ ನಡೆದ ಜಿ20 ಶೃಂಗಸಭೆಯ ಅವಧಿಯಲ್ಲಿ, ಭಾರತ-ಕೆನಡಾ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ವಿಷಯ ಏನೆಂದರೆ, ಸಿಖ್ ಪ್ರತ್ಯೇಕತಾವಾದಿ ನಾಯಕ ಮತ್ತು ಭಾರತವು ಭಯೋತ್ಪಾದಕ ಎಂದು ಪರಿಗಣಿಸಿರುವ ಹರ್ದೀಪ್ ಸಿಂಗ್ ನಿಜ್ಜಾರ್ ಈ ವರ್ಷ ಜೂನ್ 18ರಂದು ಕೆನಡಾದ ವಾಂಕೂವರ್ನಲ್ಲಿ ಕೊಲೆಯಾಗಿದ್ದು, ಆ ಕೊಲೆಯಲ್ಲಿ ಭಾರತದ ಪಾತ್ರ ಇದೆ ಮತ್ತು ಅದಕ್ಕೆ ಸಾಕ್ಷ್ಯಾಧಾರಗಳಿವೆ ಎಂದು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ನೇರವಾಗಿ ಆಪಾದಿಸಿದ್ದರು. ಇದು ಭಾರತ-ಕೆನಡಾ ನಡುವಣ ಸಂಬಂಧಗಳಲ್ಲಿ ಗಂಭೀರ ಸ್ವರೂಪದ ಬಿರುಕಿಗೆ ಕಾರಣವಾಗಿದ್ದು, ಈ ಗಾಯ ಇನ್ನೂ ಶಮನಗೊಂಡಿಲ್ಲ.
ಅದರ ಬೆನ್ನಿಗೇ ನವೆಂಬರ್ 22ರಂದು, ಬ್ರಿಟಿಷ್ ಪತ್ರಿಕೆ ಫೈನಾನ್ಷಿಯಲ್ ಟೈಮ್ಸ್ ತನ್ನ ವರದಿಯಲ್ಲಿ (https://www.ft.com/content/56f7d6d6-6a93-4172-a49e-d8a91991e29d), ಮತ್ತೊಬ್ಬ ಕೆನಡಾ-ಅಮೆರಿಕ ನಿವಾಸಿ ಸಿಖ್ ಪ್ರತ್ಯೇಕತಾವಾದಿ ಮತ್ತು ಭಾರತದಲ್ಲಿ ಘೋಷಿತ ಭಯೋತ್ಪಾದಕ ಪನ್ನೂನ್ ಕೊಲೆ ಯತ್ನ ಅಮೆರಿಕದಲ್ಲಿ ವಿಫಲಗೊಂಡಿದ್ದು, ಇದರಲ್ಲಿ ಭಾರತದ ಗುಪ್ತಚರ ಅಧಿಕಾರಿಗಳ ಕೈವಾಡ ಇರಬಹುದೆಂದು ಹೇಳಿತ್ತು. ಈ ವಿಚಾರವು ಜಿ20 ಶೃಂಗಸಭೆಯ ವೇಳೆಯಲ್ಲೇ ಭಾರತದ ಪ್ರಧಾನಿ-ಅಮೆರಿಕ ಅಧ್ಯಕ್ಷರ ನಡುವೆ ಚರ್ಚೆಯಾಗಿತ್ತು ಎಂದು ಕೂಡ ವರದಿ ಹೇಳಿತ್ತು.
ಈ ಎರಡು ಪ್ರಕರಣಗಳ ನಡುವೆ ಸಾಮ್ಯತೆ ಇರುವ ಹಿನ್ನೆಲೆಯಲ್ಲಿ, ಇವು ಭಾರತದ ಅಂತರ್ರಾಷ್ಟ್ರೀಯ ಸಂಬಂಧಗಳ ಬಗ್ಗೆ ಯಾವ ರೀತಿಯ ಪರಿಣಾಮ ಬೀರಬಹುದೆಂಬ ಕುತೂಹಲ ಸಹಜ. ಕೆನಡಾದ ಪ್ರಕರಣದಲ್ಲಿ, ಅಲ್ಲಿನ ಪ್ರಧಾನಮಂತ್ರಿ ಸನ್ನಿವೇಶವನ್ನು ಸ್ವಲ್ಪ ಒರಟಾಗಿಯೇ ನಿಭಾಯಿಸಿದ ಕಾರಣಕ್ಕಾಗಿ (ಅವರು ಸಾಕ್ಷ್ಯಾಧಾರಗಳಿವೆ ಎಂದು ಹೇಳಿದಾಗ, ಅಮೆರಿಕದ ಘಟನೆ ಅವರ ಗಮನಕ್ಕೆ ಅದಾಗಲೇ ಬಂದಿತ್ತು!) ಎರಡು ದೇಶಗಳ ನಡುವಿನ ಸಂಬಂಧ ಹದಗೆಟ್ಟ್ಟಿದೆ ಮತ್ತು ಅದು ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಆದರೆ ಅಮೆರಿಕ ತನ್ನಲ್ಲಿ ನಡೆದಿದೆ ಎನ್ನಲಾದ ಪ್ರಕರಣವನ್ನು ಸೂಕ್ಷ್ಮವಾಗಿಯೇ ನಿಭಾಯಿಸುತ್ತಿದೆ ಎಂಬುದಕ್ಕೆ ಹಲವು ಸೂಚನೆಗಳು ಸಿಗುತ್ತವೆ.
ಈ ವರ್ಷ ಜೂನ್ 21-23ರ ನಡುವೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಿದ್ದಲ್ಲದೆ ಅಲ್ಲಿನ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಭಾಷಣ ನೀಡುವ ಅವಕಾಶ ಪಡೆದಿದ್ದರು. ಆ ಹೊತ್ತಿಗಾಗಲೇ ಪನ್ನೂನ್ ಕೊಲೆಯತ್ನ ಅಮೆರಿಕದ ಗಮನಕ್ಕೆ ಬಂದಿದ್ದರೂ, ಪ್ರಧಾನಿ ಮೋದಿ ಅವರು ಅಲ್ಲಿಂದ ಹಿಂದಿರುಗುವ ತನಕ ಕಾದು, ಆ ಬಳಿಕ, ಅಂದರೆ ಜೂನ್ 23ರಂದು ಅಮೆರಿಕದ ಅಧಿಕಾರಿಗಳು ಜೆಕ್ ಗಣರಾಜ್ಯದ ಪ್ರಾಗ್ ನಗರದಲ್ಲಿ ನಿಖಿಲ್ ಗುಪ್ತಾ ಎಂಬ ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ಜೆಕ್ ಅಧಿಕಾರಿಗಳ ಸಹಯೋಗದಲ್ಲಿ ಬಂಧಿಸುತ್ತಾರೆ. ಅಕ್ಟೋಬರ್ ತನಕವೂ ಆತನ ವಿಚಾರಣೆಯನ್ನು ಪ್ರಾಗ್ನಲ್ಲೇ ನಡೆಸುವ ಅಮೆರಿಕದ ಅಧಿಕಾರಿಗಳು, ಆ ಬಳಿಕ ಆತನನ್ನು ತಮ್ಮ ಸ್ವಾಧೀನಕ್ಕೆ ಪಡೆಯುತ್ತಾರೆ. ಗುಪ್ತಾ ಮೇಲೆ ಇರುವ ಆಪಾದನೆ ಎಂದರೆ, ಆತ ಪನ್ನೂನ್ ಕೊಲೆ ಮಾಡುವುದಕ್ಕಾಗಿ ಹಂತಕನಿಗೆ ಒಂದು ಲಕ್ಷ ಡಾಲರ್ ಸುಪಾರಿ ನೀಡುವುದೆಂದು ನಿಗದಿಪಡಿಸಿಕೊಂಡಿದ್ದು, 15,000 ಡಾಲರ್ ಮುಂಗಡವನ್ನು ಆ ಕೊಲೆಗಡುಕನಿಗೆ ನೀಡಿದ್ದಾನೆ ಎಂಬುದು. ಗುಪ್ತಾನ ದುರದೃಷ್ಟ ಎಂದರೆ, ಹಂತಕನ ಸೋಗಿನಲ್ಲಿ ಆ ಸುಪಾರಿ ಪಡೆದ ವ್ಯಕ್ತಿ, ಅಮೆರಿಕದ ಮಾದಕದ್ರವ್ಯ ನಿರೋಧಕ ಗುಪ್ತಚರ ಘಟಕದ (ಡಿಇಎ) ಅಧಿಕಾರಿಯಾಗಿದ್ದರು! ಗುಪ್ತಾನ ತನಿಖೆಯ ವೇಳೆ, ಆತನಿಗೆ ಈ ಕೃತ್ಯ ಎಸಗಲು ಭಾರತದ ಗುಪ್ತಚರ ಅಧಿಕಾರಿಯೊಬ್ಬರ ಕುಮ್ಮಕ್ಕು ಇತ್ತು ಎಂಬುದು ಬಹಿರಂಗಗೊಂಡಿರುವುದಾಗಿ ಅಮೆರಿಕ ಅಧಿಕಾರಿಗಳು ಹೇಳುತ್ತಿದ್ದಾರೆ!! ಆ ಅಧಿಕಾರಿಯನ್ನು ಅವರು ಅವರ ದಾಖಲೆಗಳಲ್ಲಿ ಸಿಸಿ-1 ಎಂದು ಗುರುತಿಸಿದ್ದಾರೆ.
ಈ ವಿಚಾರವನ್ನು ಅಮೆರಿಕದ ಉನ್ನತ ಗುಪ್ತಚರ ಅಧಿಕಾರಿಗಳು ಅಕ್ಟೋಬರ್ನಲ್ಲೇ ಭಾರತದ ಗಮನಕ್ಕೆ ತಂದಿದ್ದಾರೆ. ಭಾರತ ಕೂಡ ನವೆಂಬರ್ 18ರಂದೇ ಈ ವಿಚಾರದ ಕೂಲಂಕಷ ತನಿಖೆಯನ್ನು ಉನ್ನತ ಮಟ್ಟದಲ್ಲಿ ಆರಂಭಿಸಿದೆ. ಇದೆಲ್ಲ ಆಗಿ 11 ದಿನಗಳ ಬಳಿಕ, ಈ ಪ್ರಕರಣ ಮೊದಲ ಬಾರಿಗೆ ಮಾಧ್ಯಮಗಳಲ್ಲಿ ವರದಿಯಾಗಿ, ಸಾರ್ವಜನಿಕರ ಗಮನಕ್ಕೆ ಬಂದಿದೆ. ಈ ಪ್ರಕರಣ ಇನ್ನು ಮುಂದೆ ಯಾವ ಹಾದಿ ಹಿಡಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಆದರೆ ಅಮೆರಿಕ ಈ ವಿಚಾರವನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಿದೆ ಎಂಬುದು ಎರಡು ರಾಷ್ಟ್ರಗಳ ಸಂಬಂಧದ ಬಗ್ಗೆ ಬಹಳಷ್ಟು ಹೊಳಹುಗಳನ್ನು ಕೊಡುತ್ತದೆ. ಚೀನಾಕ್ಕೆ ಪರ್ಯಾಯವಾಗಿ ಭಾರತವನ್ನು ಪರಿಗಣಿಸುತ್ತಿರುವ ಅಮೆರಿಕ ಸರಕಾರ ಈಗಾಗಲೇ ರಕ್ಷಣೆ-ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಭಾರತದೊಂದಿಗೆ ದೊಡ್ಡ ಪ್ರಮಾಣದ ಸಹಯೋಗ ಹೊಂದಿದೆ. ಭಾರತಕ್ಕೆ ಅಮೆರಿಕ ಅತಿದೊಡ್ಡ ಎಫ್ಡಿಐ ಹೂಡಿಕೆದಾರ ದೇಶ ಕೂಡ ಹೌದು. ಅದೇ ರೀತಿ, ಭಾರತ ಕೂಡ ಅಮೆರಿಕಕ್ಕೆ ಸಸ್ತಾ ದರದಲ್ಲಿ ಐಟಿ ಕಾರ್ಮಿಕರನ್ನು ಒದಗಿಸುತ್ತಿದೆ. ಭಾರತವನ್ನು ತನ್ನ ಪ್ರಮುಖ ಸಪ್ಲೈ ಚೈನ್ ಪಾಲುದಾರ ದೇಶವನ್ನಾಗಿ ಮಾಡಿಕೊಳ್ಳುವ ಇರಾದೆ ಅಮೆರಿಕಕ್ಕೆ ಇರುವಂತಿದೆ. ಭಾರತ-ಅಮೆರಿಕ ಇಬ್ಬರಿಗೂ ಈ ಅನ್ಯೋನ್ಯ ಸಂಬಂಧ ಅನಿವಾರ್ಯ.
ಕಳೆದ ವಾರ, ‘ವಾಶಿಂಗ್ಟನ್ ಪೋಸ್ಟ್’ ತನ್ನ ಸಂಪಾದಕೀಯದಲ್ಲಿ, (https://www.washingtonpost.com/opinions/2023/12/01/modi-india-murder-plot-against-american/) ಈ ಎಲ್ಲ ವಿಚಾರಗಳನ್ನು ನೆನಪಿಸುತ್ತಲೇ, ಪ್ರಧಾನಿ ಮೋದಿಯವರು ಈ ಪ್ರಕರಣದಲ್ಲಿ ತನ್ನದೇ ಸರಕಾರದ ಉತ್ತರದಾಯಿತ್ವವನ್ನು ಪ್ರದರ್ಶಿಸಿ, ತಪ್ಪಿತಸ್ಥರನ್ನು ಕಾನೂನಿನ ಕುಣಿಕೆಯೊಳಗೆ ತರಬೇಕು ಎಂದು ಆಗ್ರಹಿಸಿದೆ. ಭಾರತವು ಜವಾಬ್ದಾರಿಯುತ ಪ್ರಜಾಪ್ರಭುತ್ವವಾಗಬೇಕೇ ಹೊರತು ‘ಅಥಾರಿಟೇರಿಯನ್’ ದೇಶವಾಗುವತ್ತ ಹೆಜ್ಜೆ ಹಾಕಬಾರದೆಂದು ಎಚ್ಚರಿಸಿದೆ.
ಇಂತಹ ಸೂಕ್ಷ್ಮ ಪ್ರಕರಣಗಳನ್ನು ಹಾದಿಬೀದಿಗಳಲ್ಲಿ ಎಗ್ಗಿಲ್ಲದೆ ಸಮರ್ಥಿಸುತ್ತಾ, ‘‘ಗುಸ್ಕೇ ಮಾರೇಂಗೆ’’ ಎಂದು ಸೋಷಿಯಲ್ ಮೀಡಿಯಾದಲ್ಲಿ ಚೀರುವ ಪ್ರಭುತ್ವದ ಸಮರ್ಥಕ ಟ್ರೋಲ್ಗಳು, ಇಂತಹ ಪ್ರಕರಣಗಳಲ್ಲಿರುವ ಅಂತರ್ರಾಷ್ಟ್ರೀಯ ಸಂಬಂಧದ ಮಗ್ಗುಲನ್ನು ಗಮನಕ್ಕೆ ತೆಗೆದುಕೊಂಡು ಜವಾಬ್ದಾರಿಯುತವಾಗಿ ವರ್ತಿಸದಿದ್ದರೆ, ಅದರ ಪರಿಣಾಮವು ದೇಶದ ಅಂತರ್ರಾಷ್ತ್ರೀಯ ಸಂಬಂಧಗಳ ಮೇಲೆ ಆಗಬಹುದೆಂಬ ಎಚ್ಚರ ಅಗತ್ಯವಿದೆ.