ಹೊಸ ವರ್ಷದ ಆತಂಕ
Photo: twitter.com/TigerRajaSingh
ಮತ್ತೆ ಕೊರೋನ ವೈರಾಣುವಿನ ಹೊಸ ರೂಪಾಂತರ ತಳಿಯ ಭಯದೊಂದಿಗೆ ಹೊಸ ವರ್ಷವನ್ನು ಪ್ರವೇಶಿಸುತ್ತಿದ್ದೇವೆ. ಈ ಹೊಸ ತಳಿಗೆ ಹೇಗಾದರೂ ಮಾಡಿ ಲಸಿಕೆ ಕಂಡು ಹಿಡಿಯುವಲ್ಲಿ ವೈದ್ಯಕೀಯ ಜಗತ್ತು ಮುಂದುವರಿದಿದೆ. ಈ ಬಾರಿ ಸರಕಾರಗಳೂ ಇದನ್ನೆದುರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿವೆ. ಆದರೆ ಮನುಷ್ಯರಾದ ನಾವೇ ಸೃಷ್ಟಿಸಿಕೊಂಡಿರುವ ಜನಾಂಗ ದ್ವೇಷದ ಕೋಮು ವೈರಾಣುವಿನ ಕೊನೆ ಯಾವಾಗ ಎಂಬ ಪ್ರಶ್ನೆ ಈ ವರ್ಷವೂ ನಮ್ಮನ್ನು ಕಾಡಲಿದೆ.
ಇದು ಚುನಾವಣೆ ವರ್ಷ.ಕೇವಲ ಚುನಾವಣೆ ಅಲ್ಲ. ಲೋಕಸಭಾ ಚುನಾವಣೆ ವರ್ಷ. ಕಳೆದ ಒಂಭತ್ತು ವರ್ಷಗಳಿಂದ ಅಧಿಕಾರ ಹಿಡಿದು ಕೂತವರು ಮತ್ತೆ ಗೆಲ್ಲಲು ಸಕಲಾಸ್ತ್ರಗಳನ್ನು ತಯಾರಾಗಿಟ್ಟುಕೊಂಡು ಸಡ್ಡು ಹೊಡೆಯುತ್ತಿರುವ ವರ್ಷ. 1925 ರಾಷ್ಟ್ರೀಯ ಸ್ವಯಂ ಸೇವಕ ಸಂಘ( ಆರೆಸ್ಸೆಸ್) ಸ್ಥಾಪನೆಯಾದ ವರ್ಷ.(ಭಾರತ ಕಮ್ಯುನಿಸ್ಟ್ ಪಕ್ಷವೂ ಇದೇ ವರ್ಷ ಸ್ಥಾಪನೆಯಾಯಿತು) ಬರುವ 2025 ಆರೆಸ್ಸೆಸ್ ನ ಶತಮಾನೋತ್ಸವ ವರ್ಷ. ಈ ಶತಮಾನದ ಸಂದರ್ಭದಲ್ಲಿ ಬಹುತ್ವ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಘೋಷಣೆ ಮಾಡಲು ಅವಿರತವಾಗಿ ಕೋಮು ಧ್ರುವೀಕರಣವನ್ನು ಜೀವಂತ ಇಟ್ಟುಕೊಂಡು ಬರಲಾಗಿದೆ.ಅದಕ್ಕೆ ಪೂರಕವಾಗಿ ಸಕಲ ಸಿದ್ಧತೆಗಳೂ ನಡೆದಿವೆ.
ಬಿಜೆಪಿ ಎಂಬುದು ಸ್ವತಂತ್ರ ರಾಜಕೀಯ ಪಕ್ಷವಲ್ಲ. ಅದು ಆರೆಸ್ಸೆಸ್ನ ರಾಜಕೀಯ ವೇದಿಕೆ. ನರೇಂದ್ರ ಮೋದಿ ಸಂಘದ ಸ್ವಯಂ ಸೇವಕ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೂರಾಷ್ಟ್ರ ನಿರ್ಮಾಣಕ್ಕೆ ತೊಡಕಾಗಿರುವ ಬಾಬಾಸಾಹೇಬರ ಸಂವಿಧಾನಕ್ಕೆ ಒಂದು ಗತಿ ಕಾಣಿಸಲು ಸಕಲ ಸಿದ್ಧತೆಯೂ ನಡೆದಿವೆ. ಈಗಾಗಲೇ ಪ್ರಜಾಪ್ರಭುತ್ವ ಹಳಿ ತಪ್ಪಿದೆ. ಇದು ಮತ್ತೆ ಹಳಿಗೆ ಬರಬೇಕೆಂದರೆ ಸಂವಿಧಾನವನ್ನು ಬದಲಿಸಲು ಹೊರಟವರು ಅಧಿಕಾರದಿಂದ ದೂರವಾಗಬೇಕು.ಅಂದರೆ ಚುನಾವಣೆಯಲ್ಲಿ ಸೋಲಬೇಕು. ಇದು ಸಾಧ್ಯವೇ ಎಂಬುದು ನಮ್ಮ ಮುಂದಿರುವ ಯಕ್ಷ ಪ್ರಶ್ನೆಯಾಗಿದೆ.
ಕೋಮುವಾದಿ ಶಕ್ತಿಗಳನ್ನು ಸೋಲಿಸಬೇಕೆಂದರೆ ಜಾತ್ಯತೀತ, ಪ್ರಗತಿಪರ ಪಕ್ಷಗಳು, ಸಂಘಟನೆಗಳು ಒಂದಾಗಬೇಕು. ಆದರೆ ಒಂದಾಗಲು ಸಾಧ್ಯವೇ? ಕೋಮುವಾದದ ಬಗ್ಗೆ ಕಾಂಗ್ರೆಸ್ನಂಥ ಅತ್ಯಂತ ದೊಡ್ಡ ಪ್ರತಿಪಕ್ಷಗಳ ನಾಯಕತ್ವ ವಹಿಸಲಿರುವ ಪಕ್ಷದಲ್ಲೇ ಸ್ಪಷ್ಟತೆಯಿಲ್ಲ. ಉದಾಹರಣೆಗೆ ಕರ್ನಾಟಕದ ಜನ ನಿಚ್ಚಳ ಬಹುಮತವನ್ನು ನೀಡಿ ಆರಿಸಿತಂದರೂ ಕೋಮುವಾದಿ ಶಕ್ತಿಗಳ ಆರ್ಭಟ ತಡೆಯಲು ಸಾಧ್ಯವಾಗಿಲ್ಲ. ಎಂದೋ ಜೈಲಿಗೆ ಹೋಗಬೇಕಾದವನೊಬ್ಬ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಅಸಭ್ಯವಾಗಿ , ಬಹಿರಂಗವಾಗಿ ಬೊಗಳಿದರೂ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಸ್ಥಿತಿಯಲ್ಲಿ ಸರಕಾರಇಲ್ಲ. ಸರಕಾರವನ್ನು ಕೇಳಬೇಕಾದ ಪ್ರಗತಿಪರ ಸೆಕ್ಯುಲರ್ ಶಕ್ತಿಗಳು ಗೊಣಗಾಟ ಬಿಟ್ಟರೆ ಬೇರೇನೂ ಮಾಡಲಾಗದಷ್ಟು ಅಸಹಾಯಕವಾಗಿವೆ.
ಇನ್ನೊಂದು ಉದಾಹರಣೆಯೆಂದರೆ ಅಯೋಧ್ಯೆಯ ರಾಮ ಮಂದಿರ ವಿವಾದ. ಈ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂಡಿಯಾ ಮೈತ್ರಿ ಕೂಟದಲ್ಲಿ ವಿಶೇಷವಾಗಿ ಕಾಂಗ್ರೆಸ್ನಲ್ಲಿ ಯಾಕೆ ಗೊಂದಲ ಉಂಟಾಗಿದೆಯೋ ಅರ್ಥವಾಗುತ್ತಿಲ್ಲ. ಈ ಬಗ್ಗೆ ಕಮ್ಯುನಿಸ್ಟ್ ಪಕ್ಷಗಳು ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿವೆ. ಯಾವುದೇ ಧಾರ್ಮಿಕ ಕಾರ್ಯಕ್ರಮ ಗಳಿಗೆ ಆಹ್ವಾನ ಬಂದಾಗ ಜನಸಾಮಾನ್ಯರ ಭಾವನೆಗಳನ್ನು ಗೌರವಿಸಿ ಹೋಗಬೇಕೆಂದು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಇದು ಧಾರ್ಮಿಕ ಕಾರ್ಯಕ್ರಮ ಎಂದು ನಾನಂತೂ ಒಪ್ಪಿಕೊಳ್ಳುವುದಿಲ್ಲ. ಇನ್ನೊಂದು ಧರ್ಮದ ಪ್ರಾರ್ಥನಾ ಕಟ್ಟಡವನ್ನು ಪುಂಡಾಟಿಕೆಯಿಂದ ಕೆಡವಿ ಆ ಜಾಗದಲ್ಲಿ ಕಟ್ಟಿಸಲಿರುವ ಮಂದಿರ ಸಂಘಪರಿವಾರದ ರಾಜಕೀಯ ಕಾರ್ಯಕ್ರಮ. ಎಲ್ಲ ಪಕ್ಷಗಳನ್ನು ಆಹ್ವಾನಿಸುವ ಮೂಲಕ ಸುಪ್ರೀಂಕೋರ್ಟ್ ಆದೇಶ ಧಿಕ್ಕರಿಸಿ ಕೆಡವಿದ ಕಾನೂನು ಬಾಹಿರ ಕ್ರತ್ಯಕ್ಕೆ ಎಲ್ಲರ ಒಪ್ಪಿಗೆ ಪಡೆದು ಪೇಚಿಗೆ ಸಿಲುಕಿಸುವ ಮಸಲತ್ತು ಇದರಲ್ಲಿದೆ. ರಾಜಕೀಯಕ್ಕಾಗಿ ಧರ್ಮ ಮತ್ತು ದೇವರನ್ನು ದುರ್ಬಳಕೆ ಮಾಡಿಕೊಳ್ಳುವ ಕಾರ್ಯ ಇಲ್ಲಿಗೆ ನಿಲ್ಲುವ ಸೂಚನೆ ಇಲ್ಲ. ನಾಳೆ ಮಥುರಾ ಮತ್ತು ಕಾಶಿ ವಿವಾದಗಳು ಬರಲಿವೆ. ಆಗ ನೀವು ವಿರೋಧಿಸಿದರೆ. ಅಯೋಧ್ಯೆಯ ಉದ್ಘಾಟನೆಗೆ ಬಂದಿದ್ದಿರಲ್ಲ ಎಂದು ಹಂಗಿಸುವ ಪ್ರಸಂಗ ಎದುರಾಗಬಹುದು.ಸಂವಿಧಾನ ಬಾಹಿರವಾಗಿ ಒಂದು ಧರ್ಮದ ಮಂದಿರ ನಿರ್ಮಾಣದಲ್ಲಿ ಸರಕಾರವೇ ನೇರವಾಗಿ ಪಾಲ್ಗೊಳ್ಳುವುದು ಶ್ರೀ ರಾಮಚಂದ್ರನ ಮೇಲಿನ ಭಕ್ತಿಯಿಂದಲ್ಲ. ಬಹುಸಂಖ್ಯಾತರ ಓಟಿನ ಮೂಲಕ ಗೆದ್ದು ಮತ್ತೆ ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಳ್ಳ ಹಿಡಿಸಿ ಮನುವಾದಿ ಹಿಂದೂರಾಷ್ಟ್ರ ನಿರ್ಮಿಸುವುದು ಇವರ ರಾಜಕೀಯ ಗುರಿಯಾಗಿದೆ.ಅವರ ದಾರಿಯಲ್ಲಿ ಅವರು ಸರಿಯಾಗಿ ಹೊರಟಿದ್ದಾರೆ. ಆದರೆ ಕಾಂಗ್ರೆಸ್ಗೆ ಯಾಕೆ ಗೊಂದಲ? ಇವರು ಉದ್ಘಾಟನಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಓಲೈಸಿದರೂ ಬಿಜೆಪಿಗೆ ಹೋಗುವ ಓಟುಗಳು ನಿಮಗೆ ಬರುವುದಿಲ್ಲ. ಹಿಂದೆ ಇದೇ ಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬೆಂಬಲ ನೀಡಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದಿರಿ.ಮತ್ತೆ ಆ ತಪ್ಪು ಮಾಡಬೇಡಿ. ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿ ಆದರೆ ರಾಜಕೀಯ ಉದ್ದೇಶದ ಅಧಾರ್ಮಿಕ ಕಾರ್ಯಕ್ರಮಕ್ಕೆ ಬೇಡ. ಇದರಲ್ಲಿ ಗೊಂದಲವೇಕೆ. ಇದರ ಬಗ್ಗೆ ಕಾಂಗ್ರೆಸ್ನಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಸ್ಪಷ್ಟತೆಯಿದೆ. ಆದರೆ ದಿಗ್ವಿಜಯ ಸಿಂಗ್ ರಂಥವರು ಪಕ್ಷವನ್ನು ದಾರಿ ತಪ್ಪಿಸುವಷ್ಟು ಚಾಣಾಕ್ಷರಾಗಿದ್ದಾರೆ.
ಭಾರತದ ಪ್ರಜಾಪ್ರಭುತ್ವ ಆತಂಕದ ಮಡುವಿಗೆ ಸಿಲುಕಿದ್ದರೆ ಜಾಗತಿಕವಾಗಿಯೂ ಮನುಷ್ಯರ ನಡುವಿನ ಪ್ರೀತಿ, ವಿಶ್ವಾಸಗಳ ನಂಬಿಕೆಯ ಸೇತುವೆ ಕುಸಿಯುತ್ತಿದೆ.ಮಾರುಕಟ್ಟೆ ಆರ್ಥಿಕತೆ ಬದುಕಿನ ಎಲ್ಲೆಡೆ ಆವರಿಸಿದೆ. ಬಲಪಂಥೀಯ ಫ್ಯಾಶಿಸ್ಟ್ ಶಕ್ತಿಗಳ ಅಬ್ಬರ ವಿಶ್ವಾದ್ಯಂತ ಕಳವಳಕಾರಿಯಾಗಿದೆ. ಬಂಡವಾಳವಾದದ ಜನವಿಮುಖ, ಲಾಭಕೋರ ಅಭಿವೃದ್ಧಿ ಮಾರ್ಗ ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ನಮ್ಮ ಸಮಾಜದಲ್ಲಿ ಅನೇಕರಿಗೆ ಧರ್ಮ ರಕ್ಷಣೆಯ ನಶೆಯನ್ನು ಏರಿಸಲಾಗಿದೆ.ಜಾತಿ ಹಿತಾಸಕ್ತಿಗಳ ಮೇಲಾಟವೂ ನಡೆದಿದೆ. ಧರ್ಮವನ್ನು ದ್ವೇಷ ಸಾಧನೆಗೆ ಬಳಸಿಕೊಳ್ಳಲಾಗುತ್ತಿದೆ. ಆದರೆ ನಮ್ಮನ್ನೆಲ್ಲ ಪೊರೆಯುವ ಭೂಮಿಯೇ ಅಪಾಯದಲ್ಲಿದೆ ಎಂಬುದು ಈ ಅವಿವೇಕಿಗಳಿಗೆ ಗೊತ್ತಿಲ್ಲ. ಈ ವಾಯು,ನೀರು,ಸೇರಿದಂತೆ ಭೂಮಿ ಉಳಿದರೆ ಮಾತ್ರ ಇಲ್ಲಿನ ಸಕಲ ಜೀವಚರಗಳಿಗೆ ಉಳಿಗಾಲವಿದೆ.ಆ ನಂತರ ನಾವೇ ನಮ್ಮ ಸಮಾಧಾನಕ್ಕೋ, ನಂಬಿಕೆಗಾಗಿಯೋ, ಭದ್ರತೆಗಾಗಿಯೋ ಮಾಡಿಕೊಂಡ ದೇವರು ಮತ್ತು ಧರ್ಮಗಳು ಬರುತ್ತವೆ.ಆ ಮೇಲೆ , ದೇಶ, ಭಾಷೆಗಳು ಬರುತ್ತವೆ.
ಸೋವಿಯತ್ ರಶ್ಯದ ಸಮಾಜವಾದಿ ವ್ಯವಸ್ಥೆ ಕುಸಿದು ಬಿದ್ದ ನಂತರ ಸಮಸುಖದ ಮತ್ತು ಸಮ ಬದುಕಿನ ಕನಸು ಕೂಡ ಭಗ್ನವಾಗಿದೆ. ಮನುಷ್ಯರೊಳಗಿನ ಅಸಮಾನತೆ, ಅಸಹನೆ ಹೆಚ್ಚುತ್ತಲೇ ಇದೆ. ಈ ಭೂಮಿಯು ಕೂಡ ಮನುಷ್ಯರ ಭಾರದಿಂದ ಬಸವಳಿದಿದೆ. ಈ ಪೃಥ್ವಿಯಲ್ಲಿ ಬದುಕು ಸುರಕ್ಷಿತವಲ್ಲ. ಮುಂದಿನ 100 ವರ್ಷದೊಳಗೆ ಅನ್ಯ ಗ್ರಹಕ್ಕೆ ವಲಸೆ ಹೋಗುವ ಪರಿಸ್ಥಿತಿ ಎದುರಾಗುವುದೆಂದು ಖ್ಯಾತ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಬದುಕಿದ್ದಾಗ ಹೇಳಿದ್ದರು.
ಈಗ ಮತ್ತೆ ಸ್ಟೀಫನ್ ಹಾಕಿಂಗ್ ಮಾತು ನೆನಪಿಗೆ ಬರುತ್ತದೆ. ಹವಾಮಾನ ವೈಪರೀತ್ಯ, ಬಾಹ್ಯಾಕಾಶದಲ್ಲಿ ಚಲಿಸುತ್ತಿರುವ ಕ್ಷುದ್ರ ಗ್ರಹಗಳು ಭೂಮಿಗೆ ಅಪ್ಪಳಿಸುವ ಸಾಧ್ಯತೆ, ಸಾಂಕ್ರಾಮಿಕ ರೋಗಗಳು, ಹೆಚ್ಚುತ್ತಿರುವ ಜನಸಂಖ್ಯೆ, ಉಳ್ಳವರ ದುರಾಸೆ ಇವೆಲ್ಲದರ ಪರಿಣಾಮವಾಗಿ ಭೂಮಿಯ ಮೇಲಿನ ಮನುಷ್ಯರ ಬದುಕು ದಿನದಿಂದ ದಿನಕ್ಕೆ ಅತಂತ್ರ ಆಗುತ್ತಿದೆ. ಸ್ಟೀಪನ್ ಹಾಕಿಂಗ್ ಹೇಳುವ ಈ ಮಾತು ಕನ್ನಡದ ಟಿವಿ ಚಾನೆಲ್ಗಳಲ್ಲಿ ಬರುವ ಕಟ್ಟು ಕತೆಯಲ್ಲ. ಸ್ಟೀಫನ್ ಹಾಕಿಂಗ್ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ನಮ್ಮ ನಡುವಿನ ಅಸಾಮಾನ್ಯ ಬುದ್ಧಿವಂತ ವ್ಯಕ್ತಿಯಾಗಿದ್ದರು.
ಮನುಕುಲ ಎದುರಿಸುತ್ತಿರುವ ಗಂಡಾಂತರಗಳ ಬಗ್ಗೆ ಸ್ಟೀಫನ್ ಹಾಕಿಂಗ್ ಅನೇಕ ಬಾರಿ ಎಚ್ಚರಿಸುತ್ತಲೇ ಇದ್ದರು. 2016ರ ನವೆಂಬರ್ನಲ್ಲಿ ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಅವರು ಉಪನ್ಯಾಸ ನೀಡುತ್ತ, ಮನುಕುಲಕ್ಕೆ ಈ ಭೂಮಿ ಸುರಕ್ಷಿತವಲ್ಲ. ಇನ್ನು ಸಾವಿರ ವರ್ಷಗಳಲ್ಲಿ ಹೊಸ ಗ್ರಹ ಹುಡುಕಿಕೊಂಡು ಮನುಷ್ಯ ಹೋಗಬೇಕಾಗುತ್ತದೆ ಎಂದು ಹೇಳಿದ್ದರು. ಮುಂಚೆ ಒಂದು ಸಾವಿರ ವರ್ಷದ ಸಮಯ ನಿಗದಿಪಡಿಸಿದ್ದ ಹಾಕಿಂಗ್ ತಮ್ಮ ಕೊನೆಯ ದಿನಗಳಲ್ಲಿ ಸಾವಿರವಲ್ಲ ನೂರು ವರ್ಷಗಳಲ್ಲಿ ಬೇರೆ ಗ್ರಹಕ್ಕೆ ಹೋಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳುತ್ತಿದ್ದರು.
ನಾವು ನೆಲೆಸಿದ ಭೂಮಿಯ ಸ್ಥಿತಿ ಹೀಗಿರುವಾಗ, ಆ ಬಗ್ಗೆ ಯೋಚಿಸದೆ ಜಾತಿ, ಧರ್ಮ, ಭಾಷೆಯೆಂದು ಕಿತ್ತಾಡುತ್ತಿದ್ದೇವೆ. ನಮ್ಮ ಜನಪ್ರತಿನಿಧಿಯೊಬ್ಬರು ಜಾತ್ಯತೀತರ ಅಪ್ಪ, ಅಮ್ಮ ಯಾರು ಎಂದು ಹಾಗೂ ನಿಮ್ಮ ಜಾತಿ ಯಾವುದೆಂದು ಕೇಳುವಷ್ಟು ಕೀಳು ಮಟ್ಟಕ್ಕೆ ಇಳಿದಿದ್ದರು. ಇಂಥ ಸವಾಲುಗಳು ಕ್ಷುದ್ರ ಜೀವಿಗಳಿಂದ ಆಗಾಗ ಎದುರಾಗುತ್ತಲೇ ಬಂದಿದೆ. ಕೇವಲ 900 ವರ್ಷಗಳ ಹಿಂದೆ ಇದೇ ಪ್ರಶ್ನೆ ಬಸವಣ್ಣನವರಿಗೆ ಎದುರಾದಾಗ, ತಾನು ಹುಟ್ಟಿದ ಜಾತಿಯನ್ನು ಧಿಕ್ಕರಿಸಿದ ಅವರು ತಮ್ಮನ್ನು ಮಾದಾರ ಚನ್ನಯ್ಯನ ಮಗ ಎಂದು ಕರೆದುಕೊಂಡಿದ್ದರು.
ನಿತ್ಯವೂ ಜಾತಿ, ಮತದ ಅಮೇಧ್ಯದಲ್ಲಿ ಉರುಳಾಡುವ ಕ್ಷುದ್ರ ಜಂತುಗಳಿಗೆ ಈ ಭೂಮಿಯ ಪಲ್ಲಟಗಳು ಅರ್ಥವಾಗುತ್ತಿಲ್ಲ. ಎಲ್ಲಾದರೂ ಭೂಕಂಪವಾದರೆ, ಸುನಾಮಿ ಬಂದರೆ ಯಜ್ಞ, ಹೋಮ ಮಾಡಿ ಹೊಗೆಯಬ್ಬಿಸುವ ಇಂಥವರಿಗೆ ನೈಸರ್ಗಿಕ ಪ್ರಕೋಪಗಳಿಗೆ ಮನುಷ್ಯನೇ ಕಾರಣ ಎಂಬುದು ಅರ್ಥವಾಗುತ್ತಿಲ್ಲ. ಅಭಿವೃದ್ಧಿಯ ಅಟ್ಟಹಾಸದಲ್ಲಿ ನಿಸರ್ಗದ ಮೇಲೆ ನಿತ್ಯವೂ ಅತ್ಯಾಚಾರ ನಡೆದಿದೆ.
ಈ ಭೂಮಿಯ ಮೇಲೆ ಮನುಷ್ಯ ಸಹಸ್ರಾರು ವರ್ಷಗಳಿಂದ ಬದುಕಿದ್ದಾನೆ. ಆದರೆ ಕಳೆದ 300 ವರ್ಷಗಳಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ಈ ನಿಸರ್ಗ ಘಾಸಿಗೆ ಒಳಗಾದಷ್ಟು ಹಿಂದೆಂದೂ ಆಗಿಲ್ಲ. ಲಂಗುಲಗಾಮಿಲ್ಲದ ಗಣಿಗಾರಿಕೆಯಿಂದ ಸಸ್ಯ, ಸಂಪತ್ತು ನಾಶವಾಗುತ್ತಿದೆ. ನೀರಿನ ಸೆಲೆಗಳು ಬತ್ತಿ ಹೋಗಿ, ಭೂಮಿ ಕಾವೇರುತ್ತಿದೆ. ಬಿಸಿಲಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹೀಗೆ ಆಗುವುದೆಂದು ವಿಜ್ಞಾನಿಗಳು ಎಚ್ಚರಿಸಿದರೂ ಕೂಡ ಬಂಡವಾಳಶಾಹಿಗಳ ಲಾಭಕೋರತನದ ಪ್ರತೀಕವಾದ ಅಮೆರಿಕದ ಹಿತಾಸಕ್ತಿಗಳು ಇದಕ್ಕೆ ಕಿವಿಗೊಡುತ್ತಿಲ್ಲ.
ನಮ್ಮ ದೇಶವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಶತಮಾನಗಳಿಂದ ನಮ್ಮ ಪೂರ್ವಜರ ಬಾಯಾರಿಕೆ ಇಂಗಿಸಿದ ನದಿಗಳು ಈಗ ಪರಿಶುದ್ಧವಾಗಿ ಉಳಿದಿಲ್ಲ. ಎಲ್ಲಾ ನದಿಗಳು ಕಲ್ಮಶವಾಗಿವೆ. ಈ ನದಿಗಳ ನೀರನ್ನು ಕುಡಿಯುವುದು ಅಪಾಯಕಾರಿ ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ. ಮಲಿನಗೊಂಡ ನೀರಿನಲ್ಲಿ ಜಲಚರಗಳು ಸತ್ತು ಹೋಗುತ್ತಿರುವುದೇ ಇದಕ್ಕೆ ಉದಾಹರಣೆ.
ಈ ವಿಶ್ವದ ಸಂಪತ್ತಿನ ಸಮಾನ ಹಂಚಿಕೆಯಾಗಬೇಕು. ಲಾಭಕ್ಕಾಗಿ ನಡೆದಿರುವ ನಿಸರ್ಗದ ಲೂಟಿಯನ್ನು ತಡೆಯಬೇಕು. ನಮ್ಮ ಜಲಮೂಲಗಳು ಮತ್ತು ಹವಾಮಾನದ ರಕ್ಷಣೆಗಾಗಿ ನಾವು ಆದ್ಯತೆ ನೀಡಬೇಕಾಗಿದೆ. ಪರಿಸರ ನಾಶಕ್ಕೂ ಕಾರಣವಾದ ಬಂಡವಾಳಶಾಹಿ ವ್ಯವಸ್ಥೆಯನ್ನು ಕೊನೆಗಾಣಿಸಬೇಕಾಗಿದೆ.