ಜನಾಂಗೀಯ ದ್ವೇಷಕ್ಕೆ ಪ್ರಧಾನಿ ಪ್ರಚೋದನೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಲೋಕಸಭಾ ಚುನಾವಣೆಯ ಸೋಲಿನ ಭಯದಿಂದ ಪ್ರಧಾನಿ ನರೇಂದ್ರ ಮೋದಿಯವರು ಹತಾಶರಾಗಿದ್ದಾರೆ. ಎರಡನೇ ಹಂತದ ಮತದಾನ ಸಮೀಪಿಸುತ್ತಿರುವಂತೆ ಅವರು ಆಡುತ್ತಿರುವ ಮಾತುಗಳು ಅವರ ಸ್ಥಾನದ ಘನತೆಗೆ ಶೋಭೆ ತರುವುದಿಲ್ಲ. ಈಗ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಬಾಬಾಸಾಹೇಬರ ಸಂವಿಧಾನ ಸರ್ವರಿಗೂ ಸಮಾನಾವಕಾಶ ನೀಡಿದೆ. ಆದರೆ ಮೋದಿಯವರು ಹೋದಲ್ಲಿ, ಬಂದಲ್ಲಿ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ವಿರುದ್ಧ ವಿಷ ಕಾರುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು ಹಾಗೂ ಹಿಂದುಳಿದವರ ಮೀಸಲಾತಿಯನ್ನು ಕಿತ್ತುಕೊಂಡು ಮುಸಲ್ಮಾನರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಅತ್ಯಂತ ಉದ್ರೇಕಕಾರಿಯಾಗಿ ಬಹಿರಂಗ ಸಭೆಗಳಲ್ಲಿ ಮಾತನಾಡುತ್ತಿದ್ದಾರೆ. ಇದು ಸಂವಿಧಾನಕ್ಕೆ ನಿಷ್ಠೆಯಿಂದ ಇರುವುದಾಗಿ ಸ್ವೀಕರಿಸಿದ ಪ್ರಮಾಣ ವಚನಕ್ಕೆ ದ್ರೋಹ ಬಗೆದಂತೆ. ರಾಜ ಪ್ರಭುತ್ವದಲ್ಲಿ ಕೂಡ ಎಲ್ಲ ಪ್ರಜೆಗಳನ್ನು ಸಮಾನವಾಗಿ ನೋಡುವುದು ರಾಜ ಧರ್ಮ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಂತೂ ಇದು ಸಂವಿಧಾನಾತ್ಮಕ ಹೊಣೆಗಾರಿಕೆ. ಆದರೆ ಮನುವಾದದಲ್ಲಿ ನಂಬಿಕೆ ಇರುವ ಮತ್ತು ಅದನ್ನು ಭಾರತದ ಮೇಲೆ ಹೇರಲು ಹೊರಟ ಸಂಘಟನೆಯಿಂದ ಬಂದ ಮೋದಿಯವರಿಗೆ ಸಂವಿಧಾನ ಎಂಬುದು ಕೇವಲ ಅಧಿಕಾರ ಸ್ವಾಧೀನ ಪಡಿಸಿಕೊಳ್ಳಲು ಬೇಕಾಗಿದೆ. ಅದರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಅದರ ವಿರುದ್ಧ ಸಂಚು ನಡೆಸುವ ದ್ರೋಹದ ದಾರಿ ಇವರದು.
‘‘ಮುಸಲ್ಮಾನರಿಗೆ ಮೀಸಲಾತಿ ನೀಡಿದರೆ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಕಾಂಗ್ರೆಸ್ ಸಂಚು ರೂಪಿಸಿದೆ. ನನ್ನ ಕೊನೆಯ ಉಸಿರು ಇರುವವರೆಗೆ ಅದಕ್ಕೆ ಅವಕಾಶ ನೀಡುವುದಿಲ್ಲ’’ ಎಂದು ಮೋದಿಯವರು ಪರಾಕ್ರಮದ ಮಾತನ್ನು ಆಡುತ್ತಾರೆ. ಮುಸಲ್ಮಾನರಿಗೆ ಧರ್ಮದ ಆಧಾರದಲ್ಲಿ ಯಾರೂ ಮೀಸಲಾತಿ ನೀಡಿಲ್ಲ. ಕರ್ನಾಟಕದ ಕಾಂಗ್ರೆಸ್ ಸರಕಾರ ನೀಡಿದ್ದು ಸಂವಿಧಾನ ಬದ್ಧ ಮೀಸಲಾತಿ. ಸಂವಿಧಾನದ 15 ಮತ್ತು 16 ಪರಿಚ್ಛೇದಗಳ ಪ್ರಕಾರ ಶೈಕ್ಷಣಿಕವಾಗಿ ಮತ್ತು ಸಾಮಾಜಿಕ ವಾಗಿ ಅವಕಾಶ ವಂಚಿತರಾದ ಎಲ್ಲರಿಗೂ ಮೀಸಲು ಸೌಕರ್ಯ ಪಡೆಯುವ ಹಕ್ಕಿದೆ. ಇಲ್ಲಿ ಯಾರದ್ದನ್ನೋ ಕಿತ್ತುಕೊಂಡು ಇನ್ನೊಬ್ಬರಿಗೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪ್ರಧಾನಮಂತ್ರಿ ಯಾದವರು ಸಂವಿಧಾನದ ವಿಧಿ, ವಿಧಾನಗಳನ್ನು ಓದಿ ತಿಳಿದುಕೊಂಡು ಮಾತನಾಡಬೇಕೇ ಹೊರತು ಸಂಘದ ಶಾಖೆಯಲ್ಲಿ ಹೇಳಿಕೊಟ್ಟ ಮಾತನ್ನಲ್ಲ.
ಬಾಬಾಸಾಹೇಬರ ಸಂವಿಧಾನವನ್ನು ಬದಲಿಸಲು ಒಳಗೊಳಗೆ ಮಸಲತ್ತು ನಡೆಸಿದ್ದರೂ ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಉಂಟಾದೀತೆಂದು ಸಂವಿಧಾನವನ್ನು ಬದಲಿಸುವ ಉದ್ದೇಶವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಇತರ ನಾಯಕರು ಪದೇ ಪದೇ ಹೇಳುತ್ತಾರೆ.ಹೇಳುವುದೊಂದು ಮಾಡುವುದೊಂದು ಅವರ ಚಾಳಿಯಾಗಿದೆ. ಸಂವಿಧಾನದ ವಿರುದ್ಧ ಸಂಘ ಪರಿವಾರ ನಡೆಸಿರುವ ಸಂಚು ನಿನ್ನೆ ಮೊನ್ನೆಯದಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು ಸಂವಿಧಾನ ರಚನೆ ಅಂತಿಮ ಸ್ವರೂಪ ಪಡೆದಾಗಲೇ ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಲ್ಕರ್ ‘‘ಸಂವಿಧಾನದಲ್ಲಿ ಭಾರತದ ಸಂಸ್ಕೃತಿ, ಆಚಾರ, ವಿಚಾರಗಳಿಲ್ಲ’’ ಎಂದು ಟೀಕಿಸಿದ್ದರು. ಪ್ರಜಾಪ್ರಭುತ್ವ ಹೊರಗಿನಿಂದ ಬಂದದ್ದು ಎಂದು ರಾಜ ಪ್ರಭುತ್ವವನ್ನು ಸಮರ್ಥಿಸಿದ್ದರು. ಅದೇ ಸಂಘಪರಿವಾರದ ಅಂಗವಾದ ಬಿಜೆಪಿ ಸಂವಿಧಾನದ ಮೂಲಕವೇ ಅಧಿಕಾರಕ್ಕೆ ಬಂದು ಸಂವಿಧಾನವನ್ನು ಮೂಲೆ ಗುಂಪು ಮಾಡಲು ಹುನ್ನಾರ ನಡೆಸುತ್ತಲೇ ಇದೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಸಂವಿಧಾನ ಪರಿಷ್ಕರಣೆಗೆ ಸಮಿತಿ ರಚನೆ ಮಾಡಲಾಗಿತ್ತು. ಆದರೆ ವಿರೋಧ ಬಂದ ನಂತರ ಕೈ ಬಿಡಲಾಯಿತು. ಆ ನಂತರವೂ ಮಾಜಿ ಸಂಸದ ಅನಂತ ಕುಮಾರ್ ಹೆಗಡೆಯಂತಹವರಿಂದ ‘‘ಸಂಸತ್ತಿನಲ್ಲಿ ನಿಚ್ಚಳ ಬಹುಮತ ಸಿಕ್ಕರೆ ಸಂವಿಧಾನ ಬದಲಾಯಿಸಲಾಗುತ್ತದೆ’’ ಎಂದು ಹೇಳಿಸಲಾಗುತ್ತದೆ. ಇದಕ್ಕೆ ಜನರ ಪ್ರತಿಕ್ರಿಯೆ ಆಧರಿಸಿ ಹೆಜ್ಜೆ ಇಡುತ್ತದೆ.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಮನುವಾದಿ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಹೊರಟಿರುವ ಇವರ ಕೈಯಲ್ಲಿ ಸಂವಿಧಾನ ಮಾತ್ರವಲ್ಲ; ಸಂಸದೀಯ ಜನತಂತ್ರ ವ್ಯವಸ್ಥೆಯೂ ಸುರಕ್ಷಿತವಾಗಿ ಇರುವುದಿಲ್ಲ ಎಂಬುದು ಕಳೆದ ಹತ್ತು ವರ್ಷಗಳ ಇವರ ಆಡಳಿತದಿಂದ ಸಾಬೀತಾಗಿದೆ. ಚುನಾವಣಾ ಆಯೋಗ, ಯೋಜನಾ ಆಯೋಗದಂತಹ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸಿದವರು ಯಾರೆಂದು ಎಲ್ಲರಿಗೂ ಗೊತ್ತಿದೆ. ಈಗ ಇವರ ಕಣ್ಣು ನ್ಯಾಯಾಂಗದ ಮೇಲೆ ಬಿದ್ದಿದೆ. ತಮ್ಮ ಸಂವಿಧಾನ ವಿರೋಧಿ ಕೃತ್ಯಗಳಿಗೆ ಅಡ್ಡಿಯಾಗಿರುವ ಸುಪ್ರೀಂ ಕೋರ್ಟನ್ನು ಕಂಡರೆ ಇವರಿಗೆ ಆಗುವುದಿಲ್ಲ. ಹೀಗೆ ಹೆಸರಿಗೆ ಸಂವಿಧಾನವನ್ನು ಇಟ್ಟುಕೊಂಡೇ ಅದನ್ನು ದುರ್ಬಲಗೊಳಿಸಿ ನಾಶ ಗೊಳಿಸುವ ಮಸಲತ್ತು ನಡೆದಿದೆ.
ಒಂದೇ ಧರ್ಮ, ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ಪಕ್ಷ, ಒಬ್ಬನೇ ನಾಯಕ ಎಂದು ಫರ್ಮಾನು ಹೊರಡಿಸುತ್ತಾ ಬಹುತ್ವ ಭಾರತವನ್ನು ನಿರ್ನಾಮ ಮಾಡಲು ಹೊರಟಿರುವ ಇವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ದೇಶದ ಒಕ್ಕೂಟ ವ್ಯವಸ್ಥೆಯ ಚಟ್ಟ ಕಟ್ಟಲು ಹೊರಟಿರುವ ಇವರು ರಾಜ್ಯಗಳಲ್ಲಿ ಪ್ರತಿಪಕ್ಷ ಗಳು ಅಧಿಕಾರಕ್ಕೆ ಬಂದರೆ ಜನ ಆಯ್ಕೆ ಮಾಡಿದ ಅಲ್ಲಿನ ಸರಕಾರಗಳನ್ನು ಆಪರೇಷನ್ ಕಮಲ ಹಾಗೂ ಸಿಬಿಐ ಮತ್ತು ಐಟಿ, ಈ.ಡಿ. ಮೂಲಕ ಉರುಳಿಸುತ್ತ ಬಂದವರು ಇವರು.
ಸಂವಿಧಾನವನ್ನು ಬದಲಾವಣೆ ಮಾಡುವ ಉದ್ದೇಶವಿಲ್ಲ ಎಂದು ಇವರೇನೋ ಹೇಳುತ್ತಾರೆ. ಆದರೆ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುವುದು, ಸಂವಿಧಾನದ ನಿಯಮಗಳನ್ನು ಅಡ್ಡ ಹಾದಿಯಲ್ಲಿ ನಿರಂತರವಾಗಿ ಉಲ್ಲಂಘನೆ ಮಾಡುವುದು, ಸಂವಿಧಾನದ ವಿಧಿ ವಿಧಾನಗಳನ್ನು ತಮಗೆ ಇಷ್ಟ ಬಂದಂತೆ ತಿರಿಚುವುದು, ಇವೆಲ್ಲ ಕೂಡ ಹಂತ ಹಂತವಾಗಿ ಸಂವಿಧಾನವನ್ನು ಸಮಾಧಿ ಮಾಡುವ ಕುತಂತ್ರದ ಮಾರ್ಗಗಳೆಂದರೆ ತಪ್ಪಿಲ್ಲ. ಇವೆಲ್ಲ ಸಂವಿಧಾನದ ಬದಲಾವಣೆಯ ಮುನ್ಸೂಚನೆಗಳು.
ಚುನಾವಣಾ ಫಲಿತಾಂಶವನ್ನೇ ಉಲ್ಟಾಪಲ್ಟಾ ಮಾಡುವ ಆಪರೇಷನ್ ಕಮಲದ ಕುತಂತ್ರಗಳು, ಶಾಸಕರನ್ನು ಬುಟ್ಟಿಗೆ ಹಾಕಿಕೊಳ್ಳಲು ಸಿಬಿಐ, ಈ.ಡಿ., ಐಟಿಯಂತಹ ತನಿಖಾ ಸಂಸ್ಥೆಗಳ ದುರುಪಯೋಗ, ಇವೆಲ್ಲದರ ಜೊತೆಗೆ ಈಗ ಬಿಜೆಪಿ ಗುಜರಾತಿನ ಸೂರತ್ ಮತ್ತು ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಹೊಸ ತಂತ್ರವನ್ನು ಪ್ರಯೋಗಿಸಿದೆ. ಸೂರತ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಬಾನಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬದಲಿ ಅಭ್ಯರ್ಥಿ ಸುರೇಶ್ ಪಡಸಾಲ ಅವರ ನಾಮಪತ್ರವೂ ತಿರಸ್ಕೃತಗೊಂಡಿದೆ. ಈ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳ್ಳಲು ಕಾರಣ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದವರು ಕೊನೆಯ ಗಳಿಗೆಯಲ್ಲಿ ಕೈ ಕೊಟ್ಟಿರುವುದು. ನಾಮಪತ್ರದಲ್ಲಿ ಸೂಚಕರಾಗಿ ಮಾಡಿದ ಸಹಿ ತಮ್ಮದಲ್ಲ ಎಂದು ಅವರು ಹಿಂದೆ ಸರಿದಿದ್ದಾರೆ. ಇತರ ಏಳು ಮಂದಿ ಪಕ್ಷೇತರ ಅಭ್ಯರ್ಥಿಗಳು ಮತ್ತು ಒಬ್ಬ ಬಿಎಸ್‌ಪಿ ಅಭ್ಯರ್ಥಿ ನಾಮಪತ್ರಗಳನ್ನು ವಾಪಸ್ ಪಡೆದುದರಿಂದ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದು ಚುನಾವಣಾ ಪ್ರಕ್ರಿಯೆ ವಿರುದ್ಧ ಬಿಜೆಪಿ ನಡೆಸಿರುವ ಬುಡಮೇಲು ಕೃತ್ಯ ಎಂದರೆ ತಪ್ಪಿಲ್ಲ.
ಹೀಗೆ ಹಂತ ಹಂತವಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುಗಿಸುವುದು ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳ ಹುನ್ನಾರ. ಪ್ರಧಾನಿ ಮೋದಿ ಇದರ ಸೂತ್ರಧಾರ. ಪ್ರಧಾನಿ ಸ್ಥಾನದಲ್ಲಿ ಇದ್ದುಕೊಂಡು ದೇಶದ ಪ್ರಜೆಗಳನ್ನು ಒಬ್ಬರ ಮೇಲೆ ಇನ್ನೂಬ್ಬರನ್ನು ಅವರು ಎತ್ತಿ ಕಟ್ಟುತ್ತಿದ್ದಾರೆ. ದ್ವೇಷದ ಕಿಚ್ಚು ಹೊತ್ತಿಸುತ್ತಿದ್ದಾರೆ. ಇವರನ್ನು ನಿಯಂತ್ರಿಸಬೇಕಾದ ಚುನಾವಣಾ ಆಯೋಗ ಹಲ್ಲು ಕಿತ್ತ ಹಾವಿನಂತಾಗಿದೆ. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಎದುರಾದ ಬಹುದೊಡ್ಡ ಗಂಡಾಂತರ. ಹಾಗಾಗಿ ಜನತೆ ತಮಗಿರುವ ಪರಮಾಧಿಕಾರ ಬಳಸಿಕೊಂಡು ಜಾತ್ಯತೀತ ಜನತಂತ್ರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕಾಗಿದೆ.