ದೇಶಿಗರ ಆಹಾರ ಸುರಕ್ಷತೆಗೆ ಧಕ್ಕೆ
‘ಅನ್ನದಲ್ಲಿ ರುಚಿಯೇ ಇಲ್ಲ’ ಎನ್ನುವ ಗೊಣಗುವಿಕೆ ಕೇಳಿರುತ್ತೀರಿ. ವಾಸ್ತವವೆಂದರೆ, ಅನ್ನ-ಗೋಧಿ ಸೇರಿದಂತೆ ನಾವು ಸೇವಿಸುವ ಆಹಾರ ತನ್ನ ಸತ್ವ ಕಳೆದುಕೊಂಡಿದೆ. ಬೆಳವಣಿಗೆ, ರೋಗ ನಿರೋಧಕ ಶಕ್ತಿ ಮತ್ತು ಸುಕ್ಷೇಮಕ್ಕೆ ಅಗತ್ಯವಾಗಿದ್ದ ಹತ್ತು ಹಲವು ಪ್ರೊಟೀನ್, ವಿಟಮಿನ್, ಪೋಷಕಾಂಶಗಳು ಇಲ್ಲವಾಗಿದ್ದು ಬರಿದೇ ಹೊಟ್ಟೆ ತುಂಬಿಸುತ್ತಿವೆ. ಅಷ್ಟು ಮಾತ್ರವಲ್ಲದೆ, ದೇಹಕ್ಕೆ ವಿಷವನ್ನು ತುಂಬುತ್ತಿವೆ ಎನ್ನುತ್ತದೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್), ಬಿಧಾನ್ ಚಂದ್ರ ಕೃಷಿ ವಿಶ್ವವಿದ್ಯಾನಿಲಯ ಮತ್ತು ತೆಲಂಗಾಣದ ರಾಷ್ಟ್ರೀಯ ಪೋಷಕಾಂಶ ಸಂಸ್ಥೆ(ಎನ್‌ಐಎನ್)ಯ ವಿಜ್ಞಾನಿ ಸೋವನ್ ದೇಬನಾಥ್ ನೇತೃತ್ವದ 11 ವಿಜ್ಞಾನಿಗಳ ತಂಡ ನವೆಂಬರ್ 2023ರಲ್ಲಿ ಸಲ್ಲಿಸಿದ ವರದಿ.
ದೇಶ ಸ್ವತಂತ್ರವಾದಾಗ ತೀವ್ರ ಬಡತನ, ಹಸಿವು-ಕ್ಷಾಮ ನಮ್ಮನ್ನು ಕಾಡುತ್ತಿತ್ತು. ಆಗ ಜನರ ಹೊಟ್ಟೆ ತುಂಬಿಸಿದ್ದು ಹಸಿರು ಕ್ರಾಂತಿ(1967). ಆದರೆ, ಇದೇ ಹಸಿರು ಕ್ರಾಂತಿಯ ದುಷ್ಪರಿಣಾಮಗಳು ಆಹಾರದಲ್ಲಿನ ಪೋಷಕಾಂಶಗಳ ಪ್ರಮಾಣ ಕುಸಿತಕ್ಕೂ ಕಾರಣವಾದವು. ಗೋಧಿ-ಭತ್ತದ ಅಧಿಕ ಇಳುವರಿ ನೀಡುವ ತಳಿಗಳ ಪೋಷಕಾಂಶ ಚಿತ್ರಣ ಬದಲಾಗಿದೆ. ನೆಲದಲ್ಲಿರುವ ಪೋಷಕಾಂಶಗಳನ್ನು ಕಾಳಿನಲ್ಲಿ ಹಿಡಿದಿಡುವ ಸಾಮರ್ಥ್ಯ ಕಳೆದುಕೊಂಡಿವೆ. ದೇಹಕ್ಕೆ ಶೇ.50ರಷ್ಟು ಇಂಧನ ಪೂರೈಸುವ ಭತ್ತ-ಗೋಧಿ, ಕಳೆದ 50 ವರ್ಷಗಳಲ್ಲಿ ಅರ್ಧದಷ್ಟು ಆಹಾರ ಮೌಲ್ಯ ಕಳೆದುಕೊಂಡಿವೆ. ಇದೇ ಪ್ರವೃತ್ತಿ ಮುಂದುವರಿದರೆ, ಅಂದಾಜಿನ ಪ್ರಕಾರ, 2040ರ ಹೊತ್ತಿಗೆ ಅಕ್ಕಿ-ಗೋಧಿ ಸೇವನೆಯಿಂದ ಏನೇನೂ ಪ್ರಯೋಜನ ಇರುವುದಿಲ್ಲ. ಅವು ಶಕ್ತಿ, ಪೋಷಕಾಂಶ ಇಲ್ಲವೇ ಚೈತನ್ಯ ತುಂಬುವುದಿಲ್ಲ. ಇದಕ್ಕಿಂತ ಕಳವಳದ ಸಂಗತಿಯೆಂದರೆ, ಅವುಗಳಲ್ಲಿ ವಿಷಕರ ವಸ್ತುಗಳ ಸಾಂದ್ರತೆ ಹೆಚ್ಚುತ್ತಿದೆ. ಅಗತ್ಯ ಪೋಷಕಾಂಶಗಳಾದ ಸತು ಮತ್ತು ಕಬ್ಬಿಣದ ಪ್ರಮಾಣ ಕಡಿಮೆಯಾಗಿದ್ದು, ವಿಷ ವಸ್ತು ಆರ್ಸೆನಿಕ್ ಅಂಶ ಹೆಚ್ಚಿದೆ. ಈ ಧಾನ್ಯಗಳು ಸಾಂಕ್ರಾಮಿಕವಲ್ಲದ ರೋಗ(ಎನ್‌ಸಿಡಿಎಸ್)ದ ಹೊರೆಯನ್ನು ಹೆಚ್ಚಿಸುತ್ತಿವೆ. ಮೂಳೆಗಳನ್ನು ಬಲಿಷ್ಠಗೊಳಿಸಲು ಬೇಕಾದ ರಂಜಕ, ಕ್ಯಾಲ್ಸಿಯಂ, ಸಿಲಿಕಾನ್ ಮತ್ತು ವೆನೇಡಿಯಂ, ರೋಗನಿರೋಧಕತೆ, ಪುನರುತ್ಪಾದನೆ ಮತ್ತು ಮಿದುಳಿನ ಬೆಳವಣಿಗೆಗೆ ಅಗತ್ಯವಾದ ಸತು ಹಾಗೂ ಹಿಮೋಗ್ಲೋಬಿನ್ ಉತ್ಪಾದನೆಗೆ ಕಾರಣವಾಗುವ ಕಬ್ಬಿಣದ ಅಂಶ ಕಡಿಮೆಯಾಗುತ್ತಿದೆ. ಇದರಿಂದ ನರಸಂಬಂಧಿ, ಪುನರುತ್ಪಾದನೆ ಮತ್ತು ಸ್ನಾಯು-ಮೂಳೆಗೆ ಸಂಬಂಧಿಸಿದ ರೋಗಗಳು ಹೆಚ್ಚುತ್ತಿವೆ ಎಂದು ನೇಚರ್ ಪತ್ರಿಕೆಯ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ ವರದಿಯಾಗಿದೆ. ಇಷ್ಟಲ್ಲದೆ, ಪೋಷಕಾಂಶಭರಿತ ದ್ವಿದಳ ಧಾನ್ಯ(ಜೋಳ, ಸಿರಿಧಾನ್ಯ ಇತ್ಯಾದಿ)ಗಳ ಬಳಕೆ ಕಡಿಮೆಯಾಗಿದೆ. ಇದರಿಂದ ಭಾರತೀಯರಲ್ಲಿ ಪೋಷಕಾಂಶ ಅಸುರಕ್ಷತೆ ಹೆಚ್ಚಿದೆ.
ಈ ವರದಿ ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ(ಐಸಿಎಂಆರ್) ನಡೆಸಿದ ಅಧ್ಯಯನಕ್ಕೆ ತಾಳೆಯಾಗುತ್ತದೆ. 1990-2016ರ ಅವಧಿಯಲ್ಲಿ ಭಾರತೀಯರಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು ಶೇ.25ರಷ್ಟು ಹೆಚ್ಚಿವೆ ಎಂದು ಐಸಿಎಂಆರ್ ಅಧ್ಯಯನ ಹೇಳುತ್ತದೆ. ಅಂದಾಜಿನ ಪ್ರಕಾರ, ಜಗತ್ತಿನಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆ ಇರುವ 2 ಶತಕೋಟಿ ಜನರಲ್ಲಿ ಭಾರತೀಯರ ಪಾಲು 2/3. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಗಳು ಮಕ್ಕಳಲ್ಲಿ ಕುಬ್ಜಗೊಳ್ಳುವಿಕೆ ಪ್ರಮಾಣ (2015-16ರಿಂದ 2019-21) ಕಡಿಮೆಯಾಗಿದೆ ಎಂದಿದ್ದರೂ, 5ವರ್ಷದೊಳಗಿನ ಇಂತಹ ಮಕ್ಕಳ ಪ್ರಮಾಣ ಶೇ.35ರಷ್ಟಿದೆ. ದೇಶದ 161 ಜಿಲ್ಲೆಗಳಲ್ಲಿ ಶೇ.40ಕ್ಕೂ ಅಧಿಕ ಮಕ್ಕಳು ಕುಬ್ಜಗೊಳ್ಳುವಿಕೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ, ದಿನನಿತ್ಯದ ಆಹಾರದಲ್ಲಿ ಪೋಷಕಾಂಶ ಕೊರತೆ.
ಹಸಿರು ಕ್ರಾಂತಿಯ ಅನಾಹುತಗಳಲ್ಲಿ ಮಣ್ಣಿನ ಸಾರ ನಷ್ಟ, ಅತಿ ನೀರಾವರಿಯಿಂದ ಭೂಮಿ ಚೌಳು ಹಿಡಿಯುವಿಕೆ, ಅಂತರ್ಜಲ ಮಟ್ಟ ಕುಸಿತ, ನೆಲದ ಮೇಲಿನ ನೀರಿನ ಮಾಲಿನ್ಯ ಮತ್ತು ಏಕ ಬೆಳೆ ಕೃಷಿಯನ್ನು ಉಲ್ಲೇಖಿಸಲಾಗುತ್ತದೆ. ಆದರೆ, ಇದೇ ಮೊದಲ ಬಾರಿ ಪೋಷಕಾಂಶ ಸುರಕ್ಷತೆಯ ಪ್ರಶ್ನೆ ಮುನ್ನೆಲೆಗೆ ಬಂದಿದೆ. 2021ರಲ್ಲಿ ಐಸಿಎಆರ್-ಬಿಧಾನ್ ಚಂದ್ರ ಕೃಷಿ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದಲ್ಲಿ ಧಾನ್ಯಗಳಲ್ಲಿ ಸತು-ಕಬ್ಬಿಣದ ಸಾಂದ್ರತೆ ಕಡಿಮೆಯಾಗಿದ್ದು ಪತ್ತೆಯಾಗಿತ್ತು. ಇದಕ್ಕೆ ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ ಮತ್ತು ಗಿಡ ಕಾಳಿಗೆ ಪೋಷಕಾಂಶಗಳನ್ನು ವರ್ಗಾಯಿಸುವಲ್ಲಿ ವಿಫಲವಾಗಿದ್ದು ಕಾರಣ. ಆಧುನಿಕ ತಳಿಗಳಲ್ಲಿ ಕಬ್ಬಿಣ-ಸತುವಿನ ಸಾಂದ್ರತೆ ಕಡಿಮೆಯಾಗಿರುವ ಕುರಿತು ಹಲವು ಜಾಗತಿಕ ಸಮೀಕ್ಷೆಗಳು ನಡೆದಿವೆ. ಇಂತಹ ಕುಸಿತವು ಕುಬ್ಜ ತಳಿಗಳ ಪರಿಚಯಿಸುವಿಕೆಯಿಂದ ಆರಂಭವಾಯಿತು ಎನ್ನುವುದು ಸ್ಪಷ್ಟವಾಗಿದೆ. ಮಣ್ಣಿನಲ್ಲಿ ಸತು-ಕಬ್ಬಿಣ ಅಂಶ ಹೇರಳವಾಗಿದ್ದರೂ, ಅದನ್ನು ಕಾಳಿನಲ್ಲಿ ಸಂಗ್ರಹಿಸುವಲ್ಲಿ ಗಿಡಗಳು ವಿಫಲವಾಗುತ್ತಿವೆ. ಕ್ಯಾಲ್ಸಿಯಂ, ಸತು, ಕಬ್ಬಿಣ, ತಾಮ್ರದ ಅಂಶ ಹೇರಳವಾಗಿರುವ ಭೂಮಿಯಲ್ಲಿ ಬೆಳೆದಾಗಲೂ, ಸಾಂಪ್ರದಾಯಿಕ ತಳಿಗಳಿಗೆ ಹೋಲಿಸಿದರೆ ಹೊಸ ತಳಿಗಳಲ್ಲಿ ಪೋಷಕಾಂಶಗಳ ಸಾಂದ್ರತೆ ಕಡಿಮೆ ಇತ್ತು. ಲಿಥಿಯಂ, ವೆನೇಡಿಯಂ ಹೊರತುಪಡಿಸಿ, ಸಿಲಿಕಾನ್, ತವರ, ಬೆಳ್ಳಿ ಮತ್ತು ಗಾಲಿಯಂ ಅಂಶಗಳು ಕಡಿಮೆಯಾಗಿದ್ದವು.
ಹಸಿರು ಕ್ರಾಂತಿ ಅಸಂಖ್ಯಾತ ಜನರ ಹೊಟ್ಟೆ ತುಂಬಿಸಿತು. ದೇಶ ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿತು. ಆಗ ವಿಜ್ಞಾನಿಗಳಿಗೆ ಇದ್ದಿದ್ದು ಏಕೈಕ ಗುರಿ-ಇಳುವರಿ ಹೆಚ್ಚಳ. ಇದರಿಂದ ಸ್ಥಳೀಯ ಪರಿಸರ ವ್ಯವಸ್ಥೆಗೆ ಸೂಕ್ತವಾಗಿದ್ದ ಮತ್ತು ಪೋಷಕಾಂಶಭರಿತವಾಗಿದ್ದ ಸ್ಥಳೀಯ ತಳಿಗಳು ನೇಪಥ್ಯಕ್ಕೆ ಸರಿದವು. 16 ಭತ್ತ ಮತ್ತು 18 ಗೋಧಿ ಮೂಲಬೀಜಗಳನ್ನು ಬಳಸಿಕೊಂಡು 1,500ಕ್ಕೂ ಅಧಿಕ ತಳಿಗಳನ್ನು ಬಿಡುಗಡೆಗೊಳಿಸಲಾಗಿದೆ. ಕಾಳಿನಲ್ಲಿ ಸರಳ ಸಕ್ಕರೆಯನ್ನು ಸೃಷ್ಟಿಸುವ ಫೈಟೋಸಿಂಥೇಟ್ಸ್‌ಗಳನ್ನು ಹೆಚ್ಚಿಸಲು ಕುಬ್ಜ ವಂಶವಾಹಿಯನ್ನು ಸೇರಿಸಲಾಯಿತು. ಇದರಿಂದ ಕಾಳಿನ ಗಾತ್ರ ಮತ್ತು ಇಳುವರಿ ಹೆಚ್ಚಿತು; ಪೋಷಕಾಂಶ/ಖನಿಜಗಳು ಹೆಚ್ಚಲಿಲ್ಲ. ಕಾಲಕ್ರಮೇಣ ಕಾಳಿನಲ್ಲಿ ಪೋಷಕಾಂಶ ಸೇರ್ಪಡೆ ಕುಸಿಯಿತು. 1980ರ ಬಳಿಕ ಕೀಟ, ರೋಗಗಳನ್ನು ತಡೆಯಬಲ್ಲ, ಚೌಳು, ತೇವ ಮತ್ತು ಬರ ನಿರೋಧಕ ತಳಿಗಳಿಗೆ ಆದ್ಯತೆ ಹೆಚ್ಚಿತು. ವಂಶವಾಹಿಗಳ ನಿರಂತರ ತಿದ್ದುವಿಕೆಯಿಂದ ಸಸ್ಯಗಳು ತಮ್ಮ ಸ್ವಾಭಾವಿಕ ರೋಗನಿರೋಧಕ ಗುಣಗಳನ್ನು ಕಳೆದು ಕೊಂಡಿವೆ. ಸಸ್ಯಗಳು ಮಣ್ಣು ಮತ್ತು ನೀರಿನಿಂದ ಒಳ್ಳೆಯ-ಕೆಟ್ಟ ಎರಡೂ ಅಂಶಗಳನ್ನು ಹೀರಿಕೊಳ್ಳುತ್ತವೆ. ಆದರೆ, ಅವುಗಳಿಗೆ ತನಗೆ ಅಥವಾ ಮನುಷ್ಯರಿಗೆ ಕೆಡುಕು ತರಬಲ್ಲ ಅಂಶಗಳು ಕಾಳು ತಲುಪುವುದನ್ನು ತಡೆಯುವ ಸಾಮರ್ಥ್ಯ ಇರುತ್ತದೆ. ಉದಾಹರಣೆಗೆ, ಆರ್ಸೆನಿಕ್ ಸಸ್ಯಗಳಿಗೆ ಹೆಚ್ಚು ಹಾನಿಕರವಲ್ಲ. ಆದರೆ, ಮನುಷ್ಯರಿಗೆ ತೀವ್ರ ವಿಷ. ನೆಲದಲ್ಲಿ ಆರ್ಸೆನಿಕ್ ಅಂಶ ಹೆಚ್ಚು ಇದ್ದಾಗ, ಸಸ್ಯ ಅದರ ಸಾಗಣೆಯನ್ನು ತನ್ನಿಂತಾನೇ ನಿಲ್ಲಿಸುತ್ತದೆ. ಇಂಥ ಗುಣ ಈಗ ಕಡಿಮೆಯಾಗಿದೆ.
ಗೋಧಿಗೆ ಹೋಲಿಸಿದರೆ, ಭತ್ತದಲ್ಲಿ ಹೆಚ್ಚು ವಿಷ ವಸ್ತುಗಳು ಕಂಡು ಬಂದಿದೆ. ಭತ್ತದ ಕೃಷಿಯಲ್ಲಿ ಗಿಡದ ಬುಡ ನೀರಿನಲ್ಲಿ ಮುಳುಗಿರುತ್ತದೆ. ಮಣ್ಣು ನೀರಿನಲ್ಲಿ ಮುಚ್ಚಲ್ಪಟ್ಟಿರುವುದರಿಂದ, ಗಾಳಿ ಬೇರನ್ನು ತಲುಪಲು ಆಗುವುದಿಲ್ಲ. ಇಂಥ ಸನ್ನಿವೇಶದಲ್ಲಿ ಭಾರೀ ಲೋಹಗಳು ರಾಸಾಯನಿಕವಾಗಿ ಸ್ಥಿತ್ಯಂತರ ಹೊಂದಿ, ಹೆಚ್ಚು ಕರಗಬಲ್ಲ ಸ್ಥಿತಿ ತಲುಪುತ್ತವೆ. ಇದನ್ನು ಸಸ್ಯಗಳು ಗುರುತಿಸಲಾರವು.
ಜಾಗತಿಕ ಸಮಸ್ಯೆ:
ತೀವ್ರ ಇಳುವರಿ ತಳಿಗಳನ್ನು ಪರಿಚಯಿಸಿದ ಬಳಿಕ ಜಗತ್ತಿನೆಲ್ಲೆಡೆ ಆಹಾರದ ಸತ್ವ ಕುಸಿಯುವಿಕೆ ಕಂಡುಬಂದಿದೆ. ಇಂಗ್ಲೆಂಡ್‌ನ ರಾಥೆಮ್‌ಸ್ಟೆಡ್ ರಿಸರ್ಚ್‌ನ ಮಿಂಗ್ ಶೆಂಗ್ ಫ್ಯಾನ್ ನಡೆಸಿದ ಅಧ್ಯಯನ, 2006ರಲ್ಲಿ ಅಮೆರಿಕದಲ್ಲಿ ಹಾಗೂ ಇರಾನಿನಲ್ಲೂ ಈ ಕುರಿತು ಅಧ್ಯಯನ ನಡೆದಿದೆ. ಧಾನ್ಯದಲ್ಲಿ ಸತು, ತಾಮ್ರ, ಕಬ್ಬಿಣ ಮತ್ತು ಮೆಗ್ನೀಷಿಯಂ ಪ್ರಮಾಣ ಕಡಿಮೆಯಾಗಿರುವುದು ದಾಖಲಾಗಿದೆ. ಇದನ್ನು ತಡೆಯಲು ವಿಜ್ಞಾನಿಗಳು ಹಲವು ಪ್ರಯತ್ನ ನಡೆಸಿದ್ದಾರೆ. 2016ರ ಬಳಿಕ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಸ್ವಾಧೀನದಲ್ಲಿರುವ ಕಟಕ್‌ನ ರಾಷ್ಟ್ರೀಯ ಭತ್ತ ಸಂಶೋಧನೆ ಸಂಸ್ಥೆ(ಎನ್‌ಆರ್‌ಆರ್‌ಐ), ಹೈದರಾಬಾದಿನ ಭತ್ತ ಸಂಶೋಧನೆ ಸಂಸ್ಥೆ(ಐಐಆರ್‌ಆರ್) ಮತ್ತು ರಾಯಪುರದ ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾನಿಲಯಗಳು ಒಟ್ಟು ಹತ್ತು ಸತು-ಪ್ರೊಟೀನ್ ಸಮೃದ್ಧ ಭತ್ತದ ತಳಿಗಳನ್ನು ಬಿಡುಗಡೆಗೊಳಿಸಿವೆ. ಐಸಿಎಆರ್‌ನ ಇನ್ನಿತರ ಸಂಸ್ಥೆಗಳು ಸತು, ಪ್ರೊಟೀನ್, ಕಬ್ಬಿಣಾಂಶ ಇರುವ 43 ಗೋಧಿ ತಳಿಗಳನ್ನು ಅಭಿವೃದ್ಧಿ ಪಡಿಸಿವೆ. ಐಸಿಎಆರ್ 142 ಬಯೋಫೋರ್ಟಿಫೈಡ್ ತಳಿಗಳನ್ನು ಅಭಿವೃದ್ಧಿ ಪಡಿಸಿದೆ. ಆದರೆ, ಇವು ರೈತರನ್ನು ತಲುಪಿಲ್ಲ. ಕಳೆದ 6 ವರ್ಷಗಳಲ್ಲಿ 10 ದಶಲಕ್ಷ ಹೆಕ್ಟೇರಿನಲ್ಲಿ ಮಾತ್ರ(ಒಟ್ಟು ಕೃಷಿ ಭೂಮಿಯ ಶೇ.6) ಬಯೋಫೋರ್ಟಿಫೈಡ್ ತಳಿಗಳನ್ನು ಬೆಳೆಸಲಾಗುತ್ತಿದೆ ಎಂದು ಸರಕಾರ ಲೋಕಸಭೆಯಲ್ಲಿ ಡಿಸೆಂಬರ್ 8, 2023 ರಂದು ಹೇಳಿತ್ತು. ಪ್ರಸಕ್ತ ಬಯೋಫೋರ್ಟಿಫಿಕೇಷನ್ ಸತು, ಕಬ್ಬಿಣ ಮತ್ತು ಪ್ರೊಟೀನಿಗೆ ಸೀಮಿತವಾಗಿದೆ. ಮ್ಯಾಂಗನೀಸ್, ತಾಮ್ರ ಮತ್ತು ಕ್ಯಾಲ್ಸಿಯಂ ಸೇರ್ಪಡೆಗೆ ವಿಜ್ಞಾನಿಗಳ ಪ್ರಕಾರ ಅಂದಾಜು 8 ವರ್ಷ ಬೇಕಾಗಬಹುದು. ಎಲೆಗಳ ಮೇಲೆ ಸಿಂಪಡಣೆ ಇಲ್ಲವೇ ಸೂಕ್ಷ್ಮ ಗೊಬ್ಬರವಾಗಿ ಕೊಡುವ ಪ್ರಯೋಗಗಳು ನಡೆಯುತ್ತಿವೆ. ಆದರೆ, ಇದು ದುಬಾರಿ ಪ್ರಕ್ರಿಯೆ. ಸಿಂಪಡಣೆ ಮಾಡಿದ ಬಳಿಕ ಮಳೆ ಬಂದರೆ, ಎಲ್ಲ ಕೊಚ್ಚಿ ಹೋಗಲಿದೆ.
ಕೂಲಿ ಕಾರ್ಮಿಕರ ಅಲಭ್ಯತೆ, ಬಿತ್ತನೆ ಬೀಜ, ರಸಗೊಬ್ಬರ-ಕೀಟನಾಶಕ ಸೇರಿದಂತೆ ಒಳಸುರಿಗಳ ಬೆಲೆ ಹೆಚ್ಚಳ, ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಅಕಾಲಿಕ ಋತುಮಾನ ಬದಲಾವಣೆಗಳು, ಮಾರುಕಟ್ಟೆ ಏರಿಳಿತ ಇತ್ಯಾದಿಯಿಂದಾಗಿ ಕೃಷಿ ಲಾಭದಾಯಕವಲ್ಲದ ವೃತ್ತಿಯಾಗಿ ಬದಲಾಗಿ ಬಹಳ ಕಾಲ ಸಂದಿದೆ. ಹೀಗಿರುವಾಗ, ರೈತರು ಇಳುವರಿಯನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಹವಾಮಾನ ಬದಲಾವಣೆಯ ಈ ಯುಗದಲ್ಲಿ ಅಥವಾ ಉಕ್ರೇನ್ ಯುದ್ಧದಂಥ ಸನ್ನಿವೇಶ ಎದುರಾಗುವ ಸಾಧ್ಯತೆ ಹೆಚ್ಚು ಇರುವ ಕಾಲಮಾನದಲ್ಲಿ ಇಳುವರಿ ಕಡಿತ ಸೂಕ್ತವಲ್ಲ. ಸಾವಯವ/ದೇಶಿ ಕೃಷಿಗೆ ಮರಳಬೇಕು ಎಂದಾದಲ್ಲಿ ಆ ಆಯಾಮ ಎತ್ತುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಚೆಂಡು ಕೃಷಿ ಸಂಶೋಧನೆ ಸಂಸ್ಥೆಗಳು, ಸರಕಾರದ ಅಂಗಳದಲ್ಲಿ ಇದೆ.