ಭೂಮಿ, ಸಾಗರದಲ್ಲೂ ತುಂಬಿರುವ ಪ್ಲಾಸ್ಟಿಕ್ ತ್ಯಾಜ್ಯ
ಭೂಮಿ, ತಾಯಿಮಾಸು(ಸೆತ್ತೆ)ಯಿಂದ ಹಿಡಿದು ಮೀನು ಸೇರಿದಂತೆ ಸಮುದ್ರದ ಜೀವಿಗಳಲ್ಲೂ ಇರುವ ವಸ್ತು ಒಂದಿದೆ: ಅದು ಪ್ಲಾಸ್ಟಿಕ್. ತಥಾಗಥನು ಹೇಳಿದಂತೆ, ಸಾವಿಲ್ಲದ ಮನೆಯಿಂದ ಸಾಸಿವೆ ತರಬಹುದೇನೋ; ಆದರೆ, ಪ್ಲಾಸ್ಟಿಕ್ ಮಾಲಿನ್ಯ ಇಲ್ಲದ ದೇಶ, ವಸ್ತು-ಜೀವಿ ಇರಲಾರದು.
ಎಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಯಾಗುತ್ತಿದೆ? ಪರಿಸರದಲ್ಲಿ ಅತಿ ಹೆಚ್ಚು ಕಾಣಸಿಗುವ ಪ್ಲಾಸ್ಟಿಕ್ ತ್ಯಾಜ್ಯ ಯಾವುದು? ಪ್ಲಾಸ್ಟಿಕ್ ತ್ಯಾಜ್ಯ ಮಾರಕವಾಗಿದ್ದರೂ, ಕೆಲವು ದೇಶಗಳು ಅದರ ಉತ್ಪಾದನೆಯನ್ನು ನಿಯಂತ್ರಿಸಲು ಏಕೆ ಹಿಂಜರಿಯುತ್ತಿವೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ದಕ್ಷಿಣ ಕೊರಿಯದ ಬುಸಾನ್‌ನಲ್ಲಿ ವಿಶ್ವಸಂಸ್ಥೆ ನೇತೃತ್ವದ ಜಾಗತಿಕ ಸಭೆಯೊಂದು ನಡೆಯಿತು. ವಿಶ್ವ ಸಂಸ್ಥೆಯ ಪರಿಸರ ಸಭೆ(ಯುಎಸ್‌ಎಇ)ಯು ಮಾರ್ಚ್ 2022ರಲ್ಲಿ ಸಾಗರ ಸೇರಿದಂತೆ ಎಲ್ಲೆಡೆ ಪ್ಲಾಸ್ಟಿಕ್ ತ್ಯಾಜ್ಯ ನಿವಾರಣೆಗೆ ನಿರ್ಧರಿಸಿತು. ಈ ಸಂಬಂಧ ಒಪ್ಪಂದವೊಂದಕ್ಕೆ ಬರಲು ಅಂತರ್‌ಸರಕಾರ ಸಂಧಾನ ಸಮಿತಿ(ಐಎನ್‌ಸಿ)ಯನ್ನು ರಚಿಸಿ, 2024ರೊಳಗೆ ಒಪ್ಪಂದವೊಂದಕ್ಕೆ ಬರಲು ಸೂಚಿಸಿತು. ಈ ಸಮಿತಿಯ 5ನೇ ಸಭೆಯು ದಕ್ಷಿಣ ಕೊರಿಯದ ಬುಸಾನ್‌ನಲ್ಲಿ ನಡೆಯಿತು.
ಗಂಭೀರ ಸಮಸ್ಯೆ:
ಪ್ಲಾಸ್ಟಿಕ್ ಮಾಲಿನ್ಯ ಭೂಮಂಡಲವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ. ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ(ಯುಎನ್‌ಇಪಿ)ದ ಪ್ರಕಾರ, 1970ರಿಂದ 1990ರ ಅವಧಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣ ಮೂರು ಪಟ್ಟು ಹೆಚ್ಚಳಗೊಂಡಿದೆ. 2000ರ ಆರಂಭಿಕ ದಶಕವೊಂದರಲ್ಲೇ ಕಳೆದ 40 ವರ್ಷಕ್ಕಿಂತ ಅಧಿಕ ತ್ಯಾಜ್ಯ ಸೃಷ್ಟಿಯಾಗಿದೆ. ಪ್ರಸಕ್ತ ಜಾಗತಿಕವಾಗಿ ವಾರ್ಷಿಕ 400 ದಶಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರಿದರೆ, 2050ರ ಹೊತ್ತಿಗೆ ತ್ಯಾಜ್ಯದ ಗುಡ್ಡೆ 1,100 ದಶಲಕ್ಷ ಟನ್ ಆಗಲಿದೆ. ಇದು ಎಷ್ಟು ಅಗಾಧ ಪ್ರಮಾಣವೆಂದರೆ, 262 ಮೀಟರ್ ಉದ್ದ ಹಾಗೂ 62 ಮೀಟರ್ ಅಗಲ ಇರುವ ದೇಶಿ ವಿಮಾನ ಸಾಗಣೆ ಹಡಗು ಐಎನ್‌ಎಸ್ ವಿಕ್ರಾಂತ್ ತೂಕವೇ 45,000 ಟನ್ ಇರುತ್ತದೆ!
ಒಮ್ಮೆ ಮಾತ್ರ ಬಳಸಿ ಎಸೆಯುವ ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆ/ತ್ಯಾಜ್ಯ ನಿರಂತರವಾಗಿ ಹೆಚ್ಚುತ್ತಿದೆ. ಉತ್ಪಾದನೆಯಾಗುವ ಪ್ಲಾಸ್ಟಿಕ್‌ನಲ್ಲಿ ಶೇ.36ರಷ್ಟು ಪ್ಯಾಕೇಜಿಂಗ್‌ಗೆ ಬಳಕೆಯಾಗುತ್ತಿದೆ; ಇದರಲ್ಲಿ ಶೇ.85ರಷ್ಟು ಕಸ ಭೂ ಭರ್ತಿ ಸ್ಥಳವನ್ನು ಸೇರುತ್ತದೆ. ಇದಕ್ಕಿಂತ ಆತಂಕಕಾರಿ ಸಂಗತಿಯೆಂದರೆ, ಶೇ.98ರಷ್ಟು ಏಕ ಬಳಕೆ ಪ್ಲಾಸ್ಟಿಕನ್ನು ಪಳೆಯುಳಿಕೆ ಇಂಧನದಿಂದ ಉತ್ಪಾದಿಸಲಾಗುತ್ತದೆ. ಇಂತಹ ಪ್ಲಾಸ್ಟಿಕ್‌ನ ಉತ್ಪಾದನೆ, ಬಳಕೆ ಮತ್ತು ತ್ಯಾಜ್ಯ ನಿರ್ಮೂಲನದಿಂದ ಅಪಾರ ಪ್ರಮಾಣದ ಹಸಿರುಮನೆ ಅನಿಲಗಳು ಬಿಡುಗಡೆಯಾಗುತ್ತವೆ. ಜಾಗತಿಕವಾಗಿ ಉತ್ಪಾದನೆಯಾಗುವ 2 ಶತಕೋಟಿ ಟನ್ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಶೇ.10ಕ್ಕಿಂತ ಕಡಿಮೆ ಮರುಬಳಕೆ ಆಗುತ್ತದೆ. ಶ್ರೀಮಂತ ದೇಶಗಳು ಇಂತಹ ತ್ಯಾಜ್ಯವನ್ನು ಸಾವಿರಾರು ಕಿ.ಮೀ. ದೂರದ ಬಡ ದೇಶಗಳಿಗೆ ರವಾನಿಸಿ, ಅಲ್ಲಿ ಅದನ್ನು ದಹಿಸಿ ಇಲ್ಲವೇ ಭೂಭರ್ತಿ ತಾಣದಲ್ಲಿ ತುಂಬುತ್ತವೆ. ದಹನದಿಂದ ಸೃಷ್ಟಿಯಾಗುವ ಡೈಆಕ್ಸಿನ್ ಒಂದು ಕಠೋರ ವಿಷ. ಕೊಳ್ಳುಬಾಕ ಸಂಸ್ಕೃತಿ ಅಧಿಕಗೊಂಡಿರುವುದು ಹಾಗೂ ಮನೆಯಲ್ಲಿ ಆಹಾರ ಸಿದ್ಧಗೊಳಿಸದೆ ಹೊರಗಿನಿಂದ ತರಿಸುವ ಪ್ರವೃತ್ತಿ ಹೆಚ್ಚಳದಿಂದ, ಪ್ಯಾಕ್ ಮಾಡಲು ಬಳಸುವ ಪ್ಲಾಸ್ಟಿಕ್ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಬೇಕಾಬಿಟ್ಟಿ ಪ್ಯಾಕ್ ಮಾಡುವುದರಿಂದ, ಇಂತಹ ಪ್ಲಾಸ್ಟಿಕ್‌ನ ಪ್ರತ್ಯೇಕಿಸುವಿಕೆ ಮತ್ತು ಸಂಸ್ಕರಣೆಗೆ ವಾರ್ಷಿಕ 80-120 ಶತಕೋಟಿ ಡಾಲರ್ ನಷ್ಟ ಆಗುತ್ತಿದೆ ಎಂದು ಅಂದಾಜಿಸಲಾಗಿದೆ.
ಪ್ಲಾಸ್ಟಿಕ್ ಮಾಲಿನ್ಯಕ್ಕೆ ಧೂಮಪಾನಿಗಳ ಕೊಡುಗೆ ಅಪಾರವಾದದ್ದು. ಧೂಮಪಾನ ಆರೋಗ್ಯಕ್ಕೆ ಮಾತ್ರವಲ್ಲದೆ, ಪರಿಸರಕ್ಕೂ ಹಾನಿಕರ. ಸಿಗರೆಟ್ ಫಿಲ್ಟರಿನಲ್ಲಿ ಪ್ಲಾಸ್ಟಿಕ್(ಸೆಲ್ಯುಲೋಸ್ ಅಸಿಟೇಟ್)ನ ಸೂಕ್ಷ್ಮಎಳೆಗಳು ಇರುತ್ತವೆ. ಇವು ಜೈವಿಕವಾಗಿ ನಾಶವಾಗುವುದಿಲ್ಲ. ಫಿಲ್ಟರ್ ತುಣುಕುಗಳು ವಾತಾವರಣದಲ್ಲಿ ತುಂಬಿಕೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯಗಳಲ್ಲಿ ಪ್ರಮುಖವಾದವು. ಜಾಗತಿಕವಾಗಿ ವಾರ್ಷಿಕ 120 ಶತ ಕೋಟಿ ಸಿಗರೆಟ್ ಮಾರಾಟವಾಗುತ್ತದೆ. ಅದರಲ್ಲಿ ಶೇ.90ರಷ್ಟು ಫಿಲ್ಟರ್ ಹೊಂದಿರುತ್ತವೆ (ಮಾಹಿತಿ: https://www.tobaccotactics.org, ಬಾತ್ ವಿಶ್ವವಿದ್ಯಾನಿಲಯ). ಅಂದರೆ, ಪ್ರತೀ ವರ್ಷ ಅಂದಾಜು 108 ಶತ ಕೋಟಿ ಫಿಲ್ಟರ್‌ಗಳು ಚರಂಡಿ ಸೇರಿ, ನೀರಿನ ಹರಿವು ನಿಲ್ಲಿಸುತ್ತಿವೆ ಇಲ್ಲವೇ ಕಸದ ಗುಡ್ಡೆಯನ್ನು ಸೇರಿ ಅವಿನಾಶಿಯಾಗಿ ಉಳಿಯುತ್ತಿವೆ. ಭಾರತದಲ್ಲಿ ವರ್ಷವೊಂದಕ್ಕೆ 44 ದಶಲಕ್ಷ ಸಿಗರೆಟ್ ಮಾರಾಟವಾಗುತ್ತಿದೆ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಪ್ರಕಾರ, ತಂಬಾಕು ಸೇವನೆಯಿಂದ ಆಗುವ ಸಾವು/ರೋಗದಿಂದ ವಾರ್ಷಿಕ 1,773.4 ದಶಲಕ್ಷ ರೂ. ನಷ್ಟವಾಗುತ್ತಿದೆ. ಫಿಲ್ಟರ್ ಹೊರತುಪಡಿಸಿದರೆ, ಆಹಾರದ ಪೊಟ್ಟಣಗಳು, ಪ್ಲಾಸ್ಟಿಕ್ ಬಾಟಲಿ/ಮುಚ್ಚಳ, ದಿನಸಿ ತರುವ ಚೀಲಗಳು, ತಂಪುಪಾನೀಯ/ಎಳನೀರು ಹೀರಲು ಬಳಸುವ ಕೊಳವೆಗಳು ನಂತರದ ಸ್ಥಾನದಲ್ಲಿವೆ.
ದಿಲ್ಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರದ ಅಂದಾಜಿನ ಪ್ರಕಾರ, ದೇಶಕ್ಕೆ 2022ರ ಬಳಿಕ 24 ದಶಲಕ್ಷ ಟನ್ ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯ ಆಗಮಿಸಿದ್ದು, ದೇಶದ ಯಾಂತ್ರಿಕ ಪುನರ್ ಬಳಕೆ ಪ್ರಮಾಣ 9.8 ದಶಲಕ್ಷ ಟನ್ ಮಾತ್ರ. ಗ್ರಾಹಕ ಬಳಕೆ ವಸ್ತುಗಳಲ್ಲಿ ಬಳಸಲ್ಪಡುವ ಮತ್ತು ಒಂದು ವರ್ಷದೊಳಗೆ ತ್ಯಾಜ್ಯವಾಗುವ 15 ದಶಲಕ್ಷ ಟನ್ ಪ್ಲಾಸ್ಟಿಕ್‌ನಲ್ಲಿ ಶೇ.20ನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ಇದು ಭಾರತದ ಸಮಸ್ಯೆ ಮಾತ್ರವಲ್ಲ; ಬಳಕೆ ಬಳಿಕ ತ್ಯಾಜ್ಯವಾಗುವ ಪ್ಲಾಸ್ಟಿಕ್ ನಿರ್ವಹಣೆ ಎಲ್ಲೆಡೆ ಕಠಿಣವಾಗಿದೆ. ಇದರಿಂದ ಉತ್ಪಾದನೆ ಮೇಲೆ ಮಿತಿ ಹೇರುವ ಆಲೋಚನೆ ಬಂದಿದೆ.
ಬುಸಾನ್‌ನಲ್ಲಿ ಏನಾಯಿತು?:
ಬುಸಾನ್‌ನಲ್ಲಿ ನಡೆದ ಪ್ಲಾಸ್ಟಿಕ್ ಕುರಿತ 5ನೇ ಅಂತರ್ ಸರಕಾರ ಸಂಧಾನ ಸಮಿತಿ(ಐಎನ್‌ಸಿ 5) ಸಭೆಯಲ್ಲಿ 170 ದೇಶಗಳು ಭಾಗಿಯಾಗಿದ್ದವು. ಪ್ಲಾಸ್ಟಿಕ್ ತ್ಯಾಜ್ಯವನ್ನು ಕೊನೆಗೊಳಿಸಲು ಶಾಸನಾತ್ಮಕವಾಗಿ ಬದ್ಧವಾಗಿರಬೇಕಾದ ‘ಜಾಗತಿಕ ಪ್ಲಾಸ್ಟಿಕ್ ಒಪ್ಪಂದ’ವನ್ನು ರೂಪಿಸುವುದು ಸಭೆಯ ಉದ್ದೇಶವಾಗಿತ್ತು.
ಸಭೆಯಲ್ಲಿ ಪ್ಲಾಸ್ಟಿಕ್ ಉತ್ಪಾದನೆ/ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಾಥಮಿಕ ಕರಡು ಸಿದ್ಧಗೊಳಿಸಲಾಯಿತು. ಆದರೆ, ಮುಖ್ಯ ಉದ್ದೇಶವಾದ ಪ್ಲಾಸ್ಟಿಕ್ ಉತ್ಪಾದನೆ ಮತ್ತು ವ್ಯಾಪಾರದ ಮೇಲೆ ಮಿತಿ ಹೇರಿಕೆ ಹಾಗೂ ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಬಳಸುವ ಪದಾರ್ಥಗಳಿಂದಾಗುವ ಹಾನಿಯನ್ನು ನಿವಾರಿಸುವುದು ಹೇಗೆ ಎಂಬ ಬಗ್ಗೆ ಕರಡು ಏನನ್ನೂ ಹೇಳಿಲ್ಲ ಎಂದು ಯುರೋಪಿಯನ್ ಯೂನಿಯನ್ ಹಾಗೂ ಪೆಸಿಫಿಕ್ ದ್ವೀಪ ದೇಶಗಳ ಸಹಯೋಗ(ಹೈ ಆಂಬಿಷನ್ ಕೊಯಲಿಷನ್) ದೂರಿದವು. ಪ್ರಾಥಮಿಕ ಪ್ಲಾಸ್ಟಿಕ್ ಪಾಲಿಮರ್‌ಗಳ ಉತ್ಪಾದನೆ ಕಡಿತ ಹಾಗೂ ಪ್ಲಾಸ್ಟಿಕ್ ಮಾಲಿನ್ಯದಿಂದ ಸಂಭವಿಸುವ ಆರೋಗ್ಯ ವಿಪರಿಣಾಮಗಳಿಂದ ರಕ್ಷಿಸಲು ತೆಗೆದುಕೊಳ್ಳ ಬೇಕಾದ ಕಾರ್ಯತಂತ್ರಗಳ ಬಗ್ಗೆ ಯುರೋಪಿಯನ್ ಯೂನಿಯನ್ ಮಂಡಿಸಿದ ಪ್ರಸ್ತಾವಗಳೂ ಸಮ್ಮತವಾಗಿಲ್ಲ.
ಪ್ಲಾಸ್ಟಿಕ್ ತಯಾರಿಕೆಗೆ ಬಳಸುವ ಪಾಲಿಮರ್‌ಗಳ ಉತ್ಪಾದನೆ ಪ್ರಮುಖ ಉದ್ಯಮವಾಗಿರುವ ಸೌದಿ ಅರೇಬಿಯ, ಚೀನಾ, ಭಾರತ ಒಳಗೊಂಡ ದೇಶಗಳ ಗುಂಪು ‘ಈ ವಿಷಯ ಕುರಿತ ಯಾವುದೇ ಉಲ್ಲೇಖ ಇರಬಾರದು’ ಎಂದು ಹೇಳಿದವು. ಹಾನಿಕರ ಎನ್ನಲಾದ ರಾಸಾಯನಿಕಗಳನ್ನು ರಾಟರ್‌ಡ್ರಾಮ್, ಬಾಸೆಲ್, ಸ್ಟಾಕ್‌ಹೋಮ್ ಮತ್ತಿತರ ಅಂತರ್‌ರಾಷ್ಟ್ರೀಯ ಒಪ್ಪಂದಗಳಲ್ಲಿ ಸೇರ್ಪಡೆಗೊಳಿಸಲಾಗಿದೆ. ಹೀಗಾಗಿ, ಪ್ಲಾಸ್ಟಿಕ್ ಒಪ್ಪಂದದಲ್ಲಿ ರಾಸಾಯನಿಕಗಳ ಸೇರ್ಪಡೆ ಅಗತ್ಯವಿಲ್ಲ ಎಂಬುದು ನಿಲುವು.
ಪ್ರತಿಯಾಗಿ, ‘ಕರಡಿನಲ್ಲಿ ಉತ್ಪಾದನೆ ಎಂಬ ಪದ ಇರಬೇಕು. ಇಲ್ಲವಾದಲ್ಲಿ 2050ರ ಹೊತ್ತಿಗೆ ಪ್ಲಾಸ್ಟಿಕ್ ತ್ಯಾಜ್ಯದ ತೂಕ ಸಮುದ್ರದಲ್ಲಿರುವ ಮೀನುಗಳ ತೂಕವನ್ನು ಮೀರಿಸಲಿದೆ’ ಎಂದು ಪನಾಮಾ ತಂಡದ ಮುಖ್ಯಸ್ಥ ಜುವಾನ್ ಮಾಂಟೆರ್ರಿ ಹಾಗೂ ‘ಸಮುದ್ರ ಜೀವಿಗಳ ದೇಹದಲ್ಲಿ ಶೇ.60ರಷ್ಟು ಪ್ಲಾಸ್ಟಿಕ್ ಇದೆ. ತಾಯಿಮಾಸಿನಲ್ಲೂ ಪ್ಲಾಸ್ಟಿಕ್ ಕಣಗಳು ಇವೆ. ಹೀಗಾಗಿ, ದೇಶಗಳು ಈ ವಿಷಯವನ್ನು ಕಡೆಗಣಿಸಲು ಆಗುವುದಿಲ್ಲ’ ಎಂದು ಫಿಜಿಯ ಪರಿಸರ ಮತ್ತು ಹವಾಮಾನ ಬದಲಾವಣೆಯ ಖಾಯಂ ಕಾರ್ಯದರ್ಶಿ ಸಿವೆಂದ್ರ ಮೈಖಲ್ ಹೇಳಿದ್ದಾರೆ.
ಭಾರತದ ನಿಲುವೇನು?
ತಾನು 2022ರಲ್ಲೇ ಏಕಬಳಕೆಯ 22 ಬಗೆಯ ಪ್ಲಾಸ್ಟಿಕನ್ನು ನಿಷೇಧಿಸಿದ್ದೇನೆ. ಉತ್ಪಾದಕರನ್ನು ಉತ್ತರದಾಯಿ ಆಗಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಇದರಿಂದ ಕಂಪೆನಿಗಳು ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯದ ನಿರ್ದಿಷ್ಟ ಪ್ರಮಾಣವನ್ನು ಕಡ್ಡಾಯವಾಗಿ ಮರುಬಳಕೆ ಮಾಡಬೇಕಿದೆ. ಪ್ಲಾಸ್ಟಿಕ್ ಪಾಲಿಮರ್‌ಗಳ ಉತ್ಪಾದನೆಯನ್ನು ನಿಯಂತ್ರಿಸುವ ಯಾವುದೇ ಕ್ರಮವನ್ನು ತಾನು ಬೆಂಬಲಿಸುವುದಿಲ್ಲ. ಇದರಿಂದ ದೇಶದ ಆರ್ಥಿಕ ಪ್ರಗತಿ ಮೇಲೆ ವಿಪರಿಣಾಮವುಂಟಾಗಲಿದೆ. ಪಾಲಿಮರ್ ಉತ್ಪಾದನೆ ಮತ್ತು ರಫ್ತು ಕ್ಷೇತ್ರದಲ್ಲಿ ರಿಲಯನ್ಸ್ ಸೇರಿದಂತೆ ಹಲವು ಕಂಪೆನಿಗಳು ತೊಡಗಿಸಿಕೊಂಡಿವೆ. ಉತ್ಪಾದನೆ ಕಡಿತ ಮತ್ತು ಪೂರೈಕೆ ಮೇಲಿನ ನಿರ್ಬಂಧವು ವ್ಯಾಪಾರಕ್ಕೆ ತಡೆಯೊಡ್ಡುವ ಉಪಕ್ರಮ ಆಗಲಿದೆ ಎಂದು ಭಾರತ ಹೇಳಿದೆ.
ಅದೇ ಹೊತ್ತಿನಲ್ಲಿ ‘ಪ್ಲಾಸ್ಟಿಕ್ ಪಾಲಿಮರ್‌ಗಳ ಬಳಕೆ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳಲ್ಲಿ ಇರುವ ಹಾನಿಕರ ರಾಸಾಯನಿಕಗಳ ಮೇಲೆ ಮಿತಿ ವಿಧಿಸಬೇಕು’ ಎಂಬ ಐಎನ್‌ಸಿ 5ರ ಅಧ್ಯಕ್ಷರ ಸಲಹೆಯನ್ನು ಭಾರತ ವಿರೋಧಿಸಿದೆ. ‘ಪ್ಲಾಸ್ಟಿಕ್ ಅಲ್ಲದ ಪರ್ಯಾಯಗಳ ಸಂಶೋಧನೆ, ಅನ್ವೇಷಣೆ ಹಾಗೂ ಸೇವೆಗಳ ಬಳಕೆಯನ್ನು ಬೆಂಬಲಿಸುವುದಿಲ್ಲ,’ ಎಂದು ಹೇಳಿದೆ. ಅಂದರೆ, ನಿರ್ದಿಷ್ಟ ಉತ್ಪನ್ನ ಇಲ್ಲವೇ ವಸ್ತುಗಳ ಬಳಕೆಗೆ ನಿಷೇಧ ಹೇರುವುದನ್ನು ದೇಶ ವಿರೋಧಿಸುತ್ತಿದೆ.
ಪ್ಲಾಸ್ಟಿಕ್ ಮಾಲಿನ್ಯ ಕುರಿತ ಅಂತಿಮ ಒಪ್ಪಂದವು ಇನ್ನಿತರ ಅಂತರ್‌ರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸಬಾರದು; ರಾಷ್ಟ್ರೀಯ ಆದ್ಯತೆಗಳು, ಸಾಮರ್ಥ್ಯ ಹಾಗೂ ದೇಶಗಳ ಅಭಿವೃದ್ಧಿಯ ಹಕ್ಕುಗಳನ್ನು ಗೌರವಿಸಬೇಕು ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ತಂತ್ರಜ್ಞಾನ ವರ್ಗಾವಣೆಯಲ್ಲದೆ ಆರ್ಥಿಕ ನೆರವು ನೀಡಬೇಕು ಎಂದು ಭಾರತ ಒತ್ತಾಯಿಸಿದೆ. ಚೀನಾ, ರಶ್ಯ, ಸೌದಿ ಅರೇಬಿಯ, ಇರಾನ್, ಇರಾಕ್ ಮತ್ತು ಅಮೆರಿಕ ಕೂಡ ಪ್ಲಾಸ್ಟಿಕ್ ಉತ್ಪಾದನೆ ಸ್ಥಗಿತಗೊಳಿಸುವಿಕೆಯು ಆರ್ಥಿಕವಾಗಿ ಹಾನಿಕರ ಎಂದು ಹೇಳುತ್ತಿವೆ. ಭಾಗವಹಿಸಿದ್ದ 85-100ರಷ್ಟು ದೇಶಗಳು ಪ್ಲಾಸ್ಟಿಕ್ ಉತ್ಪಾದನೆ ಕಡಿತ, ಅದನ್ನು ಸಾಧಿಸಲು ವರ್ಷವಾರು ಗುರಿಗಳು ಹಾಗೂ ಪೂರೈಕೆ-ವ್ಯಾಪಾರದ ಮೇಲೆ ನಿರ್ಬಂಧ ಹೇರಲು ಸಮ್ಮತಿಸಿವೆ. ಮರುಬಳಕೆಗೆ ಉತ್ತೇಜನವಲ್ಲದೆ, ಎಲ್ಲೆಂದರಲ್ಲಿ ಎಸೆಯುವ ನಿರ್ದಿಷ್ಟ ವಿಧದ ಪ್ಲಾಸ್ಟಿಕ್‌ಗೆ ನಿಷೇಧ ಹೇರಲು ಹಲವು ದೇಶಗಳು ಉತ್ಸುಕವಾಗಿವೆ. ಆದರೆ, ಹೆಚ್ಚಿನವು ಉತ್ಪಾದನೆಗೆ ಮಿತಿ ಹೇರಲು ಹಿಂಜರಿಯುತ್ತಿವೆ. ಹಲವು ದೇಶಗಳು ಪೆಟ್ರೋಲ್ ಅವಲಂಬಿತ ಆರ್ಥಿಕತೆಯಾಗಿದ್ದು, ಉಳಿದವು ಪ್ಲಾಸ್ಟಿಕ್ ಪಾಲಿಮರ್‌ಗಳನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ಹೊಂದಿರುವಂಥವು; ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆ ಆಗಬೇಕಿದೆ ಎಂಬ ಬಗ್ಗೆ ಎಲ್ಲ ದೇಶಗಳು ಸಹಮತ ಹೊಂದಿದ್ದರೂ, ಪ್ಲಾಸ್ಟಿಕ್ ಮಾಲಿನ್ಯ ಒಂದು ನಿರ್ವಹಣೆ ಸಮಸ್ಯೆ ಎನ್ನುವ ರಾಷ್ಟ್ರಗಳು ಹಾಗೂ ಮೂಲದಲ್ಲೇ ಉತ್ಪಾದನೆ ಕಡಿತಗೊಳಿಸಬೇಕು ಎನ್ನುವ ದೇಶಗಳ ನಡುವಿನ ಅಗಾಧ ಕಂದರವನ್ನು ಮುಚ್ಚಲು ಸಾಧ್ಯವಾಗಲಿಲ್ಲ.
ಮುಂದಿನ ಮಾರ್ಗ
2024ರೊಳಗೆ ಜಾಗತಿಕ ಪ್ಲಾಸ್ಟಿಕ್ ಒಪ್ಪಂದಕ್ಕೆ ಸಹಿಯಾಗಬೇಕು ಎಂದು ವಿಶ್ವ ಸಂಸ್ಥೆ ಗಡುವು ವಿಧಿಸಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಆದ್ದರಿಂದ 2025ರಲ್ಲಿ ಐಎನ್‌ಸಿ 5.2 ಶೃಂಗಸಭೆ ನಡೆಯುವ ಸಾಧ್ಯತೆ ಇದೆ. ಹಲವು ದೇಶಗಳು ಪಾಲ್ಗೊಂಡು ಶರತ್ತುಗಳಿಗೆ ಸಮ್ಮತಿಸಿ, ಸಹಿ ಹಾಕಬೇಕಿರುವ ಇಂತಹ ಜಾಗತಿಕ ಒಪ್ಪಂದಗಳು ದೀರ್ಘ ಕಾಲ ತೆಗೆದುಕೊಳ್ಳುತ್ತವೆ. ಉದಾಹರಣೆಗೆ, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಶೃಂಗಸಭೆ(ಸಿಒಪಿ, ಕಾನ್ಫರೆನ್ಸ್ ಆಫ್ ಪಾರ್ಟೀಸ್). 1992ರಲ್ಲಿ ರಿಯೋಡಿಜನೈರೋದಲ್ಲಿ ನಡೆದ ಸಭೆಯಲ್ಲಿ ದೇಶಗಳು ಇಂಗಾಲ ಕೊಳೆಗಾಳಿ ಬಗ್ಗೆ ಸಂವಾದ ಆರಂಭಿಸಿದವು. ಆನಂತರ ಮೊದಲ ಶೃಂಗಸಭೆಯು ಬೀಜಿಂಗ್‌ನಲ್ಲಿ 3 ವರ್ಷಗಳ ಬಳಿಕ ನಡೆಯಿತು. ಕಳೆದ ತಿಂಗಳು 29ನೇ ಸಮಾವೇಶ ಅಝರ್‌ಬೈಜಾನಿನ ಬಾಕುವಿನಲ್ಲಿ ನಡೆದಿದೆ ಮತ್ತು ಮುಂದಿನ ವರ್ಷ ರಿಯೋದಲ್ಲಿ 30ನೇ ಶೃಂಗಸಭೆ ನಡೆಯಲಿದೆ. ಇಷ್ಟು ವರ್ಷಗಳ ಬಳಿಕವೂ ಜಾಗತಿಕ ತಾಪಮಾನ 1.5 ಡಿಗ್ರಿ ಸೆ.ಗಿಂತ ಹೆಚ್ಚದಂತೆ ನೋಡಿಕೊಳ್ಳಲು ಅಗತ್ಯವಾದ ಕೊಳೆಗಾಳಿ ತುಂಬುವಿಕೆಯನ್ನು ತಡೆಯುವ, ಎಲ್ಲರನ್ನೂ ಒಳಗೊಳ್ಳುವ ಒಪ್ಪಂದವೊಂದು ಸಾಧ್ಯವಾಗಿಲ್ಲ.
ಪ್ಲಾಸ್ಟಿಕ್ ಮಾಲಿನ್ಯ ಕುರಿತ ಶೃಂಗಸಭೆಗಳು ಕೂಡ ನಿಧಾನವಾಗಿ ವಿಕಾಸಗೊಂಡು, ಒಪ್ಪಂದವೊಂದಕ್ಕೆ ದಾರಿ ಮಾಡಿಕೊಡಬಹುದು. ದುರಂತವೆಂದರೆ, ಭೂಮಿಯ ಗಡಿಯಾರ ವೇಗವಾಗಿ ಸುತ್ತುತ್ತಿದೆ ಮತ್ತು ಭೂಮಿ ಅಷ್ಟೇ ತೀವ್ರವಾಗಿ ಪ್ರತಿಕ್ರಿಯಿಸುತ್ತಿದೆ. ಆದರೆ, ಅದಕ್ಕೆ ಅನುಗುಣವಾಗಿ ಮನುಷ್ಯರ ಕ್ರಿಯೆ-ಪ್ರತಿಕ್ರಿಯೆಗಳು ಬರುತ್ತಿಲ್ಲ.