ಪೇಟಿಎಂ ಪೇಮೆಂಟ್ ಬ್ಯಾಂಕ್ ಅಕ್ರಮಕ್ಕೆ ಹಲವು ಕಾರಣ
ಮಾರ್ಚ್ 1ರಿಂದ ಅನ್ವಯವಾಗುವಂತೆ ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್(ಪಿಪಿಬಿಎಲ್) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿರ್ಬಂಧಗಳನ್ನು ಹೇರಿದೆ. ಇದು ಫಿನ್‌ಟೆಕ್ ಉದ್ಯಮದಲ್ಲಿ ತರಂಗಗಳನ್ನು ಸೃಷ್ಟಿಸಿದೆ. ಆರ್‌ಬಿಐ ಈ ಮೊದಲು ಮಾರ್ಚ್ 2022ರಲ್ಲಿ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳಬಾರದೆಂದು ಪಿಪಿಬಿಗೆ ತಾಕೀತು ಮಾಡಿತ್ತು. ಮಾರ್ಚ್ 1ರ ಬಳಿಕ ಪಿಪಿಬಿಯ ಖಾತೆಗಳಿಗೆ, ವ್ಯಾಲೆಟ್‌ಗಳಿಗೆ, ನ್ಯಾಷನಲ್ ಮೊಬಿಲಿಟಿ ಕಾರ್ಡ್‌ಗಳಿಗೆ ಹಣ ತುಂಬಲು ಆಗುವುದಿಲ್ಲ; ಆದರೆ, ಖಾತೆಯಲ್ಲಿರುವ ಹಣ ತೆಗೆದುಕೊಳ್ಳಬಹುದು.
ಒನ್97 ಕಮ್ಯುನಿಕೇಷನ್ಸ್ ಆನ್‌ಲೈನ್ ಡಿಜಿಟಲ್ ಪಾವತಿ ಕ್ಷೇತ್ರದ ಜನಪ್ರಿಯ ಕಂಪೆನಿ. ಈ ಕಂಪೆನಿಯ ಉತ್ಪನ್ನವಾದ ಪೇಟಿಎಂ, ಡಿಜಿಟಲ್ ವ್ಯಾಲೆಟ್ ಕ್ಷೇತ್ರಕ್ಕೆ ಕಾಲಿರಿಸಿದ ಮೊದಲ ಬ್ರ್ಯಾಂಡ್. ಸಂಸ್ಥಾಪಕ ವಿಜಯ ಶೇಖರ ಶರ್ಮಾ. ಅವರು ತಮ್ಮೆಲ್ಲ ವಹಿವಾಟನ್ನು ಪೇಟಿಎಂ ಪೇಮೆಂಟ್ ಬ್ಯಾಂಕಿಗೆ ವರ್ಗಾಯಿಸಿದರು. ಪೇಮೆಂಟ್ ಬ್ಯಾಂಕಿನಲ್ಲಿ ವಿಜಯ ಶೇಖರ ಶರ್ಮಾ ಶೇ.51 ಹಾಗೂ ಒನ್97 ಕಮ್ಯುನಿಕೇಷನ್ಸ್ ಶೇ.49 ಪಾಲು ಹೊಂದಿದ್ದಾರೆ. ಒನ್97 ಕಮ್ಯುನಿಕೇಷನ್ಸ್, ಪೇಮೆಂಟ್ ಬ್ಯಾಂಕಿನ ವ್ಯವಹಾರಿಕ ಪ್ರತಿನಿಧಿ. ಆದರೆ, ಒನ್97 ಕಮ್ಯುನಿಕೇಷನ್ಸ್ ವ್ಯವಹಾರಿಕ ವರ್ಗಾವಣೆಗಳಿಗೆ ಭಾರೀ ಶುಲ್ಕ ವಿಧಿಸುತ್ತಿತ್ತು ಮತ್ತು ಪೇಟಿಎಂ ಹೆಸರಿನ ಬಳಕೆಗೆ ರಾಜಧನ ಪಡೆದುಕೊಳ್ಳುತ್ತಿತ್ತು. ಪೇಮೆಂಟ್ ಬ್ಯಾಂಕ್ ಮತ್ತು ಒನ್97 ನಡುವಿನ ಆರ್ಥಿಕ ಮತ್ತು ಆರ್ಥಿಕವಲ್ಲದ ಚಟುವಟಿಕೆಗಳು ಹೆಣೆದುಕೊಂಡಿದ್ದವು. ಆರ್‌ಬಿಐ ಪರವಾನಿಗೆ ನೀಡುವ ಮುನ್ನ ಪೇಮೆಂಟ್ ಬ್ಯಾಂಕ್ ತನ್ನದೇ ಆದ ಮಾಹಿತಿ ತಂತ್ರಜ್ಞಾನ ಮೂಲಸೌಲಭ್ಯ ಹೊಂದಿರಬೇಕು ಮತ್ತು ಕಾರ್ಯಾಚರಣೆಯಲ್ಲಿ ಮಾತೃಸಂಸ್ಥೆಯೊಂದಿಗೆ ಸ್ಪಷ್ಟ ಗಡಿರೇಖೆಯನ್ನು ಹಾಕಿಕೊಂಡಿರಬೇಕು ಎಂಬ ಷರತ್ತು ವಿಧಿಸಿತ್ತು. ಹಲವು ಬಾರಿ ಎಚ್ಚರಿಸಿದ ಬಳಿಕವೂ ಪೇಮೆಂಟ್ ಬ್ಯಾಂಕ್ ಮಾತೃಸಂಸ್ಥೆಯನ್ನು ಆಧರಿಸುವುದನ್ನು ಮುಂದುವರಿಸಿತು. ಹಲವು ವಹಿವಾಟುಗಳನ್ನು ಮಾತೃಸಂಸ್ಥೆಯ ಆ್ಯಪ್‌ಗಳ ಮೂಲಕವೇ ಮಾಡುತ್ತಿತ್ತು. ಇದು ದತ್ತಾಂಶ ಖಾಸಗಿತನ ಮತ್ತು ಹಂಚಿಕೆ ಕುರಿತು ಗಂಭೀರ ಆತಂಕಕ್ಕೆ ಕಾರಣವಾಗಿತ್ತು.
ಹಣಕಾಸು ಒಳಗೊಳ್ಳುವಿಕೆಗಾಗಿ ಹೊಸ ಕಾಲದ ಬ್ಯಾಂಕಿಂಗ್ ವ್ಯವಸ್ಥೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿತು. 2017ರಲ್ಲಿ ಪೇಮೆಂಟ್ ಬ್ಯಾಂಕುಗಳು ಆರಂಭಗೊಂಡವು. ಆರಂಭದಲ್ಲಿ ಈ ಬ್ಯಾಂಕ್‌ಗಳು ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ನಿಯಮಗಳನ್ನು ಉಲ್ಲಂಘಿಸಿದವು. ಕೆವೈಸಿ ಪರಿಶೀಲನೆ ಇಲ್ಲದೆ ಹೊಸ ಗ್ರಾಹಕರನ್ನು ಸೇರ್ಪಡೆಗೊಳಿಸಲಾಯಿತು. ಆರ್‌ಬಿಐ ಮಾರ್ಚ್ 2018ರಲ್ಲಿ ಗ್ರಾಹಕರ ಅನುಮತಿ ಇಲ್ಲದೆ ಖಾತೆ ತೆರೆದ ಏರ್‌ಟೆಲ್ ಪೇಮೆಂಟ್ ಬ್ಯಾಂಕಿಗೆ 5 ಕೋಟಿ ರೂ. ದಂಡ ವಿಧಿಸಿತು. 2018ರಲ್ಲಿ ಪಿನೋ ಪೇಮೆಂಟ್ ಬ್ಯಾಂಕ್ ಮತ್ತು ಪೇಟಿಎಂ ಪೇಮೆಂಟ್ ಬ್ಯಾಂಕಿಗೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಆರ್‌ಬಿಐ ನಿರ್ದೇಶನ ನೀಡಿತ್ತು. ಪೇಮೆಂಟ್ ಬ್ಯಾಂಕ್, ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಇನ್ನಿತರ ಫಿನ್‌ಟೆಕ್ ಸಂಸ್ಥೆಗಳು ಹೊಸ ಗ್ರಾಹಕರ ಸೇರ್ಪಡೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಕೆವೈಸಿ ಪರಿಶೀಲನೆ ವೇಳೆ ನಿಯಮಗಳನ್ನು ಉಲ್ಲಂಘಿಸಿವೆ; ನಕಲಿ ಖಾತೆಗಳನ್ನು ಎಗ್ಗಿಲ್ಲದೆ ಸೃಷ್ಟಿಸಿವೆ. ಪಿಪಿಬಿಗೆ ಕಳೆದ 2 ವರ್ಷದಿಂದ ಹೊಸ ಗ್ರಾಹಕರ ಸೇರ್ಪಡೆಗೆ ಅವಕಾಶ ನಿರ್ಬಂಧಿಸಲಾಗಿದೆ.
ಸ್ಮಾರ್ಟ್‌ಫೋನ್ ಬಳಸಿ ಹಣ ಪಾವತಿ-ವರ್ಗಾವಣೆಯಲ್ಲಿ ಪೇಟಿಎಂ ಮುಂಚೂಣಿಯಲ್ಲಿದೆ. ವ್ಯಾಲೆಟ್ ವರ್ಗಾವಣೆಯಲ್ಲಿ ಪಿಪಿಬಿ ಪಾಲು ಶೇ.78. ಆರ್‌ಬಿಐ ಮಾಹಿತಿ ಪ್ರಕಾರ, ಡಿಸೆಂಬರ್ 2023ರವರೆಗೆ ಪೇಟಿಎಂ ವ್ಯಾಲೆಟ್ ಗ್ರಾಹಕರು 24 ದಶಲಕ್ಷ ವಹಿವಾಟು ನಡೆಸಿದ್ದು, ಸೇವೆ-ವಸ್ತುಗಳ ಖರೀದಿಗೆ 8,000 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ ಹಾಗೂ 20 ದಶಲಕ್ಷ ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ 5,800 ಕೋಟಿ ರೂ. ವಹಿವಾಟು ನಡೆದಿದೆ. ವ್ಯಾಲೆಟ್ ವಿಭಾಗದಲ್ಲಿ ಪೇಟಿಎಂ ಅತಿ ದೊಡ್ಡ ವಹಿವಾಟುದಾರ. ಆದರೆ, ಪೇಟಿಎಂನ ಮಾತೃಸಂಸ್ಥೆ ಒನ್97 ಕಮ್ಯುನಿಕೇಷನ್ಸ್ ಮತ್ತು ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕೆವೈಸಿ(ನೋ ಯುವರ್ ಕಸ್ಟಮರ್)ದಾಖಲೆಗಳ ಅಸಮರ್ಪಕ ನಿರ್ವಹಣೆ ಒಂದು ಪ್ರಮುಖ ಆರೋಪ. ಲಕ್ಷಾಂತರ ಖಾತೆಗಳ ಪ್ಯಾನ್ ಮೌಲ್ಯೀಕರಣದಲ್ಲಿ ವೈಫಲ್ಯ, ಒಂದೇ ಪ್ಯಾನ್ ಬಳಸಿ ಹಲವು ಖಾತೆಗಳ ಸೃಷ್ಟಿ, ಅತ್ಯಧಿಕ ಬೇನಾಮಿ ಖಾತೆಗಳ ಇರುವಿಕೆ ಮತ್ತು ಕೆವೈಸಿ ದುರ್ಬಳಕೆ ಕಂಡುಬಂದಿದೆ. 330 ದಶಲಕ್ಷ ವ್ಯಾಲೆಟ್ ಬಳಕೆದಾರರು ಇದ್ದಾರೆ ಎಂದು ಪೇಮೆಂಟ್ ಬ್ಯಾಂಕ್ ಹೇಳಿ ಕೊಂಡಿತ್ತು. ಆದರೆ, ಇದರಲ್ಲಿ ಕೇವಲ 20 ಲಕ್ಷ ಖಾತೆಗಳು ಮಾತ್ರ ಸಕ್ರಿಯವಾಗಿವೆ ಎನ್ನಲಾಗಿದೆ. ಒಂದೇ ಪ್ಯಾನ್ ಸಂಖ್ಯೆಯನ್ನು ಸಾವಿರಾರು ಬ್ಯಾಂಕ್ ಖಾತೆಗಳಿಗೆ ಜೋಡಣೆ ಮಾಡಲಾಗಿದೆ. ಬೇನಾಮಿ ಖಾತೆಗಳ ಮೂಲಕ ಬೇರೆಯವರು ವಹಿವಾಟು ನಡೆಸಿರುವ ಸಾಧ್ಯತೆ ಇದೆ. ಇದರಿಂದ ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸುವ ದಂಧೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕೆವೈಸಿಯ ಅಸಮರ್ಪಕ ಪರಿಶೀಲನೆಗೆ ಗಂಭೀರ ಕಾರಣವೊಂದಿದೆ- ಅದು ನಕಲಿ ಖಾತೆಗಳ ಸೃಷ್ಟಿ. ವ್ಯಾಲೆಟ್ ವರ್ಗಾವಣೆಯಿಂದ ಹಣದ ಜಾಡನ್ನು ಮುಚ್ಚಿ ಹಾಕಬಹುದು; ಹಣ ಎಲ್ಲಿಂದ ಬಂದಿತು ಮತ್ತು ಎಲ್ಲಿಗೆ ಹೋಯಿತು ಎಂಬುದು ಗೊತ್ತಾಗುವುದಿಲ್ಲ. ಬೇನಾಮಿ ಖಾತೆಗಳ ಮೂಲಕ ಖಂಡಾಂತರ ಹಣ ವರ್ಗಾವಣೆಗೆ ಅವಕಾಶ ಮಾಡಿಕೊಟ್ಟಿರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2023ರಲ್ಲಿ ಆರ್‌ಬಿಐ, ಪಿಪಿಬಿಗೆ 5.39 ಕೋಟಿ ರೂ. ದಂಡ ವಿಧಿಸಿತ್ತು. ಭಾರೀ ಮೊತ್ತದ ಹಣವನ್ನು ಮಾರಾಟಗಾರ, ಗ್ರಾಹಕರು ಹಾಗೂ ಉದ್ಯೋಗಿಗಳಿಗೆ ಗೇಟ್‌ವೇ ಮೂಲಕ ಪಾವತಿಸಲು ವ್ಯಾಲೆಟ್‌ಗಳು ಬಳಕೆಯಾಗುತ್ತವೆ. ಇಂಥ ಪಾವತಿಗಳು ದೇಶದ ಎಲ್ಲೆಗಳನ್ನು ದಾಟಿ ನಡೆಯಬಹುದು. ಶೆಲ್ ಕಂಪೆನಿ ಅಥವಾ ಬೇನಾಮಿ ಖಾತೆಗಳ ಮೂಲಕ ಹಣದ ಸಕ್ರಮಗೊಳಿಸುವಿಕೆಗೆ ಬಳಸಬಹುದು.
ಗ್ರಾಹಕರಿಗೆ ತೊಂದರೆ
ರಿಸರ್ವ್ ಬ್ಯಾಂಕ್ ಪಿಪಿಬಿಯ ಪರವಾನಿಗೆ ರದ್ದು ಪಡಿಸಲಿಲ್ಲವೇಕೆ? ರದ್ದುಗೊಳಿಸಲು ಆಧಾರಗಳಿರಲಿಲ್ಲ. ಕಂಪೆನಿ ಬ್ಯಾಂಕಿಂಗ್ ವಹಿವಾಟು ಮುಂದುವರಿಸದೆ ಇದ್ದರೆ ಅಥವಾ ಹಾಲಿ/ಭವಿಷ್ಯದ ಠೇವಣಿದಾರರಿಗೆ ಹಣ ಪಾವತಿಸಲು ಸಾಧ್ಯವಾಗದಿದ್ದರೆ ಅಥವಾ ಬ್ಯಾಂಕಿನ ವಹಿವಾಟು ಸಾರ್ವಜನಿಕರು/ಅಥವಾ ಠೇವಣಿದಾರರ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ ಮಾತ್ರ ಪರವಾನಿಗೆ ರದ್ದುಗೊಳಿಸಬಹುದು. ಆದರೆ, ಬ್ಯಾಂಕ್ ಸ್ಥಗಿತಗೊಂಡ ಬಳಿಕ ಗ್ರಾಹಕರು ಏನು ಮಾಡಬೇಕು ಎಂಬುದನ್ನು ಆರ್‌ಬಿಐ ಹೇಳಿಲ್ಲ. ಇಂಥ ಬ್ಯಾಂಕ್‌ಗಳನ್ನು ಬಳಸುವವರು ಸಣ್ಣ ವರಮಾನದ ಗ್ರಾಹಕರು. ಎನ್‌ಪಿಸಿಐ(ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ) ಪ್ರಕಾರ, ಬಳಕೆಯಲ್ಲಿರುವ ಫಾಸ್ಟ್ ಟ್ಯಾಗ್‌ಗಳಲ್ಲಿ ಶೇ.17ನ್ನು ಪಿಪಿಬಿ ವಿತರಿಸಿದೆ. ಇಂಥ 58 ದಶಲಕ್ಷ ಗ್ರಾಹಕರು ಬೇರೆ ಸೇವಾ ಪೂರೈಕೆದಾರರನ್ನು ಹುಡುಕಬೇಕಾಗುತ್ತದೆ. 6.8 ಕೋಟಿ ವ್ಯಾಲೆಟ್ ಹೊಂದಿರುವವರು ಹಾಗೂ 7 ಲಕ್ಷ ಎನ್‌ಸಿಎಂಸಿ(ರಾಷ್ಟ್ರೀಯ ಮೊಬಿಲಿಟಿ ಕಾರ್ಡ್)ಹೊಂದಿರುವ ಗ್ರಾಹಕರಿಗೆ ತೊಂದರೆಯಾಗಲಿದೆ.
ಮಾರ್ಚ್ 1ರಿಂದ ಪೇಮೆಂಟ್ ಬ್ಯಾಂಕ್ ಖಾತೆಗೆ ಹಣ ತುಂಬಲು ಆಗುವುದಿಲ್ಲ. ಖಾತೆಗಳನ್ನು ಬೇರೆ ಬ್ಯಾಂಕ್‌ಗಳಿಗೆ ವರ್ಗಾಯಿಸದಿದ್ದಲ್ಲಿ, ಸಮಸ್ಯೆ ಬಿಗಡಾಯಿಸುತ್ತದೆ. ಇಂಥ ಬ್ಯಾಂಕುಗಳಿಗೆ ಸೀಮಿತ ಮಾರುಕಟ್ಟೆ ಇದ್ದು, ಹಣಕಾಸು ಒಳಗೊಳ್ಳುವಿಕೆಯನ್ನು ಇವು ಎಷ್ಟರ ಮಟ್ಟಿಗೆ ಈಡೇರಿಸಿವೆ? ಇದನ್ನು ಸರಕಾರಿ-ವಾಣಿಜ್ಯ ಖಾಸಗಿ ಬ್ಯಾಂಕ್‌ಗಳು/ಸಹಕಾರಿ ಬ್ಯಾಂಕುಗಳು ಹಾಗೂ ಸಣ್ಣ ಹಣಕಾಸು ಬ್ಯಾಂಕ್(ಸ್ಮಾಲ್ ಫೈನಾನ್ಸ್ ಬ್ಯಾಂಕ್) ಮೂಲಕ ಸಾಧಿಸಲು ಸಾಧ್ಯವಿಲ್ಲವೇ? ಆರಂಭಿಕ ವರ್ಷಗಳಲ್ಲಿ ಡಿಜಿಟಲೀಕರಣಕ್ಕೆ ಡಿಜಿಟಲ್ ವ್ಯಾಲೆಟ್‌ಗಳು ನೆರವಾದವು. ಆದರೆ, ಯುಪಿಐ(ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್)ಆಧರಿತ ಪಾವತಿ ಹೆಚ್ಚಿದಂತೆ ಡಿಜಿಟಲ್ ವ್ಯಾಲೆಟ್ ಬಳಕೆ ಕಡಿಮೆಯಾಗಿದೆ. ಆದರೆ, ತದ್ವಿರುದ್ಧವಾಗಿ ಪೇಟಿಎಂ ವ್ಯಾಲೆಟ್ ಸಂಖ್ಯೆ ಹಾಗೂ ಬಳಕೆ ಹೆಚ್ಚಿತು. ಆರ್‌ಬಿಐ ಪ್ರಕಾರ, ಡಿಸೆಂಬರ್ 2023ರಲ್ಲಿ 142.9 ಕೋಟಿ ಡಿಜಿಟಲ್ ವ್ಯಾಲೆಟ್‌ಗಳು ಇದ್ದವು. ಇದರಲ್ಲಿ ಪಿಪಿಬಿ ಪಾಲು 62.8 ಕೋಟಿ(ಶೇ.43). ಮಾರ್ಚ್ 2022-ಡಿಸೆಂಬರ್ 2023ರ ಅವಧಿಯಲ್ಲಿ ಸೇರ್ಪಡೆಯಾದ 11 ಕೋಟಿ ಗ್ರಾಹಕರಲ್ಲಿ ಹೆಚ್ಚು ಪಾಲು ಪೇಟಿಎಂ ಪೇಮೆಂಟ್ ಬ್ಯಾಂಕ್ ಗ್ರಾಹಕರು.
ಕೈ ವಶಕ್ಕೆ ಪೈಪೋಟಿ
ಪೇಟಿಎಂ ಪೇಮೆಂಟ್ ಬ್ಯಾಂಕನ್ನು ಕೈವಶ ಮಾಡಿಕೊಳ್ಳಲು ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಜಿಯೋ ಫೈನಾನ್ಷಿಯಲ್ ಸರ್ವೀಸ್ ಪ್ರಯತ್ನಿಸುತ್ತಿವೆ. ಕಳೆದ ನವೆಂಬರ್‌ನಲ್ಲಿ ಪಿಪಿಬಿ, ಜಿಯೋ ಫೈನಾನ್ಷಿಯಲ್ಸ್ ಜೊತೆಗೆ ಈ ಸಂಬಂಧ ಮಾತುಕತೆ ನಡೆಸಿತ್ತು. ಆರ್‌ಬಿಐ ನಿರ್ಬಂಧ ಹೇರುವ ಮುನ್ನ ಎಚ್‌ಡಿಎಫ್‌ಸಿಯನ್ನು ಸಂಪರ್ಕಿಸಿತ್ತು. ಕಳೆದ ವರ್ಷ ಎಚ್‌ಡಿಎಫ್‌ಸಿ ಮರುಪರಿಚಯಿಸಿದ ಪೇಝಾಪ್ ಡಿಜಿಟಲ್ ವ್ಯಾಲೆಟ್, 14 ಲಕ್ಷ ಬಳಕೆದಾರರನ್ನು ಹೊಂದಿದೆ. ವ್ಯಾಲೆಟ್ ಮಾರುಕಟ್ಟೆಯಲ್ಲಿ ಜಿಯೋ ಪಾಲು ನಗಣ್ಯ. ಪ್ರಾಯಶಃ ಪಿಪಿಬಿಯನ್ನು ಜಿಯೋ ಪೇಮೆಂಟ್ಸ್ ಬ್ಯಾಂಕ್ ಖರೀದಿಸುವ ಸಾಧ್ಯತೆ ಹೆಚ್ಚು.
ಪಿಪಿಬಿ ಈಗಾಗಲೇ ನೋಡಲ್ ಖಾತೆಗಳನ್ನು ಆಕ್ಸಿಸ್ ಬ್ಯಾಂಕಿಗೆ ವರ್ಗಾಯಿಸಿದೆ. ಇದರಿಂದ ಆಕ್ಸಿಸ್ ಬ್ಯಾಂಕಿಗೆ ಲಾಭವಾಗಲಿದೆ. ಯುಪಿಐ ಸೇವೆ ನೀಡಲು ಹಾಗೂ ಭಾಗಿದಾರ ಬ್ಯಾಂಕ್‌ಗಳ ಮೂಲಕ ಹಣ ವರ್ಗಾವಣೆಗೆ ಅನುವು ಮಾಡಿಕೊಡಲು, ರಾಷ್ಟ್ರೀಯ ಪೇಮೆಂಟ್ಸ್ ಕಾರ್ಪೊರೇಷನ್‌ನಿಂದ ಥರ್ಡ್ ಪಾರ್ಟಿ ಅಪ್ಲಿಕೇಷನ್ ಪ್ರೊವೈಡರ್(ಟಿಪಿಎಪಿ) ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಲು ಮುಂದಾಗಿದೆ. ಈವರೆಗೆ ಇಂಥ ವರ್ಗಾವಣೆಗಳನ್ನು ಪೇಮೆಂಟ್ ಬ್ಯಾಂಕ್ ಮೂಲಕ ಮಾಡುತ್ತಿರುವುದರಿಂದ, ಪೇಟಿಎಂನ್ನು ಟಿಪಿಎಪಿ ಎಂದು ಪರಿಗಣಿಸಿರಲಿಲ್ಲ. ಅಮೆಝಾನ್‌ಪೇ, ಗೂಗ್ಲ್‌ಪೇ, ಮೋಬಿ ಕ್ವಿಕ್, ಫೋನ್‌ಪೇ, ವಾಟ್ಸ್ ಆ್ಯಪ್ ಸೇರಿದಂತೆ 22 ಸಂಸ್ಥೆಗಳು ಟಿಪಿಎಪಿ ಪರವಾನಿಗೆ ಪಡೆದಿವೆ. ಈ ಅರ್ಜಿಯನ್ನು ಆಕ್ಸಿಸ್ ಬ್ಯಾಂಕ್ ಬೆಂಬಲಿಸುವ ಸಾಧ್ಯತೆ ಇದೆ. ಏಕೆಂದರೆ, ಅಮೆಝಾನ್‌ಪೇ, ಗೂಗ್ಲ್ ಪೇ, ಫೋನ್‌ಪೇಯಂಥ ಪ್ರಮುಖ ಯುಪಿಐ ಸಾಧನಗಳಿಗೆ ಆಕ್ಸಿಸ್ ಬ್ಯಾಂಕ್ ಪಾವತಿ ಸಹಭಾಗಿ.
ಡಿಜಿಟಲ್ ವಹಿವಾಟಿನ ಹೆಚ್ಚಳ ಎಂದರೆ, ದುರ್ಬಲ ನಿಯಂತ್ರಣ ಎಂದಲ್ಲ. ಪೇಮೆಂಟ್ ಬ್ಯಾಂಕುಗಳು ಅಪಾರದರ್ಶಕ ಮತ್ತು ಅವ್ಯವಹಾರಕ್ಕೆ ದಾರಿ ಮಾಡಿಕೊಟ್ಟಿವೆ. ಯಾವುದೇ ಸಾಲ ನೀಡದ ಅವು ಆರ್ಥಿಕ ಒಳಗೊಳ್ಳುವಿಕೆಗೆ ಪಾಲು ನೀಡಿಲ್ಲ. ಇಡೀ ಪ್ರಕರಣದಲ್ಲಿ ಎದ್ದು ಕಾಣುವುದು ರಿಸರ್ವ್ ಬ್ಯಾಂಕಿನ ವೈಫಲ್ಯ. 1935ರಲ್ಲಿ ಆರಂಭಗೊಂಡ ರಿಸರ್ವ್ ಬ್ಯಾಂಕ್ ಕಳೆದ ದಶಕದಿಂದ ತನ್ನ ಸ್ವಾತಂತ್ರ್ಯ ಕಳೆದುಕೊಂಡು ನಿಸ್ತೇಜವಾಗಿದೆ. ಈ ನಿಯಂತ್ರಣ ವ್ಯವಸ್ಥೆಯ ದೌರ್ಬಲ್ಯದಿಂದ ಸಾಮಾನ್ಯ ಗ್ರಾಹಕರು ಹೊಡೆತ ತಿನ್ನುತ್ತಿದ್ದಾರೆ.