ಅದೇಕೆ ಬಲಾತ್ಕಾರ ಮತ್ತು ಇದೇಕೆ ಚಮತ್ಕಾರ?
ಉಪಗ್ರಹ ಆಧರಿಸಿ ಇಂಟರ್ನೆಟ್ ಸಂಪರ್ಕ ಒದಗಿಸುವ ‘ಸ್ಯಾಟ್‌ಕಾಂ’ ವ್ಯವಹಾರಕ್ಕೆ ಸ್ಪೆಕ್ಟ್ರಂ ಹಂಚಿಕೆ ಹೇಗೆ ನಡೆಯಬೇಕೆಂಬ ಬಗ್ಗೆ ಗೊಂದಲ ಆರಂಭಗೊಂಡಿದೆ. ಭಾರತದ ‘ಆನಿ’ಗಳ ಮೇಲೆ ಜಾಗತಿಕ ಮಹಾತಿಮಿಂಗಿಲಗಳು ಮುಗಿಬಿದ್ದಿರುವ ಹಿನ್ನೆಲೆಯಲ್ಲಿ ಈ ಗದ್ದಲ ರೋಚಕಗೊಳ್ಳತೊಡಗಿದೆ. ಪ್ರತೀ 4-5 ವರ್ಷಗಳಿಗೊಮ್ಮೆ ತಂತ್ರಜ್ಞಾನವೇ ಬದಲಾಗುವಷ್ಟು ವೇಗದಲ್ಲಿರುವ ಟೆಲಿಕಾಂ ರಂಗದಲ್ಲಿ ಭಾರತ ಸರಕಾರ ಈಗ ತಳೆದಿರುವ ನಿಲುವು ಮತ್ತು 15 ವರ್ಷಗಳ ಹಿಂದೆ ಯುಪಿಎ-2 ಸರಕಾರ ತಳೆದಿದ್ದ ನಿಲುವುಗಳನ್ನು ಹೋಲಿಸಿ ನೋಡಿದರೆ, ಅವರು ಮಾಡಿದರೆ ಬಲಾತ್ಕಾರ; ಇವರು ಮಾಡಿದರೆ ಚಮತ್ಕಾರ ಆಗುವುದು ಹೇಗೆ? ಎಂಬ ಪ್ರಶ್ನೆ ಮೂಡದಿರದು.
ಹದಿನೈದು ದಿನಗಳ ಹಿಂದೆ ಭಾರತದ ಟೆಲಿಕಾಂ ದೊರೆಗಳೆನ್ನಿಸಿ ಕೊಂಡಿರುವ ಮುಕೇಶ್ ಅಂಬಾನಿ (ಜಿಯೋ) ಹಾಗೂ ಸುನಿಲ್ ಮಿತ್ತಲ್ (ಏರ್‌ಟೆಲ್) ಸ್ಯಾಟ್‌ಕಾಂ ಸ್ಪೆಕ್ಟ್ರಂ ವಿತರಣೆಯನ್ನು ಹರಾಜಿನ ಮೂಲಕವೇ ನಡೆಸಬೇಕೆಂದು ಭಾರತ ಸರಕಾರವನ್ನು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಹಾಲಿ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ನೆಲದ ಕಾನೂನಿನ ಪ್ರಕಾರ ಸ್ಯಾಟ್‌ಕಾಂ ಸ್ಪೆಕ್ಟ್ರಂ ಅನ್ನು ಆಡಳಿತಾತ್ಮಕವಾಗಿಯೇ ದರನಿಗದಿ ಮಾಡಿ ಹಂಚಬೇಕಾಗುತ್ತದೆ ಎಂದು ಹೇಳುವ ಮೂಲಕ, ಅಂಬಾನಿ-ಮಿತ್ತಲ್ ಕೋರಿಕೆಯನ್ನು ತಳ್ಳಿಹಾಕಿದ್ದರು.
ಇಷ್ಟೇ ಆಗಿದ್ದರೆ, ಅದರಲ್ಲೇನೂ ಸುದ್ದಿ ಇರುತ್ತಿರಲಿಲ್ಲ. ಸಿಂಧಿಯಾ ಅವರ ಹೇಳಿಕೆಯನ್ನು ಸ್ಟಾರ್‌ಲಿಂಕ್ ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್ ಸರ್ವೀಸಸ್‌ನ ಮಾಲಕ ಹಾಗೂ ಹಾಲಿ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಗೆಣೆಕಾರ ಆಗಿರುವ ‘ಡ್ಯಾಷಿಂಗ್ ಉದ್ಯಮಿ’ ಎಲಾನ್ ಮಸ್ಕ್ ಮತ್ತು Kuiper ಎಂಬ ಸ್ಯಾಟ್‌ಕಾಂ ಸಂಸ್ಥೆಯ ಮಾಲಕತ್ವ ಹೊಂದಿರುವ ಅಮೆಝಾನ್ ಕಂಪೆನಿಯ ಮುಖ್ಯಸ್ಥ ಜೆಫ್ ಬೆಜೋ ಸ್ವಾಗತಿಸಿದ್ದಾರೆ. ಈ ಮೂಲಕ, ಸ್ಪೆಕ್ಟ್ರಂ ಹಂಚಿಕೆ ಜಟಾಪಟಿಯ ಮೊದಲ ಸುತ್ತಿನಲ್ಲಿ ಮಸ್ಕ್/ಬೆಜೋ ಜೋಡಿ ಜಯ ಗಳಿಸಿದಂತಾಗಿದೆ.
ಈ ಬೆಳವಣಿಗೆಗಳಿಗೆಲ್ಲ ಒಂದು ಹಿನ್ನೆಲೆ ಇದೆ.
2023ರ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಭೇಟಿ ನೀಡಿದಾಗ, ಬೇರೆ ‘ಬಿಗ್ ಟಿಕೆಟ್’ ಭೇಟಿಗಳ ಜೊತೆಗೆ, ಜೆಫ್ ಬೆಜೋ ಮತ್ತು ಎಲಾನ್ ಮಸ್ಕ್ ಇಬ್ಬರನ್ನೂ ಭೇಟಿ ಮಾಡಿದ್ದರು. ಅವರಿಬ್ಬರೂ ಈ ಭೇಟಿಗೆ ಮುನ್ನವೇ, 95 ಕೋಟಿಗೂ ಮಿಕ್ಕಿ ಇಂಟರ್ನೆಟ್ ಬಳಕೆದಾರರಿರುವ ಭಾರತದಲ್ಲಿ ಸ್ಯಾಟ್‌ಕಾಂ ಮಾರುಕಟ್ಟೆ ಪ್ರವೇಶಿಸಲು ತಮಗಿರುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. ಪ್ರಧಾನಮಂತ್ರಿ ಮೋದಿಯವರು ಅಮೆರಿಕದಿಂದ ಹಿಂದಿರುಗುತ್ತಲೇ, ಭಾರತ ಸರಕಾರವು ಈ ವಿದೇಶೀ ಕಂಪೆನಿಗಳಿಗೆ ಅನುಕೂಲ ಆಗುವಂತೆ ಭಾರತದ ಟೆಲಿಕಾಂ ಕಾಯ್ದೆಯನ್ನು ತಿದ್ದುಪಡಿ ಮಾಡಿತು. ಈ ಮಹತ್ವದ ಮಸೂದೆ ಅದೆಷ್ಟು ಬೇಗ ಜಾರಿಗೆ ಬಂತೆಂದರೆ, 2023ರ ಡಿಸೆಂಬರ್ 18ರಂದು ಲೋಕಸಭೆಯಲ್ಲಿ ಮಂಡನೆ ಆದ ಮಸೂದೆ, ಹೆಚ್ಚೇನೂ ಚರ್ಚೆ ಇಲ್ಲದೆ, ಡಿಸೆಂಬರ್ 20ಕ್ಕೆ ಲೋಕಸಭೆ ಹಾಗೂ 21ಕ್ಕೆ ರಾಜ್ಯಸಭೆಯ ಅಂಗೀಕಾರ ಪಡೆದು, 24ಕ್ಕೆ ರಾಷ್ಟ್ರಪತಿಗಳ ಅಂಕಿತವನ್ನೂ ಗಳಿಸಿಕೊಂಡಿತು!
ಈ ಹೊಸ ಕಾಯ್ದೆಯ ಅಡಿಯಲ್ಲಿ, ಸ್ಯಾಟ್‌ಕಾಂ ಸೇವೆಗಳು ಸೇರಿದಂತೆ ಕೆಲವು ಸೇವೆಗಳನ್ನು ಹರಾಜಿನ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ. ಅಂತರ್‌ರಾಷ್ಟ್ರೀಯ ಒಪ್ಪಂದದ ದರ್ಜೆ ಹೊಂದಿರುವ ತೀರ್ಮಾನಗಳನ್ನು ಮಾಡುವ ಇಂಟರ್‌ನ್ಯಾಷನಲ್ ಟೆಲಿಕಮ್ಯುನಿಕೇಷನ್ಸ್ ಯೂನಿಯನ್ (ಐಟಿಯು)ಗೆ ಸದಸ್ಯ ರಾಷ್ಟ್ರವಾಗಿರುವ ಭಾರತವು, ‘‘ಸೀಮಿತ ಸಂಪನ್ಮೂಲವಾಗಿರುವ ಉಪಗ್ರಹ ಸ್ಪೆಕ್ಟ್ರಂಗಳನ್ನು ತರ್ಕಬದ್ಧವಾಗಿ, ಪರಿಣಾಮಕಾರಿಯಾಗಿ ಮತ್ತು ಹೊರೆಯಾಗದಂತೆ, ಎಲ್ಲರಿಗೂ ಲಭ್ಯವಾಗುವಂತೆ ಹಂಚಬೇಕು’’ ಎಂಬ ಐಟಿಯು ಉದ್ದೇಶಕ್ಕನುಗುಣವಾಗಿ, ಈ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಈ ಕಾರಣಕ್ಕಾಗಿಯೇ, ಭಾರತೀಯ ಟೆಲಿಕಾಂ ಉದ್ಯಮಿಗಳು ಸ್ಪೆಕ್ಟ್ರಂ ಹರಾಜಾಗಬೇಕು ಎಂದಾಗ, ಎಲಾನ್ ಮಸ್ಕ್ ಅದಕ್ಕೆ ವಿರೋಧ ವ್ಯಕ್ತಪಡಿಸಿ, ತನ್ನದೇ ಮಾಲಕತ್ವದ ‘ಎಕ್ಸ್’ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿದ್ದರು.
ಭಾರತದಲ್ಲಿ ಅಂಬಾನಿ (ಲಕ್ಸೆಂಬರ್ಗ್ ಮೂಲದ SES Astra ಜೊತೆ ಸೇರಿ) ಮತ್ತು ಮಿತ್ತಲ್ ಬಳಗ (ಇಂಗ್ಲೆಂಡಿನ Eutelsat OneWeb ಜೊತೆ ಸೇರಿ) ಈಗಾಗಲೇ ಸ್ಯಾಟ್‌ಕಾಂ ವ್ಯವಹಾರಕ್ಕಾಗಿ ಟೆಲಿಕಾಂ ಇಲಾಖೆ (DoT) ಹಾಗೂ ಇಂಡಿಯನ್ ನ್ಯಾಷನಲ್ ಪ್ರಮೋಷನ್ ಆ್ಯಂಡ್ ಆಥೊರೈಸೇಷನ್ ಸೆಂಟರ್ (In-SPACe)ಗಳಿಂದ ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯುನಿಕೇಷನ್ ಬೈ ಸ್ಯಾಟಲೈಟ್ ಸರ್ವೀಸಸ್ (GMPCS) ಪರವಾನಿಗೆ ಗಳಿಸಿಕೊಂಡಿವೆ. ಮಸ್ಕ್ ಅವರ ಸ್ಟಾರ್‌ಲಿಂಕ್ ಮತ್ತು ಬೆಜೋ ಅವರ Kuiper ಅರ್ಜಿಗಳಿನ್ನೂ ವಿಲೇವಾರಿ ಆಗಿಲ್ಲ. ದಶಕಗಳಿಂದ ಮೊಬೈಲ್ ಮತ್ತು ಸ್ಯಾಟ್‌ಕಾಂ ಆಪರೇಟರ್‌ಗಳು ಭಾರತದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಶ್ರಮ ಹಾಕಿ (ಹೆಚ್ಚು ಲಾಭ ಇಲ್ಲದೆ) ಸೇವೆ ನೀಡುತ್ತಿದ್ದಾರೆ. ಆದರೆ ಈಗ, ಈ ವಿದೇಶೀ ಸಂಸ್ಥೆಗಳು ಭಾರತಕ್ಕೆ ಬಂದು ನಗರ ಕೇಂದ್ರಿತವಾಗಿ ವ್ಯವಹರಿಸಿ, ಭಾರತೀಯ ಕಂಪೆನಿಗಳಿಗೆ ಈಗಿರುವ ಲಾಭದಲ್ಲಿ ಅನ್ಯಾಯವಾಗಿ ಪಾಲು ಪಡೆಯಲಿದ್ದಾರೆ. ಅವರಿಗೂ ನಮಗೂ ಸಮಾನ ಸ್ಪರ್ಧಾವಕಾಶ ಒದಗಿಸಲು ಸ್ಪೆಕ್ಟ್ರಂ ಹರಾಜೊಂದೇ ಪರಿಹಾರ ಎಂಬುದು ಅಂಬಾನಿ, ಮಿತ್ತಲ್ ಬಳಗದ ನಿಲುವು. ಒಟ್ಟಿನಲ್ಲಿ ಎಲ್ಲರ ಕಣ್ಣೂ ಈಗ ನೆಟ್ಟಿರುವುದು 2030ರ ಹೊತ್ತಿಗೆ, 16,000 ಕೋಟಿ ರೂ. ಗಾತ್ರದ್ದಾಗಲಿರುವ ಭಾರತದ ಸ್ಯಾಟ್‌ಕಾಂ ಮಾರುಕಟ್ಟೆಯತ್ತ.
ಹೊರನೋಟಕ್ಕೆ, ಇಲ್ಲಿ ಭಾರತೀಯ ಉದ್ಯಮಿಗಳ ದೂರು ಸರಿಯಾಗಿದೆ. ಅಂಬಾನಿ ಅವರ ಬಳಗದ ಬಳಿ ಇರುವ ಸ್ಯಾಟ್‌ಕಾಂಗೆ ಬಳಕೆಯಾಗುವ ತಗ್ಗಿನ ಕಕ್ಷೆಯ ಉಪಗ್ರಹಗಳ (LEO) ಸಂಖ್ಯೆ ಕೇವಲ 38. ಅದೇ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಬಳಿ ಅಂತಹ 6,426 ಉಪಗ್ರಹಗಳಿವೆ. ಏರ್‌ಟೆಲ್ ಬಳಿ 634 ಅಂತಹ ಉಪಗ್ರಹಗಳಿದ್ದರೆ, Kuiper 2032ರ ವೇಳೆಗೆ ಅಂತಹ 2,029 ಉಪಗ್ರಹಗಳನ್ನು ಹೊಂದುವ ಉದ್ದೇಶ ಹೊಂದಿದೆ. ಮಸ್ಕ್ ಅಂತೂ 2020ರಲ್ಲೇ ಕಾನೂನು ಬಾಹಿರವಾಗಿ ಭಾರತಕ್ಕೆ ಸ್ಯಾಟ್‌ಕಾಂ ಸಂಪರ್ಕ ಒದಗಿಸಲು ಹೊರಟು, ಕಡೆಗೆ ಭಾರತದ ಟೆಲಿಕಾಂ ಇಲಾಖೆ ಅದಕ್ಕೆ ನಿರ್ಬಂಧ ಹೇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಅಂತಹ ‘ವ್ಯಾವಹಾರಿಕ ಉಢಾಳತನಕ್ಕೆ’ ಹೆಸರಾಗಿರುವವರ ಮಾರುಕಟ್ಟೆ ಪ್ರವೇಶಕ್ಕೆ ಭಾರತ ಸರಕಾರ ಏಕಾಏಕಿ ರೆಡ್ ಕಾರ್ಪೆಟ್ ಹಾಸುತ್ತಿರುವುದು ಕುತೂಹಲಕರ ಬೆಳವಣಿಗೆ. ಈ ವರ್ಷದ ಆದಿಯಲ್ಲಿ (ಎಪ್ರಿಲ್ 2024), ಭಾರತಕ್ಕೆ ತನ್ನ ಭೇಟಿಯನ್ನು ಕೊನೆಯ ಕ್ಷಣದಲ್ಲಿ ಏಕಾಏಕಿ ರದ್ದುಪಡಿಸಿ ಚೀನಾಕ್ಕೆ ತೆರಳಿದ್ದ ಎಲಾನ್ ಮಸ್ಕ್ ತೀರ್ಮಾನ ಈಗ ಇತ್ತೀಚೆಗಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುತೂಹಲ ಹುಟ್ಟುಹಾಕಿದೆ.
ಪ್ರಶ್ನೆ ಏನೆಂದರೆ...
1,70,00,00,00,000 ಎಂಬ ಶಿರೋನಾಮೆ ಹೊತ್ತ ವರದಿಯೊಂದು 2010ರಲ್ಲಿ ಪತ್ರಿಕೆಯೊಂದರ ಮುಖಪುಟದಲ್ಲಿ ಪ್ರಕಟಗೊಂಡು, ಮುಂದೆ ಹಗರಣಗಳ ಮಹಾತಾಯಿ ಅನ್ನಿಸಿಕೊಂಡಿತ್ತು. ಈ 2ಜಿ ಹಗರಣದ ಕಾರಣಕ್ಕೆ, ಅಂದಿನ ಯುಪಿಎ-2 ಸರಕಾರ 2014ರಲ್ಲಿ ತಲೆದಂಡ ತೆರಬೇಕಾಯಿತು ಎಂಬುದೆಲ್ಲ ಈಗ ಇತಿಹಾಸ. (ಈ ಬಗ್ಗೆ ವಿವರಗಳಿಗೆ, ಇದೇ ಲೇಖಕರು ಅನುವಾದಿಸಿದ ‘ಒ ಡಾಕ್ಯುಮೆಂಟ್’ ಪುಸ್ತಕದ 17ನೇ ಅಧ್ಯಾಯವನ್ನು ಗಮನಿಸಬಹುದು.)
ತಂತ್ರಜ್ಞಾನದಲ್ಲಾದ ಕ್ಷಿಪ್ರ ಬದಲಾವಣೆಗಳ ಪರಿಣಾಮ ಉದ್ಯಮಿಗಳ ಮೇಲಾಗದಂತೆ ಅಂದಿನ ಸರಕಾರ ತೋರಿಸಿದ ಸಡಿಲನ್ನೇ ಮಹಾ ಹಗರಣವಾಗಿ ಬಿಂಬಿಸಿದ್ದ ಅಂದಿನ ವಿರೋಧಪಕ್ಷ ಇಂದು ಆಡಳಿತದ ಚುಕ್ಕಾಣಿ ಹಿಡಿದಿದೆ. ಈಗ ಅದೇ ತಂತ್ರಜ್ಞಾನ ಬದಲಾವಣೆಯ ಕಾರಣಕ್ಕೆ ಹಾಲಿ ಸರಕಾರ ಸ್ಪೆಕ್ಟ್ರಂ ಹರಾಜಿನಿಂದ ವಿಮುಖವಾಗಿದೆ. ಅಂದಿನ ಯುಪಿಎ ಸರಕಾರ ದೇಶೀ ಉದ್ಯಮಿಗಳ ಪರ ನಿಂತು ಸಡಿಲು ತೋರಿದ್ದರೆ, ಇಂದು ಮಸ್ಕ್-ಬೆಜೋ ಜೋಡಿಯ ಹಿತಾಸಕ್ತಿ ಕಾಪಾಡಲು ದೇಶದೊಳಗಿನ ‘ಆನಿ’ಗಳ ಹಿತಾಸಕ್ತಿ ಬಲಿಕೊಡಲಾಗುತ್ತಿದೆಯೇ ಎಂಬ ಪ್ರಶ್ನೆ ಈಗ ಸಹಜವಾಗಿಯೇ ಮೂಡುತ್ತದೆ. ಯುಪಿಎ ಸರಕಾರ ಮಾಡಿದ್ದು ‘ಬಲಾತ್ಕಾರ’, ಈಗ ಎನ್‌ಡಿಎ ಸರಕಾರ ಮಾಡುತ್ತಿರುವುದು ‘ಚಮತ್ಕಾರ’ ಎಂಬ ಚಿತ್ರಣವನ್ನು ಜನತೆಯ ಮುಂದೆ ಇಡುವಲ್ಲಿ ಸದ್ಯಕ್ಕೆ ಸರಕಾರ ಮತ್ತದರ ತುತ್ತೂರಿ ಮಾಧ್ಯಮಗಳು ಯಶಸ್ವಿಯಾಗಿವೆಯಾದರೂ, ಮಾಧ್ಯಮರಂಗದಲ್ಲೂ ಬಲವಾದ ಹಿಡಿತ ಹೊಂದಿರುವ ‘ಆನಿ’ಗಳು ತಮ್ಮ ವ್ಯವಹಾರ ಹಿತಾಸಕ್ತಿಗಳಿಗೆ ಧಕ್ಕೆ ಬಂದರೆ, ಯಾವುದಾದರೂ ಒಂದು ಹಂತದಲ್ಲಿ ಹಾಲಿ ಸರಕಾರದ ವಿರುದ್ಧ ತಿರುಗಿಬೀಳುವ ಸಾಧ್ಯತೆಗಳನ್ನು ನಿರಾಕರಿಸುವಂತಿಲ್ಲ.