ಟ್ರಂಪ್ 2.0: ‘ಮಾಗಾ’ದ ಮುನ್ನಡೆ ಮತ್ತು ವಲಸೆ ಪ್ರಶ್ನೆ
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮತ್ತೆ ವಾಪಸಾಗಿದ್ದಾರೆ. ಅಮೆರಿಕದ ರಾಜಕೀಯದಲ್ಲಿ ನಗಣ್ಯ ಎಂದು ಪರಿಗಣಿಸಿದ್ದ ರಾಜಕೀಯ ಚಳವಳಿಯೊಂದು ಟ್ರಂಪ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅದೇ ‘ಮಾಗಾ’(ಮೇಕ್ ಅಮೆರಿಕ ಗ್ರೇಟ್ ಎಗೇನ್, ಎಂಎಜಿಎ).
ಅಮೆರಿಕದ 40ನೇ ಅಧ್ಯಕ್ಷ ರೊನಾಲ್ಡ್ ರೇಗನ್ ‘ಲೆಟ್ಸ್ ಮೇಕ್ ಅಮೆರಿಕ ಗ್ರೇಟ್ ಎಗೇನ್’ ಘೋಷಣೆಯನ್ನು ಬಳಸಿದ ಮೊದಲಿಗರು(1981-89). ಟ್ರಂಪ್ ಪ್ರಕಾರ, ಅವರನ್ನು ಹೊರತುಪಡಿಸಿದರೆ ರೇಗನ್ ಅಮೆರಿಕದ ಅತ್ಯುತ್ತಮ ಅಧ್ಯಕ್ಷರಲ್ಲಿ ಕೊನೆಯವರು. ಮಾಗಾದಂಥ ಚಳವಳಿಗಳಿಗೆ ಹಲವು ಪೂರ್ವನಿದರ್ಶನ ಮತ್ತು ಪರ್ಯಾಯಗಳಿದ್ದರೂ, ಅಮೆರಿಕದಲ್ಲಿ ಮಾಗಾದ ಮುನ್ನಡೆಗೆ ವಿಶಿಷ್ಟ, ಸಮಕಾಲೀನ ಕಾರಣಗಳು ಇವೆ. ಅದು 9/11ರ ಜೋಡಿ ಗೋಪುರದ ದಾಳಿ ಹಾಗೂ ಆರ್ಥಿಕ ಬಿಕ್ಕಟ್ಟಿನ ಬಳಿಕ ಶತಮಾನದ ತಿರುವಿನಲ್ಲಿ ಆರಂಭಗೊಂಡಿತು. ಆನಂತರ ಮುಂದಿನ ದಶಕದಲ್ಲಿ ಅಮೆರಿಕ ಮತ್ತೊಂದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. 2008ರಲ್ಲಿ ಮೊದಲ ಬಾರಿಗೆ ಶ್ವೇತವರ್ಣೀಯರಲ್ಲದ ಬರಾಕ್ ಒಬಾಮಾ ಅಧ್ಯಕ್ಷರಾಗಿ ಆಯ್ಕೆಯಾದರು; ಮುಂದಿನ ಚುನಾವಣೆಯಲ್ಲಿ ಮರುಆಯ್ಕೆಯಾದರು. ಇದರ ಬಳಿಕ ಅಮೆರಿಕದ ಸಮಾಜದಲ್ಲಿ ಸೀಳು ಕಾಣಿಸಿಕೊಂಡಿತು; ದೇಶದ ಅಸ್ಮಿತೆ, ಉದ್ದೇಶ ಹಾಗೂ ಬೇರೆ ದೇಶಗಳಿಗೆ ಹೋಲಿಸಿದರೆ ಅಮೆರಿಕ ವಿಶಿಷ್ಟ, ವಿಭಿನ್ನ (ಎಕ್ಸೆಪ್ಷನಲಿಸಂ) ಎಂಬ ಅಭಿಪ್ರಾಯ ಬಲಗೊಂಡಿತು. ಈ ಮಂಥನದ ಫಲವೇ ಮಾಗಾ.
ಪ್ರತಿರೋಧ ಮತ್ತು ಅಸಂತೃಪ್ತಿ:
ಮಾಗಾದ ಕೇಂದ್ರದಲ್ಲಿ ಇದ್ದುದು-ಜಾಗತೀಕರಣಕ್ಕೆ ಪ್ರತಿರೋಧ ಹಾಗೂ ಸಾಂಸ್ಕೃತಿಕ/ಆರ್ಥಿಕ ಅಸಂತೃಪ್ತಿ. ಉದಾರವಾದಿ ಪ್ರಜಾಪ್ರಭುತ್ವದ ಬಗ್ಗೆ ನಿರ್ಲಕ್ಷ್ಯವಿರುವವರು ಅಥವಾ ಅದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲದವರು ಅಥವಾ ಅರ್ಥ ಮಾಡಿಕೊಳ್ಳಲು ಇಷ್ಟವಿಲ್ಲದವರು ಅಥವಾ ಅದನ್ನು ತಿರಸ್ಕರಿಸುವವರ ಕೂಟ ಇದು. ಮಾಗಾದ ಪದಾತಿ ದಳದಲ್ಲಿ ಜನಾಂಗದ್ವೇಷಿಗಳು, ಮತೋನ್ಮಾದಿಗಳು, ಟ್ರಾನ್ಸ್‌ಜೆಂಡರ್‌ಗಳನ್ನು ದ್ವೇಷಿಸುವವರು ಮತ್ತು ರಾಷ್ಟ್ರೀಯವಾದಿ ದೇಶೀಯರು ಇದ್ದಾರೆ. ವಲಸಿಗರು ಮತ್ತು ಮಹಿಳೆಯರ ಬಗ್ಗೆ ಟ್ರಂಪ್ ಹಾಗೂ ಅವರ ಅನುಯಾಯಿಗಳ ಹೇಳಿಕೆ ಇದಕ್ಕೆ ಸಾಕ್ಷಿ. ಈ ಗುಂಪು ಈಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಕೊಂಡಿದೆ. ಟ್ರಂಪ್ ವಿಜಯ ಇದಕ್ಕೆ ಸಾಕ್ಷಿ. ಶೇ.45ರಷ್ಟು ಲ್ಯಾಟಿನೋಗಳು, ಶೇ.20ರಷ್ಟು ಕಪ್ಪು ವರ್ಣೀಯರು ಹಾಗೂ ಗಮನಾರ್ಹ ಸಂಖ್ಯೆಯ ಹಿಂದೂ/ಮುಸ್ಲಿಮರು ಟ್ರಂಪ್‌ಗೆ ಮತ ಚಲಾಯಿಸಿದ್ದಾರೆ.
2010ರ ಸುಮಾರಿಗೆ ಹಿಂದಿನವರ ಜೀವನಶೈಲಿ ತಮಗೆ ತನ್ನಿಂತಾನೇ ದಕ್ಕುವುದಿಲ್ಲ ಎಂಬುದು ಅಮೆರಿಕದ ಹಾಲಿ ಪೀಳಿಗೆಗೆ ಖಾತ್ರಿಯಾಗಿತ್ತು. ಇದೇ ಹೊತ್ತಿನಲ್ಲಿ ಅಮೆರಿಕ ಹಲವೆಡೆ ಯುದ್ಧಗಳಲ್ಲಿ ಸಿಲುಕಿಕೊಂಡಿತು. ಮುಕ್ತ ಜಾಗತಿಕ ವ್ಯಾಪಾರವು ಅಮೆರಿಕದ ಉತ್ಪಾದನೆ ಕ್ಷೇತ್ರವನ್ನು ನಿಸ್ಸತ್ವಗೊಳಿಸಿದ್ದು, ಕಾರ್ಮಿಕರು ಹತಾಶರಾಗಿದ್ದಾರೆ. ಚೀನಾ, ಜಪಾನ್, ಹಾಂಕಾಂಗ್ ಮತ್ತಿತರ ದೇಶಗಳ ಕಡಿಮೆ ಬೆಲೆಯ ಉತ್ಪನ್ನಗಳು ಅಮೆರಿಕದ ಮಾರುಕಟ್ಟೆಯನ್ನು ತುಂಬಿಬಿಟ್ಟಿವೆ. ಇವೆಲ್ಲವೂ ಮಾಗಾಕ್ಕೆ ಭೂಮಿಕೆ ಸಿದ್ಧಪಡಿಸಿಕೊಟ್ಟವು. ಈ ಸಂಘಟನೆಗೆ ಜನಪ್ರಿಯತೆ, ರಾಜಕೀಯ ಮಹತ್ವಾಕಾಂಕ್ಷೆ, ಪ್ರಸಿದ್ಧಿ, ಸಂಪನ್ಮೂಲ ಹಾಗೂ ಆಕರ್ಷಕ ವ್ಯಕ್ತಿತ್ವವಿರುವ ವ್ಯಕ್ತಿಯೊಬ್ಬರು ಬೇಕಿತ್ತು. ಆಗ ಒದಗಿಬಂದವರು ನ್ಯೂಯಾರ್ಕಿನ ಉದ್ಯಮಿ ಟ್ರಂಪ್. ಮೊದಲು ಡೆಮಾಕ್ರಟಿಕ್ ಪಕ್ಷದಲ್ಲಿದ್ದ ಅವರು, ಆನಂತರ ರಿಪಬ್ಲಿಕನ್ ಪಕ್ಷಕ್ಕೆ ಸೇರ್ಪಡೆಯಾದರು. ತಮ್ಮ ಶೈಲಿಯ ರಾಜಕೀಯವನ್ನು ಪ್ರಯೋಗಿಸಲು ಟ್ರಂಪ್‌ಗೆ ಇಲ್ಲಿ ಅವಕಾಶ ಸಿಕ್ಕಿತು. ಜಾಗತೀಕರಣಕ್ಕೆ ವಿರೋಧದ ಜೊತೆಗೆ, ಶ್ವೇತವರ್ಣೀಯ ಕ್ರಿಶ್ಚಿಯನ್ನರು ಎದುರಿಸುತ್ತಿದ್ದ ಸಾಂಸ್ಕೃತಿಕ ತಲ್ಲಣವನ್ನು ಟ್ರಂಪ್ ಬಳಸಿಕೊಂಡರು. ಅಸಂಬದ್ಧ ಮತ್ತು ಸೋಜಿಗ ಎನ್ನಿಸಬಹುದು-ಅಮೆರಿಕದ ಕಾರ್ಮಿಕರಲ್ಲಿ ಹೆಚ್ಚಿನವರಿಗೆ ಟ್ರಂಪ್ ಚಾಂಪಿಯನ್.
ವಲಸೆಯಿಂದ ದೇಶದ ಧಾರ್ಮಿಕ ಸಂಯೋಜನೆ ಬದಲಾಗಿತ್ತು ಮತ್ತು ಸೆಕ್ಯುಲರ್ ಪ್ರವೃತ್ತಿಯೆಡೆಗೆ ವಾಲುತ್ತಿತ್ತು. 1990ರ ಆರಂಭದಲ್ಲಿ ಶೇ.90ರಷ್ಟು ಮಂದಿ ತಮ್ಮನ್ನು ಕ್ರಿಶ್ಚಿಯನ್ನರು ಎಂದು ಗುರುತಿಸಿಕೊಂಡಿದ್ದರು. ಈಗ ಅದು 2/3 ಇದೆ. ಇದೇ ಅವಧಿಯಲ್ಲಿ ಯಾವುದೇ ಧರ್ಮದೊಟ್ಟಿಗೆ ಗುರುತಿಸಿಕೊಳ್ಳದವರ ಸಂಖ್ಯೆ ತೀವ್ರವಾಗಿ ಹೆಚ್ಚಳಗೊಂಡು, ಶೇ.29ಕ್ಕೆ ಹೆಚ್ಚಿತು. ಇವರು ದೇಶವನ್ನು ಆಳುತ್ತಿರುವ ಇಲೈಟ್ ಮಂದಿ. ಈ ಗುಂಪಿನಲ್ಲಿ ಎಲ್ಲ ಪಕ್ಷದವರೂ ಇದ್ದಾರೆ. ಇವರ ಬಗ್ಗೆ ಜನಸಾಮಾನ್ಯರಿಗೆ ಆಕ್ಷೇಪವಿದೆ. ಕ್ರಿಶ್ಚಿಯನ್ನರು ಮಾಗಾದ ಬೆಂಬಲಿಗರಾಗಿದ್ದು, 2016ರಲ್ಲಿ ಟ್ರಂಪ್ ‘‘ಕ್ರಿಶ್ಚಿಯಾನಿಟಿಯು ಅಧಿಕಾರವನ್ನು ಗಳಿಸಲಿದೆ’’ ಎಂದು ಹೇಳಿದ್ದರು. 2024ರ ಚುನಾವಣೆ ವೇಳೆ ಕ್ರಿಶ್ಚಿಯನ್ನರು ತಮ್ಮನ್ನು ಬೆಂಬಲಿಸಬೇಕು ಎಂದು ಕೋರಿದ್ದರು. ಕ್ರಿಶ್ಚಿಯನ್ನರಿಗೆ ದೇಶೀಯತೆಯ ಹಕ್ಕು ಪ್ರಮುಖ ಅಂಶವಾಗಿದ್ದು, ಇವರು ಇನ್ನಿತರ ಗುಂಪುಗಳೊಟ್ಟಿಗೆ ಸೇರಿಕೊಂಡು ಧಾರ್ಮಿಕರಲ್ಲದ ಎಲೈಟ್‌ಗಳ ವಿರುದ್ಧ ನಿಂತಿದ್ದಾರೆ.
ಹೊಸ ವಲಸಿಗರಲ್ಲಿ ಮುಸ್ಲಿಮರು ಹಾಗೂ ಹಿಂದೂಗಳ ಸಂಖ್ಯೆ ಹೆಚ್ಚು ಇದೆ. ಹೆಚ್ಚಿನ ಹಿಂದೂ-ಮುಸ್ಲಿಮರು ಸಂಪ್ರದಾಯವಾದಿಗಳು. ಮಾಗಾದ ಟ್ರಾನ್ಸ್‌ಜೆಂಡರ್‌ಗಳ ವಿರೋಧಿ ನೀತಿಯನ್ನು ಬೆಂಬಲಿಸುತ್ತಾರೆ. ಮುಸ್ಲಿಮರು ಮಾಗಾ ಬೆಂಬಲಿಸಬಹುದು ಎಂದು ಯಾರೂ ಊಹಿಸಿರಲಿಲ್ಲ. ತಮ್ಮ ಧಾರ್ಮಿಕ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದು ಮುಖ್ಯವಾಗಿರುವುದರಿಂದ, ಈ ಸಮುದಾಯವು ಅಮೆರಿಕವನ್ನು ‘ಮತ್ತೆ ಮಹಾನ್ ಮಾಡುವ’ ಆಶ್ವಾಸನೆಯನ್ನು ಬೆಂಬಲಿಸುತ್ತಿವೆ. ಟ್ರಂಪ್ ಈ ಬಗ್ಗೆ ಆಶ್ವಾಸನೆ ನೀಡಿದ್ದು, ಧಾರ್ಮಿಕವಲ್ಲದ ಮೂರನೇ ಗುಂಪು ಅವರ ಶತ್ರು ಎಂದು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದಲ್ಲಿ ಮುಸ್ಲಿಮರನ್ನು ತೋರಿಸಿ, ಹಿಂದೂಗಳನ್ನು ಎತ್ತಿ ಕಟ್ಟಿದಂತೆ ಅಮೆರಿಕದಲ್ಲೂ ನಡೆದಿದೆ. ಇದರಿಂದ 2020ರಲ್ಲಿ ಜೋ ಬೈಡನ್ ಅವರ ವಿಜಯಕ್ಕೆ ಕಾರಣವಾಗಿದ್ದ ಪೆನ್ಸಿಲ್ವೇನಿಯಾ, ಮಿಶಿಗನ್ ಹಾಗೂ ವಿಸ್ಕಾನ್‌ಸಿನ್ ಈ ಬಾರಿ ಟ್ರಂಪ್‌ಗೆ ಒಲಿದವು; ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್‌ಗೆ ಬೆಂಬಲ ಶೇ.27ರಿಂದ ಶೇ.42ಕ್ಕೆ ಹೆಚ್ಚಳಗೊಂಡಿತು. ಮಿಶಿಗನ್ನಿನ ಡಿಯರ್‌ಬಾರ್ನ್‌ನ ಜನಸಂಖ್ಯೆಯಲ್ಲಿ ಶೇ.55ರಷ್ಟು ಮುಸ್ಲಿಮರಿದ್ದು, 2020ರ ಚುನಾವಣೆಯಲ್ಲಿ 3/4ರಷ್ಟು ಮಂದಿ ಬೈಡನ್‌ಗೆ ಮತ ನೀಡಿದ್ದರು. ಇಲ್ಲಿ ಈ ಬಾರಿ ಟ್ರಂಪ್‌ಗೆ ಶೇ.42ರಷ್ಟು ಮತ ಚಲಾವಣೆ ಆಗಿದೆ. ಜೊತೆಗೆ, ಟ್ರಂಪ್‌ಗೆ ಆಫ್ರಿಕಾ ಮೂಲದ ಅಮೆರಿಕನ್ನರ ಬೆಂಬಲ ನಿರಂತರವಾಗಿ ಹೆಚ್ಚುತ್ತಿದೆ-2016ರಲ್ಲಿ ಶೇ.8, 2020ರಲ್ಲಿ ಶೇ.13 ಹಾಗೂ 2024ರಲ್ಲಿ ಶೇ.20.
19ನೇ ಶತಮಾನದ ಅಂತ್ಯದಲ್ಲಿ ಕೋಟ್ಯಧೀಶ ರಬ್ಬರ್ ಬೆಳೆಗಾರರನ್ನು ನಿಯಂತ್ರಿಸಬೇಕೆಂದು ಜನ ಬಂಡೆದಿದ್ದರು. ಆಗ ಎರಡೂ ಪಕ್ಷಗಳು ಪ್ರತಿಕ್ರಿಯಿಸಬೇಕಾಗಿ ಬಂದಿತು. 2024ರ ಚುನಾವಣೆ ಮಾಗಾವನ್ನು ಮುನ್ನೆಲೆಗೆ ತಂದಿದೆ. ಆರ್ಥಿಕ/ಸಾಂಸ್ಕೃತಿಕ ಪಲ್ಲಟಕ್ಕೆ ಪ್ರತಿಕ್ರಿಯೆಯಾಗಿ ಸೃಷ್ಟಿಯಾಗುವ ಇಂಥ ಸೀಳುಗಳು ದೀರ್ಘಕಾಲದಲ್ಲಿ ದೇಶವೊಂದರ ಪ್ರಜಾಸತ್ತಾತ್ಮಕ ಬೇರುಗಳನ್ನು ದುರ್ಬಲಗೊಳಿಸುತ್ತವೆ. ಮಾಗಾಕ್ಕೆ ಎರಡೂ ಪಕ್ಷಗಳಲ್ಲಿ ಬೆಂಬಲಿಗರು ಇರುವುದರಿಂದ, ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ಊಹಿಸುವುದು ಕಷ್ಟ.
ವಲಸೆ ನಿಯಂತ್ರಣ ಸಾಧ್ಯವೇ?:
ಅಮೆರಿಕ 15ನೇ ಶತಮಾನದಿಂದ ಯುರೋಪಿಯನ್ ದೇಶಗಳ ವಸಾಹತು ಆಗಿತ್ತು. ಜುಲೈ 4, 1776ರಂದು ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಿತು. ಅಮೆರಿಕ ಹೇಳಿಕೇಳಿ ವಲಸಿಗರ ದೇಶ. ಜಗತ್ತಿನೆಲ್ಲೆಡೆಯ ಜನರನ್ನು ‘ಅಮೆರಿಕನ್ ಡ್ರೀಮ್’ ಸೆಳೆಯುವುದರಿಂದ, ಅಲ್ಲಿಗೆ ವಲಸೆ ವರ್ಷೇವರ್ಷೇ ಹೆಚ್ಚುತ್ತಿದೆ. ಉದ್ಯೋಗ, ವಿದ್ಯಾಭ್ಯಾಸ, ಪ್ರವಾಸ, ಅಧ್ಯಯನಕ್ಕೆಂದು ಅಮೆರಿಕಕ್ಕೆ ಅಪಾರ ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಾರೆ. ಆದರೆ, ಅಕ್ರಮ ವಲಸೆ ಅಮೆರಿಕನ್ನರ ಸಿಟ್ಟಿಗೆ ಕಾರಣವಾಗಿದೆ. ಈ ಚುನಾವಣೆಯಲ್ಲಿ ವಲಸೆ ಪ್ರಮುಖ ವಿಷಯವಾಗಿತ್ತು.
ಅಮೆರಿಕ ಸರಕಾರವು ಪ್ರತೀ ವರ್ಷ 1.4 ಲಕ್ಷ ಭಾರತೀಯರಿಗೆ ಉದ್ಯೋಗ ಆಧರಿತ ವೀಸಾ ನೀಡುತ್ತದೆ. ಅಕ್ಟೋಬರ್ 22ರಂದು ಆಂತರಿಕ ಸುರಕ್ಷತಾ ಇಲಾಖೆ(ಹೋಮ್‌ಲ್ಯಾಂಡ್ ಸೆಕ್ಯುರಿಟಿ, ಡಿಎಚ್‌ಎಸ್) ದೊಡ್ಡ ಚಾರ್ಟರ್ ವಿಮಾನದಲ್ಲಿ ಅಕ್ರಮವಾಗಿ ನೆಲೆಸಿದ್ದ ಭಾರತೀಯರನ್ನು ವಾಪಸ್ ಕಳಿಸಿತು. 2023ರಲ್ಲಿ 1,100 ಭಾರತೀಯರನ್ನು ವಾಪಸ್ ಕಳಿಸಲಾಗಿದೆ ಎಂದು ಇಲಾಖೆ ಹೇಳಿತು. ಅಮೆರಿಕವು ಮೆಕ್ಸಿಕೋ ಜತೆ ಹಂಚಿಕೊಂಡಿರುವ ಉತ್ತರ ಗಡಿ ಹಾಗೂ ಕೆನಡಾ ಗಡಿ ಮೂಲಕ ಅಕ್ರಮ ಪ್ರವೇಶ ನಡೆಯುತ್ತದೆ. ಈಗ ಮೆಕ್ಸಿಕೋ ಗಡಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅಮೆರಿಕದ ವೀಸಾ ಇರುವ ಭಾರತೀಯರಿಗೆ ಹೊಂಡುರಾಸ್, ಎಲ್‌ಸಾಲ್ವಡಾರ್, ಗ್ವಾಟೆಮಾಲ ಮತ್ತಿತರ ಲ್ಯಾಟಿನ್/ಕೇಂದ್ರ ಅಮೆರಿಕನ್ ದೇಶಗಳು ವೀಸಾರಹಿತ ಪ್ರವೇಶ ನೀಡುತ್ತವೆ. ಈ ದೇಶಗಳಲ್ಲಿ ಭಾರತೀಯರು ದೀರ್ಘ ಕಾಲ ನೆಲೆಸಬಹುದು. ಉದಾಹರಣೆಗೆ, ಪೆರುವಿನಲ್ಲಿ ಭಾರತೀಯರು ವ್ಯಾಪಾರ ಹಾಗೂ ಪ್ರವಾಸ ಉದ್ದೇಶದಿಂದ 180 ದಿನ ವೀಸಾ ಇಲ್ಲದೆ ನೆಲೆಸಲು ಅವಕಾಶವಿದೆ. ಆದರೆ, ಒಂದು ಶರತ್ತೆಂದರೆ, ಅವರ ಬಳಿ ಆರು ತಿಂಗಳು ಅವಧಿಯ ಆಸ್ಟ್ರೇಲಿಯ, ಇಂಗ್ಲೆಂಡ್, ಕೆನಡಾ ಇಲ್ಲವೇ ಅಮೆರಿಕದ ವೀಸಾ ಇರಬೇಕು. ಅಕ್ಟೋಬರ್‌ನಲ್ಲಿ ಭಾರತಕ್ಕೆ ವಾಪಸಾದವರಲ್ಲಿ ಹೆಚ್ಚಿನವರು ಪಂಜಾಬಿನವರು.
ನವೆಂಬರ್ 2022ರಿಂದ ಸೆಪ್ಟಂಬರ್ 2023ರ ಅವಧಿಯಲ್ಲಿ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ 96,917 ಮಂದಿಯನ್ನು ಬಂಧಿಸಲಾಗಿದೆ ಎಂದು ಅಮೆರಿಕದ ಕಸ್ಟಮ್ಸ್ ಆ್ಯಂಡ್ ಬಾರ್ಡರ್ ಪ್ರೊಟೆಕ್ಷನ್(ಯುಸಿಬಿಪಿ) ಹೇಳಿದೆ. 2019ರ ಬಳಿಕ ಅಮೆರಿಕಕ್ಕೆ ಅಕ್ರಮ ಪ್ರವೇಶ 5 ಪಟ್ಟು ಹೆಚ್ಚಿದೆ. ಭಾರತದಿಂದ ಅಕ್ರಮ ಪ್ರವೇಶಕ್ಕೆ ಪ್ರಯತ್ನಿಸುವವರಲ್ಲಿ ಅರ್ಧದಷ್ಟು ಮಂದಿ ಗುಜರಾತಿನವರು. ಮೋದಿ ಸರಕಾರ ಹೇಳುವ ‘ಗುಜರಾತ್ ಮಾಡೆಲ್’ ಯಶಸ್ವಿಯಾಗಿದ್ದರೆ, ಇವರೆಲ್ಲರೂ ಏಕೆ ಅಮೆರಿಕಕ್ಕೆ ಕಳ್ಳ ದಾರಿಯಿಂದ ತೆರಳಲು ಯತ್ನಿಸುತ್ತಿದ್ದರು? ಅಕ್ರಮ ಪ್ರವೇಶ ಅಪಾಯಕಾರಿಯಾಗಿದ್ದು, ಸಾವುನೋವು ಸಂಭವಿಸುವ ಸಾಧ್ಯತೆ ಇದೆ. ಇತ್ತೀಚೆಗೆ ಗುಜರಾತಿನ ಒಂದೇ ಕುಟುಂಬದ ನಾಲ್ವರು-ಜಗದೀಶ್ ಪಟೇಲ್, ವೈಶಾಲಿ ಬೆನ್ ಪಟೇಲ್ ಹಾಗೂ ಮಕ್ಕಳಾದ ವಿಹಾಂಗಿ ಮತ್ತು ಧಾರ್ಮಿಕ್ ಕೆನಡಾ ಮೂಲಕ ಪ್ರವೇಶಿಸಲು ಪ್ರಯತ್ನಿಸುವಾಗ ತೀವ್ರ ಚಳಿಯಿಂದ ಮೃತಪಟ್ಟ ದುರಂತ ಘಟನೆ ನಡೆದಿತ್ತು.
ಡೊನಾಲ್ಡ್ ಟ್ರಂಪ್ ಭಾರತೀಯರ ವಲಸೆ ವಿರುದ್ಧ ಇಲ್ಲ ಎನ್ನಲಾಗುತ್ತಿದೆ. ಚುನಾವಣೆ ಪ್ರಚಾರದ ಅಂತ್ಯದಲ್ಲಿ ಅವರು ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ರಕ್ಷಣೆ ಬಗ್ಗೆ ಮಾತನ್ನಾಡಿದ್ದರು. ಉಪಾಧ್ಯಕ್ಷ ಜೆ.ಡಿ. ವಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ಆಂಧ್ರದವರು. ಟ್ರಂಪ್ ದೃಷ್ಟಿ ಇರುವುದು ಲ್ಯಾಟಿನ್ ಅಮೆರಿಕನ್ ದೇಶಗಳ ಮೂಲಕ ಬರುತ್ತಿರುವ ಅಕ್ರಮ ವಲಸಿಗರ ಮೇಲೆ ಎನ್ನಲಾಗಿದೆ. ಆದರೆ, ಒಂದುವೇಳೆ ಎಲ್ಲರಿಗೂ ಅನ್ವಯವಾಗುವ ವಲಸೆ ಕ್ರಮಗಳನ್ನು ತೆಗೆದುಕೊಂಡರೆ, ಅದರಿಂದ ಭಾರತೀಯರಿಗೂ ಸಮಸ್ಯೆ ಆಗಲಿದೆ.
ಅಮೆರಿಕದಲ್ಲಿ ಅಂದಾಜು 11.7 ದಶಲಕ್ಷ ಅಕ್ರಮ ವಲಸಿಗರಿದ್ದಾರೆ. ಇದರಲ್ಲಿ ಭಾರತೀಯರ ಪಾಲು ಅಂದಾಜು 7.25 ಲಕ್ಷ; ಮೂರನೇ ಸ್ಥಾನ. ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ‘ಅಮೆರಿಕನ್ ಉತ್ಪನ್ನ ಖರೀದಿಸು, ಅಮೆರಿಕನ್ನರಿಗೆ ಉದ್ಯೋಗ ನೀಡು’ ಎಂಬ ಆದೇಶ ಹೊರಡಿಸಿದ್ದರು (ಎಪ್ರಿಲ್ 18, 2017ರಲ್ಲಿ). ವೀಸಾ ನೀಡುವ ಮುನ್ನ ಈ ಆದೇಶವನ್ನು ಪರಿಗಣಿಸಬೇಕು ಎಂದು ವಿದೇಶ ವ್ಯವಹಾರಗಳ ಇಲಾಖೆಯ ಕೈಪಿಡಿಯಲ್ಲಿ ಹೇಳಲಾಗಿತ್ತು. ಯುಎಸ್ ಸಿಟಿಜನ್‌ಶಿಪ್ ಆ್ಯಂಡ್ ಇಮಿಗ್ರೇಷನ್ ಸರ್ವೀಸಸ್ (ಯುಎಸ್‌ಸಿಐಎಸ್) ಪ್ರಕಾರ, ಆನಂತರ ವೀಸಾ ನಿರಾಕರಣೆ ಪ್ರಮಾಣ ಶೇ.17 ರಿಂದ ಶೇ.21ಕ್ಕೆ ಹೆಚ್ಚಿತು(2017-19). ಭಾರತೀಯ ವೃತ್ತಿಪರರಿಗೆ ಎಚ್1ಬಿ ವೀಸಾ ನಿರಾಕರಣೆಯಲ್ಲದೆ, ಅಮೆರಿಕನ್ ರಾಯಭಾರ ಕಚೇರಿ ಅಧಿಕಾರಿಗಳು ಕಂಪೆನಿಗಳು ಎಲ್1 ವೀಸಾದಡಿ ಭಾರತದಿಂದ ಉದ್ಯೋಗಿಗಳ ವರ್ಗಾವಣೆಯನ್ನು ಕಠಿಣಗೊಳಿಸಿದ್ದರು. ‘‘ಅಕ್ರಮ ವಲಸೆ ತಡೆಯಲ್ಲದೆ, ಇಂಥ ವಲಸಿಗರನ್ನು ಸ್ವದೇಶಕ್ಕೆ ಕಳಿಸಲಾಗುತ್ತದೆ. ಅಗತ್ಯಬಿದ್ದಲ್ಲಿ 1798ರ ಏಲಿಯನ್ ಎನಮೀಸ್ ಕಾಯ್ದೆಯನ್ನು ಬಳಸಲಾಗುತ್ತದೆ’’ ಎಂದು ಟ್ರಂಪ್ ಪ್ರಚಾರದ ವೇಳೆ ಹೇಳಿದ್ದರು.
ಅಮೆರಿಕದಲ್ಲಿ ಆಡಳಿತ ಪಕ್ಷ ಯಾವುದೇ ಇರಲಿ, ಅದನ್ನು ಕಾಕಸ್(ಉದ್ಯಮಿಗಳು, ಲಾಬಿ ಮಾಡುವವರ ಒಕ್ಕೂಟ)ಗಳು ನಿಯಂತ್ರಿಸುತ್ತದೆ. ಟ್ರಂಪ್ ಅವರ ವಲಸೆ ವಿರೋಧಿ ನೀತಿಗಳು ಭಾರತದ ಮಾರುಕಟ್ಟೆ ಮೇಲೆ ಕಣ್ಣಿಟ್ಟಿರುವ ಅಮೆರಿಕದ ಭಾರೀ ಕಂಪೆನಿಗಳ ಆಶಯಕ್ಕೆ ವಿರುದ್ಧವಾಗಿದೆ. ಉದ್ಯಮಿಗಳ ಪರ ಎಂದೇ ಬಿಂಬಿತವಾಗಿರುವ ಟ್ರಂಪ್, ತಮ್ಮ ಸ್ನೇಹಿತರ ಹಿತಾಸಕ್ತಿಗೆ ವಿರುದ್ಧ ನಡೆಯುವ ಸಾಧ್ಯತೆಯಿಲ್ಲ. ಅಧ್ಯಯನವೊಂದರ ಪ್ರಕಾರ, ಅಮೆರಿಕದ ಜಿಡಿಪಿಗೆ ವಲಸಿಗರ ಪಾಲು ಶೇ.17(ಸುಮಾರು 3.3 ಟ್ರಿಲಿಯನ್ ಡಾಲರ್).
ಇನ್ನೊಂದು ಆತಂಕಕರ ಸಂಗತಿಯೆಂದರೆ, ಅಮೆರಿಕದಲ್ಲಿ ಆಶ್ರಯ ಕೋರುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಹೆಚ್ಚಳ. ಅಮೆರಿಕದ ಆಂತರಿಕ ಸುರಕ್ಷೆ ಇಲಾಖೆ ಪ್ರಕಾರ, 2021-23ರ ಅವಧಿಯಲ್ಲಿ ಭಾರತೀಯರಿಂದ ಆಶ್ರಯ ಕೋರಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ವಿಪರೀತ ಹೆಚ್ಚಿದೆ(4,330ರಿಂದ 41,330). ಇವರಲ್ಲಿ ಅರ್ಧದಷ್ಟು ಗುಜರಾತಿಗಳು. 2023ರಲ್ಲಿ 5,430 ಭಾರತೀಯರಿಗೆ ಆಶ್ರಯ ನೀಡಲಾಗಿದೆ. ಆರ್ಥಿಕ ಹಿನ್ನಡೆ, ಕೋಮು ಸಂಘರ್ಷದ ಹೆಚ್ಚಳ, ನಿರುದ್ಯೋಗ ಏರಿಕೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಸವಕಳಿ ಇದಕ್ಕೆ ಕಾರಣ ಎನ್ನಲಾಗಿದೆ.
ಹವಾಮಾನ ಬದಲಾವಣೆ ಪ್ರಯತ್ನಗಳಿಗೆ ಹಿನ್ನಡೆ:
ಹವಾಮಾನ ಬದಲಾವಣೆ ಜಗತ್ತು ಎದುರಿಸುತ್ತಿರುವ ಭಾರೀ ಕಂಟಕಗಳಲ್ಲಿ ಒಂದು. ಆದರೆ, ಟ್ರಂಪ್ ಹವಾಮಾನ ಬದಲಾವಣೆ ಎನ್ನುವುದೇ ಇಲ್ಲ ಎಂದಿದ್ದರು. ಅವರು ವಾಹನ ಮತ್ತು ತೈಲೋದ್ಯಮಗಳ ಪರ ನಿಲುವು ತೆಗೆದುಕೊಳ್ಳುವುದರಿಂದ, ಹವಾಮಾನ ಬದಲಾವಣೆ ಪ್ರಯತ್ನಗಳಿಗೆ ಹಿನ್ನಡೆಯಾಗಲಿದೆ. ಪ್ರಸಕ್ತ ಅಝರ್‌ಬೈಜಾನಿನ ಬಾಕುವಿನಲ್ಲಿ ಹವಾಮಾನ ಶೃಂಗ(ಸಿಒಪಿ29) ನಡೆಯುತ್ತಿದೆ. ಟ್ರಂಪ್ ನೀತಿಯಿಂದ ಕೊಳೆ ಗಾಳಿ ತಡೆ ಪ್ರಯತ್ನಗಳಿಗೆ ಹಿನ್ನಡೆಯಾಗಲಿದೆ. ಅಮೆರಿಕದಲ್ಲಿ ಯಾರು ಅಧಿಕಾರದಲ್ಲಿದ್ದಾರೆ ಎನ್ನುವುದು ಜಾಗತಿಕವಾಗಿ ಬಹಳ ಮುಖ್ಯವಾಗಲಿದೆ. ಜಗತ್ತಿನೆಲ್ಲೆಡೆ ಬಲಪಂಥೀಯತೆ ಹಾಗೂ ಸರ್ವಾಧಿಕಾರಿ ಪ್ರವೃತ್ತಿ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ಟ್ರಂಪ್ ರೂಪದಲ್ಲಿ ಉದಾರವಾದದ ಇನ್ನೊಬ್ಬ ವಿರೋಧಿ ರಂಗಪ್ರವೇಶ ಮಾಡಿದ್ದಾರೆ. ಕಾದುನೋಡೋಣ.ಹವಾಮಾನ ಬದಲಾವಣೆ ಜಗತ್ತು ಎದುರಿಸುತ್ತಿರುವ ಭಾರೀ ಕಂಟಕಗಳಲ್ಲಿ ಒಂದು. ಆದರೆ, ಟ್ರಂಪ್ ಹವಾಮಾನ ಬದಲಾವಣೆ ಎನ್ನುವುದೇ ಇಲ್ಲ ಎಂದಿದ್ದರು. ಅವರು ವಾಹನ ಮತ್ತು ತೈಲೋದ್ಯಮಗಳ ಪರ ನಿಲುವು ತೆಗೆದುಕೊಳ್ಳುವುದರಿಂದ, ಹವಾಮಾನ ಬದಲಾವಣೆ ಪ್ರಯತ್ನಗಳಿಗೆ ಹಿನ್ನಡೆಯಾಗಲಿದೆ. ಪ್ರಸಕ್ತ ಅಝರ್‌ಬೈಜಾನಿನ ಬಾಕುವಿನಲ್ಲಿ ಹವಾಮಾನ ಶೃಂಗ(ಸಿಒಪಿ29) ನಡೆಯುತ್ತಿದೆ. ಟ್ರಂಪ್ ನೀತಿಯಿಂದ ಕೊಳೆ ಗಾಳಿ ತಡೆ ಪ್ರಯತ್ನಗಳಿಗೆ ಹಿನ್ನಡೆಯಾಗಲಿದೆ. ಅಮೆರಿಕದಲ್ಲಿ ಯಾರು ಅಧಿಕಾರದಲ್ಲಿದ್ದಾರೆ ಎನ್ನುವುದು ಜಾಗತಿಕವಾಗಿ ಬಹಳ ಮುಖ್ಯವಾಗಲಿದೆ. ಜಗತ್ತಿನೆಲ್ಲೆಡೆ ಬಲಪಂಥೀಯತೆ ಹಾಗೂ ಸರ್ವಾಧಿಕಾರಿ ಪ್ರವೃತ್ತಿ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ಟ್ರಂಪ್ ರೂಪದಲ್ಲಿ ಉದಾರವಾದದ ಇನ್ನೊಬ್ಬ ವಿರೋಧಿ ರಂಗಪ್ರವೇಶ ಮಾಡಿದ್ದಾರೆ. ಕಾದುನೋಡೋಣ.