ನೈತಿಕತೆಯಿಲ್ಲದ ನಕಲಿ ಚಳವಳಿಗಳು
ಯಾವುದೇ ಹೋರಾಟಕ್ಕೆ ಸಾತ್ವಿಕ, ಸದುದ್ದೇಶ ಇರಬೇಕು. ಅದರ ನಾಯಕತ್ವವನ್ನು ವಹಿಸಿದವರಿಗೆ ಸ್ವಾರ್ಥದ ಲವಲೇಶವೂ ಇರಬಾರದು. ನೇತಾರರ ಬದುಕು ಪಾರದರ್ಶಕವಾಗಿ ಇರಬೇಕು. ಇದಕ್ಕೆ ಮಹಾತ್ಮಾ ಗಾಂಧೀಜಿ ಮತ್ತು ಬಾಬಾಸಾಹೇಬ ಅಂಬೇಡ್ಕರ್ ಅತ್ಯುತ್ತಮ ಉದಾಹರಣೆ. ಇವರು ಮಾತ್ರವಲ್ಲ, ಸೋಷಲಿಸ್ಟ್ ನಾಯಕರಾಗಿದ್ದ ರಾಮ ಮನೋಹರ ಲೋಹಿಯಾ, ಕಮ್ಯುನಿಸ್ಟ್ ಮುಖಂಡರಾಗಿದ್ದ ಎ.ಕೆ.ಗೋಪಾಲನ್, ಭೂಪೇಶ್ ಗುಪ್ತ ಸೇರಿದಂತೆ ಅನೇಕ ಎಡಪಂಥೀಯ ನಾಯಕರು ಪ್ರಾಮಾಣಿಕವಾಗಿ ಬದುಕಿದರು. ಅಂತಲೇ ಅವರು ಒಂದು ಕರೆ ನೀಡಿದರೆ, ಸಾವಿರಾರು ಜನ ಸೇರುತ್ತಿದ್ದರು. ಸ್ವಾತಂತ್ರ್ಯ ಆಂದೋಲನದ ಅಗ್ನಿಕುಂಡದಲ್ಲಿ ಅರಳಿದ ಇಂಥ ನಾಯಕರು ಈಗ ವಿರಳ.
ಈಗ ಕರ್ನಾಟಕ ಸೇರಿದಂತೆ ದೇಶದ ಅನೇಕ ಕಡೆ ಹೋರಾಟ, ಪಾದಯಾತ್ರೆ, ಚಳವಳಿಗಳು ನಡೆಯುತ್ತಿವೆ. ಸ್ವತಃ ಮಹಾ ಭ್ರಷ್ಟರಾದ ರಾಜಕಾರಣಿಗಳು ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳದೇ ಇನ್ನೊಬ್ಬರು ಭ್ರಷ್ಟಾಚಾರ ಮಾಡಿದರೆಂದು ಬೀದಿ ಪ್ರಹಸನ ನಡೆಸುತ್ತಾರೆ. ವಿಪರೀತ ಮಳೆ, ಭೂಕುಸಿತ, ನೀರು ಪಾಲಾದ ಜನಸಾಮಾನ್ಯರ ಬದುಕು, ಕುಸಿದು ಬಿದ್ದ ಮನೆಗಳು, ಅಸ್ತವ್ಯಸ್ತಗೊಂಡ ಜನಜೀವನ ಇದಾವುದಕ್ಕೂ ಸ್ಪಂದಿಸದ ರಾಜಕಾರಣಿಗಳು ತಮ್ಮ ರಾಜಕೀಯ ಸ್ವಾರ್ಥ ಸಾಧನೆಗೆ ಪಾದಯಾತ್ರೆ, ಸತ್ಯಾಗ್ರಹದಂಥ ಅಸ್ತ್ರಗಳನ್ನು ಬಳಸಿಕೊಳ್ಳುತ್ತಾರೆ. ಚುನಾಯಿತ ಸರಕಾರಗಳನ್ನು ಅನೈತಿಕ ಮಾರ್ಗದಿಂದ ಉರುಳಿಸುವುದು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವವರ ಚಾಳಿ.
ಚಳವಳಿ, ಹೋರಾಟಗಳನ್ನು ಮಾಡಬಾರದೆಂದಿಲ್ಲ. ಆದರೆ, ಅದರ ನಾಯಕತ್ವ ವಹಿಸಿದವರು ಪರಿಶುದ್ಧ ಆಗಿರಬೇಕು. ಅಪರೂಪಕ್ಕೊಬ್ಬ ಹೆಸರು ಶುದ್ಧವಾಗಿರಿಸಿಕೊಂಡ ರಾಜಕಾರಣಿ ಇದ್ದರೆ, ಅತನ ತೇಜೋವಧೆ ಮಾಡಲು ಚಳವಳಿಯ ಅಸ್ತ್ರಗಳು ಬಳಕೆಯಾಗುತ್ತಿವೆ. ಅಧಿಕಾರದಲ್ಲಿ ಇದ್ದಾಗ ತಿನ್ನಬಾರದನ್ನು ತಿಂದು ಜೈಲಿಗೆ ಹೋದವರು, ಜಾಮೀನು ಮೇಲೆ ಹೊರಗೆ ಓಡಾಡುವವರು ಮಾಡುವ ಹೋರಾಟಗಳಲ್ಲಿ ನೈತಿಕತೆ ಇರುವುದಿಲ್ಲ. ಅಣ್ಣಾ ಹಝಾರೆ ನೇತೃತ್ವದ ಹೋರಾಟ ಒಂದು ಪಕ್ಷದ ಸರಕಾರವನ್ನು ಉರುಳಿಸಿ ಇನ್ನೊಂದು ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿತ್ತು. ಈ ಚಳವಳಿಯಲ್ಲಿ ಮಿಂಚಿದ ಬಾಬಾ ರಾಮದೇವ್‌ರಂಥವರು ಅಧ್ಯಾತ್ಮ, ಪಾರಮಾರ್ಥಿಕ ಚಿಂತನೆಗೆ ಎಳ್ಳುನೀರು ಬಿಟ್ಟು ನಕಲಿ ಉದ್ಯಮಿಗಳಾಗಿ ಈಗ ಸುಪ್ರೀಂ ಕೋರ್ಟಿನಿಂದ ಉಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಜನರು ಹೋರಾಟಗಳಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ.
ಕರ್ನಾಟಕದ ರಾಜಕೀಯವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಇಲ್ಲಿ ಕಾಲೂರಿ ಆ ಮೂಲಕ ದಕ್ಷಿಣ ಭಾರತವನ್ನು ಕಬ್ಜಾ ಮಾಡಿಕೊಳ್ಳಲು, ತಮ್ಮ ಪರಿಕಲ್ಪನೆಯ ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಸಂಘಪರಿವಾರ ರೂಪಿಸಿದ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹುದೊಡ್ಡ ಅಡ್ಡಿಯಾಗಿದ್ದಾರೆ.ಜನಸಮೂಹವನ್ನು ಆಕರ್ಷಿಸಬಲ್ಲ ನಾಯಕನಾಗಿ ಬೆಳೆದ ಅವರನ್ನು ಮುಡಾ ಹಗರಣದಲ್ಲಿ ಸಿಲುಕಿಸಿ ತನಗಿರುವ ಅಡ್ಡಿಯನ್ನು ನಿವಾರಿಸುವುದು ಬಿಜೆಪಿ ಲೆಕ್ಕಾಚಾರ. ಕರ್ನಾಟಕದ ಬಹುತೇಕ ಹಿಂದುಳಿದ ಸಮುದಾಯದ ನಾಯಕರು ಮುಖ್ಯಮಂತ್ರಿ ಆದಾಗಲೆಲ್ಲ ಇಂಥ ಕುತಂತ್ರಕ್ಕೆ ಬಲಿಯಾಗಿದ್ದಾರೆ. ಈಗ ದೇವರಾಜ ಅರಸರನ್ನು ಹೊಗಳುವವರೇ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ, ಗ್ರೊವರ್ ಆಯೋಗ ರಚಿಸುವಂತೆ ಮಾಡಿದರು. ಇಂಥ ಅರಸು ಅಸುನೀಗಿದಾಗ ಅವರ ಅಂತ್ಯಕ್ರಿಯೆಗೆ ಹಣವಿಲ್ಲದೇ ಅಂದಿನ ಮುಖ್ಯಮಂತ್ರಿ ಗುಂಡೂರಾಯರು ಸರಕಾರದ ವತಿಯಿಂದ ಅಂತ್ಯಕ್ರಿಯೆ ಮಾಡಿಸಿದರು. ನಂತರ ಬಂದ ಬಂಗಾರಪ್ಪ, ವೀರಪ್ಪ ಮೊಯ್ಲಿ ಕೂಡ ಅರ್ಧದಲ್ಲೇ ಅಧಿಕಾರ ಕಳೆದುಕೊಂಡರು.ಈಗ ಭ್ರಷ್ಟಾಚಾರದ ಆರೋಪ ಮಾಡುವವರು ಮಹಾಸಂಪನ್ನರೇನಲ್ಲ. ಮುಡಾ ಹಗರಣದ ಪುರಾಣ ಬಿಚ್ಚಿದರೆ ಇವರ ಹೂರಣವೂ ಹೊರಬೀಳುತ್ತದೆ. ಆದರೆ ಕಾಂಗ್ರೆಸ್ ನವರು ಮಹಾ ಸೋಮಾರಿಗಳು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದರೆ ಬಿಜೆಪಿಯ ಭ್ರಷ್ಟಾಚಾರ ಬಯಲಿಗೆಳೆಯುವುದಾಗಿ ಹೇಳಿದವರು ಅಧಿಕಾರ ಸಿಕ್ಕ ನಂತರ ಗಪ್ ಚುಪ್ ಕೂತರು. ಇದನ್ನು ಬಳಸಿಕೊಂಡು ಬಿಜೆಪಿಯ ಒಂದು ಬಣದವರು ಪಾದಯಾತ್ರೆ ಹೊರಟಿದ್ದಾರೆ.
ಸಾವಿರಾರು ಕೋಟಿ ರೂಪಾಯಿಗಳ ಚುನಾವಣಾ ಬಾಂಡ್ ಹಗರಣದ ಕುರಿತು ಬಾಯಿ ಬಿಡದ ತಮ್ಮ ದಿಲ್ಲಿ ನಾಯಕರ ಸಲಹೆಯಂತೆ ಪಾದಯಾತ್ರೆ ಹೊರಟ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಇನ್ನೊಂದು ಬಣದ ಬಸನಗೌಡ ಪಾಟೀಲ (ಯತ್ನಾಳ) ಮತ್ತು ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನೊಂದೆಡೆ ಈ ಪಾದಯಾತ್ರೆಯಿಂದ ಬೆಂಗಳೂರಿನಿಂದ ಮೈಸೂರುವರೆಗೆ ಇರುವ ಪಕ್ಷದ ಕೋಟೆಯನ್ನು ಎಲ್ಲಿ ಬಿಜೆಪಿಯವರು ವಶಪಡಿಸಿಕೊಳ್ಳುವರೋ ಎಂಬ ಒಳ ಭೀತಿ ಅವರಿಗಿದೆ. ಹಿಂದೆ ಬಂಗಾರಪ್ಪನವರನ್ನು ಪಕ್ಷಕ್ಕೆ ಸೇರಿಸಿಕೊಂಡು ಅವರ ಓಟ್ ಬ್ಯಾಂಕನ್ನು ಯಾರು ಕಬಳಿಸಿದರೆಂದು ಕುಮಾರಸ್ವಾಮಿ ಅವರಿಗೆ ಗೊತ್ತಿದೆ.
ಇಂಥ ಹದಗೆಟ್ಟ ಪರಿಸ್ಥಿತಿಯಲ್ಲಿ ನೈತಿಕತೆಯುಳ್ಳ ನಿಜವಾದ ಜನನಾಯಕರು ಬರಬೇಕಾಗಿದೆ. ಅಂಥವರು ಮಾತ್ರ ಯಾರದೇ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಚೈತನ್ಯ ಹೊಂದಿರುತ್ತಾರೆ.
ಈಗ ಭವ್ಯ ಭಾರತದಲ್ಲಿ ಜನ ಸಮೂಹವನ್ನು ಆಕರ್ಷಿಸಿ ಮುನ್ನಡೆಸಬಲ್ಲ ನಾಯಕರ ಕೊರತೆ ಎದ್ದು ಕಾಣುತ್ತದೆ. ಜನರೇ ಇತಿಹಾಸವನ್ನು ನಿರ್ಮಿಸಿದರೂ ಕೂಡ ಆ ಜನ ಸಮೂಹವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬಲ್ಲ ಒಬ್ಬ ಮುಖಂಡ ಇಲ್ಲವೇ ನೇತಾರರ ತಂಡ ಬೇಕಾಗುತ್ತದೆ. ಇಂಥ ಒಂದು ಸಮರ್ಥ ತಂಡವಿದ್ದರೆ ಎಂಥ ಸವಾಲನ್ನಾದರೂ ದೇಶ ಎದುರಿಸಿ ಗೆಲ್ಲಬಹುದು. ಸ್ವಾತಂತ್ರ್ಯ ಆಂದೋಲನದಲ್ಲಿ ಇಂಥ ನೇತಾರರ ಒಂದು ಸಮೂಹವೇ ಇತ್ತು.ಆದರೆ ಈಗ? ದೇಶದ ಅನೇಕರು ಭಾವಿಸಿದಂತೆ ಈಗೀರುವ ನಾಯಕರು ನಿಜವಾದ ನಾಯಕರೇ? ಭಾರತ ಅತಿಂಥ ದೇಶವಲ್ಲ. 135 ಕೋಟಿ ಜನರ ಹಲವಾರು ಭಾಷೆಗಳ, ಧರ್ಮಗಳ, ಸಂಸ್ಕೃತಿಗಳ, ವಿಭಿನ್ನ ರಾಷ್ಟ್ರೀಯತೆಗಳ ಒಂದು ಒಕ್ಕೂಟ ದೇಶ. ಅಂತಲೇ ನಮ್ಮ ಸಂವಿಧಾನ ನಿರ್ಮಾಪಕರು ಇದನ್ನು ಫೆಡರಲ್ ಸ್ಟೇಟ್ ಎಂದು ಕರೆದರು. ಇಂಥ ಒಂದು ದೇಶಕ್ಕೆ ನಾಯಕನಾಗುವವನು ಯಾವುದೇ ಜಾತಿ, ಧರ್ಮ, ಪ್ರದೇಶಗಳೊಂದಿಗೆ ಗುರುತಿಸಿಕೊಳ್ಳಬಾರದು. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವವನೇ ನಿಜವಾದ ಜನ ನಾಯಕ.
ದೇಶದ ಸ್ವಾತಂತ್ರ್ಯ ಚಳವಳಿ ತೀವ್ರತೆ ಪಡೆಯಲು ಗಾಂಧೀಜಿಯಂಥ ಒಬ್ಬ ನಾಯಕ ಸಿಕ್ಕಿದ್ದರಿಂದ ಸಾಧ್ಯವಾಯಿತು. ಗಾಂಧಿ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಎಲ್ಲರನ್ನೂ ವಿಶ್ವಾಸದಿಂದ ಕರೆದೊಯ್ಯುವ ನಾಯಕತ್ವದ ಗುಣ ಅವರಿಗಿತ್ತು. ಬಾಪೂಜಿ ಮಾತ್ರವಲ್ಲದೆ ಆ ಕಾಲದ ನಾಯಕರಲ್ಲಿ ಜಾತಿ, ಮತ ನೋಡದೆ ಜನರನ್ನು ಸಮಾನವಾಗಿ ಪ್ರೀತಿಸುವ ತಾಯ್ತನವಿತ್ತು. ಪಂಡಿತ್ ಜವಾಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್, ಡಾ.ಅಂಬೇಡ್ಕರ್, ಭಗತ್ ಸಿಂಗ್, ಮೌಲಾನಾ ಅಬುಲ್ ಕಲಾಮ್ ಆಝಾದ್ ಇವರೆಲ್ಲ ನಿಜವಾದ ಜನ ನಾಯಕರಾಗಿದ್ದರು. ಸ್ವಾತಂತ್ರ್ಯಾ ನಂತರವೂ ಈ ಭಾರತಕ್ಕೆ ನಾಯಕರ ಕೊರತೆ ಇರಲಿಲ್ಲ. ಸಂಸತ್ತಿನಲ್ಲಿ ಪ್ರಧಾನಿ ನೆಹರೂಗೆ ಸರಿ ಸಾಟಿಯಾಗಿ ನಿಂತು ವಾದಿಸಬಲ್ಲ ಸೋಷಲಿಸ್ಟ್ ನಾಯಕರಾದ ರಾಮ ಮನೋಹರ ಲೋಹಿಯಾ, ನಾಥ ಪೈ, ಅಶೋಕ್ ಮೆಹತಾ, ಕಮ್ಯುನಿಸ್ಟ್ ನಾಯಕರಾಗಿದ್ದ ಶ್ರೀ ಪಾದ ಅಮೃತ ಡಾಂಗೆ, ಎ.ಕೆ ಗೋಪಾಲನ್, ಭೂಪೇಶ್ ಗುಪ್ತ, ಪ್ರೊ.ಹಿರೇನ್ ಮುಖರ್ಜಿ, ಸ್ವತಂತ್ರ ಪಕ್ಷದ ಎನ್.ಜಿ.ರಂಗಾ, ಮೀನೂ ಮಸಾನಿ ಅವರಂಥ ಘಟಾನುಘಟಿಗಳಿದ್ದರು. ಲೋಹಿಯಾರಂಥವರು ಮಾತಾಡಲು ನಿಂತರೆ ಪ್ರಧಾನಿ ನೆಹರೂ ಸದನದ ಎ.ಸಿ. ವ್ಯವಸ್ಥೆಯಲ್ಲೂ ಬೆವರುತ್ತಿದ್ದರು.ಆದರೆ ಪ್ರತಿಪಕ್ಷ ನಾಯಕರನ್ನು ಅವರು ಎಂದೂ ಶತ್ರುಗಳಂತೆ ನೋಡಲಿಲ್ಲ.ತಮ್ಮನ್ನು ಟೀಕಿಸುವ ಲೋಹಿಯಾ, ಭೂಪೇಶ್ ಗುಪ್ತರಂಥವರನ್ನು ನೆಹರೂ ಇಷ್ಟ ಪಡುತ್ತಿದ್ದರು. ಪ್ರಜಾಪ್ರಭುತ್ವ ಆರೋಗ್ಯಕರವಾಗಿರಬೇಕೆಂದರೆ ಸಮರ್ಥ ಪ್ರತಿಪಕ್ಷ ನಾಯಕರು ಸದನದಲ್ಲಿ ಇರಬೇಕೆಂದು ಬಯಸುತ್ತಿದ್ದರು. ಹೀಗೆ ಭಾರತದ ಪ್ರಜಾಪ್ರಭುತ್ವವನ್ನು ಬಾಬಾ ಸಾಹೇಬರು, ನೆಹರೂ, ಮುಂತಾದವರು ಸೇರಿ ಕಟ್ಟಿದರು. ಸ್ವಾತಂತ್ರ್ಯ ಚಳವಳಿಯಲ್ಲಾಗಲಿ ನಂತರದ ಮೂರು ದಶಕಗಳಲ್ಲಾಗಲಿ ಜನ ನಾಯಕರೆನ್ನುವವರು ಜನತೆಯ ನಡುವಿನಿಂದ ಬರುತ್ತಿದ್ದರು. ಜನ ಹೋರಾಟಗಳ ನಡುವಿನಿಂದ ಮೇಲೆದ್ದು ಬರುತ್ತಿದ್ದರು.
ಇಂದಿರಾ ಗಾಂಧಿ ಕಾಲದಲ್ಲಿ ಬಂದ ಜಾರ್ಜ್ ಫೆರ್ನಾಂಡಿಸ್, ಮಧು ಲಿಮಯೆ, ಮಧು ದಂಡವತೆ, ಎಕೆಜಿ, ಜ್ಯೋತಿರ್ಮಯ ಬಸು, ಸಮರ ಮುಖರ್ಜಿ ಇವರೂ ಕೂಡ ಹೀಗೆ ಸಂಘರ್ಷದ ಸಮರ ಭೂಮಿಯಲ್ಲಿ ಅರಳಿದವರು. ಅಟಲ್ ಬಿಹಾರಿ ವಾಜಪೇಯಿ, ಜಗನ್ನಾಥ ರಾವ್ ಜೋಶಿ ಅವರ ಬಗ್ಗೆ ಎಷ್ಟೇ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೂ ಅವರು ಉತ್ತಮ ವಾಕ್ಪಟುಗಳಾಗಿದ್ದರು. ಅಂತಲೇ ಸಂಸತ್ತಿನ ಚರ್ಚೆಗಳು ಆಗ ಘನತೆಯಿಂದ ಕೂಡಿರುತ್ತಿದ್ದವು. ಕರ್ನಾಟಕದಲ್ಲಿ ಸಿದ್ಧವನಹಳ್ಳಿ ನಿಜಲಿಂಗಪ್ಪ, ಬಿ.ಡಿ.ಜತ್ತಿ, ಕೆಂಗಲ್ ಹನುಮಂತಯ್ಯ, ಕೆ.ಸಿ.ರೆಡ್ಡಿ, ದೇವರಾಜ ಅರಸು, ನಾಗಪ್ಪ ಆಳ್ವಾ, ವೈಕುಂಠ ಬಾಳಿಗಾ, ಜಾಫರ್ ಶರೀಫ್, ಅಬ್ದುಲ್ ನಝೀರ್ ಸಾಬ್, ಅಝೀಝ್ ಸೇಠ್, ಬಿ.ಎಂ ಇದಿನಬ್ಬ , ಬಂಗಾರಪ್ಪ ಅವರಂಥ ನಾಯಕರಿದ್ದರು.ಪ್ರತಿಪಕ್ಷ ಗಳ ಸಾಲಿನಲ್ಲಿ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು, ಎಸ್.ಶಿವಪ್ಪ, ಕಮ್ಯುನಿಸ್ಟರಾದ ಬಿ.ವಿ.ಕಕ್ಕಿಲ್ಲಾಯ, ಎಂ.ಎಸ್.ಕೃಷ್ಣನ್, ಸೂರ್ಯನಾರಾಯಣರಾವ ಪಂಪಾಪತಿ, ವಿ.ಎನ್.ಪಾಟೀಲ, ಕೃಷ್ಣಶೆಟ್ಟಿ, ಮುಂತಾದವರು ಎದ್ದು ಕಾಣುತ್ತಿದ್ದರು. ಇವರೆಲ್ಲರೂ ಜನತೆಯ ನಡುವಿನಿಂದ ಬಂದವರು. ದಾವಣಗೆರೆಯ ಜವಳಿ ಗಿರಣಿಯಲ್ಲಿ ಕಾರ್ಮಿಕನಾಗಿದ್ದ ಕಾಮ್ರೇಡ್ ಪಂಪಾಪತಿ ಜಾತಿ ಬಲ, ದುಡ್ಡಿನ ಬಲವಿಲ್ಲದೆ ಮೂರು ಬಾರಿ ಶಾಸಕರಾಗಿ ಗೆದ್ದು ಬಂದರು. ಪಂಪಾಪತಿ ಯಾರನ್ನೂ ಜಾತಿ, ಮತ, ಭಾಷೆಯನ್ನು ನೋಡಿ ಪ್ರೀತಿಸಲಿಲ್ಲ. ಜನರೂ ಅವರನ್ನು ಜಾತಿ, ಮತ ನೋಡದೆ ಘಟಾನುಘಟಿ ಸಿರಿವಂತರನ್ನು ಸೋಲಿಸಿ ವಿಧಾನ ಸಭೆಗೆ ಗೆಲ್ಲಿಸಿ ಕಳಿಸುತ್ತಿದ್ದರು.
ಇದೀಗ ಎಲ್ಲ ಭಾರತೀಯರನ್ನು ಒಂದಾಗಿ ಕೂಡಿಸಿಕೊಂಡು ಜೊತೆಗೆ ಕರೆದುಕೊಂಡು ಹೋಗುವ ನಾಯಕರು ವಿರಳ. ಒಂದು ಬಹುಸಂಖ್ಯಾತ ಸಮುದಾಯದಲ್ಲಿ ಹುಸಿ ಭೀತಿಯನ್ನು ಉಂಟು ಮಾಡಿ ನಾಯಕರಾದವರು.ಇವರೊಂದಿಗೆ ಇವರನ್ನು ಸಾಕುವ ಕಾರ್ಪೊರೇಟ್ ಬಂಡವಾಳಶಾಹಿಗಳು, ರಿಯಲ್ ಎಸ್ಟೆಟ್ ಮಾಫಿಯಾಗಳು, ಮೈನಿಂಗ್ ಖದೀಮರು ಸೇರಿದ್ದಾರೆ. ಇದು ಭಾರತದ ಇಂದಿನ ದುರಂತ. ಅದೊಂದು ಕಾಲವಿತ್ತು. ಆಗ ಸಂಸತ್ತಿನ ಉಭಯ ಕದನಗಳಲ್ಲಿ ಜನಪರ ಹೋರಾಟಗಾರರು, ತ್ಯಾಗ ಜೀವಿಗಳು, ವಿದ್ವಾಂಸರು, ವಾಕ್ಪಟುಗಳು, ಕಾನೂನು ಪರಿಣಿತರು ತುಂಬಿರುತ್ತಿದ್ದರು.
ಈಗ ಉದ್ಯಮ ಪತಿಗಳು, ಮೈನಿಂಗ್ ಮಾಫಿಯಾಗಳು, ರಿಯಲ್ ಎಸ್ಟೇಟ್ ದಗಾಕೋರರು, ಕೊಲೆ ಆರೋಪ ಹೊತ್ತವರು, ನಕಲಿ ಎನ್‌ಕೌಂಟರ್ ಕ್ರಿಮಿನಲ್‌ಗಳು ತುಂಬಿದ್ದಾರೆ. ಪ್ರತಿಪಕ್ಷಗಳು ದುರ್ಬಲಗೊಂಡಿವೆ. ಹಿಂದೆ ಲೋಹಿಯಾ ಅಂಥವರು ಸಂಸತ್ತಿಗೆ ಬರಲೆಂದು ನೆಹರೂ ಕಾಂಗ್ರೆಸ್‌ನಿಂದ ದುರ್ಬಲ ಅಭ್ಯರ್ಥಿಯನ್ನು ನಿಲ್ಲಿಸುತ್ತಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆಯವರಂಥ ಸಮರ್ಥ ವಾಕ್ಪಟುಗಳು ಲೋಕಸಭೆಗೆ ಬರಬಾರದೆಂದು ಅವರನ್ನು ಹೇಗೆ ಸೋಲಿಸಿದರೆಂದು ಎಲ್ಲರಿಗೂ ಗೊತ್ತಿದೆ. ಈಗ ಜನ ನಾಯಕರೆಲ್ಲಿದ್ದಾರೆ? ಅಂಬಾನಿ, ಅದಾನಿ ಕೃಪಾ ಪೋಷಿತ ನಾಯಕರೇ ಜನ ನಾಯಕರಾಗಿದ್ದಾರೆ.
ಮಾಧ್ಯಮಗಳ ಮೂಲಕ ಇಂದಿನ ನಾಯಕರ ಇಮೇಜು ವರ್ಧನೆ ಕೆಲಸ ಅವಿರತವಾಗಿ ನಡೆದಿದೆ. ಎಲ್ಲ ಭಾರತೀಯರು ಪ್ರೀತಿಸುವ, ಎಲ್ಲ ಭಾರತೀಯರನ್ನು ಜಾತಿ, ಮತ ನೋಡದೆ ಪ್ರೀತಿಸುವ ನೇತಾರರು ಇವರಲ್ಲ. ಕೊರೋನ ಬಂದರೆ ಬಂಗಲೆ ಬಿಟ್ಟು ಹೊರಗೆ ಬಾರದ, ಸದಾ ಕಿರು ತೆರೆಗಳಲ್ಲಿ ಅಬ್ಬರಿಸುವ ಇವರು ಜನ ನಾಯಕರಲ್ಲ, ಹಾಗೆಂದು ಭ್ರಮೆ ಮೂಡಿಸಿದವರು. ಭಾರತದ ಪ್ರಜಾಪ್ರಭುತ್ವ ಸುರಕ್ಷಿತವಾಗಿ ಇರಬೇಕಾದ್ದರೆ, ಗಾಂಧಿ, ಅಂಬೇಡ್ಕರ್, ಲೋಹಿಯಾ ಅವರಂಥ ನೈತಿಕತೆ ಇರುವ ನಾಯಕರು ಮತ್ತೆ ಈ ಮಣ್ಣಿನಲ್ಲಿ ಬರಬೇಕು.