ಮೆಟಾ ಸತ್ಯಾಂಶ ಪರಿಶೀಲಕರನ್ನು ನಿವಾರಿಸುತ್ತಿರುವುದೇಕೆ?

ಜನವರಿ 7, 2025ರಂದು ಮೆಟಾ ಸಿಇಇ ಮಾರ್ಕ್ ಎಲಿಯಟ್ ಝುಕರ್‌ಬರ್ಗ್, ‘‘ಮೆಟಾ ಸತ್ಯಾಂಶ ಪರಿಶೀಲಕ(ಫ್ಯಾಕ್ಟ್ ಚೆಕರ್)ರನ್ನು ತೆಗೆದುಹಾಕಲಿದೆ. ಅವರು ರಾಜಕೀಯ ಪಕ್ಷಪಾತ ತೋರುತ್ತಿದ್ದು, ನಂಬಿಕೆ ಹುಟ್ಟಿಸುವ ಬದಲು ಅದನ್ನು ನಾಶಮಾಡುತ್ತಿದ್ದಾರೆ. ಮೆಟಾ ಮುಖ್ಯವಾಹಿನಿ ಸಂವಾದವನ್ನು ಸ್ಪರ್ಶಿಸದ ವಿಷಯಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಿದೆ’’ ಎಂದು 5 ನಿಮಿಷಗಳ ವೀಡಿಯೊದಲ್ಲಿ ಹೇಳಿದರು. ಸತ್ಯಾಂಶ ಪರಿಶೀಲಕರ ಬದಲು ಎಲಾನ್ ಮಸ್ಕ್ ಅವರ ‘ಎಕ್ಸ್’ ಅಳವಡಿಸಿಕೊಂಡಿರುವ ‘ಕಮ್ಯುನಿಟಿ ನೋಟ್ಸ್’ ವ್ಯವಸ್ಥೆ ಅಳವಡಿಕೆಗೆ ಮೆಟಾ ಮುಂದಾಗಿದೆ. ಇದರಲ್ಲಿ ಕೇಂದ್ರೀಕೃತ ವ್ಯವಸ್ಥೆಯೊಂದರ ಬದಲು ಗ್ರಾಹಕರು ಸುಳ್ಳಿನ ಪತ್ತೆ ಇಲ್ಲವೇ ತಿದ್ದಿದ ವಿಷಯಕ್ಕೆ ಹೆಚ್ಚುವರಿ ವಿವರ ನೀಡುತ್ತಾರೆ. ಆದರೆ, ಮೆಟಾದ ನಿಜವಾದ ಉದ್ದೇಶ-ಟ್ರಂಪ್ ಆಡಳಿತದ ಜೊತೆಗೆ ಹೊಂದಾಣಿಕೆ ಮತ್ತು ಆದಾಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು. ಬಹುರಾಷ್ಟ್ರೀಯ ಕಂಪೆನಿಗಳು ಇಂಥದ್ದೇ ಹೊಂದಾಣಿಕೆಯನ್ನು ಜಗತ್ತಿನ ಎಲ್ಲ ದೇಶಗಳ ಆಡಳಿತದ ಜೊತೆಗೆ ಮಾಡಿಕೊಳ್ಳುತ್ತವೆ; ಇದು ಅದಾನಿ-ಅಂಬಾನೀಕರಣದ ಇನ್ನೊಂದು ರೂಪ ಅಷ್ಟೆ.
ಸತ್ಯಾಂಶ ಪರಿಶೀಲನೆ ವ್ಯವಸ್ಥೆ
ಪಾಯಿಂಟರ್ ಇನ್‌ಸ್ಟಿಟ್ಯೂಟ್ 2015ರಲ್ಲಿ ಅಂತರ್‌ರಾಷ್ಟ್ರೀಯ ಫ್ಯಾಕ್ಟ್ ಚೆಕಿಂಗ್ ನೆಟ್‌ವರ್ಕ್‌ನ್ನು ಆರಂಭಿಸಿತು; ಇದರಡಿ ಜುಲೈ 2024ರಲ್ಲಿ 170 ಸಂಸ್ಥೆಗಳಿದ್ದವು. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಸತ್ಯಾಂಶ ಪರಿಶೀಲನೆಗೆ ಸಂಸ್ಥೆಗಳಿಗೆ ಗುತ್ತಿಗೆ ನೀಡಲು ಐಎಫ್‌ಸಿಎನ್‌ನ ಪ್ರಮಾಣಪತ್ರ ಬಳಸಿಕೊಳ್ಳುತ್ತವೆ. ಡ್ಯೂಕ್ ವಿಶ್ವವಿದ್ಯಾನಿಲಯದ ರಿಪೋರ್ಟರ್ಸ್ ಲ್ಯಾಬ್ ದತ್ತಾಂಶಮೂಲದಲ್ಲಿ 439 ಸಂಸ್ಥೆಗಳು ಇವೆ. ಇನ್ನೆರಡು ಪ್ರಮುಖ ಜಾಲತಾಣಗಳೆಂದರೆ, ಏಜೆನ್ಸ್ ಫ್ರಾನ್ಸ್ ಪ್ರೆಸ್(ಎಎಫ್‌ಪಿ)ನ https://factcheck.afp.com ಹಾಗೂ ರಾಯ್ಟರ್‌ನ www.reuters.com/factcheck. ದೇಶದಲ್ಲಿರುವ ಪ್ರಮುಖ ಸತ್ಯಾಂಶ ಪರಿಶೀಲನೆ ವ್ಯವಸ್ಥೆಗಳೆಂದರೆ, factcheker.in, ಚುನಾವಣೆಗೆ ಸಂಬಂಧಿಸಿದ projectshakti.in; ಇದು ಹಲವು ಸತ್ಯಾಂಶ ಪರಿಶೀಲಕರು ಮತ್ತು ಸುದ್ದಿ ಪ್ರಕಟಿಸುವವರ ಸಮೂಹ. ಐಎಫ್‌ಸಿಎನ್‌ನ ಪ್ರಮಾಣಪತ್ರ ಪಡೆದ ಇತರ ಘಟಕಗಳೆಂದರೆ, Dfrac.org, Telugpost.com, Boomlive.in, TheQuint, Factcrescendo.com, Youturn.in(ತಮಿಳು), IndiaToday FactCheck, Factly.in, thip.media(The Healthy Indian Projectನ ಮಾಧ್ಯಮ ವಿಭಾಗ), Alt News, Vishvasnews.com, Newsmobile.in, Newschecker.in.ಆದರೆ, ಐಎಫ್‌ಸಿಎನ್‌ನ ‘ಸ್ಟೇಟ್ ಆಫ್ ಫ್ಯಾಕ್ಟ್ ಚೆಕರ್ಸ್ 2023’ ವರದಿ ಪ್ರಕಾರ, ಇಂಥ ಶೇ.68ರಷ್ಟು ಘಟಕಗಳಲ್ಲಿ 10 ಇಲ್ಲವೇ ಕಡಿಮೆ ಹಾಗೂ ಶೇ.6.6ರಲ್ಲಿ ಮಾತ್ರ 31 ಮತ್ತು ಅದಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದರು. ಅಂದರೆ, ಹೆಚ್ಚಿನವುಗಳಲ್ಲಿ ಸಿಬ್ಬಂದಿ ಕೊರತೆ ಇತ್ತು.
ಮಸ್ಕ್, ಝುಕರ್‌ಬರ್ಗ್ ಮತ್ತು ಟ್ರಂಪ್
2016ರ ಅಧ್ಯಕ್ಷೀಯ ಚುನಾವಣೆ ವೇಳೆ ಡೊನಾಲ್ಡ್ ಟ್ರಂಪ್ ಪರವಾದ ರಾಜಕೀಯ ಪೋಸ್ಟ್‌ಗಳನ್ನು ವರ್ಧಿಸುವ ಮೂಲಕ ಜನಾಭಿಪ್ರಾಯವನ್ನು ಟ್ರಂಪ್ ಪರವಾಗಿ ವಾಲಿಸಿದೆ ಎಂದು ಫೇಸ್‌ಬುಕ್ ತೀವ್ರ ಖಂಡನೆಗೆ ಗುರಿಯಾಗಿತ್ತು. ಮರ್ಯಾದೆ ಉಳಿಸಿಕೊಳ್ಳಲು ಜಾಗತಿಕ ಮಟ್ಟದಲ್ಲಿ ವಿಷಯ ಪರಿಣತರನ್ನು ನೇಮಿಸಿಕೊಂಡ ಫೇಸ್‌ಬುಕ್, ಹಾನಿಕರ ಸುದ್ದಿ/ವಿಷಯವನ್ನು ತೆಗೆದುಹಾಕುವ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿತು. ಜೊತೆಗೆ, ಅಂತರ್‌ರಾಷ್ಟ್ರೀಯ ಫ್ಯಾಕ್ಟ್ ಚೆಕಿಂಗ್ ನೆಟ್‌ವರ್ಕ್(ಐಎಫ್‌ಸಿಎನ್) ಮತ್ತು ಯುರೋಪಿಯನ್ ಫ್ಯಾಕ್ಟ್ ಚೆಕಿಂಗ್ ಸ್ಟ್ಯಾಂಡರ್ಡ್ ನೆಟ್‌ವರ್ಕ್(ಇಎಫ್‌ಸಿಎಸ್‌ಎನ್) ಜೊತೆಗೂಡಿ, ಸ್ವತಂತ್ರ ಸತ್ಯಾಂಶ ಪರಿಶೀಲನೆ ಕಾರ್ಯಕ್ರಮವನ್ನು ಆರಂಭಿಸಿತು; ಆನಂತರ ಐಎಫ್‌ಸಿಎನ್‌ನ ಅತಿ ದೊಡ್ಡ ದೇಣಿಗೆದಾರ ಆಯಿತು. ತನ್ನ ವೇದಿಕೆಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್ ಮತ್ತು ಥ್ರೆಡ್ಸ್‌ನಲ್ಲಿ ಸುಳ್ಳುಮಾಹಿತಿಯನ್ನು ಪತ್ತೆಹಚ್ಚಲು ಸತ್ಯಾಂಶ ಪರಿಶೀಲಕರ ಜೊತೆ ಕೆಲಸ ಮಾಡಿತು. ಅವರು ಸುದ್ದಿ-ವಿಷಯದ ವರ್ಗೀಕರಣ(ಸುಳ್ಳು, ತಿದ್ದಲಾಗಿದೆ, ಭಾಗಶಃ ಸುಳ್ಳು, ಸಂದರ್ಭ ಬದಲಿಸಲಾಗಿದೆ, ವ್ಯಂಗ್ಯ ಮತ್ತು ಸತ್ಯ) ಮಾಡುತ್ತಿದ್ದರು; ಈ ಸಂಬಂಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಗ್ರಾಹಕರಿಗೆ ಮೆಟಾ ಮಾಹಿತಿ ನೀಡುತ್ತಿತ್ತು. ಕೋವಿಡ್-19ರ ವೇಳೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೆಯಾಗುತ್ತಿದ್ದ ತಪ್ಪು ಮಾಹಿತಿಯನ್ನು ಸರಿಪಡಿಸುವಲ್ಲಿ ಸತ್ಯಾಂಶ ಪರೀಕ್ಷಕರು ಮುಖ್ಯ ಪಾತ್ರ ವಹಿಸಿದ್ದರು. ಇವರೊಟ್ಟಿಗೆ ಗಂಭೀರ ಉಲ್ಲಂಘನೆ ಪ್ರಕರಣಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ನೇಮಿಸಲಾಗಿತ್ತು. ಒಂದು ವೇಳೆ ಸುದ್ದಿ/ವಿಷಯ ಸುಳ್ಳು ಇಲ್ಲವೇ ತಿದ್ದಲ್ಪಟ್ಟಿದ್ದರೆ, ಮೆಟಾದ ಆ್ಯಪ್‌ಗಳಲ್ಲಿ ಹಂಚಿಕೆ ಕಡಿಮೆ ಆಗುತ್ತಿತ್ತು; ಸರಿ ಮಾಹಿತಿಗೆ ಹೆಚ್ಚುವರಿ ವಿಷಯ ಸೇರ್ಪಡೆ ಆಗುತ್ತಿತ್ತು. ಸುದ್ದಿ/ಮಾಹಿತಿ ಕಳಪೆಯಾಗಿದ್ದರೆ, ಅದು ಹಂಚಿಕೆ ಆಗುತ್ತಿರಲಿಲ್ಲ ಮತ್ತು ಪದೇಪದೇ ತಪ್ಪು ಮಾಡುವವರ ಪೋಸ್ಟ್‌ಗಳ ತಲುಪುವಿಕೆ ಕಡಿಮೆಗೊಳಿಸುವ ಮೂಲಕ ಅವರ ಆದಾಯ ಕಡಿತಗೊಳಿಸಲಾಯಿತು. ಕಾಲಕ್ರಮೇಣ ವೇದಿಕೆಯನ್ನು ತಪ್ಪು ಮಾಹಿತಿರಹಿತವಾಗಿಸಲು ಸುದ್ದಿ ಪ್ರಕಟಣೆಯನ್ನೇ ಕಡಿಮೆ ಮಾಡಿತು. ಜೋಯಲ್ ಕಪ್ಲಾನ್ ಮೆಟಾದ ಜಾಗತಿಕ ವ್ಯವಹಾರಗಳ ಮುಖ್ಯಸ್ಥರಾಗಿ ನೇಮಕಗೊಂಡ ಬಳಿಕ ಬದಲಾವಣೆ ಶುರುವಾಯಿತು. ಅವರ ಪ್ರಕಾರ, ‘ಚುನಾವಣೆ ಮತ್ತು ರಾಜಕೀಯ ಕುರಿತ ಸುದ್ದಿ ಹಾಗೂ ವಲಸೆ/ಲಿಂಗ ಅಸ್ಮಿತೆಯಂಥ ವಿಷಯಗಳಿಗೆ ಅವಕಾಶ ಇರಬೇಕು. ಗ್ರಾಹಕರು ತಮಗೇನು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಲು ಬಿಡಬೇಕು’. ಇದು ಝುಕರ್‌ಬರ್ಗ್ ಅವರ ಹೇಳಿಕೆಯ ಪ್ರತಿಧ್ವನಿ.
ಈ ಹಿಂದೆ ಟ್ರಂಪ್ ಮೆಟಾದ ಸಂಪ್ರದಾಯವಾದಿ ನಿಲುವನ್ನು ಖಂಡಿಸಿದ್ದರು. 2021ರ ಆರಂಭದಲ್ಲಿ ಮೆಟಾ ಹಾಗೂ ಟ್ರಂಪ್ ಮಧ್ಯೆ ತಿಕ್ಕಾಟ ಹೆಚ್ಚಿತು. ಜನವರಿ 6, 2021ರಂದು ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಹಿಲ್ಸ್ ಕಟ್ಟಡಕ್ಕೆ ನುಗ್ಗಿ, ದಾಂಧಲೆ ಎಬ್ಬಿಸಿದರು; 5 ಮಂದಿ ಮೃತಪಟ್ಟರು. ಮೆಟಾ ಆನಂತರ ತನ್ನ ವೇದಿಕೆಗಳಲ್ಲಿ ಟ್ರಂಪ್ ಅವರ ಖಾತೆಗಳನ್ನು ತೆಗೆದುಹಾಕಿತು. ಆದರೆ, 2024ರಲ್ಲಿ ಖಾತೆಗಳನ್ನು ಮರುಸ್ಥಾಪಿಸಿತು; ಕಳೆದ ನವೆಂಬರ್‌ನಲ್ಲಿ ರೆಸಾರ್ಟ್ ಒಂದರಲ್ಲಿ ಟ್ರಂಪ್ ಹಾಗೂ ಝುಕರ್‌ಬರ್ಗ್ ಭೇಟಿ ನಡೆದಿತ್ತು. ಟ್ರಂಪ್ ಅವರ ವಿಫಲ ಹತ್ಯೆ ಪ್ರಯತ್ನದ ಬಳಿಕ ಅವರನ್ನು ಝುಕರ್‌ಬರ್ಗ್ ಶ್ಲಾಘಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ನಡೆದ ಟ್ರಂಪ್ ಕಾರ್ಯಕ್ರಮಕ್ಕೆ 10 ಲಕ್ಷ ಡಾಲರ್ ದೇಣಿಗೆ ನೀಡಿದರು. ಟ್ರಂಪ್ ಅವರ ನಿಕಟವರ್ತಿ ಡಾನಾ ವೈಟ್ ಅವರನ್ನು ನಿರ್ದೇಶಕರ ಮಂಡಳಿಗೆ ನೇಮಕಗೊಳಿಸಿದರು. ಪ್ರಮಾಣವಚನ ಸ್ವೀಕರಿಸಿದ ಬಳಿಕ ಟ್ರಂಪ್, ಎಲ್ಲ ಬಗೆಯ ಸೆನ್ಸರ್‌ಶಿಪ್ ತೆಗೆದುಹಾಕಲಾಗುವುದು ಎಂದಿದ್ದಾರೆ. ಇದಕ್ಕೆ ಪೂರಕವಾಗಿ ಝುಕರ್‌ಬರ್ಗ್ ‘2024ರ ಚುನಾವಣೆ ಸಾಂಸ್ಕೃತಿಕ ಬದಲಾವಣೆಯ ಬಿಂದು. ಮೆಟಾದ ಎಲ್ಲ ವೇದಿಕೆಗಳಲ್ಲಿ ಮುಕ್ತ ಅಭಿವ್ಯಕ್ತಿಯನ್ನು ಮರುಸ್ಥಾಪಿಸಲಾಗುತ್ತದೆ’ ಎಂದು ಹೇಳಿದರು. ಇದರ ಅರ್ಥವೇನೆಂದರೆ, ಅವರು ಟ್ರಂಪ್ ಜೊತೆಗೆ ಕೂಡಾವಳಿಗೆ ಸಿದ್ಧವಾಗಿದ್ದರು.
ಆಡಳಿತ ವಿರೋಧಿ ಅಲೆಯಿಂದ 2024ರ ಚುನಾವಣೆಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಆಡಳಿತಾರೂಢ ಪಕ್ಷಗಳು ಸೋಲುತ್ತವೆ ಎಂದು ಝುಕರ್‌ಬರ್ಗ್ ಈ ಹಿಂದೆ ಹೇಳಿದ್ದರು. ಆದರೆ, ಎನ್‌ಡಿಎ ಗೆಲುವು ಸಾಧಿಸಿತು. ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಅಶ್ವಿನಿ ವೈಷ್ಣವ್, ‘‘80 ಕೋಟಿ ಜನರಿಗೆ ಪಡಿತರ, 220 ಕೋಟಿ ಮಂದಿಗೆ ಕೋವಿಡ್ ಲಸಿಕೆ ವಿತರಣೆ, ಕೋವಿಡ್ ಸಂದರ್ಭದಲ್ಲಿ ಹಲವು ದೇಶಗಳಿಗೆ ನೆರವು ನೀಡಿರುವುದು ಮೋದಿ ಅವರ 3ನೇ ವಿಜಯಕ್ಕೆ ಕಾರಣ’’ ಎಂದು ಹೇಳಿದ್ದರು. ತಮ್ಮ ಹೇಳಿಕೆಗೆ ಝುಕರ್‌ಬರ್ಗ್ ಕ್ಷಮೆಯಾಚಿಸಿದರು!
ಎಲಾನ್ ಮಸ್ಕ್ ಅಕ್ಟೋಬರ್ 2022ರಲ್ಲಿ ಟ್ವಿಟರ್ ಖರೀದಿಸಿದ ಬಳಿಕ ವೇದಿಕೆಯಲ್ಲಿ ಮಧ್ಯಸ್ಥಿಕೆದಾರರ ಪಾತ್ರವನ್ನು ದುರ್ಬಲಗೊಳಿಸಿ, ‘ಕಮ್ಯುನಿಟಿ ನೋಟ್ಸ್’ ಅಳವಡಿಕೆಗೆ ಮುಂದಾದರು. ಟ್ರಂಪ್ ಅವರಿಂದ ‘ಬೆಸ್ಟ್ ಬಡಿ’ ಎನ್ನಿಸಿಕೊಂಡಿರುವ ಮಸ್ಕ್, ಒಂದರ್ಥದಲ್ಲಿ ಸಂಪುಟದಲ್ಲಿ ಸೇರಿಕೊಂಡಿದ್ದಾರೆ. ಪ್ರಮಾಣವಚನ ಸಂದರ್ಭದಲ್ಲಿ ಸುಂದರ್ ಪಿಚೈ, ಮಸ್ಕ್ ಹಾಗೂ ಝುಕರ್‌ಬರ್ಗ್ ಇರುವುದನ್ನು ನೋಡಿದರೆ, ಅಮೆರಿಕ ಟೆಕ್ನೋಕ್ರಾಟ್‌ಗಳ ಹಿಡಿತಕ್ಕೆ ಸಿಲುಕುವುದು ಖಾತ್ರಿಯಾಗಿದೆ.
ಹಣವೇ ಮುಖ್ಯ
ಜಾಗತಿಕವಾಗಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಥ್ರೆಡ್ಸ್ ಮತ್ತು ಮೆಸೆಂಜರ್ ಬಳಕೆದಾರರ ಸಂಖ್ಯೆ 4 ಶತಕೋಟಿ. ಭಾರತದಲ್ಲಿ ಫೇಸ್‌ಬುಕ್(496 ದಶಲಕ್ಷ), ಇನ್‌ಸ್ಟಾಗ್ರಾಂ(223 ದಶಲಕ್ಷ) ಮತ್ತು ವಾಟ್ಸ್‌ಆ್ಯಪ್(493 ದಶಲಕ್ಷ) ಗ್ರಾಹಕರಿದ್ದಾರೆ. ಮೆಟಾದ ಪ್ರಮುಖ ಆದಾಯ ಮೂಲ-ಜಾಹೀರಾತು ಮಾರಾಟ. ಅದರ ಪ್ರತಿಸ್ಪರ್ಧಿಗಳೆಂದರೆ, ಆ್ಯಪಲ್, ಆಲ್ಫಾಬೆಟ್(ಗೂಗಲ್), ಯುಟ್ಯೂಬ್, ಟೆನ್ಸೆಂಟ್ ಮ್ಯೂಸಿಕ್ ಎಂಟರ್ಟೇನ್ಮೆಂಟ್ ಗ್ರೂಪ್ (ಟಿಎಂಇ), ಅಮೆಝಾನ್ ಮತ್ತು ಎಕ್ಸ್. ಮೆಟಾ ಜಾಹೀರಾತುಗಳನ್ನು ತನ್ನದೇ ವೇದಿಕೆಗಳಲ್ಲದೆ ಮೂರನೇ ವ್ಯಕ್ತಿ-ಕಂಪೆನಿಗಳ ಆ್ಯಪ್‌ಗಳು ಮತ್ತು ಜಾಲತಾಣಗಳಲ್ಲೂ ಪ್ರದರ್ಶಿಸಲ್ಪಡುತ್ತವೆ. 2024ರಲ್ಲಿ ಫೇಸ್‌ಬುಕ್ ಜಾಹೀರಾತು ಆದಾಯ 121.8 ಶತಕೋಟಿ ಡಾಲರ್. ಭಾರತದಲ್ಲಿ 504 ಕೋಟಿ ರೂ. 100 ಶತಕೋಟಿ ಡಾಲರ್ ಆದಾಯವಿರುವ ಇನ್ನೊಂದು ಬ್ರ್ಯಾಂಡ್ ಗೂಗಲ್. ಈ ಜಾಹೀರಾತುಗಳು ನಿರ್ದಿಷ್ಟ ಗುಣವೈಶಿಷ್ಟ್ಯ(ವಯಸ್ಸು, ಲಿಂಗ, ಸ್ಥಳ, ಆಸಕ್ತಿ ಮತ್ತು ವರ್ತನೆ)ಗಳನ್ನು ಗುರಿಯಾಗಿಸಿಕೊಂಡು, ಗ್ರಾಹಕರನ್ನು ತಲುಪಲು ಪ್ರಯತ್ನಿಸುತ್ತವೆ. ಗೂಗಲ್‌ನಲ್ಲಿ ಉತ್ಪನ್ನವೊಂದನ್ನು ಹುಡುಕಿದ ಕೆಲಕಾಲಾನಂತರ ಅಂಥದ್ದೇ ಹಲವು ಉತ್ಪನ್ನಗಳ ವಿವರಗಳು ನಿಮಗೆ ಕಾಣಬರುವುದು ಇದೇ ಕಾರಣದಿಂದ.
ಕಮ್ಯುನಿಟಿ ನೋಟ್ಸ್ ಎಂದರೆ
2021ರಲ್ಲಿ ಆರಂಭಗೊಂಡ, ಹೆಚ್ಚುವರಿ ಮಾಹಿತಿ ಅಗತ್ಯವಿರುವಲ್ಲಿ ಸೇರ್ಪಡೆಗೊಳಿಸುವ ‘ಬರ್ಡ್‌ವಾಚ್’ ವ್ಯವಸ್ಥೆಯು ರಶ್ಯ-ಉಕ್ರೇನ್ ಯುದ್ಧ(ಮಾರ್ಚ್ 2022)ದ ವೇಳೆ ಸುಳ್ಳು ಮಾಹಿತಿಗಳು ಸ್ಫೋಟಿಸುತ್ತಿದ್ದಾಗ, ಹೆಚ್ಚು ಪ್ರಾಮುಖ್ಯತೆ ಗಳಿಸಿತ್ತು. ಇದರ ಮುಂದುವರಿಕೆಯೇ ‘ಕಮ್ಯುನಿಟಿ ನೋಟ್ಸ್’. ಈ ವೇದಿಕೆಯಲ್ಲಿ ಗ್ರಾಹಕರೇ ಸತ್ಯಾಂಶ ಪರಿಶೀಲನೆ ನಡೆಸಲಿದ್ದು, ಪೋಸ್ಟ್‌ಗಳಿಗೆ ಟಿಪ್ಪಣಿ ಇಲ್ಲವೇ ಪ್ರತಿಕ್ರಿಯೆಗಳನ್ನು ಸೇರ್ಪಡೆಗೊಳಿಸುತ್ತಾರೆ. ಆದರೆ, ಈ ಪ್ರಕ್ರಿಯೆ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ, ಸುಳ್ಳು/ದ್ವೇಷದ ಪೋಸ್ಟ್‌ಗೆ ವಿಷಯ ಸೇರ್ಪಡೆ/ತಿದ್ದುಪಡಿಗೆ ಮುನ್ನವೇ ಅವು ವೈರಲ್ ಆಗುವ ಸಾಧ್ಯತೆ ಇದೆ. ಜೊತೆಗೆ, ‘ಎಕ್ಸ್’ನ ಈಗಿನ ಸ್ಥಿತಿಯನ್ನು ನೋಡಿದರೆ, ಗುಲಾಮಗಿರಿ ಮತ್ತು ನಾಝಿವಾದವನ್ನು ವೈಭವೀಕರಿಸುವ ಪೋಸ್ಟ್‌ಗಳು ಕೂಡ ಆನ್‌ಲೈನ್‌ನಲ್ಲಿ ಉಳಿದುಬಿಡುತ್ತವೆ.
ಐಎಫ್‌ಸಿಎನ್ ಝುುಕರ್‌ಬರ್ಗ್‌ಗೆ ಬರೆದ ಪತ್ರದಲ್ಲಿ ‘ಸತ್ಯಾಂಶ ಪರಿಶೀಲನೆ ಕಾರ್ಯಕ್ರಮದೊಟ್ಟಿಗೆ ಕಮ್ಯುನಿಟಿ ನೋಟ್ಸ್ ಕೂಡ ಇರಬಹುದು. ಅವೆರಡೂ ಪ್ರತ್ಯೇಕವಲ್ಲ; ವೃತ್ತಿಪರ ಪರಿಶೀಲಕರು ಕಮ್ಯುನಿಟಿ ನೋಟ್ಸ್‌ನ ಸಹಯೋಗದಲ್ಲಿ ನಿಷ್ಕೃಷ್ಟ ಮಾಹಿತಿ ನೀಡುವ ಹೊಸ ಮಾದರಿಯನ್ನು ಸೃಷ್ಟಿಸಬಹುದು’ ಎಂದು ಹೇಳಿದೆ. ಅಮೆರಿಕದಲ್ಲಿ 2025ರಲ್ಲಿ ಮೆಟಾದ ಸತ್ಯಾಂಶ ಪರಿಶೀಲನೆ ಕಾರ್ಯಕ್ರಮ ಅಂತ್ಯಗೊಳ್ಳಲಿದೆ. ಈ ಕಾರ್ಯಕ್ರಮ 100 ದೇಶಗಳಲ್ಲಿ ಚಾಲ್ತಿಯಲ್ಲಿದ್ದು, ಭಾರತ ಮತ್ತಿತರ ದೇಶಗಳಲ್ಲಿ ಸುಳ್ಳು-ತಿರುಚಿದ ಸುದ್ದಿ ವಿಷದಂತೆ ವ್ಯಾಪಿಸಿದೆ. ರಾಜಕೀಯ ಅಸ್ಥಿರತೆ, ಚುನಾವಣೆಯಲ್ಲಿ ಮಧ್ಯಪ್ರವೇಶ, ಸಾಮೂಹಿಕ ಹಿಂಸಾಚಾರ ಮತ್ತು ಹತ್ಯಾಕಾಂಡಕ್ಕೆ ಕಾರಣವಾಗಿದೆ. ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್(ಐಎಸ್‌ಬಿ) ಮತ್ತು ಸೈಬರ್ ಪೀಸ್ ಫೌಂಡೇಷನ್‌ನ ಇತ್ತೀಚಿನ ವರದಿ ಪ್ರಕಾರ, ಸುಳ್ಳು ಮಾಹಿತಿ ಪ್ರಕರಣಗಳಲ್ಲಿ ಶೇ.77.4ರಷ್ಟು ಸಾಮಾಜಿಕ ಮಾಧ್ಯಮಗಳಿಂದ ಬರುತ್ತದೆ. ದೇಶದಲ್ಲಿ ಸುಳ್ಳು ಸುದ್ದಿ ಹರಡುವಿಕೆಯಲ್ಲಿ ಎಕ್ಸ್ ಶೇ.61 ಹಾಗೂ ಫೇಸ್‌ಬುಕ್ ಶೇ.34 ಪಾಲು ಹೊಂದಿವೆ. ರಾಜಕೀಯ ಸುಳ್ಳು ಸುದ್ದಿಗಳಲ್ಲಿ ಫೇಸ್‌ಬುಕ್ ಪಾಲು ಶೇ.46. ಫೇಸ್‌ಬುಕ್ ಮುಸ್ಲಿಮ್ ವಿರೋಧಿ ವಿಷಯ ತೆಗೆಯುವಲ್ಲಿ ವಿಫಲವಾಗಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ಈ ಹಿಂದೆ ದೂರಿತ್ತು. ಮಣಿಪುರದಲ್ಲಿ ಇಂಥ ಸುಳ್ಳು ಸುದ್ದಿಗಳು ವ್ಯಾಪಕ ಹಿಂಸಾಚಾರಕ್ಕೆ ದಾರಿ ಮಾಡಿಕೊಟ್ಟಿದ್ದವು.
‘ಸತ್ಯಾಂಶ ಪರಿಶೀಲಕರಿಂದ ತಾರತಮ್ಯ ಆಗುತ್ತಿದೆ’ ಎಂದು ಮೆಟಾ ದೂರಿದೆ. ಆದರೆ, ನಿಜವಾದ ಕಾರಣವೇನೆಂದರೆ, ಸತ್ಯಾಂಶ ಪರಿಶೀಲನೆಯಿಂದ ಬಲಪಂಥೀಯ ಸುದ್ದಿ/ವಿಷಯಕ್ಕೆ ತಡೆಯುಂಟಾಗುತ್ತಿತ್ತು. ಕಮ್ಯುನಿಟಿ ನೋಟ್ಸ್ ಅಳವಡಿಸಿಕೊಂಡ ಬಳಿಕವೂ ಎಕ್ಸ್‌ನಲ್ಲಿ ತಪ್ಪು ಮಾಹಿತಿ/ಸುಳ್ಳು ಸುದ್ದಿ ವ್ಯಾಪಕವಾಗಿದೆ. ಇದಕ್ಕೆ ಬಳಕೆಯಲ್ಲಿರುವ ದೋಷಪೂರಿತ ಅಲ್ಗರಿದಂ ಕಾರಣ. ಸಾಮಾಜಿಕ ಮಾಧ್ಯಮ ವೇದಿಕೆಗಳು ಸಾರ್ವಜನಿಕ ಸಂವಾದದಲ್ಲಿ ವಹಿಸುವ ಮುಖ್ಯ ಪಾತ್ರವನ್ನು ಪರಿಗಣಿಸಿದರೆ, ಈ ಬೆಳವಣಿಗೆ ಎಫ್‌ಬಿ, ಇನ್‌ಸ್ಟಾಗ್ರಾಂ ಮತ್ತು ವಾಟ್ಸ್‌ಆ್ಯಪ್ ಬಳಕೆದಾರರ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. ಈ ವೇದಿಕೆಗಳು ತಮ್ಮ ಜವಾಬ್ದಾರಿಯನ್ನು ಬಳಕೆದಾರರಿಗೆ ವರ್ಗಾವಣೆ ಮಾಡುವುದರಿಂದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಬುಡಮೇಲು ಆಗುತ್ತವೆ. ಝುಕರ್‌ಬರ್ಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತ ವೋಲ್ಕರ್ ಟಿರ್ಕ್, ‘ಆನ್‌ಲೈನ್‌ನಲ್ಲಿ ದ್ವೇಷ ಭಾಷಣ ಮತ್ತು ಹಾನಿಕರ ವಿಷಯದ ನಿಯಂತ್ರಣ ಸೆನ್ಸಾರ್‌ಶಿಪ್ ಅಲ್ಲ. ಮುಕ್ತ ಅಭಿವ್ಯಕ್ತಿ ಮೂಲಭೂತ ಹಕ್ಕು ಆದರೂ ಅದು ನಿರಂಕುಶವಾದುದಲ್ಲ. ಅದನ್ನು ಇನ್ನಿತರ ಹಕ್ಕುಗಳೊಡನೆ ಸಮತೋಲಗೊಳಿಸಬೇಕು’ ಎಂದಿದ್ದಾರೆ. ಸರಕಾರಗಳು ಸಾರ್ವಜನಿಕರಿಗೆ ನಂಬಲರ್ಹ ಮಾಹಿತಿ ನೀಡದೆ ಇರುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಈ ದೈತ್ಯ ತಾಂತ್ರಿಕ ಸಂಸ್ಥೆಗಳ ಆರ್ಥಿಕ ಸಾಮರ್ಥ್ಯ, ಹರವು ಮತ್ತು ವ್ಯಾಪ್ತಿ ಬಹಳ ದೊಡ್ಡದಿದ್ದು, ಇವುಗಳ ಮುಖ್ಯಸ್ಥರ ರಾಜಕೀಯ ಒಲವುಗಳಿಗೆ ಅನುಗುಣವಾಗಿ ಮಾಹಿತಿ ಹಂಚುತ್ತವೆ. ಈ ಕಂಪೆನಿಗಳಿಗೆ ಶೇರುದಾರರು-ಸಿಇಒಗಳ ಆರ್ಥಿಕ ಹಿತಾಸಕ್ತಿ ಮುಖ್ಯವೇ ಹೊರತು ಜನಹಿತ ಇಲ್ಲವೇ ಪ್ರಜಾಪ್ರಭುತ್ವವಲ್ಲ.
ಬ್ರೆಝಿಲ್ ಮೆಟಾದ ನಿರ್ಧಾರವನ್ನು ಪ್ರಶ್ನಿಸಿದೆ. ಆದರೆ, ಇಷ್ಟು ಸಾಲುವುದಿಲ್ಲ. ಈ ವ್ಯವಸ್ಥೆ ಬಗ್ಗೆ ಭಾರತದ ಪ್ರತಿಕ್ರಿಯೆ ಏನಿದೆ? ಪ್ರಾಯಶಃ ಮೌನ. ಏಕೆಂದರೆ, ಸುಳ್ಳು-ತಿದ್ದಿದ ಸುದ್ದಿಯಿಂದ ಹೆಚ್ಚು ಲಾಭ ಆಗಿರುವುದು ಆಡಳಿತಾರೂಡ ಪಕ್ಷಕ್ಕೆ. ಮುಖ್ಯವಾಹಿನಿ ಮಾಧ್ಯಮ ಸೇರಿದಂತೆ ಇಲ್ಲಿ ಸುಳ್ಳು-ತಿರುಚಿದ ಸುದ್ದಿಗಳದ್ದೇ ಪಾರಮ್ಯ. ಈ ವ್ಯವಸ್ಥೆ ಅಮೆರಿಕದಿಂದ ಬೇರೆ ದೇಶಗಳಿಗೆ ವಿಸ್ತರಿಸುವುದನ್ನು ತಡೆಯಬೇಕಿದೆ. ಆದರೆ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಇದು ಸತ್ಯೋತ್ತರ ಯುಗವಲ್ಲ: ಬದಲಾಗಿ, ಸುಳ್ಳಿನ ಹಾಗೂ ಕಾರ್ಪೊರೇಟ್‌ಗಳ ದುರಾಸೆಯ ಯುಗ.