ಜನಾದೇಶ ಬುಡಮೇಲು ಮಾಡುವ ಹುನ್ನಾರ
ಭಾರತದಲ್ಲಿ ಇರುವುದು ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆ. ವಿಭಿನ್ನ ಭಾಷೆ, ಧರ್ಮ, ಸಂಸ್ಕೃತಿ ಮತ್ತು ಜನಾಂಗಗಳನ್ನು ಮಡಿಲಲ್ಲಿ ಇರಿಸಿಕೊಂಡಿರುವ ನಮ್ಮದು ಒಕ್ಕೂಟ ದೇಶ. ಇಂಥ ಬಹುತ್ವದ ನೆಲದಲ್ಲಿ ಎಲ್ಲ ಭಿನ್ನತೆ ಮತ್ತು ವೈವಿಧ್ಯತೆಗಳ ಮೇಲೆ ದಾಷ್ಟ್ಯದಿಂದ ಸವಾರಿ ಮಾಡಲು ಹೊರಟರೆ ಅಂತಿಮವಾಗಿ ಅದು ಏಕತೆಗೆ ಅಪಾಯವನ್ನು ತಂದೊಡ್ಡುತ್ತದೆ.
ಇಲ್ಲಿ ಕೇಂದ್ರದಲ್ಲಿರುವ ಪಕ್ಷವೇ ಎಲ್ಲ ರಾಜ್ಯಗಳಲ್ಲೂ ಅಧಿಕಾರದಲ್ಲಿ ಇರಬೇಕು ಎಂಬುದು ನಿರಂಕುಶ ಸರ್ವಾಧಿಕಾರಿ ಮನೋಭಾವನೆ ತೋರಿಸಿಕೊಡುತ್ತದೆ. ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ, ರಾಜ್ಯಗಳಲ್ಲಿ ಬೇರೆ ಪಕ್ಷಗಳ ಸರಕಾರಗಳು ಇರುವುದನ್ನು ಸಹಿಸುತ್ತಿಲ್ಲ.
ರಾಜ್ಯಗಳ ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುವ ಬಿಜೆಪಿಯೇತರ ಪಕ್ಷಗಳನ್ನು ಒಡೆದು ಸರಕಾರಗಳನ್ನು ಕೆಡವಲು ಸಿಬಿಐ, ಈ.ಡಿ. ಐಟಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕೇವಲ ಪ್ರತಿಪಕ್ಷಗಳ ಆರೋಪವಲ್ಲ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್ ಹಾಗೂ ಶಿವಸೇನೆ ಮೈತ್ರಿ ಕೂಟದ ಸರಕಾರಗಳನ್ನು ಉರುಳಿಸಿದ ಘಟನೆ ನಮ್ಮ ಕಣ್ಣ ಮುಂದಿದೆ. ಇದು ಬರೀ ಒಂದು ಪಕ್ಷದ ಸರಕಾರವನ್ನು ಉರುಳಿಸುವ ಪ್ರಶ್ನೆಯಲ್ಲ, ಬದಲಾಗಿ ಯಾರು ಅಧಿಕಾರಕ್ಕೆ ಬರಬೇಕೆಂದು ಜನತೆ ಮತಪೆಟ್ಟಿಗೆ ಮೂಲಕ ಆದೇಶ ನೀಡಿರುತ್ತಾರೋ ಅಂಥ ಜನಾದೇಶವನ್ನು ಬುಡಮೇಲು ಮಾಡುವ ಹುನ್ನಾರವಲ್ಲದೆ ಬೇರೇನೂ ಅಲ್ಲ.
ಪ್ರಧಾನಿ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಏಕಚಕ್ರಾಧಿಪತ್ಯದ ರೀತಿ ಆಡಳಿತ ನಡೆಸಿದ್ದಾರೆ. ರಾಜ್ಯಗಳು ಹಕ್ಕಿನಿಂದ ಕೇಳುವ ತಮ್ಮ ಪಾಲಿನ ತೆರಿಗೆ ಹಣವನ್ನು ಕೊಡಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿದೆ.ವಿವಿಧ ಪ್ರಾಕೃತಿಕ ಪ್ರಕೋಪದ ಸಂದರ್ಭದಲ್ಲಿ ರಾಜ್ಯ ಗಳಿಗೆ ಪರಿಹಾರ ನೀಡಲು ಕೇಂದ್ರ ಸರಕಾರ ನಿರಾಕರಿಸುತ್ತಿದೆ. ಈ ಕುರಿತು ರಾಜಧಾನಿ ದಿಲ್ಲಿಯಲ್ಲಿ ಧರಣಿ ಸತ್ಯಾಗ್ರಹ ಮಾಡಿದ್ದದಲ್ಲದೇ ಸುಪ್ರೀಂ ಕೋರ್ಟಿಗೂ ಹೋಗಿ ರಾಜ್ಯದ ನ್ಯಾಯಸಮ್ಮತ ಬೇಡಿಕೆಯನ್ನು ಈಡೇರಿಸಿಕೊಂಡದ್ದೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೇಲೆ ರಾಜಭವನದ ಕಿರುಕುಳ ಕೊಡಲು ನಿಜವಾದ ಕಾರಣ. ಎಲ್ಲರೂ ತನಗೆ ತಲೆ ಬಾಗಿಸಿರಬೇಕೆಂಬ ಸರ್ವಾಧಿಕಾರಿ ಮನೋಭಾವ ಇದು.
ಮೋದಿ,ಅಮಿತ್ ಶಾ ಲೆಕ್ಕಚಾ ರವೇನೆಂದರೆ ಸಿದ್ದರಾ ಮಯ್ಯನವರು ರಾಜೀನಾಮೆ ಕೊಟ್ಟರೆ ಕರ್ನಾಟಕದ ಕಾಂಗ್ರೆಸ್ ಸರಕಾರವನ್ನು ಸುಲಭವಾಗಿ ಉರುಳಿಸಬಹುದು.ಈಗ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಒಂದು ಗೂಡಿದ ಕಾಂಗ್ರೆಸ್ ಶಾಸಕರು ತಮ್ಮ ನಾಯಕ ಪದತ್ಯಾಗ ಮಾಡಿದರೆ ಸಹಜವಾಗಿ ಒಡಕು ಮೂಡುತ್ತದೆ.ಆಗ ಶಾಸಕರನ್ನು ಖರೀದಿ ಮಾಡಿ,ಇಲ್ಲವೇ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ಕಾಂಗ್ರೆಸ್ ಶಾಸಕರ ಒಂದು ಗುಂಪನ್ನು ಹೈಜಾಕ್ ಮಾಡಿ ರಾಜ್ಯದಲ್ಲಿ ಬಿಜೆಪಿ ಸರಕಾರ ವನ್ನು ಹೇರುವುದು ಅಸಲಿ ಹುನ್ನಾರವಾಗಿದೆ. ಕರ್ನಾಟಕದ ಮುಖಮಂತ್ರಿ ಸ್ಥಾನದಲ್ಲಿ ಹಿಂದುಳಿದ ಸಮುದಾಯದ ವ್ಯಕ್ತಿ ಬರುವುದನ್ನು ಈ ರಾಜ್ಯದ ಬಲಿಷ್ಠ ಜಾತಿಗಳು ಇಷ್ಟಪಡುವುದಿಲ್ಲ.ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಸಾಕಷ್ಟು ಮಸಲತ್ತುಗಳು ನಡೆದವು. ಆದರೆ, ಅರಸು ಅವರು ಬಲಿಷ್ಠ ಜಾತಿಗಳ ವಿರುದ್ಧ ಎಲ್ಲ ಹಿಂದುಳಿದ ಸಮುದಾಯಗಳನ್ನು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಒಂದುಗೂಡಿಸಿ ಪ್ರತಿರೋಧ ಒಡ್ಡಿದರು.
ಅವರು ಕೋಟಿ, ಕೋಟಿ ಹಣ ಗಳಿಸಿದ್ದಾರೆಂದು ಗೂಬೆ ಕೂರಿಸಲಾಯಿತು. ಆದರೆ, ಅರಸು ನಿಧನರಾದಾಗ ಅವರ ಮನೆಯವರ ಬಳಿ ಅಂತ್ಯಕ್ರಿಯೆಗೂ ಹಣವಿರಲಿಲ್ಲ. ಅಂದಿನ ಮುಖ್ಯಮಂತ್ರಿ ಗುಂಡೂರಾಯರಿಗೆ ಈ ವಿಷಯ ಗೊತ್ತಾಗಿ ಸರಕಾರದ ಖರ್ಚಿನಲ್ಲಿ ಅಂತ್ಯಕ್ರಿಯೆ ನಡೆಸಲು ಕ್ರಮ ಕೈಗೊಂಡರು. ಅರಸು ನಂತರದ ವರ್ಷಗಳಲ್ಲಿ ಸಮಾಜವಾದಿ ನಾಯಕ ಎಸ್.ಬಂಗಾರಪ್ಪ ಮುಖ್ಯಮಂತ್ರಿ ಯಾಗಿ ಅನೇಕ ಜನಪರ ಕಾರ್ಯಕ್ರಮ ಗಳನ್ನು ನೀಡಿದರು. ಆದರೆ, ಅವರು ಪೂರ್ಣಾವಧಿ ಅಧಿಕಾರದಲ್ಲಿರಲು ಪಟ್ಟಭದ್ರ ಹಿತಾಸಕ್ತಿಗಳು ಬಿಡಲಿಲ್ಲ.ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿ ಯಾದಾಗ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳ ಲಾಬಿಗೆ ಮಣಿಯದೆ ಸಿಇಟಿ ಜಾರಿಗೆ ತಂದು ಸೀಟುಗಳ ಮಾರಾಟವನ್ನು ತಡೆದರು.ಆ ಕಾರಣಕ್ಕಾಗಿ ಅವರೂ ಅಧಿಕಾರವನ್ನು ಕಳೆದುಕೊಂಡರು. ಭಾರತದ ಜಾತಿ ವ್ಯವಸ್ಥೆ ಎಷ್ಟು ಹೇಯವಾಗಿದೆಯೆಂದರೆ ಒಬ್ಬ ದಲಿತ,ಒಬ್ಬ ಮುಸಲ್ಮಾನ ಒಂದು ರಾಜ್ಯದ ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ. ಇಲ್ಲಿ ಸಾಮಾಜಿಕ ಕಾಳಜಿ, ಆಡಳಿತ ನಡೆಸುವ ಅರ್ಹತೆ ಇದಾವುದೂ ಲೆಕ್ಕಕ್ಕೆ ಬರುವುದಿಲ್ಲ.
ಯಾವನೋ ಒಬ್ಬ ವ್ಯಕ್ತಿ ಸಿದ್ದರಾಮಯ್ಯನವರ ವಿರುದ್ಧ ಖಾಸಗಿ ದೂರು ನೀಡಿದರೆ ಒಂದು ನಿಮಿಷವೂ ವಿಳಂಬ ಮಾಡದೆ ತನಿಖೆಗೆ ಅನುಮತಿ ನೀಡುವ ರಾಜ್ಯಪಾಲರು ಹಿಂದಿನ ಮುಖ್ಯಮಂತ್ರಿ ಹಾಗೂ ಮೇಲ್ವರ್ಗಗಳಿಗೆ ಸೇರಿದ ಎಚ್.
ಡಿ.ಕುಮಾರಸ್ವಾಮಿ, ಹಿಂದಿನ ಬಿಜೆಪಿ ಸರಕಾರದಲ್ಲಿ ಮಂತ್ರಿಗಳಾಗಿದ್ದ ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಅವರ ಮೇಲಿನ ಭ್ರಷ್ಟಾಚಾರದ ಹಗರಣಗಳ ಕುರಿತು ತನಿಖೆ ನಡೆಸಲು ಯಾಕೆ ಅನುಮತಿಯನ್ನು ನೀಡಿಲ್ಲ?. ಇವರ ಮೇಲಿನ ತನಿಖೆಗೆ ಅಧಿಕೃತ, ವಿಶ್ವಾಸಾರ್ಹ ಸಂಸ್ಥೆ ಯಾದ ಲೋಕಾಯುಕ್ತ ಮನವಿ ಮಾಡಿ ತಿಂಗಳುಗಳು ಗತಿಸಿದರೂ ಯಾಕೆ ಮೌನವಾಗಿದ್ದಾರೆ. ರಾಜ್ಯಪಾಲರ ಈ ವರ್ತನೆ ಪಕ್ಷಪಾತದಿಂದ ಕೂಡಿಲ್ಲವೇ?
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಮತ್ತು ಬಿಜೆಪಿಯವರ ಲೆಕ್ಕಾಚಾರ ಬೇರೆಯಾಗಿತ್ತು.ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ಬರುವುದಿಲ್ಲ. ಈ ಗೊಂದಲದ ಪರಿಸ್ಥಿತಿ ಯಲ್ಲಿ ಬಿಜೆಪಿ ಬೆಂಬಲವನ್ನು ಪಡೆದು ಮುಖ್ಯಮಂತ್ರಿ ಆಗಬೇಕು ಎಂದು ಕುಮಾರಸ್ವಾಮಿ ಕನಸು ಕಂಡಿದ್ದರು .ಆದರೆ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತವನ್ನು ಪಡೆದ ನಂತರ ಕುಮಾರಸ್ವಾಮಿ ಮತ್ತು ಬಿಜೆಪಿ ಯವರಿಗೆ ನಿರಾಸೆಯಾಯಿತು. ಫಲಿತಾಂಶ ಬಂದ ದಿನದಿಂದಲೇ ಸರಕಾರದ ವಿರುದ್ಧ ಪ್ರತಿಭಟನೆಯನ್ನು ಆರಂಭಿಸಿದರು. ಒಮ್ಮೆ ಚುನಾವಣೆ ನಡೆದು ಜನತೆ ನೀಡಿದ ತೀರ್ಪನ್ನು ಒಪ್ಪಿಕೊಳ್ಳುವುದು ಜನತಂತ್ರದ ಸಹಜ ಪ್ರಕ್ರಿಯೆ.ಆದರೆ ತಾವು ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಗೆಲ್ಲಲಾಗಲಿಲ್ಲ ಎಂದು ಪ್ರತಿಭಟನೆ ನಡೆಸುವುದು ಹತಾಶೆಯಲ್ಲದೆ ಬೇರೇನೂ ಅಲ್ಲ.
ತಮ್ಮ ಮತ ಚಲಾವಣೆಯ ಪರಮಾಧಿಕಾರವನ್ನು ಚಲಾಯಿಸುವ ಮೂಲಕ ಭಾರತದ ಪ್ರಜಾಪ್ರಭುತ್ವ ವನ್ನು ಅರ್ಥಪೂರ್ಣ ಗೊಳಿಸಿದ ಈ ದೇಶದ ಜನಸಾಮಾನ್ಯರು ಕಳೆದ ಏಳೂವರೆ ದಶಕಗಳಿಂದ ಜನತಂತ್ರದ ಸವಿಯನ್ನು ಅನುಭವಿಸಿದ್ದಾರೆ. ಈ ಜನರೇ ತಮ್ಮ ಹೋರಾಟದ ಮೂಲಕ ಈ ಪ್ರಜಾಪ್ರಭುತ್ವ ಪದ್ಧತಿಯನ್ನು ಉಳಿಸಿಕೊಳ್ಳುತ್ತಾರೆ ಎಂಬುದು ನಿರೀಕ್ಷಿಸಿದರೆ ತಪ್ಪಿಲ್ಲ.