ಕೋಮುವಾದ ರಾಜಕಾರಣದ ನಿರಾತಂಕ ಮುನ್ನಡೆ
Photo: iStock
ಐದು ರಾಜ್ಯಗಳ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಡದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಉತ್ತರ ಭಾರತ ತೀವ್ರವಾದಿ ಹಿಂದುತ್ವವನ್ನು ಆಯ್ದುಕೊಂಡಿದೆ. ತೆಲಂಗಾಣದಲ್ಲಿ ‘ದೊರಲ ತೆಲಂಗಾಣ’ವನ್ನು ‘ಪ್ರಜಲ ತೆಲಂಗಾಣ’ ಮಾಡಬೇಕೆಂಬ ಕಾಂಗ್ರೆಸ್ನ ಘೋಷಣೆ ಜನರಿಗೆ ಇಷ್ಟವಾಗಿದೆ. ಆದರೆ, ಉತ್ತರ ತೆಲಂಗಾಣದಲ್ಲಿ ಬಿಜೆಪಿ ತನ್ನ ಛಾಪು ಮೂಡಿಸಿದೆ. ಮಿಜೋರಾಂನಲ್ಲೂ ಕಾಂಗ್ರೆಸ್ ನೆಲ ಕಚ್ಚಿದ್ದು, ಅದಕ್ಕೆ ದಕ್ಕಿರುವುದು ಕೇವಲ ಒಂದು ಸ್ಥಾನ ಮಾತ್ರ. ಉತ್ತರ ಭಾರತವು ಕಾಂಗ್ರೆಸ್ ಮುಕ್ತ ಹಾಗೂ ದಕ್ಷಿಣ ಭಾರತವು ಬಿಜೆಪಿ ಮುಕ್ತವಾಗಿದೆ.
ಬಿಜೆಪಿ ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಂಡಿದ್ದು, ರಾಜಸ್ಥಾನ-ಛತ್ತೀಸ್ಗಡದಲ್ಲಿ ಅಧಿಕಾರ ಕಿತ್ತುಕೊಂಡಿದೆ. 5 ವರ್ಷಗಳ ಹಿಂದೆ ಈ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆದರೆ, ಆಪರೇಷನ್ನಿಂದ ಮಧ್ಯ ಪ್ರದೇಶವನ್ನು ಕಳೆದುಕೊಂಡಿತ್ತು. ತೆಲಂಗಾಣದಲ್ಲಿ ಬಿಜೆಪಿ ಸ್ಥಾನಬಲ 1ರಿಂದ 8ಕ್ಕೆ ಹೆಚ್ಚಿದೆ. ಯಾವುದೇ ಸೈದ್ಧಾಂತಿಕ ಹಿನ್ನೆಲೆ ಇಲ್ಲದ ಭಾರತ ರಾಷ್ಟ್ರ ಸಮಿತಿ(ಬಿಆರ್ಎಸ್)ಯ ವಂಶಪಾರಂಪರ್ಯ ಆಡಳಿತವನ್ನು ಜನ ತಿರಸ್ಕರಿಸಿದ್ದಾರೆ.
ದೇಶದ ಉತ್ತರ ಮತ್ತು ಪಶ್ಚಿಮದಲ್ಲಿ ಬಿಜೆಪಿ ವ್ಯಾಪಿಸಿಕೊಂಡಿದೆ ಮತ್ತು ದಕ್ಷಿಣದಲ್ಲಿ ಬಿಜೆಪಿಯೇತರ ಪಕ್ಷಗಳ ಆಡಳಿತವಿದೆ. ಮೂರೂ ರಾಜ್ಯಗಳ ಚುನಾವಣೆ ಪ್ರಧಾನಿ ಸುತ್ತ ಗಿರಕಿ ಹೊಡೆಯಿತು. ಮುಖ್ಯಮಂತ್ರಿ ಚೌಹಾಣ್ ಸೇರಿದಂತೆ ರಾಜ್ಯ ಮಟ್ಟದ ನಾಯಕರು ಮೂಲೆಗುಂಪಾಗಿದ್ದರು. ರಾಜಸ್ಥಾನ ಮತ್ತು ಛತ್ತೀಸ್ಗಡದಲ್ಲೂ ಇದೇ ಕತೆ. ಇದೊಂದು ಅಪಾಯಕರ ತಂತ್ರ; ಕರ್ನಾಟಕದಲ್ಲಿ ಜಾತಿ ಗುಂಪುಗಳು, ರಾಜ್ಯಮಟ್ಟದ ನಾಯಕರನ್ನು ಬದಿಗೊತ್ತಿದ್ದರಿಂದ, ಬಿಜೆಪಿ ಸೋಲುಂಡಿತ್ತು. ಹೀಗಿದ್ದರೂ, ಬಿಜೆಪಿ ಪ್ರಧಾನಿಯನ್ನೇ ಮುಂದೊತ್ತಿತು. ಜೂಜಿನಾಟ ಫಲ ನೀಡಿತು.
ಆದಿವಾಸಿಗಳ ಹಿಂದುವೀಕರಣ
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಡ ರಾಜ್ಯಗಳಲ್ಲಿ ದೇಶದ ಶೇ.31ರಷ್ಟು ಆದಿವಾಸಿಗಳಿದ್ದಾರೆ. 2018ರಲ್ಲಿ ಮಧ್ಯಪ್ರದೇಶ/ಛತ್ತೀಸ್ಗಡದ 76 ಪರಿಶಿಷ್ಟ ವರ್ಗ ಮೀಸಲು ಕ್ಷೇತ್ರಗಳಲ್ಲಿ 19ರಲ್ಲಿ ಮಾತ್ರ ಗೆದ್ದಿದ್ದ ಬಿಜೆಪಿ, ಈ ಬಾರಿ 44 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದೆ. ರಾಜಸ್ಥಾನದಲ್ಲಿ ಈ ಸಮುದಾಯದ 4 ಹೆಚ್ಚುವರಿ ಕ್ಷೇತ್ರಗಳು ಪಕ್ಷದ ಪಾಲಾಗಿವೆ. ಕಾಂಗ್ರೆಸ್ ಛತ್ತೀಸ್ಗಡದಲ್ಲಿ ಇತರ ಒಬಿಸಿಗಳಿಗೆ ಮನ್ನಣೆ ನೀಡಿ, ಆದಿವಾಸಿ ಮತಗಳನ್ನು ಕಡೆಗಣಿಸಿತು. ಆದರೆ, ಒಬಿಸಿಗಳು ಪಕ್ಷಕ್ಕೆ ಮತ ಹಾಕಲಿಲ್ಲ. ಭೂಪೇಶ್ ಬಘೇಲ್ ಕುರ್ಮಿ ಸಮುದಾಯಕ್ಕೆ ಸೇರಿದವರಾಗಿದ್ದು, ಇನ್ನೊಂದು ಒಬಿಸಿ ಸಮುದಾಯವಾದ ಸಾಹುಗಳು ಬಿಜೆಪಿಯನ್ನು ಬೆಂಬಲಿಸಿದರು. ರಾಜ್ಯದಲ್ಲಿ ಹೆಚ್ಚು ಎಸ್ಟಿ ಸ್ಥಾನಗಳಿರುವ ಸರ್ಗುಜ ಮತ್ತು ಬಸ್ತಾರ್ನಲ್ಲಿ ಬಿಜೆಪಿ ಕೈ ಮೇಲಾಗಿದೆ. ಭ್ರಷ್ಟಾಚಾರ ಆರೋಪ ಮತ್ತು ಅಸಂಬದ್ಧ ಸೋಷಿಯಲ್ ಇಂಜಿನಿಯರಿಂಗ್ನಿಂದ ಆದಿವಾಸಿಗಳು ಕಾಂಗ್ರೆಸ್ನಿಂದ ದೂರ ಸರಿದರು. ಮಧ್ಯ ಪ್ರದೇಶ ಮತ್ತು ಛತ್ತೀಸ್ಗಡದಲ್ಲಿ ಆದಿವಾಸಿಗಳ ಹಿಂದುವೀಕರಣ ಯಶಸ್ವಿಯಾಗಿದೆ; ವನವಾಸಿ ಕಲ್ಯಾಣ ಕೇಂದ್ರದ ಕೆಲಸಗಳು ಫಲ ನೀಡಿವೆ.
ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂಯುಕ್ತ ಕಿಸಾನ್ ಮೋರ್ಚಾ, ಮೂರೂ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಪ್ರಚಾರ ಮಾಡಿತ್ತು. ಹೀಗಿದ್ದರೂ, ರೈತರ ಆಕ್ರೋಶವನ್ನು ಬಿಜೆಪಿ ತಣಿಸಿದೆ. ಛತ್ತೀಸ್ಗಡದಲ್ಲಿ ಭತ್ತಕ್ಕೆ ಸಂಗ್ರಹ ದರ ಹೆಚ್ಚಳ ಮತ್ತು ಬೋನಸ್ ಆಶ್ವಾಸನೆ ನೀಡಿದ್ದು, ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ವಾರ್ಷಿಕ ಆರ್ಥಿಕ ನೆರವನ್ನು 6,000 ರೂ.ನಿಂದ 12,000 ರೂ.ಗೆ ಹೆಚ್ಚಿಸಿದೆ. ಸೋಯಾ ಅವರೆ, ಗೋಧಿ ಇತ್ಯಾದಿ ಬೆಳೆಗಾರರು ಇರುವ ಮಧ್ಯಪ್ರದೇಶದ ಮಾಲ್ವಾ-ನೀಮರ್ ಪ್ರಾಂತದಲ್ಲಿ 66ರಲ್ಲಿ 48 ಸ್ಥಾನ ಬಿಜೆಪಿ ಪಾಲಾಗಿದೆ. 2018ರಲ್ಲಿ ಈ ಪ್ರಾಂತದಲ್ಲಿ ಕಾಂಗ್ರೆಸ್ 36 ಸ್ಥಾನ ಗಳಿಸಿತ್ತು. ‘ಗರೀಬ್ ಕಲ್ಯಾಣ ಅನ್ನ ಯೋಜನೆ’ಯನ್ನು ಇನ್ನೂ 5 ವರ್ಷ ಮುಂದುವರಿಸುವಿಕೆಯನ್ನು ಗ್ರಾಮೀಣ-ನಗರ ಪ್ರದೇಶದ ಬಡವರು ಒಪ್ಪಿಕೊಂಡಿದ್ದಾರೆ. ‘ಲಾಡ್ಲಿ ಬೆಹನಾ’ ಕಾರ್ಯಕ್ರಮ ಮಹಿಳೆಯರನ್ನು ಸೆಳೆದಿದೆ. ರಾಜಸ್ಥಾನದ ಪೂರ್ವ ಭಾಗದಲ್ಲಿರುವ ಕೃಷಿಕ ಸಮುದಾಯಗಳಾದ ಜಾಟರು, ಗುರ್ಜರ್ ಮತ್ತು ಮಾಲಿಗಳು ಈ ಮೊದಲು ಕಾಂಗ್ರೆಸ್ ಪರ ಇದ್ದರು. ಸತೀಶ್ ಪೂನಿಯಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಿಸಿದ್ದು ಫಲ ಕೊಟ್ಟಿದೆ. ಆದರೆ, ಅಮೇರ್ ಕ್ಷೇತ್ರದಲ್ಲಿ ಪೂನಿಯಾ ಅಪಜಯ ಹೊಂದಿದ್ದಾರೆ. ಛತ್ತೀಸ್ಗಡದಲ್ಲಿ ಭತ್ತ ಬೆಳೆಯುವ ಮಹಾನದಿ ಪಾತ್ರದಲ್ಲಿ ‘ರೈತ ಉನ್ನತಿ ಯೋಜನೆ’ ಜಾರಿ, ಪ್ರತೀ ಎಕರೆಗೆ 21 ಕ್ವಿಂಟಾಲ್ ಭತ್ತ 3,100 ರೂ.ನಂತೆ ಖರೀದಿ ಮತ್ತು ವಿವಾಹಿತ ಮಹಿಳೆಯರಿಗೆ ನೆರವು ಘೋಷಿಸಲಾಗಿದೆ. ಆದಿವಾಸಿಗಳನ್ನು ಸಂಪ್ರೀತಗೊಳಿಸಲು ತೆಂಡು ಎಲೆಗಳನ್ನು ಚೀಲವೊಂದಕ್ಕೆ 5,500 ರೂ.ಗೆ ಖರೀದಿಸುವುದಾಗಿಯೂ ಹೇಳಿದೆ.
ಕಾಂಗ್ರೆಸ್ ಪಾತಾಳಕ್ಕೆ ಕುಸಿತ
ಬಿಜೆಪಿಯ ಪ್ರಾಬಲ್ಯ ಮತ್ತು ಪ್ರತಿಪಕ್ಷಗಳು, ಮುಖ್ಯವಾಗಿ, ಕಾಂಗ್ರೆಸ್ನ ಹೀನಾಯ ಸ್ಥಿತಿಗೆ ವಿವರಣೆ ಏನು? ಬಿಜೆಪಿಯ ಸಾಂಸ್ಥಿಕ ಸಂರಚನೆ, ಚಲನಶೀಲ ಚುನಾವಣಾ ಯಂತ್ರ ಮತ್ತು ಜನಕಲ್ಯಾಣ ಮಾದರಿ(ಉಚಿತ ಯೋಜನೆಗಳು ಅಥವಾ ಅಂತಹ ಭರವಸೆಗಳು) ವಿಜಯಕ್ಕೆ ಕಾರಣ ಇರಬಹುದು. ಆದರೆ, ಇವು ನಿರ್ಣಾಯಕವಲ್ಲ. ಛತ್ತೀಸ್ಗಡದಲ್ಲಿ ಭೂಪೇಶ್ ಬಘೇಲ್ ಮತ್ತು ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸಾಕಷ್ಟು ಉಚಿತ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು. ಬಿಜೆಪಿಯ ರಾಜ್ಯಮಟ್ಟದ ನಾಯಕತ್ವದಲ್ಲಿನ ಒಳಜಗಳ ಮತ್ತು ಕೇಂದ್ರದ ನಿಯಂತ್ರಣದಿಂದ ಪಕ್ಷ ದುರ್ಬಲಗೊಂಡಿತ್ತು; ಇದರಿಂದ ಸಾಂಸ್ಥಿಕ ಜಡತ್ವ ಮನೆ ಮಾಡಿತ್ತು. ಮಧ್ಯಪ್ರದೇಶದಲ್ಲಿ 2 ದಶಕಗಳ ಆಡಳಿತದ ಹೊರೆ ಬಿಜೆಪಿ ಹೆಗಲಿನ ಮೇಲೆ ಇದ್ದಿತ್ತು. ಹೀಗಿದ್ದರೂ, ಮೂರೂ ರಾಜ್ಯಗಳಲ್ಲಿ ಬಿಜೆಪಿ ಜಯ ಗಳಿಸಿತು.
ಹಿಂದಿನ ಚುನಾವಣೆಗಳಲ್ಲಿ ವಿಂಧ್ಯ ಪರ್ವತದ ಉತ್ತರ ಭಾಗದಲ್ಲಿ ಬಿಜೆಪಿ ಗೆಲುವಿಗೆ ಎರಡು ಅಂಶಗಳು ಕಾರಣ- ಹಿಂದೂ ರಾಷ್ಟ್ರೀಯವಾದದ ಸೈದ್ಧಾಂತಿಕ ಕಾರ್ಯಸೂಚಿ ಮತ್ತು ಪ್ರತೀ ಚುನಾವಣೆಯಲ್ಲೂ ಕಾಲ-ಪ್ರಾಂತ/ರಾಜ್ಯಕ್ಕೆ ಅನುಗುಣವಾಗಿ ಬದಲಾಗುವ, ಚಲನಶೀಲವಾಗುವ ಆಕರ್ಷಕ ನಾಯಕತ್ವ. ಹಿಂದಿ ಭಾಷಿಕರು(ಅಂದಾಜು ಶೇ.57) ಇರುವಲ್ಲಿ ಯಾವುದೇ ಚುನಾವಣೆ ಇರಲಿ, ಬಿಜೆಪಿಗೆ ಸೈದ್ಧಾಂತಿಕ ಮತಬ್ಯಾಂಕ್ವೊಂದು ಇದೆ. ಉದಾಹರಣೆಗೆ, ರಾಜಸ್ಥಾನದಲ್ಲಿ ಬ್ರಾಹ್ಮಣ, ಬಲಿಯಾ ಮತ್ತು ರಜಪೂತ ಎನ್ನುವ ಸಾಂಪ್ರದಾಯಿಕ ವಿಭೇದ ಕಾಣೆಯಾಗಿದೆ(ಆಕ್ಸಿಸ್-ಇಂಡಿಯಾ ಟುಡೇ ಸಮೀಕ್ಷೆ). ಇವರೊಟ್ಟಿಗೆ ಪಕ್ಷದ ಮುಖ್ಯ ಬೆಂಬಲಿಗರು, ಒಬಿಸಿಗಳು; ಕಾಂಗ್ರೆಸ್ನಲ್ಲಿ ಇಬ್ಬರು ಒಬಿಸಿ ಮುಖ್ಯಮಂತ್ರಿಗಳು, ರಾಜಸ್ಥಾನದಲ್ಲಿ ಒಬಿಸಿ ಕೋಟಾ ಹೆಚ್ಚಳ ಮತ್ತು ಜಾತಿ ಗಣತಿಯ ಆಶ್ವಾಸನೆ ಹಾಗೂ ಒಬಿಸಿ ಸಮುದಾಯದಲ್ಲಿ ಬಘೇಲ್ ಜನಪ್ರಿಯತೆ ನಡುವೆಯೂ ಬಿಜೆಪಿಗೆ ಬೆಂಬಲ ಸಿಕ್ಕಿದೆ.
ನಗರ ಪ್ರದೇಶ ಮತ್ತು ಮೇಲ್ಚಲನೆಯಲ್ಲಿರುವ ಒಬಿಸಿಗಳು ತಮ್ಮನ್ನು ಬಿಜೆಪಿಯ ಸೈದ್ಧಾಂತಿಕ ಕಾರ್ಯಸೂಚಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ಜೆಐಎಸ್ಟಿ-ಟಿಐಎಫ್ ಸಂಶೋಧನೆಯ ಸಮೀಕ್ಷಾ ಗುಣಾಂಕಗಳ ಪ್ರಕಾರ, ರಾಜಸ್ಥಾನದಲ್ಲಿ ಕೇಳಿದ ಪ್ರಶ್ನೆಗಳಿಗೆ ಒಬಿಸಿ ಮತ್ತು ಮೇಲ್ಜಾತಿಗಳ ಪ್ರತಿಕ್ರಿಯೆ ಒಂದೇ ರೀತಿ ಇದ್ದಿತ್ತು; ಹಣದುಬ್ಬರದ ಜವಾಬ್ದಾರಿ ಯಾರದ್ದು?(ಕೇಂದ್ರ ಅಥವಾ ರಾಜ್ಯ) ಎಂಬ ಪ್ರಶ್ನೆಗೆ ರಾಜ್ಯ ಸರಕಾರದ್ದು ಎಂದು ಮೇಲ್ಜಾತಿಯ ಶೇ.54 ಮತ್ತು ಶೇ.48ರಷ್ಟು ಒಬಿಸಿಗಳು ಪ್ರತಿಕ್ರಿಯಿಸಿದ್ದರು. ಆದರೆ, ಆದಿವಾಸಿಗಳು/ದಲಿತರ ಪ್ರತಿಕ್ರಿಯೆ ಶೇ.33 ಮತ್ತು ಶೇ.31 ಇದ್ದಿತ್ತು. ಉಚಿತಗಳು ಸರಿಯೇ/ತಪ್ಪೇ ಎಂಬ ಪ್ರಶ್ನೆಗೆ ಒಬಿಸಿಗಳು(ಕುರ್ಮಿ, ಯಾದವ, ಲೋಧಿ ಮತ್ತು ಗುಜ್ಜರ್ಗಳು) ಮೇಲ್ಜಾತಿಗಳಂಥದ್ದೇ ಅಭಿಪ್ರಾಯ ನೀಡಿದರು. ಆದರೆ, ದಲಿತರು, ಅತಿ ಹಿಂದುಳಿದ ಜಾತಿಗಳು ಹಾಗೂ ಆದಿವಾಸಿ ಮತದಾರರು ಉಚಿತಗಳ ಪರ ಇದ್ದರು.
2014ರ ನಂತರ ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಹಿಂದಿರುಗುವುದನ್ನು ಪ್ರಧಾನಿ ಮೋದಿ ಅವರ ಪ್ರಭಾವಳಿ ತಡೆದಿದೆ. ಉತ್ತರ ಭಾರತದಲ್ಲಿ ಕಾಂಗ್ರೆಸ್ ನಾಯಕತ್ವ ಕಮಲ್ನಾಥ್, ಗೆಹ್ಲೋಟ್, ದಿಗ್ವಿಜಯ ಸಿಂಗ್ ಮತ್ತಿತರ ದಶಕಗಳ ಹಿಂದೆಯೇ ಅವಧಿ ಮುಗಿದು ಹೋದವರಿಂದ ತುಂಬಿಹೋಗಿದೆ. ಇವರೆಲ್ಲರೂ ಪ್ರಗತಿಪರ ಕಾರ್ಯಸೂಚಿಯನ್ನು ಮುಂದೊತ್ತಲು ಹಾಗೂ ರಾಜ್ಯಮಟ್ಟದಲ್ಲಿ ನಾಯಕತ್ವವನ್ನು ಬೆಳೆಯಲು ಬಿಡುತ್ತಿಲ್ಲ. ಜಾತಿ ಗಣತಿಯಂಥ ಹೊಸ ಆಲೋಚನೆಗಳು ಇವರಿಗೆ ಅಪಥ್ಯ. ಇದರಿಂದಾಗಿ ಮೊನ್ನೆಯ ಚುನಾವಣೆಯಲ್ಲಿ ಆರಂಭದಲ್ಲಿ ರಾಹುಲ್ ಗಾಂಧಿ ಉಲ್ಲೇಖಿಸಿದ ಜಾತಿ ಗಣತಿ, ಆನಂತರ ಪ್ರಚಾರದಿಂದ ನಾಪತ್ತೆಯಾಯಿತು. ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಬಘೇಲ್ ಮತ್ತು ಗೆಹ್ಲೋಟ್, ಪ್ರಬಲ ನಾಯಕರಾದ ಸಚಿನ್ ಪೈಲಟ್ ಮತ್ತು ಟಿ.ಎಸ್.ಸಿಂಗ್ ದೇವ್ ಅವರನ್ನು ಬದಿಗೊತ್ತಿದ್ದಲ್ಲದೆ, ಪ್ರದೇಶ ಕಾಂಗ್ರೆಸ್ ಸಮಿತಿಯನ್ನೇ ನಿರ್ಲಕ್ಷಿಸಿದರು. ಆಯ್ದ ಅಧಿಕಾರಿಗಳು ಹಾಗೂ ತೈನಾತಿಗಳ ಮೂಲಕ ಆಡಳಿತ ನಡೆಸಿದರು. ದುರ್ಬಲ ಹೈಕಮಾಂಡ್ಗೆ ಇವರ ಆಟಾಟೋಪವನ್ನು ನಿಯಂತ್ರಿಸಲು ಆಗಲಿಲ್ಲ. ಇದರಿಂದಾಗಿ ಸರಕಾರ ಜನಪರವಾಗಿದ್ದರೂ, ಜನಪ್ರಿಯತೆ ಮತವಾಗಿ ಪರಿವರ್ತನೆ ಆಗಲಿಲ್ಲ. ವಿನೂತನ, ಎಲ್ಲರನ್ನೂ ಒಳಗೊಳ್ಳುವ ಮತ್ತು ನಿರ್ದಿಷ್ಟವಾದ ಸೈದ್ಧಾಂತಿಕ ಕಾರ್ಯಸೂಚಿಯಿಲ್ಲದೆ, ಮೃದು ಹಿಂದುತ್ವದ ಹಿಂದೆ ಹೋಗಿದ್ದರ ಫಲ ಇದು. ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಜೊತೆಗೆ, ಕಾಂಗ್ರೆಸ್ ದಲಿತರು-ಆದಿವಾಸಿಗಳ ಕ್ರೋಡೀಕರಣ ಮಾಡಿತು. ಗೇಣಿ ರೈತರಿಗೆ ಸಬ್ಸಿಡಿಯಂಥ ಆಶ್ವಾಸನೆಗಳು ಕೆಲಸ ಮಾಡಿದವು.
ಬಿಜೆಪಿ ಹಲವು ಚಾಣಾಕ್ಷ ನಡೆಗಳನ್ನು ಇರಿಸಿತು-ಮೋದಿ ಅವರನ್ನು ಮುಂದೊತ್ತಿದ್ದು, ಯಾರನ್ನೂ ಮುಖ್ಯಮಂತ್ರಿ ಎಂದು ಬಿಂಬಿಸದೆ ಇದ್ದದ್ದು, ಕೆಲವು ಕೇಂದ್ರ ಸಚಿವರನ್ನು ಸ್ಪರ್ಧೆಗಿಳಿಸಿದ್ದು, ಜಾತಿಗಣತಿಗೆ ಪ್ರತಿಯಾಗಿ ‘ಬಡತನವೇ ದೊಡ್ಡ ಭೂತ. ಅದನ್ನು ತೊಲಗಿಸಬೇಕು’ ಎಂಬ ಪ್ರತ್ಯುತ್ತರ ನೀಡಿದ್ದು-ಇವೆಲ್ಲ ಕೆಲಸ ಮಾಡಿದವು. ಛತ್ತೀಸ್ಗಡದಲ್ಲಿ ಕಾಂಗ್ರೆಸ್ ಮತಗಳಿಕೆ ಪ್ರಮಾಣ ಶೇ.0.6 ಕಡಿಮೆಯಾಗಿದ್ದು, ಬಿಜೆಪಿ ಮತಗಳಿಕೆ ಶೇ.13.5ರಷ್ಟು ಹೆಚ್ಚಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತಗಳಿಕೆ ಶೇ.0.6ರಷ್ಟು ಕಡಿಮೆಯಾಗಿದೆ; ಬಿಜೆಪಿ ಮತಗಳಿಕೆ ಶೇ.7.3ರಷ್ಟು ಹೆಚ್ಚಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಮತಗಳಿಕೆ ಪ್ರಮಾಣದಲ್ಲಿ ಸ್ವಲ್ಪ ಕಡಿಮೆಯಾಗಿದೆ(ಶೇ.0.7); ಬಿಜೆಪಿಯದು ಶೇ.3ರಷ್ಟು ಹೆಚ್ಚಿದೆ.
ಜಾತಿಗಣತಿ ಆಶ್ವಾಸನೆ
ಸಮುದಾಯಗಳಿಗೆ ಸಾಮಾಜಿಕ-ರಾಜಕೀಯ ಪ್ರಾತಿನಿಧ್ಯ ನೀಡುವ ಆಶಯ ಬೇರೆ; ಅದನ್ನು ಜಾತಿಗಣತಿಯಿಂದ ಸಾಧಿಸುವುದು ಮತ್ತು ಜನರನ್ನು ನಂಬಿಸುವುದು ಸುಲಭವಲ್ಲ. ಇದರಿಂದ ರಾಹುಲ್ ಗಾಂಧಿ ಅವರ ಜಾತಿಗಣತಿ ಆಶ್ವಾಸನೆ ಪರಿಣಾಮ ಬೀರಲಿಲ್ಲ. ಬಿಜೆಪಿಯ ಹಿಂದುತ್ವ ರಾಜಕೀಯ ಪ್ರತಿಧ್ವನಿಸಿತು ಮತ್ತು ಪಕ್ಷ ಸಬಾಲ್ಟ್ರನ್ ಗುಂಪುಗಳನ್ನು ಪರಿಣಾಮಕಾರಿಯಾಗಿ ತಲುಪಿತು. ಕೋಮು ರಾಜಕೀಯದ ವಿರುದ್ಧ ಜಾತಿ ರಾಜಕೀಯ ಪರಿಣಾಮಕಾರಿ ಆಗಲಿಲ್ಲ. ರಾಜಸ್ಥಾನದಲ್ಲಿ ಪಕ್ಷದ ಏಕೈಕ ಮುಸ್ಲಿಮ್ ಶಾಸಕ ಯೂನುಸ್ ಖಾನ್ಗೆ ಬಿಜೆಪಿ ಟಿಕೆಟ್ ನಿರಾಕರಿಸಿತು; ಹಿಂದುತ್ವದ ವಿಷಯದಲ್ಲಿ ಯಾವುದೇ ರಾಜಿಗೆ ಸಿದ್ಧವಿಲ್ಲ ಎಂದು ಘೋಷಿಸಿತು. ಮಹಿಳೆಯರು, ಆದಿವಾಸಿ ಸಮುದಾಯ ಮತ್ತು ಯುವಜನರಿಗೆ ಎರಡೂ ಪಕ್ಷಗಳು ಹಲವು ಕಲ್ಯಾಣ ಕಾರ್ಯಕ್ರಮಗಳ ಆಶ್ವಾಸನೆ ನೀಡಿದವು; ಆದರೆ, ಜನ ಬಿಜೆಪಿಯನ್ನೇ ಆಯ್ಕೆ ಮಾಡಿಕೊಂಡರು. ಪ್ರಬಲ ನಾಯಕತ್ವ ಮತ್ತು ಹಿಂದುತ್ವದ ಅಸ್ಮಿತೆ ರಾಜಕಾರಣ ಕೆಲಸ ಮಾಡಿತು. ಮಧ್ಯಪ್ರದೇಶದಲ್ಲಿ ಲಾಡ್ಲಿ ಬೆಹನಾ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 1,250 ರೂ. ನೆರವಿನ ಭರವಸೆಯಲ್ಲದೆ, ಧಾರ್ಮಿಕ ಕೇಂದ್ರಗಳಿಗೆ ಭರಪೂರ ನೆರವು ಘೋಷಿಸಲಾಯಿತು. ರಾಮಮಂದಿರ ಉದ್ಘಾಟನೆ ದಿನ ನಿಗದಿಗೊಳಿಸಿದ್ದು, ಹೊಸಬರಿಗೆ ಟಿಕೆಟ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಗ್ವಾಲಿಯರ್-ಚಂಬಲ್ ಕಣಿವೆಯಲ್ಲಿ ಬಿಜೆಪಿ ಮತ ವರ್ಗಾವಣೆ ಆಗುವಂತೆ ನೋಡಿಕೊಂಡಿದ್ದು ಬಿಜೆಪಿಗೆ ಪೂರಕವಾಗಿ ಪರಿಣಮಿಸಿತು. ಆದರೆ, ಚೌಹಾಣ್ ಸಂಪುಟದ 12 ಸಚಿವರು ಸೋತರು. ರಾಜಸ್ಥಾನದಲ್ಲಿ ಸಣ್ಣ ಪಕ್ಷಗಳು ಕಾಂಗ್ರೆಸ್ಗೆ ಹೊಡೆತ ನೀಡಿದವು. ಬಿಎಸ್ಪಿ, ಆಝಾದ್ ಸಮಾಜ್ ಪಾರ್ಟಿ, ಸಿಪಿಎಂ, ಆರ್ಎಲ್ಪಿ, ಭಾರತೀಯ ಆದಿವಾಸಿ ಪಕ್ಷ ಕಾಂಗ್ರೆಸ್ಗೆ ತೀವ್ರ ಹೊಡೆತ ನೀಡಿದವು. ಬಿಎಪಿ 3, ಆರ್ಎಲ್ಪಿ 1, ಬಿಎಸ್ಪಿ/ಎಎಸ್ಪಿ 3 ಸ್ಥಾನಗಳಲ್ಲಿ ಜಯ ಗಳಿಸಿದವು ಮತ್ತು ಅಂದಾಜು 32 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರಾಜಯಕ್ಕೆ ಕಾರಣವಾದವು. ಜೊತೆಗೆ, ಕಾಂಗ್ರೆಸ್ನ 13 ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದರು. ಇವರೆಲ್ಲರೂ ಕಾಂಗ್ರೆಸ್ ಮತ ಬುಟ್ಟಿಗೆ ಕೈ ಹಾಕಿದರು. ಇದೆಲ್ಲವೂ ಬಿಜೆಪಿಗೆ ವರವಾಗಿ ಪರಿಣಮಿಸಿತು ಮತ್ತು ಪ್ರತೀ ಬಾರಿ ಪಕ್ಷವನ್ನು ಬದಲಿಸುವ ತನ್ನ ಸಂಪ್ರದಾಯವನ್ನು ರಾಜಸ್ಥಾನ ಮುಂದುವರಿಸಿತು. ರಾಹುಲ್ ಗಾಂಧಿಯವರ ‘ಭಾರತ್ ಜೋಡೊ’ ಯಾತ್ರೆ ಮತ್ತು ಪಕ್ಷದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರ ನೇಮಕ ತೆಲಂಗಾಣದಲ್ಲಿ ಮಾತ್ರ ಪರಿಣಾಮ ಬೀರಿತು; ಹಿಂದಿ ಭಾಷಿಕ ರಾಜ್ಯಗಳಲ್ಲಿ ಕೆಲಸ ಮಾಡಲಿಲ್ಲ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ ಮತ್ತು ರಾಜ್ಯವಿಡೀ ಪಾದಯಾತ್ರೆ ಮಾಡಿದ್ದ ದಲಿತ ನಾಯಕ ಮಲ್ಲು ಭಟ್ಟಿ ವಿಕ್ರಮಾದಿತ್ಯ ಅವರಿಂದ ಕಲಿಯುವುದು ಸಾಕಷ್ಟಿದೆ.
ಮಿಜೋರಾಂನಲ್ಲಿಯೂ ಕಾಂಗ್ರೆಸ್ ನೆಲ ಕಚ್ಚಿದೆ. 2018ರ ನಂತರ ಪಕ್ಷದ ಅಧೋಗತಿ ಆರಂಭವಾಯಿತು. ಆಗ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈಗ 40 ಸ್ಥಾನಗಳಲ್ಲಿ 1 ಕ್ಷೇತ್ರದಲ್ಲಿ ಮಾತ್ರ ಜಯ ಗಳಿಸಿದೆ. 1986ರವರೆಗೆ ಐದು ಬಾರಿ ಗೆಲುವಿಗೆ ಕಾರಣರಾಗಿದ್ದ ಲಲ್ತನ್ಹವ್ಲಾ, 2021ರಲ್ಲಿ ನಿವೃತ್ತರಾದರು. ಲಾಲ್ದುಹೊಮಾ ನೇತೃತ್ವದ ಆರು ಪ್ರಾದೇಶಿಕ ಪಕ್ಷಗಳ ಒಕ್ಕೂಟವಾದ ರೆರಂ ಪೀಪಲ್ಸ್ ಮೂವ್ಮೆಂಟ್ 27 ಸ್ಥಾನ ಗಳಿಸಿದ್ದು, ಸರಕಾರ ರಚಿಸಲಿದೆ. ತಮಾಷೆಯೆಂದರೆ, ಲಾಲ್ದುಹೊಮಾ ಅವರ ರಾಜಕೀಯ ಜೀವನ ಆರಂಭಗೊಂಡಿದ್ದು ಕಾಂಗ್ರೆಸ್ನಲ್ಲಿ. ಐಪಿಎಸ್ಗೆ ರಾಜೀನಾಮೆ ನೀಡಿ, ಲೋಕಸಭೆಗೆ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದರು. 1986ರಲ್ಲಿ ಕಾಂಗ್ರೆಸ್ ತೊರೆದು, ಮಿಜೋ ನ್ಯಾಷನಲ್ ಫ್ರಂಟ್ ಸೇರಿದ್ದರು. 1988ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯಿಂದ ಅವರ ಸದಸ್ಯತ್ವ ರದ್ದಾಯಿತು. ಈ ಕಾಯ್ದೆಯಡಿ ಸದಸ್ಯತ್ವ ಕಳೆದುಕೊಂಡ ಮೊದಲ ಸಂಸದ ಅವರು. ಆನಂತರ, ಝಡ್ಎನ್ಪಿ ಸ್ಥಾಪಿಸಿ, 2003ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
ಮೂರು ರಾಜ್ಯಗಳಲ್ಲಿ ಮಹಿಳಾ ಪ್ರಾತಿನಿಧ್ಯದಲ್ಲಿ ಸ್ವಲ್ಪ ಸುಧಾರಣೆಯಾಗಿದೆ. ಛತ್ತೀಸ್ಗಡದಲ್ಲಿ 19(ಕಳೆದ ಚುನಾವಣೆಯಲ್ಲಿ 13), ತೆಲಂಗಾಣದಲ್ಲಿ 10(6), ಮಧ್ಯಪ್ರದೇಶದಲ್ಲಿ 27(21) ಶಾಸಕಿಯರು ಆಯ್ಕೆಯಾಗಿದ್ದಾರೆ. ಆದರೆ, ರಾಜಸ್ಥಾನದಲ್ಲಿ ಸಂಖ್ಯೆ ಕುಸಿದಿದೆ(24 ರಿಂದ 20). ಇದೇ ವೇಗದಲ್ಲಿ ಶಾಸಕಿ/ಸಂಸದೆಯರ ಆಯ್ಕೆ ನಡೆದರೆ, ಶೇ.33 ಪ್ರಾತಿನಿಧ್ಯ ಸಿಗಲು ನೂರಾರು ವರ್ಷ ಬೇಕಾಗುತ್ತದೆ.
ಹಲವು ರಾಜ್ಯಗಳಲ್ಲಿ ಪ್ರಾಂತೀಯ ಪಕ್ಷಗಳು ಕಾಂಗ್ರೆಸ್ನ ಪ್ರತಿಸ್ಪರ್ಧಿಗಳು. ಆಯಾ ರಾಜ್ಯದಲ್ಲಿ ಅವುಗಳನ್ನು ಎದುರಿಸಲೇಬೇಕಾದ ಅನಿವಾರ್ಯ ಪಕ್ಷಕ್ಕಿದೆ. ಬಿಜೆಪಿ ಎಲ್ಲ ರಾಜ್ಯಗಳಲ್ಲೂ ‘ಬಿ’ ತಂಡವನ್ನು ಸಜ್ಜುಗೊಳಿಸಿಕೊಂಡಿದೆ. ಕಾಲಕ್ರಮೇಣ ಬಿಜೆಪಿ ಈ ಪಕ್ಷಗಳನ್ನು ದುರ್ಬಲಗೊಳಿಸಿ, ಆಪೋಷನ ತೆಗೆದುಕೊಳ್ಳುತ್ತದೆ; ನಿತೀಶ್ಕುಮಾರ್ ಇದಕ್ಕೆ ಅಪವಾದ. ಪ್ರಾಂತೀಯ ಪಕ್ಷಗಳ ಸ್ಪರ್ಧೆಯಿಂದ ಕಾಂಗ್ರೆಸ್ ಮತ ಬ್ಯಾಂಕ್ ಒಡೆದು, ಬಿಜೆಪಿಗೆ ಅನುಕೂಲ ಆಗಿದೆ. ಗೆಲುವಿಗೆ ನಾಯಕತ್ವದಲ್ಲಿ ವಿಶ್ವಾಸ, ಸಾಮಾಜಿಕ ಗುಂಪುಗಳಿಗೆ ಪ್ರಾತಿನಿಧ್ಯ, ಅಭ್ಯರ್ಥಿಗಳ ಆಯ್ಕೆಯಲ್ಲಿ ಜಾಣ್ಮೆ, ಪರಿಣಾಮಕಾರಿ ಪ್ರಚಾರ, ಸೈದ್ಧಾಂತಿಕ ಸ್ಪಷ್ಟತೆ, ಸಾಂಸ್ಥಿಕ ಸಂಘಟನೆ ಮತ್ತು ಮುಖ್ಯವಾಗಿ ಹಣದ ಅಗತ್ಯವಿದೆ. ಕಾರ್ಯತಂತ್ರ ರೂಪಿಸುವಲ್ಲಿ ಕಾಂಗ್ರೆಸ್ ನಿರಂತರವಾಗಿ ಎಡವುತ್ತಿದೆ. ಅದು ದಕ್ಷಿಣ ಭಾರತದಲ್ಲಿ ಪ್ರಮುಖ ಪಕ್ಷವಾಗಿದ್ದರೂ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಆಧಿಪತ್ಯ ಮುಂದುವರಿದಿದೆ. 2024 ಮಾತ್ರವಲ್ಲ, ಆನಂತರವೂ ಬಿಜೆಪಿಗೆ ಸವಾಲೆಸೆಯುವ ಸಾಮರ್ಥ್ಯ ಪ್ರತಿಪಕ್ಷಗಳಿಗೆ ಇಲ್ಲ.
ಜನವರಿ 22ರಂದು ರಾಮಮಂದಿರದ ಉದ್ಘಾಟನೆ ಮೂಲಕ 2024ರ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭವಾಗಲಿದೆ. ಭಾಷೆ-ಸಿದ್ಧಾಂತ-ಮಾತೃ ಭೂಮಿಯ ಮಿಶ್ರಣ ‘ಹಿಂದಿ-ಹಿಂದುತ್ವ-ಹಿಂದುಸ್ಥಾನ’ ಮುನ್ನೆಲೆಗೆ ಬರುತ್ತದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ನಡೆಯಲಿದೆ. ಇದರಿಂದ ಹಿಂದಿ ಭಾಷಿಕ ಸಂಸದರ ಪ್ರಮಾಣ ಶೇ.49ಕ್ಕೆ ಹೆಚ್ಚಲಿದೆ. 16ನೇ ಹಣಕಾಸು ಆಯೋಗವು ಉತ್ತರದ ಪರ ನೀತಿ ರೂಪಿಸಬಹುದು; ಒಕ್ಕೂಟ ವ್ಯವಸ್ಥೆ ಇನ್ನಷ್ಟು ದುರ್ಬಲವಾಗಲಿದೆ. ಮೃದು ಹಿಂದುತ್ವದಿಂದ ಪ್ರತಿಪಕ್ಷಗಳಿಗೆ ಹೆಚ್ಚೇನೂ ಪ್ರಯೋಜನ ಆಗುವುದಿಲ್ಲ. 2024 ರಲ್ಲಿ ಬಿಜೆಪಿಯನ್ನು ಎದುರಿಸುವ ಸನ್ನದ್ಧತೆ ಈ ಯಾವ ಪಕ್ಷಕ್ಕೂ ಇಲ್ಲ.