ಕ್ಷೇತ್ರ ಮರುವಿಂಗಡಣೆ ಎಂಬ ಉರುಳು

ನ್ಯಾಯಸಮ್ಮತ ಕ್ಷೇತ್ರ ಮರುವಿಂಗಡಣೆ ಕುರಿತ ಜಂಟಿ ಕ್ರಿಯಾ ಸಮಿತಿ(ಜೆಎಸಿ) ಸಭೆ ಚೆನ್ನೈಯಲ್ಲಿ ಮಾರ್ಚ್ 22ರಂದು ನಡೆದಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಕೇರಳದ ಪಿಣರಾಯಿ ವಿಜಯನ್, ತೆಲಂಗಾಣದ ರೇವಂತ್ ರೆಡ್ಡಿ, ಪಂಜಾಬ್‌ನ ಭಗವಂತ್ ಮಾನ್, ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಹಾಗೂ ವೀಡಿಯೊ ಕಾನ್ಫೆರೆನ್ಸ್ ಮೂಲಕ ಒಡಿಶಾ ಮಾಜಿ ಸಿಎಂ ನವೀನ್ ಪಟ್ನಾಯಕ್ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಲೋಕಸಭೆ ಕ್ಷೇತ್ರಗಳ ಸಂಖ್ಯೆ ಹೆಚ್ಚಳವನ್ನು 25 ವರ್ಷ ಕಾಲ ಅಮಾನತಿನಲ್ಲಿ ಇರಿಸಬೇಕು ಎಂದು ಸಭೆ ಒತ್ತಾಯಿಸಿದೆ. ಮರುವಿಂಗಡಣೆಯಲ್ಲಿ ದಕ್ಷಿಣ ರಾಜ್ಯಗಳಿಗೆ ನ್ಯಾಯಸಮ್ಮತ ಪಾಲು ಸಿಗಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೆ, ಅವರ ಮಾತು ಮತ್ತು ವರ್ತನೆ ವಿಶ್ವಾಸಾರ್ಹವೇ?
ಜನಗಣತಿ ನಂತರವಷ್ಟೇ ಕ್ಷೇತ್ರ ಮರುವಿಂಗಡಣೆ ನಡೆಯುತ್ತದೆ. ಕೋವಿಡ್-19ರ ಹಿನ್ನೆಲೆಯಲ್ಲಿ 2021ರಲ್ಲಿ ಜನಗಣತಿ ನಡೆಯಲಿಲ್ಲ. ಒಕ್ಕೂಟ ಸರಕಾರ ಜನಗಣತಿಯನ್ನು ನಡೆಸುವ ಸಾಧ್ಯತೆಯೂ ಕಂಡುಬರುತ್ತಿಲ್ಲ. ಜನಗಣತಿ ಬಳಿಕ ಮರುವಿಂಗಡಣೆ ಆಯೋಗ ರಚಿಸಲಾಗುತ್ತದೆ. 2002ರ ಸಂವಿಧಾನದ 84ನೇ ತಿದ್ದುಪಡಿ ಅನ್ವಯ, 2026ರಲ್ಲಿ ಮರುವಿಂಗಡಣೆ ನಡೆಯಬೇಕಿದೆ. ದೇಶದ ಒಟ್ಟು ಜನಸಂಖ್ಯೆ, ದೇಶ ಮತ್ತು ರಾಜ್ಯಗಳ ಜನಸಂಖ್ಯೆಯ ಅನುಪಾತ ಆಧರಿಸಿ ಮರುವಿಂಗಡಣೆ ನಡೆಯುತ್ತದೆ.
ಮರುವಿಂಗಡಣೆಯಿಂದ ಅನ್ಯಾಯ
ಮರುವಿಂಗಡಣೆಗೆ ಸಂಬಂಧಿಸಿದ ಹಿಂದಿನ ಉದಾಹರಣೆಗಳು ಹಿತಕರವಾಗಿಲ್ಲ. 2022ರಲ್ಲಿ ಜಮ್ಮು-ಕಾಶ್ಮೀರ ಮತ್ತು ಅಸ್ಸಾಮಿನಲ್ಲಿ 2023ರಲ್ಲಿ ರಾಜ್ಯ ಮಟ್ಟದ ಕ್ಷೇತ್ರ ಮರುವಿಂಗಡಣೆ ನಡೆದಿದೆ. ಜಮ್ಮು-ಕಾಶ್ಮೀರದ ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆಯನ್ನು ಬಿಜೆಪಿ ಹೊರತುಪಡಿಸಿ ಬೇರೆಲ್ಲ ಪಕ್ಷಗಳು ಖಂಡಿಸಿದ್ದವು. ಜಮ್ಮುವಿಗೆ ಆರು ಹಾಗೂ ಕಣಿವೆ ಪ್ರದೇಶಕ್ಕೆ 1 ಹೆಚ್ಚುವರಿ ಸ್ಥಾನ ಲಭ್ಯವಾಯಿತು. ಆದರೆ, ಕ್ಷೇತ್ರಗಳ ರಚನೆಯಲ್ಲಿ ಆಡಳಿತಾತ್ಮಕ ಇಲ್ಲವೇ ಭೌಗೋಳಿಕ ತಿಳುವಳಿಕೆ ಇರಲಿಲ್ಲ. ಜಮ್ಮುವಿನ ಪೂಂಚ್ ಹಾಗೂ ರಜೌರಿಯನ್ನು ಕಣಿವೆ ಪ್ರದೇಶದ ಅನಂತನಾಗ್ ಲೋಕಸಭೆ ಕ್ಷೇತ್ರಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಪೂಂಚ್ ಕ್ಷೇತ್ರವು ಪಿರ್ ಪಂಜಾಲ್ ಹಾಗೂ ರಜೌರಿಯು ಜೇಲಂ ಕಣಿವೆಗೆ ಸೇರಿದೆ. ಇದರಿಂದ ಆಡಳಿತಾತ್ಮಕ ಸಮಸ್ಯೆ ಸೃಷ್ಟಿಯಾಯಿತು. ಆದರೆ, ಇದಕ್ಕಿಂತ ಅನಿಷ್ಟ ಅಂಶವೆಂದರೆ, ಆಯೋಗವು ಕ್ಷೇತ್ರಗಳನ್ನು ಕೋಮು ಆಧಾರದಲ್ಲಿ ರಚನೆ ಮಾಡಿತ್ತು. ಎಲ್ಲ ಹೊಸ ಕ್ಷೇತ್ರಗಳು, ಜಸ್ರೋಟಾ, ರಾಮಗಢ, ರಾಮನಗರ, ವೈಷ್ಣೋದೇವಿ, ಪದ್ದರ್-ನಾಗ್ಸೇನಿ ಮತ್ತು ದೋದಾ ಪಶ್ಚಿಮ, ಹಿಂದೂಗಳು ಬಹುಸಂಖ್ಯಾತರಾಗಿರುವ ಕ್ಷೇತ್ರಗಳು. ಮುಸ್ಲಿಮರು ಹೆಚ್ಚು ಸಂಖ್ಯೆಯಲ್ಲಿದ್ದ ಕಿಶ್ತ್ವಾರ್‌ಗೆ ಇಂದರ್‌ವಾಲ್ ಕ್ಷೇತ್ರದ ಭಾಗಗಳನ್ನು ಸೇರಿಸಿ, ಅದನ್ನು ಹಿಂದೂ ಬಹುಸಂಖ್ಯಾತ ಕ್ಷೇತ್ರವಾಗಿ ಬದಲಿಸಲಾಯಿತು. ಅಷ್ಟಲ್ಲದೆ, ಕ್ಷೇತ್ರಗಳ ಜನಸಂಖ್ಯೆಯಲ್ಲಿ ಅಪಾರ ವ್ಯತ್ಯಾಸವಿತ್ತು.
ದೂರು(1.92 ಲಕ್ಷ) ಹಾಗೂ ಸುರಾನ್ ಕೋಟೆ(1.77 ಲಕ್ಷ) ಕ್ಷೇತ್ರದಲ್ಲಿ ಹೆಚ್ಚು ಮುಸ್ಲಿಮ್ ಮತದಾರರು ಇದ್ದರೆ, ವೈಷ್ಣೋದೇವಿ, ಪದ್ದರ್ ಮತ್ತು ದೋದಾ ಪಶ್ಚಿಮ ಕ್ಷೇತ್ರಗಳಲ್ಲಿ 50,000ಕ್ಕಿಂತ ಕಡಿಮೆ ಮತದಾರರು ಇದ್ದರು
ಅಸ್ಸಾಮಿನಲ್ಲಿ ಮರುವಿಂಗಡಣೆ ಪ್ರಕ್ರಿಯೆ ಬೇರೆಯದೇ ರೀತಿ ನಡೆಯಿತು. ವಿಧಾನಸಭೆ ಕ್ಷೇತ್ರಗಳ ಸಂಖ್ಯೆಯನ್ನು ಅಮಾನತಿನಲ್ಲಿಡಲಾಯಿತು. ಅದಕ್ಕೆ ಮೊದಲು ಸಚಿವ ಸಂಪುಟವು ಜಿಲ್ಲೆಗಳ ಸಂಖ್ಯೆಯನ್ನು 35ರಿಂದ 31ಕ್ಕೆ ಇಳಿಸಿತು. ಇದರಿಂದ ಮುಸ್ಲಿಮರು ಬಹುಸಂಖ್ಯಾತರಾಗಿದ್ದ 10 ಕ್ಷೇತ್ರಗಳು ಇಲ್ಲವಾದವು; ಕರೀಂಗಂಜ್ ಮತ್ತು ಹೈಲಕಂಡಿ ಜಿಲ್ಲೆಗಳ ಬಂಗಾಳಿ ಭಾಷಿಕ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಬರಾಕ್ ಕಣಿವೆಯಲ್ಲಿ ಸ್ಥಾನಗಳ ಸಂಖ್ಯೆ 15ರಿಂದ 13ಕ್ಕೆ ಕುಸಿಯಿತು. ಮುಸ್ಲಿಮರು ಫಲಿತಾಂಶದ ಮೇಲೆ ನಿರ್ಣಾಯಕ ಪರಿಣಾಮ ಬೀರಬಲ್ಲ ಕ್ಷೇತ್ರಗಳ ಸಂಖ್ಯೆ 29ರಿಂದ 22ಕ್ಕೆ ಇಳಿಯಿತು. ಹಿಂದೂಗಳು ಬಹುಸಂಖ್ಯೆಯಲ್ಲಿರುವ ಬೋಡೋಲ್ಯಾಂಡ್ ಟೆರಿಟೋರಿಯಲ್ ಪ್ರಾಂತದಲ್ಲಿ ಸ್ಥಾನಗಳ ಸಂಖ್ಯೆ 12ರಿಂದ 15ಕ್ಕೆ ಹಾಗೂ ಕರ್ಬಿ ಅಂಗ್ಲಾಂಗ್‌ನಲ್ಲಿ 4ರಿಂದ 5ಕ್ಕೆ ಹೆಚ್ಚಿತು. ಜತೆಗೆ, ಮುಸ್ಲಿಮ್ ಶಾಸಕರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ/ವರ್ಗಕ್ಕೆ ಮೀಸಲಿಡಲಾಯಿತು. ಹಿಂದೂ/ಆದಿವಾಸಿಗಳ ಕ್ಷೇತ್ರಗಳು ಹೆಚ್ಚಿದವಲ್ಲದೆ, ಜನಸಂಖ್ಯೆಯಲ್ಲಿ ಹೆಚ್ಚು ವ್ಯತ್ಯಾಸವಿರುವ ಕ್ಷೇತ್ರಗಳು ರಚನೆಯಾದವು. ಇದರ ಪರಿಣಾಮವೋ ಎಂಬಂತೆ, ಜಮ್ಮು-ಕಾಶ್ಮೀರ ಹಾಗೂ ಅಸ್ಸಾಮಿನಲ್ಲಿ ಹೊಸದಾಗಿ ರಚನೆಯಾದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿತು.
ಉತ್ತರಪ್ರದೇಶದಲ್ಲಿ 2001ರ ಜನಗಣತಿ ಆಧರಿಸಿದ 2008ರ ಮರುವಿಂಗಡಣೆಯದ್ದೂ ಇದೇ ಕತೆ. ಬರೇಲಿ ಕಂಟೋನ್ಮೆಂಟ್ ಕ್ಷೇತ್ರದಲ್ಲಿ ಮುಸ್ಲಿಮ್ ಮತದಾರರ ಪ್ರಮಾಣ ಶೇ.57ರಿಂದ 35ಕ್ಕೆ, ರಾಮಪುರದಲ್ಲಿ ಶೇ.20ಕ್ಕೂ ಅಧಿಕ ಹಾಗೂ ಬರ್ಹಾಪುರದಲ್ಲಿ ಶೇ.45 ರಿಂದ 30ಕ್ಕೆ ಕಡಿಮೆಯಾಯಿತು. 2006ರ ಸಾಚಾರ್ ಸಮಿತಿ ಪ್ರಕಾರ, ಮುಸ್ಲಿಮರು ಬಹುಸಂಖ್ಯಾತರಾಗಿರುವ ಕ್ಷೇತ್ರಗಳನ್ನು ಎಸ್‌ಸಿ/ಎಸ್‌ಟಿಗೆ ಮೀಸಲಿಡಲಾಗುತ್ತಿದೆ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಲ್ಲಿ ಶೇ.50ಕ್ಕೂ ಅಧಿಕ ಮುಸ್ಲಿಮರಿರುವ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿಗಳಿಗೆ ಮೀಸಲಿಡಲಾಗಿದೆ. ಒಟ್ಟು ಜನಸಂಖ್ಯೆಯಲ್ಲಿ ಅವರ ಪಾಲು ಶೇ.14 ಇದ್ದರೂ, 18ನೇ ಲೋಕಸಭೆಯಲ್ಲಿ ಕೇವಲ 24 ಮುಸ್ಲಿಮ್ ಸಂಸದರಿದ್ದಾರೆ.
ಸಮತೋಲನ ನಾಶ
ಹಿಂದಿನ ಮರುವಿಂಗಡಣೆಯಲ್ಲಿ ಸಂಸದರ ಸಂಖ್ಯೆ ಬದಲಾಗಲಿಲ್ಲ. ಆದರೆ, ರಾಜ್ಯಗಳ ಒಳಗೆ ಮರುವಿಂಗಡಣೆ ನಡೆಯಿತು. 2011ರ ಜನಗಣತಿಯನ್ನು ಆಧರಿಸಿ ಮರುವಿಂಗಡಣೆ ನಡೆದರೆ, ಪಶ್ಚಿಮ ಮತ್ತು ಮಧ್ಯ ಭಾರತದ 7 ರಾಜ್ಯಗಳ ಸಂಸದರ ಸಂಖ್ಯೆ ಹೆಚ್ಚಲಿದೆ(ಉತ್ತರಪ್ರದೇಶ 7, ಬಿಹಾರ/ರಾಜಸ್ಥಾನ ತಲಾ 5, ಮಧ್ಯಪ್ರದೇಶ 4, ಮಹಾರಾಷ್ಟ್ರ 2, ಜಾರ್ಖಂಡ್/ಹರ್ಯಾಣ ಒಂದು); 10 ರಾಜ್ಯಗಳ ಸಂಸದರ ಸಂಖ್ಯೆ ಯಥಾಸ್ಥಿತಿ ಇರಲಿದೆ ಮತ್ತು ದಕ್ಷಿಣ, ಪೂರ್ವ ಹಾಗೂ ಈಶಾನ್ಯ ರಾಜ್ಯಗಳು ಒಟ್ಟು 25 (ಕರ್ನಾಟಕ, ಮೇಘಾಲಯ, ಮಣಿಪುರ, ಗೋವಾ, ತೆಲಂಗಾಣ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ ತಲಾ ಒಂದು, ಕೇರಳ ಐದು, ಆಂಧ್ರಪ್ರದೇಶ 3, ಒಡಿಶಾ 2) ಸ್ಥಾನ ಕಳೆದುಕೊಳ್ಳಲಿವೆ. ಇದರಿಂದ ಒಕ್ಕೂಟದ ಸಮತೋಲ ತಪ್ಪುತ್ತದೆ; ಹಿಂದಿ ಭಾಷಿಕ ರಾಜ್ಯಗಳ ಹಿಡಿತ ಹೆಚ್ಚುತ್ತದೆ.
ಮಿಲನ್ ವೈಷ್ಣವ್ ಮತ್ತು ಜೆಮಿ ಹಿನ್‌ಸ್ಟನ್ ಅವರ ಅಧ್ಯಯನ ‘India’s Emerging Crisis of Representation’ ಪ್ರಕಾರ, 2026ರಲ್ಲಿ ಇರಬಹುದಾದ ಜನಸಂಖ್ಯೆ ಆಧಾರದಲ್ಲಿ ಮರುವಿಂಗಡಣೆ ಮಾಡಿದರೆ ದಕ್ಷಿಣ ರಾಜ್ಯಗಳು 34 (ಕೇರಳ/ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ತಲಾ 8, ಕರ್ನಾಟಕ 2), ಪಶ್ಚಿಮ ಬಂಗಾಳ 4, ಒಡಿಶಾ 3 ಮತ್ತು ಪಂಜಾಬ್ 1 ಸ್ಥಾನ ಕಳೆದುಕೊಳ್ಳುತ್ತವೆ. ಹಿಮಾಚಲ ಪ್ರದೇಶ/ಉತ್ತರಾಖಂಡ ತಲಾ 2, ಉತ್ತರ ಪ್ರದೇಶ 11, ಬಿಹಾರ 10, ರಾಜಸ್ಥಾನ 6 ಮತ್ತು ಮಧ್ಯಪ್ರದೇಶ 4 ಸ್ಥಾನ ಗಳಿಸುತ್ತವೆ. ಹಾಲಿ ಲೋಕಸಭೆಯ 543 ಸ್ಥಾನಗಳಲ್ಲಿ ಹಿಂದಿ ಭಾಷಿಕ ರಾಜ್ಯಗಳಲ್ಲಿ 226 ಕ್ಷೇತ್ರಗಳಿವೆ. ಮರು ವಿಂಗಡಣೆ ಬಳಿಕ ಈ ರಾಜ್ಯಗಳ ಬಲ 259ಕ್ಕೆ ಹೆಚ್ಚಲಿದೆ. ದಕ್ಷಿಣದ ರಾಜ್ಯಗಳ ಪಾಲು 132. ಅಧಿಕಾರ ಹಿಡಿಯಲು ಬೇಕಿರುವ ಸರಳ ಬಹುಮತ 273. ದಕ್ಷಿಣದ ರಾಜ್ಯಗಳು ಪಶ್ಚಿಮ ಅಥವಾ ಪೂರ್ವದ ರಾಜ್ಯಗಳ ನೆರವಿನಿಂದ ಸಂವಿಧಾನ ತಿದ್ದುಪಡಿಯನ್ನು ತಡೆಯಬಹುದು. ಆದರೆ, ಪಕ್ಷ ರಾಜಕಾರಣ/ನಾಯಕರ ಸ್ವಪ್ರತಿಷ್ಠೆ ಇಂಥ ಒಗ್ಗಟ್ಟಿಗೆ ಅನುವು ಮಾಡಿಕೊಡುವುದೇ? 2024ರ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸದೆ ಇರುವುದರಿಂದ, ಒಂದಿಷ್ಟು ನಿಯಂತ್ರಣದಲ್ಲಿದೆ. ಆದರೆ, ಅದರ ಕಾರ್ಯಸೂಚಿ ಬದಲಾಗಿಲ್ಲ; ಬದಲಾಗುವುದೂ ಇಲ್ಲ.
ಜನಸಂಖ್ಯೆಯೊಂದೇ ಮಾನದಂಡವಲ್ಲ
ಜನಸಂಖ್ಯೆ ಆಧರಿತ ಮರುವಿಂಗಡಣೆ ಮಾತ್ರ ಸಮಸ್ಯೆಯಲ್ಲ; ಈ ಆಯೋಗಗಳು ಕೋಮು ಆಧರಿತ, ಕಡಿಮೆ-ಅಧಿಕ ಜನಸಂಖ್ಯೆ ಇರುವ ಅಸಮಾನ ಕ್ಷೇತ್ರಗಳನ್ನು ಸೃಷ್ಟಿಸಿವೆ.
ಬಿಜೆಪಿ ಇದೇ ತಂತ್ರವನ್ನು 2026ರಲ್ಲೂ ಬಳಸಲು ಹಿಂಜರಿಯುವುದಿಲ್ಲ. ಪ್ರಾಂತೀಯ ಅಸ್ಮಿತೆಯು ಕೋಮು ಅಸ್ಮಿತೆಗಿಂತ ಮುಖ್ಯವಾದುದು. ಕಳೆದ ಲೋಕಸಭೆ-ವಿಧಾನಸಭೆ ಚುನಾವಣೆಗಳಲ್ಲಿ ಬಂಗಾಳಿ ಇಲ್ಲವೇ ತಮಿಳು ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ತಮ್ಮ ರಾಜ್ಯಗಳಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಹಾಗೂ ತೃಣಮೂಲ ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಇಂತಹ ಪ್ರವೃತ್ತಿ ಭವಿಷ್ಯದಲ್ಲೂ ಮುಂದುವರಿಯುತ್ತದೆ ಎಂಬ ಖಾತ್ರಿಯಿಲ್ಲ. ದಕ್ಷಿಣ ರಾಜ್ಯಗಳಲ್ಲಿ ಕೋಮು ಆಧರಿತ ಕ್ಷೇತ್ರ ಮರುವಿಂಗಡಣೆಯಿಂದ ಧ್ರುವೀಕರಣ ನಡೆಯಲಿದೆ. ಇದು ಅಪಾಯಕರ.
ವಿಧಿ 82 ಮತ್ತು 170 ಅನ್ವಯ ಸಮಾನ ಪ್ರಾತಿನಿಧಿತ್ವವನ್ನು ಖಾತ್ರಿಗೊಳಿಸಲು ಜನಸಂಖ್ಯೆ ವ್ಯತ್ಯಾಸ ಸರಿಪಡಿಸಲು ಕ್ಷೇತ್ರಗಳ ಮರುಹಂಚಿಕೆ ಮಾಡಬೇಕಾಗುತ್ತದೆ. ಉದಾಹರಣೆಗೆ, ಮಧ್ಯಪ್ರದೇಶದ ಒಬ್ಬ ಸಂಸದ ಅಂದಾಜು 32 ಲಕ್ಷ ಜನರನ್ನು ಪ್ರತಿನಿಧಿಸುತ್ತಾನೆ. ಕೇರಳದ ಸಂಸದ ಪ್ರತಿನಿಧಿಸುವುದು 18 ಲಕ್ಷ ಜನರನ್ನು. ಗೋವಾ, ಅರುಣಾಚಲ ಪ್ರದೇಶದಲ್ಲಿ ಅಂದಾಜು 8 ಲಕ್ಷ ಮಂದಿಗೆ ಒಂದು ಕ್ಷೇತ್ರ ಸೃಷ್ಟಿಸಲಾಗಿದೆ. ಇದರಿಂದ ಮತದಾರರ ಮೌಲ್ಯದಲ್ಲಿ ಅಸಮಾನತೆ ಇದೆ. ಹೆಚ್ಚು ಭೂ ವಿಸ್ತೀರ್ಣವಿರುವ ಮತ್ತು ಜನಸಂಖ್ಯಾ ಬಾಹುಳ್ಯದ ಉತ್ತರದ ರಾಜ್ಯಗಳು ಮತ್ತು ಉಳಿದ ರಾಜ್ಯಗಳ ನಡುವಿನ ಅಸಮತೋಲನ ಅಪಾಯಕಾರಿಯಾದುದು ಎಂದು ಒಪ್ಪಿಕೊಳ್ಳೋಣ. ಆದರೆ, ಇದಕ್ಕಿಂತ ಅಪಾಯಕಾರಿಯಾದುದು ಕ್ಷೇತ್ರಗಳ ಕೋಮುವಾರು ಮರುವಿಂಗಡಣೆ. ಮೊದಲನೆಯದು, ಅಭಿವೃದ್ಧಿ ಹೊಂದಿದ ಹಾಗೂ ಹಿಂದುಳಿದ ರಾಜ್ಯಗಳನ್ನು ಪ್ರತ್ಯೇಕಿಸುತ್ತದೆ. ಎರಡನೆಯದು ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುತ್ತದೆ. ಇವೆರಡೂ ದೇಶದ ಐಕ್ಯತೆಗೆ ಧಕ್ಕೆ ತರುತ್ತವೆ; ಒಕ್ಕೂಟದ ಬುನಾದಿ ಮೇಲೆ ದಾಳಿ ಮಾಡುತ್ತವೆ. ಇದನ್ನು ನಿಲ್ಲಿಸಬೇಕಿದೆ.
ರಾಜ್ಯಗಳ ನಡುವಿನ ತಾರತಮ್ಯ ನಿವಾರಣೆಗೆ ಬೇರೆಯದೇ ಮಾರ್ಗ ಹುಡುಕಬೇಕಿದೆ. ದಕ್ಷಿಣದ ರಾಜ್ಯಗಳು ಸಾಮಾಜಿಕ/ಆರ್ಥಿಕವಾಗಿ ಮುಂದುವರಿದಿವೆ; ಒಕ್ಕೂಟದ ಬೊಕ್ಕಸಕ್ಕೆ ಹೆಚ್ಚು ತೆರಿಗೆ ಮೊತ್ತ ಪಾವತಿಸಿದರೂ, ಅವಕ್ಕೆ ಸಿಗುವುದು ಬಿಡಿಗಾಸು. ಬಿಜೆಪಿ ಪ್ರಾಬಲ್ಯದ ಹಿಂದಿ ಭಾಷಿಕ ರಾಜ್ಯಗಳು ಹಾಗೂ ಪ್ರತಿಪಕ್ಷದ ಆಡಳಿತವಿರುವ ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ, ಪಂಜಾಬ್ ಮತ್ತು ಬಿಜೆಪಿ ಅಸ್ತಿತ್ವವಿಲ್ಲದ ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳ ಮಾನವ ಅಭಿವೃದ್ಧಿ/ಸಾಮಾಜಿಕ ಸೂಚ್ಯಂಕಗಳಲ್ಲಿ ಅಗಾಧ ಕಂದರವಿದೆ. ಜನಸಂಖ್ಯೆಯನ್ನು ನಿಯಂತ್ರಿಸಿರುವ ಮೂಲಕ ಯಶಸ್ಸು ಸಾಧಿಸಿದ ರಾಜ್ಯಗಳ ಪ್ರಾತಿನಿಧ್ಯ ಕಡಿತಗೊಳಿಸಿ ಶಿಕ್ಷೆಗೊಳಪಡಿಸಬಾರದು ಎನ್ನುವುದು ಜಂಟಿ ಕ್ರಿಯಾ ಸಮಿತಿ ನಿಲುವು.
ಮರುವಿಂಗಡಣೆ ಕುರಿತ ದಕ್ಷಿಣದ ರಾಜ್ಯಗಳ ಆತಂಕವನ್ನು ನಿವಾರಿಸಲು ಹಲವು ಮಾರ್ಗಗಳಿವೆ. ಉದಾಹರಣೆಗೆ, ರಾಜ್ಯಸಭೆಯ ಸ್ಥಾನಗಳನ್ನು ಐದು ಭೌಗೋಳಿಕ ವಿಭಾಗಗಳಾಗಿರುವ ಉತ್ತರ, ಕೇಂದ್ರ, ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ರಾಜ್ಯಗಳಿಗೆ ಸಮವಾಗಿ ಹಂಚಬಹುದು. ನಿಯಮದ ಪ್ರಕಾರ, ಅವು ತಮ್ಮದೇ ವಲಯ ಸಮಿತಿಯನ್ನು ಹೊಂದಿರಬೇಕು. ಆದರೆ, ಈ ವಲಯ ಸಮಿತಿಗಳು 2023ರ ಬಳಿಕ ಒಮ್ಮೆಯೂ ಸಭೆ ಸೇರಿಲ್ಲ(ಪಶ್ಚಿಮ ವಲಯದ ಸಮಿತಿ ಸಭೆ ಫೆಬ್ರವರಿ 2025ರಲ್ಲಿ ನಡೆದಿದೆ). ದಕ್ಷಿಣ ವಲಯ ಸಮಿತಿ 2022ರ ಬಳಿಕ ಸಭೆ ಸೇರಿಲ್ಲ. ಜನವರಿ 2025ರಲ್ಲಿ ಈ ಸಭೆ ನಡೆಯಬೇಕಿತ್ತು. ಈ ಸಮಿತಿಗಳು ರಾಜ್ಯಗಳ ನಡುವಿನ ಹಲವು ವಿವಾದಗಳನ್ನು ಬಗೆಹರಿಸುತ್ತವೆ. ಈ ಸಮಿತಿಗಳನ್ನು ಗೃಹ ಮಂತ್ರಾಲಯದ ಹಿಡಿತದಿಂದ ಬಿಡಿಸಬೇಕಿದೆ. ಇವು ನಿಷ್ಕ್ರಿಯವಾಗಿರುವ ಅಂತರ್‌ರಾಜ್ಯ ಮಂಡಳಿ ದ್ವಾರಾ ಒಕ್ಕೂಟದ ಕಾರ್ಯಾಂಗದೊಟ್ಟಿಗೆ ಕಾರ್ಯನಿರ್ವಹಿಸಬಹುದು. ಅಂತರ್‌ರಾಜ್ಯ ಮಂಡಳಿಗೆ ಹೆಚ್ಚು ಅಧಿಕಾರ ನೀಡಿದರೆ, ರಾಜ್ಯಗಳು ಆಮೂಲಕ ತಮ್ಮ ಸಮಸ್ಯೆಗಳ ಬಗ್ಗೆ ಕೇಂದ್ರದೊಟ್ಟಿಗೆ ಚರ್ಚಿಸಬಹುದು. ಆದರೆ, ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ. ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಕಳಚುತ್ತಿರುವ ಬಿಜೆಪಿಗೆ ಒಕ್ಕೂಟ ತತ್ವದಲ್ಲಿ ನಂಬಿಕೆ ಇಲ್ಲದೆ ಇರುವುದು ಇದಕ್ಕೆ ಕಾರಣ.
ಒಕ್ಕೂಟ ಸರಕಾರ ಮೇಲೆ ಉಲ್ಲೇಖಿಸಿದ ರಾಜ್ಯಗಳಲ್ಲಿ ಬಳಸಿದ ತಂತ್ರವನ್ನು ದಕ್ಷಿಣ ಭಾರತದಲ್ಲಿ ಅಥವಾ ಬೇರೆಡೆ ಬಳಸುವುದಿಲ್ಲ ಎಂದುಕೊಳ್ಳಬಾರದು. ಕ್ಷೇತ್ರ ಮರುವಿಂಗಡಣೆಯು ‘ವೈವಿಧ್ಯದಲ್ಲಿ ಏಕತೆ’ ಎಂಬ ತತ್ವಕ್ಕೆ ವಿರುದ್ಧವಾಗಿದೆ. ನ್ಯಾಯಯುತ ಗಣರಾಜ್ಯ ಆಗಬೇಕು ಎಂದರೆ ದಕ್ಷಿಣದ ರಾಜ್ಯಗಳಿಗೆ ಸೂಕ್ತ ಪ್ರಾತಿನಿಧ್ಯ, ಹಿಂದಿ ಹೇರಿಕೆಗೆ ತಡೆ, ಶಿಕ್ಷಣ -ಆಡಳಿತದಲ್ಲಿ ರಾಜ್ಯ ಭಾಷೆಗೆ ಮನ್ನಣೆ ಹಾಗೂ ರಾಜ್ಯಗಳು ಸಂಗ್ರಹಿಸಿದ ತೆರಿಗೆಯಲ್ಲಿ ನ್ಯಾಯಬದ್ಧ ಪಾಲು ಸಲ್ಲಬೇಕು.
ಮರುವಿಂಗಡಣೆ ಸಂವಿಧಾನ ವಿರೋಧಿ; ಜನಸಂಖ್ಯೆಯನ್ನು ಆಧರಿಸಿದ ಮರುವಿಂಗಡಣೆ ಸ್ವೀಕಾರಾರ್ಹವಲ್ಲ. ಮರುವಿಂಗಡಣೆಯನ್ನು 30 ವರ್ಷ ಅಮಾನತುಗೊಳಿಸಬೇಕೆಂದು ತಮಿಳುನಾಡು ವಿಧಾನಸಭೆಯಲ್ಲಿ ಗೊತ್ತುವಳಿ ಮಂಡಿಸಲಾಗಿದೆ. ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ಸು ಸಾಧಿಸಿದ ರಾಜ್ಯಗಳ ಪ್ರಾತಿನಿಧ್ಯವನ್ನು ಕಡಿತಗೊಳಿಸಿ, ಶಿಕ್ಷೆ ನೀಡಬಾರದು ಎಂದು ಜಂಟಿ ಕ್ರಿಯಾ ಸಮಿತಿ ಹೇಳಿದೆ. ‘‘ಪ್ರಾತಿನಿಧ್ಯವನ್ನು ಆರ್ಥಿಕ ಕೊಡುಗೆ ಹಾಗೂ ಅಭಿವೃದ್ಧಿಯನ್ನು ಆಧರಿಸಿ ನೀಡಬೇಕು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.19ರಷ್ಟು ಇರುವ ದಕ್ಷಿಣ ಭಾರತವು ಜಿಡಿಪಿಗೆ ಶೇ.36 ಪಾಲು ನೀಡುತ್ತಿದೆ. ಆದ್ದರಿಂದ ಈ ರಾಜ್ಯಗಳಿಗೆ ಶೇ.36 ಪ್ರಾತಿನಿಧ್ಯ ನೀಡಬೇಕು. ಜನ ಸಂಖ್ಯೆ ಹೆಚ್ಚಿರುವ ರಾಜ್ಯಗಳಲ್ಲಿ ಶಾಸಕರ ಸಂಖ್ಯೆಯನ್ನು ಹೆಚ್ಚಿಸಬೇಕು’’ ಎಂದು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಹೇಳಿದ್ದಾರೆ. ಇದು ಒಂದು ಉತ್ತಮ ಸಲಹೆ. ರಾಜ್ಯಗಳಲ್ಲಿ ಶಾಸಕರ ಸಂಖ್ಯೆಯ ಹೆಚ್ಚಳದಿಂದ ಪ್ರಾತಿನಿಧಿತ್ವ ಹಾಗೂ ಒಕ್ಕೂಟ ವ್ಯವಸ್ಥೆ ಬಲಗೊಳ್ಳುತ್ತದೆ. ಮರುವಿಂಗಡಣೆ ವಿರುದ್ಧ ಎಲ್ಲ ರಾಜ್ಯಗಳು ಧ್ವನಿಯೆತ್ತಬೇಕಿದೆ.