ಭಾಗವತರ ಕೋಪ ಯಾರಿಗೆ ಮೂಲ
ಇತ್ತೀಚೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ನಡೆದ ಪ್ರಚಾರದ ವೈಖರಿ ಬಗ್ಗೆ ಆರೆಸ್ಸೆಸ್ ಸರಸಂಘಚಾಲಕ ಮೋಹನ ಭಾಗವತರು ಆಡಿದ ಮಾತೊಂದು ಚರ್ಚೆಗೆ ಗ್ರಾಸವಾಗಿದೆ. ಸಂಘದ ಕಾರ್ಯಕ್ರಮವೊಂದರಲ್ಲಿ ಅವರು, ‘ಸ್ವಯಂ ಸೇವಕರಿಗೆ ದುರಹಂಕಾರ ಇರಬಾರದು. ಇನ್ನೊಬ್ಬರಿಗೆ ನೋವನ್ನು ಉಂಟು ಮಾಡುವ ಮಾತುಗಳನ್ನು ಆಡಬಾರದು’ ಎಂದರು. ಇದೇ ಸಂದರ್ಭದಲ್ಲಿ ಮಣಿಪುರದಲ್ಲಿ ಉಂಟಾಗಿರುವ ಅರಾಜಕ ಪರಿಸ್ಥಿತಿ ಬಗ್ಗೆ ಕೂಡ ಅವರು ಆತಂಕ ವ್ಯಕ್ತಪಡಿಸಿದರು.
ಇವೆರಡು ಮಾತುಗಳನ್ನು ಹೇಳಲು ಭಾಗವತರಿಗೆ ಮುಹೂರ್ತ ಬೇಕಾಗಿತ್ತೇ? ಮಣಿಪುರದಲ್ಲಿ ಜನಾಂಗೀಯ ಹತ್ಯಾಕಾಂಡ ನಡೆದು ಒಂದು ವರ್ಷವಾಯಿತು. ಅಲ್ಲಿನ ಕಲಹದ ಮೂಲ ಯಾವುದೆಂಬುದು ಅದರ ಯಜಮಾನರಾದ ಭಾಗವತರಿಗೆ ಗೊತ್ತಿಲ್ಲದಿಲ್ಲ. ಚುನಾವಣೆಯಲ್ಲಿ ಯಾರು ಜನಾಂಗೀಯ ದ್ವೇಷದ ಮಾತು ಆಡಿದರು? ಅವರ ಹಿನ್ನೆಲೆಯೇನು ಎಂಬುದೂ ಸರಸಂಘಚಾಲಕರಿಗೆ ಗೊತ್ತಿದೆ.ಈ ಬಗ್ಗೆ ಬಹಿರಂಗವಾಗಿ ಹೇಳಲು ಯಾಕೆ ತಡಮಾಡಿದರು ಎಂಬುದಕ್ಕೆ ಉತ್ತರ ಬೇಕಾಗಿದೆ.
ಆರೆಸ್ಸೆಸ್ ತಾನು ರಾಜಕೀಯೇತರ ಸ್ವಯಂ ಸೇವಾ ಸಂಘಟನೆ ಎಂದು ಹೇಳುತ್ತ ಬಂದರು. ಅದರ ಇತಿಹಾಸವನ್ನು ಅವಲೋಕಿಸಿದರೆ, ಅದರ ನಿಜವಾದ ರಾಜಕೀಯ ಅರ್ಥವಾಗುತ್ತದೆ. ಬಿಜೆಪಿಯು ಆರೆಸ್ಸೆಸ್ನ
ರಾಜಕೀಯ ವೇದಿಕೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬದಲಿಸಿ ಭಾರತವನ್ನು ‘ಹಿಂದೂ ರಾಷ್ಟ್ರ’ ಮಾಡುವುದು ಅದರ ಗುರಿ. ಅದಕ್ಕಾಗಿ ದೀರ್ಘಕಾಲದಿಂದ ಅದು ಶ್ರಮಿಸುತ್ತಿದೆ.
ಈ ಗುರಿ ಸಾಧನೆಗಾಗಿ ರಾಜಕೀಯಕ್ಕಾಗಿ ಬಿಜೆಪಿಯನ್ನು (ಹಿಂದೆ ಜನಸಂಘ) ಸ್ಥಾಪಿಸಿದಂತೆ ಕಾರ್ಮಿಕರನ್ನು ಸಂಘಟಿಸಲು ಬಿಎಂಎಸ್, ವಿದ್ಯಾರ್ಥಿಗಳನ್ನು ಆಕರ್ಷಿಸಲು ಎಬಿವಿಪಿ, ಧರ್ಮ ಜಾಗೃತಿಗಾಗಿ ವಿಶ್ವ ಹಿಂದೂ ಪರಿಷತ್ತು, ಬಜರಂಗ ದಳ, ಹಿಂದೂ ಜಾಗರಣಾ ವೇದಿಕೆ, ರಾಷ್ಟ್ರ ಸೇವಿಕಾ ಹೀಗೆ ಸುಮಾರು 70 ಅಂಗ ಸಂಘಟನೆಗಳನ್ನು ಅದು ಕಟ್ಟಿಕೊಂಡಿದೆ. ಬಿಜೆಪಿಯ ಪ್ರತಿ ಧೋರಣೆ, ಕಾರ್ಯಕ್ರಮವು ನಾಗಪುರದಲ್ಲಿನ ಕೇಂದ್ರ ಕಚೇರಿಯಲ್ಲಿ ಸಂಘವೇ ನಿರ್ಧರಿಸುತ್ತದೆ.
ಕಳೆದ ಶತಮಾನದ 1925ರಲ್ಲಿ ನಾಗಪುರದಲ್ಲಿ ಆರೆಸ್ಸೆಸ್ಸ್ಥಾಪನೆಯಾದಾಗ ಕೇವಲ 100 ಶಾಖೆಗಳಿದ್ದವು. 2005ರ ವೇಳೆಗೆ ಅದು 55 ಸಾವಿರ ಶಾಖೆಗಳನ್ನು ಹೊಂದಿದೆ. ಸಾಮಾಜಿಕ ಜೀವನದ ಎಲ್ಲ್ಲಾ ವಲಯಗಳಲ್ಲಿ ವ್ಯಾಪಿಸಿದ ಸಂಘ ದಲಿತ, ಬೌದ್ಧ, ಮುಸಿಮ್ಅಂಗ ಸಂಘಟನೆಗಳನ್ನು ಹೊಂದಿದೆ. ಅದರಲ್ಲೂ ಅತಿ ಹಿಂದುಳಿದ ಸಮುದಾಯಗಳ ಯುವಕರನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಿಜೆಪಿ ಮೂಲಕ ದೇಶದ ಅಧಿಕಾರ ಸೂತ್ರವನ್ನು ಹಿಡಿದಿದೆ.ಇಂಥ ಸಂದರ್ಭದಲ್ಲಿ ಮೋಹನ ಭಾಗವತರು ಆಡಿರುವ ಮಾತಿಗೆ ವಿಶೇಷ ಮಹತ್ವವಿದೆ ಎಂದರೆ ತಪ್ಪಿಲ್ಲ.
ಇಂಥ ಮೋಹನ ಭಾಗವತರು, ‘ನಿಜವಾದ ಸೇವಕನಿಗೆ ಅಹಂಕಾರ ಇರುವುದಿಲ್ಲ. ಇನ್ನೊಬ್ಬರಿಗೆ ನೋವು ಕೊಡುವ ಮಾತುಗಳನ್ನು ಆಡುವುದಿಲ್ಲ. ನಿಜವಾದ ಸೇವಕ ಸಭ್ಯನಾಗಿರುತ್ತಾನೆ. ಸಭ್ಯತೆಯನ್ನು ಪಾಲಿಸುವವ ತನ್ನ ಕೆಲಸ ತಾನು ಮಾಡುತ್ತಾನೆ. ಕೆಲಸದೊಂದಿಗೆ ಮೋಹ ಬೆಳೆಸಿಕೊಳ್ಳುವುದಿಲ್ಲ’ ಎಂದು ಯಾಕೆ ಹೇಳಿದರು ಎಂಬ ಹುಳ ಎಲ್ಲರ ತಲೆಯಲ್ಲಿ ಹರಿದಾಡುತ್ತಿದೆ.
ಮೋಹನ ಭಾಗವತರು ಯಾರ ಹೆಸರನ್ನು ಹೇಳದಿದ್ದರೂ ಯಾರನ್ನು ಉದ್ದೇಶಿಸಿ ಈ ಮಾತನ್ನು ಆಡಿದ್ದಾರೆ ಎಂಬುದು ಮಕ್ಕಳಿಗೂ ಗೊತ್ತಾಗುತ್ತದೆ. ಪ್ರಧಾನಿ ಮೋದಿ ಮತ್ತು ಬಿಜೆಪಿಯ ಕೆಲ ನಾಯಕರು ಚುನಾವಣಾ ಪ್ರಚಾರದ ವೇಳೆಆಡಿದ ಮಾತುಗಳು ಸಭ್ಯತೆಯ ಎಲ್ಲೆಯನ್ನು ಮೀರಿದ್ದವು. ಜನಾಂಗೀಯ ಕಲಹಕ್ಕೆ ಪ್ರಚೋದನೆ ನೀಡುವಂಥ ಮಾತುಗಳಾಗಿದ್ದವು. ಇದನ್ನು ಗಮನದಲ್ಲಿ ಇಟ್ಟುಕೊಂಡು ಭಾಗವತರು ಈ ಮಾತು ಆಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಮೋಹನ ಭಾಗವತರ ಮಾತುಗಳಿಂದ ರೋಮಾಂಚಿತರಾದ ಕೆಲ ಪ್ರಗತಿಪರ ಮಿತ್ರರು ಎಷ್ಟುಅವಸರದ ಪ್ರತಿಕ್ರಿಯೆ ನೀಡಿದರೆಂದರೆ ಕೇಂದ್ರದ ಮೋದಿ ಸರಕಾರ ತನ್ನ ಕೋಮುವಾದಿ ಅಜೆಂಡಾ ಕೈ ಬಿಡುತ್ತದೆ. ಭಾಗವತರು ಮೋದಿಯ ಕಿವಿ ಹಿಂಡುತ್ತಿದ್ದಾರೆ ಎಂಬಂಥ ಪ್ರತಿಕ್ರಿಯೆಗಳು ಬಂದವು. ಆದರೆ, ಮೋಹನ ಭಾಗವತರು ಚುನಾವಣೆ ಸಂದರ್ಭದಲ್ಲಿ ಈ ಮಾತು ಹೇಳಿದ್ದರೆ ಅದಕ್ಕೊಂದು ಬೆಲೆ ಇರುತ್ತಿತ್ತು.
ಆಗ ಮೋದಿ ಮುಸಲ್ಮಾನರನ್ನು ಬೈದದ್ದನ್ನು ‘ಎಂಜಾಯ್’ ಮಾಡಿ ಈಗ ಹೇಳಿಕೆ ನೀಡುವುದು ಬರೀ ನಾಟಕ ಮಾತ್ರ. ಅದೇ ರೀತಿ ಮಣಿಪುರದ ಬಗ್ಗೆ ಅಲ್ಲಿ ಹತ್ಯಾಕಾಂಡ, ಅರಾಜಕತೆ ನಡೆದು ಒಂದು ವರ್ಷದ ನಂತರ ಭಾಗವತರಿಗೆ ನೆನಪಾಗಿದೆ. ನರೇಂದ್ರ ಮೋದಿಯಾಗಲಿ ಬಿಜೆಪಿಯ ಯಾವುದೇ ನಾಯಕನಾಗಲಿ ನಾಗಪುರದ ಗುರುಗಳು ಹಾಕಿದ ಗೆರೆ ದಾಟುವುದಿಲ್ಲ. ಅವರು ಹೇಳಿಕೊಟ್ಟ ಮಾತನ್ನೇ ಮೋದಿ ಹೇಳಿದ್ದು ಅದು ಉಲ್ಟಾ ಆದ ನಂತರ ಭಾಗವತರು ಡ್ಯಾಮೇಜ್ ಕಂಟ್ರೋಲ್ ಮಾಡಲು ಇಂಥ ಹೇಳಿಕೆ ನೀಡಿದ್ದಾರೆ. ಇದರರ್ಥ ಅವರು ಬದಲಾಗಿದ್ದಾರೆಂದಲ್ಲ.
ಸಾಮಾನ್ಯವಾಗಿ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೆಸ್ಸೆಸ್ ಈ ರೀತಿ ಮಧ್ಯಪ್ರವೇಶ ಮಾಡುತ್ತದೆ. ಅಧಿಕಾರದಲ್ಲಿ ಇರುವ ಬಿಜೆಪಿ ನಾಯಕರ ತಪ್ಪುಗಳಿಗೂ ಸಂಘಕ್ಕೂ ಸಂಬಂಧವಿಲ್ಲ ಎಂದು ಅಂತರ ಕಾಪಾಡಿಕೊಳ್ಳುತ್ತದೆ. ಆದರೆ, ಭಾರತೀಯರ ಮನಸ್ಸು ಒಡೆದ ಸಿದ್ಧಾಂತದ ಮೂಲ ನೆಲೆ ಎಲ್ಲಿದೆ ಎಂಬುದನ್ನು ಭಾಗವತರು ಹೇಳದಿದ್ದರೂ ಎಲ್ಲರಿಗೂ ಗೊತ್ತಿದೆ.
ಈ ವಿಶ್ಲೇಷಣೆಯ ಆಚೆಗೂ ಸಂಘ ಪರಿವಾರದ ಒಳಗೆ ಏನೋ ನಡೆದಿದೆ ಎಂಬ ಸಂಶಯದ ವದಂತಿಗಳು ಹರಡುತ್ತಿವೆ. ಇಲ್ಲವೇ, ಹರಡಿಸಲಾಗುತ್ತಿದೆ. ಮೋಹನ ಭಾಗವತರಿಗೂ ನರೇಂದ್ರ ಮೋದಿಯವರಿಗೂ ಅಷ್ಟಕ್ಕಷ್ಟೆ ಯಂತೆ ಎಂದು ಹೇಳಲಾಗುತ್ತದೆ. ಭಾಗವತ ಮತ್ತು ಮೋದಿ ಒಂದೇ ವಯಸ್ಸಿನವರು. ಒಂದೇ ವರ್ಷದಲ್ಲಿ ಶಾಖೆಗೆ ಬಂದವರು. ಹೀಗಾಗಿ ತಾನೇನು ಕಡಿಮೆ ಎಂಬಂತೆ ಮೋದಿಯವರು ವರ್ತಿಸುತ್ತಿದ್ದಾರೆ.ಇದರಿಂದ ಭಾಗವತರಿಗೆ ಒಳಗೊಳಗೆ ಅಸಮಾಧಾನವಿದೆ. ಇಬ್ಬರ ನಡುವೆ ಇಗೋ ಎಂಬ ಗೋಡೆ ಎದ್ದು ನಿಂತಿದೆ ಎಂದು ಸಂಘದ ವಲಯದಲ್ಲಿ ಸುದ್ದಿ ಹರಡಿದೆ. ಹೀಗಾಗಿ ಆರೆಸ್ಸೆಸ್ ಪ್ರತಿ ವರ್ಷ ನಡೆಸುವ ಅಂಗ ಸಂಘಟನೆಗಳ ಪ್ರತಿನಿಧಿ ಸಭೆಗೂ ಮೋದಿಯವರು ಹೋಗುತ್ತಿಲ್ಲ ಅಮಿತ್ಶಾ ಮತ್ತು ನಡ್ಡಾರನ್ನು ಕಳಿಸಿಕೊಡುತ್ತಾರೆ ಎನ್ನಲಾಗುತ್ತ್ತಿದೆ.
ಸಂಘಪರಿವಾರದಲ್ಲಿ ಇದು ಹೊಸದಲ್ಲ. ಸಂಘದ ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಲ್ಕರ್ ಇರುವವರೆಗೆ ಅಂಥ ಸಮಸ್ಯೆ ಉಂಟಾಗಿರಲಿಲ್ಲ. ವಯಸ್ಸಿನಲ್ಲಿ, ಅನುಭವದಲ್ಲಿ ಹಿರಿಯರಾದುದರಿಂದ ಆಗಿನ ಜನಸಂಘದ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿಯಂಥವರು ಗೋಳ್ವಲ್ಕರ್ ಹಾಕಿದ ಗೆರೆಯನ್ನು ದಾಟುತ್ತಿರಲಿಲ್ಲ. ಅವರ ನಂತರ ಬಂದ ಬಾಬಾಸಾಹೇಬ್ ದೇವರಸ್ ಇದ್ದಾಗ ಅಂಥ ಸಮಸ್ಯೆ ಆಗಲಿಲ್ಲ. ಆದರೆ, ಸುದರ್ಶನ್ ಸರಸಂಘಚಾಲಕರಾಗಿ ಅಧಿಕಾರ ವಹಿಸಿಕೊಂಡಾಗ ತಮಗಿಂತ ಜ್ಯೂನಿಯರ್ ಆದ ಅವರ ಮಾತಿಗೆ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿ ಮುಂತಾದವರು ಕಿಮ್ಮತ್ತು ಕೊಡುತ್ತಿರಲಿಲ್ಲ. ಹೀಗಾಗಿ ಸುದರ್ಶನರು ಬೇಸರಗೊಂಡು ಕಿರಿಯರಿಗೆ ನಾಯಕತ್ವವನ್ನು ಬಿಟ್ಟುಕೊಡಬೇಕೆಂದು ವಾಜಪೇಯಿ ಮತ್ತು ಅಡ್ವಾಣಿ ಅವರಿಗೆ ಚುಚ್ಚಿದ್ದರು.ಈಗ ಅದೇ ಸನ್ನಿವೇಶ ನಿರ್ಮಾಣವಾಗಿದೆ.
ಮೋಹನ ಭಾಗವತರಂತೆ ನರೇಂದ್ರ ಮೋದಿಯವರು ಸಂಘದ ಶಾಖೆಯಲ್ಲಿ ಬೆಳೆದು ಬಂದವರು.ಅವರ ಬಾಯಿಯಲ್ಲಿ ಬರುವ ಮುಸ್ಲಿಮ್ ದ್ವೇಷದ ಮತ್ತು ಸಮಾನತೆಯ ವಿರೋಧದ ಮಾತುಗಳೆಲ್ಲ, ಸಂಘದ ಶಾಖೆಯಲ್ಲಿ ಹೇಳಿಕೊಟ್ಟ ಮಾತುಗಳು. ಹೇಳುವ ಶೈಲಿ ಒರಟಾಗಿರಬಹುದು. ಆದ್ದರಿಂದ ಭಾಗವತರು ಟೀಕಿಸಬೇಕಾಗಿದ್ದು ಬರೀ ಶೈಲಿಯನ್ನು ಅಲ್ಲ. ಅದರ ಬದಲಾಗಿ 99 ವರ್ಷಗಳ ಹಿಂದೆ ಜರ್ಮನಿ ಮತ್ತು ಇಟಲಿಗಳಿಂದ ಎರವಲು ತಂದು ಅದಕ್ಕೆ ಹಿಂದುತ್ವದ ಕಸಿ ಮಾಡಿದ ತಮ್ಮ ಸಂಘದ ಸಿದ್ಧಾಂತದ ಬಗ್ಗೆ ಭಾಗವತರು ಪ್ರಾಮಾಣಿಕ ಪರಾಮರ್ಶೆ ನಡೆಸಬೇಕಾಗಿದೆ.
ಹಿಟ್ಲರ್ ಮತ್ತು ಮುಸ್ಸೋಲಿನಿ ಪತನದ ನಂತರ ಜಗತ್ತು ಹಾಗೂ ಸ್ವಾತಂತ್ರ್ಯಾ ನಂತರ ಭಾರತ ಸಾಕಷ್ಟು ಬದಲಾವಣೆಗಳಿಗೆ ತೆರೆದುಕೊಂಡಿವೆ.ಜರ್ಮನಿಯ ಜನ ತಮ್ಮ ದೇಶಕ್ಕೆ ಕೆಟ್ಟ ಹೆಸರು ತಂದ ಹಿಟ್ಲರ್ನಿಗೆ ಶಾಪ ಹಾಕುತ್ತಾರೆ.ಅವನ ಹೆಸರು ತೆಗೆದರೆ ಉರಿದೇಳುತ್ತಾರೆ.ಗಾಂಧೀಜಿ ಹತ್ಯೆಯ ನಂತರ ಭಾರತ ಅನೇಕ ಬದಲಾವಣೆಗಳನ್ನು ಕಂಡಿದೆ.ಸಂಘಪರಿವಾರ ಸತತ ಪ್ರಯತ್ನದಿಂದ ಗೋಡ್ಸೆಯನ್ನು ವೈಭವೀಕರಿಸುವ ಕೆಲವು ಗುಂಪುಗಳು ಹುಟ್ಟಿಕೊಂಡಿದ್ದರೂ ಅವುಗಳನ್ನು ಭಾರತದ ಜನ ನಂಬುವುದಿಲ್ಲ.
ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸೋಲು ಹಿಂದುತ್ವದ ಸೋಲು ಎಂದು ಖಚಿತವಾಗಿ ವ್ಯಾಖ್ಯಾನಿಸಲಾಗದಿದ್ದರೂ ಜನ ಇಂಥ ಅತಿರೇಕದ ಅವಿವೇಕವನ್ನು ಒಪ್ಪುವುದಿಲ್ಲ ಎಂಬುದು ಸಾಬೀತಾಗಿದೆ. ಜನರ ನಾಡಿಯ ಮಿಡಿತವನ್ನು ಅರಿತ ಭಾಗವತರು ಜನರ ಸಹಾನುಭೂತಿ ಗಳಿಸಲು ಚುನಾವಣೆ ಮುಗಿದ ನಂತರ ಇಂಥ ಮಾತನ್ನು ಆಡಿದ್ದಾರೆ.ಅಕಸ್ಮಾತ್ ಬಿಜೆಪಿ 300 ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ನಿಚ್ಚಳ ಬಹುಮತವನ್ನು ಪಡೆದಿದ್ದರೆ ಇದೇ ಭಾಗವತರಿಂದ ಇಂಥ ಮಾತುಗಳು ಬರುತ್ತಿರಲಿಲ್ಲ. ಬದಲಾಗಿ, ‘ಜನರು ಸನಾತನ ಸಂಸ್ಕೃತಿಯ ಪರವಾಗಿ ಇದ್ದಾರೆ’ ಎಂದು ಹೇಳುತ್ತಿದ್ದರು. ಸಂಘಟನೆಯನ್ನು ಮೀರಿ ಮೋದಿಯವರು ಬೆಳೆದ ಬಗ್ಗೆ ಅಸಮಾಧಾನವಿದ್ದರೂ ಈ ಮೋದಿ ಕಾರ್ಪೊರೇಟ್ ಸೇವೆಯ ಜೊತೆಗೆ ಹಿಂದುತ್ವ ಕಾರ್ಯಸೂಚಿಯನ್ನು ಜಾರಿಗೆ ತರುತ್ತಿರುವ ಬಗ್ಗೆ ಒಳಗೊಳಗೆ ಖುಷಿಯೂ ಇದೆ.
ಭಾಗವತರು ಮಣಿಪುರದ ಪ್ರಕ್ಷುಬ್ಧ ಪರಿಸ್ಥಿತಿಯ ಬಗ್ಗೆ ಹಾಗೂ ಸೇವಕರ ದುರಹಂಕಾರದ ಬಗ್ಗೆ ಮಾತಾಡುವ ಮೊದಲು ಈ ಪರಿಸ್ಥಿತಿಗೆ ಯಾವ ಸಿದ್ಧಾಂತ ಕಾರಣ? ಯಾಕೆ ದೇಶದಲ್ಲಿ ಈ ಪರಿ ಮುಸ್ಲಿಮ್ ವಿರೋಧಿ ಉನ್ಮಾದ ಕೆರಳಿಸಲಾಗಿದೆ? ಅಲ್ಪ ಸಂಖ್ಯಾತರಲ್ಲಿ ಅಭದ್ರತೆಯ ಆತಂಕ ಉಂಟಾಗಲು ಯಾರು ಕಾರಣ? ಲವ್ ಜಿಹಾದ್ ಗಲಾಟೆ ಮಾಡುವವರು ಯಾವ ಸಂಘಟನೆಗೆ ಸೇರಿದವರು? ಕೇಂದ್ರದಲ್ಲಿ ಬಿಜೆಪಿ ಗೆದ್ದರೆ ಸಣ್ಣಪುಟ್ಟ ಊರುಗಳಲ್ಲಿ ಮಸೀದಿಯ ಮುಂದೆ ಬಂದು ಗಲಾಟೆ ಮಾಡುವವರು ಯಾರು? ಮಣಿಪುರದಲ್ಲಿ ಬುಡಕಟ್ಟುಗಳ ನಡುವೆ ಹೊಡೆದಾಟಕ್ಕೆ ಪ್ರಚೋದಿಸಿದವರು ಯಾರು ಎಂಬ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳಲಿ.ಮೋದಿಯವರು ಆಡಿದ ಮಾತುಗಳ ಸಿದ್ಧಾಂತದ ಮೂಲ ಯಾವುದು ಎಂಬುದನ್ನು ಭಾಗವತರೇ ಹೇಳಬೇಕು.
ಸಂಘದ ಒಳಗಿನ ಕೆಲವರು ಹೇಳುವಂತೆ ಲೋಕಸಭಾ ಚುನಾವಣೆ ನಂತರ ಆರೆಸ್ಸೆಸ್ನ ಹಿರಿಯ ನಾಯಕರು ಮೋದಿಯವರ ಸಹಿತ ಬಿಜೆಪಿ ಯ ಹಿರಿಯ ನಾಯಕರನ್ನು,ಚುನಾವಣಾ ಫಲಿತಾಂಶದ ಪರಾಮರ್ಶೆಗೆ ಸಮಾಲೋಚನೆಗೆ ಕರೆದಿದ್ದರು. ಆದರೆ, ಮೋದಿಯವರು ಈ ಸಭೆಗೆ ಹೋಗದೇ ತಪ್ಪಿಸಿಕೊಂಡರು. ಅವರ ಬದಲಾಗಿ ಅಮಿತ್ ಶಾ, ನಡ್ಡಾ ಮತ್ತು ಕೆಲ ಹಿರಿಯ ನಾಯಕರು ಹೋಗಿದ್ದಾರೆ. ಈ ಸಭೆಯಲ್ಲಿ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡ ಸಂಘದವರು, ‘ಚುನಾವಣೆಯಲ್ಲಿ ಗೆಲ್ಲಲು ಸಂಘದ ಸಹಾಯ ಅಗತ್ಯವಿಲ್ಲ’ ಎಂದು ಹೇಳಿದ ನಡ್ಡಾ ಅವರನ್ನು ಹೀಗೇಕೆ ಮಾತಾಡಿದಿರಿ ಎಂದು ಪ್ರಶ್ನಿಸಿದರಂತೆ. ನಡ್ಡಾ ಕ್ಷಮೆ ಕೇಳಿದರಂತೆ. ಒಟ್ಟಾರೆ ಸಂಘಪರಿವಾದಒಳಗೆ ಏನೋ ನಡೆಯುತ್ತಿರುವುದಂತೂ ಸತ್ಯ.
ಬಹಳ ಜನ ಅಂದುಕೊಂಡಂತೆ ಮೋದಿ ಸೂಪರ್ ಮ್ಯಾನ್ ಅಲ್ಲ. ಆತ ಆರೆಸ್ಸೆಸ್ ಸ್ವಯಂ ಸೇವಕ. ಅವರಿಂದ ಓಟು ಬರುವವರೆಗೆ ಸಂಘ ಮೋದಿಯವರನ್ನು ಬಳಸಿಕೊಂಡಿತು.ಮೋದಿಯ ಪ್ರಭಾವ ಕ್ಷೀಣಿಸುತ್ತಿದೆ. ಪಕ್ಷವನ್ನು ಗೆಲ್ಲಿಸುವ ಸಾಮರ್ಥ್ಯ ಅವರಿಗಿಲ್ಲ ಎಂದು ತಿಳಿದ ನಂತರ ಅಟಲ್ಜಿ, ಅಡ್ವಾಣಿ ಯವರನ್ನು ಬಳಸಿಕೊಂಡು ಬೀಸಾಡಿದಂತೆ ಮೋದಿಯನ್ನು ಅದು ಬಳಸಿಕೊಂಡು ಬೀಸಾಡಲು ತೀರ್ಮಾನಿಸಿದಂತೆ ಕಾಣುತ್ತದೆ. ಅದರ ಮುನ್ಸೂಚನೆಯಾಗಿ ಭಾಗವತರು ಈ ಮಾತನ್ನು ಆಡಿದ್ದಾರೆ.