ಭೂಮಿ ಸ್ವಾಧೀನ ವಿರುದ್ಧ ಹೋರಾಟಕ್ಕೆ ಸಾವಿರ ದಿನ
ರೈತ ಮುಖಂಡ ಜಗಜೀತ್ ಸಿಂಗ್ ದಲ್ಲೇವಾಲ್ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ಸೇರಿದಂತೆ ನಾನಾ ಕಾಯ್ದೆಗಳ ಜಾರಿಗೆ ಆಗ್ರಹಿಸಿ ನವೆಂಬರ್ 26, 2024ರಿಂದ ನಿರಶನ ನಡೆಸುತ್ತಿದ್ದಾರೆ. ಅವರನ್ನು ಸುಪ್ರೀಂ ಕೋರ್ಟ್ ನೇಮಿಸಿದ ಉನ್ನತಾಧಿಕಾರ ಸಮಿತಿ ಭೇಟಿ ಮಾಡಿ, ವೈದ್ಯಕೀಯ ನೆರವು ಪಡೆಯಲು ಕೋರಿದೆ. ಆದರೆ, ಅವರು ನಿರಾಕರಿಸಿದ್ದು, ಅವರ ಆರೋಗ್ಯ ಹದಗೆಡುತ್ತಿದೆ. ಇದೇ ಹೊತ್ತಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಗೆ ಭೂಮಿ ಕೊಡುವುದಿಲ್ಲ ಎಂದು ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ರೈತರು ನಡೆಸುತ್ತಿರುವ ಧರಣಿ 1,000 ದಿನವನ್ನು ದಾಟಿದೆ. ಸರಕಾರ ರೈತರ ಪ್ರತಿಭಟನೆಗೆ ಸೊಪ್ಪು ಹಾಕಿಲ್ಲ. ಮತ್ತೊಂದೆಡೆ, ಸರಕಾರ 2016ರಲ್ಲಿ ಕೈಬಿಟ್ಟಿದ್ದ ಹೊಸಕೋಟೆಯ ನಂದಗುಡಿಯಲ್ಲಿನ ಟೌನ್‌ಶಿಪ್ ಯೋಜನೆ ಮರುಜೀವ ಪಡೆದುಕೊಂಡಿದೆ.
ಕೈಗಾರಿಕೆ ಅಭಿವೃದ್ಧಿ ಇಲ್ಲವೇ ಟೌನ್‌ಶಿಪ್ ನಿರ್ಮಾಣಕ್ಕೆ ಫಲವತ್ತಾದ ಕೃಷಿ ಭೂಮಿಯ ಸ್ವಾಧೀನ ಸರಿಯೇ? ಅಲ್ಲವೆಂದರೆ, ನಮಗೆ ಅಭಿವೃದ್ಧಿ ಬೇಡವೇ? ಕೈಗಾರಿಕೆಗಳಿಗೆ ಭೂಮಿ ಕೊಡದಿದ್ದರೆ, ಅವು ಬೇರೆ ರಾಜ್ಯಗಳ ಪಾಲಾಗುವುದಿಲ್ಲವೇ ಮತ್ತು ಇದರಿಂದ ರಾಜ್ಯದ ಪ್ರಗತಿಗೆ ಹಿನ್ನಡೆ ಆಗುವುದಿಲ್ಲವೇ? ಭೂಮಿ ಇಲ್ಲದೆ ಕೈಗಾರಿಕೆಗಳ ಸ್ಥಾಪನೆ ಹೇಗೆ ಸಾಧ್ಯ? ಕೈಗಾರಿಕೆಗಳನ್ನು ಬೆಂಗಳೂರಿನ ಸುತ್ತಮುತ್ತ ಮಾತ್ರ ಸ್ಥಾಪಿಸಬೇಕೆ? ರಾಜ್ಯದೆಲ್ಲೆಡೆ ವಿಕೇಂದ್ರೀಕರಿಸಬಾರದೇಕೆ? ವಿಕೇಂದ್ರೀಕರಣಕ್ಕೆ ಇರುವ ಸವಾಲುಗಳು ಏನು? ಅಭಿವೃದ್ಧಿಗೆ ಸಾಮಾನ್ಯ ಜನರು ಹಾಗೂ ರೈತರು ಮಾತ್ರ ಏಕೆ ಬೆಲೆ ತೆರಬೇಕು? ಎಂಬೆಲ್ಲ ಪ್ರಶ್ನೆಗಳು ಮೂಡುತ್ತವೆ. ಇದೊಂದು ಸಂಕೀರ್ಣ ಸಮಸ್ಯೆಯಾಗಿದ್ದು, ಪರಿಹಾರ ಕಷ್ಟಕರವಾಗಿದೆ.
ಕೆಐಎಡಿಬಿ ಹರಳೂರು ಕೈಗಾರಿಕಾ ಪ್ರದೇಶಾಭಿವೃದ್ಧಿ ಯೋಜನೆ(ಹಂತ 1)ಗೆ ಭೂಸ್ವಾಧೀನಕ್ಕೆ ಆಗಸ್ಟ್ 30, 2021ರಲ್ಲಿ ಆರಂಭಿಕ ಅಧಿಸೂಚನೆ ಹೊರಡಿಸಿತು. ಪಾಳ್ಯ, ಹರಳೂರು, ಪೋಲನಹಳ್ಳಿ, ಗೋಕರೆ ಬಚ್ಚೇನಹಳ್ಳಿ, ನಲ್ಲೂರು, ಮಲ್ಲೇಪುರ, ನಲ್ಲಪ್ಪನಹಳ್ಳಿ, ಚೀಮಾಚನಹಳ್ಳಿ, ಮಟ್ಟಬರಲು, ಮುದ್ದೇನಹಳ್ಳಿ, ಚನ್ನರಾಯಪಟ್ಟಣ, ಎಸ್. ತೆಲ್ಲೋಹಳ್ಳಿ ಹಾಗೂ ಹ್ಯಾಡಾಳದ 1,777 ಎಕರೆ ಸ್ವಾಧೀನಕ್ಕೆ ಮುಂದಾಯಿತು. ಈ ಭೂಮಿಯನ್ನು 700 ರೈತ ಕುಟುಂಬಗಳು ಹಾಗೂ 6,000ಕ್ಕೂ ಅಧಿಕ ಕೃಷಿ ಕಾರ್ಮಿಕರು ಆಧರಿಸಿದ್ದಾರೆ. ಇದರಲ್ಲಿ 475-500 ಎಕರೆ ಭೂಮಿ ದಲಿತ ಸಮುದಾಯಗಳಿಗೆ ಸೇರಿದೆ. ರಾಗಿ, ದ್ರಾಕ್ಷಿ ಮತ್ತು ಮಾವು, ಪಶು ಸಂಗೋಪನೆ ಹಾಗೂ ರೇಷ್ಮೆ ಕೃಷಿ ಇಲ್ಲಿನ ಪ್ರಮುಖ ಚಟುವಟಿಕೆಗಳು. 13 ಹಳ್ಳಿಗಳಲ್ಲಿ ಪ್ರತಿದಿನ 8,000 ಲೀಟರ್ ಹಾಲು ಸಂಗ್ರಹವಾಗುತ್ತಿದೆ.
ತಮ್ಮದು ದಟ್ಟ ಕೃಷಿ ಪಟ್ಟಿಯಲ್ಲಿರುವ, ಆಹಾರ ಧಾನ್ಯ ಮತ್ತು ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ಕೃಷಿ ಭೂಮಿ. ಪಶುಸಂಗೋಪನೆಗೂ ಬಳಕೆಯಾಗುತ್ತಿದೆ ಎಂದು 1,292 ಎಕರೆ ಜಮೀನಿನ ಮಾಲಕರು ಭೂಸ್ವಾಧೀನಕ್ಕೆ ಆಕ್ಷೇಪ ಅರ್ಜಿ ಸಲ್ಲಿಸಿದ್ದಾರೆ. ಸ್ಥಳೀಯ ರೈತರು ನಡೆಸಿದ ಸಮೀಕ್ಷೆ ಪ್ರಕಾರ, 1,292 ಎಕರೆ ಭೂಮಿಯಲ್ಲಿ ಶೇ.42ರಷ್ಟು ಸರಕಾರದಿಂದ ಭೂರಹಿತರು-ರೈತರಿಗೆ ಮಂಜೂರಾದ ಜಮೀನು ಹಾಗೂ ಶೇ.58 ಪಿತ್ರಾರ್ಜಿತ. ಶೇ.50ರಷ್ಟು ಮಳೆ ಆಶ್ರಿತ, ಶೇ.33 ಕೊಳವೆ ಬಾವಿಗಳು ಹಾಗೂ ಶೇ.17 ಇನ್ನಿತರ ಮೂಲಗಳಿಂದ ನೀರು ಪಡೆಯುತ್ತಿವೆ. ಶೇ.49ರಷ್ಟು ಭೂಮಿಯಲ್ಲಿ ರಾಗಿ, ಶೇ.7ರಲ್ಲಿ ದ್ರಾಕ್ಷಿ/ದಾಳಿಂಬೆ, ಶೇ.23ರಲ್ಲಿ ಮಾವು, ಹುಣಿಸೆ ಹಾಗೂ ಗೋಡಂಬಿ ಮತ್ತು ಉಳಿಕೆ ಭೂಮಿಯಲ್ಲಿ ಹೂವು-ತರಕಾರಿ ಬೆಳೆಯಲಾಗುತ್ತಿದೆ.
ರೈತರು ಎಪ್ರಿಲ್ 22, 2022ರಲ್ಲಿ ಧರಣಿ ಆರಂಭಿಸಿದರು. ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅದೇ ವರ್ಷ ಭೇಟಿ ನೀಡಿದ್ದರು. ಗ್ರಾಮಸ್ಥರು ಎಪ್ರಿಲ್ 26, 2024ರಲ್ಲಿ ನಡೆದ ಲೋಕಸಭೆ ಚುನಾವಣೆಗೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದರು. ಆದರೆ, ಚಿಕ್ಕಬಳ್ಳಾಪುರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದರಿಂದ ಮತ ಚಲಾಯಿಸಿದರು; ಆದರೆ, ಪ್ರತಿಭಟನೆ ಮುಂದುವರಿಸಿದರು. ಅಕ್ಟೋಬರ್ 2024ರಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾ ಬಳಿಕ ರೈತರ ಬೇಡಿಕೆಯನ್ನು ಪರಿಶೀಲಿಸುವುದಾಗಿ ಹೇಳಿದ್ದರು. ರೈತರು ವಾಣಿಜ್ಯ, ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರನ್ನೂ ಭೇಟಿ ಮಾಡಿದ್ದಾರೆ. ಆದರೆ, ಆಶ್ವಾಸನೆಗಳೆಲ್ಲ ಅಂತೆಯೇ ಉಳಿದುಕೊಂಡವು.
ನಂದಗುಡಿ ಟೌನ್‌ಶಿಪ್ ಪ್ರಸ್ತಾವನೆ
ಹೊಸಕೋಟೆಯ ನಂದಗುಡಿಯಲ್ಲಿ 2006ರಲ್ಲಿ ಟೌನ್‌ಶಿಪ್ ಯೋಜನೆಯನ್ನು ಸರಕಾರ ಉದ್ದೇಶಿಸಿತ್ತು. ರೈತರ ಪ್ರತಿರೋಧದಿಂದ 2016ರಲ್ಲಿ ಯೋಜನೆಯನ್ನು ಕೈಬಿಟ್ಟಿತು. ಆದರೆ, ಈಗ ಯೋಜನೆ ಮರುಜೀವ ಪಡೆದುಕೊಂಡಿದೆ. ನಂದಗುಡಿ ಟೌನ್‌ಶಿಪ್ ಮೂರು ಸಮಗ್ರ ಉಪಗ್ರಹ ಟೌನ್‌ಶಿಪ್‌ಗಳ ಯೋಜನೆಯ ಭಾಗವಾಗಿದೆ(ಬಿಡದಿ ಮತ್ತು ಸೋಲೂರು ಇನ್ನೆರಡು ಸ್ಥಳಗಳು). ಉಪಗ್ರಹ ಟೌನ್‌ಶಿಪ್ ವೃತ್ತ ರಸ್ತೆ(ಎಸ್‌ಟಿಆರ್‌ಆರ್) ಅಕ್ಕಪಕ್ಕದಲ್ಲಿ ಈ ಟೌನ್‌ಶಿಪ್‌ಗಳನ್ನು ಯೋಜಿಸಲಾಗಿದೆ.
36 ಗ್ರಾಮಗಳ 18,500 ಎಕರೆ ಭೂಮಿ ಸ್ವಾಧೀನಕ್ಕೆ ಸರಕಾರ ಯೋಜಿಸಿದೆ. ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ಬಿಎಂಆರ್‌ಡಿಎ) ಸರಕಾರಕ್ಕೆ ಪ್ರಸ್ತಾವ ಕಳಿಸಿದ್ದು, ಸಂಪುಟ ಸಭೆಯಲ್ಲಿ ಒಪ್ಪಿಗೆ ಬಳಿಕ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಿದೆ. 2024ರಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಂದಗುಡಿಗೆ ಭೇಟಿ ನೀಡಿದ್ದರು. ಆನಂತರ ಶಾಸಕ ಶರತ್ ಬಚ್ಚೇಗೌಡ ಅವರು ರೈತರ ಸಭೆ ನಡೆಸಿದ್ದರು. ರೈತರ ಪ್ರತಿರೋಧದ ಹಿನ್ನೆಲೆಯಲ್ಲಿ ತಾವು ಉಪಮುಖ್ಯಮಂತ್ರಿ ಜೊತೆಗೆ ಮಾತನ್ನಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಅದಕ್ಕೆ ಮುನ್ನವೇ ಪ್ರಸ್ತಾವವನ್ನು ಸಂಪುಟದ ಒಪ್ಪಿಗೆಗೆ ರವಾನಿಸಲಾಗಿದೆ. ನವೆಂಬರ್ 4, 2024ರಲ್ಲಿ ಯೋಜನೆಯನ್ನು ವಿರೋಧಿಸಿ ರೈತರು ನಂದಗುಡಿಯಲ್ಲಿ ಪ್ರತಿಭಟನೆ ನಡೆಸಿದರು.
ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಬಿಜೆಪಿ-ಜೆಡಿಎಸ್ ಸರಕಾರವು 2006ರಲ್ಲಿ ಆರಂಭಿಕ ಅಧಿಸೂಚನೆ ಹೊರಡಿಸಿತ್ತು. 2007ರಲ್ಲಿ ಕೇಂದ್ರ ಸರಕಾರವು ವಿಶೇಷ ವಿತ್ತ ವಲಯ(ಎಸ್‌ಇಝಡ್) ಸ್ಥಾಪನೆಯನ್ನು ಪ್ರಸ್ತಾವಿಸಿತ್ತು. 12,500 ಎಕರೆ ಭೂಮಿ ಅಗತ್ಯವಿತ್ತು. ಕೇಂದ್ರ ಸರಕಾರ ಶೇ.79ರಷ್ಟು ಭೂಮಿ ಖರೀದಿಸಿದಲ್ಲಿ ಉಳಿಕೆ ಶೇ.30 ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ರಾಜ್ಯ ಸರಕಾರ ತಿಳಿಸಿತ್ತು. ಆದರೆ, ಕೃಷಿಕರು ಮತ್ತು ಭೂಮಾಲಕರ ಪ್ರತಿಭಟನೆಯಿಂದ ಯೋಜನೆ ಮುಂದುವರಿಯಲಿಲ್ಲ. ಆದರೆ, ಈ ಯೋಜನೆಗೆ ರಾಜ್ಯ ಸರಕಾರ ಈಗಾಗಲೇ ತಾತ್ವಿಕ ಒಪ್ಪಂದ ನೀಡಿದೆ.
ಕೆಐಎಡಿಬಿ ಮತ್ತು ಭೂಮಿ ಸ್ವಾಧೀನ
‘ಹರಳೂರು ಯೋಜನೆಯು ದೇವನಹಳ್ಳಿ ಕೈಗಾರಿಕಾ ಪ್ರದೇಶದ ವಿಸ್ತರಣೆ. ಕೈಗಾರಿಕೆಗಳನ್ನು ಆರಂಭಿಸಲು ಇದು ಪ್ರಶಸ್ತ ಜಾಗ,’ ಎಂದು ಮಂಡಳಿ ಹೇಳುತ್ತದೆ. ಆದರೆ, ಕೈಗಾರಿಕೆಗಳಿಗೆ ಭೂಸ್ವಾಧೀನ ಪಡಿಸಿಕೊಳ್ಳಲು ಭೂಮಾಲಕರ ಸಮ್ಮತಿ ಅಗತ್ಯ ಎಂದು ಭೂಸ್ವಾಧೀನ, ಪುನರ್ವಸತಿ ಹಾಗೂ ಪುನರ್‌ಸ್ಥಾಪನೆಯಲ್ಲಿ ನ್ಯಾಯಬದ್ಧ ಪರಿಹಾರ ಮತ್ತು ಪಾರದರ್ಶಕತೆ ಕಾಯ್ದೆ 2013 ಹೇಳುತ್ತದೆ. ಯೋಜನೆ ಖಾಸಗಿ-ಸಾರ್ವಜನಿಕ ಸಹ ಯೋಗದಲ್ಲಿದ್ದರೆ, ಶೇ.70ರಷ್ಟು ಭೂಮಾಲಕರ ಸಮ್ಮತಿ ಅಗತ್ಯ. ಭೂಸ್ವಾಧೀನಕ್ಕೆ ತೀವ್ರ ಪ್ರತಿರೋಧವಿದ್ದರೂ, ಸರಕಾರ ಕಡೆಗಣಿಸಿದೆ ಎಂದು ರೈತರು ದೂರುತ್ತಾರೆ.
‘ಇದು ಮಳೆಯಾಶ್ರಿತ ಪ್ರದೇಶ. ಯಾವುದೇ ಕೃಷಿ ಚಟುವಟಿಕೆಗಳು ನಡೆಯುತ್ತಿಲ್ಲ. ಕೆಲವು ಗ್ರಾಮಸ್ಥರು ಜಮೀನು ನೀಡಲು ಸಿದ್ಧವಿದ್ದಾರೆ,’ ಎಂದು ಮಂಡಳಿ ಹೇಳುತ್ತದೆ. ಇದನ್ನು ಗ್ರಾಮಸ್ಥರು ಒಪ್ಪುವುದಿಲ್ಲ. ‘ಆಮಿಷದ ಹಿನ್ನೆಲೆಯಲ್ಲಿ ಕೆಲವರು ಭೂಮಿ ನೀಡಲು ಮುಂದಾಗಿರಬಹುದು. ಯೋಜನೆಯನ್ನು ರಿಯಲ್ ಎಸ್ಟೇಟ್ ಏಜೆಂಟರು ಮುಂದೊತ್ತುತ್ತಿದ್ದಾರೆ. ರೈತರಲ್ಲಿ ಒಡಕು ತರಲು ಪ್ರಯತ್ನಿಸುತ್ತಿದ್ದಾರೆ’ ಎಂದು ಅವರು ದೂರುತ್ತಾರೆ. ಸರಕಾರಿ ಸಂಸ್ಥೆ(ಬಿಡಿಎ, ಕೆಐಎಡಿಬಿ, ಬಿಎಂಆರ್‌ಡಿಎ ಇತ್ಯಾದಿ)ಗಳ ಭೂಸ್ವಾಧೀನ ಪ್ರಕ್ರಿಯೆಯು ಒಂದು ಸಿದ್ಧಮಾದರಿಯನ್ನು ಅನುಸರಿಸುತ್ತದೆ. ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸುವ ಮುನ್ನವೇ ಈ ಕುರಿತು ಮಾಹಿತಿ ರಿಯಲ್ ಎಸ್ಟೇಟ್ ಕುಳಗಳಿಗೆ ಗೊತ್ತಾಗಿರುತ್ತದೆ. ಕಣಕ್ಕೆ ಇಳಿಯುವ ಅವರು ರೈತರೊಟ್ಟಿಗೆ ವ್ಯವಹಾರ ಕುದುರಿಸಿ, ಮುಂಗಡ ಪಾವತಿಸಿ, ಮಾರಾಟ ಒಪ್ಪಂದ(ಸೇಲ್ ಡೀಡ್) ಮಾಡಿಕೊಳ್ಳುತ್ತಾರೆ. ಶತಾಯಗತಾಯ ಪ್ರಯತ್ನಿಸಿ, ಯೋಜನೆ ಆಗುವಂತೆ ನೋಡಿಕೊಳ್ಳುತ್ತಾರೆ. ಪರಿಹಾರ ಬಂದ ಬಳಿಕ ಭೂಮಾಲಕರಿಗೆ ಬಾಕಿ ಪಾವತಿ ಮಾಡುತ್ತಾರೆ.
ಇನ್ನೊಂದು ಕೂಟ ಏಜೆಂಟರದ್ದು. ರೈತರು ಪರಿಹಾರ ಪಡೆಯಲು 20ಕ್ಕೂ ಅಧಿಕ ದಾಖಲೆಗಳನ್ನು ನೀಡಬೇಕಾಗುತ್ತದೆ. ವಿವಿಧ ಇಲಾಖೆಗಳಿಂದ ಈ ದಾಖಲೆಗಳನ್ನು ಪಡೆಯುವುದು ಅಷ್ಟು ಸುಲಭವಲ್ಲ. ಆದರೆ, ಏಜೆಂಟರು ಸರಕಾರದ ಇಲಾಖೆಗಳಲ್ಲಿ ಹೊಂದಿರುವ ಸಂಪರ್ಕಗಳಿಂದಾಗಿ, ಬೇಗ ದಾಖಲೆಗಳು ಲಭ್ಯವಾಗುತ್ತವೆ. ರೈತರು ಏಜೆಂಟರಿಗೆ ದೊಡ್ಡ ಮೊತ್ತದ ಕಮಿಷನ್ ನೀಡಬೇಕಾಗುತ್ತದೆ. ಆದರೆ, ಮಂಡಳಿಯಲ್ಲಿ ಏಜೆಂಟರಿಗೆ ಅವಕಾಶವಿಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತದೆ ಎಂದು ಕೆಐಎಡಿಬಿ ಹೇಳುತ್ತದೆ.
ಭೂಸ್ವಾಧೀನ ಪ್ರಕ್ರಿಯೆ ಹೀಗಿರಲಿದೆ; ಕೆಐಎಡಿಬಿ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸುತ್ತದೆ. ಬಳಿಕ ನಿಯಮ 28/2ರಡಿ ರೈತರಿಗೆ ನೋಟಿಸ್ ನೀಡುತ್ತದೆ. ರೈತರು ಭೂಮಿಯನ್ನು ಈಗಾಗಲೇ ಪರಿವರ್ತಿಸಿ, ಅಭಿವೃದ್ಧಿಪಡಿಸಿದ್ದರೆ ಇಲ್ಲವೇ ಮನೆ ನಿರ್ಮಿಸಿದ್ದಲ್ಲಿ ಆಕ್ಷೇಪ ಸಲ್ಲಿಸಬಹುದು. ಆದರೆ, ಅಂತಿಮ ನಿರ್ಧಾರ ಮಂಡಳಿಯದು. ಮಂಡಳಿ ಪರಿಹಾರ ನೀಡಲು ಮೂರು ವಿಧಾನ ಅನುಸರಿಸುತ್ತದೆ. ಮೊದಲಿಗೆ, ಜಿಲ್ಲಾಧಿಕಾರಿ ದರ ನಿಗದಿ ಮಾಡುತ್ತಾರೆ. ಅದು ಒಪ್ಪಿತವಾದಲ್ಲಿ ರೈತರು ಒಪ್ಪಂದಕ್ಕೆ ಸಹಿ ಹಾಕಬಹುದು. ಬಳಿಕ ಅವರಿಗೆ ಪರಿಹಾರ ದೊರೆಯುತ್ತದೆ. 2ನೇ ವಿಧದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಪರಿಹಾರ ನಿಗದಿಪಡಿಸುತ್ತಾರೆ. ಎಪ್ರಿಲ್ 2022ರಲ್ಲಿ ಜಾರಿಗೊಂಡಿರುವ ಹೊಸ ಕಾನೂನಿನ ಪ್ರಕಾರ ಪರಿಹಾರ ನಿಗದಿಯಾಗುತ್ತದೆ. ಇದು ಒಪ್ಪಿಗೆ ಆಗದಿದ್ದಲ್ಲಿ ರೈತರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. 3ನೇ ವಿಧದಲ್ಲಿ ರೈತರಿಂದ ಸ್ವಾಧೀನಪಡಿಸಿಕೊಂಡ ಪ್ರತೀ ಎಕರೆ ಭೂಮಿಗೆ ಶೇ.40ರಷ್ಟು ಅಭಿವೃದ್ಧಿಪಡಿಸಿದ ಭೂಮಿ ನೀಡಲಾಗುತ್ತದೆ.
ಕೆಐಎಡಿಬಿ ಒಟ್ಟಾರೆ ಸಾಧನೆ ಏನಿದೆ?
ಮಂಡಳಿ 30 ಜಿಲ್ಲೆಗಳಲ್ಲಿ 173 ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ 5 ವಿಶೇಷ ವಿತ್ತ ವಲಯ(ಹಾಸನದಲ್ಲಿ ವಸ್ತ್ರೋದ್ಯಮ-ಔಷಧ, ಮಂಗಳೂರು ಹಾಗೂ ಧಾರವಾಡ ಜಿಲ್ಲೆಯ ಗಮನಗಟ್ಟಿಯಲ್ಲಿ ಮಾಹಿತಿ ತಂತ್ರಜ್ಞಾನ/ ಐಟಿಇಎಸ್ ಮತ್ತು ದೇವನಹಳ್ಳಿಯಲ್ಲಿ ರಕ್ಷಣೆ ಹಾಗೂ ಏರೋಸ್ಪೇಸ್ ಸಂಬಂಧಿತ ಎಸ್‌ಇಝಡ್); ಧಾರವಾಡ, ಹಾಸನ ಮತ್ತು ರಾಯಚೂರಿನಲ್ಲಿ ಅಭಿವೃದ್ಧಿ ಕೇಂದ್ರಗಳು; ಸಮಗ್ರ ಅಭಿವೃದ್ಧಿ ಕೇಂದ್ರಗಳು(ಬೆಳಗಾವಿಯಲ್ಲಿ ಆಟೋ ಸಂಕೀರ್ಣ, ಮಾಲೂರು 1,2,3 ಮತ್ತು 4ನೇ ಹಂತ, ತುಮಕೂರಿನ ನರಸಾಪುರ/ಜಕ್ಕಸಂದ್ರ ಹಾಗೂ ಕೋಲಾರ ಜಿಲ್ಲೆಯ ವೇಮಗಲ್, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು(1 ಮತ್ತು 2ನೇ ಹಂತ) ಹಾಗೂ ಮಾಸ್ತೇನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶ; ದೊಡ್ಡಬಳ್ಳಾಪುರದ ಓಬದೇನಹಳ್ಳಿಯಲ್ಲಿ ಅಪಾರೆಲ್ ಪಾರ್ಕ್; ಚಿಕ್ಕಮಗಳೂರಿನ ಅಂಬಳೆ, ಬಳ್ಳಾರಿಯ ಮುಂಡರ್ಗಿ ಹಾಗೂ ಗದಗದ ನರಸಾಪುರದಲ್ಲಿ ಮಿನಿ ಪ್ರಗತಿ ಕೇಂದ್ರಗಳು; ಬೆಂಗಳೂರು ಮತ್ತು ಮಂಗಳೂರಿನಲ್ಲಿ ರಫ್ತು ಉತ್ತೇಜನ ಕೈಗಾರಿಕಾ ಪಾರ್ಕ್‌ಗಳು; ಬಾಗಲಕೋಟೆ, ಮಾಲೂರು, ಜೇವರ್ಗಿ ಹಾಗೂ ಹಿರಿಯೂರಿನಲ್ಲಿ ಆಗ್ರೋಟೆಕ್ ಮತ್ತು ಫುಡ್ ಪಾರ್ಕ್ ಹಾಗೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ ಮತ್ತು ಬೆಂಗಳೂರಿನ ‘ನಮ್ಮ ಮೆಟ್ರೋ’ ನಿರ್ಮಾಣದಲ್ಲಿ ಕೆಐಎಡಿಬಿ ಕೈ ಜೋಡಿಸಿದೆ.
ಮಂಡಳಿ ಈವರೆಗೆ ಸ್ವಾಧೀನಪಡಿಸಿಕೊಂಡ ಭೂಮಿ ಎಷ್ಟು? ಇವುಗಳಲ್ಲಿ ಕೈಗಾರಿಕೆ ಸ್ಥಾಪನೆ ಆಗಿದೆಯೇ? ಈ ಕೈಗಾರಿಕೆಗಳ ಮಾಲಕರಲ್ಲಿ ಸ್ಥಳೀಯರು ಎಷ್ಟು ಮತ್ತು ಹೊರಗಿನವರು ಎಷ್ಟು ಮಂದಿ ಇದ್ದಾರೆ? ಇವು ಎಷ್ಟು ಮಂದಿ ಸ್ಥಳೀಯರಿಗೆ ಉದ್ಯೋಗ ನೀಡಿವೆ? ಸ್ಥಳೀಯ ಆರ್ಥಿಕತೆಗೆ ಈ ಕೈಗಾರಿಕೆಗಳ ಕೊಡುಗೆ ಏನು? ಜಮೀನು ನೀಡಿದ ರೈತರಿಗೆ ಪರಿಹಾರ ನೀಡಲಾಗಿದೆಯೇ? ಅವರ ಆರ್ಥಿಕ-ಸಾಮಾಜಿಕ ಸ್ಥಿತಿಗತಿ ಹೇಗಿದೆ?(ಮೊದಲಿನಂತೆ ಇದೆ/ಮೊದಲಿಗಿಂತ ಉತ್ತಮವಾಗಿದೆ/ಕೆಟ್ಟದಾಗಿದೆ), ಈ ಕೈಗಾರಿಕೆಗಳಿಂದ ರಾಜ್ಯದ ಬೊಕ್ಕಸಕ್ಕೆ ಬಂದ ಆದಾಯವೇನು?- ಇತ್ಯಾದಿ ಕುರಿತು ಸಾಮಾಜಿಕ/ಆರ್ಥಿಕ ಮೌಲ್ಯಮಾಪನ ಆಗಬೇಕಿದೆ. ದೇವನಹಳ್ಳಿಯ ವಿಮಾನನಿಲ್ದಾಣಕ್ಕೆ ಜಮೀನು ನೀಡಿದವರು ಈಗ ಹೇಗಿದ್ದಾರೆ? ಅವರಲ್ಲಿ ಕೆಲ ಜಾಣರು ಬೇರೆಡೆ ಜಮೀನು ಖರೀದಿಸಿ, ನೆಮ್ಮದಿಯಾಗಿದ್ದಾರೆ. ಆದರೆ, ಅಷ್ಟೊಂದು ಹಣ ಒಮ್ಮೆಲೇ ನೋಡದೆ ಇದ್ದವರು ಬೇಕಾಬಿಟ್ಟಿ ಖರ್ಚು ಮಾಡಿ ರಸ್ತೆಗೆ ಬಂದಿದ್ದಾರೆ. ರಿಯಲ್ ಎಸ್ಟೇಟ್ ಉಬ್ಬರವಿದ್ದ ಸಮಯದಲ್ಲಿ ಆನೇಕಲ್, ದೇವನಹಳ್ಳಿಯಲ್ಲಿ ಸ್ಕಾರ್ಪಿಯೋಗಳ ಮೆರವಣಿಗೆ ನಡೆಯುತ್ತಿತ್ತು. ಈಗ ಪರಿಸ್ಥಿತಿ ಹೇಗಿದೆ ಎಂದು ಯಾರಾದರೂ ಅಧ್ಯಯನ ನಡೆಸಿದ್ದಾರಾ?
ಇನ್ನೊಂದು ಮುಖ್ಯ ಸಮಸ್ಯೆ- ಕೃಷಿ ಭೂಮಿಯ ಛಿದ್ರೀಕರಣ. ಕೃಷಿ ಭೂಮಿ ಅಕ್ಷಯವಲ್ಲ; ಅದಕ್ಕೆ ಮಿತಿಯಿದೆ. ‘ಕೃಷಿ ಕ್ಷೇತ್ರವು ರಾಜ್ಯದ ಒಟ್ಟು ಉತ್ಪನ್ನ(ಜಿಎಸ್‌ಡಿಪಿ)ದಲ್ಲಿ ಶೇ.15 ಪಾಲು ಸಲ್ಲಿಸುತ್ತದೆ. ರಾಜ್ಯದಲ್ಲಿ ಒಟ್ಟು ಕೃಷಿ ಭೂಮಿ 118.05 ಲಕ್ಷ ಹೆಕ್ಟೇರ್ ಇದ್ದು, 86.81 ಲಕ್ಷ ಹಿಡುವಳಿದಾರರಿದ್ದಾರೆ; ತಲಾವಾರು ಹಿಡುವಳಿ ಪ್ರಮಾಣ 1.36 ಹೆಕ್ಟೇರ್. ವರ್ಷದಿಂದ ವರ್ಷಕ್ಕೆ ತಲಾವಾರು ಹಿಡುವಳಿ ಪ್ರಮಾಣ ಕಡಿಮೆಯಾಗುತ್ತಿದೆ’ ಎಂದು ಭಾರತೀಯ ವಾಣಿಜ್ಯ ಮತ್ತು ಉದ್ಯಮ ಚೇಂಬರ್(ಫಿಕ್ಕಿ) ಹಾಗೂ ರಾಜ್ಯ ಸರಕಾರದ 2023ರ ವರದಿ ಹೇಳಿದೆ. ಎಲ್ಲೆಡೆ ಹೊಲ-ಗದ್ದೆಗಳು ಅಡಕೆ ತೋಟ ಹಾಗೂ ನಿವೇಶನಗಳಾಗಿ ಬದಲಾಗುತ್ತಿವೆ. ಕೃಷಿ ಲಾಭದಾಯಕವಲ್ಲ ಎಂದು ಎಲ್ಲರೂ ನಿರ್ಧರಿಸಿ ಆಗಿದೆ.
ಮುಖ್ಯ ಪ್ರಶ್ನೆ ಏನೆಂದರೆ, ಸರಕಾರ ದೇವನಹಳ್ಳಿ-ನಂದಗುಡಿ ಬದಲು ಪರ್ಯಾಯ ಸ್ಥಳ ನೋಡಬಾರದೇಕೆ? ಭೂಮಿ ತಮ್ಮ ಉಳಿವಿಗೆ ಮಾತ್ರವಲ್ಲದೆ, ಆಹಾರ ಸ್ವಾವಲಂಬನೆ ಹಾಗೂ ಪರಿಸರ ಸುಸ್ಥಿರತೆಗೆ ಮುಖ್ಯ ಎಂದು ರೈತರು ವಾದಿಸುತ್ತಾರೆ. ರಾಜ್ಯದಲ್ಲಿ ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಹಾಗೂ ಉತ್ತಮ ರಸ್ತೆ ಸಂಪರ್ಕದಿಂದ ಪ್ರಯಾಣ ಸುಲಭವಾಗಿದೆ. ಬೆಂಗಳೂರಿನ ಬೆಳವಣಿಗೆ ನಿರ್ಣಾಯಕ ಹಂತ ತಲುಪಿದ್ದು, ಧಾರಣಶಕ್ತಿ ಮೀರಿ ಜನ-ವಾಹನಗಳು ತುಂಬಿ ಕೊಂಡಿವೆ. ಇದರಿಂದ ಬೆಂಗಳೂರಿನ ಹೊರಗೆ ಕೈಗಾರಿಕೆಗಳ ಸ್ಥಾಪನೆ ಆಗಬೇಕಿದೆ. ರಾಜಧಾನಿಯಾಚೆಯೂ ಪ್ರಗತಿ ಆಗಬೇಕೆಂಬ ಸರಕಾರದ ಮಾತು ಕೃತಿಗೆ ಇಳಿದಿಲ್ಲ. ಅಭಿವೃದ್ಧಿ ಅರ್ಥಪೂರ್ಣವಾಗಿರಬೇಕೆಂದರೆ, ಸ್ಥಳೀಯ ಸಮುದಾಯಗಳ ಒಳಿತು ಹಾಗೂ ಆರ್ಥಿಕ ಪ್ರಗತಿ ಎರಡನ್ನೂ ಒಳಗೊಂಡಿರಬೇಕಾಗುತ್ತದೆ. ಇದು ಸದ್ಯಕ್ಕೆ ಮರೀಚಿಕೆಯಾಗಿದೆ.
ಕೊನೆಗೆ....ವಿದ್ವಾಂಸ, ಅಪ್ಪಟ ಮಾನವ ಪ್ರೀತಿ ಹಾಗೂ ಪಾಂಡಿತ್ಯಕ್ಕೆ ಹೆಸರಾಗಿದ್ದ ಪ್ರೊ.ಮುಝಫರ್ ಅಸ್ಸಾದಿ ಇನ್ನಿಲ್ಲವಾಗಿದ್ದಾರೆ. ಸೌಜನ್ಯದ ಕೊಂಡಿಯೊಂದು ಕಳಚಿಕೊಡು, ಜ್ಞಾನದ ಸರಪಳಿ ದುರ್ಬಲವಾಗಿದೆ. ಅವರಿಗೆ ಅಂತಿಮ ನಮನ.