ವಿದೇಶದಲ್ಲಿ ಗಾಂಧಿ: ಸ್ವದೇಶದಲ್ಲಿ ಗೋಡ್ಸೆ
ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಂಡ ಜಾಗತಿಕ ನಾಯಕರು ರಾಜ್‌ಘಾಟ್ ನಲ್ಲಿರುವ ಮಹಾತ್ಮ್ಮಾ ಗಾಂಧೀಜಿಯವರ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಇದು ಗಾಂಧೀಜಿಯವರು ಇಂದಿಗೂ ಪ್ರಸ್ತುತರಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್ ನಲ್ಲಿ ಹೇಳಿದರು. ನಿಜ, ಪ್ರಧಾನಿಯವರು ಹೇಳಿದಂತೆ ದಿಕ್ಕೆಟ್ಟು ನಿಂತ ಜಗತ್ತು ಭಾರತದ ಬಾಪುವಿನತ್ತ ನೋಡುತ್ತಿದೆ. ಜಾಗತಿಕವಾಗಿ ಗಾಂಧಿ ಮಾತ್ರವಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ಗಮನ ಸೆಳೆಯುತ್ತಿದ್ದಾರೆ. ಅವರ ಮೇಲೂ ಹೊಸ ಹೊಸ ಪುಸ್ತಕಗಳು ಬರುತ್ತಿವೆ.
ಗಾಂಧೀಜಿ ಮತ್ತು ಅಂಬೇಡ್ಕರ್ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ನಾವು ಈ ಕಾಲಘಟ್ಟದಲ್ಲಿ ನಿಂತು ನಮಗೆ ತಿಳಿದಂತೆ ವ್ಯಾಖ್ಯಾನಗಳನ್ನು ಮಾಡುತ್ತಿದ್ದೇವೆ. ಆದರೆ, ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯ ತಾತ್ವಿಕವಾದದ್ದು. ಅದು ಎಂದಿಗೂ ವೈಯಕ್ತಿಕ ದ್ವೇಷವಾಗಲಿಲ್ಲ. ಇದು ಅವರಿಬ್ಬರ ಆಲೋಚನೆಗಳು ಮೇಳೈಸಬೇಕಾದ ಕಾಲಘಟ್ಟ. ಈಗ ಅದರ ಪ್ರಸ್ತಾಪ ಬೇಡ. ಗಾಂಧಿ ಜಯಂತಿ ದಿನ ಅವರ ಬಗ್ಗೆ ಆಲೋಚಿಸೋಣ.
ಸ್ವಾತಂತ್ರ್ಯ ಗೆದ್ದುಕೊಂಡ ನಂತರ ಕಾಂಗ್ರೆಸ್‌ನ ಉಳಿದ ನಾಯಕರು ದಿಲ್ಲಿಯಲ್ಲಿ ಹೊಸ ಸರಕಾರ ರಚನೆಯಲ್ಲಿ, ನೂತನ ಪ್ರಧಾನಿಯ ಆಯ್ಕೆಯಲ್ಲಿ ನಿರತರಾಗಿದ್ದಾರೆ. ಗಾಂಧೀಜಿ ಮಾತ್ರ ಆಗ ಭುಗಿಲೆದ್ದ ಕೋಮು ದಳ್ಳುರಿಯನ್ನು ನಂದಿಸಲು ನೌಖಾಲಿಯಲ್ಲಿ ಕಲ್ಲು ಮುಳ್ಳುಗಳ ಮೇಲೆ ಕಾಲಿಡುತ್ತ ಪಾದಯಾತ್ರೆ ಮಾಡುತ್ತಿದ್ದರು. ಹಿಂದೂಗಳು ಮತ್ತು ಮುಸಲ್ಮಾನರು ತನ್ನ ಎರಡು ಕಣ್ಣುಗಳು ಎಂದು ಹೇಳುತ್ತ ಸೌಹಾರ್ದ ಬಯಸಿದ ಗಾಂಧಿ ಕೊನೆಗೆ ಸೌಹಾರ್ದದ ಶತ್ರುವಾಗಿದ್ದ ನಾಥೂರಾಮ್ ಗೋಡ್ಸೆಯ ಗುಂಡಿಗೆ ಬಲಿಯಾದರು.
ನಾಥೂರಾಮ್ ಗೋಡ್ಸೆ ಯಾರು? ಆತನ ಸೈದ್ಧಾಂತಿಕ ಹಿನ್ನೆಲೆ ಯಾವುದು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನನ್ನು ತಾನು ಸುಟ್ಟುಕೊಂಡು ಬೆಳಕು ನೀಡಿದ ಗಾಂಧಿ ಗೋಡ್ಸೆ ಪಾಲಿಗೆ ಶತ್ರುವಾಗಿದ್ದರು. ನೋವಿನ ಸಂಗತಿಯೆಂದರೆ ಸ್ವಾತಂತ್ರ್ಯದ ಏಳು ದಶಕಗಳ ನಂತರ ಈ ಮಹಾತ್ಮನನ್ನು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಅಸಹ್ಯವಾಗಿ ನಿಂದಿಸುವ, ಗೋಡ್ಸೆಯನ್ನು ಮಹಾನ್ ರಾಷ್ಟ್ರ ಭಕ್ತ ಎಂದು ಹೊಗಳುವ ಪೀಳಿಗೆಯೊಂದು ಇಲ್ಲಿ ಹುಟ್ಟಿಕೊಂಡಿದೆ. ಅದರ ಸೈದ್ಧಾಂತಿಕ ಹಿನ್ನೆಲೆ ಯಾವುದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.
ನಮ್ಮ ಪ್ರಧಾನ ಮಂತ್ರಿ ಮೋದಿಯವರೂ ವಿದೇಶ ಪ್ರಯಾಣ ಮಾಡಿದಾಗೆಲ್ಲ ನಾನು ಗಾಂಧಿ ಜನಿಸಿದ ದೇಶದಿಂದ ಬಂದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಜಾಗತಿಕವಾಗಿ ಗಾಂಧಿ ಇಂದಿಗೂ ಭಾರತದ ಬಹುದೊಡ್ಡ ಬ್ರ್ಯಾಂಡ್ ಆಗಿದ್ದಾರೆ. ಬಿಜೆಪಿ ಸ್ವಚ್ಛ ಭಾರತ ಅಭಿಯಾನಕ್ಕೂ ಗಾಂಧಿಯವರನ್ನು ಬಳಸಿಕೊಳ್ಳುತ್ತಿದೆ. ಪ್ರಧಾನಿ ಮೋದಿಯವರು ಚರಕದಿಂದ ನೂಲು ತೆಗೆಯುತ್ತಿರುವ ಚಿತ್ರ ಎಲ್ಲೆಡೆ ವಿಜೃಂಭಿಸುತ್ತಿದೆ. ಇನ್ನೊಂದು ವಿರೋಧಾಭಾಸವೆಂದರೆ ಜಾಗತಿಕವಾಗಿ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳಲು ಬಾಪು ಹೆಸರನ್ನು ಬಳಸಿಕೊಳ್ಳುವವರು ಆಂತರಿಕವಾಗಿ ಒಳಗೊಳಗೆ ಗುಟ್ಟಾಗಿ ನಾಥೂರಾಮ್ ಗೋಡ್ಸೆಯ ಆರಾಧಕರ ಭಕ್ತ ಮಂಡಲಿಯನ್ನು ತಯಾರು ಮಾಡುತ್ತಿದ್ದಾರೆ.
ಪ್ರತಿ ವರ್ಷ ಜನವರಿ 30ರಂದು ಗಾಂಧಿ ಹತ್ಯೆಯಾದ ದಿನದಂದು ರಾಜಕೀಯ ನಾಯಕರು ರಾಜ್‌ಘಾಟ್ ನಲ್ಲಿ ಇರುವ ಗಾಂಧಿ ಸಮಾಧಿಗೆ ಹೋಗಿ ಪುಷ್ಪ ನಮನವನ್ನು ಸಲ್ಲಿಸಿದರೆ, ಸಾಮಾಜಿಕ ಜಾಲತಾಣದಲ್ಲಿ ಗೊಡ್ಸೆಯನ್ನು ಗೌರವಿಸುವ, ಹೊಗಳುವ, ಆತನಿಗೆ ನಮನ ಸಲ್ಲಿಸುವ ಪೋಸ್ಟ್ ಗಳು ಸಾಮಾನ್ಯವಾಗಿವೆ. ಭಾರತದ ವಿಭಜನೆಗೆ ಗಾಂಧಿ ಕಾರಣ ಅವರನ್ನು ಗೋಡ್ಸೆ ಹತ್ಯೆ ಮಾಡಿದ್ದು ಸರಿಯಾಗಿದೆ ಎಂದು ಮಹಾತ್ಮ ನ ಹತ್ಯೆಯನ್ನು ಸಂಭ್ರಮಿಸುವ ಸಭೆಗಳೂ ಕೆಲವೆಡೆ ನಡೆಯುತ್ತವೆ.
ಭಾರತದ ವಿಭಜನೆಯ ಕಹಿಯನ್ನು ಮರೆತು ಹೊಸ ದೇಶವನ್ನು ಕಟ್ಟಬೇಕಾದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು 2021 ಆಗಸ್ಟ್ 14ರಂದು ದೇಶ ವಿಭಜನೆಯನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕೆಂದು ಸಂದೇಶ ನೀಡಿದರು. ವಿಭಜನೆಗೆ ಗಾಂಧಿ, ನೆಹರೂ ಕಾರಣ ಎಂದು ಕೋಮುವಾದಿ ಶಕ್ತಿಗಳು ನಿರಂತರವಾಗಿ ಅಪಪ್ರಚಾರ ನಡೆಸಿರುವಾಗ ವಿಭಜನೆಯನ್ನು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕೆಂಬ ಸಂದೇಶದ ಅರ್ಥವೇನು? ಜಾಗತಿಕ ಮನ್ನಣೆಗೆ ಮಾತ್ರ ಗಾಂಧಿ ಬೇಕೆ?.
ಮೋದಿಯವರು ಸೇರಿದಂತೆ ಅವರ ಪಕ್ಷದ ಬಹುತೇಕ ನಾಯಕರು ಯಾವುದೇ ಚುನಾವಣೆ ಬಂದರೆ ಬಹುಸಂಖ್ಯಾತ ಓಟ್ ಬ್ಯಾಂಕ್ ನಿರ್ಮಿಸಿ ಲಾಭ ಮಾಡಿಕೊಳ್ಳಲು ಪ್ರಚೋದನಾಕಾರಿ ಮಾತುಗಳನ್ನು ಆಡುತ್ತಾರೆ. 2022ರಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರು ಇದು ಶೇ.80 ಮತ್ತು ಶೇ.20ರ ನಡುವಿನ ಯುದ್ಧ ಎಂದು ನೇರವಾಗಿ ಹೇಳಿದರು. ಅಂದರೆ ಬಹುಸಂಖ್ಯಾತ ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಮುಸಲ್ಮಾನರ ನಡುವಿನ ಸಮರ ಎಂಬುದು ಅವರ ವ್ಯಾಖ್ಯಾನ. 2014ರಲ್ಲಿ ದಿಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಮಂತ್ರಿ ಸಾಧ್ವಿ ನಿರಂಜನ ಜ್ಯೋತಿ ಅವರು ಮುಸಲ್ಮಾನರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದರು.
ಮೋದಿಯವರು ಮಾತ್ರವಲ್ಲ ಅವರ ಬಿಜೆಪಿ ಪಕ್ಷಕ್ಕೆ ಎರಡು ಮುಖಗಳಿವೆ. ವಿದೇಶದಲ್ಲಿ ಗಾಂಧೀಜಿ ಹೆಸರು ಹೇಳಿ ಲಾಭ ಪಡೆಯುತ್ತದೆ.ದೇಶದೊಳಗೆ ಗೋಡ್ಸೆ ಆರಾಧಕರಿಗೆ ಪ್ರೋತ್ಸಾಹ ನೀಡುತ್ತದೆ. 2019ರಲ್ಲಿ ಭೋಪಾಲದ ಬಿಜೆಪಿ ಸಂಸತ್ ಸದಸ್ಯೆ ಸಾಧ್ವಿ ಪ್ರಜ್ಞಾ ಠಾಕೂರ್ ಬಹಿರಂಗವಾಗಿ ಗೋಡ್ಸೆಗೆ ಶ್ಲಾಘಿಸಿದರು. ನಂತರ ಎಲ್ಲೆಡೆ ಆಕ್ಷೇಪ ಬಂದಾಗ ಒತ್ತಡ ಹೇರಿ ಆಕೆಯಿಂದ ಕ್ಷಮಾ ಯಾಚನೆ ಮಾಡಿಸಲಾಯಿತು. ಮೋದಿಯವರೂ ಆಕೆಯನ್ನು ಟೀಕಿಸಿದಂತೆ ಮಾಡಿದರು. ಆದರೆ, ಆಕೆಯ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಜಿ20 ಸಭೆ ನಡೆದ ಸಂದರ್ಭದಲ್ಲಿ ರಾಜ್‌ಘಾಟ್‌ಗೆ ಭೇಟಿ ನೀಡಿದ ಜಾಗತಿಕ ನಾಯಕರನ್ನು, ವಿವಿಧ ದೇಶಗಳ ಮುಖ್ಯಸ್ಥರನ್ನು ಮೋದಿಯವರು ಗಾಂಧಿ ಹೆಸರು ಹೇಳಿ ಸ್ವಾಗತಿಸುವ ಮೂಲಕ ತನ್ನ ನಾಯಕತ್ವದ ಇಮೇಜ್ ಉಳಿಸಿಕೊಂಡರು. ಆದರೆ ಮೋದಿಯವರಾಗಲಿ, ಅವರ ಪಕ್ಷವಾಗಲಿ, ಅವರ ಸೈದ್ಧಾಂತಿಕ ಪರಿವಾರವಾಗಲಿ ಮಹಾತ್ಮ್ಮಾ ಗಾಂಧಿಯವರ ಸತ್ಯ, ಅಹಿಂಸೆ, ಕೋಮು ಸೌಹಾರ್ದ, ಶತ್ರುಗಳ ಜೊತೆ ಸಂವಾದದಂಥ ಮೌಲ್ಯಗಳನ್ನು ಯಾಕೆ ಎತ್ತಿ ಹಿಡಿಯುವುದಿಲ್ಲ? ಭಾರತದಲ್ಲಿ ಇರುವ ವಿಭಿನ್ನ ಧರ್ಮಗಳು ಮತ್ತು ಸಂಸ್ಕೃತಿಗಳನ್ನು ಯಾಕೆ ಗೌರವಿಸುವುದಿಲ್ಲ?
ಮಹಾತ್ಮ್ಮಾ ಗಾಂಧೀಜಿಯವರ ಆಶ್ರಮಗಳಲ್ಲಿ ‘ರಘುಪತಿ ರಾಘವ ರಾಜಾರಾಮ ಈಶ್ವರ ಅಲ್ಲಾ ತೇರೇ ನಾಮ’ ಎಂಬ ಭಜನಾ ಪದವನ್ನು ನಿತ್ಯ ಹಾಡುತ್ತಿದ್ದರು. ಜಿ20 ಸಭೆಗೆ ಬಂದ ವಿಶ್ವ ನಾಯಕರು ರಾಜ್‌ಘಾಟ್‌ಗೆ ಭೇಟಿ ನೀಡಿದಾಗಲೂ ಮೆಲು ದನಿಯಲ್ಲಿ ಈ ಭಜನಾ ಪದ ಬಿತ್ತರಿಸಲಾಗುತ್ತಿತ್ತು. ಗಾಂಧಿ ಪರಿಕಲ್ಪನೆಯ ಈ ರಾಮನನ್ನು ಬಿಜೆಪಿ ಒಪ್ಪುವುದೇ? ಇದನ್ನು ಒಪ್ಪದ ವಿನಾಯಕ ದಾಮೋದರ ಸಾವರ್ಕರ್ ಗಾಂಧೀಜಿ ಅವರನ್ನು ವಿರೋಧಿಸುತ್ತಿದ್ದರು. ಬಿಜೆಪಿ ಮಹಾರಾಷ್ಟ್ರದಲ್ಲಿ ಸಾವರ್ಕರ್ ಗೌರವ ಯಾತ್ರೆಯನ್ನು ನಡೆಸಿದೆ. ಪ್ರಧಾನಿ ನರೇಂದ್ರ ಮೋದಿಯವರು, ಸಾವರ್ಕರ್ ಮಹಾನ್ ರಾಷ್ಟ್ರ ಭಕ್ತ ಎಂದು ಹೊಗಳುತ್ತಾರೆ. ಅಂಡಮಾನಿನಲ್ಲಿ ಸಾವರ್ಕರ್ ಜೈಲ್ ಸೆಲ್‌ಗೆ ಭೇಟಿ ನೀಡಿದ್ದಾಗಿ ಮೋದಿಯವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸಾವರ್ಕರ್ ಉಗ್ರ ರಾಷ್ಟ್ರೀಯವಾದಿ ಮತ್ತು ಚಿಂತಕ ಆಗಿರಬಹುದು. ಆದರೆ ಮಹಾತ್ಮ್ಮಾ ಗಾಂಧಿಯವರ ಸರ್ವಧರ್ಮ ಸಮಭಾವದ ತತ್ವವನ್ನು ಸಾವರ್ಕರ್ ಒಪ್ಪುತ್ತಿರಲಿಲ್ಲ. ಭಾರತ ಹಿಂದೂರಾಷ್ಟ್ರ ಆಗಬೇಕೆಂದು ಪ್ರತಿಪಾದಿಸುತ್ತಿದ್ದರು.
ರಾಜಕೀಯ ಭಿನ್ನಾಭಿಪ್ರಾಯ ಇರುವವರೊಂದಿಗೆ ಮಾತುಕತೆ ನಡೆಸಬೇಕೆಂಬ ಮುಕ್ತ ಮನಸ್ಸು ಗಾಂಧೀಜಿ ಅವರಿಗಿತ್ತು. ಅಂತಲೇ ಡಾ.ಅಂಬೇಡ್ಕರ್ ಮತ್ತು ಜಿನ್ನಾ ಜೊತೆಗೆ ಮಾತಕತೆಗೆ ಅವರು ಮುಂದಾದರು. ಸಂವಾದದ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ಗಾಂಧಿ ಮಾರ್ಗವನ್ನು ಪ್ರಧಾನಿ ಮೋದಿಯವರಾಗಲಿ ಇತರ ಬಿಜೆಪಿ ನಾಯಕರಾಗಲಿ ಒಪ್ಪುವರೇ? ಪ್ರತಿಪಕ್ಷ ನಾಯಕರ ಜೊತೆ ಮೋದಿಯವರು ಎಂದಾದರೂ ಮುಕ್ತವಾಗಿ ಮಾತನಾಡಿದ್ದಾರಾ? ಅವರು ಮತ್ತು ಅವರ ಪಕ್ಷ ಪ್ರತಿಪಕ್ಷ ಮುಕ್ತ ಭಾರತವನ್ನು ಬಯಸುತ್ತಿಲ್ಲವೇ? ಇವರಲ್ಲಿ ಎಷ್ಟು ಅಸಹನೆ ಇದೆ ಅಂದರೆ ಜಿ20 ಶೃಂಗ ಸಭೆಗೆ ಬಂದಿದ್ದ ಜಾಗತಿಕ ನಾಯಕರಿಗಾಗಿ ಏರ್ಪಡಿಸಿದ್ದ ಔತಣ ಕೂಟಕ್ಕೆ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಸದೀಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಆಹ್ವಾನಿಸಲಿಲ್ಲ. ಸತ್ಯ, ಅಹಿಂಸೆ, ಶಾಂತಿಯುತ ಸಹ ಅಸ್ತಿತ್ವ ಗಾಂಧೀಜಿಯವ ಬದುಕಿನ ಸಿದ್ಧಾಂತ ಮತ್ತು ಸಂದೇಶಗಳಾಗಿದ್ದವು. ಈಗ ಅಧಿಕಾರದಲ್ಲಿ ಇರುವವರು ಅದಕ್ಕೆ ತದ್ವಿರುದ್ಧ. ವಿದೇಶದಲ್ಲಿ ತಮ್ಮ ಇಮೇಜ್ ವರ್ಧನೆಗೆ ಮಾತ್ರ ಇವರಿಗೆ ಗಾಂಧಿ ಬೇಕು.ದೇಶದೊಳಗೆ ಇವರು ಹಾಲೆರೆದು ಪೋಷಿಸುತ್ತಿರುವುದು ಗೋಡ್ಸೆ ಸಿದ್ಧಾಂತವನ್ನು.
ಗಾಂಧೀಜಿಯವರನ್ನು ಮಾತ್ರವಲ್ಲ ತಮ್ಮ ಜನಾಂಗ ದ್ವೇಷಿ ಕೋಮುವಾದಿ ಸಿದ್ಧಾಂತದ ಜಾರಿಗಾಗಿ ಅಂಬೇಡ್ಕರ್, ಭಗತ್‌ಸಿಂಗ್, ಸುಭಾಷ್ ಚಂದ್ರ ಬೋಸ್ ಅವರ ಹೆಸರುಗಳನ್ನು ಇವರು ಬಳಸಿಕೊಳ್ಳುತ್ತ ಬಂದಿದ್ದಾರೆ. ಇತ್ತೀಚೆಗೆ ಕಲಬುರಗಿ ಜಿಲ್ಲೆಯ ಜೇವರಗಿ ತಾಲೂಕಿನ ಮಂದೇವಾಲ ಎಂಬ ಹಳ್ಳಿಯಲ್ಲಿ ಇವರು ಗಣೇಶೋತ್ಸವ ಮೊವಣಿಗೆಯಲ್ಲೂ ಗೋಡ್ಸೆ ಫೋಟೊ ಹಿಡಿದಿದ್ದು ವರದಿಯಾಗಿದೆ. ಇವರೆಷ್ಟೇ ದುರುಪಯೋಗ ಮಾಡಿಕೊಳ್ಳಲಿ ಇವೆಲ್ಲವನ್ನು ಮೀರಿ ಜಾಗತಿಕವಾಗಿ ಬೆಳೆದು ನಿಂತ ಇಬ್ಬರು ಮಹಾನ್ ಚೇತನಗಳೆಂದರೆ ಮೋಹನದಾಸ ಕರಮಚಂದ್ ಗಾಂಧಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಎಂಬುದು ಹಗಲಿನಷ್ಟು ನಿಚ್ಚಳವಾಗಿದೆ.