ಅಧಿಕಾರ ರಾಜಕಾರಣದಲ್ಲಿ ಕಾರ್ಯಕರ್ತರಿಗೆ ಕಿಮ್ಮತ್ತಿಲ್ಲ
Photo: twitter
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ಅಂದರೆ ಮತದಾರರು ಐದು ವರ್ಷಕ್ಕೊಮ್ಮೆ ತಮ್ಮ ಹಕ್ಕು ಚಲಾಯಿಸಿ ತಮ್ಮ ಪಾಡಿಗೆ ತಾವಿದ್ದು ಬಿಡುತ್ತಾರೆ.ಇರುವ ಎರಡು-ಮೂರು ಪಕ್ಷಗಳಲ್ಲಿ ಒಂದನ್ನು ಆರಿಸುವುದು ಅನಿವಾರ್ಯ ಕರ್ಮ ಆಗಿರುವುದರಿಂದ ಆರಿಸಿ ಬಂದು ಅಧಿಕಾರ ನೀಡುತ್ತಾರೆ. ಅಧಿಕಾರಕ್ಕೆ ಬಂದವರು ತಮ್ಮ ಪಕ್ಷ, ಕಾರ್ಯಕರ್ತರನ್ನು ಮತ್ತು ಮತದಾರರನ್ನು ಮರೆತು ಬಿಡುತ್ತಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲರ ಚಾಳಿಯೂ ಒಂದೇ. ಗೆಲ್ಲುವವರೆಗೆ ಕಾರ್ಯಕರ್ತರು, ಸಂಘಟನೆ ಬೇಕು. ಗೆದ್ದ ನಂತರ ಅಧಿಕಾರಕ್ಕೆ ಬಂದವರ ಸುತ್ತ ಠಳಾಯಿಸುವವರೇ ಬೇರೆ. ಪಕ್ಷಾಂತರ ಮಾಡಿ ಬಂದವರಿಗೆ ಸಿಗುವ ಮರ್ಯಾದೆ ಮತ್ತು ಅವಕಾಶ ಪಕ್ಷಕ್ಕಾಗಿ ಮಣ್ಣು ಹೊತ್ತ ಕಾರ್ಯಕರ್ತರಿಗೆ ಸಿಗುವುದಿಲ್ಲ.
ಹೊಸ ರಕ್ತಕ್ಕೆ ಅವಕಾಶ ನೀಡಬೇಕು, ಯುವಕರನ್ನು ನಾಯಕತ್ವಕ್ಕೆ ತರಬೇಕು. ಶೇ.50ರಷ್ಟಿರುವ ಹೆಣ್ಣು ಮಕ್ಕಳು ಅಧಿಕಾರದಲ್ಲಿ ಪಾಲುದಾರರಾಗಬೇಕು ಎಂಬುದನ್ನು ಪಕ್ಷಭೇದವಿಲ್ಲದೆ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ ಅಧಿಕಾರ ಹಂಚಿಕೆ ಪ್ರಶ್ನೆ ಬಂದಾಗ ಕಾರ್ಯಕರ್ತರು ಅವರ ಕಣ್ಣಿಗೆ ಕಾಣುವುದಿಲ್ಲ. ಹೊಸ ಯುವಕರಿಗೆ ಅವಕಾಶವೆಂದರೆ ತಮ್ಮ ಮಕ್ಕಳು ಮತ್ತು ಅಳಿಯಂದಿರಿಗೆ, ಮಹಿಳೆಯರಿಗೆ ಪ್ರಾಧಾನ್ಯತೆ ನೀಡಬೇಕೆಂದಾಗ ತಮ್ಮ ಹೆಂಡಂದಿರಿಗೆ ( ಹೆಂಡತಿ ಬದಲು ಹೆಂಡಂದಿರು ಎಂಬ ಪದ ಯಾಕೆ ಬಳಸಿದ್ದೇನೆಂದರೆ ಕೆಲವು ಅಲ್ಲ ಬಹುತೇಕ ರಾಜಕಾರಣಿಗಳಿಗೆ ಒಬ್ಬಳೆ ಹೆಂಡತಿ ಇರುವುದಿಲ್ಲ. ಎಲ್ಲರಿಗೂ ಸಮಾನ ಅವಕಾಶ ನೀಡಬೇಕಲ್ಲವೇ) ಸ್ನೇಹಿತೆಯರಿಗೆ, ಅಣ್ಣ ತಮ್ಮಂದಿರ ಪತ್ನಿಯರಿಗೆ ಮೊದಲು ಅವಕಾಶ ನೀಡುತ್ತಾರೆ. ಚುನಾವಣೆ ಬಂದಾಗ ಒದರಾಡಿ, ಓಡಾಡಿ ಸುಸ್ತಾದ ಕಾರ್ಯಕರ್ತರು ಮತ್ತೆ ಮೂಲೆಗುಂಪಾಗುತ್ತಾರೆ.
ಅಧಿಕಾರವಿಲ್ಲದಾಗ ಕಾರ್ಯಕರ್ತರು ಮತ್ತು ಮತದಾರರಿಗೆ ಮಣೆ ಹಾಕುವ ರಾಜಕಾರಣಿಗಳು ಅಧಿಕಾರಕ್ಕೆ ಬಂದ ನಂತರ ತಮ್ಮ ಸುತ್ತಲೂ ಒಂದು ಕೋಟೆ ಕಟ್ಟಿಕೊಳ್ಳುತ್ತಾರೆ. ಈ ಕೋಟೆಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಪ್ರವೇಶ ಇರುವುದಿಲ್ಲ. ಬಿಜೆಪಿಯಂತಹ ಕಾರ್ಯಕರ್ತರ ಬಲಿಷ್ಠ ಪಡೆಯನ್ನು ಹೊಂದಿರುವ ಪಕ್ಷದಲ್ಲೂ ನಾಯಕರ ಮಕ್ಕಳು, ಮಡದಿಯರು, ಬೇರೆ ಪಕ್ಷದಿಂದ ಬೇಲಿ ಜಿಗಿದು ಬಂದವರಿಗೆ ಮೊದಲ ಆದ್ಯತೆ ಇರುವುದು ಗುಟ್ಟಿನ ಸಂಗತಿಯಲ್ಲ. ಇನ್ನು ಜಾತ್ಯತೀತ ಎಂದು ಹೆಸರಿಟ್ಟುಕೊಂಡು ಜಾತಿ ರಾಜಕಾರಣ ಮಾಡುವ ಪಕ್ಷದಲ್ಲಂತೂ ಅಪ್ಪ, ಮಕ್ಕಳು, ಮಕ್ಕಳ ಪತ್ನಿಯರು, ಮೊಮ್ಮಕ್ಕಳು ಹೀಗೆ ಅವರದೇ ಸಾಮ್ರಾಜ್ಯ.ಇಲ್ಲೂ ಕಾರ್ಯಕರ್ತರು ಬೀದಿಪಾಲು.
ಇನ್ನು ಕಾಂಗ್ರೆಸ್ ಪಕ್ಷ.ಕರ್ನಾಟಕದಲ್ಲಿ ಅಪೂರ್ವ ವಿಜಯ ಸಾಧಿಸಿ 8 ತಿಂಗಳಾಗುತ್ತಾ ಬಂತು. ಬೇರೆ ಪಕ್ಷಗಳಿಂದ ಬರುವ ಮುಖಂಡರನ್ನು ಬರಮಾಡಿಕೊಳ್ಳುವ ಉತ್ಸಾಹ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಅವಕಾಶ ನೀಡುವ ಕುರಿತು ತೋರಿಸುತ್ತಿಲ್ಲ.ಮುಂದಿನ ವರ್ಷ ಲೋಕಸಭಾ ಚುನಾವಣೆ. ಅದನ್ನು ಎದುರಿಸಲು ತಳಮಟ್ಟದಲ್ಲಿ ಸಂಘಟನಾ ಜಾಲ ಬಲಪಡಿಸುವ ಆಸಕ್ತಿ ಕಾಣುತ್ತಿಲ್ಲ. ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳದಂತೆ ವಹಿಸಬೇಕಾದ ಎಚ್ಚರವನ್ನು ವಹಿಸುತ್ತಿಲ್ಲ.
ಕರ್ನಾಟಕದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಅಪೂರ್ವ ಅವಕಾಶ ನೀಡಿದ್ದರು. ಬೇರೆ ಪಕ್ಷಗಳ ಶಾಸಕರನ್ನು ಸೇರಿಸಿಕೊಳ್ಳದಿರಲೆಂದು 136 ಸ್ಥಾನ ನೀಡಿ ನಿಚ್ಚಳ ಬಹುಮತವನ್ನು ಕೊಟ್ಟಿದ್ದರು. ಇದರ ಜೊತೆಗೆ ಮುಖ್ಯ ವಿರೋಧ ಪಕ್ಷವಾದ ಬಿಜೆಪಿ ತನ್ನ ಅಧ್ಯಕ್ಷನನ್ನು ಮತ್ತು ಶಾಸಕಾಂಗ ನಾಯಕನನ್ನು ನೇಮಕ ಮಾಡಲು ಆರೇಳು ತಿಂಗಳು ಪರದಾಡಿ ಕೊನೆಗೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷನನ್ನಾಗಿ ಮತ್ತು ಅಶೋಕ್ ಅವರನ್ನು ಶಾಸಕಾಂಗ ನಾಯಕನನ್ನಾಗಿ ಮಾಡಿದರೂ ಪಕ್ಷದೊಳಗಿನ ಒಳಜಗಳ ನಿಂತಿಲ್ಲ. ಇದನ್ನು ಬಳಸಿಕೊಂಡು ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಬೇಕಾದ ಕಾಂಗ್ರೆಸ್ ಯಾಕೋ ನಿರೀಕ್ಷಿಸಿದಷ್ಟು ಕ್ರಿಯಾಶೀಲವಾಗಿಲ್ಲ.
ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಯಾವುದೋ ಆಸೆ, ಆಮಿಷಗಳಿಗೆ ಆ ಪಕ್ಷಕ್ಕೆ ಹೋಗದೇ ಕಾಂಗ್ರೆಸ್ ಪಕ್ಷದಲ್ಲೇ ಉಳಿದು ಗೆಲುವು ತಂದುಕೊಟ್ಟ ನೂರಾರು ಕಾರ್ಯಕರ್ತರು, ಎರಡನೇ ಹಂತದ ನಾಯಕರು ಕಾಂಗ್ರೆಸ್ನಲ್ಲಿ ಇದ್ದಾರೆ. ಈಗ ತಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ, ಯಾವುದಾದರೂ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಸಹಜವಾಗಿರುತ್ತದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು 8 ತಿಂಗಳಾದರೂ ಕಾರ್ಯಕರ್ತರ ಯಾವ ಆಸೆ, ನಿರೀಕ್ಷೆಗಳೂ ಈಡೇರುತ್ತಿಲ್ಲ. ಈಡೇರುವ ಸೂಚನೆಗಳೂ ಕಾಣುತ್ತಿಲ್ಲ. ಈಗ ಮಂತ್ರಿ ಸ್ಥಾನ ಸಿಗದ ಶಾಸಕರಿಗೆ ನಿಗಮ, ಮಂಡಳಿಗಳ ಅಧ್ಯಕ್ಷರನ್ನಾಗಿ ಸಮಾಧಾನಪಡಿಸುವ ಮಾತುಗಳು ಕೇಳಿ ಬರುತ್ತಿವೆ. ಅಂದರೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಸದ್ಯಕ್ಕಂತೂ ಅವಕಾಶವಿದ್ದಂತೆ ಕಾಣುತ್ತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೊದಲ ಬಾರಿ 2013ರಲ್ಲಿ ಅಧಿಕಾರ ವಹಿಸಿಕೊಂಡಾಗ ಇದ್ದ ಪರಮಾಧಿಕಾರ ಇದ್ದಂತೆ ಕಾಣುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಈಗ ಎರಡು ಶಕ್ತಿ ಕೇಂದ್ರಗಳಿವೆ. ಹೀಗಾಗಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಪರದಾಡುತ್ತಿದ್ದಾರೆ. ಚುನಾವಣೆಯ ಗೆಲುವಿನಲ್ಲಿ ಮಾಸ್ ಲೀಡರ್ ಆದ ಸಿದ್ದರಾಮಯ್ಯನವರ ಕೊಡುಗೆ ಮಹತ್ವದ್ದಾಗಿದೆ. ಹಾಗೆಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಕಡೆಗಣಿಸುವಂತಿಲ್ಲ. ಪಕ್ಷಕ್ಕೆ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಗೆಲುವಿಗೆ ನೆರವಾದವರು ಶಿವಕುಮಾರ್. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಂದ ಎಷ್ಟೇ ಒತ್ತಡ ಬಂದರೂ, ಜಾರಿ ನಿರ್ದೇಶನಾಲಯ ಮತ್ತು ಐಟಿ ದಾಳಿ ನಡೆದರೂ ಡಿಕೆಶಿ ಪಕ್ಷ ನಿಷ್ಠ ಬಿಡಲಿಲ್ಲ. ಸುಮ್ಮನೆ ಬಿಜೆಪಿ ಸೇರಿ ಬಿಟ್ಟಿದ್ದರೆ ಅವರಿಗೆ ಜೈಲಿಗೆ ಹೋಗುವ ಪ್ರಸಂಗ ಬರುತ್ತಿರಲಿಲ್ಲ.ಆದರೆ ಚುನಾವಣೆ ನಂತರ ಯಾಕೋ ಹೊಂದಾಣಿಕೆ ಕಾಣುತ್ತಿಲ್ಲ. ಯಾರು ಏನೇ ಹೇಳಲಿ ದೇವರಾಜ ಅರಸು, ಬಂಗಾರಪ್ಪ ನವರಂತೆ ಜನನಾಯಕನೆಂದು ನಾಡಿನುದ್ದಕ್ಕೂ ಅಪಾರ ಜನ ಬೆಂಬಲ ಪಡೆದವರು ಸಿದ್ದರಾಮಯ್ಯ.ಆದರೆ ಅವರಲ್ಲಿ ಈಗ ಮೊದಲಿನ ಉತ್ಸಾಹ ಕಾಣುತ್ತಿಲ್ಲ.
ಫ್ಯಾಶಿಸ್ಟ್, ಕೋಮುವಾದಿ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಾಗ ಸಹಜವಾಗಿ ಸೌಹಾರ್ದ ಬಯಸುವ ಎಲ್ಲ ಉದಾರವಾದಿ ಮನಸ್ಸುಗಳಿಗೆ ಖುಷಿಯಾಗಿದೆ. ಆದರೆ ಅಧಿಕಾರಕ್ಕೆ ಬಂತರ ಕಾಂಗ್ರೆಸ್ ಆಡಳಿತದ ಕೆಲ ಲೋಪಗಳು ಸಾಮಾನ್ಯವಾದುದಲ್ಲ. ಉದಾಹರಣೆಗೆ ಫೆಲೆಸ್ತೀನ್ನ ಅಮಾಯಕ ನಾಗರಿಕರ ಮೇಲೆ ಇಸ್ರೇಲ್ ನಡೆಸುತ್ತಿರುವ ಬಾಂಬ್ ದಾಳಿಯನ್ನು ಖಂಡಿಸಿ ಪ್ರತಿಭಟನಾ ಸಭೆ, ಕವಿಗೋಷ್ಠಿ ನಡೆಸಲು ಪೊಲೀಸರು ಅನುಮತಿ ನೀಡಲಿಲ್ಲ. ನೆಹರೂ ಕಾಲದಿಂದಲೂ ನಮ್ಮ ದೇಶದ ವಿದೇಶಾಂಗ ನೀತಿ ಫೆಲೆಸ್ತೀನ್ ಜನರ ಪರವಾಗಿದೆ. ಮೋದಿಯವರ ಪಕ್ಷ ಇಸ್ರೇಲ್ ಪರವಾಗಿದ್ದರೂ ಕೇಂದ್ರ ಸರಕಾರ ಮಾತ್ರ ಫೆಲೆಸ್ತೀನ್ ಪರ ನಿಲುವು ಹೊಂದಿದೆ. ಕಾಂಗ್ರೆಸ್ ಪಕ್ಷದ ನೀತಿ ಕೂಡ ಜನಾಂಗವಾದಿ, ದಾಳಿಕೋರ ಇಸ್ರೇಲ್ ವಿರೋಧವಾಗಿದೆ. ಹೀಗಿರುವಾಗ ಫೆಲೆಸ್ತೀನ್ ಪರ ಸಭೆಗೆ ಪೊಲೀಸರು ಯಾಕೆ ಅನುಮತಿ ನೀಡಲಿಲ್ಲ? ಕೊನೆಗೆ ಅನುಮತಿ ಕೊಡಿಸಲು ಸ್ವತಃ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಬರಬೇಕಾಯಿತು.ಇದರ ಅರ್ಥವೇನು? ಇಂಥ ಮಹತ್ವದ ವಿಷಯ ಕೂಡ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿಲ್ಲ. ಪ್ರಗತಿಪರ ಸಂಘಟನೆಗಳು ಗಮನಕ್ಕೆ ತಂದ ನಂತರ ಅನುಮತಿ ನೀಡಲು ಆದೇಶ ನೀಡಿದರು. ಇನ್ನು ಮುಂದೆ ಹೀಗಾಗಬಾರದು.
ಕಾಂಗ್ರೆಸ್ ಸರಕಾರದ ಮೇಲೆ ಜನತೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಾರ್ಯಕರ್ತರು ಸಹಜವಾಗಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಮಂತ್ರಿ ಪದವಿ ಸಿಗದ ಶಾಸಕರನ್ನು ನಿಗಮ, ಮಂಡಲಿಗೆ ನೇಮಕ ಮಾಡುವ ಜೊತೆಗೆ ಪಕ್ಷಕ್ಕಾಗಿ ದುಡಿದ ಸಾಮಾನ್ಯ ಕಾರ್ಯಕರ್ತರಿಗೆ, ಎರಡನೇ ಹಂತದ ನಾಯಕರಿಗೆ ಕೂಡ ಅವಕಾಶ ನೀಡಲಿ. ಅಧಿಕಾರಕ್ಕೆ ಬಂದಾಗ ಸ್ವಾರ್ಥ ಸಾಧನೆಗಾಗಿ ಜಾತಿಯ, ಊರಿನ ಹೆಸರು ಹೇಳಿಕೊಂಡು ಬರುವ, ಮಠಾಧೀಶರ ಮೂಲಕ ಒತ್ತಡ ತರುವವರಿಗೆ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಅವಕಾಶ ನೀಡಬಾರದು. ಅಧಿಕಾರಶಾಹಿಯಲ್ಲಿ ಇರುವ ಕೋಮುವಾದಿ ಮತ್ತು ಜಾತಿವಾದಿ ವ್ಯಕ್ತಿಗಳು ದಾರಿ ತಪ್ಪಿಸುವ ಅಪಾಯದ ಬಗ್ಗೆ ನಿಗಾ ವಹಿಸಬೇಕು.
ಮುಂದಿನ ವರ್ಷ ಲೋಕಸಭಾ ಚುನಾವಣೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಡ ವಿಧಾನಸಭಾ ಚುನಾವಣೆಯಲ್ಲಿ ಜಯಶಾಲಿಯಾದ ಬಿಜೆಪಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಛಲ ತೊಟ್ಟಿದೆ. ಸಂಘಪರಿವಾರದ ಸಂಘಟನಾ ಯಂತ್ರ ಈ ಗೆಲುವಿಗಾಗಿ ಹಗಲಿರುಳು ಕ್ರಿಯಾಶೀಲವಾಗಿದೆ. ಒಂದಲ್ಲ, ಎರಡಲ್ಲ ನೂರಾರು ದಿಕ್ಕುಗಳಲ್ಲಿ ಕಾರ್ಯೋನ್ಮುಖವಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮಮಂದಿರದ ನೆಲ ಮಹಡಿ ಕಟ್ಟಡದಲ್ಲಿ ಜನವರಿ 22 ರಂದು ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಅಂಗವಾಗಿ ದೇಶವ್ಯಾಪಿ ಅಕ್ಷತಾ ಕಳಶ ವಿತರಣಾ ಅಭಿಯಾನ ನಡೆಸಲಿದೆ. ಮನೆ, ಮನೆಗೆ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ತೆರಳಿ ಪೂಜಿಸಿದ ಮಂತ್ರಾಕ್ಷತೆ ಮತ್ತು ಶ್ರೀ ರಾಮನ ಭಾವಚಿತ್ರ ವಿತರಿಸಿಲಿದ್ದಾರೆ. ಜನವರಿ 22ರಂದು ಪ್ರತಿ ಮನೆಯ ಬಾಗಿಲ ಮುಂದೆ 5 ದೀಪಗಳನ್ನು ಹಚ್ಚಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ. ಇದೊಂದೇ ಅಲ್ಲ, ಚಕ್ರವರ್ತಿ ಸೂಲಿಬೆಲೆ ನಮೋ ಬ್ರಿಗೇಡ್ ನಿಂದ ‘ಇನ್ನು ಮಲಗಿದರೆ ಏಳುವಾಗ ಭಾರತ ಇರುವುದಿಲ್ಲ’ ಎಂಬ ಅಭಿಯಾನ ಆರಂಭಿಸಿ ಊರೂರು ಸುತ್ತಿ ಸಭೆಗಳನ್ನು ನಡೆಸುತ್ತಿದ್ದಾನೆ. ಹೀಗಾಗಿ ಎಷ್ಟೇ ಆಂತರಿಕ ಜಗಳಗಳಿದ್ದರೂ ಆರೆಸ್ಸೆಸ್ ಅವುಗಳನ್ನು ನಿವಾರಿಸಿ ಗೆಲುವು ಸಾಧಿಸಲು ಪಣ ತೊಟ್ಟಿದೆ. ಕರ್ನಾಟಕದಲ್ಲಿ ದೇವೇಗೌಡರ ಪಕ್ಷ ಈಗ ಅವರ ಜೊತೆ ಸೇರಿದೆ.ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್ ಎಚ್ಚೆತ್ತುಕೊಳ್ಳದಿದ್ದರೆ ಕರ್ನಾಟಕದಲ್ಲಿ ಒಂದೆರಡು ಲೋಕಸಭಾ ಸ್ಥಾನಗಳನ್ನು ಗೆಲ್ಲುವದು ಕಷ್ಟ. ಅಧಿಕಾರ ಹಂಚುವಾಗ ಕಾರ್ಯಕರ್ತರನ್ನು ಕಡೆಗಣಿಸಬಾರದು.
ರಾಜಕೀಯ ನಾಯಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡಿಡುವುದು ಸರಿ. ಆದರೆ ತಮ್ಮ ಪ್ರಭಾವ ಬಳಸಿ ತಮ್ಮ ಮಕ್ಕಳನ್ನು ತಮ್ಮ ರಾಜಕೀಯ ಉತ್ತರಾಧಿಕಾರಿಗಳನ್ನಾಗಿ ಮಾಡುವುದು ಎಷ್ಟು ಸರಿ? ಪ್ರಜಾಪ್ರಭುತ್ವದಲ್ಲಿ ವಂಶಾಡಳಿತಕ್ಕೆ ಅವಕಾಶ ಇರಬಾರದು. ನಾಯಕರ ಮಕ್ಕಳು ನಾಯಕರಾಗಲು, ಮಂತ್ರಿಗಳ ಮಕ್ಕಳು ಮಂತ್ರಿಗಳಾಗಲು ಹೊರಟರೆ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಸಿಗುವುದು ಯಾವಾಗ? ಕಾಂಗ್ರೆಸ್ ವಂಶಾಡಳಿತ ಪಕ್ಷವನ್ನು ಟೀಕಿಸುವ ಬಿಜೆಪಿಗೆ ರಾಜ್ಯಾಧ್ಯಕ್ಷತೆ ಹುದ್ದೆಗೆ ಯಡಿಯೂರಪ್ಪನವರ ಮಗನೇ ಬೇಕಾಯಿತು. ಇನ್ನು ಜೆಡಿಎಸ್ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ನನ್ನು ದಿಲ್ಲಿಗೆ ಕರೆದುಕೊಂಡು ಹೋಗಿ ಅಮಿತ್ ಶಾ ಜೊತೆ ಮಾತಾಡಿ ಹೊಂದಾಣಿಕೆ ಮಾಡಿಕೊಂಡರು. ಇದೆಲ್ಲಾ ಪಕ್ಷದ ಅಧ್ಯಕ್ಷ ಇಬ್ರಾಹೀಂಗೆ ಗೊತ್ತೇ ಇರಲಿಲ್ಲ. ಹೀಗಾದರೆ ಹೇಗೆ? ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷ ಕಾರ್ಯಕರ್ತರನ್ನು ಕಡೆಗಣಿಸಿದರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಮರೆಯಬಾರದು.