ಡಿಜಿಟಲ್ ನಿರಂಕುಶ ರಾಜ್ಯಕ್ಕೆ ಮುನ್ನುಡಿ
Photo: freepik
ಚಳಿಗಾಲದ ಅಧಿವೇಶನದ ಕಡೆಯ ದಿನ ಪ್ರತಿಪಕ್ಷಗಳ ಗೈರುಹಾಜರಿಯಲ್ಲಿ ಟೆಲಿಕಾಂ ಮಸೂದೆ 2023 ಅಂಗೀಕಾರಗೊಂಡಿತು. ಬಿಜೆಪಿ ಸಂಸದ ಸುಶೀಲ್ ಮೋದಿ, ರಾಷ್ಟ್ರೀಯ ಭದ್ರತೆಗೆ ಮತ್ತು ಸ್ವಾಭಾವಿಕ ಅವಘಡಗಳ ಸಂದರ್ಭದಲ್ಲಿ ಟೆಲಿಕಾಂ ಸೇವೆಗಳನ್ನು ಸರಕಾರ ತಾತ್ಕಾಲಿಕವಾಗಿ ಸುಪರ್ದಿಗೆ ಪಡೆಯುವುದನ್ನು ಮತ್ತು ಉಪಗ್ರಹ ತರಂಗಾಂತರವನ್ನು ಹರಾಜು ಮಾಡದೆ ವಿತರಿಸುವುದನ್ನು ಸಮರ್ಥಿಸಿಕೊಂಡರು. ಟೆಲಿಕಾಂ ಟವರ್ಗಳ ಸಂಖ್ಯೆ 2014ರಲ್ಲಿ 6 ಲಕ್ಷ ಇದ್ದದ್ದು 25 ಲಕ್ಷಕ್ಕೆ ಹಾಗೂ ಬ್ರಾಡ್ಬ್ಯಾಂಡ್ ಬಳಕೆ ದಾರರ ಸಂಖ್ಯೆ 1.5 ಕೋಟಿಯಿಂದ 85 ಕೋಟಿಗೆ ಹೆಚ್ಚಳಗೊಂಡಿದೆ ಎಂದು ಸರಕಾರ ಹೇಳಿಕೊಂಡಿದೆ. 2023 ಟೆಲಿಕಾಂ ಕಾಯ್ದೆಯು ಟೆಲಿಗ್ರಾಫ್ ಕಾಯ್ದೆ 1995, ಇಂಡಿಯನ್ ವೈರ್ಲೆಸ್ ಟೆಲಿಗ್ರಫಿ ಕಾಯ್ದೆ 1933 ಹಾಗೂ ದ ಟೆಲಿಗ್ರಾಫ್(ಅನ್ಲಾಫುಲ್ ಪೊಸೆಷನ್)ಕಾಯ್ದೆ 1950ನ್ನು ಸ್ಥಳಾಂತರಿಸಿದೆ.
ಕಾಯ್ದೆಯ ಮೊದಲ ಪರಿಶಿಷ್ಟದಲ್ಲಿ ರಾಷ್ಟ್ರೀಯ ಸುರಕ್ಷತೆ, ರಕ್ಷಣೆ, ಕಾನೂನು ಜಾರಿ ಮತ್ತು ಅಪರಾಧಗಳ ತಡೆ, ಸಾರ್ವಜನಿಕ ಪ್ರಸಾರ ಸೇವೆಗಳು, ಅವಘಡ ನಿರ್ವಹಣೆ, ವೈಜ್ಞಾನಿಕ ಸಂಶೋಧನೆಗೆ ಉತ್ತೇಜನ, ಉಪಗ್ರಹಗಳ ಮೂಲಕ ಜಾಗತಿಕ ಮೊಬೈಲ್ ವೈಯಕ್ತಿಕ ಸಂವಹನ(ಸ್ಪೇಸ್ ಎಕ್ಸ್, ಭಾರ್ತಿ ಏರ್ಟೆಲ್ ಬೆಂಬಲಿತ ಒನ್ ವೆಬ್) ತರಂಗಾಂತರವನ್ನು ಹರಾಜು ಇಲ್ಲದೆ ಹಂಚುವಿಕೆ, ದೂರಸಂವಹನ ಕಾರ್ಯಜಾಲಗಳು ಮತ್ತು ಸೇವೆಗಳಿಗೆ ಅನುಮತಿ ನೀಡುವಿಕೆ, ಸಾರ್ವಜನಿಕ/ಖಾಸಗಿ ಜಾಗದಲ್ಲಿ ಟೆಲಿಕಾಂ ಮೂಲಸೌಲಭ್ಯ(ಅಂದರೆ, ಕೇಬಲ್ ಇತ್ಯಾದಿ) ಅಳವಡಿಕೆ ಹಕ್ಕನ್ನು ವ್ಯಾಖ್ಯಾನಿಸುತ್ತದೆ. ರಾಷ್ಟ್ರೀಯ ಸುರಕ್ಷತೆ ಮತ್ತು ಸಾರ್ವಜನಿಕ ಭದ್ರತೆ ಕಾಯ್ದು ಕೊಳ್ಳಲು ಸಂದೇಶಗಳಿಗೆ ತಡೆ/ನಿರ್ಬಂಧ, ಟೆಲಿಕಾಂ ಸೇವೆಗಳು/ಕಾರ್ಯಜಾಲವನ್ನು ಸ್ಥಗಿತಗೊಳಿಸುವುದು ಇತ್ಯಾದಿ ತುರ್ತು ಕ್ರಮಗಳನ್ನು ವಿವರಿಸುತ್ತದೆ. ಗ್ರಾಹಕರ ಒಪ್ಪಿಗೆ ಇಲ್ಲದೆ ನಿರ್ದಿಷ್ಟ ಸಂದೇಶಗಳನ್ನು ತಡೆಯಲು ‘ಡು ನಾಟ್ ಡಿಸ್ಟರ್ಬ್’ ರಿಜಿಸ್ಟರ್ ರಚಿಸಲು ನಿಯಮಗಳನ್ನು ರೂಪಿಸಲಾಗುತ್ತದೆ ಎಂದು ಕಾಯ್ದೆ ಹೇಳುತ್ತದೆ.
ವಿವಾದಾತ್ಮಕ ಅಂಶಗಳು
ಕಾಯ್ದೆಯಲ್ಲಿ ಹಲವು ವಿವಾದಾತ್ಮಕ ಅಂಶಗಳಿವೆ. ಅವುಗಳೆಂದರೆ,
* ಸ್ವಾಭಾವಿಕ ಅವಘಡ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ರಾಜ್ಯ/ಕೇಂದ್ರ ಸರಕಾರ ಯಾವುದೇ ದೂರಸಂಪರ್ಕ ಸೇವೆ ಅಥವಾ ಕಾರ್ಯಜಾಲವನ್ನು ತಾತ್ಕಾಲಿಕವಾಗಿ ಸುಪರ್ದಿಗೆ ತೆಗೆದುಕೊಳ್ಳಬಹುದು.
* ಕಾಯ್ದೆಯು ಇಂಟರ್ನೆಟ್ ಸ್ಥಗಿತಗೊಳಿಸುವಿಕೆ ಮತ್ತು ಸಾಮೂಹಿಕ ಸರ್ವೇಕ್ಷಣೆಗೆ ಶಾಸನಾತ್ಮಕ ಮಂಜೂರು ನೀಡುತ್ತದೆ. ವಾಟ್ಸ್ಆ್ಯಪ್, ಟೆಲಿಗ್ರಾಂನಂಥ ಓವರ್ ದ ಟಾಪ್ ಸೇವೆಗಳು ಮತ್ತು ಜಿಮೇಲ್ನಂಥ ಇಮೇಲ್ ಸೇವೆಗಳನ್ನು ‘ಟೆಲಿಸಂವಹನ’ ದ ವ್ಯಾಪ್ತಿಗೆ ತಂದಿರುವುದರಿಂದ, ಬಹುತೇಕ ಇಂಟರ್ನೆಟ್ ಆ್ಯಪ್ಗಳು ಕಾಯ್ದೆಯನ್ನು ಅನುಸರಿಸಬೇಕಾಗುತ್ತದೆ.
* ಅನುಮತಿ ಇಲ್ಲದೆ ದೂರಸಂವಹನ ಸೇವೆ ಪೂರೈಸಿದಲ್ಲಿ, 3 ವರ್ಷ ಸೆರೆವಾಸ ಇಲ್ಲವೇ ಗರಿಷ್ಠ 2 ಕೋಟಿ ರೂ. ದಂಡ ನೀಡಬೇಕಾಗುತ್ತದೆ.
* ಅಧಿಕಾರಿಯೊಬ್ಬನಿಗೆ ಸಂದೇಶವೊಂದರಿಂದ ‘ದೇಶದ ಭದ್ರತೆಗೆ ಧಕ್ಕೆಯಾಗಲಿದೆ’ ಎನ್ನಿಸಿದರೆ, ಆತ ಎಲ್ಲ ಕರೆ/ಸಂದೇಶಗಳ ದತ್ತಾಂಶವನ್ನು ಪರಿಶೀಲಿಸಬಹುದು.
* ಕೇಂದ್ರ ಸರಕಾರಕ್ಕೆ ದೂರಸಂಪರ್ಕ ಕಂಪೆನಿಗಳ ಸಂಪೂರ್ಣ ದತ್ತಾಂಶದ ಪರಿಶೀಲನೆ/ವಿಶ್ಲೇಷಣೆ ಅಧಿಕಾರ ಲಭ್ಯವಾಗುತ್ತದೆ. ಕಂಪೆನಿಗಳ ದತ್ತಾಂಶ ಪರಿಶೀಲನೆಯಿಂದ ನಮಗೇನು ಸಮಸ್ಯೆ ಎಂದು ಜನ ಸುಮ್ಮನಿರು ವಂತಿಲ್ಲ. ಏಕೆಂದರೆ, ಇಂಥ ದತ್ತಾಂಶದಲ್ಲಿ ಬಳಕೆದಾರರ ವಿವರ, ಕರೆ ದಾಖಲೆ, ಇಂಟರ್ನೆಟ್ ಪ್ರೊಟೋಕಾಲ್, ಚಂದಾದಾರಿಕೆ ವಿವರ, ಎಸ್ಸೆಮ್ಮೆಸ್, ಇಮೇಲ್ ಇತ್ಯಾದಿ ವಿವರಗಳು ಇರುತ್ತವೆ. ಈ ಮೂಲಕ ಜನರ ಫೋನ್ ಬಳಕೆ ಮೇಲೆ ಸಂಪೂರ್ಣ ನಿಗಾ ಇಡಲಾಗುತ್ತದೆ.
* ಟೆಲಿಸಂವಹನ ಸೇವಾ ಪೂರೈಕೆದಾರರು ಎಲ್ಲ ಗ್ರಾಹಕರಿಗೆ ‘ಪರಿಶೀಲಿಸಬಹುದಾದ ಬಯೋಮೆಟ್ರಿಕ್ ಆಧರಿತ ಗುರುತಿಸುವಿಕೆ’ಯನ್ನು ನಿಗದಿಗೊಳಿಸಬೇಕು. ಜೊತೆಗೆ, ಯಾವುದೇ ಗ್ರಾಹಕ ತಪ್ಪು ಮಾಹಿತಿ ನೀಡಬಾರದು ಇಲ್ಲವೇ ಮಾಹಿತಿಯನ್ನು ಮುಚ್ಚಿಡಬಾರದು. ಇದರಿಂದ ಪತ್ರಕರ್ತರು ಮತ್ತು ಸೀಟಿ ಊದುವವರು(ವಿಷಲ್ಬ್ಲೋವರ್) ಅನಾಮಧೇಯತೆಯನ್ನು ಕಾಯ್ದುಕೊಳ್ಳಲು ಆಗುವುದಿಲ್ಲ. ಒಂದು ವೇಳೆ ಗ್ರಾಹಕರು ನಿಯಮ ಉಲ್ಲಂಘಿಸಿದಲ್ಲಿ 25,000 ರೂ.ನಿಂದ 1 ಲಕ್ಷ ರೂ. ದಂಡ ತೆರಬೇಕಾಗುತ್ತದೆ.
* ಸರಕಾರಿ ಸ್ವಾಮ್ಯದ ಹಾಗೂ ಖಾಸಗಿ ಕ್ಷೇತ್ರದ ದೂರಸಂಪರ್ಕ ಕಂಪೆನಿಗಳನ್ನು ತನಗಿಷ್ಟ ಬಂದಂತೆ ಬಳಸಿಕೊಳ್ಳುವ ಅಧಿಕಾರವನ್ನು ವಿಭಾಗ 20(ಎ) ನೀಡುತ್ತದೆ. ತುರ್ತು ಸಂದರ್ಭ, ಪ್ರಾಕೃತಿಕ ವಿಕೋಪ ಸಂಭವಿಸಿದಾಗ, ದೂರಸಂಪರ್ಕ ಕಂಪೆನಿಗಳನ್ನು ಸರಕಾರ ಸುಪರ್ದಿಗೆ ತೆಗೆದುಕೊಳ್ಳಬಹುದು.
* ಸರಕಾರ ತನ್ನ ರಾಜಕೀಯ ಕಥನಕ್ಕೆ ಸೂಕ್ತವಾದ ಮತ್ತು ಉಪಯುಕ್ತ ಎನ್ನಿಸಿದ ಸಂದೇಶಗಳು ಮಾತ್ರ ಜನರಿಗೆ ತಲುಪುವಂತೆ ಮಾಡಬಹುದು. ಒಂದು ವೇಳೆ ಮಣಿಪುರದಂಥ ಘಟನೆ ಸಂಭವಿಸಿದಲ್ಲಿ, ನಿಜವಾದ ಮಾಹಿತಿ ಜನರಿಗೆ ತಲುಪುವುದಿಲ್ಲ; ಸುಳ್ಳು ಮಾಹಿತಿ ಹಂಚುವ ಸಾಧ್ಯತೆ ಇರುತ್ತದೆ ಮತ್ತು ಸರಕಾರದ ವೈಫಲ್ಯದ ಮಾಹಿತಿ ಜನರಿಗೆ ಸಿಕ್ಕುವುದಿಲ್ಲ.
* ಸರಕಾರದ ನಿರ್ಧಾರಗಳು ಸದುದ್ದೇಶದಿಂದ ಕೂಡಿದ್ದರೆ, ಅದನ್ನು ಪ್ರಶ್ನಿಸುವಂತಿಲ್ಲ ಎಂದು ಸೆಕ್ಷನ್ 51 ಹೇಳುತ್ತದೆ. ಕಾಯ್ದೆಯಿಂದ ತನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ ಅಥವಾ ತನ್ನ ಮೇಲೆ ಕಣ್ಗಾವಲು ಇಡಲಾಗಿದೆ ಎಂದು ನಾಗರಿಕನೊಬ್ಬ ನ್ಯಾಯಾಲಯದಲ್ಲಿ ಪ್ರಶ್ನಿಸಲು ಆಗುವುದಿಲ್ಲ. ಸದುದ್ದೇಶ ಎಂಬ ಪದದ ವಿವರಣೆ ನೀಡಿಲ್ಲ.
* ಸೆಕ್ಷನ್ 45ರ ಪ್ರಕಾರ, ದೂರಸಂಪರ್ಕ ಕಂಪೆನಿಗಳ ಸಾಲಕ್ಕೆ ಸರಕಾರವೇ ಖಾತರಿ ನೀಡುತ್ತದೆ.
* ಕಂಪೆನಿಗಳಿಗೆ ಉಪಗ್ರಹ ಆಧರಿತ ಮೊಬೈಲ್ ಸೇವೆಗಳನ್ನು ಒದಗಿಸಲು ಸರಕಾರವೇ ನೇರವಾಗಿ ತರಂಗಾಂತರಗಳನ್ನು ನಿಯೋಜಿಸಲಿದೆ. ಹರಾಜಿನ ಮೂಲಕ ಪಡೆಯಬೇಕಿದ್ದ ಅನಿವಾರ್ಯತೆಯನ್ನು ತೆಗೆದುಹಾಕಲಾಗಿದೆ.
ವಿವಾದಾತ್ಮಕ ಅಂಶಗಳೆಲ್ಲವೂ ಅಧ್ಯಾಯ 4ರಲ್ಲಿದ್ದು, ರಾಷ್ಟ್ರೀಯ ಸುರಕ್ಷತೆ ಮತ್ತು ಸಾರ್ವಜನಿಕರ ರಕ್ಷಣೆಯ ಹೆಸರಿನಲ್ಲಿ ಕೇಂದ್ರ/ರಾಜ್ಯ ಸರಕಾರದ ಅಧಿಕಾರಿಗಳಿಗೆ ಅಧಿಕಾರವನ್ನು ನೀಡುತ್ತವೆ. ವಿಭಾಗ 1(ಎಫ್) ಟೆಲಿಸಂವಹನದಲ್ಲಿ ದತ್ತಾಂಶ ವಿಶ್ಲೇಷಣೆ ಮತ್ತು ಸಂಕೇತ(ಎನ್ಕ್ರಿಪ್ಷನ್)ಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ‘ಮಾನಕಗಳು ಮತ್ತು ಮೌಲ್ಯಮಾಪನ ಕ್ರಮ’ಗಳನ್ನು ತೆಗೆದುಕೊಳ್ಳಲು ಅಧಿಕಾರ ನೀಡುತ್ತದೆ. ಅಧಿಕಾರಸ್ಥರ ಸರ್ವೇಕ್ಷಣೆಯಿಂದ ತಪ್ಪಿಸಿಕೊಳ್ಳಲು ಬಹುತೇಕ ಅಂತರ್ಜಾಲ ಸಂವಹನಗಳಲ್ಲಿ ಸಂಕೇತಗಳನ್ನು ಬಳಸಲಾಗುತ್ತಿದೆ. ಇಸ್ರೇಲಿನ ಕಂಪೆನಿ ಎನ್ಎಸ್ಒ ಗುಂಪಿನ ಪೆಗಾಸಸ್ ಗೂಢಚರ್ಯೆ ಸಾಧನವು 300 ಮೊಬೈಲ್ ಫೋನ್ಗಳನ್ನು ಗುರಿಯಾಗಿಸಿಕೊಂಡಿತ್ತು ಎಂಬ ವಿವಾದದ ಹಿನ್ನೆಲೆಯಲ್ಲಿ ವಾಟ್ಸ್ಆ್ಯಪ್ ಮತ್ತು ಸಿಗ್ನಲ್ನಂಥ ಸಂವಹನಗಳಿಗೆ ತಡೆ/ನಿರ್ಬಂಧಗಳನ್ನು ಪರಿಗಣಿಸಬೇಕಾಗುತ್ತದೆ. ರಾಷ್ಟ್ರೀಯ ಸುರಕ್ಷತೆ ಹೆಸರಿನಲ್ಲಿ ಮಣಿಪುರ ಮತ್ತು ಕಾಶ್ಮೀರದಲ್ಲಿ ಅಂತರ್ಜಾಲಕ್ಕೆ ಹೇರಿದ್ದ ನಿರ್ಬಂಧ/ಸೇವೆ ವಜಾಗೊಳಿಸಿರುವುದನ್ನು ಗಮನಿಸಬೇಕಾಗುತ್ತದೆ. 2015ರಲ್ಲಿ ಇಂಥ 5,000 ಸಂವಹನ ತಡೆ/ನಿರ್ಬಂಧ ಆದೇಶ ನೀಡಲಾಗಿದೆ ಎಂದು ಅಂದಿನ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಸಂಸತ್ತಿನಲ್ಲಿ ಹೇಳಿದ್ದರು. ಆನಂತರದ ಅಂಕಿಅಂಶ ಬಿಡುಗಡೆಯಾಗಿಲ್ಲ; ಬಹುಶಃ ಆಗುವುದೂ ಇಲ್ಲ. ಗ್ರಾಹಕರು ಕಾಯ್ದೆಯಿಂದ ವಾಟ್ಸ್ಆ್ಯಪ್ ಅಥವಾ ಜಿಮೇಲ್ನ ಸಂಕೇತ ಆಧರಿತ ಸಂದೇಶ ಸೇವೆಗಳಲ್ಲಿರುವ ಸುರಕ್ಷತೆ ಮತ್ತು ಗೋಪ್ಯತೆಯಿಂದ ವಂಚಿತರಾಗುತ್ತಾರೆ. ಕಾಯ್ದೆಯು ‘ರಾಷ್ಟ್ರೀಯ ಸುರಕ್ಷತೆ’ ಎಂದರೇನು ಎಂಬುದನ್ನು ವಿವರಿಸಿಲ್ಲ. ಇದು ಚರಿತ್ರೆಯಲ್ಲಿ ಅತ್ಯಂತ ದುರ್ಬಳಕೆಯಾದ, ಸರ್ವಾಧಿಕಾರಿಗಳಿಗೆ ಅತ್ಯಂತ ಪ್ರಿಯವಾದ ಪದ.
ಉದ್ಯಮದಿಂದ ಸ್ವಾಗತ
ಕಾಯ್ದೆಯು ಟೆಲಿಕಾಂ ಉದ್ಯಮದ ಪರವಾಗಿದೆ. ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಪ್ರೊವೈಡರ್ಸ್ ಅಸೋಸಿಯೇಷನ್(ಡಿಐಪಿಎ) ಮತ್ತು ಸೆಲ್ಯುಲಾರ್ ಆಪರೇಟರ್ಸ್ ಆಫ್ ಇಂಡಿಯಾ, ಕಾಯ್ದೆಯು ಸಮಾನ ನಿಯಮ-ನಿಯಂತ್ರಣಗಳನ್ನಲ್ಲದೆ, ದರದಲ್ಲಿಯೂ ಸಮಾನತೆಯನ್ನು ತರಲಿದೆ ಎಂದು ಶ್ಲಾಘಿಸಿವೆ. ದೂರಸಂಪರ್ಕ ಕಂಪೆನಿಗಳು ಶುಲ್ಕಕ್ಕೆ ಮಿತಿ ಹೇರಬೇಕು ಮತ್ತು ಖಾಸಗಿ ಆಸ್ತಿಯಲ್ಲಿ ಟೆಲಿಕಾಂ ಮೂಲಸೌಲಭ್ಯ ಅಳವಡಿಕೆಗೆ ಅನುಮತಿ ನೀಡಬೇಕೆಂದು ಬಹಳ ಹಿಂದಿನಿಂದಲೂ ಆಗ್ರಹಿಸುತ್ತಿದ್ದವು. ಉಪಗ್ರಹ ಆಧರಿತ ಸಂವಹನ ಕಾರ್ಯಜಾಲವನ್ನು ಹರಾಜಿನ ಬದಲು ಹಂಚುವುದನ್ನು ಇಂಡಿಯನ್ ಸ್ಪೇಸ್ ಅಸೋಷಿಯೇಷನ್ ಸ್ವಾಗತಿಸಿದೆ. ಆದರೆ, ಸಿಗ್ನಲ್ ಫೌಂಡೇಷನ್, ಇಂಟರ್ನೆಟ್ ಫ್ರೀಡಂ ಫೌಂಡೇಷನ್, ಇಂಟರ್ನೆಟ್ ಪ್ರೆಸ್ ಇನ್ಸ್ಟಿಟ್ಯೂಟ್ನಂಥ ಅಂತರ್ರಾಷ್ಟ್ರೀಯ ಸಂಸ್ಥೆಗಳು ಸಂದೇಶಗಳ ನಿರ್ಬಂಧ/ತಡೆಯು ವಿವೇಚನಾರಹಿತ ಸರ್ವೇಕ್ಷಣೆಗೆ ದಾರಿ ಮಾಡಿಕೊಡಲಿದೆ ಮತ್ತು ಆನ್ಲೈನ್ ಸುರಕ್ಷತೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿವೆ. ಜೊತೆಗೆ, ಬಲಿಷ್ಠ ಎನ್ಕ್ರಿಪ್ಷನ್ಗಳ ಅಭಿವೃದ್ಧಿ ಮತ್ತು ಖಾಸಗಿತನವನ್ನು ರಕ್ಷಿಸುವ ಸಂಶೋಧನೆಗಳಿಗೆ ತಡೆಯೊಡ್ಡುತ್ತವೆ ಎಂದಿವೆ. ಉದ್ಯಮಕ್ಕೆ ಇನ್ನಷ್ಟು ಸಂತಸ ತಂದಿರುವುದು- ಟೆಲಿಕಾಂ ಕಂಪೆನಿಗಳ ಸಾಲಕ್ಕೆ ಸರಕಾರವೇ ಖಾತರಿ ನೀಡುತ್ತದೆ ಎನ್ನುವ ಆಶ್ವಾಸನೆ. ಅವುಗಳ ರೊಟ್ಟಿ ತುಪ್ಪದಲ್ಲಿ ಬಿದ್ದಿದೆ.
ಹೆಸರು ಬದಲಾವಣೆಯೆಂಬ ಜಾಢ್ಯ
ಯೂನಿವರ್ಸಲ್ ಸರ್ವಿಸಸ್ ಆಬ್ಲಿಗೇಷನ್ ಫಂಡ್(ಯುಎಸ್ಒಎಫ್) ಎಂಬ ಹೆಸರನ್ನು ಟೆಲಿಕಾಂ ಮಸೂದೆಯಲ್ಲಿ ‘ಡಿಜಿಟಲ್ ಭಾರತ್ ನಿಧಿ’ ಎಂದು ಬದಲಿಸಲಾಗಿದೆ. 1985ರ ಟೆಲಿಗ್ರಾಫ್ ಕಾಯ್ದೆಯಡಿ ರಚಿಸಿದ ಯುಎಸ್ಒಎಫ್, ದೂರಸಂಪರ್ಕ ಸೇವಾ ಪೂರೈಕೆದಾರರಿಗೆ ಶುಲ್ಕ ವಿಧಿಸುವ ಮತ್ತು ಗ್ರಾಮೀಣ ಸಂಪರ್ಕ ಯೋಜನೆಗಳಿಗೆ ಅನುದಾನ ನೀಡುವ ಉದ್ದೇಶವನ್ನು ಹೊಂದಿತ್ತು. ಯುಎಸ್ಒಎಫ್ನಲ್ಲಿ ಯಾವುದೇ ರಾಚನಿಕ ಬದಲಾವಣೆ ಮಾಡದೆ, ಹೆಸರು ಮಾತ್ರ ಬದಲಿಸಲಾಗಿದೆ. ಇದು ಡಿಜಿಟಲ್ ಕಂದರ(ಗ್ರಾಮೀಣ-ನಗರ, ಬಡವರು-ಶ್ರೀಮಂತರು)ದ ಸವಾಲುಗಳನ್ನು ಪರಿಹರಿಸುವುದಿಲ್ಲ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾ ರ(ಟ್ರಾಯ್)ದ ವರದಿಗಳ ಪ್ರಕಾರ, ಟೆಲಿಕಾಂ ಬಳಕೆದಾರರ ಸಂಖ್ಯೆ ಹೆಚ್ಚುತ್ತಿಲ್ಲ; ಅಂತರ್ರಾಷ್ಟ್ರೀಯ ಡೇಟಾ ಕಾರ್ಪೊರೇಷನ್ ವರದಿ ಪ್ರಕಾರ, ಕ್ರಮಾನುಗತವಾಗಿ 2ನೇ ವರ್ಷವೂ ಸ್ಮಾರ್ಟ್ಫೋನ್ಗಳ ಮಾರಾಟ ಕಡಿಮೆಯಾಗಿದೆ. ಪ್ರಸಕ್ತ ಅಂತರ್ಜಾಲ ಬಳಕೆದಾರರ ಸಂಖ್ಯೆ 865.9 ದಶಲಕ್ಷ(ಟ್ರಾಯ್, ಡಿಸೆಂಬರ್ 2022) ಮತ್ತು ಇಂಟರ್ನೆಟ್ ಇಂಡಿಯಾ 2022 ವರದಿ ಪ್ರಕಾರ, 759 ದಶಲಕ್ಷ ಇದೆ(ಐಎಎಂಎಐ-ಕಾಂಟಾರ್ ವರದಿ). ಇಂಡಿಯಾ ಜಗತ್ತಿನ ಎರಡನೇ ದೊಡ್ಡ ಆನ್ಲೈನ್ ಮಾರುಕಟ್ಟೆ ಆಗಿದ್ದರೂ, ಅಂತರ್ಜಾಲ ಪ್ರವೇಶ ಶೇ.52 ಮಾತ್ರ ಇದೆ. ಯುಎಸ್ಒಎಫ್ನ ಹೆಸರು ಬದಲಿಸಿದ ತಕ್ಷಣ ಅಂತರ್ಜಾಲ ಸಂಪರ್ಕಗಳು ದಿಢೀರನೆ ಹೆಚ್ಚುತ್ತವೆಯೇ?
ಸಂಸದರ ಅಮಾನತು:
ಉಪಗ್ರಹ ತರಂಗಾಂತರವನ್ನು ಹರಾಜು ಮಾಡುವ ಬದಲು ಸರಕಾರವೇ ಹಂಚುವುದನ್ನು ರಾಜ್ಯಸಭೆಯಲ್ಲಿ ಸಂಸದೆ ಪ್ರಿಯಾಂಕಾ ಚತುರ್ವೇದಿ ಪ್ರಶ್ನಿಸಿದ್ದರು; ‘‘ಇದರಿಂದ ಮೊಬೈಲ್ ಉಪಗ್ರಹ ಸೇವೆಗೆ ಯಾರು ಪದಾರ್ಪಣೆ ಮಾಡುತ್ತಾರೆ ಎಂಬುದನ್ನು ಊಹಿಸಬಹುದು’’ ಎಂದು ವ್ಯಂಗ್ಯವಾಡಿದ್ದರಲ್ಲದೆ, ಆಗಸ್ಟ್ 5, 2023ರಂದು ಪ್ರಕಟವಾದ ‘ಇಸ್ರೋ ಟ್ರಾನ್ಸ್ಫರ್ಸ್ ಸಟಲೈಟ್ ಬಸ್ ಟೆಕ್ನಾಲಜಿ ಟು ಅದಾನಿ ಗ್ರೂಪ್ಸ್ ಆಲ್ಫಾ ಡಿಸೈನ್ ಟೆಕ್ನಾ ಲಜೀಸ್’ ಲೇಖನವನ್ನು ಲಿಂಕ್ ಮಾಡಿದ್ದರು. ಆಯ್ದ ಖಾಸಗಿ ಸಂಸ್ಥೆಗಳಿಗೋಸ್ಕರ ರೂಪಿಸಿದ ಈ ಕಾಯ್ದೆಯಿಂದ ಜನರು ಮತ್ತು ಮೇಡ್ ಇನ್ ಇಂಡಿಯಾ ಉಪಕ್ರಮಕ್ಕೆ ಯಾವ ಪ್ರಯೋಜನವಿದೆ? ಟೆಲಿಸಂವಹನ ಸೇವೆ ಪೂರೈಕೆದಾರರು(ವಾಟ್ಸ್ಆ್ಯಪ್, ಸಿಗ್ನಲ್ ಇತ್ಯಾದಿ) ‘ಪರಿಶೀಲಿಸಬಹುದಾದ ಬಯೋಮೆಟ್ರಿಕ್ ಆಧರಿತ ಗುರುತಿಸುವಿಕೆ’ಯನ್ನು ನಿಗದಿಗೊಳಿಸಬೇಕು ಎಂದು ಕಾನೂನು ಹೇಳುತ್ತದೆ. ಸಂಸದ ಗೌರವ್ ಗೊಗೋಯಿ ಸಭಾಧ್ಯಕ್ಷರಿಗೆ ಬರೆದ ಪತ್ರದಲ್ಲಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೆ, ಕಾಯ್ದೆಯನ್ನು ಸ್ಥಾಯಿ ಸಮಿತಿಗೆ ಕಳಿಸಬೇಕೆಂದು ಕೋರಿದ್ದರು(ಡಿಸೆಂಬರ್ 19, 2023). ಆದರೆ, ಪ್ರಿಯಾಂಕಾ ಚತುರ್ವೇದಿ ಅಥವಾ ಗೊಗೋಯಿ ಅವರಿಗೆ ಸಂಸತ್ತಿನಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಇಲ್ಲವೇ ಕಾಯ್ದೆಯ ವಿರುದ್ಧ ಮತ ಚಲಾಯಿಸಲು ಅವಕಾಶವೇ ಸಿಗಲಿಲ್ಲ. ಏಕೆಂದರೆ, ಆಡಳಿತ ಪಕ್ಷ 2/3ರಷ್ಟು ಸಂಸದರನ್ನು ಸಾರಾಸಗಟಾಗಿ ಅಮಾನತುಗೊಳಿಸಿ, ಕಾಯ್ದೆಗಳನ್ನು ಅಂಗೀಕರಿಸಿತು.
ಈ ಕಾನೂನು ಡಿಜಿಟಲ್ ನಿರಂಕುಶ ರಾಜ್ಯದ ಸ್ಥಾಪನೆಯ ಇನ್ನೊಂದು ಹೆಜ್ಜೆ. ಜನಸಾಮಾನ್ಯರು ಆಳುವವರನ್ನು ಅಸಂತೋಷಗೊಳಿಸುವ ಪ್ರಶ್ನೆಗಳನ್ನು ಕೇಳಬಾರದು ಎಂದು ಆಗಾಗ ಎಚ್ಚರಿಸಲಾಗುತ್ತದೆ. ಸಿರಿಧಾನ್ಯ ಸೇವಿಸುತ್ತ ಮತ್ತು ಯೋಗಾಭ್ಯಾಸ ಮಾಡುತ್ತ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸೂಚನೆ ನೀಡಲಾಗುತ್ತದೆ. ಭಾರತವು ಆರ್ಥಿಕ ಶಕ್ತಿಯಾಗಿ ಹೊಮ್ಮುತ್ತಿದೆ ಎಂದು ಅಫೀಮು ತಿನ್ನಿಸುತ್ತಲೇ, ಸಂವಿಧಾನವನ್ನು ಬದಿಗೊತ್ತಲಾಗುತ್ತಿದೆ. ದೇಶ ಸಂವಿಧಾನದಿಂದ ಇನ್ನಷ್ಟು, ಮತ್ತಷ್ಟು ದೂರ ಸರಿಯುತ್ತಿದೆ.