ಮುಸ್ಲಿಮ್ ತುಷ್ಟೀಕರಣದ ಸುಳ್ಳು ಆರೋಪ
ನ್ಯಾಯಮೂರ್ತಿ ಸಾಚಾರ್ ವರದಿ ಮಾತ್ರವಲ್ಲ, ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ಅಧ್ಯಯನ ವರದಿಗಳು ಮಾತ್ರವಲ್ಲ, 1918ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೇಮಕ ಮಾಡಿದ ಮಿಲ್ಲರ್ ಆಯೋಗ ಮಾಡಿದ ಶಿಫಾರಸಿನ ಪ್ರಕಾರ ಮುಸಲ್ಮಾನರಲ್ಲಿನ ಕೆಲ ಪಂಗಡಗಳನ್ನು ಅತ್ಯಂತ ಹಿಂದುಳಿದವರ ಪಟ್ಟಿಗೆ ಸೇರಿಸಿ, ಮುಸಲ್ಮಾನ ಸಮುದಾಯದ ಕೆಲ ಪಂಗಡಗಳನ್ನು ಹಿಂದುಳಿದವರ ಪಟ್ಟಿಗೆ ಸೇರಿಸಲಾಯಿತು. 1947ರ ನಂತರ ರಚನೆಯಾದ ನ್ಯಾಯಮೂರ್ತಿ ನಾಗೇಗೌಡ ನೇತೃತ್ವದ ಆಯೋಗ, ಹಾವನೂರ ಆಯೋಗ, ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಹಾಗೂ ನ್ಯಾಯಮೂರ್ತಿ ವೆಂಕಟಸ್ವಾಮಿ ನೇತೃತ್ವದ ಆಯೋಗಗಳು ಕೂಡ ಮುಸಲ್ಮಾನರಲ್ಲಿನ ಕೆಲ ಪಂಗಡಗಳು ಅತ್ಯಂತ ಹಿಂದುಳಿದಿವೆ ಎಂದು ಅಧ್ಯಯನ ಮಾಡಿ, ಸರಕಾರಕ್ಕೆ ವರದಿಯನ್ನು ನೀಡಿವೆ. ವೀರಪ್ಪ ಮೊಯ್ಲಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಮುಸಲ್ಮಾನ ಸಮುದಾಯದ ನಾಲಬಂದ್, ಕಸಯಿ, ಮನ್ಸೂರಿ ಮುಂತಾದ ಅತ್ಯಂತ ಹಿಂದುಳಿದ ಹದಿನಾಲ್ಕು ಜಾತಿಗಳನ್ನು ಅತಿ ಹಿಂದುಳಿದವರ ಕೆಟಗರಿಯಲ್ಲಿ ಪ್ರ ವರ್ಗ ‘1:ಬಿ ಅಡಿಯಲ್ಲಿ ಸೇರಿಸಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳೆಂದು ಗುರುತಿಸಿ ಶೇ.4 ಮೀಸಲು ನೀಡಲು ತೀರ್ಮಾನಿಸಲಾಯಿತು. ಆಂಧ್ರಪ್ರದೇಶದಂತೆ ಇದು ಧಾರ್ಮಿಕ ಆಧಾರದ ಮೀಸಲಾತಿ ಅಲ್ಲ. ಕರ್ನಾಟಕ ಮಾತ್ರವಲ್ಲ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮುಸಲ್ಮಾನರನ್ನು ಹಿಂದುಳಿದವರ ಪಟ್ಟಿಗೆ ಸೇರಿಸಿ ಮೀಸಲಾತಿ ನೀಡಲಾಗಿದೆ.
ಈ ಭಾರತದಲ್ಲಿ ಸರಕಾರದ ಯಾವುದೇ ಸವಲತ್ತು ಪಡೆಯದೆ, ಯಾವುದೇ ವಿಶೇಷ ಮೀಸಲಾತಿಯನ್ನು ಕೇಳದೆ, ಅತ್ಯಂತ ಹಿಂದುಳಿದ ಸಮುದಾಯವೆಂದರೆ ಅದು ಅಲ್ಪ ಸಂಖ್ಯಾತ ಮುಸ್ಲಿಮ್ ಸಮುದಾಯ ಎಂದು ವ್ಯಾಖ್ಯಾನಿಸಿದರೆ ಅತಿಶಯೋಕ್ತಿ ಆಗುವುದಿಲ್ಲ. ಸರಕಾರಿ ನೌಕರಿಯಲ್ಲೂ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇರುವ ಈ ಸಮುದಾಯದ ಜನ ಸಾಮಾನ್ಯರು ತಮ್ಮ ಪಾಡಿಗೆ ತಾವು ಗ್ಯಾರೇಜುಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಕಡು ಬಡತನದಲ್ಲಿ ಇರುವ ಮುಸಲ್ಮಾನರ ಬಗ್ಗೆ ನಿರಂತರ ಅಪಪ್ರಚಾರ ಮಾಡುತ್ತ, ಬಹುಸಂಖ್ಯಾತ ಹಿಂದುಳಿದವರನ್ನು ಹಾಗೂ ದಲಿತ ಸಮುದಾಯಗಳನ್ನು ಅವರ ವಿರುದ್ಧ ಎತ್ತಿಕಟ್ಟುತ್ತ ಒಂದು ವಿಧದ ಭಯದ ವಾತಾವರಣವನ್ನು ನಿರ್ಮಾಣ ಮಾಡಿದೆ. ವಾಸ್ತವವಾಗಿ ಈ ಬಹುತ್ವ ಭಾರತವನ್ನು ಕಟ್ಟಿದ ದುಡಿಯುವ ಜನರಲ್ಲಿ ಮುಸ್ಲಿಮರು ಮೊದಲ ಸ್ಥಾನ ದಲ್ಲಿ ಇದ್ದಾರೆ. ನಿರಂತರ ಆತಂಕದಲ್ಲಿ ಇರುವ ಅದರಲ್ಲೂ ಅಯೋಧ್ಯೆಯ ಬಾಬರಿ ಮಸೀದಿಯನ್ನು ನೆಲಕ್ಕುರುಳಿಸಿದ ನಂತರ ಮುಸ್ಲಿಮ್ ಮತ್ತು ಕ್ರೈಸ್ತ ಅಲ್ಪ ಸಂಖ್ಯಾತರ, ಅದರಲ್ಲೂ ಮುಸ್ಲಿಮ್ ಅಲ್ಪಸಂಖ್ಯಾತರ ಪರಿಸ್ಥಿತಿ ದಾರುಣವಾಗಿದೆ. ಸರಕಾರದಿಂದ ಯಾವುದೇ ಸಾಂವಿಧಾನಿಕ ಸೌಕರ್ಯಗಳನ್ನು ಕೇಳದ ಮುಸ್ಲಿಮರು ತಮ್ಮ ಪಾಡಿಗೆ ದುಡಿಯಲು ಬಿಟ್ಟರೆ ಸಾಕು ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ಮುಸ್ಲಿಮರನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಿಸಲು ದಿನಕ್ಕೊಂದು ಸುಳ್ಳು ಕತೆಗಳನ್ನು ಕಟ್ಟುತ್ತಿದ್ದಾರೆ. ಲವ್ ಜಿಹಾದ್, ಗೋ ಹತ್ಯೆ, ವಕ್ಫ್, ಬುರ್ಖಾ ಹೀಗೆ ನಿರಂತರ ಸುಳ್ಳು ಪ್ರಚಾರ ನಡೆಸಿದ್ದಾರೆ. ಇದು ಎಲ್ಲಿಗೆ ಹೋಗಿ ತಲುಪಿದೆಯೆಂದರೆ ಇತ್ತೀಚೆಗೆ ಮುಂಬೈನ ಅಪಾರ್ಟ್‌ಮೆಂಟ್ ಒಂದರಲ್ಲಿ ಒಂದು ಪುಟ್ಟ ಮನೆಯನ್ನು ಖರೀದಿಸಿದ ಮುಸ್ಲಿಮ್ ವ್ಯಕ್ತಿಯೊಬ್ಬರ ವಿರುದ್ಧ ಈ ಅಪಾರ್ಟ್‌ಮೆಂಟ್‌ನ ಉಳಿದವರನ್ನು ಎತ್ತಿ ಕಟ್ಟಿ ‘ಇಲ್ಲಿ ಮುಸ್ಲಿಮರಿಗೆ ಮನೆ ಕೊಡಲು ನಾವು ಬಿಡುವುದಿಲ್ಲ’ ಎಂದು ಬೆದರಿಕೆ ಹಾಕುವಂತೆ ಮಾಡಿದ್ದಾರೆ.
ಚುನಾವಣೆ ಬಂದರೆ ಸಾಕು ಯಾವುದೇ ಆರ್ಥಿಕ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಹಾಗೂ ಬಡತನ ನಿವಾರಣೆ ಕುರಿತು ಕಾರ್ಯಕ್ರಮ ಇಟ್ಟುಕೊಂಡು ಜನರ ಬಳಿ ಹೋಗದೇ ಒಂದು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷವನ್ನು ಕೆರಳಿಸಿ ಸುಡು ಬೆಂಕಿಯಲ್ಲಿ ಓಟಿನ ಬೆಳೆ ತಗೆಯುತ್ತಾ ಅರಾಜಕ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ಮುಸ್ಲಿಮ್ ಜನಸಂಖ್ಯೆಯಿಂದ ಹಿಂದೂಗಳು ಭಯದ ವಾತಾವರಣದಲ್ಲಿ ಇದ್ದಾರೆ ಎಂದು ಕತೆ ಕಟ್ಟುತ್ತಾರೆ. ಇದಕ್ಕಾಗಿ ಕೋಮು ಧ್ರುವೀಕರಣಕ್ಕೆ ಪ್ರಚೋದಿಸುವ ಸಲುವಾಗಿ ಈ ಬಾರಿ ವಕ್ಫ್ ವಿಷಯವನ್ನು ಕೆದಕಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಎಂದೂ ಬಡವರ ಹಾಗೂ ಜನಸಾಮಾನ್ಯರ ಏಳಿಗೆಯ ಬಗ್ಗೆ ಮಾತಾಡದ ಬಿಜೆಪಿ ಮುಸ್ಲಿಮ್ ವಿರೋಧಿ ಅಪಪ್ರಚಾರ ನಡೆಸಿದೆ. ಅದಕ್ಕಾಗಿ ಹಿಂದೆ ಅಯೋಧ್ಯೆಯ ಬಗ್ಗೆ ಮಾತ್ರ ಮಾತಾಡುತ್ತಿದ್ದ ಈ ಕೋಮುವಾದಿಗಳು ಈಗ ಕಾಶಿ, ಮಥುರಾ ಬಗ್ಗೆ ಕಿತಾಪತಿ ನಡೆಸಿದ್ದಾರೆ. ಇವಲ್ಲದೆ ದೇಶದಲ್ಲಿ ಬಾಬಾ ಬುಡಾನ್‌ಗಿರಿ ಸೇರಿದಂತೆ ಸುಮಾರು ಮೂರು ಸಾವಿರ ಮಸೀದಿಗಳು ಹಿಂದೂ ದೇವಾಲಯಗಳಾಗಿದ್ದವು ಎಂದು ಹೇಳುತ್ತ ಬಡವರ, ದಲಿತರ, ಅಲ್ಪಸಂಖ್ಯಾತ ಸಮುದಾಯದ ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ಮೂಲೆಗೆ ತಳ್ಳಿ ಮನಸ್ಸು ಒಡೆಯುವ ದೇಶ ದ್ರೋಹಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿದ್ದಾರೆ. ಸಾವರ್ಕರ್ ಮತ್ತು ಗೋಳ್ವಾಲ್ಕರ್ ಅವರ ಪರಿಕಲ್ಪನೆಯ ಮನುವಾದಿ ಹಿಂದೂರಾಷ್ಟ್ರವನ್ನು ನಿರ್ಮಾಣ ಮಾಡಲು ನಿರಂತರ ಮಸಲತ್ತು ನಡೆಸಿದ್ದಾರೆ.
ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವಿದ್ದಾಗ ಮುಸ್ಲಿಮ್ ಸಮುದಾಯದ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಧ್ಯಯನ ನಡೆಸಿ ವರದಿ ನೀಡಲು 2005ರ ಮಾರ್ಚ್ 9ರಂದು ನ್ಯಾಯಮೂರ್ತಿ ರಾಜೇಂದ್ರ ಸಿಂಗ್ ಸಾಚಾರ್ ಅವರ ನೇತೃತ್ವದಲ್ಲಿ ಏಳು ಮಂದಿಯ ಸಮಿತಿಯನ್ನು ರಚಿಸಲಾಯಿತು. ಈ ಸಾಚಾರ್ ಸಮಿತಿ ಇಡೀ ಭಾರತದ ಮುಸಲ್ಮಾನ್ ಸಮುದಾಯದ ಬಗ್ಗೆ ಅಧ್ಯಯನ ನಡೆಸಿ 2006ರ ನವೆಂಬರ್ ತಿಂಗಳಲ್ಲಿ ತಮ್ಮ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿತು. ಇಷ್ಟೇ ಅಲ್ಲದೆ ಮುಸ್ಲಿಮ್ ತುಷ್ಟೀಕರಣದ ಕೋಮುವಾದಿಗಳ ಸುಳ್ಳು ಪ್ರಚಾರವನ್ನು ತಳ್ಳಿ ಹಾಕಿದ ನ್ಯಾಯಮೂರ್ತಿ ಸಾಚಾರ್ ನೇತೃತ್ವದ ಸಮಿತಿ ಶಿಕ್ಷಣ, ಉದ್ಯೋಗ ಮತ್ತು ಬ್ಯಾಂಕುಗಳ ಸಾಲ ಪಡೆಯುವ ವಿಚಾರದಲ್ಲಿ ಅತ್ಯಂತ ಹಿಂದುಳಿದ ಸಮುದಾಯವೆಂದರೆ ಅದು ಮುಸ್ಲಿಮ್ ಸಮುದಾಯ ಎಂದು ಅಧಿಕೃತ ಅಂಕಿ ಸಂಖ್ಯೆಗಳ ಸಹಿತ ವರದಿಯನ್ನು ಸರಕಾರಕ್ಕೆ ನೀಡಿತು. ಆದರೆ ಈ ಸಾಚಾರ್ ಸಮಿತಿಯ ವರದಿ ಕಪಾಟಿನಲ್ಲಿ ಧೂಳು ತಿನ್ನುತ್ತ ಬಿದ್ದಿದೆ.
ವಾಸ್ತವವಾಗಿ ಮುಸ್ಲಿಮ್ ಸಮುದಾಯದಲ್ಲೂ ಎಲ್ಲರೂ ಒಂದೇ ಸ್ಥಿತಿಯಲ್ಲಿ ಇಲ್ಲ. ಅವರಲ್ಲಿ ಶ್ರೀಮಂತರು ಕೆಲವು ಕಡೆ ಇದ್ದು, ಬೆರಳೆಣಿಕೆಯಷ್ಟು ಕೋಟ್ಯಧೀಶರು ಇದ್ದರೂ, ಕಡು ಬಡವರ ಸಂಖ್ಯೆ ಶೇ.98ರಷ್ಟಿದೆ. ಈ ಸಮುದಾಯದಲ್ಲಿ ಅಜೀಮ್ ಪ್ರೇಮ್‌ಜಿ ಅವರಂಥ ಕೋಟ್ಯಧೀಶರು ಇದ್ದರೂ ಉಳಿದವರ ಪರಿಸ್ಥಿತಿ ದಾರುಣವಾಗಿದೆ. ಅಜೀಮ್ ಪ್ರೇಮ್‌ಜಿ ಕೂಡ ತಮ್ಮ ಆದಾಯದಲ್ಲಿ ಕರ್ನಾಟಕದ ಹಿಂದುಳಿದ ಪ್ರದೇಶಗಳ ಉನ್ನತಿಗಾಗಿ ವ್ಯಯಿಸುತ್ತಿದ್ದಾರೆ.
ನ್ಯಾಯಮೂರ್ತಿ ಸಾಚಾರ್ ನೇತೃತ್ವದ ಸಮಿತಿ ಮಾತ್ರವಲ್ಲ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ನೇತೃತ್ವದ ಸಮಿತಿ ಕೂಡ ತನ್ನ ವರದಿಯಲ್ಲಿ ಮುಸಲ್ಮಾನ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯ ಎಂದು ಅಧಿಕೃತ ದಾಖಲೆಗಳ ಸಹಿತ ವರದಿಯನ್ನು ನೀಡಿತು. ಆದರೆ ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರ ಮುಸ್ಲಿಮರಿಗೆ ಇದ್ದ ಶೇ.4 ಮೀಸಲನ್ನು ರದ್ದು ಪಡಿಸಿ, ಅದನ್ನು ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿತು. ಇದು ಬೊಮ್ಮಾಯಿ ಸರಕಾರದ ಸ್ವಂತ ತೀರ್ಮಾನವಲ್ಲ, ಬದಲಿಗೆ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಆಣತಿಯಂತೆ ಕೈಗೊಂಡ ತೀರ್ಮಾನ. ವಾಸ್ತವವಾಗಿ ಮುಸ್ಲಿಮ್ ಸಮುದಾಯದ ಆರ್ಥಿಕ ಮಾತ್ರವಲ್ಲ ಸಾಮಾಜಿಕ ಪರಿಸ್ಥಿತಿಯು ಅತ್ಯಂತ ಚಿಂತಾಜನಕವಾಗಿದ್ದರೂ ಕರ್ನಾಟಕದ ಹಿಂದಿನ ಬಿಜೆಪಿ ಸರಕಾರ ಮುಸಲ್ಮಾನರ ಸಾಂವಿಧಾನಾತ್ಮಕ ಹಕ್ಕುಗಳನ್ನು ದಮನ ಮಾಡಿತು.
ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದಿರುವ ಮುಸಲ್ಮಾನ ಸಮುದಾಯದಲ್ಲಿ ನದಾಫ್, ಪಿಂಜಾರ ಪಂಗಡಗಳು ಕಡು ಬಡತನದಲ್ಲಿವೆ. ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಇಂದಿಗೂ ಪಾರಂಪರಿಕ ವೃತ್ತಿಗಳನ್ನೇ ಅವಲಂಬಿಸಿ ಬದುಕನ್ನು ಸಾಗಿಸುತ್ತಿದ್ದಾರೆ. ಕಡು ಬಡತನದಲ್ಲಿ ಇರುವ ಪಿಂಜಾರರು ಬದುಕಿಗಾಗಿ ಹತ್ತಿ, ಅರಳೆಯಿಂದ ಗಾದಿಯನ್ನು ತಯಾರಿಸುವ ಮತ್ತು ನಾರಿನಿಂದ ಹಗ್ಗವನ್ನು ತಯಾರಿಸುವ ಕುಲ ಕಸುಬನ್ನು ಅವಲಂಬಿಸಿ ಬದುಕನ್ನು ಸಾಗಿಸುತ್ತಿದ್ದಾರೆ. ಯಾವುದೇ ಭೂಮಿಯ ಒಡೆತನವಿಲ್ಲದೇ, ಯಾವುದೇ ಸ್ಥಿರಾಸ್ತಿಯನ್ನು ಹೊಂದದ ಪಿಂಜಾರರು ಅತ್ಯಂತ ದಾರುಣ ಪರಿಸ್ಥಿತಿಯಲ್ಲಿದ್ದಾರೆ. ಗಾದಿಯನ್ನು ತಯಾರಿಸುವುದು ಮಾತ್ರವಲ್ಲದೇ ರೈತರಿಗೆ ಅಗತ್ಯವಿರುವ ಸಲಕರಣೆಗಳಾದ ಹಗ್ಗ, ಎತ್ತುಳಿಗೆ ಮೂಗುದಾರ ಮುಂತಾದ ಉಪಕರಣಗಳನ್ನು ಮನೆಯಲ್ಲಿ ತಯಾರಿಸಿ ಅವುಗಳನ್ನು ಜಾತ್ರೆ, ಸಂತೆಗಳಲ್ಲಿ ರೈತರಿಗೆ ಮಾರಾಟ ಮಾಡಿ ಅತ್ಯಂತ ಅಲ್ಪ ಆದಾಯದಲ್ಲಿ ಬದುಕನ್ನು ಸಾಗಿಸುತ್ತಿದ್ದಾರೆ. ಆದರೆ ಮಾರುಕಟ್ಟೆ ಆರ್ಥಿಕತೆ ಹಾಗೂ ಜಾಗತೀಕರಣದ ಪರಿಣಾಮವಾಗಿ ಪಾರಂಪರಿಕವಾದ ಉದ್ಯೋಗಗಳು ಇವರ ಕೈ ತಪ್ಪುತ್ತಿವೆ. ಹೀಗಾಗಿ ಕಡು ಬಡತನದಿಂದ ಬೆಂದು ಹೋಗುತ್ತಿದ್ದಾರೆ.
ಸರಕಾರವೇನೋ ಈ ಸಮುದಾಯಗಳ ಅಭಿವೃದ್ಧಿಗಾಗಿ ನಿಮಗ ಸ್ಥಾಪನೆ ಮಾಡಿದ್ದರೂ ಇನ್ನೂ ಈ ನಿಗಮಕ್ಕೆ ಸದಸ್ಯರನ್ನು ನೇಮಕ ಮಾಡಿಲ್ಲ. ಹೀಗಾಗಿ ಈ ಸಮುದಾಯಗಳ ಕುಲ ಕಸುಬನ್ನು ಕಾಪಾಡಲು ಸರಕಾರ ಮುಂದಾಗಬೇಕು. ಇವರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಕರ್ಯಗಳನ್ನು ಒದಗಿಸಬೇಕು. ಸಾಚಾರ್ ಮತ್ತು ಚಿನ್ನಪ್ಪ ರೆಡ್ಡಿ ಆಯೋಗಗಳ ಶಿಫಾರಸುಗಳ ಪ್ರಕಾರ ಸಕಲ ಸೌಕರ್ಯಗಳನ್ನು ಕಲ್ಪಿಸಬೇಕು. ಬಹುತೇಕ ಕನ್ನಡ ಭಾಷೆಯನ್ನು ಆಡುವ ಈ ಪಿಂಜಾರ ಮತ್ತು ನದಾಫ್ ಪಂಗಡಗಳಲ್ಲಿ ಹೆಚ್ಚಿನವರಿಗೆ ಉರ್ದು ಭಾಷೆಗಿಂತ ಕನ್ನಡ ಭಾಷೆ ಚೆನ್ನಾಗಿ ಬರುತ್ತದೆ. ಸರಕಾರ ಗುಡಿ ಗುಂಡಾರಗಳಿಗೆ ಕೋಟ್ಯಂತರ ರೂಪಾಯಿ ಅನುದಾನವನ್ನು ನೀಡುವ ಬದಲಿಗೆ ಕಷ್ಟದಲ್ಲಿರುವ ಈ ಸಮುದಾಯಗಳ ನೆರವಿಗೆ ಮುಂದಾಗಲಿ. ಎಲ್ಲಕ್ಕಿಂತ ಮೊದಲು ಕೋಮು ದ್ವೇಷದ ಬೆಂಕಿಯಲ್ಲಿ ನಾಶವಾಗದಂತೆ ಇವರಿಗೆ ರಕ್ಷಣೆ ನೀಡಲು ಸರಕಾರ ಕ್ರಮ ಕೈಗೊಳ್ಳಲಿ.