ಅಂದಿನ, ಇಂದಿನ ಛೋಟಾ ಮುಂಬೈ
Photo: PTI
ಒಂದು ಕಾಲದಲ್ಲಿ ಛೋಟಾ ಬಾಂಬೆ ಎಂದು ಹೆಸರಾಗಿದ್ದ ಹಾಗೂ ಉತ್ತರ ಕರ್ನಾಟಕದ ರಾಜಧಾನಿ ಎಂದು ಪ್ರತೀತಿ ಪಡೆದ ಹುಬ್ಬಳ್ಳಿ ಕಳೆದ ಶತಮಾನದ ನಲವತ್ತರ ದಶಕದಲ್ಲಿ ಸ್ವಾತಂತ್ರ್ಯಾ ಹೋರಾಟದ ಕೇಂದ್ರವಾಗಿತ್ತು. ಸ್ವಾತಂತ್ರ್ಯಾ ನಂತರ ಕರ್ನಾಟಕ ಏಕೀಕರಣಕ್ಕಾಗಿ ಬಹುದೊಡ್ಡ ಆಂದೋಲನ ನಡೆದದ್ದು ಹುಬ್ಬಳ್ಳಿ ಭಾಗದಲ್ಲಿ. ಆಗ ಮೈಸೂರು ಪ್ರಾಂತ್ಯ ಮಹಾರಾಜರ ಆಡಳಿತಕ್ಕೆ ಒಳಪಟ್ಟಿತ್ತು. ದಾವಣಗೆರೆಯಿಂದ ಈಚೆಗೆ ತುಂಗಭದ್ರಾ ನದಿ ದಾಟಿದರೆ ಅವಿಭಜಿತ ಧಾರವಾಡ ಜಿಲ್ಲೆಯ ಪ್ರವೇಶ. ಈ ಭಾಗ ಅಂದರೆ ಧಾರವಾಡ, ಬೆಳಗಾವಿ, ಬಿಜಾಪುರ, ಕಾರವಾರ ಜಿಲ್ಲೆಗಳು ಮುಂಬೈ ಪ್ರಾಂತ್ಯದಲ್ಲಿದ್ದವು. ಕಲಬುರಗಿ, ರಾಯಚೂರು, ಬೀದರ, ಕೊಪ್ಪಳ ಜಿಲ್ಲೆಗಳು ಹೈದರಾಬಾದ್ ಪ್ರಾಂತ್ಯಕ್ಕೆ ಸೇರಿದ್ದವು. ಬಳ್ಳಾರಿ ಮತ್ತು ಮಂಗಳೂರು ಜಿಲ್ಲೆಗಳು ಮದ್ರಾಸ್ ಪ್ರಾಂತ್ಯದಲ್ಲಿ ಇದ್ದವು. ಇವುಗಳಲ್ಲಿ ಬಹುತೇಕ ಎಲ್ಲವೂ ಕನ್ನಡ ಭಾಷಿಕ ಪ್ರದೇಶಗಳು. ಹುಬ್ಬಳ್ಳಿ ಆ ಕಾಲದಲ್ಲಿ ಉತ್ತರ ಕರ್ನಾಟಕದ ಹದಿಮೂವರು ಜಿಲ್ಲೆಗಳಿಗೆ ಕೇಂದ್ರ ಸ್ಥಳ. ಅಂತಲೇ ಆಗ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಕಚೇರಿಗಳು ಹುಬ್ಬಳ್ಳಿಯಲ್ಲಿ ಇದ್ದವು. ಇಂಥ ಹುಬ್ಬಳ್ಳಿ ಈಗ ಏನಾಗಿದೆ?
ಕೋಮುವಾದದ ವ್ಯಾಧಿ ಎಲ್ಲಿ ವ್ಯಾಪಿಸುತ್ತದೋ ಆ ಪ್ರದೇಶ ಸರ್ವತೋಮುಖ ಅಭಿವೃದ್ಧಿಯಲ್ಲಿ ಹಿಂದುಳಿಯುತ್ತದೆ. ಕೋಮುವಾದದಿಂದ ಯಾವುದೋ ಒಂದು ಸಮುದಾಯ ಮಾತ್ರ ನಲುಗಿ ಹೋಗುವುದಿಲ್ಲ. ಆ ಪ್ರದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ತೀವ್ರ ಸ್ವರೂಪದ ಹಿನ್ನಡೆಯಾಗುತ್ತದೆ. ಹುಬ್ಬಳ್ಳಿ ಈಗ ಮೇಲ್ನೋಟಕ್ಕೆ ದೊಡ್ಡ ನಗರವಾಗಿದ್ದರೂ ಜನೋಪಯೋಗಿ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿಸಿದ ಪ್ರಮಾಣದಲ್ಲಿ ನಡೆಯುತ್ತಿಲ್ಲ.
ಯಾವುದೇ ಪ್ರದೇಶದಲ್ಲಿ ಅಭಿವೃದ್ಧಿ ಯೋಜನೆಗಳು ಜಾರಿಗೆ ಬರಬೇಕೆಂದರೆ ಅಲ್ಲಿ ಪ್ರಭಾವೀ ರಾಜಕೀಯ ನಾಯಕತ್ವ ಇರಬೇಕು. ಜನಸಾಮಾನ್ಯರು ತಮ್ಮ ಬೇಡಿಕೆಗಳಿಗಾಗಿ ಹೋರಾಟಗಳ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಬೇಕು. ಜೊತೆಗೆ ಕೋಮು ವೈಷಮ್ಯದಿಂದ ಆ ಪ್ರದೇಶ ಮುಕ್ತವಾಗಿರಬೇಕು. ವಿಷಾದದ ಸಂಗತಿಯೆಂದರೆ ಹುಬ್ಬಳ್ಳಿ ಈ ಮೂರರಿಂದಲೂ ವಂಚಿತವಾಗಿದೆ. ಹುಬ್ಬಳ್ಳಿಗೆ ಎಸ್.ಆರ್. ಬೊಮ್ಮಾಯಿ ಅವರು ಮತ್ತು ಗದಗದ ಕೆ.ಎಚ್.ಪಾಟೀಲರ ನಂತರ ಪ್ರಭಾವೀ ನಾಯಕತ್ವ ಸಿಗಲಿಲ್ಲ. ಇಲ್ಲಿ ಅರುವತ್ತರ ದಶಕದ ಕೊನೆಯ ನಂತರ ಕಾಲಿಟ್ಟ ಕೋಮುವ್ಯಾಧಿ ಜನರ ಅಭಿವೃದ್ಧಿ ಪರ ಆಲೋಚನಾ ಶಕ್ತಿಯನ್ನೇ ನಾಶ ಮಾಡಿತು.ತಮ್ಮ ಅಗತ್ಯಗಳಿಗೆ ಸರಕಾರದ ಜೊತೆ ಹೋರಾಟ ಮಾಡಬೇಕಾದ ಜನ ಜಾತಿ, ಮತದ ಹೆಸರಿನಲ್ಲಿ ತಮ್ಮತಮ್ಮಲ್ಲೇ ಪರಸ್ಪರ ಹೊಡೆದಾಟಕ್ಕೆ ಇಳಿದಾಗ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಿನ್ನಡೆಯಾಗಿ ಕಾನೂನು ಮತ್ತು ಸುವ್ಯವಸ್ಥೆ ಯನ್ನು ಕಾಪಾಡುವುದೇ ದೊಡ್ಡ ಸಮಸ್ಯೆಯಾಗುತ್ತದೆ.
1975ರಲ್ಲಿ ನಾನು ‘ಸಂಯುಕ್ತ ಕರ್ನಾಟಕ’ದಲ್ಲಿ ಕೆಲಸಕ್ಕೆ ಸೇರಲು ಬಿಜಾಪುರದಿಂದ ಹುಬ್ಬಳ್ಳಿಗೆ ಬಂದಾಗ ಅದು ಈಗಿನಂತಿರಲಿಲ್ಲ. ಕೋಮು ಕಾಯಿಲೆ ಹಬ್ಬತೊಡಗಿದ್ದರೂ ಆಗ ಕಾಂಗ್ರೆಸ್ ನಲ್ಲಿ ಹುಲಕೋಟಿ ಹುಲಿ ಕೆ.ಎಚ್.ಪಾಟೀಲ, ಎಸ್.ಆರ್ ಬೊಮ್ಮಾಯಿ ಹಾಗೂ ಧಾರವಾಡದ ಡಿ.ಕೆ.ನಾಯ್ಕರ್, ಕಮ್ಯುನಿಸ್ಟ್ ಪಕ್ಷದ ಎ.ಜೆ.ಮುಧೋಳರಂಥ ಘಟಾನುಘಟಿ ನಾಯಕರಿದ್ದರು. ಪಾಟೀಲ ಪುಟ್ಟಪ್ಪನವರಂಥ ಹೆಸರಾಂತ ಪತ್ರಕರ್ತರಿದ್ದರು. ಮುಸ್ಲಿಮ್ ಶ್ರಮಜೀವಿ ಸಮುದಾಯದಿಂದ ಬಂದರೂ ಮುಧೋಳರು ಎಲ್ಲ ಜನ ಸಮುದಾಯಗಳ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದರು. ಸಾಹಿತಿ ನಿರಂಜನರು ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿದ್ದಾಗ ಅವರ ಗರಡಿಯಲ್ಲಿ ತಯಾರಾಗಿದ್ದ ಮುಧೋಳರು ಜನಸಾಮಾನ್ಯರ ಸಮಸ್ಯೆಗಳನ್ನು ಎತ್ತಿಕೊಂಡು ಬೀದಿಗಿಳಿಯದ ದಿನವೇ ಆಗ ಇರುತ್ತಿರಲಿಲ್ಲ. ಅವರ ಜನಪ್ರಿಯತೆ ಎಷ್ಟಿತ್ತೆಂದರೆ ಬಿಜೆಪಿ ಅಭ್ಯರ್ಥಿ ಎದುರು ಅತ್ಯಂತ ಕಡಿಮೆ ಅಂದರೆ ನೂರಿನ್ನೂರು ಮತಗಳ ಅಂತರದಲ್ಲಿ (ಅದೂ ಮತ ಎಣಿಕೆಯ ಅಧಿಕಾರಿಗಳ ಗೋಲ್ಮಾಲ್ನಿಂದ) ಪರಾಭವಗೊಂಡಿದ್ದರು. ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾದರೆ ಪಾಟೀಲ ಪುಟ್ಟಪ್ಪನವರು ಸಿಡಿದೇಳುತ್ತಿದ್ದರು. ಅವರ ಹೋರಾಟದ ಫಲವಾಗಿ ಹುಬ್ಬಳ್ಳಿಯಲ್ಲಿ ನೈರುತ್ಯ ವಲಯ ಕೇಂದ್ರ ಸ್ಥಾಪನೆಯಾಯಿತು.
ಹುಬ್ಬಳ್ಳಿ ರಾಜ್ಯದ ಅತ್ಯಂತ ಆಯಕಟ್ಟಿನ ನಗರ. ಸುತ್ತಮುತ್ತಲಿನ ಸುಮಾರು ನೂರು ಕಿ.ಮೀ. ಅಂತರದಲ್ಲಿ ಆರೇಳು ಜಿಲ್ಲೆಗಳಿವೆ. ಕಾರವಾರ, ಬಿಜಾಪುರ, ಹೊಸಪೇಟೆ, ಕೊಪ್ಪಳ, ಬಾಗಲಕೋಟ, ದಾವಣಗೆರೆ ಮುಂತಾದ ಜಿಲ್ಲೆಗಳು ಸಮೀಪದಲ್ಲಿ ಇರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರ ರಾಜ್ಯದ ದೊಡ್ಡ ವ್ಯಾಪಾರ ಕೇಂದ್ರವಾಗಿ ಬೆಳೆಯಿತು. ಕೋಟ್ಯಂತರ ರೂ. ವಹಿವಾಟು ನಡೆಯತೊಡಗಿತು. ಧಾರವಾಡ ಶೈಕ್ಷಣಿಕ ಕೇಂದ್ರವಾದರೆ, ಹುಬ್ಬಳ್ಳಿ ವಾಣಿಜ್ಯ ಕೇಂದ್ರವಾಗಿ ಹೊರ ಹೊಮ್ಮಿತು. ಇಲ್ಲಿನ ಭಾರತ್ ಮಿಲ್ (ನಂತರ ಮಹಾದೇವ ಜವಳಿ) ಗಿರಣಿಯಲ್ಲಿ ಐದಾರು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಳೆದ ಶತಮಾನದ ಆರಂಭದಲ್ಲೇ ಸ್ಥಾಪನೆಯಾಗಿದ್ದ ಭಾರತ ಮಿಲ್ ಬಗ್ಗೆ ಆಗ ಬದುಕಿದ್ದ ಶಿಶುನಾಳ ಶರೀಫಸಾಹೇಬರು ಹಾಡು ಬರೆದಿದ್ದಾರೆ.
ಇಂಥ ಹೆಮ್ಮೆಯ ಹುಬ್ಬಳ್ಳಿಯ ಅವನತಿ ಆರಂಭವಾಗಿದ್ದು ಕೋಮುವ್ಯಾಧಿ ಇಲ್ಲಿ ಹಬ್ಬತೊಡಗಿದಾಗ. ನಾಗಪುರ ಮೂಲದ ಸಂಘಟನೆಯ ಚಟುವಟಿಕೆಗಳು ತೀವ್ರ ಗೊಳ್ಳುತ್ತಿದ್ದಂತೆ ಪರಿಸ್ಥಿತಿ ಹದಗೆಡತೊಡಗಿತು.ರಾಜಕೀಯ ಲಾಭಕ್ಕಾಗಿ ಹುಟ್ಟು ಹಾಕಲಾದ ಈದ್ಗಾ ಮೈದಾನದ ವಿವಾದ ಭಯಾನಕ ಸ್ವರೂಪ ತಾಳಿತು. ತಿಂಗಳಾನುಗಟ್ಟಲೆ ನಿಷೇದಾಜ್ಞೆ, ಕರ್ಫ್ಯೂ ಹೇರಲ್ಪಟ್ಟು, ಶಾಲೆ, ಕಾಲೇಜುಗಳು ತಿಂಗಳಾನುಗಟ್ಟಲೆ ಮುಚ್ಚಿದಾಗ ನಾನು ಹುಬ್ಬಳ್ಳಿಯಲ್ಲಿ ಇದ್ದೆ. ಆಗ ದೇಶಪಾಂಡೆ ನಗರದಲ್ಲಿ ಘರ್ಷಣೆ ಮತ್ತು ಗೋಲಿಬಾರ್ಗೆ ಐದಾರು ಮಂದಿ ಅಮಾಯಕ ಯುವಕರು ಬೀದಿ ಹೆಣವಾದರು. ಪ್ರಚೋದಿಸಿದವರು ಲೋಕಸಭಾ ಮತ್ತು ವಿಧಾನಸಭಾ ಸದಸ್ಯರಾದರು.ಆಗ ಹುಬ್ಬಳ್ಳಿಯ ವ್ಯಾಪಾರ ಕೇಂದ್ರ ಎಂಬ ಪ್ರತೀತಿಗೆ ಪೆಟ್ಟು ಬಿತ್ತು.ಇದರ ಪರಿಣಾಮವಾಗಿ ಅಕ್ಕಪಕ್ಕದ ಹಾವೇರಿ ಮತ್ತು ಗದಗ ನಗರಗಳು ವ್ಯಾಪಾರ ಕೇಂದ್ರಗಳಾಗಿ ಬೆಳೆದವು. ಆಗ ಗಾಯಗೊಂಡ ಹುಬ್ಬಳ್ಳಿಯ ಗಾಯ ಮಾಯುವಷ್ಟರಲ್ಲೇ ಮತ್ತೆ ಚುನಾವಣಾ ಲಾಭಕ್ಕಾಗಿ ಜನಸಾಮಾನ್ಯರನ್ನು ಕೋಮು ಹೆಸರಿನಲ್ಲಿ ವಿಭಜಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು ವಕ್ಕರಿಸುತ್ತಿದ್ದಾರೆ.
ಯಾವುದೇ ನಗರದಲ್ಲಿ, ಊರಿನಲ್ಲಿ ವ್ಯಾಪಾರ, ಉದ್ದಮೆಗಳು ಸುಲಲಿತವಾಗಿ ನಡೆಯಬೇಕೆಂದರೆ, ಶಾಲೆ, ಕಾಲೇಜುಗಳು ಗುಣಮಟ್ಟ ಕಾಪಾಡಿಕೊಳ್ಳಬೇಕೆಂದರೆ, ಜನಸಾಮಾನ್ಯರು ನೆಮ್ಮದಿ ಆಗಿರಬೇಕೆಂದರೆ ಅಲ್ಲಿ ಶಾಂತ ವಾತಾವರಣ ಇರಬೇಕು. ಯಾವುದೇ ಘರ್ಷಣೆ, ಹಿಂಸಾಚಾರ, ಗಲಭೆ, ಕರ್ಫ್ಯೂ ಇವು ಇರಬಾರದು. ಗಲಾಟೆಯಾದರೆ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಾರೆ.ಆಗ ಅಂಗಡಿ, ವ್ಯಾಪಾರ ಮಳಿಗೆಗಳು, ಹೋಟೆಲ್, ರೆಸ್ಟೋರೆಂಟ್ಗಳು ನಷ್ಟ ಅನುಭವಿಸುತ್ತವೆ. ಹೀಗಾಗಿ ಇಂಥ ನಗರಗಳಲ್ಲಿ ಹಾಗೂ ಊರುಗಳಲ್ಲಿ ಬಂಡವಾಳ ಹೂಡಿಕೆ ಮಾಡಿ ವ್ಯಾಪಾರೋದ್ಯಮ ಆರಂಭಿಸಲು ವರ್ತಕರು, ಉದ್ಯಮಿಗಳು ಹಿಂಜರಿಯುತ್ತಾರೆ.ಜನಸಾಮಾನ್ಯರು ಯಾವುದೇ ಬೇಡಿಕೆಯನ್ನು ಸರಕಾರದ ಮುಂದಿಡದೇ ಬದುಕಿದರೆ ಸಾಕೆಂದು ತಮ್ಮ ಪಾಡಿಗೆ ತಾವು ಅಸಹಾಯಕತೆಯಿಂದ ತಾವು ನಂಬಿದ ದೇವರ ಆರಾಧನೆಯಲ್ಲಿ ಮುಳುಗಿ ಹೋಗುತ್ತಾರೆ.ಇದು ಮಕ್ಕಳ ಭವಿಷ್ಯದ ಮೇಲೂ ಪರಿಣಾಮ ಬೀರುತ್ತದೆ.
ಹುಬ್ಬಳ್ಳಿಯಲ್ಲಿ ಬೇಡಿಕೆಗಳಿಗಾಗಿ ಇಲ್ಲವೇ ಅನ್ಯಾಯಗಳ ವಿರುದ್ಧ ಜನಸಾಮಾನ್ಯರು ಪ್ರತಿಭಟಿಸುವುದು ನಿಂತು ಹೋಗಿ ದಶಕಗಳೇ ಆದವು. ಬಹುತೇಕ ಯುವಕರ ಮೆದುಳಿಗೆ ಕೋಮು ಕಾಯಿಲೆ ಅಂಟಿಕೊಂಡಿದೆ. ಹೀಗಾಗಿ ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಅಗತ್ಯವಿರುವಷ್ಟು ಸಾರ್ವಜನಿಕ ಸಾರಿಗೆ ಸಂಸ್ಥೆಯ ಬಸ್ಸುಗಳಿಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣ ಎಂದಾದ ನಂತರ ಬಸ್ಸುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಸರಕಾರಿ ಬಸ್ಸುಗಳಲ್ಲಿ ಕುಳಿತುಕೊಳ್ಳಲು ಆಸನಗಳೂ ಸಿಗುವುದಿಲ್ಲ. ಇದರ ಜೊತೆಗೆ ಈ ಭಾಗಕ್ಕೆ ಸಾರಿಗೆ ಸಂಸ್ಥೆಯ ಬಸ್ಸುಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ.
ಇಲ್ಲಿನ ಜನಪ್ರತಿನಿಧಿಗಳೂ ಹೆಚ್ಚಿನ ಬಸ್ಗಳಿಗಾಗಿ ಒತ್ತಾಯಿಸುತ್ತಿಲ್ಲ. ಜನಸಾಮಾನ್ಯರು ಪ್ರತಿಭಟನೆಯ ಅಂತಸತ್ವವನ್ನೇ ಕಳೆದುಕೊಂಡಿದ್ದಾರೆ. ಕೋಮು ವಿಷಯಗಳಿಗೆ ಬಿಟ್ಟರೆ ಇನ್ಯಾವುದಕ್ಕೂ ಇಲ್ಲಿ ಪ್ರತಿಭಟನೆಗಳು ನಡೆಯುತ್ತಿಲ್ಲ. ಎಡಪಂಥೀಯ ಪಕ್ಷಗಳು, ಜನಪರ ಸಂಘಟನೆಗಳ ಚಟುವಟಿಕೆಗಳೂ ವಿರಳ. ಹುಬ್ಬಳ್ಳಿಯಲ್ಲಿ ದಲಿತ ಸಂಘಟನೆಗಳು ಮಾತ್ರ ಆಗಾಗ ಸಂವಿಧಾನದ ಘನತೆ, ಗೌರವಗಳನ್ನು ಎತ್ತಿಹಿಡಿಯಲು ಸದ್ದು ಮಾಡುತ್ತಿರುತ್ತವೆ. ಧಾರವಾಡದಲ್ಲಿ ಅಷ್ಟೊಂದು ಕೋಮು ವ್ಯಾಧಿ ಇಲ್ಲವಾದರೂ ಅಲ್ಲೂ ಜನಪ್ರತಿಭಟನೆಗಳು ಕಡಿಮೆ. ಚಂಪಾ, ಕಲಬುರಗಿ, ಕಣವಿ ಹೋದ ನಂತರ ಧಾರವಾಡವೂ ಮೊದಲಿನಂತಿಲ್ಲ. ಹುಬ್ಬಳ್ಳಿಯಲ್ಲಿ ನಾಡಿನ ಹೆಸರಾಂತ ಮಾರ್ಕ್ಸ್ವಾದಿ ಚಿಂತಕ,ಹೋರಾಟಗಾರ ಪ್ರೊ. ಕೆ.ಎಸ್.ಶರ್ಮಾ ಅವರಿದ್ದಾರೆ. ಆದರೆ, ಅವರಿಗೀಗ ತೊಂಬತ್ತು ವರ್ಷ. ಆದರೂ ಅಸಂಘಟಿತ ಕಾರ್ಮಿಕರಿಗೆ ನ್ಯಾಯ ಕೊಡಿಸುವ ಕಾನೂನು ಹೋರಾಟದಲ್ಲಿ ಕ್ರಿಯಾಶೀಲರಾಗಿದ್ದಾರೆ.ಪ್ರತಿವಾರ ಮುಂಬೈನ ‘ಕರ್ನಾಟಕ ಮಲ್ಲ’ ಪತ್ರಿಕೆಗೆ ಅಂಕಣ ಬರೆಯುತ್ತಾರೆ. ಇದು ಇಂದಿನ ಹುಬ್ಬಳ್ಳಿ-ಧಾರವಾಡದ ಪರಿಸ್ಥಿತಿ.
ಕಲ್ಯಾಣ ಕರ್ನಾಟಕದ ಕಲಬುರಗಿಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಅದು ಅಭಿವೃದ್ಧಿಯ ಗುರಿ ಸಾಧಿಸುವಲ್ಲಿ ಮತ್ತು ವಿಶೇಷವಾಗಿ ಮೂಲಭೂತ ಸೌಕರ್ಯಗಳನ್ನು ಸರಕಾರದಿಂದ ಪಡೆದುಕೊಳ್ಳುವಲ್ಲಿ ಹುಬ್ಬಳ್ಳಿಯನ್ನು ಹಿಂದೆ ಹಾಕುತ್ತದೆ. ಯಾಕೆಂದರೆ ಅಲ್ಲಿ ಕೋಮು ವೈಷಮ್ಯವಿಲ್ಲ. ಐದಾರು ದಶಕಗಳಿಂದ ಅದು ಕೋಮು ಗಲಭೆಗಳಿಂದ ಮುಕ್ತವಾಗಿದೆ. ಅಲ್ಲಿ ನಿತ್ಯವೂ ನಡೆಯುವ ಪ್ರತಿಭಟನೆ, ಚಳವಳಿಗಳು ರಾಜ್ಯದ ಯಾವ ನಗರದಲ್ಲೂ ನಡೆಯುವುದಿಲ್ಲ. ಅಲ್ಲಿ ಮಲ್ಲಿಕಾರ್ಜುನ ಖರ್ಗೆಯವರಂಥ, ಪ್ರಿಯಾಂಕ್ ಖರ್ಗೆ ಬಿ.ಆರ್ .ಪಾಟೀಲ್, ಶರಣ ಪ್ರಕಾಶ್ ಪಾಟೀಲ್ರಂಥ ರಾಜಕೀಯ ನಾಯಕತ್ವವಿದೆ. ಕೆ.ನೀಲಾ, ಮಲ್ಲಿಕಾರ್ಜುನ ಸಜ್ಜನ, ಮೌಲಾ ಮುಲ್ಲಾ ಅವರಂಥ ಜನ ನಾಯಕರಿದ್ದಾರೆ. ಹೀಗಾಗಿ ಹೋರಾಟ ಮಾಡಿ ಹಾಗೂ ಖರ್ಗೆಯವರ, ಧರಂಸಿಂಗ್ರ ಪರಿಶ್ರಮದಿಂದ, ವೈಜನಾಥ್ ಪಾಟೀಲರ ಹೋರಾಟಗಳಿಂದ ಕಲ್ಯಾಣ ಕರ್ನಾಟಕ ಭಾಗ ಸಂವಿಧಾನದ 370 ವಿಶೇಷ ಸ್ಥಾನ ಮಾನ ಪಡೆಯಿತು. ಅಲ್ಲಿನ ವಿಶಾಲವಾದ ರಸ್ತೆಗಳು, ವಿಶ್ವವಿದ್ಯಾನಿಲಯಗಳು, ಆಸ್ಪತ್ರೆಗಳು, ಶಾಲೆ, ಕಾಲೇಜುಗಳು ಗಮನ ಸೆಳೆಯುತ್ತವೆ. ಕಾಮ್ರೇಡ್ ಮಾರುತಿ ಮಾನ್ಪಡೆ ಅವರು ಬದುಕಿದ್ದಾಗಲಂತೂ ಅವರು ಜನರನ್ನು ಕಟ್ಟಿಕೊಂಡು ಹೋರಾಟ ನಡೆಸದ ದಿನವೇ ಇರಲಿಲ್ಲ. ಕಲ್ಯಾಣ ಕರ್ನಾಟಕ ಬಸವಣ್ಣನವರು ನಡೆದಾಡಿದ ನೆಲ, ಬುದ್ಧನ ತಂಗಾಳಿ ಇಲ್ಲಿ ಬೀಸುತ್ತಿದೆ. ಈಗಂತೂ ಬಾಬಾಸಾಹೇಬರ ರಕ್ಷಾ ಕವಚ ಈ ಭಾಗಕ್ಕೆ ಇದೆ. ಹೀಗಾಗಿ ಇಲ್ಲಿ ಮನುವಾದಿ, ಕೋಮು ಕ್ರಿಮಿಕೀಟಗಳ ಹಾವಳಿ ಅಷ್ಟೊಂದಿಲ್ಲ. ಈ ಸುರಕ್ಷತೆಯು ಈ ಭಾಗದ ಅಭಿವೃದ್ಧಿಯ ಯಶಸ್ಸಿನ ಸಂಕೇತ.
ಯಾವುದೇ ಪ್ರದೇಶ ಅಭಿವೃದ್ಧಿಯಾಗಬೇಕಾದರೆ, ಅಲ್ಲಿ ಮೂಲಭೂತ ಸೌಕರ್ಯಗಳು ಸಿಗಬೇಕಾದರೆ ಅದು ಕೋಮು ಮತ್ತು ಜಾತಿ ಕಾಯಿಲೆಯಿಂದ ಮುಕ್ತವಾಗಿರಬೇಕು. ಆ ಭಾಗದ ನಾಯಕರಿಗೆ ತಮ್ಮನ್ನು ಚುನಾಯಿಸಿದ ಜನರ ಋಣ ತೀರಿಸುವ ಸೌಜನ್ಯ ಇರಬೇಕು. ಯಾವುದೇ ಅಭಿವೃದ್ಧಿ ಮಾಡದೇ, ಕೋಟಿ, ಕೋಟಿ ರೂ. ಲಪಟಾಯಿಸಿ ಐದಾರು ತಲೆಮಾರಿಗಾಗುವಷ್ಟು ಆಸ್ತಿಯನ್ನು ಮಾಡಿಕೊಂಡು, ಚುನಾವಣೆ ಬಂದಾಗ ಜನರನ್ನು ಜಾತಿ, ಮತದ ಹೆಸರಿನಲ್ಲಿ ಒಡೆದು ಓಟಿನ ಬೆಳೆ ತೆಗೆಯುವ ಜನಪ್ರತಿನಿಧಿಗಳಿದ್ದರೆ ಅಂಥ ನಗರ ಅಥವಾ ಪ್ರದೇಶ ಎಂದೂ ಉದ್ಧಾರವಾಗುವುದಿಲ್ಲ. ಪರಸ್ಪರ ಪ್ರೀತಿ, ವಿಶ್ವಾಸ, ಅಂತಃಕರಣ ಇಲ್ಲದ ಯಾವ ಧರ್ಮಾಂಧರ ಅಗತ್ಯವೂ ಸಮಾಜಕ್ಕೆ ಇಲ್ಲ. ಇಂಥವರ ನಿರ್ಗಮನದಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯ. ನಾವು ನಮ್ಮ ಮುಂದಿನ ಪೀಳಿಗೆಗೆ ಇಂಥ ಯಾವುದೇ ಆತಂಕವಿಲ್ಲದ ಜಗತ್ತನ್ನು ಬಿಟ್ಟು ಹೋದರೆ ಮಾತ್ರ ಅದು ನಾವು ಬದುಕಿದ್ದಕ್ಕೆ ಸಾರ್ಥಕ.