ಜಂಕ್ ಆಹಾರಕ್ಕೆ ಕಡಿವಾಣ ಅಗತ್ಯ
Photo: freepik
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ(ಫುಡ್ ಸೆಕ್ಯುರಿಟಿ ಆ್ಯಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ-ಎಫ್ಎಸ್ಎಸ್ಎಐ)ದ ಅರ್ಧಬೆಂದ ಮತ್ತು ಉದ್ಯಮಪರ ನೀತಿಗಳಿಂದ ಜನಸಾಮಾನ್ಯರ ಆರೋಗ್ಯ ಹೈರಾಣಾಗುತ್ತಿದೆ.
ಜಂಕ್ ಆಹಾರ ಸೇವಿಸುವ ಅತ್ಯಂತ ದೊಡ್ಡ ಗುಂಪು-3ರಿಂದ 9 ವರ್ಷದ ಮಕ್ಕಳು. ಆದರೆ, ಅದೇ ಹೊತ್ತಿನಲ್ಲಿ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಇಂಡಿಯಾ 125 ದೇಶಗಳಲ್ಲಿ 111ನೇ ಸ್ಥಾನ ಪಡೆದುಕೊಂಡಿದೆ. ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ವೆಲ್ಟ್ ಹಂಗರ್ ಹಿಲ್ಫ್ನ ಈ ಲೆಕ್ಕಾಚಾರಕ್ಕೆ ಬಳಸಿದ ಮಾನದಂಡಗಳು ಸರಿಯಿಲ್ಲ ಎಂದು ಒಕ್ಕೂಟ ಸರಕಾರ ತಳ್ಳಿಹಾಕಿದೆ. ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿ ಹೇಳಿದೆ. ಜಿಎಚ್ಐಒಯನ್ನು ನಾಲ್ಕು ಮಾನದಂಡಗಳ ಮೂಲಕ ಅಳೆಯಲಾಗುತ್ತದೆ- ಪೋಷಣೆ ಕೊರತೆ, ಕುಂಠಿತ ಬೆಳವಣಿಗೆ, ಎತ್ತರಕ್ಕೆ ಅನುಗುಣವಾಗಿ ದೇಹದ ತೂಕ ಇಲ್ಲದಿರುವುದು(ಶೇ.19.3. ಜಗತ್ತಿನಲ್ಲೇ ಅತಿ ಹೆಚ್ಚು) ಮತ್ತು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ಪ್ರಮಾಣ. ಭಾರತಕ್ಕಿಂತ ಕೆಳಗಿರುವುದು-ಅಫ್ಘಾನಿಸ್ತಾನ, ಹೈಟಿ ಮತ್ತು ಸಹಾರಾ ಕೆಳಗಿನ 12 ದೇಶಗಳು ಮಾತ್ರ.
ಇದಕ್ಕೆ ಹಲವು ಕಾರಣಗಳಿವೆ. ಐಸಿಎಂಆರ್(ಇಂಡಿಯನ್ ವೈದ್ಯಕೀಯ ಸಂಶೋಧನಾ ಮಂಡಳಿ)ನ 2019ರ ಅಧ್ಯಯನದ ಪ್ರಕಾರ, ಸಹಾರಾ ಕೆಳಗಿನ ದೇಶಗಳಲ್ಲಿ ಹೆಚ್ಚು ಬಡತನ ಇದ್ದರೂ, ಇಂಡಿಯಾದಲ್ಲಿ ಪುನರುತ್ಪಾದನೆ ವಯಸ್ಸಿನ ಹೆಣ್ಣುಮಕ್ಕಳ ತೂಕ ಕಡಿಮೆ ಇರುವುದು ಅವರಿಗೆ ಹುಟ್ಟುವ ಮಕ್ಕಳ ತೂಕ ಕಡಿಮೆ ಇರಲು ಪ್ರಮುಖ ಕಾರಣ. ಇನ್ನೊಂದು ಕಾರಣ-ಜಾತಿ. ಬೇರೆ ಸಮುದಾಯಗಳಿಗೆ ಹೋಲಿಸಿದರೆ, ಎಸ್ಸಿ/ಎಸ್ಟಿ ಮಕ್ಕಳು ಎಳವೆಯಲ್ಲೇ ಮೃತಪಡುವುದು ಅಧಿಕ. ಇನ್ನಿತರ ಅಂಶಗಳಾದ ಹೆಣ್ಣುಮಕ್ಕಳ ಶಿಕ್ಷಣ, ನೈರ್ಮಲ್ಯ, ಆಹಾರ ಪದ್ಧತಿ ಮತ್ತು ಆರೋಗ್ಯ ಸೇವೆಗಳು ಜಾತಿಯ ಅಸ್ಮಿತೆಯೊಂದಿಗೆ ತಳಕು ಹಾಕಿಕೊಂಡಿರುತ್ತವೆ. ಜಾಗತಿಕ ಹಸಿವು ಸೂಚ್ಯಂಕಕ್ಕೆ ಸರಕಾರ, ‘ಜಗತ್ತಿನ ಅತ್ಯಂತ ದೊಡ್ಡ ಆಹಾರ ಸುರಕ್ಷೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ’ ಎಂದು ಪ್ರತಿಕ್ರಿಯಿಸಿತ್ತು. ನಿಜ. ಇಂಡಿಯಾದ ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಅದು ಹಸಿವು-ಪೋಷಕಾಂಶ ಕೊರತೆ ನಿವಾರಣೆಗೆ ಏಕೈಕ ಉತ್ತರ ಆಗಲಾರದು. ಭಾರತೀಯರು ಸೇವಿಸುವ ಆಹಾರದ ಗುಣಮಟ್ಟ ಕಡಿಮೆ ಇದ್ದು, 2020ರ ಅಧ್ಯಯನವೊಂದು, ‘ಧಾನ್ಯಗಳನ್ನು ಅಧಿಕ ಪ್ರಮಾಣದಲ್ಲಿ ಹಾಗೂ ಪ್ರೊಟೀನ್, ಹಣ್ಣು ಮತ್ತು ತರಕಾರಿ ಕಡಿಮೆ ಸೇವಿಸುತ್ತಾರೆ’ ಎಂದಿದೆ. ಭಾರತೀಯರು ಪ್ರೊಟೀನ್ ಮೂಲಗಳಿಂದ ಪಡೆದುಕೊಳ್ಳುವ ಕ್ಯಾಲರಿ ಪ್ರಮಾಣ ಶೇ.6-8 ಮಾತ್ರ; ಇದು ಶೇ.29 ಇರಬೇಕು. ಇದಕ್ಕೆ ಬಡತನ ಮತ್ತು ಧಾರ್ಮಿಕ-ಸಾಂಸ್ಕೃತಿಕ ಕಾರಣಗಳಿವೆ. ಕರ್ನಾಟಕದಲ್ಲಿ ಜಾತಿ ಗುಂಪುಗಳು ಬಿಸಿಯೂಟದಲ್ಲಿ ಮೊಟ್ಟೆಯನ್ನು ವಿರೋಧಿಸಿದ್ದನ್ನು ಗಮನಿಸಬೇಕು; ತಜ್ಞರ ಪ್ರಕಾರ, ಮೊಟ್ಟೆ ಪರಿಪೂರ್ಣ ಪ್ರೊಟೀನ್ ಮೂಲ. ಇದಕ್ಕೆ ಪ್ರತಿಯಾಗಿ ಮಕ್ಕಳು ಕೊರತೆಯನ್ನು ತುಂಬಿಕೊಳ್ಳಲು ಕಡಿಮೆ ಬೆಲೆಯ ಮತ್ತು ನಾಲಿಗೆಗೆ ರುಚಿಯೆನಿಸುವ ಜಂಕ್ ಆಹಾರದ ಮೊರೆ ಹೋಗುತ್ತಾರೆ. ಇದರ ಪ್ರತಿಫಲವಾದ ಬೊಜ್ಜು ಮತ್ತು ಸಾಂಕ್ರಾಮಿಕವಲ್ಲದ ರೋಗಗಳು ಕೋವಿಡ್ನಂಥ ಸಾಂಕ್ರಾಮಿಕ ರೋಗಗಳ ವಿಪರಿಣಾಮಗಳನ್ನು ಹೆಚ್ಚಿಸುತ್ತವೆ. ಇತ್ತೀಚೆಗೆ ಪ್ರಕಟಗೊಂಡ ಅಧ್ಯಯನ ‘ಫುಡ್ ಲಿಟರಸಿ ಆ್ಯಂಡ್ ಫುಡ್ ಲೇಬಲಿಂಗ್ ಲಾಸ್-ಎ ಲೀಗಲ್ ಅನಾಲಿಸಿಸ್ ಆಫ್ ಇಂಡಿಯಾಸ್ ಫುಡ್ ಪಾಲಿಸಿ’ ಪ್ರಕಾರ, ‘ಅಗ್ಗದ, ತೀವ್ರವಾಗಿ ಮಾರುಕಟ್ಟೆ ಗೊಳಿಸಿದ ಮತ್ತು ಸುಲಭವಾಗಿ ಕೈಗೆಟಕುವ ಆಹಾರ ಪೊಟ್ಟಣಗಳಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬು ಅಧಿಕ ಪ್ರಮಾಣದಲ್ಲಿರುತ್ತವೆ. ದೇಶಿ ಗ್ರಾಹಕರು ಇವುಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚುತ್ತಿದೆ’. ‘ಎವ್ಯಾಲ್ಯುಯೇಟಿಂಗ್ ದ ಯೂಸ್ ಆಫ್ ಕ್ಯುಆರ್ ಕೋಡ್ಸ್ ಆನ್ ದ ಫುಡ್ ಪ್ರಾಡಕ್ಟ್ಸ್ಸ್’ ಸಂಶೋ ಧನೆಯು 2019ರಲ್ಲಿ ಪೊಟ್ಟಣ ಆಹಾರಗಳ ಜಾಗತಿಕ ಮಾರುಕಟ್ಟೆ ಮೌಲ್ಯ 303.26 ಶತಕೋಟಿ ಡಾಲರ್ ಇದ್ದು, ಪ್ರತಿವರ್ಷ ಶೇ.5.2ರಷ್ಟು ಬೆಳವಣಿಗೆ ಹೊಂದುತ್ತಿದೆ ಎಂದು ಹೇಳಿದೆ.
ಕ್ಯುಆರ್ ಕೋಡ್ 1994ರಲ್ಲಿ ಜಪಾನಿನ ಡೆನ್ಸೋವೇವ್, ವಾಹನಗಳ ಬಿಡಿಭಾಗಗಳಿಗೆ ಅಂಟಿಸಲು ಶೋಧಿಸಿದ 2 ಆಯಾಮಗಳ ಸಂಕೇತ. ಇವು ಆಹಾರೋತ್ಪನ್ನದ ಸಮಗ್ರ ವಿವರ(ಏನೇನಿದೆ, ಪೋಷಕಾಂಶ ಮಾಹಿತಿ, ಅಲರ್ಜಿಕಾರಕಗಳು, ಉತ್ಪಾದನೆ/ಅವಧಿ ಮುಗಿಯುವ ದಿನಾಂಕ, ಗ್ರಾಹಕರು ಸಂಪರ್ಕಿಸಬೇಕಾದ ಟೆಲಿಫೋನ್ ಸಂಖ್ಯೆ-ಇಮೇಲ್-ಅಂಚೆ ವಿಳಾಸ) ಮತ್ತಿತರ ವಿವರ ಒಳಗೊಂಡಿರುತ್ತವೆ. ಆಹಾರ ಪೊಟ್ಟಣಗಳಲ್ಲಿ ಕ್ಯುಆರ್ ಕೋಡ್ ಅಳವಡಿಕೆಯಿಂದ ಬ್ರ್ಯಾಂಡ್ ಮೌಲ್ಯ, ಗ್ರಾಹಕರ ನಿಷ್ಠೆ ಮತ್ತು ಕಾರ್ಯಾಚರಣೆಯಲ್ಲಿ ಕ್ಷಮತೆ ಹೆಚ್ಚುತ್ತದೆ ಎಂದು ಪರಿಣತರು ಹೇಳುತ್ತಾರೆ. ಜತೆಗೆ, ಸ್ಮಾರ್ಟ್ಫೋನ್ಗಳ ಬಳಕೆ ಹೆಚ್ಚಿರುವುದರಿಂದ, ಕ್ಯುಆರ್ ಕೋಡ್ಗಳು ಗ್ರಾಹಕರಿಗೆ ಮಾಹಿತಿ ನೀಡಬಲ್ಲ ಹಾಗೂ ಅವರ ಖರೀದಿಸುವಿಕೆ ವರ್ತನೆ ಮೇಲೆ ಪ್ರಭಾವ ಬೀರಬಲ್ಲ ಸಾಧ್ಯತೆ ಹೆಚ್ಚು ಇದೆ. ವರದಿಗಳ ಪ್ರಕಾರ, ಅಮೆರಿಕ, ಇಂಡಿಯಾ, ಫ್ರಾನ್ಸ್ ಮತ್ತು ಇಂಗ್ಲೆಂಡ್ನಲ್ಲಿ ಹೆಚ್ಚು ಕ್ಯುಆರ್ ಕೋಡ್ ಬಳಕೆದಾರರು ಇದ್ದಾರೆ. ಶೇ.57ರಷ್ಟು ಮಂದಿ ನಿರ್ದಿಷ್ಟ ಮಾಹಿತಿಗೆ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದ್ದಾರೆ ಮತ್ತು ಶೇ.67ರಷ್ಟು ಮಂದಿ ಕ್ಯುಆರ್ ಕೋಡ್ನಿಂದ ಉತ್ಪನ್ನದ ಆಯ್ಕೆ ಸುಲಭವಾಗುತ್ತದೆ ಎಂದಿದ್ದರು. ಕ್ಯುಆರ್ ಕೋಡ್ ಹಲವು ಸಾಧ್ಯತೆಗಳಿರುವ ತಂತ್ರಜ್ಞಾನ. ಪ್ರಶ್ನೆಯಿರುವುದು- ಎಫ್ಒಪಿಎಲ್ಗೆ ಸಂಬಂಧಿಸಿದಂತೆ ತನ್ನದೇ ಶಿಫಾರಸುಗಳನ್ನು ಅನುಷ್ಠಾನಗೊಳಿಸದ ಮತ್ತು ಉದ್ಯಮಕ್ಕೆ ಪೂರಕವಾಗುವಂತೆ ತೆಳುಗೊಳಿಸಿದ ಎಫ್ಎಸ್ಎಸ್ಎಐ, ಕ್ಯುಆರ್ ಕೋಡ್ ಅಳವಡಿಕೆಗೆ ಮುಂದಾಗುವುದೇ?
ಬೇರೆ ದೇಶಗಳಲ್ಲಿ ಯಾವ ವ್ಯವಸ್ಥೆಯಿದೆ?
ವಿದೇಶಗಳಲ್ಲಿ ಉದ್ಯಮಗಳು ಎಫ್ಒಪಿಎಲ್(ಫ್ರಂಟ್ ಆಫ್ ಪ್ಯಾಕೇಜ್ ಲೇಬಲಿಂಗ್) ವ್ಯವಸ್ಥೆಯನ್ನು ಹಲವು ರೂಪಗಳಲ್ಲಿ ತಮ್ಮಿಂದ ತಾವೇ ಇಲ್ಲವೇ ಸರಕಾರಗಳ ಒತ್ತಡದಿಂದ ಅಳವಡಿಸಿ ಕೊಂಡಿವೆ. ಅಮೆರಿಕ ಬಲಿಷ್ಠ ಲೇಬಲಿಂಗ್ ಕಾನೂನು ಇರುವ ರಾಷ್ಟ್ರ. ಸಿಂಗಾಪುರ, ಐರ್ಲ್ಯಾಂಡ್, ನೆದರ್ಲ್ಯಾಂಡ್ಸ್, ಅಮೆರಿಕ-ಇಂಗ್ಲೆಂಡ್, ಆಸ್ಟ್ರೇಲಿಯ, ಸ್ವಿಟ್ಸರ್ಲ್ಯಾಂಡ್, ಫಿನ್ಲ್ಯಾಂಡ್ ಕಠಿಣವಾದ ಆಹಾರ ಸುರಕ್ಷಾ ನಿಯಮಗಳನ್ನು ಹೊಂದಿವೆ. ವಿವಿಧ ಲೇಬಲಿಂಗ್ಗಳೆಂದರೆ.,
* ಟ್ರಾಫಿಕ್ ದೀಪಗಳು: ಹಸಿರು(ಕಡಿಮೆ ಪ್ರಮಾಣ), ಕಡುಗೆಂಪು(ಮಧ್ಯಮ ಪ್ರಮಾಣ), ಕೆಂಪು(ಅಧಿಕ ಪ್ರಮಾಣ). ಇಂಗ್ಲೆಂಡ್ 2006, ಈಕ್ವೆಡಾರ್ 2014, ಇರಾನ್ 2017, ಶ್ರೀಲಂಕಾ(ಪೇಯ 2016/ತಿನಿಸು 2019).
* ಸಾರಾಂಶ ಸೂಚ್ಯಂಕಗಳು(ಹೆಲ್ತ್ಸ್ಟಾರ್, 0.5ರಿಂದ 5)/ನ್ಯೂಟ್ರಿಸ್ಕೋರ್(ಎ ಇಂದ ಇ): ಹೆಲ್ತ್ಸ್ಟಾರ್-ನ್ಯೂಝಿಲೆಂಡ್/ಆಸ್ಟ್ರೇಲಿಯ, 2014. ನ್ಯೂಟ್ರಿಸ್ಕೋರ್-ಫ್ರಾನ್ಸ್ 2017, ಬೆಲ್ಜಿಯಂ 2020, ಲಕ್ಸೆಂಬರ್ಗ್ 2021.
* ದೈನಂದಿನ ಪ್ರಮಾಣ ಮಾರ್ಗದರ್ಶಕ(ಗೈಡ್ಲೈನ್ಸ್ ಡೇಲಿ ಅಮೌಂಟ್, ಜಿಡಿಎ): ಒಮ್ಮೆ ಬಡಿಸಿಕೊಳ್ಳುವ ಪ್ರಮಾಣವನ್ನು ಆಧರಿಸಿ, ದೈನಂದಿನ ಸೇವನೆಗೆ ಅನುಗುಣವಾಗಿ ಶಕ್ತಿ ಮತ್ತು ಪೋಷಕಾಂಶ ಪ್ರಮಾಣದ ಮಾಹಿತಿ; ಮಲೇಶ್ಯ-ಥಾಯ್ಲೆಂಡ್ ಮತ್ತಿತರ ದೇಶಗಳಲ್ಲಿ ಉದ್ಯಮಗಳು ಸ್ವಯಂಪ್ರೇರಿತವಾಗಿ ಅಳವಡಿಸಿಕೊಂಡಿವೆ. ಧನಾತ್ಮಕ ಅಂಶಗಳ ಬಗ್ಗೆ ಹಿಂಬದಿಯಲ್ಲಿ ಮಾಹಿತಿ ಇರುತ್ತದೆ; ಸಂಖ್ಯೆಗಳು ಹೆಚ್ಚು ಇರುವುದರಿಂದ, ಅರ್ಥ ಮಾಡಿಕೊಳ್ಳುವುದು ಕಷ್ಟ.
* ಎಚ್ಚರಿಕೆ ಚೀಟಿ: ಬಣ್ಣ, ಆಕೃತಿಗಳು ಮತ್ತು ಗ್ರಾಫಿಕ್ಸ್ ಬಳಕೆ. ಚಿಲಿ 2016, ಪೆರು 2019, ಮೆಕ್ಸಿಕೋ/ಇಸ್ರೇಲ್/ಉರುಗ್ವೆ 2020, ಬ್ರೆಝಿಲ್/ಕೊಲಂಬಿಯಾ 2022.
‘ಟ್ರಾಫಿಕ್ ದೀಪ’ ಚೀಟಿಯಲ್ಲಿ ಹಸಿರು ಮತ್ತು ಕೆಂಪು ಎರಡೂ ಬಣ್ಣಗಳು ಇರುವುದರಿಂದ, ಗ್ರಾಹಕರು ಪೇಚಿಗೆ ಸಿಲುಕುತ್ತಾರೆ. ಈಕ್ವೆಡಾರ್ನಲ್ಲಿ 2014ರಲ್ಲಿ ಟ್ರಾಫಿಕ್ ದೀಪ ಚೀಟಿಗಳನ್ನು ಪರಿಚಯಿಸಲಾಯಿತು. ಗ್ರಾಹಕರಲ್ಲಿ ಜಾಗೃತಿಯಿದ್ದರೂ, ಉತ್ಪನ್ನಗಳ ಖರೀದಿಯಲ್ಲಿ ಅವರ ವರ್ತನೆ ಹೆಚ್ಚು ಬದಲಾಗಲಿಲ್ಲ(ಶೇ.79 ಮಂದಿ ತಮಗೆ ಈ ಬಗ್ಗೆ ಗೊತ್ತಿದೆ ಎಂದರೂ, ಆಹಾರ ಖರೀದಿಗೆ ಮಾಹಿತಿ ಬಳಸಿದವರು ಶೇ.21 ಮಾತ್ರ). ಕಾರ್ಬೊನೇಟೆಡ್ ಪೇಯಗಳ ಖರೀದಿಯಲ್ಲಿ ಗಮನಾರ್ಹ ಎನ್ನಬಹುದಾದ ವ್ಯತ್ಯಾಸ ಉಂಟಾಗಲಿಲ್ಲ. ಚಿಲಿಯಲ್ಲಿ ಆರಂಭದಲ್ಲಿ ಟ್ರಾಫಿಕ್ ದೀಪ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡರೂ, ಬಳಿಕ ಕೈಬಿಡಲಾಯಿತು. ಮೆಕ್ಸಿಕೋದಲ್ಲಿ ನಡೆದ ಅಧ್ಯಯನದ ಪ್ರಕಾರ, ಟ್ರಾಫಿಕ್ ದೀಪಗಳ ಚಿತ್ರಕ್ಕಿಂತ ಎಚ್ಚರಿಕೆ ಚೀಟಿಗಳು ಗ್ರಾಹಕರ ದೃಷ್ಟಿ ಕೋನವನ್ನು ಪ್ರಭಾವಿಸುತ್ತವೆ.
ಅಂತೆಯೇ ‘ಹೆಲ್ತ್ಸ್ಟಾರ್ ರೇಟಿಂಗ್’ ಮತ್ತು ‘ನ್ಯೂಟ್ರಿಸ್ಕೋರ್’ ಕೂಡ ಗೊಂದಲಮಯ. ಇದರಲ್ಲಿ ಉತ್ಪನ್ನಗಳಿಗೆ 0.5 ರಿಂದ 5 ಅಥವಾ ಎ ಯಿಂದ ಇ ವರೆಗೆ ಕ್ರಮಸಂಖ್ಯೆಯನ್ನು ನೀಡಲಿದ್ದು, ತಿನಿಸು/ಪೇಯ ಆರೋಗ್ಯಕರ ಅಥವಾ ಅನಾರೋಗ್ಯಕರ ಎಂದು ಸ್ಪಷ್ಟವಾಗಿ ಹೇಳುವುದಿಲ್ಲ. ಗ್ರಾಹಕ 1.5 ರೇಟಿಂಗ್ ಇರುವ ಚಾಕಲೆಟ್ ಬದಲು 2.5 ರೇಟಿಂಗ್ ಇರುವಂಥದ್ದನ್ನು ಖರೀದಿಸಬಹುದಷ್ಟೆ. ಆದರೆ, ಹೆಚ್ಚು ಸಕ್ಕರೆ ಇಲ್ಲವೇ ಕೊಬ್ಬು ಇರುವ ಚಾಕಲೆಟ್ ತಿನ್ನುವುದನ್ನು ಬಿಡುವುದಿಲ್ಲ. ಎರಡನೆಯದಾಗಿ, ಸ್ಟಾರ್ಗಳು ಉತ್ಪನ್ನದ ಗುಣಮಟ್ಟಕ್ಕೆ ಸಂಬಂಧಿಸಿರುತ್ತವೆ ಎಂದು ಗ್ರಾಹಕರು ಯೋಚಿಸುತ್ತಾರೆ.
ಈ ನಾಲ್ಕರಲ್ಲಿ ಎಫ್ಒಪಿಎಲ್ ಹೆಚ್ಚು ಪರಿಣಾಮಕಾರಿ ಎಂದು ಪ್ರಯೋಗ ಮತ್ತು ಬಳಕೆಯಿಂದ ಸಾಬೀತಾಗಿದೆ. ಎಚ್ಚರಿಕೆ ಚೀಟಿಗಳು ಉತ್ಪನ್ನದಲ್ಲಿ ನಿರ್ದಿಷ್ಟ ಅಂಶವೊಂದು ಹೆಚ್ಚು ಪ್ರಮಾಣದಲ್ಲಿ ಇದ್ದರೆ, ಎಚ್ಚರಿಸುತ್ತವೆ ಮತ್ತು ಎಚ್ಚರಿಕೆಯನ್ನು ಬಣ್ಣ, ಆಕಾರಗಳು ಇಲ್ಲವೇ ಗ್ರಾಫಿಕ್ಗಳ ಮೂಲಕ ಸಂವಹಿಸುತ್ತದೆ; ಹೆಚ್ಚು ಮಾಹಿತಿ, ಪಠ್ಯ ಮತ್ತು ಸಂಖ್ಯೆಗಳು ಇರುವುದಿಲ್ಲ. ಸಾಕ್ಷರರಲ್ಲದವರು ಮತ್ತು ಭಾಷೆ ಗೊತ್ತಿಲ್ಲದವರಿಗೂ, ಅಗತ್ಯ ಮಾಹಿತಿ ನೀಡುತ್ತವೆ. ಚಿಲಿಯ ಎಚ್ಚರಿಕೆ ಚೀಟಿ ಕಪ್ಪು-ಬಿಳಿ ಬಣ್ಣದ ಅಷ್ಟಭುಜಾಕೃತಿಯಲ್ಲಿದೆ. ಪೊಟ್ಟಣದ ಮೇಲೆ 4 ಆಕೃತಿ ಇದ್ದರೆ, ಸೋಡಿಯಂ, ಸಕ್ಕರೆ, ಕೊಬ್ಬು ಮತ್ತು ಕ್ಯಾಲರಿ ನಿಗದಿಪಡಿಸಿದ್ದಕ್ಕಿಂತ ಅಧಿಕ ಪ್ರಮಾಣದಲ್ಲಿವೆ ಎಂದರ್ಥ. ಚೀಟಿಗಳ ಅಳವಡಿಕೆ 2016ರಿಂದ ಆರಂಭವಾಗಿದ್ದು, ನಿಯಮಗಳು ಕಠಿಣವಾಗಿವೆ. ಜೊತೆಗೆ, ಸರಕಾರದ ಪೂರಕ ಕಾರ್ಯನೀತಿಯಿಂದ ಸಕ್ಕರೆಯುಕ್ತ ಪೇಯಗಳ ಖರೀದಿ ಪ್ರಮಾಣ ಶೇ.24ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನಗಳು ಹೇಳಿವೆ. ಜೊತೆಗೆ, ಕಡಿಮೆ-ಮಧ್ಯಮ ಆದಾಯದ ಮಹಿಳೆಯರಲ್ಲಿ ಖರೀದಿಸುವಿಕೆಯ ರೀತಿ ಬದಲಾಗಿದೆ. ಚೀಟಿಗಳು ಮಕ್ಕಳಿಗೂ ಅರ್ಥವಾಗುವುದರಿಂದ, ತಿನಿಸು-ಪೇಯ ಉತ್ಪಾದಕರು ಸಕ್ಕರೆ-ಸೋಡಿಯಂ ಅಂಶವನ್ನು ಗತ್ಯಂತರವಿಲ್ಲದೆ ಕಡಿಮೆ ಮಾಡಬೇಕಾಗಿ ಬಂದಿದೆ. ಪೆರು 2019ರಲ್ಲಿ ಅಳವಡಿಸಿಕೊಂಡ ಅಷ್ಟಭುಜಾಕೃತಿಯ ಚೀಟಿಗಳಲ್ಲಿ ಸಕ್ಕರೆ, ಸಂತೃಪ್ತ ಕೊಬ್ಬು ಮತ್ತು ಸೋಡಿಯಂ ಜೊತೆಗೆ, ಟ್ರಾನ್ಸ್ ಕೊಬ್ಬು ಕೂಡ ಇದೆ. ಮೊದಲು ಗೈಡ್ಲೈನ್ ಡೈಲಿ ಅಮೌಂಟ್(ಜಿಡಿಎ) ವ್ಯವಸ್ಥೆ ಅಳವಡಿಸಿಕೊಂಡಿದ್ದ ಮೆಕ್ಸಿಕೋ, 2020ರಲ್ಲಿ ಅಷ್ಟ ಭುಜದ ಚೀಟಿಗೆ ಬದಲಿಸಿಕೊಂಡಿತು. ಉರುಗ್ವೆ 2020ರಿಂದ ಅಷ್ಟಭುಜದ ಎಚ್ಚರಿಕೆ ಚೀಟಿಗಳನ್ನು ಬಳಸಲಾರಂಭಿಸಿತು. ಇಸ್ರೇಲ್ 2020ರಲ್ಲಿ ಅಳವಡಿಸಿಕೊಂಡ ಎಚ್ಚರಿಕೆ ಚೀಟಿಗಳಲ್ಲಿ ಉಪ್ಪಿಗೆ ಉಪ್ಪಿನ ಡಬ್ಬ, ಸಕ್ಕರೆಗೆ ಚಮಚ ಹಾಗೂ ಕೊಬ್ಬಿಗೆ ಬೆಣ್ಣೆ-ಚಾಕು ಚಿನ್ಹೆಗಳು ಇರುತ್ತವೆ. ಕೊಲಂಬಿಯದ ಎಚ್ಚರಿಕೆ ಚೀಟಿಗಳಲ್ಲಿ ಕೆಂಪು ಬದಲು ಕಪ್ಪು ಬಣ್ಣ ಇದೆ. ಬ್ರೆಝಿಲ್ 2022ರಲ್ಲಿ ಭೂತಕನ್ನಡಿಯನ್ನುಳ್ಳ ಕಪ್ಪು ಆಯತಾಕಾರದ ಎಚ್ಚರಿಕೆ ಚೀಟಿಗಳನ್ನು ಬಳಸಲಾರಂಭಿಸಿತು. ಉರುಗ್ವೆಯಲ್ಲಿ ನಡೆಸಿದ ಅವಲೋಕನದಲ್ಲಿ ಎಚ್ಚರಿಕೆ ಚೀಟಿಗಳು ಗ್ರಾಹಕರ ಆಯ್ಕೆಯನ್ನು ಪ್ರಭಾವಿಸಿದ್ದು ಕಂಡುಬಂತು.
ಮಾದರಿ ವ್ಯವಸ್ಥೆ ಹೀಗಿರಬೇಕು
ಎಫ್ಎಸ್ಎಸ್ಎಐ 2018 ಮತ್ತು 2019ರಲ್ಲಿ ಪ್ರಸ್ತಾಪಿಸಿದ್ದ ಎಫ್ಒಪಿಎಸ್ ಚೀಟಿಗಳು ಸೂಕ್ತವಾಗಿರಲಿಲ್ಲ. ಟ್ರಾಫಿಕ್ ದೀಪ ಮತ್ತು ಜಿಡಿಎ ವ್ಯವಸ್ಥೆಯ ಮಿಶ್ರಣವಾಗಿದ್ದು, ವೈಜ್ಞಾನಿಕ ಅರಿವು ಇದ್ದವರಿಗೂ ಅರ್ಥ ಮಾಡಿಕೊಳ್ಳಲು ಕಷ್ಟಕರವಾಗಿತ್ತು. ಅನಾರೋಗ್ಯಕರ ಆಹಾರದಲ್ಲಿ ‘ಸ್ಟಾರ್’, ‘ಆರೋಗ್ಯ’ ಇತ್ಯಾದಿ ಪದಗಳು ಧನಾತ್ಮಕ ಅರ್ಥ ಕೊಡಬಲ್ಲವು. ಧನಾತ್ಮಕ ಅಂಶಗಳು ಋಣಾತ್ಮಕ ಅಂಶಗಳನ್ನು ಮುಚ್ಚಲು ಬಳಕೆಯಾಗಬಾರದು.
ಎಫ್ಒಪಿಎಲ್ನಲ್ಲಿ ಚಿನ್ಹೆಗಳು ಇರಬೇಕೇ ಹೊರತು ಪಠ್ಯ ಮತ್ತು ಸಂಖ್ಯೆಗಳಲ್ಲ. ಏಕೆಂದರೆ, ಅವು ಗಮನ ಸೆಳೆಯುತ್ತವೆ ಮತ್ತು ಅರ್ಥ ಮಾಡಿಕೊಳ್ಳುವುದು ಸುಲಭ; ವರ್ಣರಂಜಿತ ಪೊಟ್ಟಣದಲ್ಲಿ ಅವುಗಳ ಆಕಾರ, ಬಣ್ಣ ಮತ್ತು ವಿನ್ಯಾಸ ಗಮನ ಸೆಳೆಯುತ್ತದೆ. ಒಂದು ಅಂಶಕ್ಕೆ ಒಂದು ಚೀಟಿ ಅಳವಡಿಸುವುದರಿಂದ, ಉತ್ಪನ್ನದಲ್ಲಿ ಯಾವ ಅಂಶ ಹೆಚ್ಚು ಇದೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು; ಜಂಕ್ ಆಹಾರಗಳಲ್ಲಿರುವ ಅನಾರೋಗ್ಯಕರ ಅಂಶಗಳ ಬಗ್ಗೆ ಅರಿವು ಮೂಡಿಸಲು ಮತ್ತು ಬಳಕೆಯನ್ನು ನಿರುತ್ತೇಜನಗೊಳಿಸುವಲ್ಲಿ ಅವು ಪರಿಣಾಮಕಾರಿ ಎಂದು ಜಗತ್ತಿನೆಲ್ಲೆಡೆ ಪರಿಗಣಿಸಲ್ಪಟ್ಟಿವೆ; ಬಹು ಭಾಷೆಗಳು ಮತ್ತು ನಿರಕ್ಷರತೆ ಒಡ್ಡುವ ಸವಾಲುಗಳನ್ನು ಮೀರಬಲ್ಲವು. ದೇಶದಲ್ಲಿ ಸಸ್ಯಾಹಾರ-ಮಾಂಸಾಹಾರದ ಚಿನ್ಹೆಗಳು ಚಿರಪರಿಚಿತವಾಗಿದ್ದು, ಇತ್ತೀಚೆಗೆ ಪರಿಚಯಿಸಿದ ಫೋರ್ಟಿಫಿಕೇಷನ್(+ಎಫ್) ಮತ್ತು ಸಾವಯವ ಆಹಾರ(ಜೈವಿಕ್ ಭಾರತ್ನ ಹಸಿರು ಬಣ್ಣದ ಚಿನ್ಹೆ)ದ ಲಾಂಛನಗಳು ಪ್ರಸಿದ್ಧಿಯಾಗಿವೆ.
ಜಂಕ್ ಆಹಾರದಲ್ಲಿರುವ ಸಕ್ಕರೆ, ಕೊಬ್ಬು ಮತ್ತು ಉಪ್ಪು ಹೊಗೆಸೊಪ್ಪಿನಲ್ಲಿರುವ ನಿಕೋಟಿನ್ನಂತೆ ಚಟವಾಗಿ ಪರಿಣಮಿಸುವ ಸಾಧ್ಯತೆ ಇದೆ. ಪ್ರಾಧಿಕಾರದ 2018ರ ಕರಡಿನ ಪ್ರಕಾರ, ‘ಒಟ್ಟು ಸಕ್ಕರೆ’ ದಿನವೊಂದಕ್ಕೆ 50 ಗ್ರಾಂ ಮೀರಬಾರದು. ಹೈದರಾಬಾದ್ನ ನ್ಯಾಷನಲ್ ನ್ಯೂಟ್ರಿಷನ್ ಇನ್ಸ್ಟಿಟ್ಯೂಟ್ ಅನ್ವಯ, ‘ಸೇರ್ಪಡೆಗೊಳಿಸಿದ ಸಕ್ಕರೆ’ ಪ್ರಮಾಣ 25-30 ಗ್ರಾಂ ಮೀರಬಾರದು. ಬಹುತೇಕ ಜಂಕ್ ಆಹಾರಗಳಲ್ಲಿ ಅಂತರ್ಗತ ಸಕ್ಕರೆಗಿಂತ ಅಧಿಕ ಸಕ್ಕರೆಯನ್ನು ಸೇರಿಸಲಾಗುತ್ತದೆ. ಜತೆಗೆ, ಒಟ್ಟು ಸಕ್ಕರೆ ಪ್ರಮಾಣವನ್ನು 90 ಗ್ರಾಂಗೆ ಹೆಚ್ಚಿಸಬೇಕೆಂದು ಉದ್ಯಮ ಆಗ್ರಹಿಸುತ್ತಿದೆ. ಇದು ಹೆಚ್ಚು ಆದಾಯವಿರುವ ದೇಶಗಳಿಗೆ ಸೂಕ್ತ. ಏಕೆಂದರೆ, ಅಲ್ಲಿ ಹಣ್ಣನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಲಾಗುತ್ತದೆ. ಚೀಟಿಯಲ್ಲಿ ‘ಸೋಡಿಯಂ’ ಬದಲು ಉಪ್ಪು ಎಂದು ಇರಬೇಕು. ಗ್ರಾಹಕರಿಗೆ ‘ಒಟ್ಟು ಕೊಬ್ಬಿನಂಶ’ದ ಬಗ್ಗೆ ಗೊತ್ತಾಗುತ್ತದೆಯೇ ಹೊರತು ‘ಸಂತೃಪ್ತ ಕೊಬ್ಬು’ ಬಗ್ಗೆ ಅಲ್ಲ. ಇದರಿಂದ ಇನ್ನಿತರ ಕೊಬ್ಬಿನಂಶ(ಪಾಲಿಅನ್ಸ್ಯಾಚುರೇಟೆಡ್ ಮತ್ತು ಮಾನೋಅನ್ ಸ್ಯಾಚುರೇಟೆಡ್) ಸೇವಿಸಬಾರದು ಎಂದುಕೊಳ್ಳುವ ಸಾಧ್ಯತೆಯಿದೆ. ದೇಶಿ ಆಹಾರ ಪದ್ಧತಿ ವಿವಿಧ ಕೊಬ್ಬುಗಳನ್ನು ಒಳಗೊಂಡಿದ್ದು, ಹಾಲು ಮತ್ತು ಹಾಲನ್ನು ಆಧರಿಸಿದ ಉತ್ಪನ್ನಗಳು(ಮೊಸರು, ಪನ್ನೀರ್ ಇತ್ಯಾದಿ) ಅನಾರೋಗ್ಯಕರ ಎನ್ನುವ ಭಾವನೆ ಮೂಡಲಿದೆ. ಇವು ಸಸ್ಯಾಹಾರಿಗಳು ಮತ್ತು ಗ್ರಾಮೀಣರ ಆಹಾರ ಪದ್ಧತಿಯ ಭಾಗವಾಗಿವೆ. ಜತೆಗೆ, ಉತ್ಪನ್ನದಲ್ಲಿರುವ ಕ್ಯಾಲರಿ ಪ್ರಮಾಣ ಕೂಡ ಚೀಟಿಯಲ್ಲಿ ಇರಬೇಕು. ಉಪ್ಪು, ಸಕ್ಕರೆ, ಕೊಬ್ಬಿನಂಶ ಮತ್ತು ಕ್ಯಾಲೊರಿ ಆರೋಗ್ಯಕ್ಕೆ ಪೂರಕವಾಗಿರಬೇಕು.
ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಶ್ಯ ಪ್ರಾಂತದ ಪೋಷಕಾಂಶ ಮಾದರಿಯನ್ನು ಆಧರಿಸಿದ ಹೈದರಾಬಾದಿನ ನ್ಯಾಷನಲ್ ನ್ಯೂಟ್ರಿಷನ್ ಇನ್ಸ್ಟಿಟ್ಯೂಟ್-ಭಾರತೀಯ ವೈದ್ಯ ಸಂಶೋಧನಾ ಮಂಡಳಿಯ ಶಿಫಾರಸು ಪ್ರಕಾರ, ಆರೋಗ್ಯವಂತ ಮನುಷ್ಯ ದಿನವೊಂದಕ್ಕೆ 2,000 ಕ್ಯಾಲರಿ ಸೇವನೆ ಮಾಡಬೇಕು. ಆದರೆ, ವಿಶ್ವಸಂಸ್ಥೆಯ ‘ಜಾಗತಿಕ ಆಹಾರ ಸುರಕ್ಷತೆ ಮತ್ತು ಪೋಷಕಾಂಶ ವರದಿ-2023’ ಅನ್ವಯ, ದೇಶದ ಶೇ.74ರಷ್ಟು ಮಂದಿ ಪೋಷಕಾಂಶಭರಿತ ಆಹಾರವನ್ನು ಖರೀದಿಸುವ ಸ್ಥಿತಿಯಲ್ಲಿಲ್ಲ; ಕಡಿಮೆ ಆದಾಯ ಇದಕ್ಕೆ ಕಾರಣ. ದೃಷ್ಟಿ ವಿಶೇಷ ಚೇತನರಿಗೆ ಗುಣಮಟ್ಟದ ಆಹಾರ ಸಿಗಬೇಕು ಎನ್ನುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಆದರೆ, ಎಚ್ಚರಿಕೆ ಲೇಬಲ್ಗಳನ್ನೇ ಅಳವಡಿಸಲಾಗದ ಅಥವಾ ಹಿಂಜರಿಯುತ್ತಿರುವ ಎಫ್ಎಸ್ಎಸ್ಎಐ, ಕ್ಯುಆರ್ ಕೋಡ್ನಂಥ ತಂತ್ರಜ್ಞಾನವನ್ನು ಅಳವಡಿಸುತ್ತದೆ ಎಂದು ನಂಬುವುದು ಹೇಗೆ? ಮತ್ತು ಈ ಕ್ಯುಆರ್ ಕೋಡ್ಗಳು ಹಸಿವನ್ನು ನೀಗಿಸುವ ಮಾಯಾದಂಡವೇ?